Skip to main content

ಅಶ್ರು ತರ್ಪಣ

ಬರೆದಿದ್ದುMarch 12, 2012
noಅನಿಸಿಕೆ

 
ಪ್ರಿಯ ವಾಚಕರೇ, ಈ ಕವನ ಹೋದ ವರ್ಷ ಮಂಗಳೂರಿನಲ್ಲಿ ನಡೆದ ವಿಮಾನ ದುರಂತದಲ್ಲಿ ಒಳಗೊಂಡಿದ್ದವರನ್ನು ಮತ್ತು ಅದನ್ನು ಟೀವೀ ಯಲ್ಲಿ ನೋಡಿದಾಗ ನನಗಾದ ಅನುಭವವನ್ನು ನೆನೆಸಿಕೊಂಡು ಬರೆದು "ಅಭಿಮತ" ಎಂಬ ದೆಹಲಿ ಕರ್ನಾಟಕ ಸಂಘದ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟಿಸಿದ್ದೆ ಅದನ್ನಿಲ್ಲಿ ತಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ.
****************************************
ಮೇ ಇಪ್ಪತ್ತೆರಡರ ಶನಿವಾರದಂದು
ಟೀವಿ ಆನ್ ಮಾಡಿದೆ ವಾರ್ತೆಗಳ ಕೇಳಲೆಂದು
ಕೇಳಲಾಗದ ಸಮಾಚಾರ ಪ್ರಸಾರವಾಗುತ್ತಿತ್ತು
ನಂಬಲಾಗದ ಕಹಿ ಸುದ್ದಿಯು ಮನವನು ಕಲಕಿತ್ತು.
 ಐಎಕ್ಸ್-೮೧೨ ವಿಮಾನ ೧೬೬ ಜೀವಗಳ ಹೊತ್ತು
ದುಬೈನಿಂದ ಮಂಗಳೂರನು ಮುಂಜಾನೆ ತಲುಪಲಿತ್ತು
ಏನಾಯಿತೊ ಏನೊ ಅದರ ಗ್ರಹಚಾರ ಕೆಟ್ಟಿತ್ತು
ರನ್ವೇಯಲಿ ನಿಲಲಾಗದೆ ವೇಗದೆ ಸಾಗಿತ್ತು
ಆಯತಪ್ಪಿ ಜೋಲಾಡುತ ಕಂದಕವ ಸೇರಿತ್ತು.
ಕ್ಷಣಾರ್ಧದಲೆ ಎಲ್ಲ ಘಟನೆಯು ಘಟಿಸಿತ್ತು
ನೋಡುನೋಡುತಲೆ ಅದನು ಅಗ್ನಿಯು ಆವರಿಸಿತ್ತು
ತನ ಕೆನ್ನಾಲಿಗೆಗಳ ಚಾಚಿ ಧಗಧಗನೆ ಉರಿದಿತ್ತು
ಚೀರಾಟ-ಆಕ್ರಂಧನ ಮುಗಿಲಮುಟ್ಟಿತ್ತು.
ಜೀವ ಉಳಿಸಿಕೊಳಲು ಜನಗಳ ಪರದಾಟ
ಇನ್ನೂ ನಿದಿರೆಯೊಳಿದ್ದ ಕಂದಮ್ಮಗಳ ಚೀರಾಟ
ಯಾವುದನು ಲೆಕ್ಕಿಸದೆ ಎಲ್ಲವ ಕಬಳಿಸುತ್ತಿತ್ತು
ಸುಟ್ಟ ಮಾಂಸ-ಮೂಳೆಗಳ ಕಂಟು ಸುತ್ತೆಲ್ಲ ಪಸರಿಸಿತ್ತು.
ಹದಿನೈದಿಪ್ಪತ್ತು ಜನ ಒಂದೇಕುಟುಂಬದವರಾಗಿ
ಪಯಣಿಸಿದ್ದರು ತಮ ಅಜ್ಜಿಯ ಅಂತ್ಯಕ್ರಿಯೆಗಾಗಿ
ಭಯಂಕರ ಅಂತ್ಯದ ಮುನ್ಸೂಚನೆ ಇಲ್ಲದವರಾಗಿ
ಸೇರಿದರು ಮತ್ತೆ ಬರಲಾಗದ ಜಾಗವ ಹಿಂತಿರುಗಿ.
ಇನ್ನೂ ಪ್ರಪಂಚವನೆ ಅರಿಯದ ಎಳೆಗೂಸುಗಳು
ಹೊಟ್ಟೆಹೊರೆಯುವುದಕಾಗಿ ದುಬೈ ಸೇರಿದ ಜನಗಳು
ಅಂದದ ಗಗನಸಖಿಯರು-ಅನುಭವೀ ಪೈಲಟ್ಟುಗಳು
ಚೆಂದದ ಜೀವವ ತೊರೆದು ಆದರು ಸುಟ್ಟ ಎಲುಬುಗಳು.
ತಮ್ಮ ಊರು-ತಮ್ಮಜನರನ್ನು ನೋಡಲು ಕಾತರಿಸಿ
ಏರಿದ್ದರು ವಿಮಾನವನು ನಾಳೆಯನು ನೆನೆಸಿ
ಬೆಳಗಾಗುವ ಮುನ್ನ ಧುರ್ಘಟನೆಯು ಘಟಿಸಿ
ಸುಟ್ಟು ಕರಿಕಲಾಗಿದ್ದರು ಎಲ್ಲ ಕನಸುಗಳ ತುಂಡರಿಸಿ.
ಕಾಣದಾ ಆ ವಿಧಿಯ ಕ್ರೂರ ಆಟವನು ಕಂಡು
ಎದೆಯು ಝಲ್ಲೆಂದು - ಮನವು ತಲ್ಲಣಗೊಂಡು
ಕಣ್ಣೀರು ಹರಿದಿತ್ತು ದುಖಃ ಮಡುಗೊಂಡು
ಅಶ್ರುತರ್ಪಣಗೈದೆ ಕ್ಷಣಕಾಲ ಸ್ಥಬ್ಧಗೊಂಡು.
ಓ ವಿಧಿಯೇ... ನೀನೇಕೆ ಇಷ್ಟು ಕ್ರೂರ...?
ನಿನಗಾಗುತಿಲ್ಲವೇ ಹೃದಯ ಭಾರ.....?
ಅವರ ಸೃಷ್ಟಿಸಿದ ನೀನೆ ನನ್ನನೂ ಸೃಷ್ಟಿಸಿದ್ದೆ ಆದಲ್ಲಿ
ಅವರೊಳಿಹ ಮಾನವತೆಯಂಶ ನನ್ನಲೂ ಇರುವುದೆ ಆದಲ್ಲಿ
ನನ್ನೊಂದು ಇಷ್ಟವ ಈಡೇರಿಸು ನೀ ಕನಿಕರಿಸಿ
ತನ್ನವರ ಕಳಕೊಂಡು ದುಃಖಿಸುತಿರುವವರ
ಬಂಧು-ಮಿತ್ರರ ಮನದೆ ನನ ಮನದ ಭಾವಗಳ ತುಂಬಿ
ಸಾಂತ್ವನ ನೀಡುವ ಹಾಗೆ ಮಾಡು ನೀ ಪರಮಪಿತ
ಬೇಡಿಕೊಳುವೆ ನಿನಗೆ ನನ್ನೀ ಕರಗಳ ಜೋಡಿಸುತ....!

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.