Skip to main content

ಪೌಲೋ ಕೊಹೆಲೋ ರವರ "ದಿ ಆಲ್ಕೆಮಿಸ್ಟ್"

ಬರೆದಿದ್ದುAugust 4, 2012
2ಅನಿಸಿಕೆಗಳು

[img_assist|nid=22796|title=ದಿ ಅಲ್ಕೆಮಿಸ್ಟ್|desc=|link=none|align=left|width=86|height=130]ನಾನು ಇತ್ತೀಚೆಗೆ ಓದಿ ಮುಗಿಸಿದ ಪುಸ್ತಕ ಪೌಲೋ ಕೊಹೆಲೋ ರವರ "ದಿ ಆಲ್ಕೆಮಿಸ್ಟ್" . ಬಹುಶಃ ಈ ಪುಸ್ತಕವನ್ನು ನಾನೇನಾದರೂ ಬಹಳ ಮೊದಲೇ ಓದಿರುತ್ತಿದ್ದಲ್ಲಿ ನನ್ನ ಜೀವನ ಬೇರೆಯದೇ ತಿರುವು ಪಡೆಯುತ್ತಿತ್ತೇನೋ. ನಾನು ಓದಿದ ಪುಸ್ತಕಗಳಲ್ಲಿ ಅತ್ಯುತ್ತಮವಾದದ್ದು ಎಂದರೂ ತಪ್ಪಾಗಲಾರದು. ಚಿಕ್ಕವಳಿದ್ದಾಗ, ಚಂದಮಾಮ, ಬಾಲಮಂಗಳ, ಚಂಪಕದಂತಹ ಕಥಾ ಪುಸ್ತಕಗಳಲ್ಲಿ ನಿಧಿಯನ್ನರಸಿ ಹೊರಡುವ ರಾಜಕುಮಾರ, ಅವನಿಗೆದುರಾಗುವ ಕಷ್ಟಗಳ ಸರಮಾಲೆ, ಕಷ್ಟಗಳ ನಡುವೆಯೇ ಅವನಿಗೆ ದಕ್ಕುವ ಸುಂದರವಾದ ರಾಜಕುಮಾರಿ, ಕೊನೆಯಲ್ಲಿ ಹೀಗೆ ಅವರಿಬ್ಬರೂ ಬಹಳ ವರ್ಷಗಳ ಕಾಲ ಸುಖವಾಗಿ ಬಾಳಿದರು ಎಂಬಲ್ಲಿಗೆ ಮುಕ್ತಾಯವಾಗುತ್ತಿದ್ದ ಕಥೆಗಳು ಇನ್ನೂ ಮನದಲ್ಲಿ ಹಚ್ಚಹಸಿರಾಗಿದೆ.


ಅಂತಹುದೇ ಒಂದು ಕಥೆ ದಿ ಆಲ್ಕೆಮಿಸ್ಟ್. ಸೀಸವನ್ನು ಚಿನ್ನವನ್ನಾಗಿ ರೂಪಾಂತರಿಸುವ ಶಕ್ತಿಯುಳ್ಳ ಮನುಷ್ಯನಿಗೆ ಆಲ್ಕೆಮಿಸ್ಟ್ ಅಂತಾರೆ. ಈ ಕಥೆಯಲ್ಲಿ, ಕಥಾನಾಯಕ ಕುರಿಗಳನ್ನು ಕಾಯುವ ಒರ್ವ ಹುಡುಗ. ಆತ ನಿರಂತರವಾಗಿ ತನ್ನ ಕನಸುಗಳಲ್ಲಿ ಕಾಣುತ್ತಿದ್ದ ನಿಧಿಯನ್ನರಸಿ ಈಜಿಪ್ಟ್ ದೇಶಕ್ಕೆ ಪ್ರಯಾಣ ಬೆಳೆಸುತ್ತಾನೆ. ಅವನ ಆ ಪ್ರಯಾಣ ಕಥನವೇ ಕಥೆಯ ಹಂದರ. ಪ್ರಯಾಣದಲ್ಲಿ ಆತ ಕುರಿಕಾಯುವುದನ್ನು ಹೊರತು ಪಡಿಸಿ ಇತರೆ, ವಿಭಿನ್ನ ಕೆಲಸಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಾನೆ. ತನ್ನ ಕ್ರಿಯಾಶೀಲತೆಯಿಂದ, ಆ ಹೊಸ ಕೆಲಸಗಳಲ್ಲಿ ಉತ್ತಮ ಲಾಭ ಗಳಿಸಿ, ನಿಧಿಯ ಶೋಧ ಮುಂದುವರೆಸುತ್ತಾನೆ. ಪಯಣದಲ್ಲಿ ಆತನಿಗೆ ಜೊತೆಯಾಗುವ ಯುರೋಪಿಯನ್ ಹುಡುಗನೊರ್ವ ಆಲ್ಕೆಮಿಸ್ಟ್ ನ ಶೋಧವನ್ನು ತನ್ನ ಗುರಿಯಾಗಿಸಿಕೊಂಡಿರುತ್ತಾನೆ. ಚಿನ್ನದ ಬಗ್ಗೆ, ಲೋಹಗಳನ್ನು ಚಿನ್ನದ ಗಟ್ಟಿಗಳನ್ನಾಗಿ ಬದಲಾಯಿಸುವ ಕುರಿತು ಬಹಳಷ್ಟು ಓದಿಕೊಂಡಿದ್ದ ಆತ ಕುರಿಕಾಯುವ ಹುಡುಗನಿಗೆ ಹಲವಾರು ಮಾಹಿತಿಗಳು, ರಹಸ್ಯಗಳ ಕುರಿತೂ ಹೇಳಿಕೊಡುತ್ತಾನೆ.


ಇಬ್ಬರೂ ಅರಬ್ ದೇಶದ ಮರುಭೂಮಿಗಳಲ್ಲಿ ಸಂಚರಿಸುವಾಗಿನ ಅವರ ಅನುಭವಗಳು, ಅಲ್ಲಿ ನಮ್ಮ ಕಥಾನಾಯಕನಾದ ಕುರಿಕಾಯುವ ಹುಡುಗನಿಗೆ ಸಿಗುವ ಕಥಾನಾಯಕಿ ಫಾತಿಮಾ, ಕಥಾನಾಯಕ ನಂಬುವ ಶಕುನಗಳು, ಆತ ತನ್ನದೇ ಹೃದಯದೊಡನೆ ಸಂಭಾಷಿಸಿ ವಿಶ್ವದ ಭಾಷೆಯನ್ನು ಅರ್ಥೈಸಿಕೊಳ್ಳುವ ಪರಿಯನ್ನು ಲೇಖಕರು ಮನಮುಟ್ಟುವಂತೆ ವಿವರಿಸಿದ್ದಾರೆ. ಕೊನೆಯಲ್ಲಿ ಇಬ್ಬರೂ ಹುಡುಗರು ತಮ್ಮ ಗುರಿಗಳನ್ನು ಮುಟ್ಟುವಲ್ಲಿ ಸಫಲರಾಗುತ್ತಾರೆಯೇ? ಕುರಿಕಾಯುವ ಹುಡುಗನ ಪ್ರೇಮ ನಿವೇದನೆಯನ್ನು ಫಾತಿಮಾ ಒಪ್ಪುತ್ತಾಳೆಯೇ? ಅವನರಸಿ ಹೊರಟ ನಿಧಿ ಅವನಿಗೆ ಎಲ್ಲಿ ದೊರಕುತ್ತದೆ? ಓದುಗನ ಇತ್ಯಾದಿ ಪ್ರಶ್ನೆಗಳಿಗೆ ಆಶ್ಚರ್ಯಕಾರಿ ಉತ್ತರಗಳು ದೊರಕುತ್ತವೆ. "ಎಲ್ಲಿ ನಿನ್ನ ಹೃದಯ ಸಂತಸಗೊಳ್ಳುತ್ತದೆಯೋ, ಅಲ್ಲಿ ಸುಖಸಂಪತ್ತಿವೆ"; "ನೀನು ಏನನ್ನಾದರೂ ಅತೀವವಾಗಿ ಬಯಸಿದ್ದೇ ಆದಲ್ಲಿ ಇಡೀ ವಿಶ್ವವೇ ನಿನಗದು ದೊರಕುವಲ್ಲಿ ಸಹಾಯ ಮಾಡುತ್ತದೆ"; "ನಿನ್ನ ಹೃದಯದೊಡನೆ ಮಾತನಾಡು, ಅದರ ಮಾತನ್ನು ಒಪ್ಪಿಕೋ, ಆಗ ನಿನಗೆ ಯಶಸ್ಸು ದೊರೆಯುತ್ತದೆ"; ಎಂಬ ಕೆಲ ವಾಕ್ಯಗಳು ನಮ್ಮ ಜೀವನಕ್ಕೆ ಅನ್ವಯಿಸಿಕೊಂಡಿದ್ದೇ ಆದಲ್ಲಿ ಬಹಳಷ್ಟು ಬದಲಾವಣೆ ಕಾಣಲು ಸಾಧ್ಯ.


ಒಮ್ಮೊಮ್ಮೆ ಕೆಲ ಸಾಲುಗಳನ್ನು ಓದುವಾಗ ಇವೆಲ್ಲಾ ಸಾಧ್ಯವೇ ಎಂದೆನಿಸಿದರೂ, ಆ ಸಾಲುಗಳ ಮೂಲಕ ಲೇಖಕರು ಹೇಳ ಹೊರಟಿರುವ ವಿಲ್ ಪವರ್ ಅಥವಾ ಮನಃ ಶಕ್ತಿ ಯ ಮೂಲಕ ಅತೀ ಕಷ್ಟಕರವಾದ ಕೆಲಸವನ್ನೂ ಮಾಡಲು ಸಾಧ್ಯ, ಎಂಬ ತತ್ವದ ಅರಿವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಕಾರಾತ್ಮಕವಾಗಿ ಯೋಚಿಸಿ, ತನ್ನ ಕನಸನ್ನು, ಆಶಯವನ್ನು ಸರಿಯಾದ ಮಾರ್ಗದ ಮೂಲಕ ಅರಸಿ ಹೊರಟಿದ್ದೇ ಆದಲ್ಲಿ, ಖಂಡಿತವಾಗ್ಯೂ ಆತ ತನ್ನ ಜೀವನದಲ್ಲಿ ಅದನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂಬುದು ಈ ಕಥೆಯನ್ನೋದಿದ ಪ್ರತಿಯೊರ್ವ ಓದುಗನಿಗೂ ಮನದಟ್ಟಾಗುತ್ತದೆ. ಒಟ್ಟಾರೆಯಾಗಿ, ಇಡಿ ಕಥೆಯಲ್ಲಿ ಚಿಕ್ಕ-ಪುಟ್ಟ ಘಟನೆಯಲ್ಲೂ ಶಕುನ/ಒಳ್ಳೆಯದು ಹಾಗೂ ಕೆಟ್ಟದ್ದನ್ನು ಕಾಣುವ ಕುರಿಕಾಯುವ (ಅಷ್ಟೇನೂ ಓದಿರದ) ಹುಡುಗ,


ಅವನ ಜೀವನದಲ್ಲಿ ಅವನಿಗೆ ಎದುರಾಗುವ ಗೊಂದಲಗಳು ಹಾಗೂ ಅವನ್ನಾತ ಬಗೆಹರಿಸಿಕೊಳ್ಳುವ ರೀತಿ, ಮರುಭೂಮಿಯ ವಾಸಿಗಳಾದ ಫಾತಿಮಾ ತನ್ನಿನಿಯನೊಡನೆ ಬೀಸುವ ಗಾಳಿ ಹಾಗೂ ಅದು ಹೊತ್ತೊಯ್ಯುವ ಮರಳಿನ ಮೂಲಕ ಸಂಭಾಷಿಸುವ ರೀತಿ, ಪ್ರಯಾಣದಲ್ಲೇ ಜೊತೆಯಾದ ಯುರೋಪಿಯನ್ ಹುಡುಗನ ಗುರಿಯನ್ನೂ ತನಗರಿವಿಲ್ಲದೇ ತಾನೇ ಸಾಧಿಸಿಬಿಡುವ ಕಥಾ ನಾಯಕ, ಹಾಗೂ ಆತನನ್ನು ಕ್ಷಣಕ್ಷಣವೂ ಪರೀಕ್ಷೆಗೊಳಪಡಿಸುವ ಆತನ ಮಾರ್ಗದರ್ಶಕನ ರೂಪದಲ್ಲಿದ್ದ ಆಲ್ಕೆಮಿಸ್ಟ್ - ಓದುಗನನ್ನು ತುದಿಕಾಲಿನಲ್ಲಿ ನಿಲ್ಲಿಸುವುದಲ್ಲದೆ, ಓದುಗನ ಮನದಲ್ಲಿ ಉಳಿದುಬಿಡುತ್ತಾರೆ. ಈ ಪುಸ್ತಕವನ್ನೋದದೆ ಇದ್ದಲ್ಲಿ ಆಗುವ ಅತಿದೊಡ್ಡ ನಷ್ಟ ಏನೂ ಇಲ್ಲವಾದರೂ, ಖಂಡಿತವಾಗ್ಯೂ ನಮ್ಮೊಳಗೊಮ್ಮೆ ಇಣುಕಿ ನೋಡಿ, ನಮ್ಮಲ್ಲಡಗಿರುವ ಮನಃಶಕ್ತಿ ಹಾಗೂ ಅದರಿಂದ ಸಾಧಿಸಬಹುದಾದ ಅನೇಕ ಸಾಧನೆಗಳ ಬಗ್ಗೆ ನಾವು ತಿಳಿದುಕೊಳ್ಳಲಾರದೇ ಹೋಗುವುದಂತೂ ನಿಜ. ಇದಕ್ಕಿಂತ ದೊಡ್ಡ ನಷ್ಟ ಇನ್ನೇನಿದೆ ಅಂತೀರಾ??????? ಹಾಗದ್ರೆ ಒಮ್ಮೆ "ದಿ ಆಲ್ಕೆಮಿಸ್ಟ್" ಓದಬಹುದಲ್ವೇ??

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

Vikram.K.B ಮಂಗಳ, 08/14/2012 - 09:44

ನಾನು ಕೂಡ ಈ ಪುಸ್ತಕವನ್ನು ಒದಿದ್ದೆನೆ , ತುಂಬಾ ಚೆನ್ನಾಗಿದೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/03/2012 - 16:12

ನಾನೂ ಈ ಕಾದಂಬರಿ ಓದಿರುವೆ, ಅರೇಬಿಯನ್ ನ್ವೆಟ್ ಕಥೆ ಹೊಲಿಕೆ ಇದೆ ಅನಿಸುತ್ತೆ.

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.