ನನ್ನ ಕವಿತೆಗೆ
ನನ್ನ ಕವಿತೆಗೆ
ಹೊಸತನದ ಹುರುಪಿಲ್ಲ, ಹಳೆತನದ ನೆನಪಿಲ್ಲ,
ತನ್ನತನದ ಹೊಳಪಿಗೆ ಕೊರತೆಯಿಲ್ಲ......!!
ಭಾವನೆಗಳ ಬಂಧವಿಲ್ಲ, ಕಾಮನೆಗಳ ಅಂದವಿಲ್ಲ
ಮನುಜನ ಕಾಮ ಕ್ರೋಧಗಳ ಗಂಧವಿಲ್ಲ.....!!
ನನ್ನ ಕವಿತೆಯು
ಗೋಳಿನ ಕಥೆಯಲ್ಲ, ವಿರಹದ ವ್ಯಥೆಯಲ್ಲ ,
ಇತಿಹಾಸದಲಿ ವಿಜೃಂಭಿಸುವ ಸಾಹಸಗಾಥೆಯೂ ಅಲ್ಲ....!!
ಭರವಸೆಯ ಬೆಳಕಲ್ಲ, ದುರಾಸೆಯ ಕೊಳಕಲ್ಲ
ಬರೀ ಪ್ರಕೃತಿ -ಕೃತಿಯ ಪುಳಕಗಳು......!!
ನನ್ನ ಕವಿತೆ
ಹಾಡಾಗಲೊಲ್ಲದು , ಪಾಡಾಗಲೊಲ್ಲದು,
ಪುಸ್ತಕದಲಿ ಅಚ್ಚಾಗಲೊಲ್ಲದು.......!!
ಈ ಸೋಮಾರಿಗೆ ಪಲ್ಲವಿಯಿಲ್ಲ, ಚರಣಗಳಿಲ್ಲ,
ಪ್ರಾಸಗಳ ಅಲಂಕಾರವಿಲ್ಲ, ಛಂಧಸ್ಸಿನ ಅಹಂಕಾರವಿಲ್ಲ....!!
ನನ್ನ ಕವಿತೆಗೆ
ಕ್ರಾಂತಿಯ ಸೋಗಿಲ್ಲ, ಶಾಂತಿಯ ನೊಗವಿಲ್ಲ,
ತೃಪ್ತಿಯ ಭೋಗಕ್ಕೆ ಎಲ್ಲೆಯಿಲ್ಲ......!!
ಗೆಲ್ಲುವ ಶಕ್ತಿಯಿಲ್ಲ, ಸೋಲಿಸುವ ಯುಕ್ತಿಯಿಲ್ಲ,
ತನ್ನನು ತಾನೇ ಪ್ರೀತಿಸುವ ಭಕ್ತಿಯೇ ಎಲ್ಲ......!!
ನನ್ನ ಕವಿತೆಗೆ
ದುಖದ ದುಮ್ಮಾನವು ಬೇಡ, ಸುಖದ ಸನ್ಮಾನವು ಬೇಡ,
ಸುಖ -ದುಖಗಳೊಡನೆ ಸಾಗುವ ಬದುಕಿನ ಆತ್ಮಾಭಿಮಾನವೊಂದೆ ಸಾಕು..!!
ಈ ಕವಿತೆಗೆ ಅರ್ಥವೂ ಇಲ್ಲ, ಅನರ್ಥವೂ ಇಲ್ಲ...
ಜಗವೆಲ್ಲ ತನ್ನನ್ನು ಹೊಗಳಲಿ ಎಂಬ ಸ್ವಾರ್ಥವು ಮೊದಲೇ ಇಲ್ಲ..........!!!
:-ವಿಶ್ವನುಡಿ
ಸಾಲುಗಳು
- 712 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ