Skip to main content

ಹೀಗೇ ಸುಮ್ಮನೆ ಅನಿಸಿದ್ದು...

ಬರೆದಿದ್ದುApril 13, 2012
8ಅನಿಸಿಕೆಗಳು

 ಮನಸ್ಸು ಅದೆಷ್ಟು ವಿಚಿತ್ರ... ಎಲ್ಲರೂ ಸುತ್ತಲಿರುವಾಗ ಮನದಾಳದಲ್ಲಿ ಒಂಟಿತನ ಕುಟುಕುತ್ತಿದ್ದರೆ, ಒಬ್ಬಂಟಿಯಾಗಿದ್ದಾಗಮನದಲ್ಲಿ ನೆನಪಿನ ಜಾತ್ರೆ.. ಮೌನದ ಮೆರವಣಿಗೆ..ಮನವಿಡೀ ಹಗುರ.. ಅದೇನೋ ತುಂಬಿಕೊಂಡ ಭಾವ.. ಮನಸ್ಸೆಷ್ಟು ನಿಗೂಢವೆಂದರೆ, ಅದರೊಳಗೆ ಹೊಕ್ಕಿ ನೋಡಲು ಅದಾರಿಂದಲೂ ಸಾಧ್ಯವಿಲ್ಲ.  ಒಂದೊಮ್ಮೆ ಭಾವನೆಗಳಮಹಾಪೂರವೇ ಹರಿದುಬಂದರೆ, ಇನ್ನೊಮ್ಮೆ ಖಾಲಿತನ ಆವರಿಸಿಕೊಳ್ಳುತ್ತೆ.  ಭಾವನೆಗಳ ಸಂಘರ್ಷದಿಂದಾಗಿಆಲೋಚನೆಗಳ ಭೋರ್ಗರೆತಕ್ಕೆ ಸಿಲುಕಿದ ಮನಸ್ಸು ಒಂದೊಮ್ಮೆ ನಲುಗಿದರೆ, ಮಗದೊಮ್ಮೆ ಯೋಚನೆಗಳೇ ಮೂಡದೆನಿರ್ವಾತ ಪ್ರದೇಶವೆನಿಸಿಬಿಡುವ ಪರಿ ಊಹೆಗೂ ನಿಲುಕದ್ದು... ಯಾವಾಗ ಯಾರ ಮನದಲ್ಲಿ ಅದ್ಯಾರು ಸ್ಥಾನಗಳಿಸುವರೋ, ಯಾರು ಆಳವಾಗಿ ಬೇರೂರಿಬಿಡುವರೋ ಹೇಳಲಾಗದು.ಮನದ ಒಳಬಾಗಿಲ ತಟ್ಟಿ, ಮೃದುವಾಗಿ ಹೆಜ್ಜೆಗಳನ್ನಿರಿಸಿ ಒಳಬರುವ ಪ್ರತಿಯೊರ್ವ ವ್ಯಕ್ತಿಯೂ ಯಾವುದಾದರೊಂದುಘಟನೆಯ, ನೆನಪಿನ ಕೇಂದ್ರಬಿಂದುವಾಗಿ ಮನದ ಗೂಡೊಳಗೆ ಆಶ್ರಯ ಪಡೆದುಬಿಡುತ್ತಾನೆ/ಳೆ. ಆದರೂ ಕೆಲವೊಮ್ಮೆಮನಕ್ಕೆ ತೀರಾ ಆಪ್ತರಾದವರು, ಮನದಲ್ಲಿ ಭದ್ರವಾದ ಸ್ಥಾನ ಪಡೆದವರು ನಮ್ಮನ್ನು ನಿರಾದರಿಸಿದಾಗ,  ಅವಮಾನಿಸಿದಾಗ,ನಂಬಿಕೆ ದ್ರೋಹ ಮಾಡಿದಾಗ ಮನಕ್ಕಾಗುವ ನೋವು ಪದಗಳಲ್ಲಿ ವರ್ಣಿಸಲಾಗದಷ್ಟು ಆಳವಾಗಿರುತ್ತದೆ.  ಅದರ ಪರಿಣಾಮದ ತೀವ್ರತೆ ಎಷ್ಟಿರುತ್ತದೆಂದರೆ, ಮತ್ತೆ ಅಂತಹವರತ್ತ ತಿರುಗಿ ನೋಡದೆ, ಬೆನ್ನು ಹಾಕಿ ಹೋಗುವಷ್ಟರ ಮಟ್ಟಿಗಿನ ಉದಾಸೀನ ಭಾವನೆ ತಳೆಯುವಷ್ಟು.. "ನಿನ್ನ ಪ್ರೀತಿಸುವವರನ್ನು, ಪ್ರೀತಿಪಾತ್ರರನ್ನು ಕೊಲ್ಲಬೇಕೆಂದರೆ ಯಾವುದೇ ಆಯುಧ ಬೇಕಿಲ್ಲ.  ಕೇವಲ ಅವರನ್ನುಮಾತನಾಡಿಸದೇ, ಅವರತ್ತ ತಿರುಗಿಯೂ ನೋಡದಿದ್ದರೆ ಸಾಕು.  ಆ ವ್ಯಕ್ತಿ ತಂತಾನೇ ಮಾನಸಿಕವಾಗಿ ಸಾಯುತ್ತಾನೆ" ಎನ್ನುತ್ತಾರೆ ತಿಳಿದವರು.  ಆದರೆ ಇಂತಹ ನೋವಿಗೆ, ಆಘಾತಕ್ಕೊಳಗಾದ ವ್ಯಕ್ತಿ ಒಂಟಿಯಾಗಿಬಿಡುತ್ತಾನೆ.. ಮನಸ್ಸಿಗೆ ಘಾಸಿ ಮಾಡಿದ ವ್ಯಕ್ತಿಯನ್ನೂ ಸೇರಿದಂತೆ ಇತರರನ್ನೂ ಸಂಪೂರ್ಣ ನಂಬಲಾರದ ಅವರ ಭಾವನೆಗಳಿಗೆ ಸ್ಪಂದಿಸಲಾರದ ಹಂತಕ್ಕೆ ಅಂತಹವರ ಮನ ತಲುಪಿರುತ್ತದೆ.  ಒಟ್ಟಾರೆಯಾಗಿ, ಒಂದು ಸುಂದರ, ಆತ್ಮೀಯವಾದ ಮುಗ್ಧ ಮನದ ಕೊಲೆ ಅಲ್ಲಿ ನಡೆದಿರುತ್ತದೆ. ಮನವನ್ನು, ಭಾವನೆಗಳನ್ನು ಕೊಂದಾತಅದ್ಯಾವ ಕಾನೂನಿನಡಿಯಲ್ಲಿ ಶಿಕ್ಷಿಸಲ್ಪಡುತ್ತಾನೆ????????   

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ಹರಿಪ್ರಸಾದ್ ಶುಕ್ರ, 04/13/2012 - 23:12

ಮನಸ್ಸಿಗೆ ತೀರವಾಗಿ ಅಪ್ತರಾದವರಿಂದ ನಮಗೆ ಉಂಟಾದ ನೋವುನಿಂದ ಇತರರನ್ನು ನಂಬದಂತಾಗಿ ನಮ್ಮಲ್ಲಿ ನ ಆ ಮುಗ್ಧ ನಂಬಿಕೆಯನ್ನು ಕಳೆದುಕೊಂಡಂತೆ ಅನುಭವಿಸುವ ನೋವು ಜೀವನದಲ್ಲಿ ಹೊಸ ಸಂಘರ್ಷವನ್ನು ಉಂಟು ಮಾಡುತ್ತದೆ. ನನ್ನ ಅನುಭವದಿಂದ  ನಾವು ನಮ್ಮ ಮನಸ್ಸಿಗೆ ನೋವು ಉಂಟು ಮಾಡಿದ ಆ ವ್ಯಕ್ತಿಯಿಂದ ಏನನ್ನು ನಿರೀಕ್ಷಿಸದೆ ಅವರನ್ನು  ಮನಪೂರ್ವಕವಾಗಿ ಕ್ಷಮೀಷಿದಾಗ, ಜೀವನ ಮತ್ತೆ ನಮಗೆ  ನಮ್ಮಲ್ಲಿನ ಆ ಮುಗ್ಧ ನಂಬಿಕೆಯನ್ನು ಉಳಿಸಿಕೊಳ್ಳುವ ಅವಕಾಶವನ್ನು ಕೊಡುತ್ತದೆ.

Jyothi Subrahmanya ಭಾನು, 04/15/2012 - 20:28

ಧನ್ಯವಾದಗಳು ಹರಿಪ್ರಸಾದ್ ರವರೇ ನಿಮ್ಮ ಅನಿಸಿಕೆಗೆ ಹಾಗೂ ಸಲಹೆಗೆ... ಬಹುಶಃ ಹೀಗೆ ನಿರೀಕ್ಷೆ ಇಲ್ಲದೆ, ಮನಃಪೂರ್ವಕವಾಗಿ ಕ್ಷಮಿಸುವ ಗುಣ ಬೆಳೆಸಿಕೊಳ್ಳಲು ಬಹಳತಾಳ್ಮೆ, ಸಂಯಮ ಹಾಗೂ ಒಳ್ಳೇತನ ಇರಬೇಕಾಗುತ್ತದೆ ಅನಿಸುತ್ತೆ..  ಒಂದೊಮ್ಮೆ ಅಂತಹವರನ್ನ ಕ್ಷಮಿಸಿದ್ರೂಮುಂದೆಂದೂ ಹಿಂದಿನ ಅದೇ ಸ್ನೇಹ, ಪ್ರೀತಿ, ವಿಶ್ವಾಸ ಉಳಿದುಕೊಳ್ಳೋಕೆ ಅಸಾಧ್ಯ ಅನ್ನೋದು ನನ್ನವೈಯಕ್ತಿಕ ಅನಿಸಿಕೆ.  ಒಡೆದ ಕನ್ನಡಿ ಅದೆಷ್ಟೇ ಚೆನ್ನಾಗಿ ಜೋಡಿಸಿದ್ರೂ ಮೊದಲಿನ ಸ್ಪಷ್ಟತೆ ಪ್ರತಿಬಿಂಬದಲ್ಲಿ ಕಾಣೋದು ಅಸಾಧ್ಯ ಅಲ್ವೇ?? ಅದೇನೇ ಇರಲಿ, ಬಹಳ ಅಮೂಲ್ಯವಾದ ಸಲಹೆಯನ್ನ ನೀಡಿದ್ದೀರ.ಅನುಸರಿಸೋಕೆ ಪ್ರಯತ್ನಿಸೋದ್ರ ಕಡೆ ಗಮನ ಕೊಡ್ತೀನಿ. ಧನ್ಯವಾದಗಳೊಂದಿಗೆ, ಜ್ಯೋತಿ.

ನವೀನ್ ಚ೦ದ್ರ ಸೋಮ, 04/16/2012 - 20:44

ಮನದಲ್ಲೆ ಕೊಲ್ಲುವ ಮನಸಿಗೆ ಕಾನೂನಿನಡಿಯಲ್ಲಿ ಯಾವುದೇ ಶಿಕ್ಷೆಯಿಲ್ಲ,,,ಆ ಮನಸಿಗೆ ಮನಸೆ ಶಿಕ್ಷೆಯನ್ನು ಕೊಡುವುದು,,, ಅದನ್ನು ನಾವು ಮಾನಸಿಕತೊಳಲಾಟ ಎನ್ನಬಹುದು,,,, ಮರೆತ ಮನಸು, ಮರೆಯುವ ಮನಸು,,,, ಬೇರಾದ ಮನಸುಗಳು ಪುನಃ ಸಂದಿಸಿದರೆ ತುಂಬಾ ಸೊಗಸು,,ಅಲ್ಲವೇ?

Jyothi Subrahmanya ಶುಕ್ರ, 04/20/2012 - 13:23

ಧನ್ಯವಾದಗಳು ನವೀನ್ ನಿಮ್ಮ ಅನಿಸಿಕೆಗೆ...ಮರೆತ ಮನಸುಗಳು  ಸಂಧಿಸಲಾರವು..ಮರೆಯುವ ಮನಗಳು ಸಂಧಿಸಲೊಲ್ಲವು.. ಬೇರಾದ ಮನಸುಗಳು ಪುನಃ ಸಂಧಿಸುವುದುಬಿಡುವುದು ಕಾಲವೇ ನಿರ್ಧರಿಸಬೇಕಷ್ಟೆ...ಅಲ್ವೇ...?

girish.g.h ಶನಿ, 04/21/2012 - 10:43

ಜ್ಯೋತಿಯವರೆ,                 ನೀವು ನಿಮ್ಮನ್ನು ಪ್ರೀತಿಸಿ ಯಾವುದೊ ಕಾರಣಕ್ಕೆ ನಿಮ್ಮನ್ನ ಬಿಟ್ಟು ಹೋದವರಿಗೆ ಶಿಕ್ಷೆಯಾಗಬೇಕು ಅ೦ತಿದೀರಿ..  ಯಾರಾದ್ರು ಪ್ರೀತಿಸಿದವರಿಗೆ ಶಿಕ್ಷೆಯಾಗ್ಬೆಕು ಅ೦ತ ಬಯಸ್ತಾರ..? ನೀವು ಹಾಗೆ ಬಯಸುತ್ತೀರಿ ಅನ್ನೊದು ಗೊತ್ತಾದ್ರೆ ಯಾವುದೆ ಶಿಕ್ಷೆ ಅನುಭವಿಸ್ಲಿಕ್ಕು ತಯಾರಾಗ್ಬಹುದು..  ನಾನು ಪ್ರೀತಿಸಿದವರು ನನಗೆ ಶಿಕ್ಷೆ ಆಗ್ಬೆಕು ಅ೦ತ ಅ೦ದ್ಕೊ೦ಡ್ರೆ ನಾನು ಸಾಯಲಿಕ್ಕು ರೆಡಿ... 

Jyothi Subrahmanya ಶನಿ, 04/21/2012 - 12:37

ಗಿರೀಶ್ ರವರೇ, ನಾನೆಲ್ಲಿಯೂ ನನ್ನನ್ನು ಯಾರೋ ಪ್ರೀತಿಸಿದ್ದಾರೆ, ಅವರು ನನ್ನ ಬಿಟ್ಟು ಹೋಗಿದ್ದಾರೆಅಂತೆಲ್ಲ ಹೇಳಿಲ್ಲ.  ಕೇವಲ ಮನಸಿನ ಕುರಿತಾಗಿ ಹಾಗೂ ಭಾವನೆಗಳಿಗೆ ಬೆಲೆ ನೀಡದಕೆಲ ಸ್ನೇಹಿತರು, ಪ್ರೀತಿಪಾತ್ರರ ಕುರಿತಾಗಿ ನನಗನಿಸಿದ್ದನ್ನ ಬರೆದಿದ್ದೇನೆ.  ಅಂತಹವರಿಗೆಶಿಕ್ಷೆಯಾಗಬೇಕು ಅಂತಲೂ ನಾನು ಹೇಳಿಲ್ಲ.. ಕಾನೂನಿನಲ್ಲಿ  ಶಿಕ್ಷೆಯೇ ಇಲ್ಲದ ಅಪರಾಧಅದು ಅಂತಷ್ಟೇ ಹೇಳಿದ್ದೇನೆ.  ಇನ್ನು ನಿಮ್ಮ ವೈಯಕ್ತಿಕ ವಿಷಯದಲ್ಲಿ ಯಾವುದೇಅನಿಸಿಕೆ ನೀಡಲು ನನಗಿಷ್ಟವಿಲ್ಲ.  ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಜ್ಯೋತಿ.

Pattar ಮಂಗಳ, 04/24/2012 - 14:44

ಜ್ಯೋತಿಯವರೇ....ಚಿತ್ರ ವಿಚಿತ್ರಗಳ ಇಡೀ ಒ೦ದು ಸಮೂಹಕ್ಕೇನೇ ಮನಸ್ಸು ಎ೦ಬ ಹೆಸರಿನಿ೦ದ ಕರೆದರೆ ತಪ್ಪೇನು ಅಲ್ಲ ಅನ್ಸುತ್ತೆ.ಇದುವರೆಗೂ ಯಾರಿಗೂ ಆ ಮನಸ್ಸು ಅನ್ನೋದು ಏನು ಬಯಸುತ್ತೆ ಅ೦ಥ ಅರ್ಥ ಆಗಿರೋದಿಲ್ಲ. ಹಾಗೆನಾದರೂ ಅರ್ಥ ಆಗೋ ವೇಳೆಗೆಅವರಿಗೆ ಮತ್ತು ಅವರ ಆಸೆಗಳಿಗೆ ಮುಪ್ಪಾವಸ್ತೆ ಬ೦ದುಬಿಟ್ಟಿರುತ್ತದೆ. ಚ೦ಚಲ ಮನಸ್ಸಿನಲ್ಲಿ ಸ೦ಚರಿಸುವ ಭಾವನೆಗಳನ್ನು ಹ೦ಚಿಕೊಳ್ಳುವದರಲ್ಲಿಅಚ್ಚರಿಯೇನು ಇಲ್ಲ. ಅದಕ್ಕೆ ನಿಮ್ಮ ಮನದ ದುಗುಡಗಳನ್ನು ಆದಷ್ಟು ನಿಮ್ಮ ಹತ್ತಿರದವರಿಗಿ೦ತ ಅರ್ಥೈಸಿಕೊಳ್ಳುವವರ ಜೊತೆ ಹ೦ಚಿಕೊಳ್ಳಿ...

Jyothi Subrahmanya ಮಂಗಳ, 04/24/2012 - 18:49

ನೀವು ಹೇಳಿದ್ದು ನೂರಕ್ಕೆ ನೂರು ಸರಿ ಪತ್ತಾರ್ ರವರೇ.. ಭಾವನೆಗಳನ್ನು ಯೋಗ್ಯರೊಂದಿಗೆಹಂಚಿಕೊಂಡಾಗ ಮಾತ್ರ ಅದಕ್ಕೊಂದು ಬೆಲೆ. ಇಲ್ಲದಿದ್ದರೆ, ಮನಸ್ಸಿಗೆ ಬರೀ ನೋವೇ..ಆಪ್ತರು ಅನ್ನೋ ಪರಿಮಿತಿಯೊಳಗೆ ಬರುವ ವ್ಯಕ್ತಿಗಳಿಗಿಂತ ಅರ್ಥೈಸಿಕೊಳ್ಳುವವರು ಎಂಬಮಿತಿಯೊಳಗೆ ಬರುವ ವ್ಯಕ್ತಿಗಳು ಮನಕ್ಕೆ ಹೆಚ್ಚು ಅಪ್ಯಾಯಮಾನವಾಗ್ತಾರೆ.ನಿಮ್ಮ ಈ ಸಲಹೆಗೆ, ಅನಿಸಿಕೆಗೆ ಧನ್ಯವಾದಗಳು. ಜ್ಯೋತಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.