Skip to main content

ಹೀಗಿದೆ ನಮ್ಮ ನಾಗರೀಕತೆ ಮತ್ತು ವಿಕಾಸ....!

ಬರೆದಿದ್ದುApril 27, 2012
10ಅನಿಸಿಕೆಗಳು

ಮ್ಮ ದೇಶ , ನಮ್ಮ ನಾಡು, ನಮ್ಮ ಜನ, ನಮ್ಮ ಭಂಧು ಮಿತ್ರರು, ನಮ್ಮ ಭಾಷೆ ಅಂದರೆ ಯಾರಿಗೆತಾನೇ ಮೆಚ್ಚುಗೆಯಾಗುವುದಿಲ್ಲ ಹೇಳಿ...?
ಮಂಗನಿಂದ ಮಾನವನಾಗುವರೆಗೂ ಕೂಡಾ ವಿಕಾಸದ ಹಾದಿಯಲ್ಲಿ ನಾವು ಬಹಳಷ್ಟು ನಡೆದು ಬಂದು ಇಂದಿನ ಈ ಮಾಯಾನಗರಿಯಲ್ಲಿ ಜೀವನ ನಡೆಸಲು ಒಗ್ಗಿ ಎಲ್ಲಾ ಅಹಿತಗಳನ್ನೂ ಅತ್ಯಾಚಾರ ಅನಾಚಾರಗಳನ್ನೂ ಸದ್ದಿಲ್ಲದೇ ಮೌನವಾಗಿ ಸಸಿಕೊಂಡು ನಡೆಯುವ ಹಂತ ತಲುಪಿದ್ದೇವೇನೋ ಅನ್ನಿಸುತ್ತದೆ. ಮಾನವನ ವಿಕಾಸದ ಜೊತೆಜೊತೆಗೇ ಅವರು ಜೀವಿಸುವ ಮನೆ ಮಠ ಸುತ್ತಮುತ್ತಲಿನ ವಾತಾವರಣ ಎಲ್ಲವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಬರುವುದು ಸಹಜ. ಈಗ ಇಲ್ಲಿ ನಾನು ಹೇಳಹೊರಟಿರುವುದು ಹಿಂದೊಮ್ಮೆ ಸುಂದರವಾಗಿದ್ದ ಉಧ್ಯಾನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಮ್ಮ ರಾಜ್ಯದ ರಾಜಧಾನಿ - ಬೆಂಗಳೂರು ನಗರದಲ್ಲಿ ವಿಕಾಸದ ಹೆಸರಿನಲ್ಲಿ ಹಾಡು ಹಗಲೇ ಎಲ್ಲರೆದುರೂ ನಡೆಯುತ್ತಿರುವ ಮೋಸ, ಲೂಟಿ, ಅದರ ಮುಖ, ದೇಹ ಮತ್ತು ಅಂಗಾಂಗಗಳಿಗೆ ದಿನ ನಿತ್ಯ ಮಾಡುತ್ತಿರುವ ಅತ್ಯಾಚಾರ ಹಾಗೂ ಆಗುತ್ತಿರುವ ಘೋರ - ಬರ್ಬರ ಪ್ಲಾಸ್ಟಿಕ್ ಸರ್ಜರಿಗಳ ಬಗ್ಗೆ....!
ಕೇವಲ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಇದ್ದ ಬೆಂಗಳೂರು ನಗರದ ವಾತಾವರಣ, ಮನ ಮೋಹಕ ಉಧ್ಯಾನಗಳಿಂದ ತುಂಬಿ ತುಳುಕುತ್ತಾ ಪ್ರವಾಸಿಗರನ್ನು ಕೈಬೀಸಿ ತನ್ನೆಡೆಗೆ ಕರೆಯುತ್ತಿದ್ದ ಆ ಸೌಂಧರ್ಯವನ್ನು ಕಂಡಿರುವವರಿಗೆ ನಿಜಕ್ಕೂ ಇಂದಿನ ನವನಾಗರೀಕತೆಯ ನಾಗಾಲೋಟದಲ್ಲಿ ಎಗ್ಗು ಮುಗ್ಗಿಲ್ಲದೆ ಯಾವುದೇ ನಿಯಂತ್ರಣವಿಲ್ಲದೇ ಸಿಕ್ಕಾಪಟ್ಟೆ ಬೆಳೆದು ವಿಕಾಸಗೊಳ್ಳುತ್ತಿರುವ ವಿಸ್ಮಯ ತುಂಬಿದ ಈ ನಗರಿಯ ಸಧ್ಯದ ಅವಸ್ಥೆಯನ್ನು ನೋಡಿ ಮನದೊಳಗೇ ಮರುಕಪಡುವುದರಲ್ಲಿ ಸಂದೇಹವೇ ಇಲ್ಲ. ಇಂದಿನಷ್ಟು ಕಲುಷಿತವಲ್ಲದ ಅಂದಿನ ವಾತಾವರಣದಲ್ಲಿ ಈ ನಗರಿಯನ್ನು ಹವಾನಿಯಂತ್ರಿತ ನಗರ ಎಂದು ಕರೆಯುತ್ತಿದ್ದರು. ಆದರೆ ಇಂದು ಹವಾ ಚಲಿಸುವುದನ್ನೇ ನಿಯಂತ್ರಿಸಿ ಉಸಿರಾಟಕ್ಕೂ ಸ್ವಚ್ಛ ಗಾಳಿ ಸಿಗದಂತಾ ಮಾಲಿನ್ಯ ತುಂಬಿದ ವಾತಾವರಣ ಇಂದಿನ ದಿನಗಳಲ್ಲಿ ಬರೀ ಐಟೀ ಮತ್ತು ಹೈಟೆಕ್ ಉಧ್ಯಮಗಳ ಹೆಸರಿನಲ್ಲಿ ಯಾವುದೇ ಕಟ್ಟು ನಿಟ್ಟಾದ ನೀತಿ ನಿಯಮಗಳನ್ನು ಜಾರಿಗೆ ತರದೇ ಆ ರೀತಿ ಏನಾದರೂ ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಬೇಕಾದ ಸರ್ಕಾರ ನಡೆಸುತ್ತಿರುವ ಶ್ವೇತ ಖಾದಿ ವಸ್ತ್ರಧಾರಿಗಳು, ಅಧಿಕಾರಿಗಳು ಪಾಲಿಸಬೇಕಾದ ಜನಸಾಮಾನ್ಯರು ಇವರೆಲ್ಲರೂ ಒಟ್ಟಿಗೇ ಸೇರಿ ಎಲ್ಲಾ ಗೊತ್ತಿದ್ದೂ ಗೊತ್ತಿಲ್ಲದವರಂತೆ ನಡೆದುಕೊಳ್ಳುತ್ತಾ ಇಡೀ ನಗರದ ಬೆಳವಣಿಗೆಯನ್ನು ನಿಯಂತ್ರಣವಿಲ್ಲದೇ ಬೆಳೆಯಲು ಬಿಟ್ಟು ಇಂದಿನ ಈ ದುಸ್ಥಿತಿಗೆ ಕಾರಣರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂದು ವಿಸ್ತಾರವಾಗಿದ್ದ ರಸ್ತೆಗಳೆಲ್ಲಾ ಇಂದು ಏಕಮುಖ ರಸ್ತೆಗಳಾಗಿ ಪರಿವರ್ತನೆಗೊಂಡು ಬರೀ ಜನ ಮತ್ತು ವಾಹನಗಳಿಂದ ತುಂಬಿ ಗಿಜಿಗುಡುತ್ತಿವೆ. ಹೊಗೆ ತುಂಬಿದ ಕಲುಷಿತ ಗಾಳಿ ಮತ್ತು ನೀರನ್ನು ಕುಡಿದು ಬದುಕಲೂ ಹೆಣಗಾಡುವಂತೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ನಗರಕ್ಕಿಂತಲೂ ಹಳೇ ನಗರಗಳಾದ ದೆಹಲಿ, ಕಲ್ಕತ್ತಾ ಇವುಗಳಲ್ಲಿ ನಗರ ವಿಕಾಸ ಮತ್ತು ಸಾಮಾನ್ಯ ಜನರಿಗೆ ಒದಗಿಸಿರುವ ರಸ್ತೆ, ಸಾರಿಗೆ ಸೌಲಭ್ಯ, ಇತ್ಯಾದಿಗಳಿಗೆ ಹೋಲಿಸಿದರೆ ಬೆಂಗಳೂರಿನ ಶೀಘ್ರ ಬೆಳವಣಿಗೆ ಅದಕ್ಕೆ ತಕ್ಕ ವೇಗದಲ್ಲೇ ಸಮಾನಾಂತರವಾಗಿ ಅನುಷ್ಟಾನಕ್ಕೆ ತರಬೇಕಾದ ಕೆಲವು ಮೂಲಭೂತ ಸೌಲಭ್ಯಗಳು, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ, ನೀರು ಮತ್ತು ವಿಧ್ಯುತ್ ಪೂರೈಕೆ, ಅನಧಿಕೃತವಾಗಿ ಬೆಳೆಯುತ್ತಿರುವ ಬಡಾವಣೆಗಳು, ವಾಣಿಜ್ಯ ಮಳಿಗೆಗಳ ಹತೋಟಿ, ಕಾನೂನು ಸುವ್ಯವಸ್ಥೆ ಇತ್ಯಾದಿಗಳ ಬಗ್ಗೆ ಯಾವ ಸರ್ಕಾರವೂ ಚಿಂತಿಸಲೇ ಇಲ್ಲ ಈಗಿರುವ ಸರ್ಕಾರ ಚಿಂತಿಸುತ್ತಲೂ ಇಲ್ಲ. ಬೆಂಗಳೂರಿಗಿಂತಲೂ ದಟ್ಟ ಜನಸಂದಣಿ ಹೊಂದಿರುವ ದೆಹಲಿಯಂತಾ ಮಹಾನಗರದಲ್ಲಿ ಕೇವಲ ಎರಡೇ ವರ್ಷಗಳಲ್ಲಿ ಮೆಟ್ರೋ ರೈಲು ಯೋಜನೆ ಪೂರ್ಣಗೊಂಡು ಕಾರ್ಯರೂಪಕ್ಕೆ ಬಂದಿದ್ದನ್ನು ಇಲ್ಲಿ ಸ್ಮರಿಸಲೇಬೇಕು. ಸರಿಯಾದ ಯೋಜನೆ ಯಿಲ್ಲದೇ ಇಕ್ಕಟ್ಟಾದ ರಸ್ತೆಗಳಲ್ಲೇ ಕಟ್ಟಿ ಇದ್ದ ರಸ್ತೆಗಳನ್ನೂ ಸಂಕುಚಿತಗೊಳಿಸುತ್ತಾ ಕುಂಟುತ್ತಾ ಮುಗ್ಗರಿಸುತ್ತಾ ಎದ್ದು ಬಿದ್ದು ಸಾಗುತ್ತಾ ತನ್ನದೇ ರೀತಿಯಲ್ಲಿ ಸಾಗುತ್ತಿರುವ \"ನಮ್ಮ ಮೆಟ್ರೋ\" ಅದೆಂದು ನಿಜವಾಗಿ ನಮ್ಮೆಲ್ಲರ ಸುಗಮ ಸಾರಿಗೆಯ ನಾಡಿಯಾಗುವುದೋ ತಿಳಿಯದಾಗಿದೆ.
ಉದಾಹರಣೆಗೆ ಬೆಂಗಳೂರು ಮೈಸೂರು ರಸ್ತೆಯನ್ನು ಜೋಡಿ ರಸ್ತೆಯಾಗಿ ಮಾರ್ಪಡಿಸುವ ವೇಳೆ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮೂಲ ರಸ್ತೆಯ ಇಕ್ಕೆಲಗಳಲ್ಲೂ ಹಲವಾರು ವರುಷಗಳಿಂದಲೂ ಬೆಳೆದು ಸಾಲು ಸಾಲಾಗಿ ನಿಂತು ನೆರಳು ಮತ್ತು ಸ್ವಚ್ಚ ಗಾಳಿ ನೀಡುತ್ತಿದ್ದ ಹೆಮ್ಮರಗಳನ್ನು ಕರುಣೆಯಿಲ್ಲದೇ ಕಡಿದು ಧರೆಗುರುಳಿಸಿ ಅದರ ಜಾಗದಲ್ಲಿ \"ಕಾಂಕ್ರೀಟ್ ಮರ\" ಗಳನ್ನು ನೆಟ್ಟು ಬಟಾ ಬಯಲಿನಲ್ಲಿ ನೆರಳಿಲ್ಲದೇ ಬೆಂಗಾಡಿನಲ್ಲಿ ಸಾಗುತ್ತಿರುವ ಅನುಭವ ಆಗುವಂತೆ ಮಾಡಿದ್ದಾರೆ. ಇದೇ ರೀತಿ ಹಲವು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪರಿವರ್ತನೆ ಮಾಡುವಾಗಲೂ ವೃಕ್ಷರಾಶಿಗಳ ಬರ್ಬರ ಹತ್ಯೆ ಮತ್ತು ಮಾರಣ ಹೋಮ ಕಣ್ಣೆದುರಿಗೇ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿವೆ. ಸರ್ಕಾರ ಆ ರೀತಿಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ರಸ್ತೆಯ ಮದ್ಯ ಭಾಗದಿಂದ ಶುರುಮಾಡಿ ಅದರ ಎರಡೂ ಕಡೆ ಸಮಾನಾಂತರವಾಗಿ ಅಳತೆ ಮಾಡಿ ನಿಶಾನೆ ಹಾಕಿ ಇರುವ ಮರಗಳನ್ನು ಕಡಿಯುವ ಹಾಗೆ ಮಾಡುವ ಬದಲು ಇರುವ ಮರಗಳನ್ನು ಇದ್ದಲ್ಲೇ ಉಳಿಸಿ ಇರುವ ರಸ್ತೆಯ ಎರಡೂ ಪಕ್ಕಗಳಲ್ಲಿ ಎರಡು ಹೊಸಾ ರಸ್ತೆಗಳನ್ನು ನಿರ್ಮಿಸಲು ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಮೊದಲು ಒಂದು ರಸ್ತೆ ನಂತರ ಮತ್ತೊಂದು ರಸ್ತೆಯನ್ನು ಹಂತ ಹಂತವಾಗಿ ನಿರ್ಮಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಲ್ಲಿ ಮುಂದೊಂದು ದಿನ ಎರಡು ರಸ್ತೆಗಳ ಬದಲಾಗಿ ಮೂರು ರಸ್ತೆಗಳು ಇದ್ದು ಅವುಗಳ ನಡುವೆ ಹಸಿರು ವೃಕ್ಷಗಳು ಸಾಲು ಸಾಲಾಗಿದ್ದು ಪರಿಸರ ರಕ್ಷಣೆಯೂ ಆದಂತಾಗುತ್ತಿತ್ತಲ್ಲವೇ...? ಇವೆಲ್ಲಾ ಮಾಡಲು ಬರೀ ಇಂಜಿನೀಯರ್ ಗಳೇ ಆಗಬೇಕೆಂದೇನೂ ಇಲ್ಲ, ಸರ್ವತೋಮುಖ ಅಭಿವೃದ್ಧಿಯ ಅಚಲ ನಂಬಿಕೆ, ದೇಶದ ಪ್ರಗತಿಯೇ ಮುಖ್ಯ ಎಂಬ ಹೆಬ್ಬಯಕೆ, ಸ್ವಚ್ಛ ಮನಸ್ಸು ಹಾಗೂ ಅನ್ನ ನೀಡುತ್ತಿರುವ ನೌಕರಿಗೆ ಬದಲಾಗಿ ನಿಸ್ಪೃಹ ಸೇವಾ ಮನೋಭಾವ ಇಂತಹಾ ಯೋಜನೆಗಳನ್ನು ನಿರೂಪಿಸುವ ಹಾಗೂ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಅಂತಹಾ ಕಾರ್ಯಗಳಲ್ಲಿ ವಿಙ್ನ ಬಾರದಂತೆ ನೋಡಿಕೊಳ್ಳುವ ಸಹಾಯ ಹಸ್ತ ಮತ್ತು ಮನಸ್ಸು ರಾಜಕಾರಣಿಗಳಲ್ಲಿ ಹುಟ್ಟಿದಾಗ ಮಾತ್ರಾ ಯಾವುದೇ ರೀತಿಯ ಕನಸಿನ ಕಲ್ಪನೆಯ ಲೋಕವನ್ನು ನಿಜವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯ...!
ಮತ್ತೊಂದು ಉತ್ತಮ ಉದಾಹರಣೆಯೆಂದರೆ ಕೇವಲ ಒಂದು ಒಂದೂವರೆ ವರ್ಷಗಳ ಹಿಂದಷ್ಟೇ ತಯಾರಾದ ದೇವನಹಳ್ಳಿಯಲ್ಲಿ ನಿರ್ಮಿಸಿರುವ ಹೊಸಾ ಏರ್ಪೋರ್ಟ್ ಗೆ ಹೆಬ್ಬಾಳದಿಂದ ಹೋಗುವ ಜೋಡಿರಸ್ತೆ ಅದರ ನಡುವಿನ ದಿಬ್ಬಗಳಲ್ಲಿ ಹಸಿರು ಗಿಡಗಳನ್ನು ಹೊತ್ತು ಪ್ರತೀ ಅಡ್ಡ ರಸ್ತೆಗಳ ಬಳಿ ಕಲ್ಲಿನಲ್ಲಿ ಕೆತ್ತಿದ್ದ ಆನೆ, ಕುದುರೆ, ಶಂಖ, ಚಕ್ರ, ಇತ್ಯಾದಿ ಸುಂದರ ಶಿಲ್ಪಗಳಿಂದ ಸುಸಜ್ಜಿತಗೊಂಡು ಮತ್ತು ಜೋಡಿ ವಿಧ್ಯುತ್ ದೀಪಗಳ ಕಂಬಗಳ ಸಾಲುಗಳಿಂದ ರಾತ್ರಿ ಹೊತ್ತೂ ಕಂಗೊಳಿಸುತ್ತಾ ಅಬ್ಭಾ... ಅಂತೂ ಕೊನೆಗೂ ಬಹಳ ವರ್ಷಗಳಿಂದ ಕಂಡಿದ್ದ ಕನಸಿನ ಒಂದು ಸುಂದರ ರಸ್ತೆ ನಿರ್ಮಾಣವಾಯ್ತು ಎಂದು ನಿಟ್ಟುಸಿರು ಬಿಟ್ಟು ಚೇತರಿಸಿಕೂಳ್ಳುತ್ತಿದ್ದಂತೆಯೇ ಅಂದರೆ ಕೇವಲ ಮೂರು ನಾಲ್ಕು ತಿಂಗಳುಗಳಲ್ಲೇ ಮತ್ತೆ ರಸ್ತೆಯ ಮದ್ಯ ಬಾಗದಲ್ಲಿದ್ದ ವಿದ್ಯುತ್ ಕಂಬಗಳನ್ನು ಕಿತ್ತೊಗೆದು ಭೂಮಿ ಕೊರೆಯುವ ಯಂತ್ರಗಳನ್ನು ಹಾಕಿ ಮತ್ತೊಂದು ಹೊಸಾ ಸೇತುವೆ ನಿರ್ಮಾಣ ಕಾರ್ಯಕ್ಕೆಂದು ಅನ್ವೇಷಣಾ ಕಾರ್ಯದಲ್ಲಿ ತೊಡಗಿ ಕ್ರಮೇಣ ಕಾಲುದಾರಿಗಳ ಪಕ್ಕದಲ್ಲಿ ನಿರ್ಮಿಸಿದ್ದ ಡ್ರೈನ್ ಗಳು ಕಾಂಕ್ರೀಟ್ ರಸ್ತೆಗಳು, ಹೊಸದಾಗಿ ನಿರ್ಮಿಸಿದ್ದ ಕಾಂಪೌಂಡ್ ಗೋಡೆಗಳು ಇತ್ಯಾದಿಗಳನ್ನು ನಿರ್ದಾಕ್ಷಿಣ್ಯವಾಗಿ ಒಡೆದು ಹಾಕಿ ಮತ್ತೆ ಆ ರಸ್ತೆಯ ಮೇಲೊಂದು ರಸ್ತೆ ನಿರ್ಮಿಸುತ್ತಾ ಬರೀ ವಾಹನಗಳಲ್ಲಿ ಓಡಾಡುವವರಿಗೆ ಮಾತ್ರವಲ್ಲದೇ ಪಾದಚಾರಿಗಳಿಗೂ ನಿತ್ಯ ತೊಂದರೆ ತಂದೊಡ್ಡಿದ್ದಾರೆ. ಇಂತಹಾ ಯೋಜನೆಗಳನ್ನು ಮಾಡುವಾಗ ಇದರ ಮೇಲೆ ಮತ್ತೊಂದು ರಸ್ತೆ ಕಟ್ಟಬೇಕೆಂಬ ಪರಿವೆಯೇ ಇರಲಿಲ್ಲವೇ ಈ ನಮ್ಮ ಮಹಾ ನಗರ ಯೋಜನಾಕರ್ತರಿಗೆ...? ಇದೆಲ್ಲಾ ತಿಳಿದೂ ತಿಳಿಯದವರಂತೆ ನಟಿಸಿ ಒಡೆಯುವುದು ಮತ್ತೆ ಕಟ್ಟುವುದು ಎರಡರಲ್ಲೂ ಗುತ್ತಿಗೆದಾರ ಮತ್ತು ಅದನ್ನು ನೀಡುವ ಅಧಿಕಾರಿಗಳು, ಸರ್ಕಾರ ನಡೆಸುತ್ತಿರುವ ನಮ್ಮ ಜನನಾಯಕರು ಇವರೆಲ್ಲರ ನಡುವೆ ಒಂದು ರೀತಿಯ \"ನೆಕ್ಸಸ್\" ಅಂದರೆ ಹೊಂದಾಣಿಕೆ ಇದ್ದು ಹಣದ ಹೊಳೆಯೇ ಹರಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಅಲ್ಲವೇ...? ಹಾಗೇನಾದರೂ ಮೊದಲೇ ಮಾಸ್ಟರ್ ಪ್ಲಾನ್ ನಲ್ಲಿ ಇವೆಲ್ಲಾ ಮಾಡಿಬಿಟ್ಟಿದ್ದರೆ ಪ್ರತೀ ವರ್ಷವೂ ಇವರ ಪಾಕೆಟ್ ತುಂಬಲು ಹಣ ಎಲ್ಲಿಂದ ಬರುತ್ತದೆ ಹೇಳಿ...? ಹಾಗಾಗಿ ದಿನ ನಿತ್ಯ ಅನಾನುಕೂಲಗಳ ಮದ್ಯೆಯೂ ನಗು ಬಾರದಿದ್ದರೂ ನಗುನಗುತ್ತಾ ಕಿರಿಕಿರಿ ಆಗುತ್ತಿದ್ದರೂ ಸಹಿಸಿಕೊಂಡು ನಡೆಯಬೇಕಾದ ದುರಾದೃಷ್ಟ ನಮ್ಮ ನಿಮ್ಮಂತಾ ಜನ ಸಾಮಾನ್ಯರಿಗೆ ಮಾತ್ರಾ ಬಂದಿದೆ ಅಲ್ಲವೇ...? ಪಂಜಾಬ್ ಮತ್ತು ಹರ್ಯಾಣಾ ರಾಜ್ಯಗಳ ಸಂಯುಕ್ತ ರಾಜಧಾನಿಯಾಗಿರುವ ಚಂಡೀಗರ್ ನಗರ ಇಡೀ ಭಾರತ ದೇಶದಲ್ಲೇ ಮಾದರೀ ನಗರ ಮತ್ತು ವಿಶ್ವ ಧರ್ಜೆಯ ಮಾಸ್ಟರ್ ಪ್ಲಾನ್ ಮಾಡಿ ಕಟ್ಟಿ ಅದರ ಮೂಲ ನೀತಿ ನಿಯಮಗಳನ್ನು ಇಂದಿಗೂ ಪರಿಪಾಲಿಸಿಕೊಂಡು ಬರುತ್ತಿರುವ ಒಂದು ನಗರವಾಗಿರುವ ಹೆಗ್ಗಳಿಕೆ ಹೊಂದಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಆ ನಗರಕ್ಕೆ ಬೇಟಿ ಕೊಟ್ಟಿದ್ದೆ ಮತ್ತೆ ಹಿಂದಿನ ವರ್ಷವೂ ಹೋಗಿ ಬಂದಿರುವೆ ಆದರೆ ಮೇಲುನೋಟಕ್ಕೆ ಅಂದು ಹೇಗಿತ್ತೋ ಇಂದಿಗೂ ಹಾಗೇ ಬೆಳವಣಿಗೆಯಿಲ್ಲದೇ ತಟಸ್ಥವಾಗಿರುವುದೇನೋ ಆ ನಗರ ಎನ್ನಿಸುತ್ತದೆ. ಆದರೆ ಅದೂ ಕೂಡಾ ಬೆಳೆಯುತ್ತಲೇ ಇದ್ದರೂ ಅದು ಅರಿವಿಗೆ ಬಾರದಂತೆ ಆ ಇಡೀ ನಗರವನ್ನು ಯೋಜಿಸಲಾಗಿದೆ ಆನಗರದ ವಾಸ್ತುಶಿಲ್ಪಿ ಮತ್ತು ಯೋಜಕರಾದ \"ಲೀ ಕಾರ್ಬ್ಯೂಸಿಯರ್\" ಅವರಿಗೆ ನಾವು ಪ್ರಣಾಮ ಸಲ್ಲಿಸಲೇಬೇಕು. ನಮ್ಮ ಬೆಂಗಳೂರಿನ ಮಹಾ ನಗರ ಅಭಿವೃದ್ಧಿ ಯೋಜನಾಕರ್ತರು ಮತ್ತು ರಾಜಕಾರಣದಲ್ಲೇ ಮುಳುಗಿ ಕ್ರಿಮಿ ಕೀಟಗಳಂತೆ ಒದ್ದಾಡುತ್ತಿರುವ ಈ ಜನ ನಾಯಕರು ಆ ನಗರವನ್ನು ಒಮ್ಮೆಯಾದರೂ ನೋಡಿ ಬಂದರೆ ಒಳ್ಳೆಯದು ಆಗ ಅವರಿಗೆ ಮಾಸ್ಟರ್ ಪ್ಲಾನ್ ಮತ್ತು ನಗರ ಯೋಜನೆ ಎಂದರೆ ಏನು ಮತ್ತು ಹೇಗೆ ಮಾಡಬೇಕೆಂದು ಸ್ವಲ್ಪವಾದರೂ ಅರಿವಾಗಬಹುದು ಎಂದು ನನ್ನ ಅಭಿಪ್ರಾಯ.
ಎಲ್ಲಾ ಪಕ್ಷಗಳ ರಾಜಕಾರಣಿಗಳೂ ಅವರವರ ಸರ್ಕಾರ ಆಡಳಿತ ನಡೆಸುವಾಗ ಬಾಯಲ್ಲಿ ಮಾತ್ರಾ ದೇಶದ ಪ್ರಗತಿಗಾಗಿ ನಾವು ಆರೀತಿ ಮಾಡುತ್ತೇವೆ ಈ ರೀತಿ ಮಾಡುತ್ತೇವೆ ಎಂದು ಬೊಗಳೆ ಬಿಡುತ್ತಾ ನಿಜವಾಗಿ ಕಾರ್ಯ ಮಾಡುವಾಗೆ ಕೇವಲ ಅದರಿಂದ ತಮಗೆ ಮತ್ತು ತಮ್ಮ ಪಕ್ಷಕ್ಕೆಷ್ಟು ಲಾಭ ಇದೆ ಎನ್ನುವುದನ್ನು ಮಾತ್ರಾ ಗಣನೆಗೆ ತೆಗೆದುಕೊಂಡು ವರ್ತಿಸಿದ್ದೇ ಹೆಚ್ಚು. ತಾವು ಇರುವವರೆಗೂ ತಿಂದು ಉಂಡು ಬಿಟ್ಟುಹೋಗುವ ಮುನ್ನ ಕೈಗೆ ಸಿಕ್ಕಷ್ಟು ಬಾಚಿಕೊಂಡೂ ಹೋಗಬೇಕೆಂಬ ಧೋರಣೆಯಿಂದಲೇ ಈಗಿನ ದುಸ್ಥಿತಿಗೆ ಕಾರಣವಾಗಿದ್ದಾರೆಯೇ ವಿನಹಾ ಈ ನಗರ ನಮ್ಮದು, ಇದನ್ನು ಉಳಿಸಿ ಎಲ್ಲರಿಗೂ ಅನುಕೂಲವಾಗುವಂತೆ ಒಂದು ವ್ಯವಸ್ಥಿತ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದು, ನಾಗರೀಕರು ಕೆಲವು ನೀತಿ ನಿಯಮಗಳನ್ನು ಪಾಲಿಸಿ ನಗರದ ಪ್ರಗತಿ ಮತ್ತು ಉನ್ನತಿಗೆ ಕಾರಣರಾಗುವಂತೆ ಬೆಳೆಸಿ ಪೋಶಿಸಬೇಕೆಂದು ಯಾವ ಸರ್ಕಾರವೂ ಯೋಚಿಸಲೇ ಇಲ್ಲ, ಮುಂದೆ ಯೋಚಿಸಿ ಇನ್ನಾದರೂ ಎಚ್ಚೆತ್ತುಕೊಳ್ಳುವ ಸಾಧ್ಯತೆಯೂ ಸಧ್ಯಕ್ಕಂತೂ ಕಂಡುಬರುತ್ತಿಲ್ಲ. ದಿನ ನಿತ್ಯ ರಾಜಕೀಯದ ಹೆಸರಿನಲ್ಲಿ ಕಚ್ಚಾಟ ಗುದ್ದಾಟ ಇವರು ಅವರನ್ನು ಅವರು ಮತ್ತೊಬ್ಬರನ್ನು ಹೀಗೆ ಒಬ್ಬರ ಕಳ್ಳತನವನ್ನು ಮತ್ತೊಬ್ಬರು ತೋರಿಸುತ್ತಾ ಮತ್ತೊಬ್ಬರದನ್ನು ಇನ್ನೊಬ್ಬರು ಮುಚ್ಚಿಡುತ್ತಾ ದೊಂಬರಾಟ ನಡೆಸಿದ್ದಾರೆ, ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ದೇಶದ ಪ್ರಜೆಗಳ ತೆರಿಗೆ ಹಣವನ್ನು ಮನಸಾ ಕುಡಿದು ತಿಂದು ತೇಗಿ ಲೂಟಿಹೊಡೆಯುತ್ತಿದ್ದಾರೆ. ಇಂತಹಾ ಪರಿಸ್ಥಿತಿಯಲ್ಲಿ ಈ ದೇಶ ಉದ್ಧಾರ ಮಾಡಿ ಎಂದು ಯಾರಿಗೆ ಮೊರೆಹೋಗಬೇಕು ಎಂಬುದನ್ನು ಈ ದೇಶದ ಸತ್ಪ್ರಜೆಗಳಾಗಿ ನಾವೇ ನಿರ್ಧರಿಸಬೇಕೇ ವಿನಹಾ ಬೇರೆ ಯಾರೋ ಸರ್ಕಾರದವರು ಮಾಡುತ್ತಾರೆಂದು ಕೈ ಕಟ್ಟಿ ಸುಮ್ಮನೆ ಕುಳಿತರಾಗುವುದಿಲ್ಲ. ಇಂತಹಾ ಜನ ನಾಯಕರನ್ನು ಮತ್ತೆ ಅಧಿಕಾರಕ್ಕೆ ತರುವ ಮೊದಲು ಮತ್ತೊಮ್ಮೆ ಯೋಚಿಸಿ ಓಟುದಾರರಾದ ನಾವೇ ಸರಿಯಾದ ನಿರ್ಧಾರ ತೆಗೆದುಕೊಂಡಲ್ಲಿ ಮಾತ್ರಾ ನಾವು ಈ ದೇಶದ ಪ್ರಗತಿಯಲ್ಲಿ ಪಾಲುದಾರರಾಗುತ್ತೇವೆಯೇ ವಿನಹಾ ಯಾರು ಅಧಿಕಾರಕ್ಕೆ ಬಂದರೆ ನಮಗೇನು ಎಂದು ಮೂಗು ಮುಚ್ಚಿ ದುರ್ನಾತ ಸಹಿಸಿಕೊಂಡಿದ್ದರೆ ಕ್ರಮೇಣ ನಾವೂ ಅವರೊಡನೆ ಕೊಳೆತು ನಾರುತ್ತೇವೆಂಬುದರಲ್ಲಿ ಸಂದೇಹವೇ ಇಲ್ಲ. ಓಟುಹಾಕಿ ಅಧಿಕಾರಕ್ಕೆ ತರಲು ಅಧಿಕಾರವಿರುವ ನಮಗೆ ಅವರು ತಪ್ಪು ಮಾಡುತ್ತಿದ್ದಾರೆ, ಉಂಡ ಮನೆಗೇ ದ್ರೋಹ ಬಗೆಯುತ್ತಿದ್ದಾರೆ ಎಂದು ಅರಿತಾಗ ಅಂತಹವರನ್ನು ಹುಚ್ಚುನಾಯಿಯನ್ನು ಅಟ್ಟಾಡಿಸಿಕೊಂಡು ಹೊಡೆಯುವಂತೆ ಕುತ್ತಿಗೆ ಪಟ್ಟಿ ಹಿಡಿದು ಬೂಟಿನಿಂದ ಏಟುಕೊಟ್ಟು ರಸ್ತೆಯಲ್ಲಿ ಮೆರವಣಿಗೆ ಮಾಡಿಸುವ ಅಧಿಕಾರವೂ ಇದೆಯೆಂಬುದನ್ನು ಅರಿತು ಅದನ್ನು ಕಾರ್ಯರೂಪಕ್ಕೆ ತಂದಾಗ ಹಾಗೂ ಅಂತಹಾ ನಾಯಕರ ಜತೆ ಕೈಜೋಡಿಸಿ ತಮ್ಮ ಅನುಕೂಲಕ್ಕಾಗೇ ಕಾರ್ಯ ನಿರ್ವಹಿಸುತ್ತಾ ಅವರು ಹಾಕಿದ ತಾಳಕ್ಕೆ ಕುಣಿಯುವಂತಹಾ ಬ್ರಷ್ಟ ಅಧಿಕಾರಿಗಳನ್ನೂ ಅವರ ಕಾರ್ಯಾಲಯದಿಂದ ಹಿಡಿದೆಳೆದು ಹೊರತಂದು ಎಲ್ಲರೆದುರು ಅವರ ನಿಜರೂಪವನ್ನು ಬಯಲು ಮಾಡುವಂತಾದಾಗ ಮಾತ್ರ ಈ ದೇಶ ಪ್ರಗತಿಯ ಪಥದಲ್ಲಿ ಸಾಗಲು ಸಹಾಯಕಾರಿಯಾಗುತ್ತದೆ ಎಂಬ ಸಥ್ಯವನ್ನು ಮರೆಯಬಾರದು. ಇವೆಲ್ಲಾ ತಿಳಿದೂ ತಿಳಿಯದವರಂತೆ ಅಸಹಾಯಕತೆಯ ನಿದ್ರೆಯ ಝೋಂಪಿನಲ್ಲಿರುವ ನಾಗರೀಕರೇ... ಏಳಿ ಎದ್ದೇಳಿ ಎಲ್ಲಾ ಸಮ ಮನಸ್ಕರೂ ಒಂದಾಗಿ ಇನ್ನು ಮುಂದಾದರೂ ನಾಮುಂದು ತಾಮುಂದು ಎಂಬ ಬೇಧಭಾವ ಬಿಟ್ಟು ಸಂಘಟಿತರಾಗಿ ಇಂತಹಾ ಅಧಿಕಾರಿಗಳನ್ನು ಧಿಕ್ಕರಿಸಿ ಅಥವಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಇಂತಹಾ ಜನ ಜಾಗೃತಿ ಮೂಡಿಸಲು ಹೆಣಗುತ್ತಿರುವ ನಿಜವಾದ ಪಕ್ಷಾತೀತ ನಾಯಕರ ಜತೆ ಕೈಜೋಡಿಸಿ ಅವರ ಧನಿಗೆ ಧನಿಗೂಡಿಸಿ ಒಗ್ಗೂಡಿ ದೇಶದ ಪ್ರಗತಿಯಲ್ಲಿ ಭಾಗಿಯಾಗೋಣಾ ಬನ್ನಿ....!

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

ಪಿಸುಮಾತು ಮಂಗಳ, 05/08/2012 - 11:12

ದೊಡ್ಡ ದೊಡ್ಡ ವಿಷಯಗಳು ಹಾಗಿರಲಿ, ಚಿಕ್ಕ ಚಿಕ್ಕ ವಿಷಯಗಳನ್ನು ಗಮನಿಸಿದರೂ ನಾವ್ಯಾಕೆ ಹೀಗೆ ಅನ್ನಿಸಿಬಿಡುತ್ತೆ. ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣದೊಳಗೆ ಕಣ್ಣು ಹಾಯಿಸಿ ನೋಡಿ. ಎಲ್ಲೆಂದರಲ್ಲಿ ತುಪ್ಪಿದ ಎಮಜಲೇ ಕಣ್ಣಿಗೆ ಕಾಣಿಸುತ್ತೆ. ಅನಕ್ಷರಸ್ತರೇ ಹೆಚ್ಚಾಗಿರುವ ಉತ್ತರ ಕರ್ನಾಟಕದ ಯಾವುದೋ ತಾಲ್ಲೂಕಿನ ಬಸ್‌ ನಿಲ್ದಾಣಕ್ಕೂ ಅಕ್ಷರಸ್ಥರ ಬೆಂಗಳೂರಿನ ಈ ನಿಲ್ದಾಣಕ್ಕೂ ಈ ವಿಷಯದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಿಸುವುದಿಲ್ಲ. ಕಲಿತವರೇ ಎಲ್ಲೆಂದರಲ್ಲಿ ಉಗುಳುತ್ತಾರೆ, ಎಲ್ಲೆಂದರಲ್ಲಿ ಸಿಗರೇಟು ಸೇದಿ ಹೊಗೆ ಬಿಡುತ್ತಾರೆ. ಕಸ ಎಸೆಯುತ್ತಾರೆ. ಮನೆ ಎದುರಿರುವ ಮರ ಕಡಿಸುತ್ತಾರೆ. ಹೆಣ್ಣು ಭ್ರೂಣ ಹತ್ಯೆ ಮಾಡುತ್ತಾರೆ. ಜಾತಿ ಲಾಭ ಮಾಡಿಕೊಳ್ಳಲು ಮುಂದೆ ನಿಲ್ಲುತ್ತಾರೆ. ಲಂಚ ಕೊಟ್ಟು ಕೆಲಸಕ್ಕೆ ಸೇರುತ್ತಾರೆ. ಕೆಲಸಕ್ಕೆ ಸೇರಿ ಲಂಚ ಪಡೆಯುತ್ತಾರೆ.ಭ್ರಷ್ಟರನ್ನೂ ಬೆಂಬಲಿಸುತ್ತಾರೆ.ಯಾಕೆ ಹೀಗೆಲ್ಲ ? 

ತ್ರಿನೇತ್ರ ಸೋಮ, 05/14/2012 - 13:57

ಹೌದು ಸ್ವಾಮೀ ನಾವಿರೋದೆ ಹೀಗೆ, ನಮ್ಮ ಜನ ನಡೆದುಕೊಳ್ಳುವುದೇ ಹೀಗೆ....! ಅವರ ದೇಶಾಭಿಮಾನ, ಭಾಷಾಭಿಮಾನ, ಸ್ವಜನ ಸಮ್ಮಾನ, ಪರಿಸರ ರಕ್ಷಣೆ, ಎಲ್ಲಾ ಬರೀ ಮಾತಿನಲ್ಲಿ ಪಾಲನೆ ಮಾತ್ರಾ ಲೇಶಮಾತ್ರ. ಉದಾಹರಣೆಗೆ ಈ ಲೇಖನವೇ ಸಾಕ್ಷಿ, ಇದನ್ನು ಓದಿದ ಹಲವರಲ್ಲಿ ಕೇವಲ ನೀವು ಮತ್ತೊಬ್ಬರು ಮಾತ್ರಾ ಪ್ರತಿಕ್ರಿಯಿಸಿದ್ದಾರೆ ಅಂದರೆ ಅವರ ಸಾಮಾನ್ಯವಾದ ಇಂತಹಾ ನಡವಳಿಕೆಗಳ ಬಗ್ಗೆ ಬರೆದಿರುವುದು ಓದಿದಾಗ ಹೌದು ಅವರು ಹೇಳಿರುವುದು ಸರಿ ಎನ್ನಿಸಿದರೂ ಮನದೊಳಗೆ ಎಲ್ಲೋ ಚುಚ್ಚಿದಂತಾಗಿರಲಿಕ್ಕೂ ಉಂಟು. ಹಾಗಾಗಿ ಯಾರು ಏನು ಬರೆದರೆ ನಮಗೇನು ಎಂದು ಸುಮ್ಮನಾಗಿಬಿಟ್ಟಿದ್ದಾರೆ ಅದೇ ನಮ್ಮ ಬಹಳಷ್ಟು ಕನ್ನಡಿಗರ "ಏನೇ ಆಗಲಿ ಹೇಗೇ ಇರಲಿ ಅನುಸರಿಸಿಕೊಂಡು ಹೋಗೋಣಾ" ಎಂಬ ಹುಟ್ಟುಗುಣ ಅಲ್ಲವೇ...?  

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/11/2012 - 14:20

ನಿಮ್ಮ ಲೆಖನ ಚೆನ್ನಾಗಿದೆ. ಆದರೆ ಕನ್ನಡ ಸ್ವಲ್ಪ ಕಾಗುಣಿತ ತಪ್ಪಿದೆ. ನಿಮ್ಮ ಕೆಲಸ ಬಿಟ್ಟು ರಾಜಕೀಯಕ್ಕೆ ಸೆರಿಕೊಳ್ಳಿ. ನಾನು ನಿಮ್ಮ ಜೊತೆ ಸೆರುತ್ತೆನೆ. ಆಗ ನಮ್ಮ ರಸ್ಥೆ ಮತ್ತು ಬೆರೆ ರೀತಿಯ ಸಮಸೆಯನ್ನು ಸರಿ ಮಾಡೊಣ. ಕರ್ನಾಟಕ ನಿಮಗೆ ಇಷ್ಥ ತಾನೆ?

ತ್ರಿನೇತ್ರ ಸೋಮ, 05/14/2012 - 13:40

ಧನ್ಯವಾದಗಳು ಅನಾಮಿಕರಿಗೆ.  ತಮ್ಮ ಸಲಹೆಯನ್ನು ಪಾಲಿಸಲು ಹಾಗೂ ಸಾಕಷ್ಟು ತಪ್ಪಿಲ್ಲದೇ ಬರೆಯಲು ಪ್ರಯತ್ನಿಸುತ್ತಿದ್ದರೊ ಆಗೊಮ್ಮೆ ಈಗೊಮ್ಮೆ ಮದ್ಯೆ ಮದ್ಯೆ ಕಾಗುಣಿತದಲ್ಲಿ ತಪ್ಪಾಗಿಬಿಡುತ್ತವೆ ಅದನ್ನೂ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಮ್ಮ ಬೆನ್ನು ನಮಗೇ ಕಾಣುವುದಿಲ್ಲ ಅಲ್ಲವೇ...?... ಹಾಗೇ ಕೆಲವೊಮ್ಮೆ ನಾವು ಮಾಡುವ ತಪ್ಪು ಬೇರೊಬ್ಬರು ಹೇಳಿದಾಗ ಮಾತ್ರ ತಿಳಿಯುವುದು. ದಯಮಾಡಿ ತಮ್ಮ ಕಾಗುಣಿತದ ಸ್ಪಷ್ಟತೆಯ ಬಗ್ಗೆ ಒಮ್ಮೆ ತಿರುಗಿ ನೋಡಿಕೊಳ್ಳುವಿರಾ...? ಯಾಕೆ ಸ್ವಾಮೀ ಕರ್ನಾಟಕ ಇಷ್ಟ ತಾನೇ ಎಂದು ಕೇಳುತ್ತಿದ್ದೀರೀ...? ಹಾಗಿಲ್ಲದಿದ್ದರೆ ದೂರದ ಯಾವುದೋ ಊರಲ್ಲಿದ್ದರೂ ಕನ್ನಡ ಮರೆಯದೇ, ನಮ್ಮ ರಾಜ್ಯದ ಬಗ್ಗೆ ಅದರ ಅಭಿವೃದ್ಧಿಯ ಬಗ್ಗೆ ನಾನೇಕೆ ಯೋಚಿಸಬೇಕಿತ್ತು...? ಬಿಳೀ ಉಡುಪು ಧರಿಸಿ ಹೊರಗಿನಿಂದ ನೋಡುವುದಕ್ಕೆ ಸ್ವಚ್ಛ ಮನಸ್ಸಿನ ನಾಯಕರಂತೆ ಕಾಣುವ ಬಹುತೇಕ ರಾಜಕೀಯ ವ್ಯಕ್ತಿಗಳ ಒಳಮನಸ್ಸಿನಲ್ಲಿ ಬರೀ ಹುಳುಕು, ಕೊಳಕು ಮತ್ತು ಬ್ರಷ್ಟ ಭಾವನೆಗಳೇ ತುಂಬಿರುತ್ತವಾದ್ದರಿಂದ ಅಂತಹಾ ರಾಜಕೀಯ ನನಗೆ ರುಚಿಸುವುದಿಲ್ಲ ಬದಲಾಗಿ ಅಂತಹಾ ಜನರನ್ನು ವಿರೋಧಿಸುತ್ತಾ ಅವರ ತಪ್ಪುಗಳನ್ನು ಎತ್ತಿತೋರಿಸುವ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ವ್ಯಕ್ತಿಯಾಗಲೀ ಅಥವಾ ಸಮೂಹವಾಗಲೀ ಅಂತಹವರಿಗೆ ನನ್ನ ಬೆಂಬಲ ಸದಾ ಇದ್ದೇ ಇರುತ್ತದೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/14/2012 - 14:09

Hello Mr. Trinethra,
 
I am trying to write in Kannada.  Now I am learning the key words and grammer mistakes.  But you know the the key words in kannada.
 You are staying in Delhi and writing in Vismayanagari, which of the politician will read your message?  How can you protest?  If you thinks about Karnataka means it won't change.
Anaamika.
 

ತ್ರಿನೇತ್ರ ಸೋಮ, 05/14/2012 - 15:55

ನೀವು ಹೇಳುವುದು ಸರೀನೇ... ನಾನೆಲ್ಲೋ ದಿಲ್ಲಿಯಲ್ಲಿ ಇದ್ದು ಕನ್ನಡದಲ್ಲಿ ಬರೆದು ಇಂತಹಾ ಕನ್ನಡ ತಾಣಗಳಲ್ಲಿ ಲೇಖನಗಳು ಮತ್ತು ಅನಿಸಿಕೆಗಳನ್ನು ಪ್ರಕಟಿಸಿದ ಮಾತ್ರಕ್ಕೆ ನಾನು ಮಹಾ ಘನ ಕಾರ್ಯ ಮಾಡಿದಂತಾಗುವುದಿಲ್ಲ ಆದರೆ ಜನಜಾಗೃತಿ ಮೂಡಿಸುವಲ್ಲಿ ಒಂದು ಚಿಕ್ಕ ಪ್ರಯತ್ನ ಮಾತ್ರ. ಇದು ರಾಜಕೀಯ ನಾಯಕರು ಓದಲಿ ಎಂದು ಬರೆದಿದ್ದಲ್ಲ, ಅದನ್ನು ಯಾರುಬೇಕಾದರೂ ಓದಬಹುದು ಓದಿರಲೂ ಬಹುದು. ಹಾಗೆ ಓದಿದ ರಾಜಕೀಯ ವ್ಯಕ್ತಿಗಳು ಸರಿಯೆಂದು ತಿಳಿದುಬಂದಲ್ಲಿ ಇನ್ನು ಮುಂದೆ ಅದೇ ರೀತಿ ತಪ್ಪಾಗದಂತೆ ಪಾಲಿಸಬಹುದು ಮತ್ತು ಇತರೆ ಓದುಗರು ತಾವು ಮಾಡುತ್ತಿರುವ ತಪ್ಪುಗಳನ್ನು ಅರಿತು ಇನ್ನು ಮುಂದೆ ಆ ರೀತಿ ಮಾಡದಂತೆ ಎಚ್ಚರ ವಹಿಸಿದರೂ ಸಾಕು ಪರಿಸ್ಥಿತಿ ತಾನಾಗೇ ಸ್ವಲ್ಪ ಸ್ವಲ್ಪ ಹಿಡಿತಕ್ಕೆ ಬರುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ...? 

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/15/2012 - 10:55

Hai Trinethra,
 
Thanks for the reply.  Continue....

ತ್ರಿನೇತ್ರ ಸೋಮ, 05/14/2012 - 15:55

ನೀವು ಹೇಳುವುದು ಸರೀನೇ... ನಾನೆಲ್ಲೋ ದಿಲ್ಲಿಯಲ್ಲಿ ಇದ್ದು ಕನ್ನಡದಲ್ಲಿ ಬರೆದು ಇಂತಹಾ ಕನ್ನಡ ತಾಣಗಳಲ್ಲಿ ಲೇಖನಗಳು ಮತ್ತು ಅನಿಸಿಕೆಗಳನ್ನು ಪ್ರಕಟಿಸಿದ ಮಾತ್ರಕ್ಕೆ ನಾನು ಮಹಾ ಘನ ಕಾರ್ಯ ಮಾಡಿದಂತಾಗುವುದಿಲ್ಲ ಆದರೆ ಜನಜಾಗೃತಿ ಮೂಡಿಸುವಲ್ಲಿ ಒಂದು ಚಿಕ್ಕ ಪ್ರಯತ್ನ ಮಾತ್ರ. ಇದು ರಾಜಕೀಯ ನಾಯಕರು ಓದಲಿ ಎಂದು ಬರೆದಿದ್ದಲ್ಲ, ಅದನ್ನು ಯಾರುಬೇಕಾದರೂ ಓದಬಹುದು ಓದಿರಲೂ ಬಹುದು. ಹಾಗೆ ಓದಿದ ರಾಜಕೀಯ ವ್ಯಕ್ತಿಗಳು ಸರಿಯೆಂದು ತಿಳಿದುಬಂದಲ್ಲಿ ಇನ್ನು ಮುಂದೆ ಅದೇ ರೀತಿ ತಪ್ಪಾಗದಂತೆ ಪಾಲಿಸಬಹುದು ಮತ್ತು ಇತರೆ ಓದುಗರು ತಾವು ಮಾಡುತ್ತಿರುವ ತಪ್ಪುಗಳನ್ನು ಅರಿತು ಇನ್ನು ಮುಂದೆ ಆ ರೀತಿ ಮಾಡದಂತೆ ಎಚ್ಚರ ವಹಿಸಿದರೂ ಸಾಕು ಪರಿಸ್ಥಿತಿ ತಾನಾಗೇ ಸ್ವಲ್ಪ ಸ್ವಲ್ಪ ಹಿಡಿತಕ್ಕೆ ಬರುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ...? 

Nanjunda Raju Raju ಶುಕ್ರ, 05/25/2012 - 14:02

ಮಾನ್ಯ ತ್ರಿನೇತ್ರ ರವರೇ, ನಮಸ್ಕಾರಗಳು. ನಿಮ್ಮ ಸಲಹೆಯಂತೆ, ನಿಮ್ಮ ಲೇಖನವನ್ನು ಓದಿರುತ್ತೇನೆ. ನಿಮ್ಮ ದೀರ್ಘವಾದ ಲೇಖನದಲ್ಲಿ ಪರಿಸರದ ಬಗ್ಗೆ, ನಗರಾಭಿವೃದ್ದಿ ಬಗ್ಗೆ, ಬ್ರಷ್ಟಚಾರದ ಬಗ್ಗೆ, ಪ್ರಮಾಣಿಕತೆ ಬಗ್ಗೆ ಹೊಲಸು ರಾಜಕೀಯದ ಬಗ್ಗೆ ಜನಜಾಗೃತಿ ಮೂಡಿಸಿದ್ದೀರಿ.


ನೀವು ತಿಳಿಸಿರುವಂತೆ, ನಡೆಯುತ್ತಿರುವ ಎಲ್ಲಾ ವಂಚನೆ, ಮೋಸ, ಬ್ರಷ್ಟಾಚಾರ, ಜನರಿಗೆ ಗೊತ್ತಿದೆ. ಇಂತಹ ವಿಷಗಳನ್ನು ದಿನವೂ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೆ, ಈಗಿನ ಸುದ್ದಿ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಕೇವಲ ವರದಿ ಮಾಡುತ್ತವೆ. ಜಾಗೃತಿ ಮೂಡಿಸುವುದಿಲ್ಲ.


ಇನ್ನೂ ಒಂದು ಗಮನಿಸಬಹುದಾದ ವಿಷಯವೆಂದರೆ, ಎಲ್ಲಿ ವಂಚನೆ, ಬ್ರಷ್ಟಾಚಾರ ನಡೆಯುತ್ತಿರುತ್ತದೆ. ಅಲ್ಲಿ ಚಕಾರ ಎತ್ತಿದರೆ ಸಾಕು ಹೇಗಾದರು ಅದನ್ನು ಬಗ್ಗು ಬಡಿಯಲು ಅವರು ಬಲಾಡ್ಯರಾಗಿರುತ್ತಾರೆ. ಅದಕ್ಕೆ ಉದಾಹರಣೆ ಅಣ್ಣಾ ಹಜಾರೆ ಹೋರಾಟ.


ಇನ್ನು ರಾಜಕಾರಣಿಗಳ ಬಗ್ಗೆ ಹೇಳುವುದಾದರೆ, ಅಬ್ಯರ್ಥಿಯಾಗಿ ನಿಂತಾಗ, ನಾನು ಪ್ರಮಾಣಿಕ, ಸತ್ಯಸಂದ, ಸತ್ಯಕ್ಕಾಗಿ ಹೋರಾಡುತ್ತೇನೆ. ನಿಮ್ಮ ಸೇವೆಗಾಗಿ ಜೈಲಿಗೆ ಹೋಗುತ್ತೇನೆ. ಪ್ರಾಣಕೊಡಲು ಸಿದ್ದ ಎನ್ನುತ್ತಾರೆ. ಹಾಲಿಡಿದು, ನೀರಿಡಿದು, ಅನ್ನಹಿಡಿದು ಪ್ರಮಾಣ ಮಾಡುತ್ತಾರೆ. ಅದನ್ನು ನಂಬಿ, ನಮ್ಮ ಹಿತ ಪರ ತೊರೆದು ಶಾಸಕನನ್ನಾಗಿ ಗೆಲ್ಲಿಸಿ, ಕಳುಹಿಸಿದರೆ, ಜನಪರ ಕಾರ್ಯಗಳನ್ನು ಬಿಟ್ಟು, ಹಣ ಮಾಡುವುದರಲ್ಲಿ ಮಗ್ನರಾಗುತ್ತಾರೆ. ಒಂದೆರಡು ವರುಷಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ.


ನಮ್ಮ ದೇಶದಲ್ಲಿ ಒಂದು ಬಾರಿ ಗೆಲ್ಲಿಸಿ ಕಳುಹಿಸಿದರೆ, ಅವಧಿ ಮುಗಿಯುವವರೆಗೆ ಓಟು ಹಾಕಿದ ನಾವು ಅವನೇನು ಮಾಡಿದರೂ ಹಿಂದಕ್ಕೆ ಕರೆಸಿಕೊಳ್ಳುವ ಕಾನೂನು ಇಲ್ಲ. ಅವರು ಎಂತಹ ಬ್ರಷ್ಟರಾದರೂ ಸದಾ ಪೊಲೀಸರ ಭದ್ರಕೋಟೆಯಲ್ಲಿರುತ್ತಾರೆ.


 ರಾಜಕೀಯವೆಂದರೆ, ಅದು ಒಂದು ರೀತಿಯ ಕ್ರಿಕೇಟ್ ಇದ್ದಂತೆ, ಆಟಗಾರರು ಆಡುವ ಆಟವನ್ನು ನೋಡಬಹುದಷ್ಟೆ. ನಾವು ಸಲಹೆ ಕೊಡುವಂತಿಲ್ಲ, (ಕೊಟ್ಟರೂ ಕೇಳುವವರಾರು) ಆಡುವಂತಿಲ್ಲವಲ್ಲ. ಇದಕ್ಕೆ ಪರಿಹಾರ ಹೇಗೆ?


ಇನ್ನು ನಗರಾಭಿವೃದ್ದಿ ಬಗ್ಗೆ ಯೋಜನೆ ರೂಪಿಸುವಾಗ, ಬರೀ ಕಾಂಕ್ರಿಟ್ ಕಾಡುಗಳನ್ನು ರೂಪಿಸಿ, ಬೇಸಿಗೆ ನಗರವನ್ನಾಗಿ ಅಭಿವೃದ್ದಿ ಪಡಿಸುವ ಬದಲು, ಯಾವುದೇ ಹೊಸ ರಸ್ತೆ, ರಿಂಗ್ ರಸ್ತೆ, ಮೆಟ್ರೋ ರಸ್ತೆ ನಿರ್ಮಿಸುವ ಮೊದಲು ಪರಿಸರಕ್ಕೆ ದಕ್ಕೆಯಾಗದಂತೆ, ಪ್ರತಿ ರಸ್ತೆಯ ಇಕ್ಕೆಲಗಳಲ್ಲಿ        ಮರಗಳಿಗಾಗಿಯೇ ಕನಿಷ್ಟ ೩೦ ಅಡಿಗಳಷ್ಟಾದರೂ ಜಾಗ ಬಿಡಬೇಕೆಂಬ ಕಾನೂನು ಜಾರಿಗೆ ತಂದರೆ, ಅನುಕೂಲವಾಗುತ್ತದೆ. ಅದನ್ನು ತಪ್ಪಿದರೆ, ಸಂಬಂದಿಸಿದ, ಆಗಿನ, ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಜೈಲಿಗೆ ಕಳುಹಿಸುವ ಕಾನೂನು ತಂದರೆ ಅಲ್ಪಸ್ವಲ್ಪ ಪರಿಸರ ಉಳಿಯುತ್ತದೆ. ಇಲ್ಲವಾದರೆ, ಮುಂದಿನ ಪೀಳಿಗೆಗೆ ನಾವು ಹೇಳುವ ಕಥೆ ಅಷ್ಟೆ ಉಳಿಯುತ್ತದೆ. ಅಲ್ಲವೆ?

ತ್ರಿನೇತ್ರ ಗುರು, 05/31/2012 - 18:15

ಧನ್ಯವಾದಗಳು ನಂಜುಂಡರಾಜು ಅವರಿಗೆ. ತಮ್ಮ ಅನಿಸಿಕೆ ಮತ್ತು ಸಲಹೆಗಳಿಗೆ ಸಂಪೂರ್ಣ ಸಹಮತಿಯಿದೆ. ನನ್ನ ಮತ್ತೊಂದು ಲೇಖನದ ಪ್ರತಿಕ್ರಿಯೆಗೆ ಉತ್ತರ ಕೊಡುತ್ತಾ ತಿಳಿಸಿರುವಂತೆ ನಮ್ಮ ನಿಮ್ಮಂತವರ ಲೇಖನಗಳು ಕೆಲವರಿಗಾದರೂ ತಲುಪಿ ಅವರಲ್ಲಿ ಪಾಪದ ಪ್ರಜ್ನೆಯನ್ನು ಜಾಗೃತಿ ಗೊಳಿಸಿ ಕೆಲಮಟ್ಟಿಗಾದರೂ ತಿದ್ದಿಕೊಂಡು ನಡೆಯಲು ಪ್ರಯತ್ನಿಸಿದರೂ ನಮ್ಮ ಲೇಖನಗಳ ಉದ್ದೇಶ ಸಾರ್ಥಕವಾದಂತಾಗುತ್ತದೆ.  ನೀವು ಹೇಳುವುದು ನಿಜ, ಸಥ್ಯದ ಹಾದಿಯಲ್ಲಿ ಹೋರಾಡುವವರಿಗೆ ನಾನಾ ರೀತಿಯ ಅಡೆತಡೆಗಳು ತೊಂದರೆಗಳು ಎಲ್ಲಾ ಮಾಡಲು ಪಟ್ಟಭಧ್ರ ಹಿತಾಶಕ್ತಿಗಳು ಒಂದಾಗಿ ಪ್ರಯತ್ನಿಸುತ್ತಾರೆ ತಾತ್ಕಾಲಿಕ ಗೆಲುವನ್ನೂ ಸಾಧಿಸುತ್ತಾರೆ. ಆದರೆ ಯಾವಾಗ ಜಾಗೃತ ಮನಸ್ಸಿನವರ,  ಬದಲಾವಣೆ ಬಯಸುವವರ ಸಂಖ್ಯೆ ಅಂತಹಾ ದುಷ್ಟಶಕ್ತಿಗಳ ಸಂಖ್ಯೆಯನ್ನು ಮೀರುತ್ತದೋ ಅಂದು ನಿಜವಾದ ಕ್ರಾಂತಿಯಾಗುತ್ತದೆ, ಸಥ್ಯದ ಕಡೆ ಜಯ ಲಭಿಸುತ್ತದೆ ಎಂದು ನನ್ನ ಭಾವನೆ. ಅಲ್ಲೀವರೆಗೂ ಈ ರೀತಿಯ ಲೇಖನ ಬರೆಯುತ್ತಾ ಸಮ ಮನಸ್ಕರೊಂದಿಗೆ ಹಂಚಿಕೊಳ್ಳುತ್ತಾ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಮುಂದುವರೆಸೋಣಾ... ಏನಂತೀರಿ...?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.