ಕಾಡುವ ಕವಿ(ತೆ)- ಖಲೀಲ್ ಗಿಬ್ರಾನ್
[img_assist|nid=22134|title=ಖಲೀಲ್ ಗಿಬ್ರಾನ್|desc=|link=none|align=left|width=99|height=130]ಖಲೀಲ್ ಗಿಬ್ರಾನ್ ನಮ್ಮನ್ನು ಕಲಕುವ ಕವಿಯಲ್ಲ, ಕಾಡುವ ಕವಿಯೂ ಅಲ್ಲ, ಕೈ ಹಿಡಿದು ದಾರಿ ತೋರುವ ಕವಿ.೧೮೮೩ ರಿಂದ ೧೯೩೧ ರ
ಕಾಲಮಾನದಲ್ಲಿ ಜೀವಿಸಿದ್ದ ಈತ ಕವಿ,ಲೇಖಕ,ದಾರ್ಶನಿಕ ಹಾಗೂ ಕಲಾವಿದನೂ ಹೌದು. ಈತ ರಚಿಸಿರುವ ಒಂದೆರೆಡು ಕವಿತೆಗಳನ್ನು
ಕನ್ನಡಕ್ಕೆ ಭಾಷಾಂತರಿಸುವ ಪ್ರಯತ್ನ ಇಲ್ಲಿದೆ. ಅದೇ ಗೇಯತೆಯೊಂದೆಗೆ, ಸರಳತೆಯೊಂದಿಗೆ, ಹೃದಯಂಗಮ ದೈವಿಕತೆಯೊಂದಿಗೆ ಖಲೀಲ್ ಗಿಬ್ರಾನ್ ನಿಮಗೂ ಸಹ ಇಷ್ಟವಾದರೆ ನನಗಷ್ಟೇ ಸಾಕು.
ಅಂದಹಾಗೆ ಕಾಡುವ ಕವಿ(ತೆ) ಎಂಬ ಹೊಸ ಸರಣಿ ಆರಂಭಿಸುತ್ತಿದ್ದೇನೆ. ಇದರ ಮೊದಲ ಕಂತು ಇಗೋ ನಿಮ್ಮ ಎದುರಿನಲ್ಲಿ.
ಪ್ರೀತಿ
ಪ್ರೀತಿ ನಿಮ್ಮನ್ನು ಕೈಬೀಸಿ ಕರೆದಾಗ, ಅವನನ್ನು ಹಿಂಬಾಲಿಸಿ
ಹಾದಿ ಕಠಿಣವಾದರೂ, ಕಡಿದಾದರೂ ಸರಿಯೇ
ಅವನು ತನ್ನ ರೆಕ್ಕೆಗಳನ್ನು ಚಾಚಿದಾಗ, ಅವನಿಗೆ ನಿಮ್ಮನ್ನು ಅರ್ಪಿಸಿಕೊಳ್ಳಿ
ಅವನ ಅಪ್ಪುಗೆಯಲ್ಲಿರುವಾಗ, ಮರೆಯಲ್ಲಿರುವ ಚೂರಿ ನಿಮ್ಮನ್ನು ಗಾಯಗೊಳಿಸಬಹುದು
ಅವನು ನಿಮ್ಮೊಡನೆ ಮಾತನಾಡಿದಾಗ ಅವನ ಮೇಲೆ ನಂಬಿಕೆಯಿಡಿ
ತೆಂಕಣದ ಬಿರುಗಾಳಿ ಪುಷ್ಪೋದ್ಯಾನವನ್ನು ಧ್ವಂಸಗೊಳಿಸಿದ ಹಾಗೆ
ಅವನ ದನಿ,
ನಿಮ್ಮ ಕನಸುಗಳನ್ನು ನುಚ್ಚುನೂರಾಗಿಸಿದರೂ ಸರಿ
ನಿಮಗೆ ಪ್ರೀತಿಯು ಕಿರೀಟವನ್ನೂ ತೊಡಿಸಬಹುದು, ನಿಮ್ಮನ್ನು ಶಿಲುಬೆಗೂ ಏರಿಸಬಹುದು
ಪ್ರೀತಿ , ಫಸಲಿನ ಹಾಗೆ ಕುಯಿಲೂ ಸಹ ಆಗಿದ್ದಾನೆ.
ಅವನು ನಿಮ್ಮ ಕಡೆ ವಾಲಿದಾಗ ನೀವು ಎತ್ತರಕ್ಕೇರಬಹುದು, ಹಾಗೆಯೇ
ಅವನು ತನ್ನ ಸೂರ್ಯನ ಬತ್ತಳಿಕೆಯಿಂದ ಕಿರಣದ ಬಾಣಗಳನ್ನೆಸೆದು ನಿಮ್ಮ ಅಹಂ ಅನ್ನು ಮಧುರವಾಗಿ ಘಾಸಿಗೊಳಿಸಬಹುದು.
ನಿಮ್ಮ ಬೇರಿನ ಆಳಕ್ಕಿಳಿದು ಅಲ್ಲಾಡಿಸಿ,
ಮಣ್ಣಿನ ಹಿಡಿತದಿಂದ ನಿಮ್ಮನ್ನು ಪಾರುಗೊಳಿಸುತ್ತಾನೆ.
ಅಗೆ ಹಾಕುವ ಬತ್ತದ ಕಟ್ಟಿನ ಹಾಗೆ, ನೀವು ಅವನ ಕೈಯೊಳಗೆ ಬಂಧಿಗಳು.
ನಿಮ್ಮನ್ನು ಬೆತ್ತಲು ಮಾಡುವ ಸಲುವಾಗಿ, ನಾಟಿ ಮಾಡುತ್ತಾನೆ
ನೀವು ಬಗ್ಗುವವರೆಗೂ ಸದೆಯುತ್ತಾನೆ.
ಪೊಳ್ಳು ಕಾಳು ಬೇರಾಗಿಸುವ ಸಲುವಾಗಿ ತೂರುತ್ತಾನೆ
ತದನಂತರ ನಿಮ್ಮನ್ನು ಹೋಮಾಗ್ನಿಯಲ್ಲಿ ಬೇಯಿಸಿ, ಮೃಷ್ಟಾನ್ನವನು ಮಾಡಿ, ದೇವರ ನೈವೇದ್ಯಕೆ ಅಣಿಗೊಳಿಸುತ್ತಾನೆ.
ಪ್ರೀತಿ ಇದೆಲ್ಲವನೂ ಮಾಡುವುದು ನಿಮ್ಮ ಹೃದಯವನು ನೀವು ಅರಿಯಲೆಂದು, ಮತ್ತು ಆ ಅರಿವು ವಿಶ್ವ ಚೇತನದ ತುಣುಕಾಗಲೆಂದು
------------೦೦೦೦೦೦೦೦೦೦-----------
ಮದುವೆ
ನೀವು ಜೊತೆಯಲ್ಲೇ ಹುಟ್ಟಿರಬಹುದು, ಜೀವನವಿಡೀ ಜೊತೆಗಿರಬಹುದು
ಸಾವಿನ ಬಿಳಿ ರೆಕ್ಕೆಗಳು ನಿಮ್ಮ ಮೇಲೆ ಚಾಚುವಾಗಲೂ ಸಹ
ನೀವು ಜೊತೆಗಿರಬಹುದು
ಹೌದು, ಭಗವಂತ ಧ್ಯಾನದಲ್ಲೂ, ಮೌನದಲ್ಲೂ ಸಹ ನೀವು ಜೊತೆಗಿರಬಹುದು
ಆದರೆ ನಿಮ್ಮ ಅನುಬಂಧದಲ್ಲಿ ಸ್ವಲ್ಪ ಅಂತರವಿರಲಿ
ಸ್ವರ್ಗದ ಗಾಳಿ ನಿಮ್ಮ ನಡುವೆ ನರ್ತಿಸಲಿ
ಪರಸ್ಪರ ಪ್ರೀತಿಸಿ, ಆದರೆ ಒಪ್ಪಂದ ಬೇಡ
ಕಡಲಿಗಿಂತ ಹೆಚ್ಚಾಗಿ ನಿಮ್ಮ ಆತ್ಮದ ತೀರಗಳು ಸ್ಪರ್ಶಿಸಲಿ
ಎರಡೂ ಬಟ್ಟಲುಗಳನ್ನು ತುಂಬಿಸಿ, ಒಂದರಿಂದ ಮಾತ್ರ ಕುಡಿಯಬೇಡಿ
ನಿಮ್ಮ ತಿಂಡಿಯ ಚೂರುಗಳನ್ನು ಹಂಚಿಕೊಳ್ಳಿ, ಆದರೆ ಒಂದೇ ತಟ್ಟೆಯ ರುಚಿ ನೋಡಬೇಡಿ
ಜೊತೆಯಾಗಿ ಹಾಡಿರಿ, ಜೊತೆಯಾಗಿ ಕುಣಿಯಿರಿ
ಜೊತೆಯಾಗಿರಲಿ ನಿಮ್ಮೆಲ್ಲ ಸಂತಸ ನಲಿವು
ಆದರೆ ನಿಮ್ಮ ತನಗಳು ನಿಮ್ಮ ಜೊತೆಗೇ ಇರಲಿ
ವೀಣೆಯ ಎರಡು ತಂತಿಗಳು ಒಂದೇ ರಾಗವನ್ನು ನುಡಿಸುವಾಗಲೂ ಸಹ ಪರಸ್ಪರ ತಾಕುವುದಿಲ್ಲ.
ನಿಮ್ಮ ಹೃದಯ ನೀಡಿ, ಆದರೆ ಪರಸ್ಪರ ವಿನಿಮಯಕ್ಕಲ್ಲ
ಬದುಕಿನ ಕೈಗಳು ಮಾತ್ರ ನಿಮ್ಮ ಹೃದಯಗಳನ್ನು ಪರಸ್ಪರ ಬದಲಾಯಿಸಬಲ್ಲವು
ಒಟ್ಟಿಗೆ ನಿಂತುಕೊಳ್ಳಿ, ಆದರೆ ನಿಮ್ಮ ನಿಲುವು ಒಟ್ಟಿಗಿರುವುದು ಬೇಡ
ದೇವಾಲಯದ ಸ್ತಂಭಗಳು ಸಮಾನ ಅಂತರದಲ್ಲಿರುವ ಹಾಗೆ
ಮರಗಳು ಮತ್ತೊಂದು ಮರದ ನೆರಳನ್ನೂ ಸಹ ಸೋಂಕದೆ ಎತ್ತರಕ್ಕೆ ಬೆಳೆಯುವ ಹಾಗೆ
ಸಾಲುಗಳು
- Add new comment
- 2160 views
ಅನಿಸಿಕೆಗಳು
sundaravagide..........
sundaravagide.......... neenillade vismayanagari sappe agide, amavasye hoogi CHANDRA barali...
dayavittu munduvaresu..........
ಬಾಲಚಂದ್ರ ಚೆನ್ನಾಗಿವೆ
ಬಾಲಚಂದ್ರ
ಚೆನ್ನಾಗಿವೆ ಅನುವಾದಗಳು. ಗಿಬ್ರಾನ್ ನನ್ನು ಅನುವಾದಿಸುವ ನಿಮ್ಮ ಪ್ರಯತ್ನಕ್ಕೆ ಫುಲ್ ಮಾರ್ಕ್ಸ್.
ಆದರೆ, ನೀವೇ ಕವನ ರಚಿಸುವ ಬದಲು ಈ ಅನುವಾದವೇಕೆ? ಖಲೀಲನನ್ನು ಓದಿ...ಭಯಂಕರ ಪ್ರಭಾವಿತನಾಗಿ..ಈ ಪದ್ಯವನ್ನು ಕನ್ನಡಕ್ಕೆ ತಂದೇ ಸೈ ಅಂತ ಬರೆದಿದ್ದರೆ ಅಡ್ಡಿಯಿಲ್ಲ. ತಲೆ ಕೆಡಿಸಿಕೊಂಡು ಹೊಸ ಪದ್ಯ ಯಾರು ಬರೆಯುವುದು...ಇತರರು ಬರೆದದ್ದನ್ನೇ ಅನುವಾದಿಸಿ ಬಿಸಾಕಿದರಾಯಿತು ಅನ್ನೋ ಶಾರ್ಟ್ ಕಟ್ ಗೆ ಮೊರೆ ಹೋಗಿದ್ದರೆ ಮಾತ್ರ ...ಒಪ್ಪಲಾಗುವುದಿಲ್ಲ !
ಕೆ ಎಲ್ಕೆ ಸರ್, ನೀವಂದ ಹಾಗೆ ಓದ
ಕೆ ಎಲ್ಕೆ ಸರ್,
ನೀವಂದ ಹಾಗೆ ಓದಿ ಪ್ರಭಾವಿತನಾಗಿ ಈ ಪದ್ಯವನ್ನು ಕನ್ನಡಕ್ಕೆ ತಂದೇ ಸೈ ಅಂತಲೇ ಬರೆದಿದ್ದು.
ಓದುಗರಲ್ಲಿ ವಾಚನಾಭಿರುಚಿ ಬೆಳೆಸುವ ಸಲುವಾಗಿ ಉತ್ತಮೋತ್ತಮ( ನಿಸ್ಸಂಶಯವಾಗಿ ಕನ್ನಡ ಕವಿಗಳ) ಕವಿಗಳ ಕಿರು ಪರಿಚಯದೊಂದಿಗೆ ಒಂದೆರೆಡು ಸ್ಯಾಂಪಲ್ ಕವಿತೆಗಳನ್ನು ನೀಡುವಂತಹ, ಅವರ ವಿಚಾರಲಹರಿಯನ್ನು ಚರ್ಚೆಗೊಳಪಡಿಸುವ ಪ್ರಯತ್ನ ಪ್ರಾರಂಭಿಸೋಣವೆಂದಿದ್ದೇನೆ.
ಇದು ಸರಿಯೋ? ತಪ್ಪೋ? ತಿಳಿದಿಲ್ಲ
ನುತಿಗುಣರು,ಭಾವುಕರು, ವರ ಪಂಡಿತರು, ನೀವೆಲ್ಲರೂ ಎನಗೆ ಮತಿಯನೀಯುವುದು.
ಮಾಡಿ ಬಾಲಚಂದ್ರ. ಒಳ್ಳೆಯದು.
ಮಾಡಿ ಬಾಲಚಂದ್ರ. ಒಳ್ಳೆಯದು.
ಆದರೆ "ಅತ್ಯುತ್ತಮ"... (ಅಪರೂಪವಿರಲೇಬೇಕೆಂದೇನಿಲ್ಲ) ಕವನಗಳಿರಲಿ. ಸಿನೇಮಾಪದ್ಯಗಳಾದರೂ ತೊಂದರೆಯಿಲ್ಲ ( ಅಂದಾಗ್ಯೆ ತುಸು ಹೆಚ್ಚು ಜನ ಅಭಿರುಚಿ ತೋರಿಸಬಹುದು, ಭಾಗವಹಿಸಬಹುದು!
ಉದಾಹರಣೆಗೆಃ "೩೫/೧೦೦...ಜಸ್ಟ್ ಪಾಸ್" ಎಂಬ ಕನ್ನಡ ಚಿತ್ರದಲ್ಲಿ ಒಂದು ಹಾಡಿದೆ....."ಜೀವ ಬೇಯೊ ಕಾವಿನಲ್ಲಿ ಪ್ರೀತಿ ನೀ ಉರಿವೆ..... ಆ ಚಿತ್ರ ಹಾಗೂ ಹಾಡುಗಳೆಲ್ಲ ತುಂಬಾ ಚೆನ್ನಾಗಿತ್ತು. ನಾಲ್ಕಾರು ಇಂಜಿನಿಯ್ ಹುಡುಗರು ಕನ್ನಡ ಹಾಗೂ ಸಿನೆಮಾ ಪ್ರೀತಿ ಇಟ್ಟುಕೊಂಡು ಮಾಡಿದ ಒಳ್ಳೆಯ ಚಿತ್ರ....ಒಂದು ವಾರ ಓಡಿತು !!!! )
ಏನೇ ಮಾಡಿದರೂ ಹೊಸತೆನಿಸುವಂತೆ ಮಾಡಿ. ನಿಮಗೆ ಆ ಸಾಮರ್ಥ್ಯವಿದೆ ಬಿಡಿ.
ಬಾಲಚಂದ್ರ ರವರೆ, ಕವನ ಚೆನ್ನಾಗಿ
ಬಾಲಚಂದ್ರ ರವರೆ,
ಕವನ ಚೆನ್ನಾಗಿ ಬರೆದಿದ್ದೀರಿ. ಅನುವಾದವಾದರೂ ನಿಮ್ಮ ಪ್ರಯತ್ನವನ್ನ ನಿಜಕ್ಕೂ ಮೆಚ್ಚುವಂತದ್ದು. ಸೊಗಸಾಗಿ ಮೂದಿಬಂದಿದೆ ಅನುವಾದದ ಸಾಲುಗಳು. ಹೀಗೆ ಮುಂದುವರಿಸಿ..
-- ವಿನಯ್
ತುಂಬಾ ಉತ್ತಮ ಪ್ರಯತ್ನ ಬಾಲಚಂದ್ರ
ತುಂಬಾ ಉತ್ತಮ ಪ್ರಯತ್ನ ಬಾಲಚಂದ್ರ ಅವರೇ,
ಆದರೆ ಓದಿದಾಗ ಪದ ಪುಂಜಗಳ ಬಳಕೆ ನೋಡಿದಾಗ ಅನ್ನಿಸಿದಿಷ್ಟು ಇಷ್ಟೇ ನಿಮ್ಮ ಪ್ರತಿಭೆ ಹೊಸ ಸಾಹಿತ್ಯದ ಕೃಷಿಗೆ, ಈಗಿನ ಕಾಲಮಾನದ ಮಕ್ಕಳು, ಕಾಲೇಜು ಹುಡುಗರಿಗೆ ಓದಿನ ಹುಚ್ಚು ಎಬ್ಬಿಸುವಷ್ಟು ರೀತಿಯ ಬರಹ ಬರೆಯುವ ಪ್ರಯತ್ನಕ್ಕೆ ಬಳಕೆಯಾಗಲಿ. ಅದು ಕನ್ನಡ ಭಾಷೆಗೆ ಆಮ್ಲಜನಕದಂತೆ.
ಹೀಗೆ ಜನಪ್ರಿಯ ಕವಿಗಳನ್ನು ಪರಿಚಯಿಸುವ ಪ್ರಯತ್ನ ಒಳ್ಳೆಯದೇ. ಆದರೆ ನಿಮ್ಮ ಸೃಜನಶೀಲತೆಯನ್ನು ಬಳಸಿ ಬರೆದ ಬರಹಗಳು ಹೆಚ್ಚು ಬರಲಿ.
ಏನೇ ಇರಲಿ ಹೊಸತನಕ್ಕೆ ತುಡಿಯುವ ನಿಮಗೆ ಶುಭವಾಗಲಿ. :)
ಬಾಲು ಅವ್ರೆ- ರವಿ
ನಿಮಗೆ ಅದಕ್ಕಾಗಿ
ನನ್ನಿ
\|/
ಶುಭವಾಗಲಿ...
ಬಾಲು ಅವ್ರೆ-
ರವಿ ಬೆಳಗೆರೆ ಅವರು ಆಗಾಗ ಖಲೀಲ್ ಗಿಬ್ರಾನ್ ಬಗ್ಗೆ ಹೇಳುತಿದ್ದರು ಬರೆಯುತ್ತಿದ್ದರು, ಆದರೂ ಅವರ ಯಾವುದೇ ಬರಹವನ್ನು ನಾ ಓದಿರಲಿಲ್ಲ. ಈಗ ನೀವು ಅವರ ಬರಹಗಳ ಭಾಷಾಂತರ ಮಾಡಿ ಇಲ್ಲಿ ಸೇರಿಸುತ್ತಿರುವುದು ನಮ್ಮಂತವರಿಗೆ ಓದಲು ಅರಿಯಲು ಸಹಾಯಕವಾಯ್ತು..
ಬಾಲಣ್ಣ, ನಿಮ್ಮ ಅನುವಾದ ಎಷ್ಟು
ಬಾಲಣ್ಣ,
ನಿಮ್ಮ ಅನುವಾದ ಎಷ್ಟು ಸುಂದರವಾಗಿದೆ ಅಂದರೆ ನನಗೆ ಗೊತ್ತಿರ ಖಲೀಲ್ ನಿಮ್ಮಷ್ಟೇ ಆತ್ಮೀಯನಾಗಿಬಿಟ್ಟ
ಮುಂದಿನ ಸರಣಿಗೆ ಕಾಯುತ್ತಿದ್ದೇನೆ
ನಿಮ್ಮ
ಉಮಾಶಂಕರ