Skip to main content

ಕವಿತ

ಬರೆದಿದ್ದುJanuary 19, 2017
noಅನಿಸಿಕೆ

*ನವಿರು ಪ್ರೀತಿ*

 

ನವಿರು ಭಾವ ನಲ್ಮೆಯೊಳಗೆ

ನನ್ನ ನಿನ್ನ ಪ್ರೀತಿ ಕರೆಗೆ

ನಲಿದು ಬಂತು ನಾಕ ತಂತು

ನಮ್ಮಿಬ್ಬರ ಬಂಧ ಬೆಸೆದು

 

ಹೂವಿನ ಮೇಲಿನ ಮಂಜಿನಂತೆ

ಎಲೆಯನ್ನು ಜಾರಿಗೆ ಹನಿಯಂತೆ

ದುಂಬಿ ಹಾಡಿದ ಝೇಂಕಾರದಂತೆ

ನವಿರು ನಮ್ಮ ಪ್ರೀತಿ ಹೆಸರು 

 

ಸೂರ್ಯನುದಿಸಿ ಬರುವ ಹಾಗೆ 

ಚಂದ್ರ ಬೆಳಕು ಚೆಲ್ಲುವ ಹಾಗೆ 

ಮಳೆ ಸುರಿದ ನಿಂತ ಹಾಗೆ 

ನವಿರು ನಮ್ಮ ಪ್ರೀತಿ ಹೆಸರು 

 

ಸಾಗರದಲೆ  ಉಕ್ಕುವ  ರೀತಿ

ಚೈತ್ರ ಚಿಗುರುವಂತ ನೀತಿ 

ವರ್ಷಋತುವಿನಷ್ಟೆ ಖ್ಯಾತಿ 

ನವಿರು ನಮ್ಮ ಪ್ರೀತಿ ಹೆಸರು 

 

ಸುಮವು ಬಿರಿವ ಮೌನ

ಒಂಟಿಕಾಲಲಿ ಬೆಳ್ಳಕ್ಕಿ ಧ್ಯಾನ 

ನೀಲಿ ತುಂಬಿದ ಗಗನದಂತೆ

ನವಿರು ನಮ್ಮ ಪ್ರೀತಿ ಹೆಸರು 

 

0657ಎಎಂ11012017

 

ಅಮುಭಾವಜೀವಿ

*ಬಣ್ಣದ ಹಂಗೇಕೇ*

 

ಬಣ್ಣದ ಹಂಗಿನ ಭಿನ್ನಹವೇಕೆ

ಬದುಕುವ ನಿನಗೆ  ಆಮಿಷವೇಕೆ?

 

ಕಪ್ಪು ಬಿಳುಪಿನ ಕಲ್ಪನೆಗೂ ಮುಂಚೆ 

ಜಗದಿ ಬಣ್ಣಗಳಿದ್ದವು ತಿಳಿ ನೀನು

ನೀನು ಕತ್ತಲೆಯೊಳಗವಿತು

ಬಣ್ಣಗಳನ್ನು ನೀನರಸುವುದೆಂತು

ಜ್ಞಾನದ ಜ್ಯೋತಿಯು ಬೆಳಗದಲೇ

ಕಾಣೆ ನೀ ಬಣ್ಣಗಳಂದವನೇ

 

ಏಳು ಬಣ್ಣಗಳ ಕಾಮನಬಿಲ್ಲು 

ಬಾಗಿಹುದು ನೋಡಲ್ಲಿ ಬೀಗದೆ

ನಿನ್ನೊಳಗಿನ ಅಹಮಿನ ಸುಳ್ಳು 

ಬಿಡದು ನಿನ್ನನ್ನು ಇಲ್ಲಿ ಬಾಗಲು

ತೆರೆಯಲು ನೀನು ಶಾಂತಿಯ ಕಣ್ಣ

ಕಾಣುವೆ ನೀನಾಗ ಬದುಕಿನ ಬಣ್ಣ 

 

ಆಸೆಗಳ ತಿಮಿರವ ಕಳೆದು

ಅರ್ಪಿಸಿಕೋ ನಿನ್ನನೇ ನೀನು

ಶುಚಿಗೊಳಿಸಿಕೋ ಆಂತರ್ಯ 

ಮೂಡುವುದಾಗ ನೆಮ್ಮದಿ ಸೂರ್ಯ 

 

0645ಎಎಂ090117

 

*ಅಮು ಭಾವಜೀವಿ*

 

*ಶುಭ ಮುಂಜಾನೆ*

*ಹೆಸರೊಂದ ತಾರೆಯಾ*

 

ನನ್ನೆದೆಯ ಭಾವಬನ

ಬಿಕೋ ಎನ್ನುತಿದೆ

ನನ್ನಾಸೆಯ ಹೂ ಅರಳಿದರೂ

ಯಾಕೋ ದುಂಬಿ ಬರದೇ

 

ನಗುವ ಕಂಪ ಬೀರುವೆ ಆದರೂ

ಒಳಗಿನ ನೋವು ಬಾಧಿಸಿದೆ

ಅಳುವ ಮನಸಾದರೂ

ಅನುಭವ ಸಂತೈಸುತಿದೆ

 

ವಿರಹದುರಿ ಹೆಚ್ಚಿದರೂ

ಕಾಮನೆ ನೆಟ್ಟು ಗಾಯವಾದರೂ 

ಗಲಿಬಿಲಿಗೊಳ್ಳದೇ ಅಲುಗಾಡಿರುವೆ 

ಅವಕಾಶಕ್ಕಾಗಿ ಕಾಯುತ 

 

ನನ್ನೊಳಗಿನ  ಈ ತಳಮಳಕ್ಕೆ 

ನೀನಲ್ಲವೇ ಕಾರಣ

ನನ್ನೊಡಲ ತಣಿಸಲು ಯಾವಾಗ 

ಬರುವೆ ಹೇಳು ಓ ರಮಣ

 

ನಾ ಬಾಡುವ ಮುನ್ನವೇ

ಬಂದುಬಿಡು ಕಾಯಿಸದೇ 

ಈ ಬಾಳಿಗೊಂದು ಅರ್ಥ ಕೊಡು

ನನ್ನೆಲ್ಲಾ ಭರವಸೆ ಒತ್ತಾಸೆಗೆ

 

ನಾ ಸೋಲುವ ಮುನ್ನ 

ನೀ ಗೆಲುವಿಗೆ ಬಾರೆಯಾ? 

ನಾ ಉದುರುವ ಮುನ್ನ

ಹೆಸರೊಂದ ನೀ ತಾರೆಯಾ

 

 

0508ಎಎಂ15012017

 

ಅಮುಭಾವಜೀವಿ

 

 

 *ಕಸಿದ ನಿರಾಸೆ*

 

ಬದುಕುವ ಭರವಸೆಯೇ

ಕುಸಿಯುತಿದೆ ಬರಗಾಲದಿ

ಕಟ್ಟಿದ ಕನಸ ಕಸಿದಿದೆ

ನಿರಾಸೆಯ ಬೋಳಂಬರದಿ 

 

ಆಷಾಢದಿ ಅಧಿಕಮಾಸ 

ಬೆಳೆಯಿಲ್ಲದ ಬದುಕೇ ವನವಾಸ 

ಬೆಳೆದ ಬೆಳೆಗೆ ಬೆಲೆಯಿಲ್ಲದೆ

ಕಂಗಾಲಾಗಿದೆ ಬರದ ಬದುಕು 

 

ಹನಿ ನೀರಿಗೂ ಹಾಹಾಕಾರ 

ಮಳೆಯೊಂದೇ ಇದಕ್ಕೆ ಪರಿಹಾರ 

ಬಾರದು ಮಳೆ ಬಿರಿದಿದೆ ಇಳೆ

ಬೆವರು ಬತ್ತಿ ಬಾಯಾರಿದೆ 

 

ಸಾಲದ ಶೂಲ ತಿವಿಯುತಿದೆ

ಅಸಹಾಯಕತೆ ಹಿಂಡುತಿದೆ 

ಸಂಸಾರದ ನೊಗ ಬಾಗಿಸಿದೆ 

ಬಡತನ ನಿತ್ಯ ಬಾಧಿಸಿದೆ 

 

ಎಲ್ಲಾ ಬರದ ವರದಿಂದ 

ಕರಿಗಿದೆ ಒಡಲು ಸೋಲಿಂದ

ಕೈಹಿಡಿಯುವ ಕರುಣೆ ಎಲ್ಲಿದೆಯೋ 

ಬದುಕಿಸುವ ನೆಲೆ ಯಾವುದಿದೆಯೋ 

*ಸುಮಧುರ*

 

ನನ್ನ ನಿನ್ನ ಬಂಧ ಬೆಸೆದ

ಒಲವು ಸುಮಧುರ 

ನಾವಿಬ್ಬರೂ ಸೇರಿದಾಗಲೇ

ಈ ಬಾಳು ಸ್ವರ್ಗ ಸುಂದರ 

 

ಕಣ್ಣು ಕಣ್ಣು ಬೆರೆತ ಮಾತೇ 

ಮೌನದ ಶೃಂಗಾರ

ನನ್ನ ನಿನ್ನ ಭಾವ ತಂದ

ಕವಿತೆಯೇ ಅತಿ ಸುಮಧುರ 

 

ಚೈತ್ರ ಚಿಗುರುವಂತ ಹಸಿರು 

ನನ್ನಲ್ಲಿ ಬೆರೆತ ನಿನ್ನುಸಿರು 

ಕೋಕಿಲ ದನಿಯಷ್ಟು ಸುಮಧುರ 

ಹೊಂಗೆ ನೆರಳು ತಂದ ಸಂಸ್ಕಾರ

 

ಹರಿವ ನದಿಯು ತಂದ

ನಾದದ ಕಲರವ  

ಮೊದಲ ಪ್ರೀತಿ ಬಸಿರ

ತುಂಬಿ ನಲಿವು ಅನುಭವ 

 

ಹರೆಯ ಎಣೆದ ಕನಸೇ

ಮಧುವಂತಿಯ ಸಡಗರ 

ಹಸೆಯೇರಿದ ಹೊಸ ಬದುಕು 

ಜೇನಿನಷ್ಟು ಸುಮಧುರ 

 

 

0322ಪಿಎಂ16012017

 

ಅಮು ಭಾವಜೀವಿ

೧*

 

*ಬಾ ಇಲ್ಲಿ ಕನಿಕರಿಸು*

 

ಬಾ ಇಲ್ಲಿ ಕನಿಕರಿಸು

ಈ ನನ್ನ ಹೃದಯದಲಿ 

ನೀ ಬೆಳಗು ದೇದೀಪ್ಯಮಾನ

 

ನನ್ನ ಸುಖದುಃಖಕೆಲ್ಲ

ನೀನೆ ಹೊಣೆಯಾಗಿರಲು

ನೀಡದಿರು ಶಿಕ್ಷೆ ಕಠಿಣ 

 

ನಿತ್ಯ ನೋಯುವ ನನಗೆ

ಕನಿಕರವ ತೋರಿಸುತ

ಕೈಹಿಡಿದು ನಡೆಸುವ ಬಾ

 

ನೀನೇ ಕಣ್ಣಾಗಿ ನಾನು

ಮಣ್ಣಾಗುವ ತನಕ 

ಜೊತೆಜೊತೆಗೆ ಸಾಗು ಬಾ

 

ಕಲ್ಲು ನನ್ನೀ ಹೃದಯವನು

ಕರಗಿಸುವ ಕನಿಕರ

ನಿನ್ನೊಲವ ತೇವದೊಳಿಹುದು

 

ಬರದ ಬೇಗೆಯಲಿ ಬೇಯುವಾಗ

ನಿನ್ನ ಕರದ ಸ್ಪರ್ಶವೆನ್ನ

ಕನಿಕರಿಸಿ ಸಂತೈಸುತಿದೆ 

 

ಎದೆಯ ಭಾವಗಳೆಲ್ಲ

ಬೇಸರದಿ ಕುಳಿತಾಗ

ನಿನ್ನ ಸ್ಪರ್ಶಕೆ ಪುಟಿದೆದ್ದಿತು 

 

ಈ ಕನಿಕರವು 

ನನ್ನ ಮೇಲಿರಲಿ ಸದಾ

ಕರುಣೆ ತೋರುತಾ

 

0550ಪಿಎಂ180117

 

*ಅಮುಭಾವಜೀವಿ*

 

ಸಾಂಗತ್ಯ*

 

 

ನಮ್ಮಿಬ್ಬರ ಸಾಂಗತ್ಯಕೆ

ಸಾಕ್ಷಿ  ಈ ಒಲವು 

ನಮ್ಮ ಸಾಮರ್ಥ್ಯಕೆ

ದಕ್ಕಿತು ಈ ಗೆಲುವು 

 

ಸೂರ್ಯನೊಂದಿಗೆ ಸುಮ ಸಾಂಗತ್ಯ 

ಚೆಲುವಿನನಾವರಣದ ಅಧಿಪತ್ಯ 

ಸಾಗರ ಶಶಿಯ ಸಾಂಗತ್ಯ 

ಉಕ್ಕುವ ತೆರೆಗಳ ಲಾಲಿತ್ಯ

 

ಹೂ ದುಂಬಿ ಪ್ರಣಯಕಾಂಕ್ಷಿಗೆ 

ಮಕರಂದದರಶಿನದ ಪೌರತ್ಯ 

ನದಿಸಾಗರ ಮಿಲನೋತ್ಸವಕೆ

ಪ್ರೇರಣೆಯೇ ಈ ಸಾಂಗತ್ಯ 

 

ಮೋಡ ಮಿಂಚುಗಳು ಬೆರೆಯೆ 

ಭುವಿಗೆ ಮಳೆಯ ಸಾಂಗತ್ಯ 

ಮಳೆಗೆ ಇಳೆ ನೆನೆಯೆ 

ಮೆರೆವುದು ಹಸಿರ ಸಾಮ್ರಾಜ್ಯ 

 

ಗಂಡು ಹೆಣ್ಣಿನ ಆಕರ್ಷಣೆಗೆ

ಹರೆಯದ ವಾಂಛೆಯ ಸಾಂಗತ್ಯ 

ಅದನ್ನೆಲ್ಲ ವರ್ಣಿಸಲು ಜಗದಿ 

ರೂಪುಗೊಂಡಿತು ಅಗಾಧ ಸಾಹಿತ್ಯ 

 

ಸಾಂಗತ್ಯ ತಂದ ಈ ಸಂತೃಪ್ತಿ 

ಜಗದೊಳಗೆ ನೆಮ್ಮದಿಯ ಪ್ರಾಪ್ತಿ

ನೋಟಗಳು ಬೆರೆತಾಗಲೇ ಪ್ರೀತಿ 

ಭಾವಗಳೊಂದಾದಾಗಲೇ ಶಾಂತಿ

 

0646ಎಎಂ190117

 

ಅಮು ಭಾವಜೀವಿ

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.