Skip to main content

ಹೀಗೇ ಸುಮ್ಮನೆ ನೆನಪಾದವ

ಬರೆದಿದ್ದುJuly 8, 2012
2ಅನಿಸಿಕೆಗಳು

ಅವನದೇಕೋ ನೆನಪಾಗುತ್ತಾನೆ.. ಕೆಲವು ಹಾಡುಗಳನ್ನು ಕೇಳುವಾಗ,ಯಾವುದೋ ಜೋಡಿ ಕೈ ಕೈ ಹಿಡಿದುಕೊಂಡು ನಡೆಯುವುದ ನೋಡಿದಾಗ, ಕೆಲವು ಮಾತುಗಳು ಅವನೇ ಆಡಿದಂತೆ ಭಾಸವಾದಾಗ!!! ಸಂಜೆಯ 7.15 ರ ಹೊತ್ತಿನಲ್ಲಿ ಹೂವಿನವಳು ಹೂವೂ ಅಂತ ಕೂಗುತ್ತಾ ನಡೆದಾಗ ಬೆನ್ನಿಗೇ ಅವನ ಮಾತುಗಳು ಮಾರ್ದನಿಸುತ್ತವೆ.. ಏಯ್, ಊರಿಗೆ ಬಂದಾಗ ಹೂವಿನವಳ ಹತ್ರ ಒಂದು ವರ್ಷಕ್ಕಾಗುವಷ್ಟು ದುಡ್ಡು ಕೊಟ್ಟು ವರ್ತನೆಗೆ ಹೂ ಕೊಡೋದಿಕ್ಕೆ ಹೇಳ್ತೀನಿ.

ನಾ ಇಲ್ಲದಾಗ್ಲೂ ನನ್ನ ಹುಡುಗಿಯ ಮುಡಿಯಲ್ಲಿ ಹೂ ಘಮಿಸ್ತಾ ಇರ್ಬೇಕು.. ಈಗ್ಲೂ ಹೂವಿನ ಅಜ್ಜಿ ಮನೆಯುದುರು ಹಾದು ಹೋಗ್ತಾಳೆ.. ಆದ್ರೆ ಆ ಹೂವಿನ ಘಮವದೆಲ್ಲೋ ಕಾಣೆಯಾಗಿದೆ.ನನ್ನ ಮನದ ಮಹಲಿನ ತುಂಬಾ ನಿನ್ನದೇ ಕಾಲ್ಗೆಜ್ಜೆಯ ಘಜಲುಗಳು ಅಂತ ಹೇಳಿದವನು ಇಷ್ಟು ಬೇಗ ಆ ಗೆಜ್ಜೆಯ ನಾದ ಕೇಳದ ಕಿವುಡನಾಗಿಬಿಟ್ಟನಾ ಅಥವಾ ಅವನಾಡಿದ ಕಟು ನುಡಿಗಳಿಂದಾಗಿ ಆ ಸೊಗಸಾದ ಕಾಲ್ಗೆಜ್ಜೆಗಳು
ನಾದವನ್ನು ಹೊರಡಿಸಲಾರದೆ ಹರಿದು ಚೂರಾಗಿ ಹೋದವೇ?? ಅದೆಷ್ಟೋ ಪ್ರಶ್ನೆಗಳು ತನ್ನೊಡೆಯನಿಗಾಗಿ ಕಾಯುತ್ತಿವೆ.. ಅವನ ಉತ್ತರಗಳಿಗಾಗಿ ಕಾದ ಹೃದಯ ಇತ್ತೀಚೆಗಂತೂ ಕಾಯುವುದನ್ನು ತನ್ನ ಬಡಿತದಂತೆಯೇ ಅವಿರತ ದಿನಚರಿಯಾಗಿಸಿಕೊಂಡುಬಿಟ್ಟಿದೆ..ಕಾಯುವುದರಲ್ಲೂ ಏನೋ ಸುಖವಿದೆ ಎಂದಿದ್ದ ಒಮ್ಮೆ. ನಾನಾಗ ನಕ್ಕು ಸುಮ್ಮನಾಗಿದ್ದೆ, ಅದೇನು ಸುಖ ಸುರುವಿಕೊಳ್ತೀಯೋ ಸುರ್ಕೋ!! ಅಂದಿದ್ದೆ.

ಆದರೆ ಆ ಸುಖದ ಅರಿವೀಗ ಆಗುತ್ತಿದೆ. ಕಾಯುವುದರ ತಪನದ ಅರಿವು, ಅದರಲ್ಲಿರುವ ಅಸಹನೀಯತೆ, ಅದರಿಂದಾಗುವ ಆಶಾಭಂಗ, ಚಡಪಡಿಕೆ ಅನುಭವಿಸಿದವರಿಗೇ ಗೊತ್ತು. ಅದನ್ಯಾಕೆ ಸುಖಕ್ಕೆ ಹೋಲಿಸಿದ್ನೋ ಪುಣ್ಯಾತ್ಮ! ಆ ದೇವ್ರಿಗೇ ಗೊತ್ತು. ಆದ್ರೂ ನಾ ಕಾಯಿಸಿದಾಗೆಲ್ಲಾ ತಾಳ್ಮೆಯಿಂದಲೇ ಕಾಯುತ್ತಿದ್ದಾತನ ಸಹನೆಗೆ ಪುಟ್ಟದೊಂದು ಸಲಾಂ!! ಈಗ ಅವನೂ ಕಾಯಿಸ್ತಾ ಇದ್ದಾನೆ.. ಮಾತಿಲ್ಲ, ಮೆಸೇಜ್ ಇಲ್ಲ, ಭೇಟಿಯಂತೂ ಮರೀಚಿಕೆಯಾಗಿಯೇ ಉಳಿದಿದೆ.. ಆದ್ರೂ ನೆನಪುಗಳು ಬೆಂಬಿಡದೆ ಕಾಡುತ್ತಲೇ ಇವೆ...ಕೂತಾಗ, ನಿಂತಾಗ, ಯಾವುದೋ ಘಟನೆಗಳ ಮೆಲುಕಾಡಿದಾಗ.ನನ್ನೆಲ್ಲಾ ಸಿಹಿನೆನಪುಗಳ ಬೆನ್ನೆಲುಬಾದಾತನನ್ನು ಮರೆಯುವುದಾದರೂ ಹೇಗೆ??? ಮರೆವು ಬಹಳಾನೇ ಆಟ ಆಡಿಸುತ್ತೆ! ಬೇಕೆಂದಿದ್ದನ್ನು ಮರೆಸುವ, ನೋವಿನೆಳೆಗಳನ್ನು ಹಸಿರಾಗಿರಿಸುವ ಈ ನೆನಪು-ಮರೆವಿನ ಆಟ ಅರ್ಥ ಮಾಡಿಕೊಳ್ಳುವುದೇ ಒಂದು ಹರಸಾಹಸ.....

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

N. Rao (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/11/2012 - 14:38

ಅಬ್ಬಾ..!! ಎಂತಹ ಅನುಭವದ ಜೋತೆಯಲ್ಲೆ ಮಧುರವಾದ ನೋವು 

anusha ಮಂಗಳ, 07/17/2012 - 17:50

ಹೌದು ನೆನೆಪುಗಳೆ ಹಾಗೆ ಅಲ್ವ ನಾವು ಬೇಡ ಅ೦ದರು ನಮ್ಮನ್ನ ಅವು ಬಿಡೊಲ್ಲ, ನೆನಪು ಎಷ್ಟು ಮಧುರಾನೋ ಅಷ್ಟೆ ಕ್ರೂರಿ. ನಾವು ಪ್ರೀತಿಸೊ

ಹ್ರುದಯಾನ ಎಷ್ಟೆ ನೆನೆಪಿಸಿಕೊ೦ಡರು ಅದರ ನೆನೆಪು ಮಾಸಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.