ಅಹಹಾ! ಏನು ವಿಸ್ಮಯ! ಎಂಥಾ ವಿಸ್ಮಯ!!
[img_assist|nid=22065|title=ವಿಸ್ಮಯ ಬಳಗ|desc=|link=node|align=left|width=98|height=130]ಸನ್ ಎರಡು ಸಾವಿರದ ಹನ್ನೊಂದನೇ ಇಸ್ವಿಯ ಮೇ ಹದಿನಾಲ್ಕು ಶನಿವಾರ ಮಧ್ಯಾಹ್ನ ಎರಡು ಘಂಟೆಗೆ ಒದಗಿದ ಶುಭಲಗ್ನದಲ್ಲಿ ನಡೆದ ಘಟನೆಯು ಕರ್ನಾಟಕದ ಚರಿತ್ರೆಯ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದೇನೂ ಅಲ್ಲದಿದ್ದರೂ ತೆಗೆದು ಹಾಕುವಂತದ್ದೂ ಅಲ್ಲ ಬಿಡಿ.
ಅಂದು ಬಸವನಗುಡಿಯಲ್ಲಿರುವ ಕಹಳೆ ಬಂಡೆಯ ಉದ್ಯಾನವನದ ಮೃತ್ತಿಕೆಯು ಕನ್ನಡಗರಡಿಯಾಳುಗಳ ಪಾದಸ್ಪರ್ಶದಿಂದ ಪುಳಕಿತವಾಯಿತು.
ಅಲ್ಲೇ ಶಿಲಾರೂಪದಲ್ಲಿ ನೆಲಸಿರುವ ಡಿ.ವಿ.ಗುಂಡಪ್ಪನವರ ಪ್ರತಿಮೆಯ ಕಣ್ಣಿನಿಂದ ಆನಂದಾಶ್ರುಗಳು ಹೊಮ್ಮಿದವೂ, ಅದನ್ನು ಅವರು ಕನ್ನಡಕ ತೆಗೆದು ತಮ್ಮ ಹೆಗಲಿನಲ್ಲಿದ್ದ ಅಂಗವಸ್ತ್ರದಿಂದ ಒರೆಸಿಕೊಂಡರೂ ಎಂದು ಪ್ರತ್ಯಕ್ಷದರ್ಶಿಗಳ ಅಂಬೋಣ.
ವಿಸ್ಮಯನಗರಿಯ ನಿರ್ಮಾತೃ ರಾಜೇಶ್ ಹೆಗಡೆ, ಕೆ ಎಸ್ ಶಿವಕುಮಾರ್, ಉಮಾಶಂಕರ್, ಕೆಎಲ್ಕೆ, ವಿ ಎಂ ಶ್ರೀನಿವಾಸ್ ಇವರೆಲ್ಲರ ಜೊತೆಯಲ್ಲಿ ನಾನೂ ಸೇರಿಕೊಂಡು ಕನ್ನಡ, ನಾಡು, ನುಡಿಯ ಬಗ್ಗೆ ಚರ್ಚಿಸಿದ ಘಳಿಗೆ ಅವಿಸ್ಮರಣೀಯ.ಅಲ್ಲಿಯವರೆಗೆ ಇವರೆಲ್ಲರನ್ನೂ ಫೋಟೋಗಳಲ್ಲಿ ಕಂಡಿದ್ದ ನಾನು ಕಣ್ಣಾರೆ ಕಂಡು ಕಣ್ತುಂಬಿಸಿಕೊಂಡಿದ್ದಂತೂ ನಿಜ.ಎಲ್ಲರೂ ನನ್ನ ಕಲ್ಪನೆಗೆ ವ್ಯತಿರಿಕ್ತವಾಗಿದ್ದರು.ಉದಾಹರಣೆಗೆ ಇಪ್ಪತ್ತನಾಲ್ಕೂವರೆ ಹರೆಯದ ತರುಣ ಕೆ ಎಲ್ಕೆ ಅವರನ್ನ ನಿರೀಕ್ಷಿಸುತ್ತಿದ್ದ ನನ್ನ ಬಳಿ ಅರೆನರೆತ ಕೂದಲಿನ ಕನ್ನಡಕಧಾರಿ ವ್ಯಕ್ತಿಯೊಬ್ಬರು ಬಂದು ಸಗೋತ್ರ ಸಮೇತ ಪರಿಚಯಿಸಿಕೊಂಡರು ಹಾಗೂ ಅವರ ಹೆಸರೂ ಸಹ ಕೆ ಎಲ್ಕೆ ಎಂಬುದು ಕಾಕತಾಳೀಯವಲ್ಲವಷ್ಟೇ!
ಶಾರೂಖ್ ಖಾನ್ ಹಾಗೇ ಕಟ್ಟುಮಸ್ತಾಗಿದ್ದ ವ್ಯಕ್ತಿಯೊಬ್ಬನನ್ನು ನೋಡಿ ಬಹುಶಃ ಪಾರ್ಕಿಗೆ ಬಂದು ಯಾವುದೋ ಹುಡುಗಿಗೆ ಕಾಯುತ್ತಿರಬೇಕೆಂದು
ಊಹಿಸಿದ್ದು ಸುಳ್ಳಾಯಿತು. ಯಾಕೆಂದರೆ ಅವರ ಹೆಸರು ಕೆ ಎಸ್ ಶಿವಕುಮಾರ್. ಹೀಗೆ ಬಿಂಕ ಬಿಗುಮಾನಗಳಿಲ್ಲದ ಸಾಫ್ಟ್ ವೇರ್ ಇಂಜಿನಿಯರ್ ರಾಜೇಶ್ ಹೆಗಡೆ, ಮದುಮಗನ ಕಳೆಯನ್ನು ಆಭರಣದಂತೆ ಧರಿಸಿದ್ದ ಶ್ರೀನಿವಾಸ್ ನಗೆಯ ಫ್ಲಾಶ್ ಲೈಟಿನಿಂದ ಕಣ್ಣನ್ನು ಕೋರೈಸುತ್ತಿದ್ದ ,ತಮ್ಮ ಅಟ್ಟಹಾಸದಿಂದ ಉದ್ಯಾನವನದ ಖಗಮಿಗಗಳನ್ನು ಕಂಗಾಲಾಗಿಸುತ್ತಿದ್ದ ಉಮಾಶಂಕರ್....... ಅಬ್ಭಾ, ಮರೆತೇನಂದರ ಮರೆಯಲಿ ಹ್ಯಾಂಗ!
ಅಂದು ನಮ್ಮ ನಡುವೆ ನಡೆದ ಚರ್ಚೆಯಲ್ಲಿ ಕೆಲವು ತುಣುಕುಗಳು
* ಡಬ್ಬಿಂಗ್ ಎನ್ನುವುದು ಕನ್ನಡಿಗರಿಗೆ ಅತೀ ಅವಶ್ಯಕ. ಅದರಿಂದಲೇ ಕನ್ನಡಿಗರ ನಿಜವಾದ ಪ್ರತಿಭೆ ಹೊರಬರಲು ಸಾಧ್ಯ ( ಕೆ ಎಸ್ ಉವಾಚ)
*ನಮ್ಮಲ್ಯಾಕ್ರೀ ಸಿನಿಮಾ ಎಂಬ ಕಲೆಯನ್ನು ಇನ್ನೂ ಶೋಕಿಯೆಂದೇ ಕನ್ಸಿಡರಿಸುತ್ತಾರೆ?, ತೆಲಗು ತಮಿಳಿನಂತೆ ಅದು ಲೈಫ್ ಸ್ಟೈಲ್ ಆಗುವುದು
ಯಾವಾಗ? ( ಕೆ ಎಲ್ಕೆ ಅಣಿಮುತ್ತು )
*ವಿಸ್ಮಯ ನಗರಿ ಕೇವಲ ಸಾಹಿತ್ಯಕ್ಕಾಗಿ ಅಲ್ಲ. ಸಾಹಿತ್ಯದ ಹೊರತಾಗಿಯೂ ಇರುವ ತಂತ್ರಜ್ಜಾನ, ಮಾಹಿತಿ ಮುಂತಾದವುಗಳನ್ನು ಕನ್ನಡದಲ್ಲೇ
ಪ್ರಚರಿಸುವುದು ವಿಸ್ಮಯದ ಗುರಿ ( ರಾಜೇಶ್ ಹೆಗಡೆಯವರ ಧ್ಯೇಯ ವಾಕ್ಯ )
*ವಿಸ್ಮಯಕ್ಕಾಗಿ ಕಟ್ಟುವೆವು ನಾವು ಹೊಸ ನಾಡೊಂದನ್ನು, ಹೊಸ ಬೀಡೊಂದನು ( ಶ್ರೀನಿವಾಸ್ ಮತ್ತು ಉಮಾಶಂಕರ್ ಸೇರಿ ಹಾಡಿದ ಕ್ರಾಂತಿ ಗೀತೆ )
* ಹೌದು ಹೌದು ಅದೇ ಸರಿ ( ನಾನು)
* ಕೊನೆಯದಾಗಿ ವಿಸ್ಮಯದಲ್ಲಿ ತರಬೇಕಾದ ಬದಲಾವಣೆಗಳ ಕುರಿತು ಉಮಾಶಂಕರ ಅವರು ರಚಿಸಿದ್ದ ಮೂರುವರೆ ಅಡಿಯ ಸಣ್ಣ ಪಟ್ಟಿಯನ್ನು ಸಾಮೂಹಿಕವಾಗಿ ವಾಚಿಸಲಾಯಿತು.
ಇವೇ ಮೊದಲಾದ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಅಂದಿನ ಸಮಾವೇಶ ನಭೂತೋ ನಭವಶ್ಯತಿ ಎಂಬಂತೆ ಯಶಸ್ವಿಯಾಯಿತು. ನಮ್ಮ ಕನ್ನಡ ಪರ ಕಾಳಜಿ ನೋಡಿ ತಾಯಿ ಭುವನೇಶ್ವರಿಯು ಸುರಿಸಿದ ಕಣ್ಣೀರು ನಮ್ಮೆಲ್ಲರನ್ನೂ ಮಳೆಯ ರೂಪದಲ್ಲಿ ತೋಯಿಸಿದ್ದು ಅಂದಿನ ಹೈಲೈಟ್.
(ಕೊನೆಯದಾಗಿ ನಮ್ಮೆಲ್ಲರ ಕನ್ನಡ ಚಟುವಟಿಕೆಗಳನ್ನು ಕದ್ದು ನೋಡುತ್ತಿದ್ದ ಶ್ರೀಯುತ ಹೆಚ್ ಡಿ ರೇವಣ್ಣನವರು,ಕನ್ನಡಿಗರ ಶ್ರೇಯೊಭಿಲಾಷೆಗಳನ್ನು
ಸಹಿಸಲಾಗದೇ ತತ್ ಕ್ಷಣವೇ ಮಲೆಯಾಳಿ ಮಾಂತ್ರಿಕರನ್ನು ಸಂಪರ್ಕಿಸಿ, ಇವರೆಲ್ಲರ ಪ್ರತಿಜ್ನೆಯು ನಿಜವಾಗದೇ ಹೋಗಲಿ, ಇವರ ಕನ್ನಡ
ಪ್ರೇಮವು ಇಂದಿನಿಂದ ಸರಿಯಾಗಿ ಒಂದು ವರುಷದವರೆಗೂ ತಾತ್ಕಾಲಿಕ ವಿಸ್ಮರಣೆಯುಂಟಾಗಲಿ,ಇವರು ಕನ್ನಡದ ಪರವಾಗಿ ಕೈಗೊಂಡ ಯಾವುದೇ ಕೆಲಸವು ಅಪೂರ್ಣವಾಗಲಿ.....ಇವೇ ಮುಂತಾದ ಫಲಗಳುಂಟಾಗುವಂತೆ ಮಾಟ ಮಾಡಿಸಿದರು ಎಂಬಲ್ಲಿಗೆ......!)
ಸಾಲುಗಳು
- Add new comment
- 1315 views
ಅನಿಸಿಕೆಗಳು
ಹ್ಹಾ ಹಾ ಹ್ಹಾ....ಚಂದದ ಲೇಖನ.
ಹ್ಹಾ ಹಾ ಹ್ಹಾ....ಚಂದದ ಲೇಖನ. ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ಕಾರ್ಯಕ್ರಮವೊಂದರ ವರದಿಯನ್ನು ವಿಜ್ರಂಭಿಸಿ , ಆದರೆ ಅದು ವಿಜ್ರಂಭಣೆ ಅಂತ ಅನ್ನಿಸದಂತೆ ಹಾಸ್ಯ ಹಾಗೂ ವ್ಯಂಗ್ಯ ಲೇಪಿಸಿ ಬರೆದಿರುವುದು ಚೆನ್ನಾಗಿದೆ. ಬಿಲ್ಲು ಹೆದೆಗೇರಿಸಿ ಬತ್ತಳಿಕೆಗೆ ಕೈ ಹಾಕಿದ್ದೀರ......ಇನ್ನು ಒಂದರ ಹಿಂದೆ ಒಂದರಂತೆ ಬರಲಿ ಲೇಖನಗಳು ಬಾಣದಂತೆ.
(ಹೆಚ್ಡಿ ರೇವಣ್ಣನವರನ್ನು ಸುಖಾ ಸುಮ್ಮನೆ ಎಳೆದು ತಂದಿರುವುದೇಕೋ? ಅವರದು "ಬಾಲ"ಪ್ರತಿಭೆ ಎಂದು ಶ್ರೀನಿವಾಸರು ಹಿಂದಿನ ನನ್ನ ಲೇಖನದಲ್ಲಿ ಪ್ರತಿಕ್ರಿಯಿಸಿದ್ದನ್ನು ತಾವು ನೋಡಿಲ್ಲವಿರಬೇಕು)
ಯೆಂಥ ಬಾಲ ಪ್ರತಿಭೆ?
ಯೆಂಥ ಬಾಲ ಪ್ರತಿಭೆ? ವಯಸ್ಸಾಗಯ್ತಣ್ಣ ನಂಗೆ.
ಬಾಲ ಚಂದ್ರ ಅವ್ರೆ ಈ ಕೆಲ
ಬಾಲ ಚಂದ್ರ ಅವ್ರೆ ಈ ಕೆಲ ದಿನಗಳಲ್ಲಿ ನಿಮ್ಮೆಲ್ಲರ ಮದ್ಯೆ ನಡೆಯುತ್ತಿದ್ದ ಈ ಪ್ರತಿಕ್ರಿಯಾ ಸರಣಿ ಗಮನಿಸಿದ ನಂಗೆ ನೀವ್ ಆ ಬಗ್ಗೆಯೇ ಒಂದು ಬರಹವನ್ಣ ಬರೆದದ್ದು ಓದಿ ಅಚ್ಚರಿ ಆಯ್ತು..ಬರಹ ಹಿಡಿಸಿತು..
ನಿಮ್ಮ ವರದಿ ಸಖತ್ತಾಗಿದೆ... ನೀವ್ ಚಿತ್ರ ಹಾಕಿದ್ದು ನೋಡಿ ಖುಷಿಯಾಯ್ತು ಅದರಲ್ಲಿರಾಜೇಶ್ ಹೆಗಡೆ-ಉಮಾ ಶಂಕರ್-ಶ್ರೀನಿವಾಸ್ ಅವರ ಗುರುತು ಸಿಕ್ಕಿತು ಉಳಿದವ್ರು ಯಾರು??ಅಂತೂ ಹಲ ಹಳೆಯ ವಿಸ್ಮಯಾನಗರಿ ಸದಸ್ಯರನ್ನ ಮತ್ತೆ ಬರಹ ಬರೆಯುವಂತೆ ಮಾಡಲು ರಾಜೇಶ್ ಆವ್ರು ಯಶಸ್ವಿಯಾದರು...ಎಚ್ ಡೀ ರೇ ಯಾರು ಅಂತ ಮಾತ್ರ ಗೊತ್ತಾಗುತ್ತಿಲ್ಲ(ವಿಸ್ಮಯ ನಗರಿ ಎಚ್ ಡೀ ರೇ)..!!
ಶುಭವಾಗಲಿ..
ಅಲಲೇ ಬಾಲ, ನಿಮ್ನಿಮ್ದೇ ಫೋಟೋ
ಅಲಲೇ ಬಾಲ,ನಿಮ್ನಿಮ್ದೇ ಫೋಟೋ ಆಕ್ಕಂಡಿದಿರಲೇ.... ನಾನೆಲ್ಲಿವ್ನಿ? ನಂಜೊತಿ ಫೊಟೋ ತೆಗೆಸ್ಕಳಕ್ಕಯ್ತದೆ ..... ಯಿಲ್ಲಿ ಆಕಕ್ಕಗಲ್ವ? ಅಲ ನನ್ನ ಬಿಟ್ಟಿದ್ಯಾಕೆ? ಯೀ ಫೋಟೊ ತೆಗೆಸ್ಕಂಡಾದ್ಮೇಲೆ... ನಾನೂ ಲೇಕ್ನ ಆಕಿಲ್ಲ.... ನೀವೂ ಆಕಿಲ್ಲ.... ಸರಿಯಲ್ಲಲೇ ಇದು..... ಆಸ್ನದವ್ನು ಅಂತ ಪಾರ್ಶಾಲಿಟಿ ಮಾಡ್ತೀರಲೇ ನೀವು...
ಓದಿ ನಕ್ಕು ನಕ್ಕು ಸುಸ್ತಾಯ್ತು
ಓದಿ ನಕ್ಕು ನಕ್ಕು ಸುಸ್ತಾಯ್ತು ಬಾಲಚಂದ್ರ. ಹಾಸ್ಯ ಭರಿತ ಶೈಲಿಯಲ್ಲಿ ನಮ್ಮೆಲ್ಲರ ಪುಟ್ಟ ಭೇಟಿಯನ್ನು ಚೆನ್ನಾಗಿ ಬರೆದಿದ್ದೀರಾ. :)
ಈ ಭೇಟಿ ನಂತರ ಜೂನ್ ತಿಂಗಳಲ್ಲಿ ನನ್ನ ವೈಯಕ್ತಿಕ ಜೀವನದಲ್ಲಿ ಆದ ಸಣ್ಣ ಆಘಾತ ವಿಸ್ಮಯದಿಂದ ಕೆಲತಿಂಗಳು ದೂರ ಇರುವಂತೆ ಮಾಡಿತ್ತು.
ಹೀಗೆ ಪ್ರತಿ ಒಬ್ಬರಿಗೂ ಅವರದ್ದೇ ಕಾರಣಗಳಿವೆ.
ನೀವು ಪತ್ರಿಕೆಗಳಲ್ಲಿ ಉತ್ತಮ ಕಥೆ ಬರೆಯುವ ಪ್ರಯತ್ನ ಯಾಕೆ ಮಾಡಬಾರದು? ನಿಮ್ಮಪ್ರತಿಭೆಗೆ ಆಗ ಸೂಕ್ತ ಗೌರವ ಸಿಗುತ್ತೆ ಅನ್ನುವದು ನನ್ನ ಅನಿಸಿಕೆ.
ಹಾಯ್ ಬಾಲೂ..!! ಹಾಸ್ಯಮಿಶ್ರಿತ
ಹಾಯ್ ಬಾಲೂ..!!ಹಾಸ್ಯಮಿಶ್ರಿತ ವರದಿ ಚೆನ್ನಾಗಿದೆ. ಈಗ ನಿಮ್ಮ ಲೇಖನದ ಸರದಿ. ತುಂಬಾ ದಿನವಾಯಿತು, ನಿಮ್ಮ ಲೇಖನದ ಮಾಯೆಗೆ ಸಿಕ್ಕು ಶುರುಮಾಡ್ಬಿಡಿ. ಅದಿರಲಿ... ವಿಸ್ಮಯದಲ್ಲಿ ಇಷ್ಟೆಲ್ಲಾ ವಿಸ್ಮಯಗಳು ನಡೆಯುತ್ತಿದ್ದರೂ ಎಲ್ಲಿ ಕೆ.ಎಸ್.. ಪತ್ತೇನೇ ಇಲ್ಲ, ಕೆಎಲ್ಕೆ ಹೇಳಿದ ಹಾಗೇ ಕೇಸ್ ಹಾಕ್ ಬೇಕಾ ಹ್ಯಾಗೆ..!!ರಾಜೇಶ್ ಸಾರ್ ಹೇಳಿದ ಹಾಗೇ ಪತ್ರಿಕೆಗಳಿಗೆ ಲೇಖನ ಬರೆಯೋಕೆ ಶುರುಮಾಡಿ ಬಾಲೂ. ಹ್ಯಾಗೂ ನೀವು "ಬಾಲ"ಪ್ರತಿಭೆ ಅಲ್ವಾ..!!
ಬಾಲಚಂದ್ರ ರವರೆ, ಅಂತೂ
ಬಾಲಚಂದ್ರ ರವರೆ,
ಅಂತೂ "ಕನ್ನಡಗರಡಿಯಾಳುಗಳ" ಮಿಲನ ಬಹುಕಾಲದ ನಂತರ ಸಸೂತ್ರವಾಗಿ ಆಯಿತೆನ್ನಿ. ಆದರೆ "ನಮ್ಮ ಕನ್ನಡ ಪರ ಕಾಳಜಿ ನೋಡಿ ತಾಯಿ ಭುವನೇಶ್ವರಿಯು ಸುರಿಸಿದ ಕಣ್ಣೀರು..." ಬದಲಾಗಿ "ನಮ್ಮ ಕನ್ನಡ ಪರ ಕಾಳಜಿ ನೋಡಿ ತಾಯಿ ಭುವನೇಶ್ವರಿಯು ಸುರಿಸಿದ ಪನ್ನೀರು" ಎಂದಿದ್ದರೆ ಚೆನ್ನವಿರುತ್ತದೆ...
ಅದರೆ ಮಿಲನದ ನಂತರ ವರುಷದ ಅಗಲಿಕೆಯ "ವಿರಹ" ಯಾಕೋ ಸರಿಕಾಣಲಿಲ್ಲ (ಎಲ್ಲಾ "ಪರ್ನಸೆನಲ್ ಪ್ರಾಬ್ಲಮು" ಗಳ ಮಹಿಮೆಯೇನೋ...!)
-- ವಿನಯ್
ಅಂತೂ ಇಂತೂ ಕುಂತೀ ಮಕ್ಕಳಿಗೆ
ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಸಿಕ್ತು ಅನ್ನೋಹಾಗೆ ಕಡೆಗೂ ವಿಸ್ಮಯಿಗರ ಭೇಟಿಯ ವರದಿ ಪ್ರಕಟವಾದ್ದು ನೋಡಿ ನಿಮ್ಮೊಡನೆ ಮಾತನಾಡಿದಷ್ಟೇ ಖುಷಿಯಾಯ್ತು ಬಾಲಣ್ಣ
ಫ್ಲಾಶ್ ಬ್ಯಾಕ್ ಗೆ ಹೋಗಿ ಮತ್ತೆ ಬಂದೆ. ನಮ್ಮೆಲ್ಲರ ಮೊದಲ ಭೇಟಿಯ ಆ ದಿನ ಮತ್ತೆ ಬರಬಾರದೆ? ಎನಿಸುತ್ತಿದೆ
ಮತ್ತೊಮ್ಮೆ ಭೇಟಿಯಾಗಬೇಕಿನ್ನಿಸುತ್ತಿದೆ. ಯಾವಾಗ ಅಂತ ಹೇಳಿ ಸಾಕು! ಬ್ಯಾಗು ಬದಿಗಿಟ್ಟು ಓಡಿ ಬರುವೆ