Skip to main content

ಛಿದ್ರ ನೆನಪುಗಳಿಗೆ ಧಿಕ್ಕಾರ......

ಇಂದ latha acharya
ಬರೆದಿದ್ದುDecember 10, 2014
noಅನಿಸಿಕೆ

ಮನದ ಹಂಬಲಕೆ ಹಿಡಿದೆ ಲೇಖನಿಯ

ಕವನ ಬರೆಯಲೆಂದು........

ಭಾವನೆಗಳಿಗೆ ಅಕ್ಷರ ರೂಪ ನೀಡಬೇಕಲ್ಲಾ

ಆದರೆ ಇವುಗಳೇಕೋ ಆಲಸಿಯಾಗಿವೆ

ಮೌನ ಸಾಮ್ರಾಜ್ಯದಲಿ ಕುಳಿತು

ನನ್ನೇ ಎವೆಯಿಕ್ಕದೆ ನೋಡುತಿದೆ

ಅದೇನೋ ಅಸ್ಪಷ್ಟ ಯೋಚನೆಗಳು

ಹೊತ್ತಿ ಉರಿಯುವ ಬೆಂಕಿಯಂತೆ

ಮನಸ್ಸೆಂಬ ಮಸಣದಲಿ

ಮೌನವಾಗೇ ಚೀರುತಿದೆ

ನನಸಾಗದ ಕನಸುಗಳು

ಬದುಕಿ ಸತ್ತಂತಿರುವ ಭಾವಗಳು

ಕಂಡೂ ಕಾಣದಂತಿರೋ ಪ್ರತಿಬಿಂಬಗಳು

ಮತ್ತೆ ಮರುಕಳಿಸೋ ಹುಚ್ಚು ನೆನಪುಗಳು

ಒಂದಕ್ಕಿಂತ ಒಂದು ಮಿಗಿಲು..

ಬೆಳಕೇ ಕಾಣದ ಈ ಕತ್ತಲಿನಲಿ

ಮತ್ತೆ ಹೊಂಬೆಳಕ ಕಾಣಬೇಕು

ಎಡೆಗೆಡೆಗೆ ಕೇಳಿಸೋ ಬಿಕ್ಕಳಿಕೆಯ ಸದ್ದಿಗೆ

ವಿದಾಯವ ಹೇಳಬೇಕು

ಕನಸುಗಳ ಸುಟ್ಟು ಹಾಕಿದ

ಆ ಛಿದ್ರ ನೆನಪುಗಳಿಗೆ

ನನ್ನ ಯಜಮಾನಿಕೆ ಇನ್ನಿಲ್ಲ

ಎಂದೆಲ್ಲ ಹೇಳಬೇಕು

ಬಾಳ ದಾರಿಯಲಿ ಹೊಸತು ಜೀವನಕೆ

ನಾ ಮರಳಿ ಹೆಜ್ಜೆಯಿಡಬೇಕು

ಯಾರದೋ ಹೆಜ್ಜೆ ಗುರುತುಗಳಿವೆ

ಪರಿಚಯವೇ  ಇಲ್ಲದ ಇವುಗಳನ್ನೆಲ್ಲಾ

ಅಳಿಸಿ ಹಾಕುತ್ತಾ ನಾ ಮುಂದೆ ನಡೆಯಬೇಕು

ಯಾರೂ ಗೆದ್ದವರಿಲ್ಲ ಜೀವನವ

ಸಾವಿನ ಗುಲಾಮರೇ ಎಲ್ಲ

ನಾ ಏಕಾಂಗಿಯಲ್ಲ ಜೊತೆಗೆ ನೀನಿರುವಾಗ

ನಾನೆಂದೂ ತಬ್ಬಲಿಯಲ್ಲ

ಮುಂದೆ ಮುಂದೆ ಸಾಗೋಣ

ಸಾವಿರ ತಾರೆಗಳ ಜೊತೆಗೆ

ನಾವೂ ಒಂದಾಗೋಣ ಬಾ........

ಲೇಖಕರು

latha acharya

ಮನಸ್ಸಿನ ಮಾತು ಅಕ್ಷರಗಳಲ್ಲಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.