Skip to main content

ಕಾಲಾಯ ತಸ್ಮೈ ನಮಃ

ಬರೆದಿದ್ದುAugust 2, 2012
6ಅನಿಸಿಕೆಗಳು

ಇಂದದೇಕೋ ಬೇಡವೆಂದರೂ ಕಣ್ಣು ತುಂಬಿ ಬರುತ್ತಾ ಇದೆ. ನಾನೇ ಹೊತ್ತು ಹೆತ್ತ ಮಕ್ಕಳು ಅದೇಕೆ ಹೀಗಾಗಿಬಿಟ್ಟರು ಅನ್ನೋ ಕೊರಗು. ವಯಸ್ಸಿಗೆ ಬಂದ ಮಕ್ಕಳನ್ನ ಅರ್ಥ ಮಾಡಿಕೊಳ್ಳಲು ಈಗಿನ ಕಾಲದಲ್ಲಿ ಹರಸಾಹಸ ಪಡಬೇಕು ಅನ್ನೋದಂತೂ ನಿಜ. ಇದೇ ಮಗ, ಸಣ್ಣವನಿದ್ದಾಗ ತೊಡರುತ್ತಾ ನಡೆದು ಮುಗ್ಗರಿಸಿದಾಗಲೆಲ್ಲಾ, ಕೈ ಹಿಡಿದು ನಡೆಸಿದ್ದೆ.


ಆದರೆ, ಇಂದು, ತರಕಾರಿ ತರಲೆಂದು ಹೋದವಳು ತಲೆ ತಿರುಗಿದಂತಾಗಿ ಕಲ್ಲೊಂದನ್ನು ಎಡವಿ ಮುಗ್ಗರಿಸಿದ್ದೆ. ಪಕ್ಕದಲ್ಲೇ ಬರುತ್ತಿದ್ದ ಮಗ ಕೈಯನ್ನೇನೋ ಹಿಡಿದುಕೊಂಡ. ಆದರೆ, ಆಚೆಈಚೆ ಓಡಾಡುವವರು ಕೇಳಿಸಿಕೊಂಡಾರು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇನೇ ಅಬ್ಬರಿಸಿದ್ದ .. “ಏನಮ್ಮ, ನೆಟ್ಟಗೆ ನೋಡ್ಕೊಂಡು ನಡೆಯೋಕಾಗಲ್ವ? ಮೂರು ಹೊತ್ತೂ ಮನೇಲೇ ಇರ್ತೀನಿ ಅಂತೀಯ, ಅಪರೂಪಕ್ಕೊಮ್ಮೆ ಮನೆಯಿಂದ ಹೊರಗೆ ಹೊರಟ್ರೆ ಹೀಗೇ ಆಗೋದು, ನಡೆಯೋದಿಕ್ಕೂ ನಾನೇ ಹೇಳಿಕೊಡಬೇಕಾ…? ಬಿದ್ದೇನಾದ್ರೂ ಹೆಚ್ಚುಕಡಿಮೆ ಆದ್ರೆ ಅದೊಂದು ಗೋಳು ಮತ್ತೆ……” ಇನ್ನೂ ಅದೇನೇನೋ ಹೇಳ್ತಾನೇ ಇದ್ದ, ನನ್ನ ಮುಖ ಮಾತ್ರ ಸಪ್ಪಗಾಯ್ತು.


ಯಾಕೆ ಹೀಗೆ ಈ ಮಕ್ಕಳು? ನನ್ನೊಟ್ಟಿಗೆ ನಗುನಗುತ್ತಾ ಸಾವಧಾನದಿಂದ ಮಾತಾಡಿದ್ರೆ ಇವ್ರು ಕಳ್ಕೊಳ್ಳೋದಾದ್ರೂ ಏನು..? ಒಮ್ಮೊಮ್ಮೆ ತೀರಾ ಒಂಟಿ ಅನಿಸಿಬಿಡುತ್ತೆ.. ಯಾಕಾದ್ರೂ ಬದುಕಿದ್ದೀನೋ ಇನ್ನೂ ಭೂಮಿಗೆ, ಮಕ್ಕಳಿಗೆ ಭಾರವಾಗಿ ಅನ್ನೋ ವೇದನೆ ಮನದಲ್ಲಿ ಮೀಟಿ ಬಂದ್ರೆ ಸಾಕು, ಆಳದಿಂದ ಚಳಕು ಹೊಡೆದಂತೆ ಸಣ್ಣಕೆ ಎದೆನೋವು ಕಾಣಿಸಿಕೊಳ್ಳುತ್ತೆ. ಮನುಷ್ಯನಿಗೆ ಆಸ್ತಿ, ಅಂತಸ್ತು ಅದೇನಿಲ್ಲದಿದ್ದರೂ ಒಳ್ಳೇ ಮಾತು ಇರಬೇಕು. ಮಾತು ಒಳ್ಳೆಯದಾಗಿದ್ರೆ ಪ್ರಪಂಚವೇ ಒಳ್ಳೇದಾಗಿರುತ್ತೆ ಅನ್ನೋ ಮಾತೇ ಇದ್ಯಲ್ವ.. ಮೂರು ಹೊತ್ತೂ ನಗುನಗುತ್ತಾ ಮೊಬೈಲ್ ನಲ್ಲಿ ಗೆಳೆಯರೊಡನೆ ಹರಟೆ ಕೊಚ್ಚುವ ಮಕ್ಕಳಿಗೆ ಈ ಅಮ್ಮನೊಡನೆ ಮಾತನಾಡಲು ಮಾತ್ರ ಸಮಯದ ಅಭಾವ. ಅವರ ಕೆಲಸ,


ಗೆಳೆಯರ ಕುರಿತು ಏನಾದರೂ ಕೇಳಿದರೂ ಅಷ್ಟೇ ಒಮ್ಮೆ ದಡಬಡನೆ ಹೇಳಿ, ಮರುಪ್ರಶ್ನೆ ಏನಾದರೂ ಹಾಕಿದೆನೋ ಮುಗೀತು, “ಏ…. ಹೋಗಮ್ಮ, ನಿನ್ಗೇನೂ ಅರ್ಥ ಆಗೋಲ್ಲ, ಸುಮ್ಸುಮ್ನೆ ತಲೆ ತಿಂತೀಯ..” ಅನ್ನೋ ಮಾಮೂಲಿ ರಾಗ. “ಮಾತನಾಡಲು ಕಲಿಸಿದ ಅಮ್ಮನಿಗೇ ಈಗ ಏನೂ ಅರ್ಥ ಆಗದ ಪರಿಸ್ಥಿತಿ. ಕಾಲ ಚಕ್ರದಲ್ಲಿ ಮೇಲಿದ್ದವರು ಹೇಗೆ ಕೆಳಗೆ ಬಂದೇ ಬರುತ್ತಾರೋ, ಕೆಳಗಿದ್ದವರು ಹೇಗೆ ಮೇಲ್ಮಟ್ಟಕ್ಕೆ ಹೋಗಿಯೇ ತೀರುತ್ತಾರೋ, ಹಾಗೇ, ಇಂದು ನನಗೆ ಅರ್ಥ ಆಗದ ಹಾಗೆಯೇ, ಮುಂದೊಮ್ಮೆ ನನ್ನ ಮಕ್ಕಳಿಗೂ ಅರ್ಥವಾಗದ ವಿಷ್ಯಗಳು ಎದುರಾಗಿಯೇ ತೀರುತ್ತವೆ. ಕಾಲಾಯ ತಸ್ಮೈ ನಮಃ..” ನಿಟ್ಟುಸಿರಿಟ್ಟಿತು ಮನ. .

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನವೀನ್ ಚ೦ದ್ರ ಗುರು, 08/02/2012 - 20:20

ಅರ್ಥಪೂರ್ಣವಾದ ಹಾಗು ಇಂದಿನ ಕೆಲವರ ಮನೋಗುಣವನ್ನ ಚೆನ್ನಾಗಿ ಬರೆದ್ದಿದ್ದೀರಾ ಜ್ಯೋತಿಯವರೆ, ನಿಮ್ಮ ಲೇಖನಗಳಲ್ಲಿ ಇದು ನನಗೆ

ತುಂಬಾ ಇಷ್ಟವಾದದ್ದು,,, ಹೌದು ಜ್ಯೋತಿಯವರೆ ಇಂದಿನ ದಿನಗಳಲ್ಲಿ ತಂದೆ ತಾಯಿಗಳಿಗೆ ವಯಸ್ಸಾದರೆ ಸಾಕು ಅವರನ್ನು ಅಸಡ್ಡೆಯಿಂದ ಕಾಣುವವರೆ ಹೆಚ್ಹು ತಮಗೂ ಒಂದು ದಿನ ವೃದ್ದಾಪ್ಯ ಬರುತ್ತದೆ ಎಂಬುದನ್ನು ಯಾರು ಚಿಂತಿಸುವುದಿಲ್ಲ. ಹೊತ್ತು, ಹೆತ್ತು ಸಾಕಿದ ಜೀವವನ್ನು

ಸಂತೋಷದಿಂದ ನೋಡಿಕೊಳ್ಳೂವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.

Jyothi Subrahmanya ಶನಿ, 08/04/2012 - 07:28

ಧನ್ಯವಾದಗಳು ನವೀನ್ ನಿಮ್ಮ ಅನಿಸಿಕೆಗೆ.  ಹೆತ್ತು, ಉತ್ತಮ ಸಂಸ್ಕಾರ ಕೊಟ್ಟು ಬೆಳೆಸಿ,

ನಮ್ಮ ಜೀವನ ರೂಪಿಸಿಕೊಳ್ಳಲು ಆಸರೆಯಾದ ತಂದೆ-ತಾಯಿಯನ್ನು ಗೌರವಿಸಿ, ಪ್ರೀತಿಸಿ,

ಚೆನ್ನಾಗಿ ನೋಡಿಕೊಂಡರೆ ಅದೇ ನಮಗೆ ಶ್ರೀರಕ್ಷೆ ಅಲ್ವೇ? ಒಂದು ಮಾತಿದೆ, ಉಂಡವರು

ಹರಸುವುದು ಬೇಡ, ನೊಂದವರು ಶಪಿಸುವುದು ಬೇಡ ಅಂತ.  ಅಂಥದ್ದರಲ್ಲಿ,

ಹೆತ್ತವರನ್ನು ನೋಯಿಸಿ ಕೀಳಾಗಿ ಕಾಣುವವರಿಗೆ ಕಾಲವೇ ಬುದ್ಧಿ ಕಲಿಸಬೇಕಷ್ಟೆ...

Pattar ಸೋಮ, 08/06/2012 - 11:42

ಹೆತ್ತವರ ಬಗ್ಗೆ ನೀವು ಬರೆದ ಲೇಖನ ತು೦ಬಾ ಚೆನ್ನಾಗಿದೆ ಜ್ಯೋತಿಯವರೇ....

ಎಲ್ಲದಕ್ಕೂ ಕಾಲವೇ ಕಾರಣ ಎ೦ದರೆ, ಮನುಷ್ಯ ಮಾಡುವ ತಪ್ಪುಗಳಿಗೆ ಶಿಕ್ಷೆಯಾದರೂ ಎಲ್ಲಿ ಸಿಗಲು ಸಾಧ್ಯ..?

ಮೇಲು ಕೀಳೆ೦ಬ ಭಾವನೆಗಳನ್ನು, ಅಭಿಮಾನದ ಅಹ೦ಕಾರಗಳನ್ನು ಮನುಷ್ಯ ತನಗೆ ತಾನೇ ರೂಢಿಸಿಕೊ೦ಡಿದ್ದಾನೆ.

ಇದಕ್ಕೆ ಕಾಲದ ಕಾರಣ ಕೊಡುವುದು ಎಷ್ಟರ ಮಟ್ಟಿಗೆ ಸರಿ? ಅಲ್ವಾ?

Jyothi Subrahmanya ಸೋಮ, 08/06/2012 - 21:24

ಪತ್ತಾರ್ ರವರೇ,

ಮನುಷ್ಯನೇ ತಪ್ಪು ಮಾಡುವುದು ನಿಜವಾದ್ರೂ ಕಾನೂನು ಅಥವಾ ಇತರೆ ವ್ಯಕ್ತಿಗಳು ಆತನಿಗೆ

ನೀಡುವ ಶಿಕ್ಷೆ ಕ್ಷಣಿಕ ಮತ್ತು ಕಡಿಮೆ ಪರಿಣಾಮಕಾರಿಯಾಗಿರುತ್ತದೆ.  ಆದ್ರೆ, ಕಾಲ ನೀಡುವ 

ಶಿಕ್ಷೆ ಅದನ್ನ ಅನುಭವಿಸಿಯೇ ತೀರಬೇಕು ಮತ್ತು ಅದಕ್ಕೆ ಬೇರೆ ಪರಿಹಾರೋಪಾಯಗಳೂ

ಇರುವುದಿಲ್ಲ.  ಅದಕ್ಕೆ ಅಲ್ವೇ ತಿಳಿದವರು ಹೇಳೋದು, ಕಾಲ ಕಲಿಸುವ ಪಾಠ,

ಅನುಭವಕ್ಕಿಂತ ಮಿಗಿಲಾದ ಗುರು ಬೇರಿಲ್ಲ ಅಂತ..  ಕಾಲವನ್ನು ಕಾರಣವಾಗಿಸಿಲ್ಲ..

ಪರಿಹಾರವಾಗಿಸಿದ್ದೀನಿ ಎನ್ನಲಡ್ಡಿಯಿಲ್ಲ.  ಃ)

 

ಧನ್ಯವಾದಗಳು ನಿಮ್ಮ ಅನಿಸಿಕೆ ಹಾಗೂ ಮೆಚ್ಚುಗೆಗೆ.. 

venkatb83 ಸೋಮ, 08/06/2012 - 18:48

ಕಾಲ ಚಕ್ರದಲ್ಲಿ ಮೇಲಿದ್ದವರು ಹೇಗೆ ಕೆಳಗೆ ಬಂದೇ ಬರುತ್ತಾರೋ, ಕೆಳಗಿದ್ದವರು ಹೇಗೆ ಮೇಲ್ಮಟ್ಟಕ್ಕೆ ಹೋಗಿಯೇ ತೀರುತ್ತಾರೋ, ಹಾಗೇ, ಇಂದು ನನಗೆ ಅರ್ಥ ಆಗದ ಹಾಗೆಯೇ, ಮುಂದೊಮ್ಮೆ ನನ್ನ ಮಕ್ಕಳಿಗೂ ಅರ್ಥವಾಗದ ವಿಷ್ಯಗಳು ಎದುರಾಗಿಯೇ ತೀರುತ್ತವೆ.

 

+೧

 

ಎಲ್ಲೊ ಏನೊ ತಪ್ಪಿದೆ... ಅದನ್ನು ಸರಿ ಪಡಿಸಬೆಕಿದೆ... 

ನಮಗಾಗಿ ಅಸ್ಟೇಲ್ಲ ತ್ಯಾಗ ಮಾಡಿದವರನ್ನ ಪ್ರೀತಿ ಪೂರ್ವಕವಾಗಿ ಆದರಗಳೊಡನೆ ನೊಡಿಕೊಳ್ಬಬೆಕು..

 

ಅದು ನಮ್ಮ  ಕರ್ತವ್ವ್ಯ.. 

 

ಉತ್ತಮ ಲೆಖನ..

 

\।/

Jyothi Subrahmanya ಸೋಮ, 08/06/2012 - 21:20

ಧನ್ಯವಾದಗಳು ವೆಂಕಟ್ ನಿಮ್ಮ ಅನಿಸಿಕೆಗೆ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.