ಮಧುಮೇಹವೆಂಬ ಗುಪ್ತಗಾಮಿನಿ.........೬
ಇದರ ಮೊದಲ ಭಾಗ ಮಧುಮೇಹವೆಂಬ ಗುಪ್ತಗಾಮಿನಿ ಭಾಗ ೧, ಎರಡನೆಯ ಭಾಗ ಮಧುಮೇಹವೆಂಬ ಗುಪ್ತಗಾಮಿನಿ ಭಾಗ 2, ಮೂರನೆಯ ಭಾಗ ಮಧುಮೇಹವೆಂಬ ಗುಪ್ತಗಾಮಿನಿ ಭಾಗ ೩ ,ಮಧುಮೇಹವೆಂಬ ಗುಪ್ತಗಾಮಿನಿ ಭಾಗ ೪ ಮತ್ತು ಮಧುಮೇಹವೆಂಬ ಗುಪ್ತಗಾಮಿನಿ ಭಾಗ ೫ ಓದಿರಿ.
e. ರಕ್ತದಲ್ಲಿ ಸಕ್ಕರೆಯ ಅಂಶ ಸತತವಾಗಿ ಹೆಚ್ಚಿನ ಮಟ್ಟದಲ್ಲಿದ್ದಾಗ, ಸಕ್ಕರೆಯ ಒಂದು ಅಂಶ, ರಕ್ತದಲ್ಲಿರುವ ಹೇಮೋಗ್ಲೋಬಿನ್ ಎಂಬ ಒಂದು ಪ್ರೋಟೀನ್ ಮತ್ತು ರಕ್ತ ನಾಳಗಳ ಒಳಮೈನಲ್ಲಿರುವ ಕೆಲವು ಜೀವಕೋಶಗಳ ಪ್ರೋಟೀನ್ ಗಳೊಂದಿಗೆ ಸಂಯೋಗ ಹೊಂದಿ ಗ್ಲೈಕಾಸಿಲೇಟೆಡ್ ಪ್ರೋಟೀನ್ ಎಂಬ ಸಂಯುಕ್ತ ಪದಾರ್ಥವುಂಟಾಗುತ್ತದೆ. ಹೇಮೋಗ್ಲೋಬಿನ್ ಜೊತೆ ಬೆರೆತಾಗ , ಗ್ಲೈಕಾಸಿಲೇಟೆಡ್ ಹೇಮೋಗ್ಲೋಬಿನ್ (glycosylated hemoglobin, HbA1C ) ಎಂಬ ಸಂಯುಕ್ತ ಪದಾರ್ಥವುಂಟಾಗುತ್ತದೆ. ರಕ್ತದಲ್ಲಿ, ಸಕ್ಕರೆಯ ಅಂಶ ಹೆಚ್ಚು ಇದ್ದಷ್ಟೂ ಮತ್ತು ಹೆಚ್ಚು ಕಾಲ ಹಾಗೆ ಇದ್ದಷ್ಟೂ ಈ ಪದಾರ್ಥದ ಅಂಶವೂ ರಕ್ತದಲ್ಲಿ ಹೆಚ್ಚಾಗುತ್ತದೆ. ಮಧುಮೇಹಿಯೊಬ್ಬರು ಚಿಕಿತ್ಸೆಯನ್ನು ಯಶಸ್ವಿಯಾಗಿ ಪಡೆದ ನಂತರ ಅವರ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆಯಾದಂತೆ, ಈ ಪದಾರ್ಥದ ಮಟ್ಟವೂ ಕಡಿಮೆಯಾಗುತ್ತದೆ. ಆದ್ದರಿಂದ, ರಕ್ತದಲ್ಲಿ ಈ ಅಂಶದ (HbA1C) ಮಟ್ಟವನ್ನು ಅಳೆಯುವ ಮೂಲಕ ಒಬ್ಬ ವ್ಯಕ್ತಿಗೆ, ಮಧುಮೇಹ ಇತ್ತೀಚೆಗೆ ಕಾಣಿಸಿಕೊಂಡಿದ್ದೇ ಅಥವಾ ಬಹಳ ಕಾಲದಿಂಲೂ ಇದೇಯೇ ಎಂಬುದನ್ನು ತಿಳಿಯಬಹುದು, ಮತ್ತು, ಮಧುಮೇಹಿಯ ಚಿಕಿತ್ಸೆ ಎಷ್ಟುಮಟ್ಟಿಗೆ ಫಲಕಾರಿಯಾಗಿದೆ ಎಂದು ತಿಳಿಯಬಹುದು. ಈ ಪದಾರ್ಥದ ಮಟ್ಟವನ್ನು ಅಳೆಯುವ ಸೌಲಭ್ಯ ಈಗ ಬಹಳಷ್ಟು ಪ್ರಯೋಗಾಲಯಗಳಲ್ಲಿ ಲಭ್ಯವಿದೆ. ಈ ಅಂಶದ ಪ್ರಾಮುಖ್ಯತೆಯಿರುವುದು ಕೇವಲ ಈ ದೃಷ್ಟಿಯಿಂದ ಮಾತ್ರವಲ್ಲ. ಇದರ ಪ್ರಮಾಣ ಹೆಚ್ಚಿದಷ್ಟೂ ಇದು ದೇಹದಲ್ಲಿನ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಈ ಪದಾರ್ಥದ ಹೆಚ್ಚಳಿಕೆಯಿಂದ ದೇಹದ ಎಲ್ಲಾ ಜೀವಕೋಶಗಳ ಕಾರ್ಯಕ್ಕೆ ಧಕ್ಕೆ ಉಂಟಾಗಬಹುದಾದರೂ, ಕೆಳಗೆ ಕಾಣಿಸಿದ ಅಂಗ ಮತ್ತು ಅಂಗಾಂಶಗಳ ಮೇಲೆ ಇದರೆ ಹಾನಿ ತೀವ್ರವಾಗಿರುತ್ತದ್.
೧. ಕಣ್ಣಿನಲ್ಲಿರುವ ಮಸೂರ (lens)
೨. ಕಣ್ಣಿನ ಅಕ್ಷಿಪಟಲ(retina) ದಲ್ಲಿರುವ ಸೂಕ್ಷ್ಮ ರಕ್ತನಾಳಗಳು (capillaries).
೩. ದೇಹದ ಯಾವುದೇ ಭಾಗದಲ್ಲಿರುವ ಸೂಕ್ಷ್ಮ ರಕ್ತನಾಳಗಳು
೪. ಮೂತ್ರಪಿಂಡಗಳು (kidneys)
೫. ನರಗಳು (nerves) ಈ ಅಂಗಗಳಿಗೆ ಹಾನಿಯುಂಟಾಗುವ ಮೂಲಕ ಉದ್ಭವಿಸಬಹುದಾದ ರೋಗಲಕ್ಷಣಗಳು: (symptoms)
1. ಕಣ್ಣಿನ ಮಸೂರಕ್ಕೆ ಹಾನಿಯುಂಟಾಗುವುದರಿಂದ, ಅಪ್ರಾಪ್ತ ವಯಸ್ಸಿಗೇ ಮಸೂರ ಮಸುಕಾಗಬಹುದು (ಸಾಮಾನ್ಯವಾಗಿ ಇದಕ್ಕೆ ಪೊರೆ ಬರುವುದು ಎನ್ನುತ್ತಾರೆ, ವೈದ್ಯಕೀಯ ಭಾಷೆಯಲ್ಲಿ ಕ್ಯಾಟರಾಕ್ಟ್ (cataract) ಎನ್ನುತ್ತಾರೆ). ಇದರಿಂದ ಬರಬರುತ್ತಾ ದೃಷ್ಟಿ ಮಸುಕಾಗಬಹುದು.
2. ಕಣ್ಣಿನಲ್ಲಿರುವ ಸೂಕ್ಷ್ಮ ರಕ್ತನಾಳಗಳಿಗೆ ಧಕ್ಕೆಯಾಗುವು ಮೂಲಕ ಡಯಾಬೆಟಿಕ್ ರೆಟಿನೋಪಥಿ (diabetic retinopathy) ಎಂಬ ತೊಂದರೆ ಕಾಣಿಸಿಕೊಂಡು, ಕ್ರಮೇಣ ಅಂಧತ್ವವುಂಟಾಗಬಹುದು.
3. ದೇಹದ ಯಾವುದೇ ಭಾಗದ ಸೂಕ್ಷ್ಮ ನಾಳಗಳಿಗೂ ಹಾನಿಯುಂಟಾಗಬಹುದು. ಮಧುಮೇಹದ ಬಹಳಷ್ಟು ಪ್ರಮಾದಗಳು ಉಂಟಾಗುವುದು ರಕ್ತನಾಳಗಳಿಗುಂಟಾಗುವ ಹಾನಿಯ ಮೂಲಕ. ಸೂಕ್ಷ್ಮ ರಕ್ತನಾಳಗಳಿಗಾಗಿ ಉಂಟಾಗುವ ಹಾನಿಯ (microvascular disease) ಮೂಲಕ, ಅತಿ ಹೆಚ್ಚು ಹಾನಿಯುಂಟಾಗುವುದು, ಮೂತ್ರಪಿಂಡಗಳು, (nephropathy) ನರಗಳು (neuropathy) ,ಮತ್ತು ಕಣ್ಣುಗಳಿಗೆ (retinopathy). ಸೂಕ್ಷ್ಮ ರಕ್ತನಾಳಗಳಲ್ಲದೇ, ಮಧ್ಯಮ ಗಾತ್ರದ ರಕ್ತನಾಳಗಳಿಗೂ ಹಾನಿಯುಂಟಾಗಬಹುದು (macro vascular disease) ಈ ಮೂಲಕ ಉಂಟಾಗುವ ಪ್ರಮಾದಗಳೆಂದರೆ, ಹೃದಯಾಘಾತ (heart attack), ಮಿದುಳಿನ ಆಘಾತದಿಂದಾಗುವ ಪಾರ್ಶ್ವ ವಾಯು,( brain attack, hemiplegia) ಮೂತ್ರಪಿಂಡಗಳ (renal or kidney failure) ವೈಫಲ್ಯ ಮತ್ತು ಕೈಕಾಲುಗಳಿಗೆ ರಕ್ತವೊದಗಿಸುವ ರಕ್ತನಾಳಗಳ ಅಡೆತಡೆ (blocking of peripheral arteries ) ಕೈಕಾಲುಗಳ ಕೊಳೆಯುವಿಕೆ (gangrene) ಹೀಗೆ, ಮಧುಮೇಹದಿಂದ, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ದೇಹದ ಪ್ರತಿಯೊಂದು ಭಾಗಕ್ಕೂ ಹಾನಿಯುಂಟಾಗುವ ಸಂಭವವಿರುತ್ತದೆ.
f. ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಕಾರ್ಯಕ್ಷಮತೆಯ ಮೇಲೂ ಮಧುಮೇಹದ ಪ್ರಭಾವವುಂಟಾಗಬಹುದು. ಇದರಿಂದಾಗಿ, ಮಧುಮೇಹಿಗಳಿಗೆ, ಸುಲಭವಾಗಿ ಸೋಂಕು ಉಂಟಾಗುತ್ತದೆ. ದೇಹದ ಯಾವ ಭಾಗಕ್ಕಾದರೂ ಗಾಯವಾದಾಗ, ಎಚ್ಚರಿಕೆ ವಹಿಸದಿದ್ದರೆ, ಆ ಭಾಗಕ್ಕೆ ಸೋಂಕು (septic) ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ದೇಹಕ್ಕೆ ಯಾವುದೇ ಗಾಯವಾದಾಗ, ಅದರ ದುರಸ್ತಿ ಮಾಡಲು ಒಂದು ಪ್ರತ್ಯೇಕ ವ್ಯವಸ್ಥೆಯಿದೆ. ಈ ವ್ಯವಸ್ಥೆಯಲ್ಲಿಯೂ ದೋಷವುಂಟಾಗುವುದರಿಂದ, ಮಧುಮೇಹಿಗಳಿಗೆ ಗಾಯವಾದಾಗ ಅದು ಬೇಗನೇ ಗುಣವಾಗದಿರಬಹುದು.
g. ಮಧುಮೇಹದಲ್ಲುಂಟಾಗಬಹುದಾದ ಇನ್ನೊಂದು ಬಹು ಮುಖ್ಯವಾದ ಪ್ರಮಾದವೆಂದರೆ ಡಯಾಬಿಟಿಕ್ ಕೀಟೋ ಅಸಿಡೋಸಿಸ್ (diabetic ketoacidosis). ಇದು ಸಾಮಾನ್ಯವಾಗಿ ಟೈಪ್ ೧ ಮಧುಮೇಹಿಗಳಲ್ಲಿ ಮತ್ತು ತೀವ್ರವಾದ ಟೈಪ್ ೨ ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಾನಾಗಲೇ ಹೇಳಿದಂತೆ, ನಮ್ಮ ದೇಹದ ವಿವಿಧ ಕಾರ್ಯಗಳಿಗಾಗಿ ಬೇಕಾದ ಶಕ್ತಿ ದೊರೆಯುವುದು ಸಕ್ಕರೆಯಿಂದ. ಆದರೆ, ಮಧುಮೇಹಿಗಳಲ್ಲಿ, ಸಕ್ಕರೆಯನ್ನು ಶಕ್ತಿಗಾಗಿ ಬಳಸಿಕೊಳ್ಳುವ ವ್ಯವಸ್ಥೆಯಲ್ಲಿ ದೋಷವಿರುವುದರಿಂದ, ದೇಹವು ಶಕ್ತಿಯನ್ನು ಬೇರೆ ಮೂಲಗಳಿಂದ ಪಡೆಯಬೇಕಾಗುತ್ತದೆ. ಕೊಬ್ಬಿನ ಅಂಶಗಳಿಂದ ಶಕ್ತಿಪಡೆದುಕೊಳ್ಳುವ ಸಂದರ್ಭದಲ್ಲಿ, ಕೊಬ್ಬಿನ ಅಂಶಗಳು ಸಂಪೂರ್ಣವಾಗಿ ವಿಭಜನೆಯಾಗದೇ, ಕೀಟೋನ್ ಗಳೆಂಬ ರಸಾಯನಿಕ ವಸ್ತುಗಳು ಉಂಟಾಗುತ್ತವೆ. ಈ ಕೀಟೋನ್ ಗಳು ರಕ್ತದ ಆಮ್ಲತೆಯನ್ನು ಹೆಚ್ಚಿಸಿ ಅಸಿಡೋಸಿಸ್ ಎಂಬ ದುಷ್ಪರಿಣಾಮವುಂಟಾಗುತ್ತದೆ. (ನಾವು ಸಾಮಾನ್ಯವಾಗಿ ಬಳಸುವ ಆಸಿಡಿಟಿ ಎಂಬ ಸ್ಥಿತಿಯೇ ಬೇರೆ, ಇದೇ ಬೇರೆ ಸ್ಥಿತಿ. ಆಸಿಡಿಟಿ ಎಂಬುದು ಜಠರದಲ್ಲಿ ಹೆಚ್ಚಿದ ಆಮ್ಲತೆಯನ್ನು ಸೂಚಿಸುವ ಸ್ಥಿತಿ. ಇದೇನೂ ಅಂತಹ ಪ್ರಮಾದಕಾರಿಯಾದ ಪರಿಸ್ಥಿತಿಯಲ್ಲ. ಆದರೆ ರಕ್ತದ ಆಮ್ಲತೆ ಹೆಚ್ಚಾದ ಸ್ಥಿತಿಯನ್ನು ಸೂಚಿಸುವ ಅಸಿಡೋಸಿಸ್ ಎಂಬ ಪರಿಸ್ಥಿತಿ ಬಹಳ ಪ್ರಮಾದಕಾರಿಯಾದ ಪರಿಸ್ಥಿತಿ). ಈ ಅವಸ್ಥೆಯಲ್ಲಿ ರೋಗಿಯ ಅರಿವು ಕ್ರಮೇಣ ಕಡಿಮೆಯಾಗಿ ಪ್ರಜ್ಞಾಹೀನ ಸ್ಥಿತಿ ( diabetic coma) ಉಂಟಾಗಬಹುದು.
h. ನಮ್ಮ ದೇಹದ ನರವ್ಯೂಹದಲ್ಲಿ (nervous system) ಎರಡು ಬಗೆಯ ನರಗಳಿವೆ. ನಮ್ಮ ಐಚ್ಛಿಕ ಕ್ರಿಯೆಗಳನ್ನು ನೆರವೇರಿಸುವಂತಹ ಒಂದು ಬಗೆಯ ನರಗಳು (voluntary motor system) ಮತ್ತು ಹೃದಯದ, ಶ್ವಾಸಕೋಶಗಳ ಕ್ರಿಯೆಗಳಂತಹ ಅನೈಚ್ಛಿಕ ಕ್ರಿಯೆಗಳನ್ನು ನೆರವೇರಿಸುವಂತಗ ಇನ್ನೊಂದು ಬಗೆಯ ನರಗಳು. ಮಧುಮೇಹದಿಂದ ಇವೆರಡೂ ಬಗೆಯ ನರಗಳಿಗೆ ಹಾನಿ ಸಂಭವಿಸಬಹುದು. ಮೊದಲನೆಯ ಬಗೆಯದಕ್ಕೆ ಪೆರಿಫೆರಲ್ ನ್ಯೂರೋಪಥಿ (peripheral neuropathy) ಮತ್ತು ಎರಡನೆಯ ಬಗೆಗೆ (autonomic neuropathy) ಎನ್ನುತ್ತಾರೆ. ಎರಡಕ್ಕೂ ಒಟ್ಟಾಗಿಯೇ ಡಯಾಬೆಟಿಕ್ ನ್ಯೂರೋಪಥಿ (diabetic neuropathy) ಎನ್ನುತ್ತಾರೆ.
ಸಾಲುಗಳು
- Add new comment
- 1016 views
ಅನಿಸಿಕೆಗಳು
ಮಾನ್ಯರೇ, ಮಧುಮೇಹಿಗಳಿಗೆ,
ಮಾನ್ಯರೇ, ಮಧುಮೇಹಿಗಳಿಗೆ, ಇಷ್ಟೆಲ್ಲ ತೊಂದರೆಗಳು ಉದ್ಬವಿಸುತ್ತವೆ ಎಂಬುದು ಅರಿವಿರಲಿಲ್ಲ. ಈ ರೋಗ ಒಂದು ಮಾರಣಾಂತಿಕ ಎಂಬುದು ತಿಳಿದುಬರುತ್ತದೆ. ಸಾಮಾನ್ಯವಾಗಿ, ಸಕ್ಕರೆ ಖಾಯಿಲೆ ಬಂದರೆ, ಸಕ್ಕರೆ ತಿನ್ನಬಾರದು, ಸಿಹಿ ತಿನ್ನಬಾರದು, ಅನ್ನ ತಿನ್ನಬಾರದು ಎಂಬುದಷ್ಟೆ ರೋಗಿಗಳು ಅನುಸರಿಸುವ ಪಥ್ಯದ ಕ್ರಮ. ಆದರೆ ಸಕ್ಕರೆ ತಿಂದರೂ ಕಷ್ಟ, ಬಿಟ್ಟರೂ ಕಷ್ಟ. ನಿಮ್ಮ ಲೇಖನದಿಂದ ಓದುಗರ ಅದರಲ್ಲೂ ಮುಖ್ಯವಾಗಿ ಮಧುಮೇಹಿಗಳಿಗೆ ಸಾಕಷ್ಟು ಅನುಕೂಲವಾಗಿದೆ.
ಸಾಮಾನ್ಯವಾಗಿ, ಎಷ್ಟು ಹಣಕೊಟ್ಟರೂ ಇಷ್ಟೆಲ್ಲಾ ಮಾಹಿತಿ ಸಿಗುವುದಿಲ್ಲ. ಒಬ್ಬ ನುರಿತ ವೈದ್ಯರಾದ ತಾವು ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಯಾವುದೇ ಸೂಚನೆ ಇಲ್ಲದೆ ಕೊಲ್ಲುವ ಮಧುಮೇಹ ರೋಗದ ಬಗ್ಗೆ ಅಮುಲ್ಯವಾದ ಲೇಖನವನ್ನು ಇಷ್ಟೊಂದು ವಿವರವಾಗಿ, ಅದರಲ್ಲೂ ಉಚಿತವಾಗಿ ಲೇಖನ ಬರೆಯುತ್ತಿರುವ ನಿಮಗೆ ನಮ್ಮ ಧನ್ಯವಾದಗಳು.
ಶ್ರೀ ನಂಜುಂಡ ರಾಜುರವರೆ, ತಮ್ಮ
ಶ್ರೀ ನಂಜುಂಡ ರಾಜುರವರೆ,ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. ನಿಮ್ಮಂತಹವರ ಪ್ರೋತ್ಸಾಹಕರ ಪ್ರತಿಕ್ರಿಯೆಗಳೇ ನಾನು ಬಯಸುವ ಬಹಳ ದೊಡ್ಡ ಪ್ರತಿಫಲ.ವಂದನೆಗಳು