ಮುಕ್ಕಾಲು ಅವಧಿಗೆ ಮುಗಿದು ಹೋದ ಜೀವ..!
ಹಾಗೆ ನನ್ನೊಂದಿಗಿದ್ದೂ ಇಲ್ಲದಂತಿರುವ ಮಿತ್ರ ತೀರ ಇದೇ ನೆಲದಿಂದ ಎದ್ದು ಹೋದವನು. ಕರಾವಳಿಯ ಮೀನಿಗೆ ಬಾಯ್ಬಿಡುತ್ತಿದ್ದವನು. ಅದಕ್ಕಿಂತಲೂ ಮಿಗಿಲಾಗಿ ಈ ನೆಲದ ಬಗ್ಗೆ ಅದೊಂದು ರೀತಿಯಲ್ಲಿ ವ್ಯಾಮೋಹಿಯಾಗಿದ್ದವನು. ಮೊಟ್ಟ ಮೊದಲ ಬಾರಿಗೆ ನನಗೆ ಕರಾವಳಿಯ ಬದುಕು ಪರಿಚಯಿಸಿದವನು. ನನಗಿಂತ ಸಾಕಷ್ಟು ಹಿರಿಯನಾಗಿದ್ದರೂ ಅದೆಂದಿಗೂ ಅರಿವಿಗೆ ಬರದಂತಿದ್ದು ಬಿಟ್ಟಿದ್ದ ಅವನು.
ಮೊಟ್ಟ ಮೊದಲ ಬಾರಿಗೆ ನನ್ನೆದುರಿಗೆ ಆತ ಕುಳಿತು ಅವಳ ಬಗ್ಗೆ ಹೇಳುವಾಗ ಅವನ ಕಣ್ಣುಗಳಲ್ಲಿ ಬಣ್ಣಗಳಿದ್ದವು.
ತೀರ ಭಾವುಕ ಹುಡುಗನಂತೆ ಆಡದಿದ್ದರೂ ಪ್ರೇಮದ ಸೆಳಕುಗಳು ಅವನ ಮೇಲೆ ಪ್ರಭಾವ ಬಿರಿದ್ದು ಸ್ಪಷ್ಟವಿತ್ತು. ಅಗಿನ್ನೂ ಹದಿನಾರು ತುಂಬದ ನನಗೆ ಇಪ್ಪತ್ತೊಂದರ ಅವನೊಡನೆ ಮೊದಲನೆಯ ದಿನವೇ ಬೆಳೆದ ಸಲುಗೆ ಮುಂದೆ ಜೀವನದುದ್ದಕ್ಕೂ ನೆರಳಿನಂತೆ ನೆನಪಾಗಿ ಉಳಿದು ಬಿಡುತ್ತದೆಂಬ ಕಲ್ಪನೆಯೂ ಇರಲಿಲ್ಲ. ಯಲ್ಲಾಪುರದ ಮೂಲೆಯೊಂದರಿಂದ ಬರುತ್ತಿದ್ದ ಅವಳು ಅವನನ್ನು ಪ್ರೀತಿಸಿಯೂ, ಇದ್ದಕ್ಕಿದ್ದಂತೆ ಇವನ ಕಾಲೇಜು ಮುಗಿವ ಮುಂಚೆ ಅವನನ್ನು ಬಿಟ್ಟು ತಾನು ಮದುವೆಗೆಂದು ಹೊರಟು ನಿಂತಾಗ ಆದ ನಿರಾಶೆಯಲ್ಲಿ ಅವನು ಪ್ರಾಣ ಕಳೆದುಕೊಳ್ಳದಿದ್ದುದೇ ಹೆಚ್ಚು. ಹಾಗಾಗದಂತೆ ತಿಂಗಳೊಪ್ಪತ್ತು ಅವನ ಜೊತೆಗಿದ್ದು ಕಾಯ್ದಿದ್ದೆ. ಕಾಲೇಜು ಪಕ್ಕದ ಏ.ಪಿ.ಏಮ್.ಸಿ. ಗೋಡಾನಿನ ಗೋಡೆಗಳಿಗೆ ಆತು ನಿಂತುಕೊ೦ಡವನ ಹೃದಯದಲ್ಲಿದ್ದುದು ನಿರಾಶೆಯಲ್ಲ... ಆಕೆಯೆಡೆಗಿನ ಕೋಪವಲ್ಲ... ಬಹುಶ ಮನೆಯವರು ಆಕೆಯನ್ನು ಒತ್ತಾಯಿಸಿದ್ದಾರೆ ಅದಕ್ಕೆ ಮದುವೆಯಾಗಿದ್ದಾಳೆ ಇಲ್ಲದಿದ್ದರೆ ನನ್ನ ಮರೆಯುತ್ತಿರಲಿಲ್ಲ ಎನ್ನುವ ಕಕ್ಕುಲಾತಿ. ಅದೇ ಯಾವಾಗಲೂ ಹುಡುಗರು ತೋರುವ ಹುಂಬ ವರಸೆ. ಛೇ ...
ಆಕೆ, ನಾವು ಮುಖ ಮೂತಿಯೂ ಕಾಣದ ಬೆಂಗಳೂರಿಗೆ ಮದುವೆಯಾಗಿ ಇವನನ್ನು ಭಗ್ನ ಪ್ರೇಮಿಯಾಗಿಸಿ ಹೋದರೆ ಮುಂದಿನ ಆರು ತಿ೦ಗಳು ಒಣ.. ಒಣ. ಕಾಲೇಜು ಹುಡುಗಿಯರಿಗೆ ಟಿಂಗಲ್ ಇಲ್ಲ... ಬಸ್ ಸ್ಟ್ಯಾಂಡಿನಲ್ಲಿ.. ಗೌಜಿಯಿಲ್ಲ.. ಪಕ್ಕದ ಅಶೋಕ ಕ್ಯಾಂಟಿನ್ ಖಾಲಿ ಖಾಲಿ.. ನಂತರದ ದಿನದಲ್ಲಿ ನಮ್ಮ ಕಾಲೇಜು ರಿಸಲ್ಟ್ ಬಂದರೆ ಪೂರ್ತಿ ಕಾಲೇಜಿಗೆ ಎರಡೇ ಪಾಸು. ಒಂದು ನಾನು ಡಿಸ್ಟಿಂಕ್ಷನಲ್ಲಿದ್ದರೆ. ನನ್ನ ಹಿಂದೆ ಅವನು. ಅದಕ್ಕಿಂತಲೂ ಅವನಿಗೆ ಖುಷಿ ಕೊಟ್ಟಿದ್ದೆಂದರೆ ಬೆಂಗಳೂರಿನ ಕಂಪೆನಿಯೊಂದು ಅವನನ್ನು ಕೈ ಬೀಸಿ ಕರೆದಿತ್ತು. ಪ್ಯಾದೆ ಸ್ನೇಹಿತ " ಸ೦ಜೀಗೇ ಬೆಂಗಳೂರಿಗೆ ಹೊಂಟ ಬಿಡ್ತೇನಿ " ಎಂದು ಎದ್ದು ನಿಂತ. " ಹೇ ಬೆಂಗಳೂರಾಗ ಎಲ್ಲಿ ಉಳೀತಿ..? ಏನ ಮಾಡ್ತಿ..? ಹುಚ್ಚರಂಗಾಡಬ್ಯಾಡ " ಎಂದರೆ " ... ಆಕಿನ್ನ ಬೆಂಗಳೂರಿಗೆ ಕೊಟ್ಟಾರ... ಇವತ್ತಲ್ಲ ನಾಳೆ ಕಂಡಾಳೇಳು.." ಎಂದವನ ಜೇಬಿನಲ್ಲಿ ಇದ್ದಿದ್ದು ಆಗೀನ ಕಾಲಕ್ಕೆ ಸಮೃದ್ಧ ಎನ್ನಿಸುವ ಐನೂರು ರೂಪಾಯಿ ಮಾತ್ರ.
ನಾನು ಮಾತ್ರ ಎಲ್ಲೂ ಏಗದೇ ಮೂರ್ನಾಲ್ಕು ಕಡೆಯಲ್ಲಿ ಮಣ್ಣು ಹೊತ್ತು ಅವನ ಹಿಂದೆ ಒಂದು ವರ್ಷದ ನಂತರ ಅದೇ ಕಂಪೆನಿಗೆ ಹೊರಟು ನಿಂತಾಗ ನನ್ನ ಹತ್ತಿರ ಅಷ್ಟು ದುಡ್ಡು ಕೂಡಾ ಇರಲಿಲ್ಲ. ಆದರೆ ಹೋಟ್ಲು ಸೇರಿಯಾದರೂ ಬದುಕಿಯೇನು ಹಿಂದಿರುಗಲಾರೆನೆಂಬ ಕ್ರೋಧ ಮನೆ ಮಾಡಿದ್ದು ಸುಳ್ಳಲ್ಲ. (ಮುಂದೆಂದೋ ಬಾರ್ ಬಾಯ್ ಆಗಿ ಕೂಡಾ ದುಡಿದೆ ಅದು ಬೇರೆ ಮಾತು) ತೀರ ಬೆಳ್ಳಂಬೆಳಿಗ್ಗೆ ಮ೦ಜಿನ ತೆರೆಯ ಬೆ೦ಗ್ಳೂರಿಗೆ ಕಾಲಿಕ್ಕಿದಾಗ ಎದುರಿಗೆ ನಿಂತಿದ್ದವ ಅದೇ ಸ್ಮಾರ್ಟಿ ಫೇಲೊ ಸ್ನೇಹಿತ. ಮೊದಲಿಗಿಂತಲೂ ಸುಂದರವಾಗಿ ಕಾಣುತ್ತಿದ್ದ. ಆ ದಿನ ಜುಲೈ ಆರ೦ಭದ ದಿನಗಳು. ಬಿ.ಟಿ.ಎಸ್. ಕಡೆಯಲ್ಲಿ ಹೆಜ್ಜೆ ಇಕ್ಕುವ ಮೊದಲೇ ಬ್ಯಾಗಿಗೆ ಕೈ ಹಾಕಿ ಹೇಗಲಿಗೇರಿಸಿದವನ ಬಾಯಿಂದ ಬಂದ ಮೊದಲ ಮಾತೇ ಅದು
" ಇನ್ನ ನಿ ಬಂದ್ಯಲ್ಲ. ಆಕಿನ್ನ ಹುಡುಕೋದ ದ್ವಾಡದೇನಲ್ಲ ಬಿಡ.." ಎಂದಿದ್ದ. ತತಕ್ಷಣಕ್ಕೆ ನಾನು ಗೊತ್ತಾಗದೇ " ಯಾರನ್ನೋ... ? " ಎಂದವನು ನಾಲಿಗೆ ಕಚ್ಚಿಕೊ೦ಡರೇ ಅವನ ಮುಖದಲ್ಲಿ ನೀನು ಅವಳನ್ನು ಮರೆತಿದೀಯಾ ಎನ್ನುವ ವೈಧವ್ಯದ ಕಳೆ.
" ಏನೋ ಮರತ ಬಿಟ್ಟೇನ.. ಆಕಿನ್ನ ನೋಡೂ ಸಲ್ವಾಗೇ ಬೆ೦ಗ್ಳೂರಿಗ ಬಂದೇನಿ. ಬಿ.ಈ.ಎಲ್ ಬಸ್ನ್ಯಾಗ ಬೆ೦ಗ್ಳೂರ ಪೂರ್ತಿ ರೌಂಡ್ ಹೊಡದೇನಿ, ಇನ್ನ ನೀ ಇದೀಯಲ್ಲ ಹುಡಕ್ತೇನಿ ಬಿಡ..." ಎಂದವನ ಹೆಗಲಿಗೆ ಕೈಯಿಕ್ಕಿ ಸಂತೈಸಿದ್ದೆ. ಅದೆಂತಾ ನಂಬಿಕೆನೋ..ಅದೃಷ್ಟಾನೊ.. ನಾ ಹೋದ ಮೂರನೆಯ ತಿಂಗಳಲ್ಲೇ ಸೆಪ್ಟೆಂಬರ್ ಸಂಜೆ ಇಬ್ಬರೂ ೨೭೩ ನಂಬರ ಬಸ್ಸಿನಲ್ಲಿ ಹೋಗುತ್ತಿದ್ದರೆ ಪುಟ್ ಬೋರ್ಡಿನಲ್ಲಿ ಆತು ನಿಂತು ಚಲಿಸಿದವನಿಗೆ ಅದ್ಯಾವ ಮಿಂಚೋ ಅದೆಂಥಾ ದೃಷ್ಟಿನೋ... ಮಲ್ಲೇಶ್ವರದ ಹತ್ತನೆ ಕ್ರಾಸಿನಲ್ಲಿ, ಕಿರುಚಿದ .." ಏ ಆಕಿ ಹೊಂಟಾಳ.. ಇಳ್ದ ಬಿಡ.. " ಎನ್ನುತ್ತಾ ಹೋಗುತ್ತಿದ್ದ ಬಸ್ಸಿನಿಂದ ಇಳಿಯಲು ಹೋಗಿ ಮೂರು ಪಲ್ಟಿ ಹೊಡೆದು ಎದ್ದ. ಬಸ್ಸು ಸ್ಲೋ ಆಗುತ್ತಿದ್ದಂತೆ ನಾನೂ ಇಳಿದು ಬಂದೆ.
ಜನವೆಲ್ಲಾ ಶೋ ನೋಡುತ್ತಿದ್ದರೆ.. ನನ್ನ ಕೈ ಹಿಡಿದು "...ಅಲ್ಲಿ ಆಕಿನ್ನ ನೋಡಿದ್ನಿ..." ಎಂದ. ಅಸಲಿಗೆ ನಾನೆಂದೂ ಆಕೆಯನ್ನು ನೋಡಿರಲೇ ಇಲ್ಲ. ಯಾಕೆಂದರೆ ಅವನ ಪ್ರೇಮ ಕಥೆಗೆ ನಾನು ಸಾಕ್ಷಿಯಾಗಿದ್ದರೂ ಯಾವತ್ತೂ ಆಕೆಯ ದರ್ಶನವಾಗಿರಲೇ ಇಲ್ಲವಲ್ಲ. ಅವನು ಕೂಡಲೇ ಕಿತ್ತು ಹೋದ ತನ್ನ ಕೈ ಕಾಲು ಗಮನಿಸದೆ ನನ್ನ ಕೈ ಹಿಡಿದು ಎಂಟನೇ ಕ್ರಾಸಿನತ್ತ ಚಲಿಸಿದವನು ಆಕೆಯನ್ನು ತೋರಿಸುತ್ತಾ ಅವಳೆ ಅವಳೇ ಎನ್ನುತ್ತಾ ಧಡ ಧಡನೆ ನಡೆದು ಆಕೆಯೆದುರಿಗೆ ನಿಂತುಕೊಂಡು "... ಹಾಯ್ ನಾನು ನಿನ್ನ... ಇಲ್ಲೇ ಬೆಂಗಳೂರಾಗಿ ಇದಿನಿ.. " ಎಂದು ಬಿಟ್ಟ. ಒಂದೇ ಕ್ಷಣ. ಗುರುತಿಸಿದ್ದ ಆಕೆಯ ಮುಖ ಅಪರಿಚಿತವಾಯಿತು. ಹುಬ್ಬೇರಿ ಕೆಳಗಿಳಿದು ಪೋನಿ ಮಾಡಿಸಿದ್ದ ಕೂದಲನ್ನು ಹಿಂತಳ್ಳುತ್ತಾ ಅದೇನು ಹೇಳಿದಳೋ... ಅವನಿಗೆ ಜೀವನಾಘಾತವಾಗಿ ಹೋಗಿತ್ತು. ಅಷ್ಟೆ,
ಜಿಟಿಜಿಟಿ ಬೀಳುತ್ತಿದ್ದ ಮಳೆ... ಎಂಟನೆ ಕ್ರಾಸಿನ ಆ ಕೊಚ್ಚೆ... ಚಿಕ್ಕ ಪುಟ್ಪಾತು... ಸರಸರನೆ ಸರಿದಾಡುವ ಜನ.. ಉಹೂ೦.. ಯಾವೆಂದರೆ ಯಾವುದೂ ಅವನ ಕಣ್ಣಿಗೆ ಬೀಳಲಿಲ್ಲ. ಆತ ಕುಸಿದು ಗಟಾರಿನ ಗಲೀಜಿನ ಪಕ್ಕಕ್ಕೆ ಅನಾಮತ್ತು ನೆಲಕ್ಕೆ ಕುಳಿತು ಅತ್ತು ಬಿಟ್ಟಿದ್ದ. ತೀರ ಮಗುವಿನಂತೆ ನನ್ನ ಮಡಿಲಿಗೊರಗಿ. ಅಷ್ಟೆ ಆತ ಮತ್ತೆಂದೂ ಚೇತರಿಸಿಕೊಳ್ಳಲೇ ಇಲ್ಲ. ಅದೇನು ಆಕೆ ಹೇಳಿದ್ದಳೋ, ಅದೇ ಚಿಂತೆ ಅವನನ್ನು ಕ್ರಮೇಣ ಹಣಿದು ಬಿಟ್ಟಿತ್ತು. ಒಂದೆಡೆಯಲ್ಲಿ ಪ್ರೀತಿಸಿದವಳು ಕೈಕೊಟ್ಟ ಆಘಾತ. ಕೈಗೆ ಸಿಕ್ಕೂ ಸಿಗದಂತಾಗುತ್ತಿದ್ದ ನೌಕರಿಗಳು, ಎನೇ ಮಾಡಿದರೂ ಆಗಾಗ ಕೈ ಕೊಡುತ್ತಿದ್ದ ಅದೃಷ್ಟ... ನೋವಾ.. ಹತಾಶೆಯಾ ನಿರಾಶೆಯಾ ೧೯೯೭ರ ಅದೇ ಜುಲೈ ರವಿವಾರ ಮಿತ್ರರೊ೦ದಿಗೆ ಮುತ್ತತ್ತಿ ಕಾಡಿಗೆ ಪಿಕ್ ನಿಕ್ಗೆ ಹೋದವನು ಊಟಕ್ಕೆಂದು ಕಣ್ಬಿಡುವಷ್ಟರಲ್ಲಿ ಆತ ಹೊರಟುಹೋಗಿದ್ದ. ಎಲ್ಲಿ ಹುಡುಕಿದರೂ ಇಲ್ಲ.
ಅಂದು ಹೋದವ ಮತ್ತೇ ಬರಲೇ ಇಲ್ಲ. ಹೇಗೆ ಬಂದಾನು...? ಅದಕ್ಕೂ ಎರಡು ದಿನದ ಮೊದಲಷ್ಟೆ ಕೂಡಾ ಆತ ಅವಳ ಬಗ್ಗೆಯೇ ಮಾತಾಡಿದ್ದ. ಯಾಕೋ ಆಕಿನ್ನ ಮರಿಯಾಕ ಆಗೋಲ್ಲ ಸಂತೋಷಾ..." ಎಂದು ಕಣ್ಣಿರಾಗಿದ್ದ. ಆಕೆಯ ಮೇಲಿನ ಪ್ರೇಮ ಅವನನ್ನು ಇನ್ನಿಲ್ಲದಂತೆ ಜೀವವನ್ನೇ ಕೊಡುವಷ್ಟು ಹಿಂಡಿ ಬಿಟ್ಟಿತ್ತಾ, ಕೇಳೋಣವೆಂದರೆ ಮುಕ್ಕಾಲಲ್ಲ ಅರ್ಧ ಜೀವನದ ಹಾದಿಯನ್ನು ಸವೆಸುವ ಮೊದಲೇ, ಇದೇ ಕಾಳಿ ನದಿಲಿ ಮೀನಿಗಿಂತಲೂ ವೇಗವಾಗಿ ನೀರಿಗೆ ಬೀಳುತ್ತಿದ್ದವನು ಮುತ್ತತ್ತಿಯ ಮೊಳಕಾಲವರೆಗಿನ ನೀರಿನಲ್ಲಿ ಐಕ್ಯವಾಗಿ ಬಿಟ್ಟ ಅಂದರೆ ಅದು ಇವತ್ತಿಗೂ ಅಚ್ಚರಿಯೇ. ಅದು ಆತ್ಮ ಹತ್ಯೆಯಾ... ಬೇಕಾಗೇ ತಾನಾಗೇ ಬಲಿಗೊಟ್ಟ ಜೀವವಾ... ಅಥವಾ ಕೊಂಚ ಮಾತ್ರ ಉಸಿರುಕಟ್ಟುವಿಕೆಯಿಂದ ಬಳಲುತ್ತಿದ್ದವನ ಅಕಸ್ಮಿಕವಾ... ಗೊತ್ತಿಲ್ಲ. ಅವನ ಮುಕ್ಕಾಲಿಗಿಂತ ಮೊದಲೇ ಮುಗಿದ ಬದುಕಿನ ಹಾದಿಯಲ್ಲಿ ನಾನು ಇಂದಿಗೂ ಒಂಟಿ... ನೆನಪುಗಳು ಮಾತ್ರ ಅವನ ಪವಿತ್ರ ಪ್ರೇಮದಂತೆ.
ಅಸಲಿಗೆ ಹೀಗೆ ಬದುಕಿನ ಪಯಣದಲ್ಲಿ ರೈಲೇರಿದಂತೆ ಬಂದು ಇಳಿದು ಬಿಡುವ ಆತ್ಮೀಯ ಜೀವಗಳು ಪಯಣದುದ್ದಕ್ಕೂ ತಮ್ಮ ಛಾಪನ್ನು ಬಿಟ್ಟು ಬಿಡುತ್ತವಲ್ಲ ಬಹುಶ: ಬದುಕಿನ ಜೀವಸೆಲೆಗೆ ಅವು ಜೀವಂತಿಕೆಯಾಗುತ್ತವಾ...? ಗೊತ್ತಿಲ್ಲ. ಆದರೆ ಮನದಾಳದಲ್ಲೆಲ್ಲೋ ಆಗೀಗ ಒದ್ದೆಯಾಗುವುದಂತೂ ನಿಜ. ಅಷ್ಟಕ್ಕೂ ನನ್ನ ಅವನ ಮೊದಲ ಭೇಟಿಯಾದದ್ಡೂ ಇಂತಹದ್ದೇ ಫೆಬ್ರುವರಿಯ ಮೊದಲವಾರದಲ್ಲ.
ಸಾಲುಗಳು
- 472 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ