Skip to main content

ಧೀಂ ತಕಿಟ ತೋಂ ತಕಿಟ ಧೀಂ!

ಬರೆದಿದ್ದುOctober 14, 2011
6ಅನಿಸಿಕೆಗಳು

ರಂಗ ಪೆನ್ನಿನ ಮೇಲೆ ಕಾಣದ ಅಗೋಚರ ಧೂಳನ್ನು ಒರೆಸಿ ಮತ್ತೆ ಸುಮ್ಮನೆ ಕುಳಿತುಕೊಂಡೆ. ಉಹ್ಹೂಂ, ಒಂದಕ್ಷರವೂ ಬರೆಯಲಾಗುತ್ತಿಲ್ಲ. ಒಳಗಡೆ ಮಾತ್ರ ಅವ್ಯಕ್ತ ಕಂಪನ. ಬರೆಯಲಾರೆ, ಬರೆಯದಿರಲಾರೆ. ಸುಖಾ ಸುಮ್ಮನೆ ರಜಾ ಹಾಕಿ ಊರಿಗೆ ಬಂದು ಕುಳಿತುಕೊಂಡು, ಮೊಬೈಲು ಸ್ವಿಚ್ ಆಫ್ ಮಾಡಿ ಸುಮ್ಮನೆ ತೊಂದರೆ ಕೊಡಬೇಡಿ ಎಂದು ಎಲ್ಲರಿಗೂ ತಾಕೀತು ಒಂದು ಚೊಂಬು ನೀರು , ಲೋಟ,ಸಾಕಷ್ಟು ಹಾಳೆ, ಹೊಸ ಪೆನ್ನು,ಹಳೇ ಐಡಿಯಾ, ಎಲ್ಲವನ್ನೂ ಒಟ್ರಾಸಿ ಹಾಕಿಕೊಂಡು ಕೂತರೂ ಏನೂ ಬರಲೊಲ್ಲದು. ಬರೆಯಾಲಾಗುವ ಕಥೆಗಿಂತ ಬರೆಯಲಾಗದ ಕಥೆಯೇ ಶ್ರೇಷ್ಟ. ಕಾರಣ ಸ್ಪಷ್ಟ- ಬರೆಯಲಾಗದ ಕಥೆ ಬರೆದವರ ಕೈಚಳಕ. ನಾವೆಲ್ಲಾ ಸಾಮಾನ್ಯ ಮನುಷ್ಯರು. ಬರೆಯುವುದಾದರೂ ಏನನ್ನು?. ಮತ್ತೊಮ್ಮೆ ಪೆನ್ನಿನ ಧೂಳು ಒರೆಸಿದೆ. ( ಪೆನ್ನಿನ ಕಥೆ ಬರೆದರೆ!) ಹಠ ಹೆಚ್ಚಾಗುತ್ತಿದೆ. ಒಂದೇ ಒಂದು ಕಥೆಯನ್ನಾದರೂ ಬರೆಯಲೇ ಬೇಕು, ಕಡೇ ಪಕ್ಷ ಹತ್ತು ಸಾಲದರೂ ಸರಿ. ಒಟ್ಟಾರೆ ಒಂದು ಕಥೆ.  ಈ ಯೋಚನೆ ಬರುತ್ತಿದ್ದ ಹಾಗೆ, ನನ್ನ ಮಿತ್ರರು,ವಾರಿಗೆಯವರು, ಸಂಭಂಧಿಗಳು, ಅನಾಮಿಕರು ಪರಿಚಿತರು ,ಅಪರಿಚಿತರು,ಚಿರಪರಿಚಿತರು, ಪ್ರಾಣಿಗಳು ಪ್ರೇಯಸಿಯರು(!) ಆತ್ಮಬಂಧುಗಳು ಎಲ್ಲರೂ ಮನಸಿನ ಪುಟದ ತುಂಬಾ ತುಂಬಿಕೊಂಡು ನನ್ನ ಕಥೆ ಬರಿ ಎಂದು ಪೀಡಿಸಲು ಶುರು ಮಾಡಿದರು. ಒಂದೇ ಏಟಿಗೆ ಎಲ್ಲರನ್ನೂ ಯುದ್ದದಲ್ಲಿ ನಿಂತ ವೀರನಂತೆ ಸದೆಬಡಿದು ಹಿಮ್ಮೆಟ್ಟಿಸಿ. ಒಂದೇ ಒಂದು ಸಾಲು ಬರೆದೆ ಧೀಂ ತಕಿಟ ತೋಂ ತಕಿಟ ಧೀಂ! ಅಂತರಂಗ ಒಂದು ನಾಯಕನ ಪಾತ್ರ ಸೃಷ್ಟಿಸಿದೆ. ಅದಕ್ಕೆ ಪ್ರತಾಪ್ ಎಂದು ಹೆಸರಿಟ್ಟೆ. ಅವನಿಗೊಂದು ಊರು ಬೇಕಾಗಿತ್ತು. ನಮ್ಮೊರಿನ ಪಕ್ಕದಲ್ಲೇ ಅವನಿಗೆ ಒಂದು ವಾಸ ಯೋಗ್ಯ ನಿವಾಸ ಕಲ್ಪಿಸಿದೆ. ಅವನಿಗೊಂದು ಡಾನ್ಸ್ ಕೊರಿಯೋ ಗ್ರಾಫರ್ ವೃತ್ತಿ ಕೂಡ ಕೊಟ್ಟು ಅದಕ್ಕೆ ಒಳ್ಳೆ ಸಂಬಳ ನೀಡಿ, ಜೀವನಕ್ಕೆ ದಾರಿ ಮಾಡಿಕೊಟ್ಟೆ . ಸರಿ ಅವನಿರುವ ಕಾಲ ನಿರ್ಣಯ ಮಾಡಬೇಕಾಗಿ ಬಂದಾಗ ಮಾತ್ರ ಯಾವುದೋ ಉಡಾಫೆಯಿಂದ ಇಪ್ಪತ್ತೊಂದನೆ ಶತಮಾನ ಎಂದು ಬರೆಯುವ ಬದಲು ಹದಿನಾರನೇ ಶತಮಾನ ಎಂದು ಬರೆದುಬಿಟ್ಟೆ. ಅಂತರಂಗದ ಪುಟ ಕೋಲಾಹಲ ಕಾಣಿಸಿಕೊಂಡಿತು, ಹಾಳೆಯೆಲ್ಲಾ ಕುದುರೆಯ ಖುರಪುಟದ ಸದ್ದಿನಿನದ ತುಂಬಿ ಹೋಯ್ತು. ಕೋಣೆಯ ತುಂಬಾ ಅದರ ಧೂಳು ವ್ಯಾಪಿಸಿಕೊಂಡು ಕಣ್ಣು ಉರಿಯಲು ಶುರುವಾಯ್ತು. ಪ್ರತಾಪ- ಪ್ರತಾಪ ಶರ್ಮನಾಗಿ ಬದಲಾದ. ಅವನ ಊರಿನಲ್ಲಿದ್ದ ಆಧುನಿಕ ಕಟ್ಟಡಗಳೆಲ್ಲ ಕುಸಿದು ಹೋಗಿ ಪಾಳು ಬಿದ್ದ ಕಾಡಾಗಿ ಬದಲಾಯ್ತು. ಅವನ ಪ್ರೊಫೆಶನ್, ಡ್ಯಾನ್ಸ್ ಕೊರಿಯೋಗ್ರಾಫರ್ನಿಂದ ನೃತ್ಯಗುರುವಾಗಿ ಬದಲಾಯ್ತು. ಅವನ ದೊಡ್ಡಮನೆ ಕೂಡ, ಅರಮನೆಯ ಪಕ್ಕದಲ್ಲಿರುವ ಸುಂದರ ಲತಾಗೃಹವಾಗಿ ಮಾರ್ಪಾಡಾಯ್ತು. ರಾಜಕುಮಾರಿ ಇಂದುಹಾಸಿನಿ ಅವನ ಎದುರು ಗೆಜ್ಜೆ ಕಟ್ಟಿ ಕುಣಿಯಲಾರಂಭಿಸಿದಳು. ಅದಕ್ಕೆ ಪ್ರತಾಪಶರ್ಮ ಕೂಡ ತಕ್ಕ ತಾಳ ಹಾಕಲಾರಂಭಿಸಿದ. ಅವಳ ಮಾಧುರ್ಯದ ನಗೆ ಮೃದಂಗದ ಸದ್ದಿನಲ್ಲಿ ಕರಗಿ ಸ್ಪುರದ್ರೂಪಿಯಾದ ನೃತ್ಯ ಗುರುವಿನ ಮೇಲೆ ಪ್ರೇಮಾಂಕುರವಾಗಿ ಹರಿಯಲಾರಂಭಿಸಿತು. ಗುರು ಶಿಷ್ಯೆಯರು ಹಗಲಿರುಳೆನ್ನದೆ ಅಗಣಿತ ನೃತ್ಯ ಸಲ್ಲಾಪದಲ್ಲಿ ತೊಡಗಿದರು. ರಂಗಸ್ಥಳ ಒಂದು ದಿನ ಆಗತಾನೆ ನೃತ್ಯ ಪಾಠ ಮತ್ತು ಪ್ರೇಮ ಪಾಠ ಮುಗಿದಿತ್ತು. ಪ್ರತಾಪ ಶರ್ಮ ಸುಸ್ತಾಗಿ (!) ಮನೆಗೆ ತೆರಳಿದ್ದ. ಇಂದುಹಾಸಿನಿ ತನ್ನೊಳಗೆ ತಾನೇ ಆತ್ಮಾವಲೋಕನ ಮಾಡುತ್ತಾ ಕುಳಿತಿದ್ದಳು. ಅವಳ ಕಣ್ಣಿಂದ ಅಶ್ರು ಧಾರೆ ಹರಿದು ಕೆಳಗಿಳಿದು ಕೆನ್ನೆಯೆಲ್ಲಾ ಒದ್ದೆಯಾಗಿತ್ತು. ಅವಳ ಒದ್ದೆಯಾದ ಕೆನ್ನೆಯಲ್ಲಿ ಚೌತಿ ಚಂದ್ರನ ಬಿಂಬ ಮೂಡಿ ಚಂದ್ರನೊಡನೆ ಸ್ಪರ್ಧೆಗೆ ಬಿದ್ದಿತ್ತು. ಮುಖವು ಮಾತ್ರ ಕಳಾ ಹೀನವಾಗಿ ಪೂರ್ಣ ಚಂದ್ರನಿಗೆ ಗ್ರಹಣ ಹಿಡಿದ ಹಾಗೆ ಕಾಣುತ್ತಿತ್ತು. ಇಂತಿಪ್ಪ ಅವಳ ಪರಿಯನ್ನು ನೋಡಲಾರದೆ ಚಂದ್ರ ಮೋಡದ ಮರೆಗೆ ಸರಿದ. ಇದ್ದಕ್ಕಿದ್ದ ಹಾಗೆ ಇಂದುಹಾಸಿನಿ ಮೌನದ ಕತ್ತಲಿಗೆ ಚಂದ್ರ ಕಿರಣ ಎಸೆದ ಹಾಗೆ ನನ್ನೊಡನೆ ಮಾತಿಗೆ ತೊಡಗಿದಳು. "ನೀವ್ಯಾರು?" ನಾನು ಕಕ್ಕಾಬಿಕ್ಕಿಯಾಗಿ ಬಿಟ್ಟೆ. ಪಾತ್ರವು ನನ್ನೊಡನೆ ಮಾತನಾಡುವುದೆಂದರೇನು? ನಾನು ಅದಕ್ಕೆ ಉತ್ತರಿಸುವುದು ಎಂದರೇನು? ಸಾಮಾನ್ಯವೇ? ನಾನು, ನಾನು ತಡಬಡಾಯಿಸಲಾರಂಭಿಸಿದೆ. ನನ್ನೊಡನೆ ನೀವೂ ಮಾತನಾಡುವುದಿಲ್ಲವೇನು? ಇಂದುಹಾಸಿನಿ ದಯನೀಯವಾಗಿ ಪ್ರಶ್ನಿಸಿದಳು. "ನಾನು ನಿನ್ನ ಕಥೆಗಾರ" ನಿಧಾನವಾಗಿ ಉತ್ತರಿಸಿದೆ. " ಹೌದೆ?, ಹಾಗಾದರೆ ನನ್ನ ಕಥೆಯ ಅಂತ್ಯ ಏನಾಗುವುದೆಂದು ದಯಮಾಡಿ ತಿಳಿಸುವಿರಾ?" ಬೇಡಿಕೊಂಡಳು "ಸಾಧ್ಯವಿಲ್ಲ, " ನಾನು ಮಾರುತ್ತರ ನೀಡಿದೆ "ಏಕೆ ಸಾಧ್ಯವಿಲ್ಲ" ಇಂದು ಹಠಕ್ಕೆ ಬಿದ್ದಳು. " ಯಾಕೆಂದರೆ, ನನಗೇ ಇನ್ನೂ ಗೊತ್ತಿಲ್ಲ" ನಾನು ತಣ್ಣಗೆ ಉತ್ತರಿಸಿದೆ. "ನೀವು ಕಠಿಣ ಹೃದಯಿಗಳು, ನಿಮಗೆ ಇಷ್ಟ ಬಂದ ಹಾಗೆ, ರಸವತ್ತಾಗಿ ಕಥೆ ಹಣಿಯುತ್ತೀರಿ, ಪಾತ್ರಗಳು ನಾವು ಏನಾದರೆ ನಿಮಗೇನು? " ಫಣಿಯಂತೆ ಬುಸುಗುತ್ತಿದಳು. ("ಎಲಾ ಇವಳ, ಎಷ್ಟು ಕೊಬ್ಬಿರಬೇಡ ಇವಳಿಗೆ ( ಎಷ್ಟಾದರೂ ರಾಜಕುಮಾರಿ ಅಲ್ಲವೇ) ಇವಳಿಗ್ಯಾಕೆ ಇದೆಲ್ಲಾ ಅಧಿಕ ಪ್ರಸಂಗಿತನ ಅಂದುಕೊಂಡೆ") "ಎಕ್ಸ್ ಕ್ಯೂಸ್ ಮಿ,ಮೇಡಂ, " "ಹಂಗಂದ್ರೆ " "ಓ ನಿಮಗೆ ಇಂಗ್ಲೀಷು ಬರೋದಿಲ್ಲ ಅಲ್ಲವಾ? ನೋಡಿ ಇವರೇ, ನಾನು ಕಥೆಗಾರ, ಒಂದರ್ಥದಲ್ಲಿ ನಿಮ್ಮ ಸೃಷ್ಟಿಕರ್ತ, ನನಗೇ ನಿಮ್ಮನ್ನು ಹುಟ್ಟಿಸುವ, ಬದುಕಿಸುವ ಸಾಯಿಸುವ ಎಲ್ಲಾ ಹಕ್ಕೂ ಇದೆ. ಅದರಲ್ಲಿ ನೀವು ತಲೆ ಹಾಕುವ ಅವಶ್ಯಕತೆ ಇಲ್ಲ" ಖಾರವಾಗಿ ಪ್ರತಿಕ್ರಿಯಿಸಿದೆ. ಇಂದುಹಾಸಿನಿಯ ಕಣ್ಣಿಂದ ಮತ್ತೆರೆಡು ಕಣ್ಣೀರ ಹನಿಗಳು ಮೌನವಾಗಿ ಜಾರಿ ಧರೆಗುರುಳಿದವು.ಮೆಲ್ಲಗೆ ಮತ್ತೆ ಮಾತನಾಡಿದಳು. " ನೋಡು ಕಥೆಗಾರ, ನಾನು ಕೂಡ ತರ್ಕ,ವ್ಯಾಕರಣ, ಅಲಂಕಾರ, ಕಾವ್ಯ ಮುಂತಾದವುಗಲ್ಲಿ ಓದಿದ್ದೇನೆ. ಕಥೆಗಳು ಎಂದಿಗೂ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ. ಎಲ್ಲೋ ಒಮ್ಮೆಯಾದರೂ ನಡೆದಿರಬಹುದಾದ ಅಥವಾ ನಡೆಯಬಹುದಾದ ಸನ್ನಿವೇಶವನ್ನೇ ನೀವು ಕಥೆ ಮಾಡಲು ಸಾಧ್ಯ, ಹಾಗೆಂದ ಮೇಲೆ ನನ್ನ ಬಾಳಿನ ಕಥೆಯನ್ನು ರೂಪಿಸಿಕೊಳ್ಳುವ ಹಕ್ಕು ನನಗಿಲ್ಲವೇ""ಅಂದರೆ?" ಅರ್ಥವಾಗದವನಂತೆ ಕೇಳಿದೆ"ಅಂದರೆ, ಕಥೆ ವರ್ತಮಾದ್ದಾದರೆ ಅಲ್ಲಿ ಕಲ್ಪನೆಯ ಪ್ರಶ್ನೆಯೇ ಬರುವುದಿಲ್ಲ. ಭವಿಷ್ಯದ ಕಥೆ ಬರೆದರೆ, ಹೀಗೂ ಕೂಡ ಆಗಬಹುದಾದ ಒಂದು         ಸಾಧ್ಯತೆಯನ್ನು ಬರೆದಂತಾಗುವುದರಿಂದ ಬಹುತೇಕ ನಿಜವನ್ನೇ ಬರೆದಂತಾಗುತ್ತದೆ. ಆದರೆ ಭೂತಕಾಲದ, ಚರಿತ್ರೆಯ, ಇತಿಹಾಸದ ಕಥೆಗಳನ್ನು  ನಿನ್ನಿಷ್ಟದ ಹಾಗೆ ಬರೆಯಲಾಗದು. ಯಾಕೆಂದರೆ ಇಲ್ಲಿನ ಸಾಧ್ಯಾಸಾಧ್ಯತೆಗಳ ಅರಿವು ನಿನಗೆ ಹೇಗೆ ತಾನೆ ತಿಳಿದಿರಲು ಸಾಧ್ಯ?" ಇಂದುಹಾಸಿನಿ     ವಿವರಿಸಿದಳು. ಈ ಮಾತು ಗಳು ನನಗೇ ಆಘಾತಕಾರಿಯಾಗಿ ಎರಗಿತು. ಹೌದಲ್ಲವೇ? ಹಾಗಾದರೆ ನನ್ನ ಸ್ವಂತ ಆಲೋಚನೆ, ಪ್ರತಿಭೆ, ಕೈಚಳಕ ಇವಕ್ಕೆಲ್ಲ ಬೆಲೆಯೇ ಇಲ್ಲವೇ? ಸಮಸ್ಯೆಯ ತೀವ್ರತೆ ನನಗೆ ಅರಿವಾಗಲಾರಂಭಿಸಿತು ಹಾಗಾದರೆ ನಾನೇನು ಮಾಡಲಿ? ಅಸಹಾಯಕನಾಗಿ ಪ್ರಶ್ನಿಸಿದೆ. ಮೊದಲ ಬಾರಿಗೆ ಅವಳು ನಸುನಕ್ಕಳು, ನಕ್ಕಾಗ ಅವಳು ಅಕ್ಷರಶಃ ಇಂದುಹಾಸಿನಿಯಾಗಿ ಕಂಡಳು. "ಮೊದಲಿಗೆ ನನ್ನ ಕಥೆ ಕೇಳಿ"ಎಂದು ಅವಳು ಹೇಳಲಾರಂಭಿಸಿದಳು.
ಕಥೆಯ ರಂಗದ ಮೇಲೊಂದು ಕಥೆಯ ಅಂತರಂಗ
ಮೊನ್ನೆ ನಮ್ಮ ತಂದೆಯವರೊಡನೆ ವಾಯುವಿಹಾರ ಹೋಗಿದ್ದೆ. ತುಂಗಾ ನದಿಯ ತಟಾಕಕ್ಕೆ. ನಮ್ಮ ತಂದೆ ಪ್ರೀತಿಯಿಂದ ಮಾತನಾಡಿಸಿ, "ಇಂದು, ನಿನಗೆ ಗೊತ್ತಿರುವ ಹಾಗೆ ನೀನೆ ನನಗೇ ಮಗ ಮಗಳು ಎಲ್ಲಾ. ನಾಳೆ ಈ ರಾಜ್ಯಕ್ಕೆ ಅಳಿಯನಾಗಿ ಬರುವವನೇ ಈ ರಾಜ್ಯದ ಉತ್ತರಾಧಿಕಾರಿ. ಹಾಗಾಗಿ ಈ ರಾಜ್ಯದ ಭವಿಷ್ಯ ನಿನ್ನ ಮದುವೆಯ ಮೇಲೆ ನಿಂತಿದೆ. ಇಂದಿಗೆ ಸರಿಯಾಗಿ ಒಂದು ತಿಂಗಳಿಗೆ, ಅಂದರೆ ಮಾರ್ಗಶಿರ ಶುಕ್ಲ ಪೂರ್ಣಿಮೆಯಂದು ನಿನಗೆ ಸ್ವಯಂವರ ಏರ್ಪಡಿಸುತ್ತಿದ್ದೇನೆ. ಹಲವಾರು ದೇಶದ ರಾಜಕುಮಾರರ ಜೊತೆಗೆ, ಅಮರಾವತಿ ನಗರದ ಅರಸು ದುರ್ಜಯಸಿಂಹನ ಮಗನಾದ ಜಯಸಿಂಹ ಕೂಡ ಆಗಮಿಸುತ್ತಿದ್ದಾನೆ. ಅಮರಾವತಿ ನಗರ ನಮ್ಮ ಶತ್ರುಗಳ ರಾಜ್ಯವಾದರೂ , ಅಲ್ಲಿನ ರಾಜಕುಮಾರ ರೂಪ, ಗುಣ,ವಿದ್ಯೆ ಗಳಲ್ಲಿ ಇಂದ್ರನಿಗೆ ಸಮಾನನದವನು ಎಂದು ಕೇಳಿದ್ದೇವೆ. ಅಷ್ಟೇ ಅಲ್ಲದೆ ವಿನಯವಂತನೂ, ಕಡು ಪರಾಕ್ರಮಿಯೂ ಆಗಿದ್ದಾನಂತೆ. ನೀನು ಅವನನ್ನೇ ವರಿಸಬೇಕೆಂದು ನಮ್ಮ ಇಚ್ಛೆ . ಇದು ಕೇವಲ ನಮ್ಮೊಬ್ಬರ ಆಶಯವಲ್ಲದೆ ಇದರಲ್ಲಿ ರಾಜ್ಯದ ಹಿತದೃಷ್ಟಿಯ ಸ್ವಾರ್ಥವೂ ಅಡಗಿದೆ, ಯೋಚಿಸು ಮಗಳೇ " ಎಂದರು. ರಂಗಸಜ್ಜಿಕೆ "ಸೊ, ಈಗೇನಾಯ್ತು?" ನಿಧಾನವಾಗಿ ಪ್ರಶ್ನಿಸಿದೆ " ಅಹಹ, ಚೆನ್ನಾಯ್ತು. ನನಗಾಗಿ ಒಬ್ಬ ಪ್ರಿಯಕರನನ್ನು ಮೊದಲೇ ಹುಟ್ಟಿಸಿ, ನನಗೇ ಅವನ ಮೇಲೆ ಪ್ರೇಮಾಂಕುರವಾಗುವ ಹಾಗೆ ಮಾಡಿ, ಈಗೇನೂ ತಿಳಿಯದವರಂತೆ, ಈಗೇನಾಯ್ತು ಎಂದು ಪ್ರಶ್ನಿಸುತ್ತಿದ್ದೀರಲ್ಲ." ಎಂದು ಸಿಟ್ಟಾಗಿ ಕೇಳಿದಳು. "ಸರಿ ನಿಮ್ಮಪ್ಪನಿಗೆ ಹೇಳಿಬಿಡು, ಅವನನ್ನು ಪ್ರೀತಿಸುತ್ತಿರುವ ವಿಷಯವನ್ನು" ನಾನೆಂದೆ " ಅದು ಸಾಧ್ಯವಿಲ್ಲ, ಹೇಳಿ ಕೇಳಿ ನಮ್ಮಪ್ಪ ಒಬ್ಬ ರಾಜ, ತನ್ನ ಮಗಳು ಒಬ್ಬ ಸಾಮಾನ್ಯ ನರ್ತಕನನ್ನು ಪ್ರೀತಿಸುತ್ತಿರುವ ವಿಷಯ ಗೊತ್ತಾದರೆ ಅವನನ್ನು ಕೊಂದೇ ಹಾಕಬಹುದು" ಅವಳೆಂದಳು "ಆದರೆ ನಾನದಕ್ಕೆ ಬಿಡುವುದಿಲ್ಲವಲ್ಲ, ನಿಮ್ಮಪ್ಪನಿಗೂ ಕೂಡ ಮನಕರಗುವ ಹಾಗೆ ಬರೆದುಬಿಟ್ಟರಾಯಿತು" ನನ್ನ ಬುದ್ದಿವಂತಿಕೆ ಪ್ರದರ್ಶಿಸಿದೆ. "ನೀವೊಬ್ಬರು ಮೂರ್ಖ ಕಥೆಗಾರರು. ಹಾಗಾದರೆ, ಸ್ವಯಂ ವರದ ಸಲುವಾಗಿ ಬಂದ ಬೇರೆ ರಾಜಕುಮಾರರುಗಳೆಲ್ಲ ಸುಮ್ಮನೆ ಇರುತ್ತಾರೆ ಎಂದುಕೊಂದಿರುವಿರಾ? ಕೇವಲ ನನಗಾಗಿಯೇ ಯುದ್ದ ನಡೆಯಬಹುದು. ಅರಮನೆಯಲ್ಲಿ ರಕ್ತದೋಕುಳಿ ಚೆಲ್ಲಬಹುದು. ಹಾಗೂ ನೀವೇ ಅದಕ್ಕೆ ಕಾರಣನಾಗುವುದಿಲ್ಲವೇ?" ನನಗೇ ತಲೆ ಕೆಡಲಾರಂಭಿಸಿತು. ಯಾವತ್ತೂ ನನಗೇ ಹೀಗಾಗಿರಲಿಲ್ಲ. ನಾನೇ ರಚಿಸಿದ ವ್ಯೂಹದಲ್ಲಿ ನಾನೇ ಸಿಕ್ಕುಬಿದ್ದಿದ್ದೆ. ನಿಧಾನವಾಗಿ ಯೋಚಿಸಿ ಹೇಳಿದೆ. " ಹೋಗಲಿ, ಒಮ್ಮೆ ಪ್ರತಾಪ ಶರ್ಮನೊಡನೆ ಮಾತನಾಡು, ನೀವಿಬ್ಬರೂ ದೇಶಬಿಟ್ಟು ಓಡಿಹೋಗಲು ನಾನು ವ್ಯವಸ್ತೆ ಮಾಡುತ್ತೇನೆ. ಎಲ್ಲಾದರೂ ದೂರ ಹೋಗಿ ಸುಖವಾಗಿರಿ" ( ಒಂದು ಕರಾಳ ರಾತ್ರಿಯ ವರ್ಣನೆಯಿರುವ ಸಾಲು, ಒಂದು ಕುದುರೆ ಸಾಕು- ಇವರನ್ನು ಓಡಿಸಲು!) ಅವಳ ಮುಖದಲ್ಲಿ ಮತ್ತೊಮ್ಮೆ ನಿರಾಶೆಯ ಕಾರ್ಮೋಡ ಕವಿಯಿತು. " ನಾನಾಗಲೇ ಮಾತನಾಡಿ ಆಯಿತು. ಅವನು ಈಗ ನನ್ನೊಡನೆ ಓಡಿ ಬರಲು ಸಿದ್ದನಿಲ್ಲ" ಇಂದುವಿನ ದನಿ ಕಳೆಗುಂದಿತು. "ಯಾಕೆ?" ನಾನು ಕಾತುರನಾಗಿ ಕೇಳಿದೆ. "ಓಡಿ ಹೋಗುವುದು ಹೇಡಿಗಳ ಲಕ್ಷಣ, ಶೂರನಂತೆ ನಿನ್ನ ಕೈ ಹಿಡಿದು ಮದುವೆಯಾಗುತ್ತೇನೆ ಎಂದು ಪೌರುಷದ ಮಾತನ್ನಾಡಿದ" ಇಂದು ಬಿಕ್ಕಿದಳು ಯಾಕೋ ಮನಸ್ಸಿಗೆ ತುಂಬಾ ಖೇದವೆನ್ನಿಸಿತು.ಇದಕ್ಕೊಂದು ಅಂತ್ಯ ತರಬೇಕೆನ್ನಿಸಿತು. ರಣರಂಗ ಮದುವೆಯ ಮಂಟಪ ಸಿದ್ದವಾಗಿತ್ತು. ಕುಮಾರಿ ಇಂದುಹಾಸಿನಿ ಹಾರವನ್ನು ಹಿಡಿದು ಸರ್ವಾಲಂಕಾರ ಭೂಷಿತಳಾಗಿ ನಿಂತಿದ್ದಳು. ನಗೆಯೊಂದನ್ನು ಬಿಟ್ಟು ಮತ್ತೆಲ್ಲಾ ಆಭರಣಗಳು ಅವಳನ್ನು ಅಲಂಕರಿಸಿದ್ದವು. ಅವಳ ಸುತ್ತ ಮುತ್ತಿದ್ದ ಸಖಿಯರು ಅವಳನ್ನು ಹಿತವಾಗಿ ಛೇಡಿಸುತ್ತಿದ್ದರು. ಅವಳ ಕಣ್ಣು ಯಾವುದೋ ಪ್ರತೀಕ್ಷೆಯಲ್ಲಿದ್ದಂತೆ ತೋರುತ್ತಿತ್ತು. ಎಲ್ಲಾ ರಾಜಕುವರರೂ ಅವಳ ನಿರ್ಧಾರದ ಪ್ರತೀಕ್ಷೆಯಲ್ಲಿದ್ದರು. ಅಷ್ಟರಲ್ಲಿ ಮುಖ್ಯದ್ವಾರದ ಬಳಿ ಪ್ರತಾಪ ಶರ್ಮ ಕಾಣಿಸಿಕೊಂಡ. ಅವನ ವೇಷಭೂಷಣಗಳು ಪ್ರತಿದಿನದಂತಿರಲಿಲ್ಲ. ತನ್ನ ಜುಟ್ಟನ್ನು ಶಿಖೆಯಾಗಿ ಕಟ್ಟಿಕೊಂಡು, ಶ್ವೇತ ವಸ್ತ್ರಾಲಂಕೃತನಾಗಿ, ಗಂಧ, ಮಾಲೆ ಮತ್ತು ಕರವಾಲಗಳಿಂದ ಶೋಭಿಸುತ್ತಿದ್ದ. ನೇರವಾಗಿ ಬಂದು ರಾಜನಿಗೆ ಎದುರಾಗಿ ನಿಂತು ಕೊಂಡ.ರಾಜ ಪ್ರಶ್ನಾರ್ಥಕವಾಗಿ ಅವನ ಮುಖ ನೋಡಿದ. ಗಂಭೀರಧ್ವನಿಯಲ್ಲಿ ಮುಂಗಾರಿನ ಮೋಡ ಗುಡುಗುವ ರೀತಿಯಲ್ಲಿ ಪ್ರತಾಪ ಶರ್ಮ ನುಡಿದ........ " ರಾಜನ್ , ಈ ಸ್ವಯಂವರಕ್ಕೆ ನಾನು ಕನ್ಯಾರ್ಥಿಯಾಗಿ ಬಂದಿದ್ದೇನೆ" ಈ ಬಾರಿ ಗುಡುಗುವ ಸ್ಠಿತಿ ರಾಜನಾದಾಗಿತ್ತು. " ಬ್ರಾಹ್ಮಣನೆಂಬ ಗೌರವ ತಳೆದು ನಿಮಗೆ ಜೀವದಾನ ಮಾಡುತ್ತಿದ್ದೇನೆ. ನಿಮಗೆ ಬುದ್ದಿಭ್ರಮಣೆಯಾ ದೆಯೇ? ಇದು ಸ್ವಯಂವರ. ಇಲ್ಲಿ ಕ್ಷತ್ರಿಯರಿಗೆ ಮಾತ್ರ ಅವಕಾಶವೇ ಹೊರತು.ದ್ವಿಜರಿಗಲ್ಲ" "ಕ್ಷತಾತ್ ಇತಿ ತ್ರಾತ- ಎಂಬ ವಾಣಿಯಂತೆ ಸಮಾಜವನ್ನು ಕೆಡಕುಗಳಿಂದ ರಕ್ಷಿಸುವ ಬಲವನ್ನು ಹೊಂದಿರುವವನೇ ಕ್ಷತ್ರಿಯ. ಪ್ರಭುಗಳಿಗೆ ಅನುಮಾನವಿದ್ದರೆ ನಮ್ಮ ಬಲಾಬಲ ಪರೀಕ್ಷೆ ನಡೆಯಬಹುದು" ಕೆಚ್ಚೆದೆಯ ಸೊಕ್ಕು ಮಾತಾಗಿ ಹೊಮ್ಮಿತು. ಸಿಟ್ಟಿನಿಂದ ರಾಜನ ಮುಖ ಕೆಂಪಾಯಿತು. ಚಪ್ಪಾಳೆಯಿಂದ ನಾಲ್ಕು ಭಟರನ್ನು ಕರೆದು ಅಪ್ಪಣೆ ಮಾಡಿದ. ನಾಲ್ವರೂ ಭಟರೂ ನಾಲ್ಕೇ ಕ್ಷಣಗಳಲ್ಲಿ ಮಣ್ಣು ಮುಕ್ಕಿದರು. ನಂತರ ಮುತ್ತಿಕ್ಕಿತ ಮತ್ತಷ್ಟು ಭಟರು ಅವನ ಕರವಾಲದ ಆರ್ಭಟದೊಡನೆ ಸೆಣಸಲಾರದೆ ಕಾಲಿಗೆ ಬುದ್ದಿ ಹೇಳಿದರು. ಆನಂತರ ಬಂದ ರಾಜಕುಮಾರರಿಗೂ ಇದೇ ಕಥೆಯಾಯಿತು. ರಾಜ ಅಸಹಾಯಕನಾಗಿ ಕೈ ಚೆಲ್ಲಿದ. ಆದರೆ ಯುವರಾಣಿಯ ಮುಖದಲ್ಲಿ ಸಂತೃಪ್ತಿಯ ಮುಗುಳುನಗೆ ಮಿಂಚುತ್ತಿತ್ತು. ಎಲ್ಲವೂ ನಿಶ್ಶಭ್ದವಾಗಿರುವಾಗ ಮತ್ತೆ ಸಿಡಿಲ ವಾಣಿ ಮೊಳಗಿತು."ದಯವಿಟ್ಟು ಸಭಾಸದರೆಲ್ಲರೂ ಈ ಅಭಾಸಕ್ಕಾಗಿ ಕ್ಷಮಿಸಬೇಕು. ನಾನಿಲ್ಲಿ ಕನ್ಯಾರ್ಥಿಯಾಗಿ ಬಂದಿದ್ದರೂ ಸಹ ನನ್ನ ಪರಿಚಯ ನಿಮಗಿಲ್ಲವೆಂದು ತೋರುತ್ತದೆ. ನೀವೆಲ್ಲರೂ ಭಾವಿಸಿರುವ ಹಾಗೆ ನಾನು ನೃತ್ಯಗುರುವಲ್ಲ.ನೃತ್ಯಗುರು ಪ್ರತಾಪ ಶರ್ಮನ ಮಾರುವೇಷದಲ್ಲಿರುವ ಜಯಸಿಂಹ. ಅಮರಾವತಿ ನಗರದ ದೊರೆ ದುರ್ಜಯಸಿಂಹ ನನ್ನ ತಂದೆ. ಮೊದಲಿನಿಂದಲೂ ಈ ದೇಶದ ಮೇಲೆ ಹಗೆಯಿದ್ದುದರಿಂದ ಸ್ವಯಂವರಕ್ಕೆ ನೇರವಾಗಿ ಬರದೇ ಈ ರೀತಿ ಮಾಡಬೇಕಾಯಿತು. ಇದಕ್ಕೆ ನಮ್ಮ ತಂದೆಯೂ ಕೂಡ ಸಮ್ಮತಿಸಿದ್ದಾರೆ. ಇದನ್ನೆಲ್ಲಾ ತಿಳಿಸದೇ ಇಲ್ಲಿ ಬಂದು ಮಾಡಿದ ಉಪದ್ಯಾಪಿತನಕ್ಕಾಗಿ ನಾನು ಎಲ್ಲರಲ್ಲೂ ಕ್ಷಮೆ ಬೇಡುತ್ತಿದ್ದೇನೆ" ಕರತಾಡನ ಆರ್ಭಟದ ಮಧ್ಯೆ ರಾಜಕುಮಾರಿ ಅವನಿಗೆ ಮಾಲಾರ್ಪಣೆಮಾಡಿದಳು.ಅರಮನೆಯ ರಂಗಶಾಲೆ ಮತ್ತೆ "ಧೀಂ ತಕಿಟ ತೋಂ ತಕಿಟ ಧೀಂ" ಎಂಬ ಸದ್ದಿನಿಂದ ತುಂಬಿ ಹೋಯಿತು. ರಂಗದಿಂದಾಚೆ ಒಂದು ತರಂಗ ಕಿಟಕಿಯಿಂದ ಬೀಳುತ್ತಿದ್ದ ಮಳೆಹನಿಗಳಿಂದ ಎಚ್ಚರವಾಯಿತು. ಎದ್ದು ಕಿಟಕಿ ಹಾಕಿ ಒಮ್ಮೆ ಗಡಿಯಾರದ ಕಡೆ ನೋಡಿದೆ. ಸಂಜೆಯಾಗಿತ್ತು. ನನ್ನ ಕಾಗದದ ಹಾಳೆಗಳನ್ನು ನೋಡಿದಾಗ ಅವು ಖಾಲಿಯಾಗೇ ಇತ್ತು. ಸ್ವಲ್ಪ ನೀರ ಹನಿ ಮಾತ್ರ ಸಿಡಿದಿತ್ತು. ಅವು ಕಿಟಕಿಯಿಂದ ಬಿದ್ದ ಮಳೆ ಹನಿಗಳೇ ಆದರೂ ನನಗೆ ಮಾತ್ರ ಇಂದುಹಾಸಿನಿಯ ಆನಂದಭಾಷ್ಪದಂತೆ ಕಂಡವು.

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಕಿರಿಕ್ ಕೃಷ್ಣಪ್ಪ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 10/14/2011 - 21:16

ನಿಮ್ಮ ಕಥೆ ತುಂಬಾ ಚೆನ್ನಾಗಿರುವುದರಿಂದ ನಾವು ಯಾವುದೇ ಕಿರಿಕ್ ಮಾಡುವುದಿಲ್ಲ

ಉಮಾಶಂಕರ ಬಿ.ಎಸ್ ಶನಿ, 10/15/2011 - 10:04

ಬಾಲಣ್ಣಕಥೆಗಾರನೊಡನೆ ಪಾತ್ರಗಳು ಮಾತಿಗಿಳಿಯುವುದು ಗೊತ್ತಿತ್ತು. ಆದರೆ ಕಥೆಗಳೇ ತಮ್ಮ ಪಾತ್ರಗಳು ಹೀಗೇ  ಇರಬೇಕೆಂದು ಕಥೆಗಾರನನ್ನೇ ನಿರ್ದೇಶಿಸುವುದು ಹೊಸತೆನ್ನಿಸಿತು. ಎಲ್ಲಿಯೂ ಬೋರ್ ಆಗದಹಾಗೆ  ಸೊಗಸಾದ ನಿರೂಪಣೆಯೊಂದಿಗೆ ಕಥೆ ಓದಿಸಿಕೊಂಡು ಹೋಗುತ್ತದೆ. ಹೀಗೆ ನಿಮ್ಮ ಹೊಸತನದ  ನಿರೂಪಣೆಯ ಅನ್ವೇಷಣೆ ಮುಂದುವರಿಯುತ್ತಿರಲಿ. ಮತ್ತಷ್ಟು ಹೊಸ ಕಥೆಗಳು ಮೂಡಿಬರಲಿನಿಮ್ಮಉಮಾಶಂಕರ 

Jyothi Subrahmanya ಭಾನು, 10/16/2011 - 08:03

ಕಥೆಯ ಧಾಟಿ ಓಘ ಚೆನ್ನಾಗಿದೆ.  ಇಂತಹ ಉತ್ತಮ ಕಥೆಗಳು ನಿಮ್ಮಿಂದ ಮೂಡಿ ಬರಲಿ....

ವಿ.ಎಂ.ಶ್ರೀನಿವಾಸ ಭಾನು, 10/23/2011 - 13:15

ಅಹ್ಹಹ್ಹ.... ಓದ್ತಿದ್ದರೆ ನಗು ಬರ್ತಿತ್ತು. ವಿಭಿನ್ನ ರೀತಿಯದು. ಪಾತ್ರಗಳು ನಿಮಗೆ ಬೇಕಾಗೋ ತರ ಮಾತನಾಡಿದ್ದಾವೆ ಅಥವಾ ನಿಮ್ಮ ರೀತಿಗೆ ಸ್ವಂದಿಸಿದ್ದಾವೆ. ಅದೇ ಕಥೆಯ ಶಕ್ತಿ ಮತ್ತು ಮಿತಿ. 

ಸ್ಪಂದನ ಶುಕ್ರ, 10/28/2011 - 18:26

ನಮಸ್ಕಾರ, ತುಂಬಾ ಸೊಗಸಾಗಿ ಮೂಡಿಬಂದಿದೆ. ನಿಮ್ಮ ಬರವಣಿಗೆಯ ಧಾಟಿ ಚೆನ್ನಾಗಿದೆ. ಗುಡ್ ಲಕ್

manju sringeri (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/02/2011 - 12:19

ಅದೆನೊ ವಿಚಿತ್ರ ವೆನಿಸಿದರು ಅದ್ಬುತ ಅಲೊಚನೆ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.