Skip to main content

ಇನ್ ಕಮ್ ಟ್ಯಾಕ್ಸ್ ರಿಟರ್ನ್ ಇ-ಫೈಲ್ ಮಾಡುವದು ಹೇಗೆ?

ಬರೆದಿದ್ದುJuly 21, 2013
1ಅನಿಸಿಕೆ

ಈ ಲೇಖನದಲ್ಲಿ ಆದಾಯ ತೆರಿಗೆ ರಿಟರ್ನ್ ಅನ್ನು ಇ-ಫೈಲ್ ಮಾಡುವದು ಹೇಗೆ ಅನ್ನುವದನ್ನು ವಿವರಿಸುತ್ತೇನೆ. ಯಾವುದೇ ವ್ಯಕ್ತಿ ಸರಕಾರ ನಿಗದಿ ಪಡಿಸಿರುವದಕ್ಕಿಂತ ಹೆಚ್ಚು ಒಟ್ಟೂ ಆದಾಯ ಹೊಂದಿದ್ದರೆ ಅವರು ಕಡ್ಡಾಯವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. ಸಾಮಾನ್ಯವಾಗಿ ಪ್ರತಿವರ್ಷ ಜುಲೈ ೩೧ರ ಒಳಗೆ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕು. ಯಾವುದೇ ಟ್ಯಾಕ್ಸ್ ಬಾಕಿ ಇರದಿದ್ದರೆ ಜುಲೈ ೩೧ರ ಸಂತರವೂ ಯಾವುದೇ ದಂಡ ಕೊಡದೇ ಫೈಲ್ ಮಾಡಬಹುದು.

ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವದರಿಂದ ಹಲವು ಲಾಭಗಳಿವೆ.

  • ವಿದೇಶಕ್ಕೆ ವೀಸಾ ಅರ್ಜಿ ಸಲ್ಲಿಸುವಾಗ ಇದು ಬೇಕು.
  • ಬ್ಯಾಂಕಿನಿಂದ ಮನೆ, ವಾಹನ, ಪರ್ಸನಲ್ ಸಾಲ (ಲೋನ್) ಪಡೆಯಲು ಸಹಕಾರಿ.

ನೆನಪಿಡಿ ಬರಿ ನಿಮ್ಮ ಸಂಬಳ ಅಥವಾ ಆದಾಯ ಮಾತ್ರ ಅಲ್ಲ, ಬ್ಯಾಂಕ್ ಅಲ್ಲಿ ಹಣ ಇಟ್ಟಿದ್ದರೆ ಅದಕ್ಕೆ ಬರುವ ಬಡ್ಡಿಗೂ ಟ್ಯಾಕ್ಸ್ ಇದೆ. ಸಾಮಾನ್ಯವಾಗಿ ಬ್ಯಾಂಕುಗಳು ಆದಾಯ ತೆರಿಗೆ ವ್ಯಾಪ್ತಿಗೆ ಬರುವವರಿಂದ ಬ್ಯಾಂಕುಗಳು ಬಡ್ಡಿಯ ಹಣದಲ್ಲಿ ೧೦% ನ್ನು ಟಿಡಿಎಸ್ ರೂಪದಲ್ಲಿ ಟ್ಯಾಕ್ಸ್ ತೆಗೆದು ಆದಾಯ ತೆರಿಗೆ ಇಲಾಖೆಗೆ ನೀಡುತ್ತದೆ. ಆದರೆ ನೀವು ೨೦% ಅಥವಾ ೩೦% ಟ್ಯಾಕ್ಸ್ ಸ್ಲ್ಯಾಬ್ ಅಲ್ಲಿ ಬರುತಿದ್ದರೆ ಆ ಬಡ್ಡಿ ಹಣಕ್ಕೆ ಉಳಿದ ೧೦% ಅಥವಾ ೨೦%  ಟ್ಯಾಕ್ಸ್ ಅನ್ನು ನೀವಾಗಿಯೇ ಆದಾಯ ತೆರಿಗೆ ಇಲಾಖೆಗೆ ಕಟ್ಟಬೇಕು.

ಅಕಸ್ಮಾತ್ ಯಾವುದೇ ಆದಾಯಕ್ಕೆ ಪಾವತಿ ಮಾಡಬೇಕಾದ ಟ್ಯಾಕ್ಸ್ ಅನ್ನು ಘೋಷಿಸದಿದ್ದಲ್ಲಿ ೧% ಪ್ರತಿ ತಿಂಗಳು ಟ್ಯಾಕ್ಸ್ ಹಣಕ್ಕೆ ದಂಡ ನೀಡಬೇಕಾಗಿ ಬರಬಹುದು.

ಸಾಮಾನ್ಯವಾಗಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಹಲವು ವಿಧಾನಗಳಿವೆ. ಇದರಲ್ಲಿ ಒಂದು ನೇರವಾಗಿ ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಅಲ್ಲಿ ವಿವರಗಳನ್ನು ಅಪಲೋಡ್ ಮಾಡಿ ನಂತರ ಅಕ್ನಾಲೆಜ್ ಮೆಂಟ್ ಅನ್ನು ಪ್ರಿಂಟ್ ಔಟ್ ತೆಗೆದು ಸಹಿ ಮಾಡಿ ಪೋಸ್ಟ್ ಮಾಡಿದ್ರೆ ಆಯ್ತು. ೧೦ರೂ ದಲ್ಲಿ ಕೆಲಸ ಮುಗಿಯುತ್ತದೆ. ಇದು ಕಂಪನಿಯಿಂದ ಸಂಬಳ ಟಿಡಿಎಸ್ ಆಗಿ ಬರುವ ನೌಕರರಿಗೆ ಫಾರ್ಮ್ ೧೬ ಇಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸುಲಭ ವಿಧಾನ.

ಹಂತ 1: ಆದಾಯ ತೆರಿಗೆ ತಾಣದಲ್ಲಿ ರಿಜಿಸ್ಟರ್ ಆಗಿ

ಇನ್ ಕಮ್ ಟ್ಯಾಕ್ಸ್ ರಿಟರ್ನ್ ಇ-ಫೈಲ್ ಮಾಡಲು ಈ ಮುಂದಿನ ತಾಣಕ್ಕೆ ಭೇಟಿ ನೀಡಿ.

https://incometaxindiaefiling.gov.in/

ಹೊಸಬರಾಗಿದ್ದರೆ Register Yourself (ನಿಮ್ಮನ್ನು ನೊಂದಣಿ ಮಾಡಿರಿ) ಕ್ಲಿಕ್ ಮಾಡಿ. ಬೇಕಾದ ಡಿಟೈಲ್ಸ್ ತುಂಬಿ ರಿಜಿಸ್ಟರ್ ಮಾಡಿರಿ. ಈಗಾಗಲೇ ರಿಜಿಸ್ಟರ್ ಆಗಿದ್ದರೆ Login here(ತಾಣ ಪ್ರವೇಶಿಸು) ಕ್ಲಿಕ್ ಮಾಡಿ.

ಹಂತ ೨ : ಲಾಗಿನ್ ಮಾಡಿ

ಲಾಗಿನ್ ಆಗಲು User ID ಜಾಗದಲ್ಲಿ ನಿಮ್ಮ PAN (ಪ್ಯಾನ್) ನಂಬರ್ ಹಾಕಿ. Password ಜಾಗದಲ್ಲಿ ಪಾಸ್ ವರ್ಡ್ ತುಂಬಿರಿ. ನೆನಪಿಡಿ ಯೂಸರ್ ಐಡಿ ಹಾಗೂ ಪಾಸವರ್ಡ್ ಅಲ್ಲಿ ಯಾವುದೇ ಸ್ಪೇಸ್ ಇರಬಾರದು. ಪಾಸ್ ವರ್ಡ್ ಕೇಸ್ ಸೆನ್ಸಿಟಿವ್ ಆಗಿರುತ್ತದೆ.

ಹಂತ ೩ : ಎಡಭಾಗದಲ್ಲಿರುವ ಡೌನ್ ಲೋಡ್ ಐಟಿಆರ್ ಲಿಂಕ್ ಕ್ಲಿಕ್ ಮಾಡಿ

ಎಡ ಭಾಗದಲ್ಲಿ Quick Links (ಶೀಘ್ರ ಲಿಂಕುಗಳು) ವಿಭಾಗದಲ್ಲಿ Download ITR (ಡೌನ್ ಲೋಡ್ ಐಟಿಆರ್) ಲಿಂಕನ್ನು ಕ್ಲಿಕ್ ಮಾಡಿ.

ಹಂತ ೪ : ನಿಮಗೆ ಸೂಕ್ತವಾದ ಐಟಿಆರ್ ಫಾರಂ ಡೌನ್ ಲೋಡ್ ಮಾಡಿ

ಈಗ ಇಲ್ಲಿ ಅಸೆಸ್ ಮೆಂಟ್ ಇಯರ್ (Assessment Year) ಅನ್ನು ಆಯ್ಕೆ ಮಾಡಿ. ಉದಾಹರಣೆಗೆ ನೀವು ಎಪ್ರಿಲ್ ೨೦೧೨ ರಿಂದ ಮಾರ್ಚ್ ೨೦೧೩ ರವರೆಗಿನ ಇನ್ ಕಮ್ ಟ್ಯಾಕ್ಸ್ ಫೈಲ್ ಮಾಡುತ್ತಿದ್ದರೆ ಅದರ ಅಸೆಸ್ ಮೆಂಟ್ ಇಯರ್ ೨೦೧೩-೧೪ ಆಗಿರುತ್ತದೆ. ನೀವು ಕಂಪನಿಯಿಂದ ಬರುವ ಸಂಬಳ ಹಾಗೂ ಬಡ್ಡಿಗೆ ಇನಕಮ್ ಟ್ಯಾಕ್ಸ್ ಫೈಲ್ ಮಾಡುತ್ತಿದ್ದರೆ ಐಟಿಆರ್ ೧ ಅನ್ನು ಆಯ್ಕೆ ಮಾಡಿರಿ. ಇಲ್ಲದಿದ್ದರೆ ನಿಮಗೆ ಹೊಂದುವ ಐಟಿಆರ್ ಫಾರ್ಮ್ ಆಯ್ಕೆ ಮಾಡಿರಿ.

ಹಂತ ೫ : ಎಕ್ಸೆಲ್ ಅಲ್ಲಿ ವಿವರ ತುಂಬಿ ಟ್ಯಾಕ್ಸ್ ಲೆಕ್ಕ ಮಾಡಿ ಎಕ್ಸ್.ಎಂ.ಎಲ್ ಜನರೇಟ್ ಮಾಡಿ

ಇದು ಎಕ್ಸೆಲ್ ಶೀಟ್ ಆಗಿದ್ದು ನೀವು ಎಂ.ಎಸ್ ಎಕ್ಸೆಲ್ ಅಲ್ಲಿ ಮ್ಯಾಕ್ರೋ ಆನ್ ಮಾಡಿ ಓಪನ್ ಮಾಡಬೇಕು. ಈ ಫಾರ್ಮ್ ಅಲ್ಲಿ  ನೀವು ತುಂಬ ಬೇಕಾದ ಸೆಲ್ ಗಳು ತಿಳಿ ಹಸಿರು ಬಣ್ಣದಲ್ಲಿದೆ. ಹೆಚ್ಚಿನ ವಿವರ ಫಾರ್ಮ್ ೧೬ ಅಲ್ಲಿ ಇರುತ್ತದೆ. ಐಟಿಆರ್ ಫಾರ್ಮ್ ಅಲ್ಲಿ ನಿಮ್ಮ ವಿವರ, ಆದಾಯದ ವಿವರ, ಇತರ ಆದಾಯಗಳ ವಿವರ, ಇನ್ವೆಸ್ಟಮೆಂಟ್ ಗಳು ಇತ್ಯಾದಿಗಳನ್ನು Income Details (ಆದಾಯ ವಿವರ) ವರ್ಕ್ ಶೀಟ್ ಅಲ್ಲಿ ತುಂಬಿ. ಟಿಡಿಎಸ್ (TDS) ವರ್ಕ್ ಶೀಟ್ ಅಲ್ಲಿ ನಿಮ್ಮ ಕಂಪನಿ ಸಂಬಳದಿಂದ ಕಡಿತ ಮಾಡಿದ ಟ್ಯಾಕ್ಸ್ ವಿವರ, ಅವರ ಟ್ಯಾನ್ ನಂಬರ್ ಇತ್ಯಾದಿ ಬರೆಯಿರಿ. ಬ್ಯಾಂಕ್ ಅಲ್ಲಿ ಬಡ್ಡಿಗೆ ಕಡಿತವಾದ ಟ್ಯಾಕ್ಸ್ ವಿವರ, ನೀವಾಗಿಯೇ ಮುಂಗಡವಾಗಿ ನೀಡಿದ ಟ್ಯಾಕ್ಸ್ ವಿವರ ಸಹ ಬರೆಯಿರಿ.

ಟ್ಯಾಕ್ಸ್ ಪೇಡ್ ಹಾಗೂ ವೆರಿಫಿಕೇಶನ್ (Taxes paid and verification) ವರ್ಕ್ ಶೀಟ್ ಅಲ್ಲಿ ಬ್ಯಾಂಕ್ ವಿವರ, ಸ್ಥಳ, ದಿನಾಂಕ ಇತ್ಯಾದಿ ವಿವರ ಬರೆಯಿರಿ. ಇಲ್ಲಿ ಬರೆಯ ಬೇಕಾದ ಐಎಫ್ ಎಸ್ ಸಿ ಕೋಡ್ ಅನ್ನು ಈ ಮುಂದಿನ ತಾಣದಲ್ಲಿ ಪಡೆಯಬಹುದು.

http://www.banklocations.in/index.jsp

80G ವರ್ಕ್ ಶೀಟ್ ಅಲ್ಲಿ ನೀವು ಟ್ಯಾಕ್ಸ್ ರಿಯಾಯಿತಿ ಇರುವ ದಾನ ಅಥವಾ ಡೊನೇಶನ್ ಮಾಡಿದ್ದರೆ ಅದರ ವಿವರ ಬರೆಯಿರಿ.

ಎಲ್ಲವನ್ನು ತುಂಬಿದ ಮೇಲೆ ಮೊದಲ ವರ್ಕ್ ಶೀಟ್ ಆದ Income Details (ಆದಾಯ ವಿವರ) ಕ್ಕೆ ಹೋಗಿ ವೆಲಿಡೇಟ್ (Validate) ಅನ್ನು ಕ್ಲಿಕ್ ಮಾಡಿ. ಶೀಟ್ ಈಸ್ ಒಕೆ ಎಂಬ ಅಲರ್ಟ್ ಬಂದರೆ ಎಲ್ಲ ಸರಿಯಾಗಿದೆ ಎಂದರ್ಥ. ಆದರೂ ಇನ್ನೊಮ್ಮೆ ಮ್ಯಾನುವಲ್ ಆಗಿ ಎಲ್ಲವೂ ಸರಿ ಆಗಿದೆಯೇ ಎಂದು ಪರೀಕ್ಷಿಸಿ. ನಂತರ ಕ್ಯಾಲ್ಕುಲೇಟ್ ಟ್ಯಾಕ್ಸ್ (Calculate tax) ಗುಂಡಿ ಒತ್ತಿ. ಆಗ ಟ್ಯಾಕ್ಸ್ ಲೆಕ್ಕ ಹಾಕಲ್ಪಟ್ಟು ಆಯಾ ಫೀಲ್ಡ್ ಗಳಲ್ಲಿ ತುಂಬಲ್ಪಡುತ್ತದೆ. ಈಗ ನೀವು ಜನರೇಟ್ ಎಕ್ಸ್ ಎಂ ಎಲ್ ( Generate) ಕ್ಲಿಕ್ ಮಾಡಿ. ಅದು ಪ್ರಿ ಎಕ್ಸ್ ಎಂ ಎಲ್ ಎಂಬ ವರ್ಕ್ ಶೀಟ್ ಗೆ ಹೋಗುತ್ತದೆ.ಅಲ್ಲಿನ ಮಾಹಿತಿ ಸರಿಯಾಗಿದೆಯೇ ಪರೀಕ್ಷಿಸಿ. ಇದ್ದರೆ ಸೇವ್ ಎಕ್ಸ್. ಎಂ. ಎಲ್ (Save XML) ಬಟನ್ ಕ್ಲಿಕ್ ಮಾಡಿ. ಈ ಎಕ್ಸೆಲ್ ಇರುವ ಫೋಲ್ಡರ್ ಅಲ್ಲಿ ಹೊಸ ಎಕ್ಸ್ ಎಂ ಎಲ್ ಫೈಲ್ ಕ್ರಿಯೇಟ್ ಆಗಿ ಸೇವ್ ಆಗುತ್ತದೆ.

ಹಂತ ೬ : ಎಕ್ಸ್.ಎಂ.ಎಲ್ ಫೈಲ್ ಅನ್ನು ಅಪ್ ಲೋಡ್ ಮಾಡಿ

ಹಂತ ಐದರಲ್ಲಿ ಸೇವ್ ಆದ ಎಕ್ಸ್ ಎಂ ಎಲ್ ಅನ್ನು ಈಗ ಅಪ್ ಲೋಡ್ ಮಾಡಬೇಕು. ಎಡ ಭಾಗದಲ್ಲಿರುವ ಕ್ವಿಕ್ ಲಿಂಕ್ಸ್ ಅಲ್ಲಿ ಅಪಲೋಡ್ ರಿಟರ್ನ್ಸ್ (Upload Return) ಮೇಲೆ ಕ್ಲಿಕ್ ಮಾಡಿ. ಅರ್ಜಿ ತೆರೆಯುತ್ತದೆ. ಅಲ್ಲಿ ಪ್ಯಾನ್ ನಂಬರ್, ಐಟಿಆರ್ ಫಾರ್ಮ್ ಹೆಸರು, ಅಸೆಸ್ ಮೆಂಟ್ ಇಯರ್, ಎಕ್ಸ್ ಎಂ ಎಲ್ ಫೈಲ್ ಬ್ರೌಸ್ ಮಾಡಿ, ಡಿಜಿಟಲ್ ಸೈನ್ ಇಲ್ಲದಿದ್ದರೆ ಅದನ್ನು ನೋ ಎಂದು ಆಯ್ಕೆ ಮಾಡಿ. ಸಬ್ ಮಿಟ್ (Submit) ಗುಂಡಿ ಒತ್ತಿ.

ಆಗ ಬಂದ ಅಕ್ನಾಲೆಜ್ ಮೆಂಟ್ ಅನ್ನು ಪ್ರಿಂಟ್ ಔಟ್ ತೆಗೆದು ಆದಾಯ ತೆರಿಗೆ ಇಲಾಖೆಗೆ ಪೋಸ್ಟ್ ಮಾಡಿ.

ಫೈಲ್ ಸರಿಯಾಗಿ ಅಪ್ಲೋಡ್ ಆದರೆ ನಿಮಗೆ ಅಕ್ನಾಲಜ್ ಮೆಂಟ್ ನ ಲಿಂಕ್ ಮುಂದಿನ ಪುಟದಲ್ಲಿ ಬರುತ್ತದೆ ಅದನ್ನು ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿ. ಈ ಡಾಕ್ಯುಮೆಂಟ್ ನಿಮಗೆ  ಈಮೇಲ್ ಅಲ್ಲಿ ಅಟ್ಯಾಚ್ ಮೆಂಟ್ ಆಗಿಯೂ ಬರುತ್ತದೆ. ಈ ಡಾಕ್ಯುಮೆಂಟ್ ಅನ್ನು ಪ್ರಿಂಟ್ ಔಟ್ ತೆಗೆದು ಅದರಲ್ಲಿ ಕೊನೆಯಲ್ಲಿ ನೀಡಿರುವ ವಿಳಾಸಕ್ಕೆ ಒಂದು ತಿಂಗಳ ಒಳಗೆ ಸಾಮಾನ್ಯ ಪೋಸ್ಟ್ ಮಾಡಿ.

ನಿಮಗೆ ಕೆಲವೇ ತಿಂಗಳಲ್ಲಿ ಈಮೇಲ್ ಹಾಗೂ ಪೋಸ್ಟ್ ಮುಖಾಂತರ ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಅಕ್ನಾಲೆಜ್ ಮೆಂಟ್ ಹಾಗೂ ರಿಫಂಡ್ ಚೆಕ್ ಬರುತ್ತದೆ. ನೀವು ಬ್ಯಾಂಕ್ ಅಕೌಂಟ್ ಟ್ರಾನ್ಫರ್ ಆಯ್ಕೆ ಮಾಡಿದ್ದರೆ ಬೇಗ ರಿಫಂಡ್ ಆಗುತ್ತದೆ.

ಸಾಧ್ಯವಿದ್ದಷ್ಟು ಈ ಪ್ರಾಸೆಸ್ ಅನ್ನು ವಿವರಿಸಲು ಪ್ರಯತ್ನಿಸಿದ್ದೇನೆ. ಸಂದೇಹಗಳಿದ್ದರೆ/ತಪ್ಪಿದ್ದರೆ ತಿಳಿಸಿ. ನಾನು ಈ ವಿಧಾನವನ್ನು ಹಲವು ವರ್ಷಗಳಿಂದ ಬಳಸುತ್ತಿದ್ದೇನೆ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

venkatb83 ಶನಿ, 02/08/2014 - 17:40

ಪ್ರಿಯ ಸಂಪಾದಕ  ಮಿತ್ರ ರಾಜೇಶ್  ಅವರೇ 

ತೆರಿಗೆ ಪಾವತಿ ಬಗ್ಗೆ ಸರಳ  ಬರಹ - ನನಗೆ ಮೊದಲಿಂದಲೂ ಈ ಬಗ್ಗೆ ತಿಳಿವ ಆಸಕ್ತಿ ಇತ್ತು- ಅದೀಗ ನಮ್ಮದೇ ಮಾತ್ರ ಭಾಷೆಯಲ್ಲಿ ತಿಳಿದು ಖುಷಿ ಆಯ್ತು ..

ಈ ತರ್ಹದ ಇನ್ನಸ್ಟು ಬರಹಗಳಿಗಾಗಿ ಎದುರು ನೋಡುವೆವು..

 

ಶುಭವಾಗಲಿ

 

\|/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.