ತುಂಗಾ
ನಿನಗೆ ಶರಣಾಗದೆ ಬೇರೆ ವಿಧಿಯೇ ಇಲ್ಲ
ಮನದಾಳದೊಳಗೆ ಅನುಮತಿಯಿಲ್ಲದೆ ನುಗ್ಗಿ
ಅಂತರಂಗ ಬಹಿರಂಗವನ್ನೆಲ್ಲ ಗಲಬರಿಸುತ್ತಿದ್ದರೂ
ಇನ್ನೂ ಎನೋ ಒಂದಷ್ಟು ಕೊಳಕು ಉಳಿದಿದೆ
ನೀನೆ ಅಲ್ಲವೇ ತುಂಗಾ?
ಗಂಗಾಸ್ನಾನಂ ತುಂಗಾಪಾನಂ ಎಂಬ ಮಾತೆಲ್ಲ
ಅತಿಶಯೋಕ್ತಿಯೇನಿರಲಿಕ್ಕಿಲ್ಲ,
ನಾಲಿಗೆಗೊಂದಷ್ಟು ಸಿಹಿ, ನೀರನ್ನು ಗುಟುಕರಿಸುತ್ತಿದ್ದ ಹಾಗೇ
ಗಂಟಲಿಗಿಳಿದು,ಹೃದಯವನ್ನೊಮ್ಮೆ ಸುನೀತವಾಗಿ ತಾಕಿ
ಕರುಳಾಳದಲ್ಲೆಲ್ಲೋ ಕದಲಿ ,ಬೆವರಿನಿಂದ
ಮತ್ತೆ ಇನ್ನೂ ಎಲ್ಲೆಲ್ಲಿಂದಲೋ ಹೊರಹೋಗುವಾಗಲೂ
ಎನೋ ಒಂದಷ್ಟು ಬೆಳಗಿ ಹೋಗುವವಳು
ಹುಟ್ಟಿದ್ದು ಶೃಂಗೇರಿ ಎಂಬ ಮಾತು
ಲೋಕಾರೂಡಿಗಷ್ಟೇ ಇರಬೇಕು
ನರಸಿಂಹನ ದಾಡೆಯಿಂದಿಳಿದವಳು,ಪರಶುರಾಮನ
ಪಾಪ ತೊಳೆದವಳು,ಶಂಕರಚಾರ್ಯರಿಗೆ ಅನುಗ್ರಹವಿತ್ತವಳು
ಅಬ್ಬಾ; ತುಸುವೇನಿಲ್ಲ ನಿನ್ನ ಗುಣಗಾನ ಅಥವಾ
ನಮ್ಮ ಹಸ್ತಕ್ಷೇಪಕ್ಕೊಳಗಾದ ಪುರಾಣ
ನಿನ್ನನ್ನು ಸಂಬೋಧಿಸಲು ಒಂದು ಪದವೂ
ನನ್ನ ಬಳಿಯಿಲ್ಲ, ಆದರೂ ನನ್ನ ಪಾಲಿಗೆ
ನೀನು ಬರಿ ತುಂಗೆ ಮಾತ್ರವಲ್ಲ
ಮಳೆಗಾಲದಲ್ಲಿ ಕೆಂಪಾಗಿ, ಬೇಸಿಗೆಯಲ್ಲಿ ತಂಪಾಗಿ
ಹರಿದು, ಅಗೋಚರ ಕಾಡು ಮೇಡುಗಳನ್ನೆಲ್ಲಾ ಸುತ್ತಿ
ಅಬ್ಬಿಯೊಳಕ್ಕೆ ಸುರಿದು ಕಿಬ್ಬಿಯೊಳಗೆ ನೊರೆದು
ಹೋಗುವವಳೇ
ಇಬ್ಬನಿ ಬಿದ್ದಾಗ ಮೈದುಂಬಿ
ಬೆಳದಿಂಗಳ ಬೇಗೆಗೆ ಕರಗಿ ಹೋಗುವವಳೇ
ಸಾಗರ ಸೇರುವ ಮುನ್ನ ಒಮ್ಮೆ ನಿನ್ನ ನೋಡಿಕೋ
ನಿನ್ನಲ್ಲಿ ಒಂದುಬಿಂದು ನನ್ನ ಕಣ್ಣೀರು
ಬೆರೆತು ನೀನೇ ನಾನಾಗಿರುವಾಗ
ನಾನ್ಯಾಕೆ ನಿನ್ನನ್ನು ಕರೆಯಬೇಕು
ನಿನಗೆ ಶರಣಾಗದೇ ಬೇರೆ ದಾರಿಯೇ ಇಲ್ಲ
ಸಾಲುಗಳು
- Add new comment
- 603 views
ಅನಿಸಿಕೆಗಳು
sundaravada kavana.
sundaravada kavana.
ಭಾವವ್ಯಕ್ತನೆ ತುಂಬಾ ಸೊಗಸಾಗಿದೆ
ಭಾವವ್ಯಕ್ತನೆ ತುಂಬಾ ಸೊಗಸಾಗಿದೆ