Skip to main content

ಕಳಚಿದ ಪೊರೆ-2

ಬರೆದಿದ್ದುJune 16, 2012
noಅನಿಸಿಕೆ

                                                                                   ಕಳಚಿದ ಪೊರೆ-2 (ಸಣ್ಣ ಕತೆ)            

               ಮದುವೆಯಾಗಿ ರಜಾ ಮುಗಿದು ಮೊದಲನೆಯ ದಿನ ಕೆಲಸಕ್ಕೆ ಹೊರಡಲು ಬೇಗ ಎದ್ದ ಬಾಲು, ಮುದ್ದು ಮಡದಿಗೆ ಹೇಳಿದ. ಸ್ನಾನಕ್ಕೆ ಬೇಗ ನೀರು ರೆಡಿ ಮಾಡಿ, ಟವೆಲ್, ಅಂಡರ್ವೇರ್ ಒಳಗಿಡು, ವಿಭಾ ಹೇಳಿದಳು, ನಾನು ತಿಂಡಿ ಮಾಡಬೇಕು. ಅತ್ತೆಯನ್ನು ಕೇಳಿ, ಬಾಲು ಗೊಣಗಾಡಿದ, ಮೊದಲ ದಿನವೇ ಮುಂಜಾನೆ ಮುದ್ದು ಮಡದಿಯ ಮುತ್ತು ಮಿಸ್ಸಾಯಿತಲ್ಲ, ಎಂದು ಗೊಣಗಾಡಿದ, ಅವಳಿಗೆ ಗಂಡನ ಗೊಣಗಾಟ ಕೇಳಿಸಿತು, ಬಾತ್ ರೂಮಿನ ಬಳಿ ನಿಂತು ಹೇಳಿದಳು. ಇಷ್ಟು ದಿನ ಅಮ್ಮ ತಾನೇ ನಿಮಗೆ ಎಲ್ಲಾ ಕೆಲಸ ಮಾಡುತ್ತಿದ್ದುದು, ಈಗ ನೀವು ಮಾತು ಮಾತಿಗೂ ನನ್ನನ್ನೇ ಕರೆಯುತ್ತಿದ್ದರೇ ಅಮ್ಮ ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ, ಅವರ ಮನಸ್ಸಿನಲ್ಲಿ ನೀವು ಅವರಿಂದ ದೂರವಾಗುತ್ತಿರುವಂತೆ ಭಾಸವಾಗುತ್ತದೆ.ನಾನು ಯಾವುದೇ ಕಾರಣಕ್ಕೂ ತಾಯಿ-ಮಗನನ್ನು ದೂರ ಮಾಡಲಾರೆ, ಅವರು ಸಂತೋಷವಾಗಿರಬೇಕಾದರೆ ನೀವು ಅವರ ಪ್ರತಿ ಮಾತನ್ನು ಕೇಳಬೇಕು, ಅವರಿಗೂ ವಯಸ್ಸಾಗುತ್ತಾ ಬಂದಿದೆ, ಯಾವುದೇ ಕಾರಣಕ್ಕೂ ನಾನು ಅವರ ಮನಸ್ಸು ನೋಯಿಸುವುದಿಲ್ಲ. ಪ್ರತಿದಿನ ಮನೆಯಿಂದ ಹೊರಗೆ ಹೋಗುವಾಗ ಅವರ ಕಾಲು ಮುಟ್ಟಿ ಅಶೀರ್ವಾದ ಪಡೆದು ಹೋಗಿ, ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ, ಬೇಗ ಸ್ನಾನ ಮಾಡಿ ಬನ್ನಿ, ಸಂಜೆ ನಿಧಾನವಾಗಿ ಮಾತನಾಡೋಣ ಎನ್ನುತ್ತಾ ಅಡಿಗೆ ಮನೆಯತ್ತ ಹೊರಟಳು ವಿಭಾ. ಗಂಡ ಅವಕ್ಕಾದ,  ಕೇವಲ ಹತ್ತು ನಿಮಿಷದಲ್ಲಿ ಮುತ್ತಿನಂತಹ ಮಾತು ಹೇಳಿದಳು, ಮೂವತ್ತು-ನಲವತ್ತು ವರ್ಷ ಸಂಸಾರ ಮಾಡಿದ ಅನುಭವಿಯಂತೇ ಮಾತನಾಡುತ್ತಾಳೆ, ಸಣ್ಣ ವಯಸ್ಸಿಗೆ ಎಷ್ಟು ಸಂಸ್ಕಾರ ಕಲಿತಿದ್ದಾಳೆ, ನಾನು ನಿಜವಾಗಿ ಅದೃಷ್ಟವಂತ ಎಂದು ಸ್ನಾನಕ್ಕೆ ಹೊರಟ ಬಾಲು. ಅತ್ತ ಬಾಲುವಿನ ತಾಯಿಗೂ ಶಾಕ್. ಸಾಮಾನ್ಯವಾಗಿ ಈ ಕಾಲದಲ್ಲಿ ಮದುವೆಯಾದ ತಕ್ಷಣ ಗಂಡನನ್ನು ಕೈಗೊಂಬೆ ಮಾಡಿಕೊಂಡು ಕುಣಿಸುವ ಹೆಂಡತಿಯರೇ ಹೆಚ್ಚಾಗಿರುವಾಗ ಅತ್ತೆಯ ಬಗ್ಗೆ ಎಷ್ಟು ಅಕ್ಕರೆ, ವಿನಯ, ಭಯ-ಭಕ್ತಿ, ಇಂಥಾ ಸೊಸೆಯನ್ನು ಪಡೆದ ನಾನು ಸಹ ಪುಣ್ಯವಂತೆ ಎಂದು ಅವಳಿಗೆ ಮನಸ್ಸಿನಲ್ಲಿಯೇ ಆಶೀರ್ವಾದ ಮಾಡಿದಳು.

                              ಮಧ್ಯಾಹ್ನ ವಿಭಾಗೆ ತವರಿನಿಂದ ಫೋನ್ ಬಂತು. ಹೇಗಿದ್ದಿಯಾ, ಅರ್ಧ ದಿನ ಬಂದು ಹೋಗು, ಬೇಕಾದರೆ ಕಾರು ಕಳುಹಿಸುತ್ತೇವೆ, ವಿಭಾ ತವರಿನವರಿಗೆ ಮುಖಕ್ಕೆ  ಹೊಡೆದವಳಂತೆ ಹೇಳಿದಳು. ನೋಡಿ ನೀವು ಕನ್ಯಾದಾನ ಮಾಡಿದ ನಂತರ ನನಗೂ ನಿಮಗೂ ಸಂಬಂಧ ಕಡಿದು ಹೋಯ್ತು. ನಾನು ಸಧ್ಯಕ್ಕೆ ಎಲ್ಲಿಗೂ ಬರುವುದಿಲ್ಲ. ನನಗೆ ನನ್ನ ಗಂಡನ ವ್ಯವಹಾರಗಳತ್ತ ಗಮನ ನೀಡಬೇಕು, ಅತ್ತೆಯ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು, ದಯವಿಟ್ಟು ನನಗೆ ಪದೇ ಪದೇ ಫೋನ್ ಮಾಡಿ ತೊಂದರೆ ಕೊಡಬೇಡಿ. ಹಾಗೂ ನೀವು ಇತ್ತ ಬಂದು ತೊಂದರೆ ಕೊಡಬೇಡಿ, ನನ್ನ ಗಂಡನಿಗೆ ಹೇಳದೇ ಕೇಳದೇ ನಾನು ಮನೆ ಹೊಸಿಲನ್ನು ಕೂಡ ದಾಟುವುದಿಲ್ಲ. ಅವರೇ ನನ್ನ ಸರ್ವಸ್ವ ಎನ್ನುತ್ತಾ ಫೋನಿಟ್ಟಳು. ಸಂಜೆ ಗಂಡ ಬರುವ ಸ್ವಲ್ಪ ಸಮಯಕ್ಕೆ ಮೊದಲು ಪಕ್ಕದ ಮನೆಯವರು ಬಂದು ಬಹಳ ಮಾತನಾಡುತ್ತಿದ್ದಾಗ ವಿಭಾ ನೇರವಾಗಿ ಅವರಿಗೆ ಹೇಳಿದಳು, ನೋಡಿ ಮನೆಗೆ ಗಂಡಸರು ಬರುವ ಹೊತ್ತಾಯಿತು, ದಯವಿಟ್ಟು ಇನ್ನೊಂದು ದಿನ ಮಾತಾಡೋಣ, ಈಗ ಹೊರಡಿ, ಅತ್ತೆಗೆ ತನ್ನ ಸೊಸೆಯ ಬಗ್ಗೆ ಬಹಳ ಹೆಮ್ಮೆಯೆನಿಸಿತು, ಅಬ್ಬ ಎಂಥ ಮುದ್ದಿನ ಸೊಸೆ, ಗಂಡನೆಂದರೆ, ಮನೆಯೆಂದರೆ ಅದೆಷ್ಟು ಗೌರವ, ಯಾವ ಜನ್ಮದ ಪುಣ್ಯದ ಫಲವೋ, ನನ್ನ ಅದೃಷ್ಟ ಎಂದು ಮೆಚ್ಚಿಕೊಂಡಳು. ರಾತ್ರಿ ಊಟಕ್ಕೆ ಕುಳಿತಾಗ ಬಾಲು ಮಡದಿಗೆ ಊಟ ಮಾಡೆಂದು ಹೇಳಿದಾಗ ವಿಭಾ ಹೇಳಿದಳು. ಅಮ್ಮನ ಊಟ ಮುಗಿದು ಅವರಿಗೆ ಔಷದ ಕೊಟ್ಟು ಅವರು ಮಲಗಿದ ನಂತರ ಊಟ ಮಾಡುತ್ತೇನೆ. ಬಾಲು ಸಂಭ್ರಮದಿಂದ ಮಡದಿಯ ಹಣೆಗೆ ಹೂಮುತ್ತನಿಡುತ್ತಾ ಹೇಳಿದ, ನಿನ್ನಂಥ ಸಂಸ್ಕಾರವಿರುವ ಹೆಂಡತಿಯ ಪಡೆದ ನಾನು ಭಾಗ್ಯವಂತ, ವಿಭಾ ಹೇಳಿದಳು, ನಿಮ್ಮಂತಾ ಪತಿ, ನಂದಗೋಕುಲದಂತ ಮನೆ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಫಲವಿರಬೇಕು ಎಂದಳು. ಅತ್ತೆ ಸೊಸೆಯನ್ನು ಕರೆದು ಹೇಳಿದಳು. ಸೊಸೆಯೆಂದರೆ ಸಂಸಾರ ಒಡೆಯುವವಳು ಎಂದು ತಪ್ಪಾಗಿ ತಿಳಿದುಕೊಂಡಿದ್ದೆ, ನಿನ್ನಿಂದ ನನ್ನ ಅಹಂಕಾರದ ಪೊರೆ ಕಳಚಿತು. ನಿನ್ನನ್ನು ದೇವರು ನೂರು ವರ್ಷ ಚೆನ್ನಾಗಿಟ್ಟಿರಲಿ ಎಂದು ಸೊಸೆಯನ್ನು ಆತ್ಮೀಯತೆಯಿಂದ ಆಲಿಂಗಿಸಿ ಕೊಂಡಳು.

                                                                                                                                                       *ರವಿಚಂದ್ರವಂಶ್*                                                                                             

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.