Skip to main content

ಎಷ್ಟು ದುಸ್ತರ ಈ ಜೀವನ...!

ಬರೆದಿದ್ದುMarch 21, 2012
noಅನಿಸಿಕೆ

ಭೂಸ್ಖಲನದ ಚಿತ್ರಗಳನ್ನು (ಈ ತಾಣದಲ್ಲಿ ವಿಡಿಯೋ ಪ್ರಕಟಿಸಲು ಸಾಧ್ಯವಿಲ್ಲವಾದ್ದರಿಂದ ಬರೀ ಚಿತ್ರಗಳನ್ನು ಮಾತ್ರಾ ಹಾಕಿದ್ದೇನೆ) ಮಾನಸ ಸರೋವರಕ್ಕೆ ಹೋಗುವಾಗ ಉತ್ತರಖಂಡ್ ರಾಜ್ಯದಲ್ಲಿ ರಸ್ತೆಯಲ್ಲಿ ಬರುವ ಒಂದು ಸ್ಥಳವಾದ "ತವಾಘಾಟ್" ಬಳಿ ಚಿತ್ರೀಕರಿಸಲಾಗಿದೆ. ಇದು ಮಾರ್ಚ್ ೨೦೦೯ ರಲ್ಲಿ ನಡೆದ ಒಂದು ಮಹಾ ಭೂ ಸ್ಖಲನ. ಇದರಿಂದಾಗಿ ಮಾನಸ ಸರೋವರಕ್ಕೆ ಹೋಗಿಬರುವ ಒಂದೇ ಒಂದು ಮುಖ್ಯ ರಸ್ತೆಯ ಸಂಪರ್ಕ ಕಡಿದುಹೋಗಿ ಸುಮಾರು ಆರು ತಿಂಗಳವರೆಗೂ ನಿರಂತರವಾಗಿ ಕಲ್ಲು ಮಣ್ಣುಗಳು ಕುಸಿದು ಬೀಳುತ್ತಲೇ ಇದ್ದವು. ಹಾಗಾಗಿ ಕುಸಿದುಬಿದ್ದ ಕಲ್ಲು ಮಣ್ಣಿನ ರಾಶಿಯ ಮೇಲೆಯೇ ಮಿಲಿಟರಿ ಸೇನೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಒಂದಡಿ ಅಗಲದ ಸುಮಾರು ೨೦೦ ಅಡಿ ಉದ್ದದ ಕಾಲುದಾರಿಯಲ್ಲೇ ದೈನಂದಿನ ಕಾರ್ಯಗಳಿಗಾಗಿ ಆ ಮಾರ್ಗವನ್ನು ಉಪಯೋಗಿಸುವವರು ಜೀವವನ್ನು ಭಧ್ರ ಹಿಡಿದುಕೊಂಡೇ ಓಡುತ್ತಾ ಸಾಗಬೇಕಿತ್ತು.
ಈ ಕಡೆಯಿಂದ ಆ ಕಡೆಗೆ ಸಾಮಾನು ಸರಂಜಾಮು ಮತ್ತು ದಿನನಿತ್ಯ ಬಳಕೆ ವಸ್ತುಗಳನ್ನೂ ಕೂಡಾ ಕಾಲ್ನಡಿಗೆಯಲ್ಲೇ ಹೊತ್ತು ಒಂದು ಕ್ಷಣವೂ ನಿಲ್ಲದೇ ಓಡುತ್ತಾ ಸಾಗಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಯಾಕೆಂದರೆ ಯಾವ ಕ್ಷಣದಲ್ಲಿ ಯಾವ ಗಾತ್ರದ ಕಲ್ಲುಬಂಡೆ ಅವರ ಮೇಲೆ ಉರುಳಿಬಿದ್ದು ಮೇಲಿನ ಲೋಕಕ್ಕೆ ಸೀದಾ ಕೊಂಡೊಯ್ಯುವುದೋ ಎಂಬ ಭಯ.ಇಂತಹಾ ದೃಶ್ಯವನ್ನು ನೈಜವಾಗಿ ಚಿತ್ರಿಸುತ್ತಿದ್ದ ನನಗೆ ಬೆಟ್ಟಗಾಡುಗಳಲ್ಲಿ ಜೀವಿಸುವವರ ಜೀವನ ಎಷ್ಟು ಕಷ್ಟಕರ ಎಂಬುದನ್ನು ಅತೀ ಹತ್ತಿರದಿಂದ ಕಂಡು ಅನುಭವಿಸಿದ್ದೆ . ಒಂದು ಸಣ್ಣ ಪ್ರಮಾಣದ ಭೂಕಂಪದಿಂದಾಗಿ ಸುಮಾರು ೩೦೦-೪೦೦ ಅಡಿಗಳಿಗಿಂತಲೂ ಎತ್ತರದಿಂದ ಮಹಾ ಗಾತ್ರದ ಕಲ್ಲು ಬಂಡೆಗಳು ಮಣ್ಣು ಎಲ್ಲಾ ಒಂದೇಸಲ ಜಾರಿಬಿದ್ದು ಹರಿಯುತ್ತಿರುವ "ಧೌಲೀಗಂಗ" ನದಿಯನ್ನೂ ಸುಮಾರು ಮುಕ್ಕಾಲುಭಾಗ ಮುಚ್ಚಿಹಾಕಿ ಅದರ ಮೇಲ್ಗಡೆ ಒಂದು ತಾತ್ಕಾಲಿಕ ಸರೋವರವನ್ನಾಗಿಸಿಬಿಟ್ಟಿತ್ತು (ಕೊನೇ ಚಿತ್ರ ನೋಡಿ). ಈ ಕಲ್ಲು ಮಣ್ಣು ರಾಶಿಗಳ ಕೆಳಗೆ ಎರಡು ಜನರು ಜೀವಂತ ಸಮಾಧಿಯಾಗಿರುವುದು ತಿಳಿದುಬಂದ ವಿಷಯ.ಈ ಚಿತ್ರೀಕರಣವಾಗುವ ಕೆಲವೇ ದಿನಗಳಹಿಂದೆ ಅಣ್ಣ ಮತ್ತು ತಂಗಿ ಜೋಡಿಯೊಂದು ಇದೇ ಕಾಲುದಾರಿಯಲ್ಲಿ ಓಡುತ್ತಾ ಹೋಗುತ್ತಿರುವಾಗ ತಂಗಿ ಜೋರಾಗಿ ಮುನ್ನಡೆದು ಕೊನೆ ಮುಟ್ಟುವಷ್ಟರ ಹೊತ್ತಿಗೆ ಅಣ್ಣನ ಮೇಲೆ ಮಹಾ ಗಾತ್ರದ ಕಲ್ಲುಬಂಡೆಯೊಂದು ಉರುಳಿಬಿದ್ದು ಸ್ಥಳದಲ್ಲೇ ಜೀವತೆತ್ತಿದ್ದನಂತೆ. ಈ ನೈಸರ್ಗಿಕ ವಿಕೋಪದಿಂದಾದ ಅಡಚಣೆಯಿಂದಾಗಿ ಮಾನಸ ಸರೋವರಕ್ಕೇ ಹೋಗುವಾಗ ಕ್ರಮಿಸ ಬೇಕಾದ ದೂರ ಬೆಟ್ಟದ ಮೇಲೆ ಕಲ್ಲುಗಳ ಮತ್ತು ಅರಣ್ಯಗಳ ನಡುವೆ ಕಾಲುದಾರಿಯಲ್ಲಿ ಸುತ್ತಿಹೋಗಬೇಕಾದ್ದರಿಂದ ಸುಮಾರು ಆರು ಘಂಟೆಗಳಕಾಲ ಹೆಚ್ಚಾಗಿಬಿಟ್ಟಿತ್ತು....! ದೂರದಿಂದಲೇ ಚಿತ್ರೀಕರಿಸಿ ಆರು ಘಂಟೆಗಳ ದೂರದ ತಾತ್ಕಾಲಿಕ ಬದಲೀ ರಸ್ತೆಯಲ್ಲಿ ನಡೆದು ಸುಸ್ತಾಗುವ ಬದಲು ಎಲ್ಲರಂತೆ ನಾವೂ ಧೈರ್ಯವಾಗಿ ಓಡೋಣಾ ಎಂದು ನಿರ್ಧರಿಸಿ ಓಡುತ್ತಲೇ ಇನ್ನೇನು ಮತ್ತೊಂದು ಕೊನೆ ತಲುಪಬೇಕು ಅಷ್ಟರಲ್ಲಿ ಸರಿಯಾಗಿ ಮತ್ತೆ ಮೇಲಿಂದ ಕಲ್ಲುಗಳು ಉದುರಲು ಆರಂಬಿಸಿದಾಗ ಕೆಟ್ಟೆವೋ ಪರಮಾತ್ಮಾ ಎನ್ನುತ್ತಾ ಮತ್ತಷ್ಟು ಕಾಲಿಗೆ ಶಕ್ತಿ ಕೂಡಿಸಿ ಓಡುತ್ತಾ ಅಂತೂ ಬಚಾವಾಗಿ ತಲುಪಿದಾಗ "ಬದುಕಿದೆಯಾ ಬಡ ಜೀವವೇ" ಎನ್ನುತ್ತಾ ಏದುಸಿರು ಬಿಟ್ಟು ನೀರು ಕುಡಿದು ಸಾವರಿಸಿಕೊಳ್ಳಬೇಕಾಯ್ತು. ಪ್ರಕೃತಿ ವಿಕೋಪದಿಂದ ಯಾವ ಕ್ಷಣವಾದರೂ ಬಂದೊದಗಬಹುದಾದ ಸಾವು ನೋವಿನ ಅರಿವಿದ್ದರೂ ಇಲ್ಲದವರಂತೆ ಬೆಟ್ಟಗಾಡಿನಲ್ಲಿ ಜೀವನ ನಡೆಸುವವರ ಈ ಜೀವನ ಎಷ್ಟು ದುಸ್ತರ ಅಲ್ಲವೇ ...?
    [img_assist|nid=21806|title=ಹೀಗೊಂದು ಭೂ ಸ್ಖಲನ... ೧|desc=|link=node|align=left|width=562|height=416] [img_assist|nid=21810|title=ಹೀಗೊಂದು ಭೂಸ್ಖಲನ..೪|desc=|link=node|align=left|width=562|height=418]
  [img_assist|nid=21809|title=ಹೀಗೊಂದು ಭೂಸ್ಖಲನ..೩|desc=|link=node|align=left|width=566|height=419] [img_assist|nid=21807|title=ಹೀಗೊಂದು ಭೂ ಸ್ಖಲನ... ೨|desc=|link=node|align=left|width=570|height=420]
 [img_assist|nid=21811|title=ಹೀಗೊಂದು ಭೂಸ್ಖಲನ..೫|desc=|link=node|align=left|width=730|height=638] 
 

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.