Skip to main content

ನಾನು ನನ್ನ ಜಗತ್ತನ್ನು ವಿಸ್ತರಿಸಿಕೊಂಡ ಬಗೆ

ಬರೆದಿದ್ದುDecember 17, 2009
15ಅನಿಸಿಕೆಗಳು

ಇರುವೆ ಸರಿಯುವ ಸದ್ದು
ಮೊಗ್ಗು ಅರಳುವ ಸದ್ದು
ಮಂಜು ಕರಗುವ ಸದ್ದು
ಕೇಳಿದೇನೆ ಸಖೀ
(ಭಾವ ಗೀತೆಯೊಂದರ ತುಣುಕು )

ಹೊಳೆದಂಡೆಯಲ್ಲಿ ಕುಳಿತಿದ್ದೆ. ಶೃಂಗೇರಿಗೆ ಹೋದಾಗಲೆಲ್ಲಾ ಇದೊಂದು ಅಭ್ಯಾಸ. ಚುಮು ಚುಮು ಬೆಳಗಿನಲ್ಲಾದರೂ ಸರಿ. ನೆತ್ತಿ ಸುಡುವ ಮಧ್ಯಾಹ್ನದಲ್ಲಾದರೂ ಸರಿ, ಹೊನ್ನು ಸುರಿಯುವ ಸಂಜೆಯಲ್ಲಾದರೂ ಸರಿ. ಒಂದಷ್ಟು ಹೊತ್ತು ಹೊಳೆಯ ನೀರಿನಲ್ಲಿ ಕಾಲಾಡಿಸಿದರೇನೆ ಸಮಾಧಾನ. ನನಗೂ ಹೊಳೆಗೂ ಇರುವ ಸಂಬಂಧ ನೆನಸಿಕೊಂಡರೆ ಅಚ್ಚರಿಯಾಗುತ್ತದೆ. ಹೊಳೆಯನ್ನು ನೋಡಿದಾಗೆಲ್ಲಾ ಯಾಕೋ ಏನೋ? ಮನಸ್ಸು ಒಮ್ಮೆ ತುಯ್ದಾಡುತ್ತದೆ. ಒಮ್ಮೆ ಸಂತೋಷದಿಂದ ಉಬ್ಬಿದರೆ ಮತ್ತೊಮ್ಮೆ ವಿನಾಕಾರಣ ಖಿನ್ನತೆಗೊಳಗಾಗುತ್ತದೆ.

ಆದರೆ

ಈಗಿದ್ದ ಸ್ಥಿತಿ ಎಲ್ಲದಕ್ಕಿಂತಾ ಭಿನ್ನವಾಗಿತ್ತು. ಯಾಕೋ ಮನಸ್ಸು ಪಾರಮಾರ್ಥಿಕದೆಡೆಗೆ, ಅಲೌಕಿಕದೆಡೆಗೆ, ಅಧಾತ್ಮದೆಡೆಗೆ ತುಡಿಯುತ್ತಿತ್ತು. ನನಗೆ ಒಮ್ಮೆ ನನ್ನ ಮೇಲೇ ಸಿಟ್ಟು ಬಂತು. ಥತ್ ಇಂತಾ ವಯಸ್ಸಿನಲ್ಲೆಂತದು ಈ ಭವರೋಗ? ಇದು ಉಪಾಯ ವೇದಾಂತವೇ? ಅಥವಾ ಪಲಾಯನವಾದವೇ?
ನನ್ನಲ್ಲಿದ್ದುದ್ದು ಬರೀ ಪ್ರಶ್ನೆಗಳು ಮಾತ್ರ ಉತ್ತರಗಳಲ್ಲ

ಮನಸ್ಸಿನ ಆಲೋಚನೆ ಹಾಗೆ ಮುಂದುವರೆಯಿತು. ನನ್ನ ಪ್ರಕಾರ ದೇವರು ಹಾಗೂ ಪ್ರಕೃತಿ ಬೇರೆಬೇರೆಯೇನಲ್ಲ. ಇಲ್ಲಿ ಕಾಣುತ್ತಿರುವ ನೀರನ್ನು ಗಂಗೇಚ ಯಮುನೇ ಚೈವ ಎಂದು ಪೂಜಿಸುತ್ತೇವೆ. ಅಲ್ಲೆಲ್ಲಾ ಕಾಣುತ್ತಿರುವ ಮರಗಳನ್ನು ಮೂಲತೋ ಬ್ರಹ್ಮ ರೂಪಾಯ ಎಂದು ಪೂಜಿಸುತ್ತೇವೆ. ಹಾಗೇ ಸೂರ್ಯ, ಚಂದ್ರ, ನಕ್ಷತ್ರ, ಈ ಕಲ್ಲು , ಮಣ್ಣು ಯಾವುದೂ ನಮ್ಮ ಪೂಜೆಯಿಂದ ಉಪಾಸನೆಯಿಂದ, ಆರಾಧನೆಯಿಂದ ಹೊರತಾಗಿಲ್ಲ. ಅಂದರೆ ಈ ಪ್ರಕೃತಿಯ ಒಂದು ಭಾಗವೇ ಆಗಿರುವ ನಾವು ಕೂಡ ದೈವ ಸ್ವರೂಪವೇ?

"ಹೌದು. ನೀನೂ ಕೂಡ ದೈವ ಸ್ವರೂಪ"
ಒಮ್ಮೆ ದಿಗ್ಭ್ರಮೆಯಾಯಿತು ನನ್ನ ಮನಸ್ಸಿನ ಪ್ರಶ್ನೆಗೆ ಉತ್ತರಿಸಿದ್ದು ಯಾರು? ಸುತ್ತ ಮುತ್ತಲೆಲ್ಲಾ ನೋಡಿದೆ ಯಾರೂ ಕಾಣಿಸಲಿಲ್ಲ. ಮತ್ತೊಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದೆ. ಇಲ್ಲಿ ನನ್ನನ್ನು ಹೊರತು ಇನ್ನೊಂದು ನರಪಿಳ್ಳೆಯಿಲ್ಲ. ಹಾಗಾದರೆ ಉತ್ತರ ಬಂದಿದ್ದು ಮತ್ತೆಲ್ಲಿಂದ. ಈ ಬಂಡೆಕಲ್ಲುಗಳಿಂದಲೇ, ಈ ಜುಳು ಜುಳು ನೀರಿನಿಂದಲೇ, ಅಥವಾ ಮರಗಿಡಗಳಿಂದಲೇ ಅಥವಾ ಇದೆಲ್ಲಾ ನನ್ನ ಮನೋಜನ್ಯ ಭ್ರಾಂತಿಯೇ? ಈಗಲೇ ಸಾಕಷ್ಟು ಹೊತ್ತಾಗಿದೆ. ಹೊರಟು ಬಿಡೋಣ ಎಂದು ಕೊಂಡರೂ, ಯಾಕೋ ಕಾಲು ಹೊರಳಲಿಲ್ಲ.
ಸರಿ ಮತ್ತೆ ಒಂದು ಪ್ರಶ್ನೆ ಹಾಕಿಕೊಂಡೆ
"ನಾನು ಕೂಡ ದೈವ ಸ್ವರೂಪವಾದರೆ ನನಗೇಕೆ ಈ ಲೌಕಿಕ ಗುಣಗಳಾದ ಚಿಂತೆ, ಖಿನ್ನತೆಗಳು ಭಾಧಿಸುತ್ತವೆ?"
ಕೂಡಲೇ ಉತ್ತರ ಬಂತು
" ಈ ಹೊಳೆಯ ಮೇಲೆ ಒಂದು ಕಲ್ಲು ಎಸೆ"
ತಕ್ಷಣ ಎಸೆದೆ
"ಏನಾಯಿತು"
"ತರಂಗಗಳೆದ್ದವು, ನೀರು ಕ್ಷಣಕಾಲ ರಾಡಿಯಾಯಿತು, ಆಮೇಲೆ ಗುಳುಂ ಎಂಬ ಶಬ್ಧ ಬಂತು"
" ಹೌದಲ್ಲವೇ? ಈಗ ಹೇಳು ನಿನ್ನ ಪ್ರಕಾರ ದೈವ ಸ್ವರೂಪಿಯಾಗಿದ್ದ ಹೊಳೆ ಕೂಡ ಒಂದು ಕ್ಷಣ ತನ್ನ ಸಹಜತೆ ಬಿಟ್ಟು ನಡೆದುಕೊಂಡಿದೆ.ಯಾಕೆಂದರೆ ಯಾರೋ ಒಮ್ಮೆ ಎಸೆದ ಕಲ್ಲು ಅದರ ಸಹಜತೆ ಅಡ್ಡಿ ಉಂಟು ಮಾಡಿತು, ಆದರೆ ನೆನಪಿರಲಿ ಆ ಚಿತ್ತಭಂಗುರ ಕ್ಷಣಿಕ, ಸಹಜತೆ ಶಾಶ್ವತ"

" ಇರಬಹುದು, ಆದರೆ ನನ್ನ ವಿಷಯ?"
" ಒಂದು ಕ್ಷಣ ನಿನ್ನನ್ನು ನೀನೇ ಹೊಳೆ ಎಂದು ತಿಳಿದುಕೋ"

ಒಮ್ಮೆಗೇ ದಿಘ್ಮೂಢನಾದೆ. ಅರೇ ಇಷ್ಟು ಸಹಜವಾದ ಉತ್ತರವೇ? ಈ ಅಶರೀರವಾಣಿ ನನ್ನ ಒಳಗು ಹೊರಗೆನ್ನೆಲ್ಲಾ ತಿಳಿದುಕೊಂಡು ಬಿಟ್ಟಿದೆ. ಅಷ್ಟೇ ಅಲ್ಲ ಅದಕ್ಕೆ ಇನ್ನೂ ಏನೇನೋ ವಿಷಯಗಳು ತಿಳಿದಿವೆ.
ಹೊಳೆ ನೀರು ಒಮ್ಮೆ ಕಿಲಕಿಲನೆ ನಕ್ಕಂತಾಯಿತು. ಮತ್ತೆ ನನ್ನ ಪ್ರಶ್ನೆ ಮುಂದುವರೆಸಿದೆ.

"ನೀನು ಯಾರು"
"ನೀನು ಯಾರಾಗಿದ್ದೀಯೋ ನಾನು ಕೂಡ ಅದೇ ಆಗಿದ್ದೇನೆ"
"ಅಂದರೆ"
" ಈ ಜಗತ್ತಿನಿ ಎಲ್ಲಾ ಸರ್ವ ಚರಾಚರ ವಸ್ತುಗಳೂ ಒಂದೇ ಕೈಯಿಂದ ಬರೆಯಲ್ಪಟ್ಟಿದೆ. ನಿನ್ನನ್ನು ಸೃಷ್ಟಿಸಿದ ಕೈಗಳೇ ನನ್ನನ್ನೂ ಸೃಷ್ಟಿಸಿದೆ. ಆಲೋಚನಾ ಶಕ್ತಿ ಹೊಂದಿರುವ ಜೀವಿಯಾದ ನಿನಗೆ ಇದಕ್ಕಿಂತಾ ಹೆಚ್ಚು ವಿವರಿಸಲಾರೆ"
" ಸರಿ, ಆಯಿತು ಬಿಡು, ಹೊಳೆಗೆ ಎಸೆದ ಕಲ್ಲಿನಂತೆ ಮನಸ್ಸಿಗೆ ಎಸೆದ ಚಿಂತೆಗಳು ತೊಂದರೆ ಕೊಡುತ್ತವೆ ಎಂದೆಯಲ್ಲಾ, ಮನಸ್ಸಿಗೆ ಕಲ್ಲು ಎಸೆಯುವವರು ಯಾರು?"
"ನೀನೇ"
"ಹ್ಹಾಂ ನಾನೆ?" ಅಚ್ಚರಿಯಿಂದ ನಾನು ಕೇಳಿದೆ.
"ಹೌದು, ನಿನ್ನ ಚಿಂತೆಗಳೇನೆಂದು ನನಗೆ ತಿಳಿದಿದೆ" ಎಂದು ಅದು ಉತ್ತರಿಸಿತು
" ಹೌದೇ, ಹೇಳು ನೋಡೋಣ" ಎಂದು ನಸುನಗುತ್ತಾ ಸವಾಲು ಹಾಕಿದೆ.
ಅದು ಉತ್ತರಿಸಿತು " ಇಲ್ಲಿಂದ ಸ್ವಲ್ಪ ದೂರದಲ್ಲೇ ಸೀತಾ ಎಂಬ ನದಿ ಹರಿಯುತ್ತದೆ, ಹೆಚ್ಚೇನೂ ಅಲ್ಲ ಕೆಲವೇ ಕೂಗಳತೆಗಳ ದೂರದಲ್ಲಿ. ನಿನ್ನ ಎದುರಲ್ಲೇ ತುಂಗಾ ನದಿ ಹರಿಯುತ್ತಿದೆ. ಈ ಎರಡೂ ನದಿಗಳು ಇರುವ ಸ್ಥಳದಲ್ಲಿ ಒಂದೇ ರೀತಿಯ ಮಳೆ ಬೀಳುತ್ತದೆ ಅಲ್ಲವೇ? ಆದರೂ ಸೀತಾ ಸಣ್ಣವಳು, ತುಂಗಾ ದೊಡ್ಡವಳು ಯಾಕೆ ಗೊತ್ತಾ?

"ಗೊತ್ತು" ನಾನು ಉತ್ತರಿಸಲು ಶುರು ಮಾಡಿದೆ " ಯಾಕೆಂದರೆ, ಸೀತೆಯ ಪಾತ್ರ ತುಂಬಾ ಚಿಕ್ಕದು, ಹೆಚ್ಚು ನೀರನ್ನು ಅವಳು ಹಿಡಿದಿಟ್ಟು ಕೊಳ್ಳಲಾರಳು. ಆದರೆ ತುಂಗೆಯ ಪಾತ್ರ ದೊಡ್ಡದು ಅವಳಲ್ಲಿ ಹೆಚ್ಚು ನೀರು ತುಂಬಬಹುದು. ಅಲ್ಲವೇ ?"

" ಹೌದು, ಖಂಡಿತಾ ನಿನ್ನ ಮಾತು ನಿಜ. ಹಾಗೆಯೇ ನಿನಗೂ ಒಂದು ಪಾತ್ರವಿದೆ ಎಂದು ಮರೆಯಬೇಡ. ಆದ್ದರಿಂದಲೇ ನಿನ್ನ ಮಹತ್ವಾಕಾಂಕ್ಷೆಗಳು, ಹೆಚ್ಚು ಗಳಿಸಬೇಕೆಂಬ ಕನಸು ಎಲ್ಲಾ ಪಾತ್ರದ ಹೊರಗೆ ಚೆಲ್ಲಿ ಹೋಗುತ್ತದೆ." ಅದು ಉತ್ತರಿಸಿತು

" ಅರೇ. ಎಷ್ಟು ನಿಜವಲ್ಲವೇ ನಿನ್ನ ಮಾತು? ಅಂದರೇ ನಾನು ಸಾಯುವವರೆಗೂ ಹೀಗೇ ಇರಬೇಕೆ? ಕನಸೇ ಕಾಣಬಾರದೇ ?" ನಾನು ಪ್ರಶ್ನಿಸಿದೆ
"ಕನಸು ಕಾಣಬಹುದು ಅದು ನಿನ್ನ ಸಹಜ ಗುಣ ಮತ್ತು ಕರ್ತವ್ಯ ಕೂಡಾ , ಆದರೆ ಅದನ್ನು ನನಸು ಮಾಡಿಕೊಳ್ಳಬೇಕೆಂದರೆ ನಿನ್ನ ಪಾತ್ರತ್ವವನ್ನು ದೊಡ್ಡ ಮಾಡಿಕೊಳ್ಳಬೇಕು" ಅದು ಉತ್ತರಿಸಿತು
" ಅದು ಹೇಗೆ?" ನಾನು ಮರು ಪ್ರಶ್ನಿಸಿದೆ
" ಈ ತುಂಗೆಯನ್ನೊಮ್ಮೆ ನೋಡು. ಸಹಸ್ರಾರು ವರ್ಷಗಳ ಹಿಂದೆ ಇವಳು ಕೇವಲ ಒಂದು ತೊರೆಯಾಗಿದ್ದಳು. ಒಂದು ದಿನ ಅವಳು ತನ್ನ ಪಾತ್ರವನ್ನು ದೊಡ್ಡದು ಮಾಡಿಕೊಳ್ಳಲು ನಿರ್ಧರಿಸಿದಳು. ಅಂದಿನಿಂದ ಅವಳು ತನಗೆ ಅಡ್ಡಬರುವ ಪ್ರತಿಯೊಂದು ಮರ, ಬಂಡೆಗಳನ್ನು ದಾಟಲು ಶುರುಮಾಡಿದಳು. ಮಳೆಗಾಲ ಬಂದು ತುಂಬಿದಾಗ ಹರಿಯುವುದನ್ನು ನಿಲ್ಲಿಸಲಿಲ್ಲ. ಹಾಗೇ ಬೇಸಿಗೆ ಬಂದು ಬತ್ತಿದಾಗ ಕೂಡ.
ತನನ್ನು ಆಶ್ರಯ ಕೋರಿ ಬಂದ ಯಾವ ಚರಾಚರವಸ್ತುಗಳನ್ನೂ ಅವಳು ನಿರಾಕರಿಸಲಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ , ಅವಳ ಕರ್ತವ್ಯವನ್ನು ಅವಳು ಶ್ರದ್ದೆಯಿಂದ ಮಾಡಿದಳು." ಅದು ಉತ್ತರಿಸಿತು

ತುಂಗೆ ಒಮ್ಮೆ ಕಲ್ಲುಗಳಿಗೆ ಬಡಿದು ಹೆಮ್ಮೆಯಿಂದ ಗಲಗಲನೆ ನಕ್ಕಂತಾಯಿತು

" ಓಹೋ! ಹಾಗಾದರೆ ನಾನೂ ಕೂಡ ಮೊದಲು ಬೆಳೆಯಲು ನಿರ್ಧರಿಸಬೇಕು. ಆಮೇಲೆ ಅಡ್ಡ ಬರುವ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಸ್ವಯಂಶಕ್ತಿಯಿಂದ ದಾಟಬೇಕು. ಅವಕಾಶಗಳು ಬಂದಾಗ ಹಿಗ್ಗಿ, ಬೆಳೆಯುವುದನ್ನು ನಿಲ್ಲಿಸಬಾರದು, ಹಾಗೇ ಕಷ್ಟ ಬಂದಾಗ ಮುನ್ನುಗ್ಗುವದನ್ನು ಬಿಡಬಾರದು. ಎಲ್ಲರಿಗೂ ಸಹಾಯ ಮಾಡಬೇಕು. ಜೊತೆಗೆ ನನ್ನ ಕರ್ತವ್ಯವನ್ನು ಶ್ರದ್ದೆಯಿಂದ ಮಾಡಬೇಕು. ಅಲ್ಲವೇ?" ಕೇಳಿದೆ

" ಜಾಣ ನೀನು. ತಿಳಿಸಿ ಹೇಳಿದರೆ ಅರ್ಥ ಮಾಡಿ ಕೊಳ್ಳುತ್ತೀಯಾ." ಅದು ಉತ್ತರಿಸಿತು
" ಸರಿ, ನನಗ್ಯಾಕೋ ಇತ್ತೀಚೆಗೆ ಒಂಟಿತನ ಕಾಡುತ್ತಿದೆ. ಈ ಪ್ರಪಂಚದಲ್ಲಿ ನನ್ನನ್ನು ಮನಸಾರೆ ಪ್ರೀತಿಸುವವರು ಯಾರೂ ಇಲ್ಲ ಎಂಬ ಭಾವ ಉಂಟಾಗುತ್ತಿದೆ, ಇದಕ್ಕೇನು ಮಾಡಲಿ?

ಅದು ಒಮ್ಮೆ ಮೆಲುವಾಗಿ ನಕ್ಕಿತು. ತಂಗಾಳಿಯೊಂದು ಹಿತವಾಗಿ ನನ್ನ ಮೈ ಸೋಕಿ ಹೋಯಿತು. ದೂರದಲ್ಲೆಲ್ಲೋ ಯಾವುದೋ ಅನಾಮಿಕ ಹಕ್ಕಿಯೊಂದು ಮಧುರವಾಗಿ ಹಾಡಿತು

" ನಿನಗೆ ಬೇಸರವಿಲ್ಲದಿದ್ದರೆ ಮತ್ತೆ ಇದೇ ತುಂಗೆಯನ್ನು ಉದಾಹರಣೆಯಾಗಿ ಕೊಡಲೇ?" ಅದು ಕೇಳಿತು
" ಪರವಾಗಿಲ್ಲ" ನಾನು ಉತ್ತರಿಸಿದೆ
ಅದು ಮುಂದುವರೆಸಿತು " ಈ ತುಂಗೆಯನ್ನೊಮ್ಮೆ ನೋಡು. ಅದರ ಪಾತ್ರಗಳೆಲ್ಲಾ ಗಮನಿಸು. ಎಷ್ಟು ಸಮೃದ್ದವಾಗಿವಾಗಿ ಮಾಡಿದ್ದಾಳೆ ಭೂಮಿಯನ್ನು. ಎಷ್ಟು ಜನರನ್ನು ಪೊರೆಯುತ್ತಿದ್ದಾಳೆ. ಎಷ್ಟು ಜೀವಜಾಲಗಳು ಇವಳನ್ನೆ ನಂಬಿಕೊಂಡಿವೆ"
"ಹೌದಲ್ಲವೇ" ನಾನು ಉತ್ತರಿಸಿದೆ
" ಹೂಂ, ಅಷ್ಟೇ ಅಲ್ಲ. ಆ ಜೀವಗಳೂ ಕೂಡ ಇವಳನ್ನೇ ಪ್ರೀತಿಸುತ್ತವೆ ಮತ್ತು ಪೂಜಿಸುತ್ತವೆ. ಹಾಗೆಂದು ತನಗೆ ತೊಂದರೆ ಕೊಟ್ಟವರ ಮೇಲೆ ಇವಳು ಕೋಪಗೊಂಡಿಲ್ಲ.

" ಅದಕ್ಕೆ?"

"ನೀನೂ ಅಷ್ಟೆ. ಫಲಾಪೇಕ್ಷೆಯಿಲ್ಲದೆ, ನಿಷ್ಪಕ್ಷಪಾತವಾಗಿ ನಾಲ್ಕು ಜನಕ್ಕೆ ಉಪಕಾರವಾಗುವ ಹಾಗೆ ಬದುಕಿದರೆ ಎಲ್ಲರೂ ನಿನ್ನನ್ನು ಪ್ರೀತಿಸುತ್ತಾರೆ"

ಮನಸ್ಸು ಯಾಕೋ ಮೌನವಾಯಿತು.ಛೇ ಎಂಥಾ ಸ್ವಾರ್ಥದ ಸುಳಿಯಲ್ಲಿ ನಾನಿಷ್ಟು ದಿನ ಸಿಲುಕಿದ್ದೆ. ಹೀಗೇ ಬದುಕಿದರೆ ನಾನು ಬದುಕಿರುವುದಕ್ಕೆ ಅರ್ಥವಾದರೂ ಏನು?

ಮತ್ತೆ ಅದೇ ಮುಂದುವರೆಸಿತ " ಚಿಂತಿಸಬೇಡ, ಈಗಲೂ ಕಾಲ ಮಿಂಚಿಲ್ಲ. ನಿನ್ನ ಜೀವನದ ಕೊನೆಯ ಕ್ಷಣದವರೆಗೂ ನೀನು ಬದಲಾಗಲು ಪ್ರಯತ್ನ ಪಡಬಹುದು"

ನಾನು ಕೇಳಿದೆ " ಗುರುವಿನಂತೆ,ತಾಯಿಯಂತೆ, ಮಿತ್ರನಂತೆ ನನ್ನನ್ನು ಸಂತೈಸಿದ ನೀನು ನಿಜಕ್ಕೂ ಯಾರು? ಒಮ್ಮೆ ನಾನು ನಿನ್ನನ್ನು ನೋಡಬಹುದೇ?" ನನ್ನ ದ್ವನಿ ಆರ್ದ್ರವಾಗಿತ್ತು
"ನೋಡಲೇಬೇಕೇನು" ಆ ದನಿ ನಸುನಗುತ್ತಾ ಕೇಳಿತು
" ಒಂದೇ ಒಂದು ಸಾರಿ, ದಯವಿಟ್ಟು" ನಾನು ಬೇಡಿಕೊಂಡೇ

"ಹಾಗದರೆ ಒಮ್ಮೆ ನೀನು ಕುಳಿತಿರುವ ಜಾಗದಲ್ಲೇ ಬಗ್ಗಿ ನೋಡು" ಆ ದ್ವನಿ ದಯೆತೋರಿತು

ಕುತೂಹಲದಿಂದ ಬಗ್ಗಿ ನೋಡಿದಾಗ

ಸಂಜೆಯ ಕೆಂಪಾದ ಸೂರ್ಯನ ಕಿರಣಗಳು ತುಂಗೆಯ ಮೈತಬ್ಬಿದಾಗ ತುಂಗಾ ರಕ್ತವರ್ಣ ತಾಳಿ ಅವಳ ಜುಳು ಜುಳು ಕಲರವದಲ್ಲಿ, ಆ ಶುದ್ದ ಸ್ಪಟಿಕ ಜಲದಲ್ಲಿ ನನ್ನ ಅಸ್ಪಷ್ಟ ಪ್ರತಿಬಿಂಬ ನನಗೆ ಗೋಚರವಾಗಿ ಮಾಯವಾಯಿತು

ನನ್ನ ಮನಸ್ಸು ಹಗುರಾಗಿತ್ತು. ನನ್ನ ಜಗತ್ತು ವಿಸ್ತಾರವಾಗಿತ್ತು.

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ವಿನಯ್_ಜಿ ಗುರು, 12/17/2009 - 17:35

ನಿಮ್ಮ ಮತ್ತು ನಿಮ್ಮ ಪ್ರತಿಬಿಂಬದ ನಡುವೆ ನೆಡೆದ "ಅಪ್ತ ಸಮಾಲೋಚನೆ" ಓದಿ ಮೆಚ್ಚುಗೆಯಾಯಿತು... :) ಒಂದು ಒಳ್ಳೆಯ ಪ್ರಯತ್ನ...

ಉಮಾಶಂಕರ ಬಿ.ಎಸ್ ಗುರು, 12/17/2009 - 20:45

ಮನ-ಮನಗಳ ಜಗತ್ತಿನ ತಾಕಲಾಟವೇ ಹುಣ್ಣಿಮೆ 'ಚಂದ್ರ'ನಷ್ಟೇ ಚೆನ್ನ....

ಎಚ್.ಎಸ್. ಪ್ರಭಾಕರ ಶುಕ್ರ, 12/18/2009 - 01:42

`ಜೀವ ನದಿ'ಯ ಆತ್ಮ ನಿವೇದನೆ ತುಂಬಾ ಮಾರ್ಮಿಕವಾಗಿದೆ ಬಾಲು. ಆದರೆ, ವಿಸ್ಮಯವೇನೆಂದರೆ ಇಂತಹ ಆತ್ಮಾವಲೋಕನ ಜಗತ್ತಿನ ಪ್ರತಿಯೊಂದು ಮಾನವ ಜೀವಿಗೂ ಸಾಧ್ಯವಿಲ್ಲ! ಇದು ಯಾರಿಗೆ ಇರುತ್ತದೆ ಮತ್ತು ಯಾರಿಗೆ ಇರುವುದಿಲ್ಲ ಎಂದು ಒಮ್ಮೆ ಯೋಚಿಸಿ!? ಅದಕ್ಕೆ ಪೂರ್ವಭಾವಿಯಾಗಿ `ಸಂಸ್ಕಾರ' ಎಂಬುದೊಂದು ಇರಲೇಬೇಕು. ಇದನ್ನೇ ಡಿವಿಜಿ ಅವರು ಮಾರ್ಮಿಕವಾಗಿ ತಮ್ಮ ಕಗ್ಗದಲ್ಲಿ `...ಸೂರ್ಯ ಚಂದ್ರರು ಉದಯಿಸುವಾಗ ಶಂಖ ಜಾಗಟೆಗಳಿಲ್ಲ; ಬೀಜ ಮೊಳಕೆಯೊಡೆಯುವಾಗ ತುತ್ತೂರಿ ದನಿಯಿಲ್ಲ.... ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ' ಎಂದು ಹೇಳಿದರು. ಪ್ರತಿ ಮಾನವ ಜೀವಿಯಲ್ಲೂ ಈ ಸಂಸ್ಕಾರ ತುಂಬಲು ಏನು ಮಾಡಬಹುದು!!??

ಬಾಲ ಚಂದ್ರ ಶುಕ್ರ, 12/18/2009 - 10:23

ಧನ್ಯವಾದಗಳು ವಿನಯ್, ಉಮಾಶಂಕರ್

ಪ್ರೀತಿಯ ಪ್ರಭಾಕರ್ ಸರ್,
ತುಂಬಾ ಸೂಕ್ಷ್ಮ ದೃಷ್ಟಿಯಿಂದ ಈ ಲೇಖನವನ್ನು ಅವಲೋಕಿಸಿದ್ದೀರಿ.ಸಂಸ್ಕಾರವಂತರಿಗೆ ಮಾತ್ರ ಆತ್ಮಾವಲೋಕನ ಸಾಧ್ಯವೆಂಬ ನಿಮ್ಮ ಮಾತು ನಿಜ.
ಪ್ರಕೃತಿಯ ಮುಂದೆ ಮಾನವನ ಸಣ್ಣತನಗಳೂ,ಅಹಂಕಾರಗಳೂ ಹೊರಬರಲು ಸಾಧ್ಯವಿಲ್ಲ. ಅಲ್ಲಿ ಅವನು ಕೇವಲ ಮೂಕ ಪ್ರೇಕ್ಷಕ ಅಷ್ಟೇ. ನಿಮ್ಮ ಮಂಕುತಿಮ್ಮನ ಕಗ್ಗದ ಉದಾಹರಣೆ ಸಂಪೂರ್ಣ ನನ್ನ ಭಾವಗೀತೆಯ ದ್ವನಿಯನ್ನೇ ಅನುರಣಿಸಿದೆ. ನಿಮ್ಮ ಪುಸ್ತಕ ಪ್ರೀತಿಗೆ ನನ್ನ ನಮನಗಳು.
ಹಾಗೆಯೇ ಪ್ರತಿ ಮಾನವ ಜೀವಿಯಲ್ಲೂ ಈ ಸಂಸ್ಕಾರ ತುಂಬಲು ಏನು ಮಾಡಬಹುದು!!??
ಎಂದು ಪ್ರಶ್ನಿಸಿದ್ದೀರಿ. ಪ್ರತಿಯೊಬ್ಬ ಮಾನವನೂ ಪ್ರಕೃತಿಯ ಮುಂದೆ ಶರಣಾದರೆ ಮಾತ್ರ ಇದು ಸಾಧ್ಯ.
ಪ್ರಕೃತಿ ಪ್ರತಿಯೊಬ್ಬರಿಗೂ ಸಂಸ್ಕಾರ ಕಲಿಸುವ ತಾಯಿಯಲ್ಲವೇ?

ಅಭಿಮಾನಪೂರ್ವಕವಾಗಿ
ಸಸ್ನೇಹ
ಬಾಲ ಚಂದ್ರ

ಎಚ್.ಎಸ್. ಪ್ರಭಾಕರ ಶುಕ್ರ, 12/18/2009 - 17:38

ಪ್ರಿಯ ಬಾಲು, ಇದು ನಾವು ನೀವು ಹೇಳುವಷ್ಟು ಸುಲಭವಾಗಿ ಕಾಣುತ್ತಿಲ್ಲವಲ್ಲಪ್ಪಾ `...ಅವರು ಕಾಡು ಬೆಳೆಸಿದಾರಂತೆ' ಎಂದೋ ಅಥವಾ `ಒಂದು ಗಿಡ ಹಾಕ್ರೀ' ಎಂದರೆ, `ಏನು ಲಾಭ? ಮುಂದೆ ಎಷ್ಟು ಸಿಗಬಹುದು...' ಎಂದು ಬರೀ ಲಾಭ ನಷ್ಟ ಲೆಕ್ಕಹಾಕುವ ಜನರೇ ಶೇ.99 ಇರುವಾಗ...ಅಯ್ಯೋ! ನನಗಂತೂ ಕೇಳಿ ಕೇಳಿ- ಹೇಳಿ ಹೇಳಿ ಸಾಕಾಗಿ ಹೋಗಿದೆಯಪ್ಪ!!
ಇದಕ್ಕೆ ಏನಾದರೊಂದು ಪ್ರಾಕ್ಟಿಕಲ್ ಸಾಲ್ವೇಷನ್ ಬೇಕು.

ಬಾಲ ಚಂದ್ರ ಮಂಗಳ, 12/22/2009 - 13:29

ಪ್ರಭಾಕರ್ ಸರ್,
ಮನುಷ್ಯ ಅಂತರಂಗದಲ್ಲಿ ನಿಸರ್ಗದ ಮಗುವಾದರೆ ಸಾಕು.
ಈ ಲೇಖನದ ಭಾವಾರ್ಥ ಕೂಡ ಅದೇ.
ನೀವು ಹೇಳುತ್ತಿರುವುದು ಸಾಮಾಜಿಕವಾಗಿ ಮಾಡಬಹುದಾದ ಪ್ರಾಕೃತಿಕ ಬದಲಾವಣೆ.
ಆದರೂ ಎರಡೂ ಸಮಸ್ಯೆಗಳಿಗೆ ನನ್ನ ಬಳಿ ಕೆಲವು ಪ್ರಾಕ್ಟಿಕಲ್ ಸಾಲ್ವೇಷನ್ ಗಳುಂಟು. ನಿಮಗೆ ಆಸಕ್ತಿಯಿದ್ದರೆ ಹೇಳುತ್ತೇನೆ.

ಸಸ್ನೇಹ
ಬಾಲ ಚಂದ್ರ

ಎಚ್.ಎಸ್. ಪ್ರಭಾಕರ ಮಂಗಳ, 12/22/2009 - 15:12

ಬಾಲು, ನಾಲ್ಕೈದು ದಿನದಿಂದ ಎಲ್ಲಿ ಹೋಗಿದ್ದಿರಿ? ವಿಸ್ಮಯನಗರಿಯಲ್ಲಿ ನಮ್ಮ ಕೆಲವು ಗೆಳೆಯರು ಕಾಣೆಯಾಗಿರುವಂತೆ ಕಾಣುತ್ತಲ್ಲ!?
ಖಂಡಿತಾ ಆಸಕ್ತಿಯಿದೆಯಪ್ಪಾ! ನಾನೊಬ್ಬ ಪರಿಸರ ವಾದಿಯಾಗಿ ಅವನ್ನು ಜಾರಿತೆ ತರಲು ಪ್ರಯತ್ನಿಸಬೇಕಾಗಿದೆ. ಅದನ್ನೇ ಒಂದು ಲೇಖನ ಮಾಡಿ ಬೇಕಾದರೂ ವಿಸ್ಮಯಕ್ಕೆ ಹಾಕಬಹುದು. ಧನ್ಯವಾದಗಳು

ಬಾಲ ಚಂದ್ರ ಧ, 12/23/2009 - 11:50

ಪ್ರೀತಿಯ ಪ್ರಭಾಕರ್ ಸರ್,
ಸಾಮಾನ್ಯ ವ್ಯಕ್ತಿಯಾದ ನಾನು ಅನುಷ್ಠಾನದಲ್ಲಿ ಬಳುಸುತ್ತಿರುವ ಕೆಲವು ಅಂಶಗಳು. ಇವುಗಳನ್ನು
ಸಾಮಾಜಿಕವಾಗಿ ಪ್ರತಿಯೊಬ್ಬ ಮನುಷ್ಯ ಸಹಜವಾಗಿ ( ಆರೋಗ್ಯವಾಗಿ ಕೂಡ) ಬದುಕಲು ಬದಲಾಯಿಸಿಕೊಳ್ಳಬಹುದಾಗಿದೆ,
1) ವಿಧ್ಯುಚ್ಚಕ್ತಿಯನ್ನು ಮಿತವಾಗಿ ಬಳಸುವುದು.ಟಿವಿ. ವಿದ್ಯುದ್ದೀಪ.ಫ್ಯಾನ್ ಮುಂತಾದವುಗಳನ್ನು ನಾವು ಬಳಸುವಾಗ ಮಾತ್ರ ಚಾಲನೆಯಲ್ಲಿಡುವುದು.

2) ಹತ್ತಿರದ ಸ್ಥಳಗಳಿಗೆ ಹೋಗಬೇಕಾದಾಗ ವಾಹನ ಬಳಸದೇ, ನಡೆದೇ ಹೋಗುವುದು. ದೂರ ಪ್ರಯಾಣಕ್ಕೆ ಸಾಧ್ಯವಾದಷ್ಟೂ ಸಮೂಹ ಸಾರಿಗೆಯನ್ನು ಬಳಸುವುದು.

3) ಕಛೇರಿಯಲ್ಲಿ ಮತ್ತು ಮನೆಯಲ್ಲಿ ಸಾಧ್ಯವಾದಷ್ಟೂ ಕಾಗದದ ಬಳಕೆ ಕಡಿಮೆ ಮಾಡುವುದು.

4) ಪ್ಲಾಸ್ಟಿಕ್ ವಸ್ತುಗಳನ್ನು, ಚೀಲಗಳನ್ನು ಬಳಸದಿರಲು ನಿರ್ಧರಿಸುವುದು. ತರಕಾರಿ ತರಲು, ಅಂಗಡಿಯಿಂದ ಸಣ್ಣ ಪುಟ್ಟ ಸಾಮಾನುಗಳನ್ನು ತರುವಾಗ ಬಟ್ಟೆಯ ಕೈಚೀಲ ಬಳಸುವುದು. ಅಥವಾ ಪರಿಸರ ಸ್ನೇಹಿ ಪ್ಲಾಸ್ಟಿಕ್ ಕೊಡುವಂತೆ ಮಾರಾಟಗಾರರಿಗೆ ತಾಕೀತು ಮಾಡುವುದು.

4) ನಿಮ್ಮ ಮಕ್ಕಳಿಗೆ ಅಥವಾ ನೆರೆ ಹೊರೆಯ ಮಕ್ಕಳಿಗೆ ಪರಿಸರದ ಕುರಿತು ಜಾಗೃತಿ ಮೂಡಿಸುವುದು. (ಕಂಡ ಕಂಡಲ್ಲಿ ಕಸ ಹಾಕದಂತೆ, ಕಾಗದ, ನೀರು, ಮುಂತಾದ ವಸ್ತುಗಳನ್ನು ಪೋಲು ಮಾಡದಂತೆ ತಿಳಿ ಹೇಳುವುದು)

5) ಎಲ್ಲಾದರೂ ಪರಿಸರಕ್ಕೆ ಧಕ್ಕೆ ಬರುವಂತಹ ಕೃತಿಗಳನ್ನು ಕಂಡಾಗ, ನಮ್ಮ ವ್ಯಾಪ್ತಿಯೊಳಗೆ ಪ್ರತಿಭಟಿಸುವುದು.

6) ನಿಮ್ಮ ವಾಹನಗಳನ್ನು ಸದಾ, ಹೆಚ್ಚು ಇಂಧನ ಬಳಸದಂತೆ, ಹೊಗೆ ಕಾರದಂತೆ ಸುಸ್ಥಿತಿಯಲ್ಲಿಟ್ಟುಕೊಳ್ಳುವುದು.ಹಾಗೂ ವಾಹನಗಳನ್ನು ಶುಚಿಗೊಳಿಸುವಾಗ ನೀರು ಪೋಲು ಮಾಡದಿರುವುದು.

ಬೇಕಾದರೆ ಇನ್ನಷ್ಟು ಟಿಪ್ಸ್ ನೀಡುತ್ತೇನೆ ಸರ್. ಇದಷ್ಟೂ ನಾನು ವೈಯುಕ್ತಿಕವಾಗಿ ರೂಡಿಯಲ್ಲಿಟ್ಟುಕೊಂಡಿರುವ ಸೂತ್ರಗಳು ಇದನ್ನು ಯಾರು ಬೇಕಾದರೂ ಪಾಲಿಸಬಹುದು. ನಿಮ್ಮ ಬಳಿ ಇಂತಹ ಟಿಪ್ಸ್ ಗಳಿದ್ದರೆ ತಿಳಿಸಿ ಸರ್

ಸಸ್ನೇಹ
ಬಾಲ ಚಂದ್ರ

ಎಚ್.ಎಸ್. ಪ್ರಭಾಕರ ಗುರು, 12/24/2009 - 01:36

very good ಬಾಲು, ಧನ್ಯವಾದಗಳು.
ಇನ್ನು ನಾನು ಮಾಡುತ್ತಿರುವ ಹಾಗೂ ಇತರರೂ ಮಾಡಬೇಕೆಂದು ಅಪೇಕ್ಷಿಸುವ ಕೆಲವು `ಟಿಪ್ಸ್'ಗಳು:
1) ವೈಯಕ್ತಿಕವಾಗಿ ನಮ್ಮ ಪ್ರತಿ ಆಚರಣೆಗಳ ದಿನ (ಉದಾ: ಹುಟ್ಟು ಹಬ್ಬ, ಮದುವೆ, ಮುಂಜಿ, ವಾರ್ಷಿಕೋತ್ಸವ etc...) ವಿಶೇಷ ದಿನಗಳಂದು ಅದರ ಸವಿ ನೆನಪಿಗಾಗಿ ಒಂದು ಗಿಡ ನೆಡುವುದು.
2) ದೈನಂದಿನ ಜೀವನದಲ್ಲಿ ಪ್ರಯಾಣಕ್ಕೆ ಸೈಕಲ್ ಬಳಸುವುದು (ನಾನು ಪತ್ರಕರ್ತನಾಗಿದ್ದರೂ, ಎಷ್ಟೇ ಅವರಸರವಿದ್ದರೂ ಈಗಲೂ ನಾನು ಬಳಸುತ್ತಿರುವುದು ಸೈಕಲ್ ಮಾತ್ರ)
3) ಈಗಿನ ಪೀಳಿಗೆಗಿಂತಲೂ ಹೆಚ್ಚಾಗಿ ಮುಂದಿನ ಪೀಳಿಗೆಯಲ್ಲಿ ಮಾಡಬೇಕಾಗಿರುವ ಬದಲಾವಣೆ ಬಹು ಮುಖ್ಯ. ಹೀಗಾಗಿ, ಶಾಲಾ ಕಾಲೇಜುಗಳಿಗೆ ಹೋಗಿ ಮಕ್ಕಳಿಗೆ ಸರಳವಾಗಿ ನಿದರ್ಶನಗಳ ಮೂಲಕ ಉಪನ್ಯಾಸ ನೀಡುವುದು ಹಾಗೂ ಶಾಲಾ ವನಗಳ ನಿರ್ಮಾಣಕ್ಕೆ ಪ್ರೇರಣೆ ನೀಡುವುದು.
4) ಪರಿಸರ ಸಂಬಂಧಿ ಜಾಗೃತಿ ಸಾಹಿತ್ಯ ರಚನೆ. (ನಾನೇ ರಚಿಸಿ ನಿರ್ದೇಶಿಸಿರುವ `ಗಜ ಗೀತ' ನಾಟಕ ಯಾಶಸ್ವಿಯಾಗಿ 2 ಪ್ರದರ್ಶನ ಕಂಡಿದೆ. ಈಗ ಅದರ ಪರಿಷ್ಕರಣೆ ನಡೆಯುತ್ತಿದೆ) ಜತೆಗೆ ಪರಿಸರ ಸಂಬಂಧಿ ಲೇಖನಗಳನ್ನು ಬರೆಯುವುದು.
5) ಬೋಳು ಗುಡ್ಡಗಳನ್ನು ಆಯ್ಕೆ ಮಾಡಿಕೊಂಡು, ಗುಂಪು ಕಟ್ಟಿಕೊಂಡು ಹೋಗಿ ಅದಕ್ಕೆ ಹಸಿರು ಹೊದಿಸುವುದು. (ಗಿಡಗಳನ್ನು ನೆಡುವುದು)
6) ಪರಿಸರಕ್ಕೆ ಹಾನಿಯಾಗುವ ಬೃಹತ್ ಯೋಜನೆಗಳನ್ನು ವಿರೋಧಿಸಿ ನಡೆಯುವ ಹೋರಾಟಗಳಿಗೆ ಕೈಜೋಡಿಸುವುದು; ಸಾಧ್ಯವಾಗದಿದ್ದಲ್ಲಿ ಕನಿಷ್ಟ ನೈತಿಕ ಬೆಂಬಲವನ್ನಾದರೂ ನೀಡುವುದು. ಇನ್ನೂ ಹಲವು ಇವೆ. ಸದ್ಯಕ್ಕೆ ಇಷ್ಟು ಸಾಕು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/18/2009 - 12:39

ರೇಡಿಯೋ ಸಿಟಿಯಲ್ಲಿ ಪ್ರತಿದಿನದ ಜಾಹಿರಾತು,

ಯಾರಾದರೂ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಂಡರೆ, ನಕ್ಕರೆ, ಕಾರಣವಿಲ್ಲದೇ ಸಿಟ್ಟು ಮಾಡಿಕೊಂಡರೆ ಆದರೂ ತಾನು ರೋಗಿಯಲ್ಲವೆಂದು ವಾದಿಸಿದರೆ ಇದು ಉನ್ಮಾದ ಅಥವಾ psychosis. ಒಂದು ಗಂಭೀರ ಮಾನಸಿಕ ಕಾಯಿಲೆ.ಈ ರೋಗದ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ. ಇದು ವಾಸಿಯಾಗಬಹುದಾದ ಕಾಯಿಲೆ.

-ದುರ್ಗಂಧ.

ಬಾಲ ಚಂದ್ರ ಶುಕ್ರ, 12/18/2009 - 14:40

ಹ್ಹ ಹ್ಹ ಹ್ಹಾ

ನಗುವೇ ಎಲ್ಲಾ ರೋಗಕ್ಕೂ ಸಿದ್ದೌಷಧಿ

ಸಸ್ನೇಹ
ಬಾಲ ಚಂದ್ರ

Bharath.K ಭಾನು, 12/20/2009 - 11:37

ನೀವು ನಿಮ್ಮ ಜಗತ್ತನ್ನು ವಿಸ್ತರಿಸಿಕೊಂಡ ಬಗೆ ಚೆನ್ನಾಗಿದೆ.....

ಬಾಲ ಚಂದ್ರ ಮಂಗಳ, 12/22/2009 - 13:24

ಧನ್ಯವಾದಗಳು ಭರತ್

ಸಸ್ನೇಹ
ಬಾಲ ಚಂದ್ರ

ಶ್ರಿನಾಥ್ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/22/2009 - 15:51

ಈ ಲೇಖನ ತು0ಬಾ ಚೆನ್ನಾಗಿದೆ, ಇದನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳುವ ಬಗೆ ತಿಳಿಸಿ ಕೊಡಿ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/23/2009 - 14:48

ಲೇಖನ ತು0ಬಾ ಚೆನ್ನಾಗಿದೆ.......

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.