Skip to main content

ಜೀವನ ಇಷ್ಟೆ

ಬರೆದಿದ್ದುDecember 30, 2011
5ಅನಿಸಿಕೆಗಳು

ಮನುಷ್ಯನ ಜೀವನ ಅದೆಷ್ಟು ನಶ್ವರ ಅನ್ನೋದ್ರ ಬಗ್ಗೆ ಅದೆಷ್ಟೋ ಲೇಖನಗಳು, ಬೋಧನೆಗಳನ್ನು ಓದಿದ್ದೇವೆ, ಕೇಳಿದ್ದೇವೆ.  ಆದರೂ ಈ ಆಸೆ ಒಮ್ಮೊಮ್ಮೆ ದುರಾಸೆಯಾಗಿ ಎಲ್ಲರನ್ನೂ ಕಾಡೋದುಂಟು.  ಕೆಲ್ಸ ಸಿಗೋತನಕ ಕೆಲಸ ಸಿಕ್ಕಿಲ್ಲ ಅಂತ, ಸಿಕ್ಕಿದ ಮೇಲೆ ಯಾರಿಗೆ ಸಾಲುತ್ತೆ ಸಂಬಳ.. ಸಂಬಳ ಅದೆಷ್ಟು ಹೆಚ್ಚಾದ್ರೂ ಮನಸ್ಸಿಗೆ ಇನ್ನೂ ಬೇಕಿತ್ತೆಂಬ ಹಪಹಪಿ.  ಇವೆಲ್ಲಾ ನಮ್ಮೆಲ್ಲರಲ್ಲೂ ಬಂದು ಹೋಗೋ ದುರಾಸೆಗಳು, ಜೀವನದ ವಾಸ್ತವಾಂಶಗಳು.  ಆದ್ರೆ, ಈ ರಾಜಕಾರಣಿಗಳಿಗ್ಯಾಕೆ ಕುರ್ಚಿ ಮೇಲೆ, ಹಣ ಅಧಿಕಾರದ ಮೇಲೆ ಅದ್ಯಾಕೆ ಅಂಥಾ ವ್ಯಾಮೋಹವೋ ಆ ದೇವರೇ ಬಲ್ಲ.  ಅವ್ರು ಕೂಡಿಡೋ ಕೋಟ್ಯಾಂತರ ರೂಪಾಯಿ ಹೋಗೋವಾಗ ಹೊತ್ಕೊಂಡು ಹೋಗ್ತಾರೇನೋ ಅನ್ಸುತ್ತೆ ಒಮ್ಮೊಮ್ಮೆ...!  ಒಂದೆಡೆ ಹೊತ್ತಿನ ಊಟಕ್ಕಾಗಿ, ಜೀವನದ ಮೂಲಭೂತ ಸೌಕರ್ಯಗಳಿಗಾಗಿ ಹೋರಾಡೋ, ಪರದಾಡೋ ಬಡವರು, ತಾವು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಸಿಗುತ್ತಿಲ್ಲವೆಂದು ಕೊರಗುತ್ತಿರುವ, ಸಾಲದ ಶೂಲಕ್ಕೆ ಸಿಲುಕಿದ ರೈತಾಪಿ ಜನಗಳು, ಇನ್ನೊಂದೆಡೆ ತಿಂದಿದ್ದು ಹೆಚ್ಚಾಗಿ, ಬೇರೆಯವರ ಜೀವನದ  ಕಷ್ಟಗಳಿಗೆ ಕುರುಡರಾಗಿ, ತಾವು ರಾಜಕೀಯ ಸೇರಿದ್ದೇ ದುಡ್ಡು ಮಾಡಲು ಎಂದು ಬಾರಿ ಬಾರಿ ಸಾಬೀತು ಪಡಿಸುತ್ತಿರುವ "ರಾಜಕೀಯ ಪುಡಾರಿಗಳು".  ಈ ಆಲೋಚನೆಗಳು ದಿನಂಪ್ರತಿ ಬರುತ್ತವಾದರೂ ಮೊನ್ನೆ ನಮ್ಮ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನ ದೂರದರ್ಶನದಲ್ಲಿ ನೋಡುತ್ತಿದ್ದವಳಿಗೆ ಅನಿಸಿದ್ದು ಒಂದೇ.  ಪ್ರಸ್ತುತ ಕುರ್ಚಿಗಾಗಿ, ಹಣಕ್ಕಾಗಿ ಕೀಳು ಮಟ್ಟದ ರಾಜಕಾರಣ ನಡೆಸುತ್ತಿರುವ ರಾಜಕಾರಣಿಗಳಿಗೆ ಅರೆಘಳಿಗೆಯಾದರೂ,  "ಈಗ ಮೌನವಾಗಿ, ಎಲ್ಲರ ವಾದಗಳಿಗೆ, ಮಾತುಗಳಿಗೆ, ಹೊಗಳಿಕೆಗಳಿಗೆ ನಿರುತ್ತರವಾಗಿ,  ಶಾಂತವಾಗಿ ಮಲಗಿದ ಈ ವ್ಯಕ್ತಿಯದೇ ಸ್ಥಿತಿ ತನಗೂ ಬಂದೇ ಬರುತ್ತದೆ..ಅದೆಷ್ಟೇ ಮೆರೆದರೂ ಕೊನೆಗೆ ಸೇರಬೇಕಾಗೋದು ಈ ಮಣ್ಣಿಗೇ.." ಎಂದೆನಿಸಿಬಿಟ್ಟಿದ್ದರೆ....... !!! ಬಹುಷಃ ಅವರೆಲ್ಲರೂ ತಮ್ಮ ಆತ್ಮಾವಲೋಕನ ಮಾಡಿಕೊಳ್ಳೋದಿಕ್ಕೆ ಸಹಾಯವಾಗ್ತಾ ಇತ್ತು ಅಂತ.     ಕೊನೆಯದಾಗಿ, ಜರಗನಹಳ್ಳಿ ಶಿವಶಂಕರ್ ರವರು ತಮ್ಮ ಬಾಳಿಕೆ ಅನ್ನೋ ಕವನದಲ್ಲಿ ಬಿಚ್ಚಿಟ್ಟ ಈ ಜೀವನದ ಕಟು ಸತ್ಯ ನೆನಪಾಗ್ತಾ ಇದೆ..                   ಹತ್ತಾರು ವರುಷ ನೆರಳಾಗಿ ನಿಂತ ಮರ                 ತೊಲೆಯಾಗಿ ಉಳಿಯಿತು ನೂರಾರು ವರುಷ;                 ನೂರು ವರುಷ ಆಳಿದ ಅರಸ,                  ಹೆಣವಾಗಿ ಉಳಿಯಲಿಲ್ಲ ಮೂರು ದಿವಸ...........    ಜೀವನ ಇಷ್ಟೆ... ಚೆನ್ನಾಗಿ ಬದುಕಿ ಸತ್ಯ-ನ್ಯಾಯಯುತವಾಗಿದ್ದಲ್ಲಿ, ಬದುಕಿದ ಬದುಕಿಗೂ ಒಂದು ಅರ್ಥ.. ದೇಹ ತೊರೆದ ಆತ್ಮಕ್ಕೂ ಶುದ್ಧವಾಗಿದ್ದೆನೆಂಬ ಸಾರ್ಥಕ್ಯ.. 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನವೀನ್ ಚ೦ದ್ರ ಶುಕ್ರ, 12/30/2011 - 22:42

ಆಸೆಯೇ ದುಃಖಕ್ಕೆ ಮೂಲಕಾರಣ ,,, ಆಸೆ ಬಿಡಿ ಬಿಡಿ ಅಂತಾ ಬಡ್ಕೊಂಡ್ರು ಈ ಜನ ಬಿಡಲ್ಲ ಜ್ಯೋತಿ,,,ಎಷ್ಟೆ ಸಂಪಾದಿಸಿದರೂ ಕಡೆಗೆ ಸಿಗುವುದುಆರಡಿ-ಮೂರಡಿ ಜಾಗ ಅಂತಾ ಗೊತ್ತಿದ್ದ್ರು ಬಿಡಲ್ಲ..,,ಮಾನವನ ಆಸೆಗೆ ಮಿತಿಯೇ ಇಲ್ಲ,,,,ಈ ಮಾನವ ಸಾಯುವವರೆಗೂ ಅವನ ಆಸೆಯು ಸಾಯುವುದಿಲ್ಲ,

shubha ಶನಿ, 12/31/2011 - 15:02

ಹಾಯ್ ಜ್ಯೋತಿ....ನೀವೇಳಿದ್ದು ಸರಿ. ಈ ಮನುಷ್ಯನ ದುರಾಸೆಗೆ ಮಿತಿಯೇ ಇಲ್ಲ. ನಾವೇನು ಬರ್ತ ತಂದಿರ್ತಿವಾ....ಇಲ್ಲಾ.. ಹೋಗ್ತಾ ಕೊಂಡೋಗ್ತೀವಾ....ಅಥ್ವಾ ಈ ಭೂಮಿ ನಮ್ಗೆ ಶಾಶ್ವತನಾ....ಇದೇನೂ ಅಲ್ಲ ಆದ್ರೂ  ದುರಾಸೆ ಪಡ್ತೀವಿ..... ಯಾಕೋ ಗೊತ್ತಿಲ್ಲಾ..........

Jyothi Subrahmanya ಸೋಮ, 01/02/2012 - 17:21

ಧನ್ಯವಾದಗಳು ನವೀನ್ ಮತ್ತು ಶುಭಾ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕೆ..... ಇವೆಲ್ಲಾ ಬಹುಷಃ ಪರಿಹಾರ ದೊರಕದ ಸಮಸ್ಯೆಗಳು...  

anjali n n ಗುರು, 01/05/2012 - 17:21

ವ್ಯವಸ್ಥೆ ಇರೋದೆ ಹೀಗೆ! ಈ ನಮ್ಗಿಂತ ಅವರಿಗೆ ಚೆನ್ನಾಗಿ ಗೊತ್ತಿರುತ್ತೆ ಸತ್ತಾಗ ಹೊತ್ಕೊಂಡು ಹೋಗೊಲ್ಲ ಅಂತ, but ಹಣ,Identificasion, ಅಧಿಕಾರದ ವ್ಯಾಮೋಹ. chalthe-chalthe.........,

Pattar ಶುಕ್ರ, 01/13/2012 - 11:06

ಈ ನಿಮ್ಮ ಲೇಖನದಲ್ಲಿ ಸ್ವಾರ್ಥ ಅನ್ನೋದು ಬಹು ಮುಖ್ಯ ಪಾತ್ರ ವಹಿಸುತ್ತದೆ. ಚೆನ್ನಾಗಿ ಬರಿದಿದೀರಾ ಜ್ಯೋತಿಯವರೇ...ಮನುಷ್ಯ ತನಗೆ "ನಾನು" ಎ೦ದು ಕರೆದುಕೊಳ್ಳುತ್ತಾನೆ. ಪ್ರತಿಯೊಬ್ಬರೂ ಕೂಡ.. ನಾನು ಅನ್ನೋ ಒ೦ದು ಪದದಲ್ಲಿ..ನನಗೆ, ನನಗೋಸ್ಕರ, ನನ್ನಿ೦ದ, ನನ್ನವರಿಗೆ, ನನ್ನಿಷ್ಟ, ಅನ್ನೋ ಸಾಕಷ್ಟು ಭಾವಾರ್ಥಗಳಿವೆ... ಹೀಗಿರುವಾಗ ಆಸೆಗೆ ಮಿತಿಯೆಲ್ಲಿ ಜ್ಯೋತಿ?ಇ೦ತಹ ಪರಿಸ್ಥಿತಿ ಸೃಷ್ಟಿಯಾದ ಸಮಾಜ ಪರಿಹಾರ ದೊರಕದ ಸಮಸ್ಯೆಯಷ್ಟೇ ಅಲ್ಲ, ಪರಿಹಾರವೇ ಇರದ ಸಮಸ್ಯಾತ್ಮಕ ವಾಸ್ತವತೆ..ಇದರ ಸೃಷ್ಟಿಕರ್ಥನು ಕೂಡ ಈ ಮಾನವನೇ...ಇದು ಬರೀ ಜೀವನ ಅಷ್ಟೇ ಅಲ್ಲ...ಭಾವನಾತ್ಮಕ ವ್ಯವಹಾರವುಳ್ಳ ಆರ್ಥಿಕ ಬಲಹೀನತೆಯ ಅನಿವಾರ್ಯದ ಬದುಕು....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.