Skip to main content

ಕಣ್ಣಿದ್ದೂ ಕುರುಡರು... ಕಿವಿಯಿದ್ದೂ ಕಿವುಡರು... ಆಗಿರಬೇಕೇ...?

ಬರೆದಿದ್ದುMarch 5, 2012
6ಅನಿಸಿಕೆಗಳು

 (ಈ ಲೇಖನವನ್ನು "ಚರ್ಚಾಕೂಟ" ದಲ್ಲೂ ಹಾಕಿದ್ದೆ ಆದರೆ ಅದು ಹೆಚ್ಚು ಓದುಗರಿಗೆ ತಲುಪಿಲ್ಲವಾದ್ದರಿಂದ ಮತ್ತೆ ಇಲ್ಲೂ ಪ್ರಕಟಿಸಿದ್ದೇನೆ)
ಪ್ರಿಯ ಮಿತ್ರರೇ... ನಾನಿಲ್ಲಿ ಇಂದು ನಿಮ್ಮ ಮುಂದೆ ಪ್ರಸ್ತಾಪಿಸುತ್ತಿರುವ ವಿಷಯ ದಿನ ಬೆಳಗಾದರೆ ದೈನಂದಿನ ಜೀವನದಲ್ಲಿ ನಾವು ಕಣ್ಣಾರೆ ಕಾಣುತ್ತಿರುವ ಕಿವಿಯಾರೆ ಕೇಳುತ್ತಿರುವ ಒಂದು ಪಿಡುಗಿನ ಬಗ್ಗೆಃ
ಅದೇನೂ ಅಂತೀರಾ...? ಕಿವಿಯಿದ್ದೂ ಕಿವುಡರಂತೆ ಕಣ್ಣಿದ್ದೂ ಕುರುಡರಂತೆ ಯಾರಿಗೆ ಏನಾದರೆ ನಮಗೇನಂತೆ ಎಂದು ಸುಮ್ಮನಿದ್ದುಬಿಡುವ ನಮ್ಮ ಜನ ಸಾಮಾನ್ಯರ ಬಗ್ಗೆ.
ಇತ್ತೀಚೆಗೆ ಒಂದು ರಾತ್ರಿ ಕೆಲಸ ಮುಗಿಸಿ ಬೆಂಗಳೂರಿನ ಸಿಟಿ ಬಸ್ ಒಂದರಲ್ಲಿ ಕುಳಿತು ಮೆಜೆಸ್ಟಿಕ್ ನಿಂದ ಮನೆಕಡೆ ಪ್ರಯಾಣ ಮಾಡುತ್ತಿದ್ದೆ. ಆ ಬಸ್ನಲ್ಲಿ ಪೂರ್ತಿ ಜನ ತುಂಬಿದ್ದು ಕೂರಲು ಸೀಟ್ ಸಿಕ್ಕಿರದೇ ಹಾಗೇ ಬಾರ್ ಹಿಡಿದು ನೇತಾಡುತ್ತಾ ನಿಂತಿದ್ದೆ. ಬಸ್ ಹೋಗುತ್ತಲಿತ್ತು, ಕಂಡಕ್ಟರ್ ಟಿಕೇಟ್ ಕೊಡಲು ಹರ ಸಾಹಸ ಮಾಡುತ್ತಿದ್ದ. ಆ ಬಸ್ಸಿನಲ್ಲಿ ವಿವಿಧ ರೀತಿಯ ಪ್ರಯಾಣಿಕರು ತುಂಬಿದ್ದರು ಬೇಸಿಗೆ ಕಾಲವಾದ್ದರಿಂದ ಶೆಖೆ ಹೆಚ್ಚಿತ್ತು ಬೆವರು ಮತ್ತು ಕೆಲವು ಕುಡುಕರು ಕುಡಿದು ಬಂದಿದ್ದರಿಂದ ಮತ್ತೆ ಕೆಲವರು ಬೀಡಿಯೋ ಸಿಗರೇಟೊ ಸೇದಿ ಬಂದಿದ್ದರಿಂದ ಅವರುಗಳು ಬಿಡುತ್ತಿದ್ದ ಹೊರ ಉಸಿರಿನಿಂದಾಗಿ ವಿಚಿತ್ರ ವಾಸನೆ ವಾಕರಿಕೆ ತರಿಸುತ್ತಿತ್ತು. ಆದರೂ ಅದರಲ್ಲಿ ಹೋಗದೇ ವಿಧಿಯಿರಲಿಲ್ಲ ಯಾಕಂದರೆ ಆಟೋಗಳವರು ಆ ರಾತ್ರಿಹೊತ್ತು ಆಡಿದ್ದೇ ಆಟ ಹೇಳಿದ್ದೇ ರೇಟು..! ಇದೆಲ್ಲದರ ಜತೆಗೆ ನಾನು ಈಗ ಹೇಳಹೊರಟಿರುವ ಮುಖ್ಯವಾದ ವಿಚಾರ ಮೊಬೈಲ್ ಮ್ಯೂಸಿಕ್ ಅಥವಾ ಸಂಗೀತ ಪ್ರಿಯರ ಕಿವಿಗಡಚಿಕ್ಕುವ ಲಹರಿ ಹರಿಸುತ್ತಾ ಕನ್ನಡ ತಮಿಳು ತೆಲುಗು ಹಿಂದೀ ಇವೆಲ್ಲಾ ಚೌ ಚೌ ಆಗಿ ಮಿಶ್ರ ಭಾಷೆಯ ವಿವಿಧ ರೀತಿಯ ಹಾಡುಗಳನ್ನು ತಾವು ಕೇಳುವುದಕ್ಕಿಂತಾ ಬೇರೆಯವರು ಕೇಳಲಿ ತಮ್ಮ ಹತ್ತಿರ ಇರುವ ಆ ಸಾಧನವನ್ನು ನೋಡಲಿ ಎಂದು ಗಮನ ಸೆಳೆಯುವುದಕ್ಕಾಗಿಯೇ ಸಂಗೀತ  ಬಜಾಯಿಸುತ್ತಾ ಬಿಟ್ಟಿ ಮನರಂಜನೆಯ ಹೆಸರಲ್ಲಿ ಹಿಂಸೆ ನೀಡುವ ಜನಗಳ ಬಗ್ಗೆ....!
ಅವರಿಗೆ ಅದು ಯಾವರೀತಿಯಲ್ಲೂ ಹಿಂಸೆ ಎನಿಸುವುದೇ ಇಲ್ಲವೇನೋ ಎನ್ನಿಸುತ್ತೆ. ಅದನ್ನು ಕೇಳಿಯೂ ಕೇಳದವರಂತೆ ಕಿವಿಗೆ ಬತ್ತಿ ಹಾಕಿಕೊಂಡವರಂತೆ ಸುಮ್ಮನಿದ್ದುಬಿಡುತ್ತಾರೆ ನಮ್ಮ ನಿಮ್ಮಂತಾ ತಿಳಿದ ಜನರು. ಸುಮ್ಮನಿದ್ದು ಬಿಡಲೇ ಬೇಕಾಗುತ್ತೆ ಅಂತಹಾ ಸ್ಥಿತಿಯಲ್ಲಿ ಯಾಕೆಂದರೆ ಅದು ಅವರ ಆಸ್ತಿ ಅವರ ಸ್ವಾತಂತ್ರ್ಯ..!  ಅಕಸ್ಮಾತ್ ಯಾರಾದರೂ ಸಾಹಸ ಮಾಡಿ ಸ್ವಲ್ಪ ವಾಲ್ಯೂಂ ಕಡಿಮೆ ಮಾಡಿ ಅಥವಾ ಇಯರ್ ಫೋನ್ ಉಪಯೋಗಿಸಿ ಕೇಳಿ ಎಂದು ಬುದ್ಧಿ ಹೇಳಲು ಹೋದರಂತೂ ಮುಗೀತು ಕತೆ, ನೀವ್ಯಾರ್ರೀ   ಅದೆಲ್ಲಾ ಕೇಳೋಕ್ಕೆ ಮುಚ್ಕೊಂಡು ಸುಮ್ಮನಿರ್ರೀ ಎಂದು ಹೇಳಬಹುದಾದ ದುರಹಂಕಾರದ ಪ್ರತ್ಯುತ್ತರ ಬರುವ ಭಯ... ಹಾಗಾಗಿ ಯಾಕಪ್ಪಾ ಇಲ್ಲದೇ ಇರೋ ದೆವ್ವಾನ ಮೈಮೇಲೆ ಎಳೆದು ಹಾಕ್ಕೋಬೇಕು ಎಂದು ಕಿವಿಯಿದ್ದೂ ಕಿವುಡರಂತೆ ಎಲ್ಲಾ ಮುಚ್ಚಿಕೊಂಡು ಸುಮ್ಮನಿರಲೇಬೇಕಾಗುತ್ತೆ.
ಹಾಗೇ ಮತ್ತೊಂದು ಗುಂಪಿಗೆ ಸೇರಿದ ಜನರೆಂದರೆ ಕಷ್ಟಪಟ್ಟು ದುಡಿದು ತಮ್ಮ ಅನ್ನ ಸಂಪಾದನೆ ಮಾಡಿಕೊಂಡು ಮರ್ಯಾದೆಯಾಗಿ ಜೀವನ ನಡೆಸಲು ಬಯಸದ ಹಾಗೂ ಬೇರೆಯವರ ಪಿಕ್ ಪಾಕೆಟ್ ಮಾಡಿ ಹಣ ದೋಚಿ ಅದರಿಂದ ಜೀವನ ಮಾಡುವ ಇನ್ನೊಂದು ವರ್ಗದ ಜನ. ಅಂತಾ ಕಳ್ಳರು ಒಟ್ಟೊಟ್ಟಿಗೇ ಇಬ್ಬರು ಮೂವರ ಗುಂಪಿನಲ್ಲಿ ಸಕಲ ಸಿದ್ಧತೆಗಳೊಂದಿಗೆ ಬಸ್ ಏರಿ ಮೆಟ್ಟಿಲುಗಳ ಬಳಿಯೋ ಅಥವಾ ಹಿಂಬಾಗದಲ್ಲೋ ನಿಂತು ಸ್ವಲ್ಪ ಎಚ್ಚರ ತಪ್ಪಿ ಅಥವಾ ಗಮನ ಅತ್ತಿತ್ತ ಇರುವಂತಹವರ ಜೇಬಿಗೇ ಬ್ಲೇಡ್ ಹಾಕುತ್ತಾರೆ. ಒಮ್ಮೆ ನನ್ನ ಜೇಬಿಂದಲೇ ೬೦೦ ರೂ ಕಳೆದು ಕೊಂಡಿದ್ದೇನೆ ಮತ್ತೊಮ್ಮೆ ಇನ್ನೇನು ಪರ್ಸ್ ಹೊರಗೆ ತೆಗೆಯಬೇಕು ಅಷ್ಟರಲ್ಲಿ ನನಗೆ ಅರಿವಿಗೆ ಬಂದು ಜೋರಾಗಿ ಕೂಗಲು ಅದನ್ನು ಅಲ್ಲೇ ಕೆಳಗೆಸೆದು ಓಡುತ್ತಿದ್ದ ಬಸ್ ನಿಂದಲೇ ದುಮುಕಿ ಪರಾರಿಯಾಗಿದ್ದ ಒಬ್ಬ. ಅದನ್ನು ನೋಡಿದ್ದ ಕೆಲವರು ಕಣ್ಣಿದ್ದೂ ಕುರುಡರ ಹಾಗೆ ವರ್ತಿಸಿದ್ದುದು ನಂತರ ತಿಳಿದಿತ್ತು. ಅವರಲ್ಲೊಬ್ಬ ಹೇಳಿದ್ದ ಸಾರ್ ನಾನು ಆಗ್ಲೇ ನೋಡಿದ್ದೆ ಅವನು ಕೈ ಬಿಡ್ತಾ ಇದ್ದಿದ್ದನ್ನ ಆದ್ರೆ ಅವನ ಮುಖದ್ಮೇಲಿರೋ ಮಾರ್ಕ್ ನೋಡಿ ಭಯಾ ಆಯ್ತು ಇವನೊಬ್ಬ ಪಕ್ಕಾ ರೌಡೀ ಇರಬಹುದೂ ನಾನೇನಾದ್ರೂ ನಿಮಗೆ ಸಿಗ್ನಲ್ ಕೊಟ್ಟರೆ ಅಥವಾ ಕೂಗಿದರೆ ಅಕಸ್ಮಾತ್ ನನಗೇ ಏನಾದರೂ ಹೆಚ್ಚೂ ಕಡಿಮೇ ಮಾಡ್ಬಿಟ್ರೇ ಅಂತಾ... ಅದಕ್ಕೇ ಸುಮ್ಮನಾಗಿದ್ದೆ ಆದ್ರೂ ನಿಮ್ ಧೈರ್ಯಾ ಮೆಚ್ಲೇಬೇಕೂಸಾರ್... ಅಂತೂ ನಿಮ್ಮ ಹಣಾ ಉಳಿಸ್ಕೊಂಡ್ರೀ... ಎನ್ನುತ್ತಾ ಹಲ್ಕಿರಿದಿದ್ದ. ಕಷ್ಟ ಪಟ್ಟು ಸಂಪಾದ್ನೆ ಮಾಡಿರೋ ಹಣಾರೀ ಅದಕ್ಕೇ ಉಳ್ಕೊಂಡಿದೇ... ಇಷ್ಟೊಂದು ಜನಾ ತುಂಬಿರೋ ಬಸ್ ನಲ್ಲಿ ನೀವು ನೋಡಿಯೂ ಸುಮ್ಮನಿದ್ದುದು ತಪ್ಪು ರೀ ಸ್ವಲ್ಪ ಸೂಚನೆ ಕೊಟ್ಟಿದ್ದಿದ್ರೂ ಎಲ್ಲಾ ಸೇರಿ ಹಣ್ಣುಗಾಯಿ ನೀರುಗಾಯಿ ಮಾಡಬಹುದಿತ್ತಲ್ಲಾ ಅವನನ್ನ ಎಂದು ಹಾರಿಕೆ ಉತ್ತರ ನೀಡಿದ್ದೆ. ಅವನು ಹೇಳಿದ್ದರಲ್ಲೂ ಸಥ್ಯ ಇದೆ ಎನ್ನಿಸಿತ್ತು ಯಾಕಂದ್ರೆ ಒಮ್ಮೆ ಇದೇ ರೀತಿ ಯಾರೋ ವಿರೋದಿಸಿದ್ದಕ್ಕೆ ಸೀದಾ ಚಾಕು ಹಾಕಿ ಒಬ್ಬ ವ್ಯಕ್ತಿಯನ್ನ ಘಾಸಿಗೊಳಿಸಿ ಪರಾರಿಯಾಗಿದ್ದ ನ್ಯೂಸ್ ಓದಿ ತಿಳಿದಿದ್ದೆ.
ಈಗ ನೀವೇ ಹೇಳಿ ಇಂತಹಾ ಸಂಧರ್ಭಗಳಲ್ಲಿ ನಾಗರೀಕರೆಂದೂ ಈ ದೇಶದ ಸತ್ಪ್ರಜೆಗಳೆಂದೂ ಕರೆದು ಕೊಳ್ಳುವ ನಾವು ಕಿವಿಯಿದ್ದೂ ಕಿವುಡರಾಗಿ ಮತ್ತು ಕಣ್ಣಿದ್ದೂ ಕುರುಡರಾಗಿ ವರ್ತಿಸಬೇಕೇ...? ಇಲ್ಲಾ
"ಎತ್ತ ಸಾಗುತ್ತಿದೆ ನಮ್ಮ ಕನ್ನಡ ನಾಡಿನ ಜನತೆ...?" ಎಂದು ಎಲ್ಲಾ ತಿಳಿದೂ ವಿರೋಧಿಸಲಾಗದ ನಮ್ಮ ಅಸಹಾಯಕತೆಗಾಗಿ ಮನದೊಳಗೇ ಮರುಗುತ್ತಾ ಎಲ್ಲರೊಳಗೊಂದಾಗಿ ಮುಂದೆ ಸಾಗಬೇಕೇ....?

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

venkatb83 ಶನಿ, 03/17/2012 - 14:02

ತ್ರಿನೇತ್ರ ಆವ್ರೆ- ಸಾರ್ವಜನಿಕಸಾರ್ವತ್ರಿಕ ಸಮಸ್ಯೆ  ಬಗ್ಗೆಒಳ್ಳೆಯ ಕಳಕಳಿಯ ಬರಹ.. ಬಸ್ನಲ್ಲಿ ಪೂರ್ತಿ ಜನ ತುಂಬಿದ್ದು ಕೂರಲು ಸೀಟ್ ಸಿಕ್ಕಿರದೇ ಹಾಗೇ ಬಾರ್ ಹಿಡಿದು ನೇತಾಡುತ್ತಾ ನಿಂತಿದ್ದೆ. ಬಸ್ ಹೋಗುತ್ತಲಿತ್ತು, ಕಂಡಕ್ಟರ್ ಟಿಕೇಟ್ ಕೊಡಲು ಹರ ಸಾಹಸ ಮಾಡುತ್ತಿದ್ದ. ಆ ಬಸ್ಸಿನಲ್ಲಿ ವಿವಿಧ ರೀತಿಯ ಪ್ರಯಾಣಿಕರು ತುಂಬಿದ್ದರು ಬೇಸಿಗೆ ಕಾಲವಾದ್ದರಿಂದ ಶೆಖೆ ಹೆಚ್ಚಿತ್ತು ಬೆವರು ಮತ್ತು ಕೆಲವು ಕುಡುಕರು ಕುಡಿದು ಬಂದಿದ್ದರಿಂದ ಮತ್ತೆ ಕೆಲವರು ಬೀಡಿಯೋ ಸಿಗರೇಟೊ ಸೇದಿ ಬಂದಿದ್ದರಿಂದ ಅವರುಗಳು ಬಿಡುತ್ತಿದ್ದ ಹೊರ ಉಸಿರಿನಿಂದಾಗಿ ವಿಚಿತ್ರ ವಾಸನೆ ವಾಕರಿಕೆ ತರಿಸುತ್ತಿತ್ತು. ಆದರೂ ಅದರಲ್ಲಿ ಹೋಗದೇ ವಿಧಿಯಿರಲಿಲ್ಲ ಯಾಕಂದರೆ ಆಟೋಗಳವರು ಆ ರಾತ್ರಿಹೊತ್ತು ಆಡಿದ್ದೇ ಆಟ ಹೇಳಿದ್ದೇ ರೇಟು..! ಇದೆಲ್ಲದರ ಜತೆಗೆ ನಾನು ಈಗ ಹೇಳಹೊರಟಿರುವ ಮುಖ್ಯವಾದ ವಿಚಾರ ಮೊಬೈಲ್ ಮ್ಯೂಸಿಕ್ ಅಥವಾ ಸಂಗೀತ ಪ್ರಿಯರ ಕಿವಿಗಡಚಿಕ್ಕುವ ಲಹರಿ ಹರಿಸುತ್ತಾ ಕನ್ನಡ ತಮಿಳು ತೆಲುಗು ಹಿಂದೀ ಇವೆಲ್ಲಾ ಚೌ ಚೌ ಆಗಿ ಮಿಶ್ರ ಭಾಷೆಯ ವಿವಿಧ ರೀತಿಯ ಹಾಡುಗಳನ್ನು ತಾವು ಕೇಳುವುದಕ್ಕಿಂತಾ ಬೇರೆಯವರು ಕೇಳಲಿ ತಮ್ಮ ಹತ್ತಿರ ಇರುವ ಆ ಸಾಧನವನ್ನು ನೋಡಲಿ ಎಂದು ಗಮನ ಸೆಳೆಯುವುದಕ್ಕಾಗಿಯೇ ಸಂಗೀತ  ಬಜಾಯಿಸುತ್ತಾ ಬಿಟ್ಟಿ ಮನರಂಜನೆಯ ಹೆಸರಲ್ಲಿ ಹಿಂಸೆ ನೀಡುವ ಜನಗಳ ಬಗ್ಗೆ....--------------------------------------------------------  >>>> ವಾರದಲ್ಲಿ  ಒಂದು ದಿನ (ಶುಕ್ರವಾರ) ನನ್ನ ಸಹೋದ್ಯೋಗಿಗೆ  ವಾರದ ರಜ,  ಕೋರಮಂಗಳದಿಂದ  ಮೆಜೆಸ್ಟಿಕ್ಗೆ ಹೋಗಲು ಬಸ್ಸು ಸಿಗುತ್ತೆ  ಕುಡುಕರ  ತೊಂದ್ರೆ ಅಸ್ಟೀಲಾ, ಆದರೆ  ಮೆಜೆಸ್ಟಿಕ್ ಇಂದ  ಯಶವಂತ ಪೂರಕ್ಕೆ ಹೋಗುವುದು ಇದೆಯಲ್ಲಾ ಅದು ಒಂದು ದಿನ ನನಗೆ  ನರಕವನ್ನೇ  ನೋಡಿ ಅನುಭವಿಸಿ  ಬಂದ ಹಾಗೆ ಆಗುತ್ತೆ..ಮೊದಲೇ ಮಧ್ಯ ರಾತ್ರಿ ಸಮೀಪ ಹೊರಡುವ ಬಸ್ಸುಗಳು ಡಬ್ಬಲ್ ಚಾರ್ಜ್ ಕೌ ಬಸ್ಸು ಹತ್ತಿದರೂ ಸುಖಕರ(ಖಾರ) ಪ್ರಯಾಣ  ಉಹೂ!! ಇನ್ನೂ ಹೇಗಾರ ಅಡ್ಜಸ್ಟ್ ಮಾಡಿಕೊಂಡು ನಿಂತುಕೊಳ್ಳೋಣ ಅಂದ್ರೆ  ಬಸ್ಸು ತುಂಬಿ ತುಳುಕುತ್ತಾ ಬಳುಕುತ್ತಾ ಹೊರಡಲು ಅಣಿಯಾಗುವುದು ನಿರ್ವಾಹಕ ಟಿಕೆಟ್ ಕೊಟ್ಟು ಮುಗಿಸಿದ ನಂತರವೇ, ಅಲ್ಲೀವರ್‌ಗೆ ನಮಗೆ ಸೀಟ್ ಸಿಕ್ಕಿದ್ರೆ ಬಚಾವ ಅದೂ ಕಿಟಕಿ ಸೀಟ್ ಆದ್ರೆ ಅವ್ರೆ ಪುಣ್ಯವಂತರು :)))  
ಈ ಮಧ್ಯೆ  ಮೊಬೈಲು ತೆಗೆದು (ಚೀನಾ ಫೋನುಗಳ ಧ್ವನಿ ಆ ದೇವರಿಗೆ ಪ್ರೀತಿ!!) ಹಾಡು ಹಾಡಿಸಲು ಶುರು ಮಾಡುವ ಆ ಜನ ತಾವೇ ಅಲಿ ಯಾವ ಹಾಡು ಬರುತ್ತೆ ಅಂತ ಸಹಾ ನೋಡೊಳ ಕೇಳೋಲ್ಲ, ಆದರೆ ಬೇರೆವ್ರಿಗೆ ತೊಂದ್ರೆ ಆಗುವ ಹಾಗೆ  ಸೌಂಡ್ ಬಿಟ್ಟು  ಅದರ ನಡುವೆ ನಮ್ಮದೂ ವಾಸಿ ಇರಲಿ ಅಂತ  ನಿಂತವರ ಕಾಲು ತುಳಿಯವರು , ಗುಟ್ಕಾ  ಹಾಕಿಕೊಂಡು  ಬಂದವರು ಎಣ್ಣೆ ಹಾಕಿಕೊಂಡು ಬಂದವರು ಬೇಸಿಗೆಯಾದ್ದರಿಂದ ಗಾಳಿಯೇ ಆಡದೆ  ಅಲ್ಲಿ ಈಚಿತ್ರ ಕಲಸುಮೆಸೋಗರ ವಾಸನೆ ಹರಡಿಕೊಂಡು  ನಮ್ ಜನ್ಮದ ಬಗ್ಗೆ  ನಮಗೆ ಜಿಗುಪ್ಸೆ ಬಂದ್ರೆ ಅಚ್ಚರಿ ಇಲ್ಲ...!!
ನನ್ ಅನುಭವದಂತೆ ರಾತ್ರಿ ಬಹುಪಾಲು ಬಸ್ಸುಗಳಲಿ  ಕುಡುಕರದೇ ಸಾಮ್ರಾಜ್ಯ!! ಕುಡುಕರ  ಗುಟ್ಕಾ  ತಿನ್ನುವವರ ಪಕ್ಕ ಕುಳಿತ ವರನ್ನ - ನಿಂತವರನ್ನ   ಆ ಭಗವಂತ  ಸಹಾ ಕಾಪಾಡಲಾರ.... :(((
ಈಗ ಬೆಂಗಳೂರಲ್ಲಿ ಎಗ್ಗ ಮಗ್ಗ  ಗಾಡಿಗಳು ಹೆಚಾಗಿದ್ದು ಯಾಕೆ ಅಂತ ಗೊತಾಯ್ತಲ್ಲ.ಈ ತರಹ ಪ್ರಯಾಣ ಮಾಡಲು ಇಸ್ಟ ಪಡದೇ  ಸಾಲ - ಸೋಲ ಮಾಡಿ  ಗಾಡಿ ತೆಗೆದುಕೊಂಡು .............
ವಾಯು ಮಾಲಿನ್ಯ ಟ್ರಾಫಿಕ್ ಜಾಮ್(((
ಇದಕ್ಕೆಲ್ಲ ಪರಿಹಾರ -ಬೀಎಂ ಟೀ ಸಿ ಅವರು ಜಾಸ್ತಿ  ಬಸ್ಸು ಬಿಡಬೇಕು..ಸಮೂಹ  ಸಾರಿಗೆಯನ್ನ್ ಇನ್ನಸ್ತು ಪ್ರಯಾಣ ಸ್ನೇಹಿ ಮಾಡಬೇಕು...

ಮುಖ್ಯವಾಗಿ  ಹೊಟ್ಟೆಗೆ  ............ನ್ನ... ತಿನ್ನುವ  ಆ ಕುಡುಕರು , ಗುಟ್ಖ ತಿನ್ತಾ  ಆ ವಾಸನೆಯ   ಹಿಂಸೆ ಕೊಡುವವರು ಆವ್ರು ಮನುಷ್ಯರು ,ಮತ್ತು ನಾವೂ  ಮನುಷ್ಯರು ಅನ್ನೋದನ್ನ ಅರಿತುಕೊಳಬೇಕು... ಇಲ್ಲವಾದರೆ  ದಿನಂಪತಿ ಬಸ್ಸುಗಳಲಿ ಮಾರಾಮಾರಿ ಜಗಳ  ಮಾಮೂಲು  ಆಗುತ್ತೆ...ರಸ್ತೆಗಳಲ್ಲಿ  ಗಾಡಿಗಳು ಹೆಚ್ಕು ಆಗ್ತಾವೆ...ವಾಯುಮಾಲಿನ್ಯ ಮಿತಿ ಮೀರುತ್ತೆ -ರೋಗಗಳು ಬಂದು ಎಲ್ರೂ  ಹೋಲ್ ಸೆಲ್ ಆಗ್ ಆಸ್ಪತ್ರೆ ಸೇರಬೇಕಾಗುತ್ತೆ..  ಕುಡಿಯುವರಿಗೆ ಮಾತು ಗು ಟ್ಖ  ತಿನ್ನುವವ್ರಿಗೆ ಜಾಗೃತಿ ಮೂಡಿಸಬೇಕು..ಮೊಬೈಲು ಹಾಡು ಹಾಕಿ   ಕಿರಿಕ್ ಮಾಡುವ ಮಹಾಶಯರಿಗೆ  ಏನು ಮಾಡಬೇಕು ಎನ್ನುವುದಕೆ ನನ ಹತ್ತಿರವೂ ಐಡಿಯಾ ಇಲ್ಲ, ಅದಕ್ಕೆ  ಆ ತಕ್ಷಣ ೫-೬ ಜನ ಒಟ್ಟಾಗಿ  ರೇಗಾಡಿ ಬಯ್ದರೆ  ಸಾಕು ಅನ್ನಿಸುತ್ತೆ...

 
 

ತ್ರಿನೇತ್ರ ಸೋಮ, 03/19/2012 - 10:19

ಮಿತ್ರ ವೆಂಕಟ್ ಅವರಿಗೆ ತಮ್ಮ ಮನಸ್ಸಿನಲ್ಲಿದ್ದ ಸ್ಪಷ್ಟ ಅಭಿಪ್ರಾಯಗಳನ್ನು ತಿಳಿಸಿ ತಮ್ಮ ಅನುಭವವನ್ನೂ ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು.
ದಿನ ನಿತ್ಯ ಕಾರ್ಯಗಳಿಗಾಗಿ ಬಸ್ ಪ್ರಯಾಣವನ್ನೇ ನಂಬಿರುವ ಜನಸಾಮಾನ್ಯರಾದ ಎಲ್ಲರೂ ಕಂಡು ಕೇಳಿ ಅನುಭವಕ್ಕೆ ಬಂದಿರುವಂತಾ ಒಂದು ವಿಚಾರದ ಬಗ್ಗೆ ನಾನು ಬರೆದೆ ಅಷ್ಟೇ. ನೀವು ಹೇಳಿದಹಾಗೆ ಒಂದೈದಾರು ಮಂದಿ ಸೇರಿಕೊಂಡು ಒಟ್ಟಿಗೇ ಜಬರ್ದಸ್ತಿ ಮಾಡಿ ನಮಗೆ ತೊಂದರೆಯಾಗುತ್ತಿದೆ ದಯವಿಟ್ಟು ಸುಮ್ಮನಿರಿ ಎಂದು ಧೀನರಾಗಿ ಬೇಡಿಕೂಳುವಂತಾ ಪರಿಸ್ಥಿತಿ ಬಂತಲ್ಲಾ... ಎಂದು ಅಯ್ಯೋ ಎನ್ನಿಸುತ್ತಿದೆ. ತಿಳಿದೂ ತಿಳಿಯದಂತಿರುವ ತೊಂದರೆ ಕೊಡುವ ಇಂತಾ ಜನರನ್ನು ಸಾಮಾನ್ಯವಾಗಿ ಯಾರೂ ಒಬ್ಬರೇ ಕೆಣಕಲು ಹೋಗುವುದಿಲ್ಲ. ಆ ರೀತಿ ಯಾರಿಗಾದರೂ ಹೇಳಬೇಕಾದ ಪರಿಸ್ಥಿತಿ ಬಂದಾಗ ಬೇರೊಬ್ಬರ ಸಹಾಯ ಕೇಳಲೂ ಆಗುವುದಿಲ್ಲ ಯಾಕೆಂದರೆ ಅಲ್ಲಿ ಎಲ್ಲಾ ಅಗಂತುಕರೇ ಆಗಿರುತ್ತಾರೆ. ನಮ್ಮದೇ ಮಿತ್ರರ ಗುಂಪೇ ಆಗಿದ್ದಲ್ಲಿ ಓಕೇ.. ಹಾಗಿಲ್ಲದೇ ಸಹಾಯ ಸಿಗುತ್ತದೆಂದು ನಾವು ಶುರುಮಾಡಿ ಬೇರಾರೂ ಅದಕ್ಕೆ ಒತ್ತು ಕೊಡದೇ ನಮಗ್ಯಾಕೆ ಅವರಿವರ ಉಸಾಬರಿ ಎಂದು ಸುಮ್ಮನಾಗಿಬಿಟ್ಟರೆ ಆಯಿತು ವಿಪರ್ಯಾಸ... ಮತ್ತು ನಮ್ಮ ಮುಖಕ್ಕೇ ಮಂಗಳಾರತಿ ಎತ್ತಿಸಿಕೊಳ್ಳುವ ಸಂದರ್ಭ ಬಂದರೂ ಬರಬಹುದು. ಆದ್ದರಿಂದ ಇಂತಹಾ ಕೆಲವು ನಿಯಮಗಳನ್ನು (ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ ಮಾಡುವುದನ್ನು ನಿಲ್ಲಿಸಲು ಮಾಡಿಲ್ಲವೇ ಅದೇರೀತಿ) ಸರ್ಕಾರದವರೇ ಲಾಗೂ ಮಾಡಬೇಕು ಶಬ್ಧ ಮಾಲಿನ್ಯ ಕೂಡಾ ಅಂತಾದ್ದರಲ್ಲಿ ಒಂದು. ಯಾಕೆಂದರೆ ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕು ಸ್ವಾತಂತ್ರ್ಯ ಹಾಗೇ ಬೇರೊಬ್ಬರಿಗೆ ತೊಂದರೆಯಾಗದ ರೀತಿ ತಮ್ಮ ವ್ಯವಹಾರ ಮಾಡಬೇಕೆಂಬ ನೀತಿ ನಿಯಮ ಅದಾಗಲೇ ಇದೆ. ಇಂತಾ ವಿಚಾರಗಳನ್ನು ವಿಧಾನಸಭೆಯಲ್ಲಿ ಚರ್ಚಿಸಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭ ಮತ್ತು ಸ್ಥಳಗಳಲ್ಲಿ ಯಾವುದೇ ಕೆಲಸ ಕಾರ್ಯ ಮಾಡುವಾಗ ಯಾವುದೇ ಕಾರಣಕ್ಕೂ ಅಕ್ಕಪಕ್ಕದ ಜನಸಾಮಾನ್ಯರಿಗೆ ತೊಂದರೆಯಾಗದರೀತಿ ನಡೆದುಕೊಳ್ಳಬೇಕು ಅದನ್ನು ಪಾಲಿಸದಿದ್ದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಿ ಶಿಕ್ಷಾರ್ಹ ಎಂದು ಗಣಿಸಿ ಅದಕ್ಕೆ ತಕ್ಕ ಶಿಕ್ಷೆ ನೀಡುವ ಕಾನೂನು/ನಿಯಮ ತರಬೇಕು. ಗಣೇಶ ಹಬ್ಬ ಮದುವೆ ಮತ್ತಿತರ ಸಮಾರಂಭಗಳಲ್ಲಿ ನಿಯಮಿತ ವೇಳೆಯ ಹೊರತು ಜೋರಾಗಿ ಅರಚುತ್ತಾ ಲೌಡ್ ಸ್ಪೀಕರ್ ಗಳನ್ನು ಹಾಕಿ ಕೂಗಾಡಿಸುವುದೂ ಅಪರಾಧವಲ್ಲವೇ... ಹಾಗೇ ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ತಿಂದು ಉಗುಳುವುದು, ಕುಡಿದು ಬಸ್ ಸಂಚಾರ ಮಾಡುವುದು ಇವೆಲ್ಲಾ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಅದಕ್ಕೆ ತಕ್ಕ ಕಾನೂನು ಲಾಗೂ ಮಾಡಿದಲ್ಲಿ ನಮ್ಮ ನಿಮ್ಮಂತಾ ಸಾಮಾನ್ಯ ಪ್ರಜೆಗಳು ನೆಮ್ಮದಿಯಿಂದ ಉಸಿರುಬಿಡುವಂತಾಗುತ್ತದೆ. ಇಲ್ಲವಾದರೆ ನಾವೂಕೂಡಾ ಎಲ್ಲರಂತೆ ಕಣ್ಣಿದ್ದೂ ಕುರುಡರಾಗಿ ಕಿವಿಯಿದ್ದೂ ಕಿವುಡರಾಗಿ ಮೂಗಿದ್ದೂ ವಾಸನೆ ಬರುತ್ತಿಲ್ಲ ಎಂದು ಮುಚ್ಚಿಕೊಂಡು ಸುಮ್ಮನೇ ಒಳಗೊಳಗೇ ಹಿಂಸೆ ಅನುಭವಿಸಬೇಹಕಾದೀತು....!

ಮುನೀರ್ ಅಹ್ಮದ್ … ಸೋಮ, 03/19/2012 - 13:43

  ತ್ರಿನೇತ್ರ  ರವರು  ಎಲ್ಲಾರ  ಮನದ ಅಳಲನ್ನು , ತಮ್ಮ ಅನುಭವದ  ಆಧಾರದಮೇಲೆ  ಇಲ್ಲಿ ವಿವರಿಸಿ ಅದನ್ನು  ಅನುಭವಿಸುವ  ನಮ್ಮನ್ನು,  ಆ  ಕಿರಿಕಿರಿಯಿಂದ  ಮುಕ್ತಿಪಡೆಯಲು ಸಾಧ್ಯವಿಲ್ಲವೇ?  ಎಂಭ  ಪ್ರಶ್ನೆಯ ಮೂಲಕ  ತಮ್ಮ ಅಳಲನ್ನು  ತೋಡಿ  ಕೊಂಡಿದ್ದೀರಿ..  ಮಾನ್ಯರೇ  ನಾವು  ಅತೀ ಆಧುನಿಕ ಜೀವನ ವನ್ನು  ನಡೆಸುತಿದ್ದೇವೆ  ಅಂದುಕೊಂಡಿದ್ದೇವೆ,  ಇತಿಹಾಸದ ಮಾನವಜೀವನದ  ಪ್ರತಿಯೊಂದು  ಘಟ್ಟವೂ , ನಾಗರೀಕತೆಯ  ವಿಕಾಸದ  ಘಟ್ಟವಾಗಿದೆ. ಅದನ್ನು  ಮುಂದುವರಿಸಿಕೊಂಡು  ಹೋಗುವುದರಮೂಲಕ ನಾವು ಯಾವಾಗಲು  ಇಂದಿನ    ಆಧುನಿಕತೆಯ  ಸರಣಿಗೆ ಹೊಂದಿಸಿಕೊಂಡು ನಮ್ಮ  ನಾಗರೀಕತೆಗೆ ರೂಪವನ್ನು  ಕೊಡಬೇಕಾಗುವುದು.  ಆದರೆ  ಈಗ  ನಾವು  ಹಳತನ್ನು  ನಿರಾಕರಿಸಿ  ಹೊಸತನ್ನು ಸ್ವೀಕರಿಸಿ   ಬಾಳಲಿಚ್ಚಿಸುತ್ತೇವೆ.  ಆಗ  ನಮ್ಮ     ಬದುಕಿನ  ಮೌಲ್ಯ ಗಳು  ನಮ್ಮಬದುಕಿನಿಂದ  ದೂರವಾಗುತ್ತಿವೆ.  ಇತಿಹಾಸದ  ಪ್ರಥಮ  ಹಂತವನ್ನು ಅವಲೋಕಿಸಿದಾಗ  ,  ಅಲ್ಲಿ  ಮಾನವನ ಮಾನವಮೌಲ್ಯಗಳು  ವಿಕಸನ  ಗೊಂಡವೂ,    ನಂತರ  ವೈಜ್ನ್ಯಾನಿಕ  ವಿಕಸನ ಜಾರಿಗೆಬಂದಿತು.  ಇಂದು  ನಾವು  ಈ ಎರಡೂ  ವಿಕಸನ  ಗಳನ್ನು  ನಮ್ಮ  ಬದುಕಿನಲ್ಲಿ  ಅಳವಡಿಸಿಕೊಂಡು  ಉತ್ತಮನಾಗರೀಕತೆಯನ್ನು  ಹೊಂದಿದ್ದೇ ಆದರೇ   ನೀವು  ಮೇಲೆ ಅನುಭವಿಸಿದ  ಕಿರಿ ಕಿರಿ ಯಿಂದ  ಮುಕ್ತಿಯನ್ನು  ಪಡೆಯಬಹುದು,  ಆದರೆ  ನಮ್ಮನಾಗರೀಕತೆ  ಹಾಗೆ  ರೂಪಗೊಂಡಿಲ್ಲ,  ಹಿದಿನ  ಮೌಲ್ಯಗಳನ್ನು ನಿರಾಕರಿಸಿ,  ವೈಜ್ನಾನಿಕತೆಯೇ  ನಾಗರೀಕತೆಯ  ಮೌಲ್ಯವೆಂದುಕೊಂಡು  ವಸ್ತುಗಳನ್ನು  ಉಪಯೋಗವೇ  ಆಧುನೀಕತೆಯೆಂದು  ಬಿಂಬಿಸುವ   ಅನಾಗರೀಕತೆಯ  ನಡಾವಳಿಗಳ್ನ್ನು  ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ.  ಅದ್ದರಿಂದ  ಮೌಲ್ಯಗಳಿಲ್ಲದ   ಬದುಕು  ನಮ್ಮದಾಗಿ,  ನವೆಲ್ಲಾರು  ಯಾರ ಹಂಗಿಲ್ಲದೇ  ಬದುಕುವಂತಾಗಿದೆ.  ಹಿದಿನ  ನಮ್ಮ ಹಿರಿಯರನ್ನು,   ಅವರಬದುಕಿನ  ಮೌಲ್ಯಗಳನ್ನು ಸ್ವಲ್ಪ  ಅವಲೋಕಿಸಿ, ಅವರು  ಎಷ್ಟೊಂದು ವಿಶಾಲ ಹೃದಯಿಗಳಾಗಿದ್ದರೆಂ  ದು  ಗೊತ್ತಾಗುತ್ತದೆ. ಪರಸ್ಪರ  ಗೌರವಾದರಗಳಿಂದ  ಬದುಕತ್ತಿದ್ದರು ಅವರು .ಅಂತಹ  ನಾಗರೀಕತೆ  ನಮ್ಮದ್ದಾದರೇ  ನಾವು  ಪುಣ್ಯವಂತರಲ್ಲವೇ? 

ತ್ರಿನೇತ್ರ ಸೋಮ, 03/19/2012 - 14:41

ಶ್ರೀಮಾನ್ ಮುನೀರ್ ಅಹ್ಮದ್ ಅವರಿಗೆ ನಮಸ್ಕಾರಗಳು.
ನನ್ನ ಮನಸ್ಸಿನ ಅಳಲನ್ನು ಬರೆದುಕೊಂಡಿದ್ದೆ ಅದಕ್ಕೆ ತಮ್ಮ ಅನಿಸಿಕೆಗಳನ್ನೂ ಸೇರಿಸಿ ಅಭಿಪ್ರಾಯ ಮತ್ತು ಅದರ ಹಿಂದಿರುವ "ಆಧುನಿಕತೆ ಮತ್ತು ವಿಕಾಸದ" ಹೆಸರಿನಲ್ಲಿ ಆಗುತ್ತಿರುವ ಮಾನವೀಯ ಮೌಲ್ಯಗಳ ಹತ್ಯೆ ಏಕಾಗುತ್ತಿದೆ ಎಂದು ವಿವರಿಸಿದ್ದೀರಿ ಕೂಡಾ. ಹೌದು ಮಾನವನ ಜೀವನದ ಪ್ರತಿಯೊಂದು ಹಂತದಲ್ಲೂ ವಿಕಾಸ ಆಗಬೇಕು ಅದು ನಿರಂತರವಾಗಿ ನಡೆಯುತ್ತಿರಬೇಕು ನಿಜ ಆದರೆ ಆ ಬಾಹ್ಯ ವಿಕಾಸದ ಜತೆಜತೆಗೇ ಆಂತರಿಕ ಮತ್ತು ಮನಸ್ಸಿನ ವಿಕಾಸ ಕೂಡಾ ಆಗಿ "ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಗಸು" ಎಂದು ಹಿರಿಯರು ಹೇಳಿರುವಂತೆ ಇರಬೇಕು ಆಗಲೇ ನಾವು ನಡೆಸುತ್ತಿರುವ ಜೀವನಕ್ಕೊಂದು ಅರ್ಥ ಸಿಗುವುದು ಎಂದು ನನ್ನ ಭಾವನೆ ಕೂಡಾ. ಸಾಮಾನ್ಯವಾಗಿ ನನ್ನ ಲೇಖನದಲ್ಲಿ ಉಲ್ಲೇಖಿಸಿರುವ ಅಂತಹಾ ಸಾಮಾಜಿಕ ಮೌಲ್ಯಗಳನ್ನು ಗಾಳಿಗೆ ತೂರಿ ಯಾರಿಗೇನೆನ್ನಿಸಿದರೆ ನನಗೇನು ನಷ್ಟ ಎನ್ನುವ ರೀತಿ ವರ್ತಿಸುವವರಲ್ಲಿ ಕೆಲವೇ ಮಂದಿ ಕಡಿಮೆ ಓದು ಬರದಹ ತಿಳಿದವರಾಗಿರುತ್ತಾರೆ ಮತ್ತು ಬಹಳಷ್ಟು ಮಂದಿ ಓದು ಬರಹ ತಿಳಿದೂ ಅವಿವೇಕಿಗಳಂತೆ ವರ್ತಿಸುವ "ನವಯುಗದ ವಿಧ್ಯಾರ್ಥಿ" ಗಳು ಕೂಡಾ ಅದರಲ್ಲಿ ಮುಂದಿರುತ್ತಾರೆ. ಬಿಸಿ ರಕ್ತ... ಹೇಳಿದ್ದು ತಲೆಗೆ ಹೋಗುವುದೇ ಇಲ್ಲಾ... ಅವರಾಡಿದ್ದೇ ಆಟ ಮಾಡಿದ್ದೇ ಮೋಜು... ಅವಿಧ್ಯಾವಂತರಿಗೆ ತಿಳಿಹೇಳಬಹುದು ಆದರೆ ಇಂತಹಾ ಅರ್ಧ ತಿಳಿದ ಮುಂದೆ ಈ ದೇಶದ ಸತ್ಪ್ರಜೆಗಳೆಂದು ಗುರುತಿಸಿಕೊಳ್ಳಲು ಹೊರಟಿರುವ  ಇಂತಹಾ ಯುವ ಜನಾಂಗವೇ ಈ ಎಲ್ಲಾ ಅವಾಂತರಕ್ಕೆ ಕಾರಣರಾಗಿರುತ್ತಾರೆ ಎಂದರೆ ತಪ್ಪಾಗಲಾರದು.
ಅವರ ಮನೆಯಲ್ಲೂ ಕೂಡಾ ಅವರಪ್ಪ ಅಮ್ಮ ಅಕ್ಕ ತಂಗಿ ಅಣ್ಣ ತಮ್ಮ ಹಿರಿಯರು ಕಿರಿಯರು ಇವರ ಜತೆ ಹೇಗೆ ನಡೆದುಕೊಳ್ಳಬೇಕು ಸಾರವಜನಿಕ ಸ್ಠಳಗಳಲ್ಲಿ ಹೇಹಗೆ ನಡೆದುಕೊಳ್ಳಬೇಕು, ವರ್ತಿಸಬೇಕು ಎಂದು ತಿಳುವಳಿಕೆ ನೀಡಲೂ ಅಶಕ್ತರಾಗಿದ್ದಾರೆ ಎನ್ನಿಸುತ್ತೆ ಅವರ ಮಾತಾಪಿತೃಗಳು. ಕಾಲದಿಂದ ಕಾಲಕ್ಕೆ ಬಂದೆರಗುವ ಇಂತಹಾ ಸಾಮಾಜಿಕ ಪಿಡುಗುಗಳನ್ನು ನಾವು ಹಿರಿಯರಾಗಿ ಮಕ್ಕಳನ್ನು ಬೆಳೆಸುವ ಮತ್ತು ಮಾರ್ಗ ಧರ್ಶನ ನೀಡುವ ರೀತಿ ಹಾಗೂ ಶಾಲೆಗಳಲ್ಲಿ ಗುರುಗಳ ಪಾತ್ರ ಇವೆಲ್ಲಾ ಬಹಳ ಮುಖ್ಯವಾಗಿರುತ್ತವೆ. ಹಾಗೂ ಇವೆಲ್ಲಾ ಪೂರಕವಾಗಿದ್ದು ಅದನ್ನು ಪಾಲಿಸ ಬಯಸಿದರೆ ಕಂಡಿತಾ ಇಂತಹಾ ಕಿರಿಕಿರಿಗಳನ್ನು ಮೂಲದಿಂದಲೇ ದೂರ ಮಾಡಲು ಸಾಧ್ಯ....! ನಮಗೂ ಕೂಡಾ ಈ ವಿಚಾರದಲ್ಲಿ ಯಾವುದೇ ವಿಶೇಷ ತರಬೇತಿ ಆಗಿಲ್ಲ ಎಲ್ಲಾ ಮಾಮೂಲಿನಂತೆ ಮನೆಯಲ್ಲಿ ತಂದೆ ತಾಯಿ ಹಿರಿಯರು ಮತ್ತು ಶಾಲೆಯಲ್ಲಿ ಗುರುಗಳು ಕಲಿಸಿದ ಪಾಠಗಳು ಮಾತ್ರ ಅಲ್ಲವೇ ನಾವು ಸಮಾಜಕ್ಕೆ ಹೊರೆಯಾಗಬಾರದು ಇತರರಿಗೆ ತೊಂದರೆ ನೀಡಬಾರದು ಎಂದೆಲ್ಲಾ ಚಿಂತಿಸಿ ನಮ್ಮಷ್ಟಕ್ಕೆ ನಾವೇ ನಿಯಮ ನೀತಿಗಳನ್ನು ಅಳವಡಿಸಿಕೊಂಡು ಪಾಲಿಸುತ್ತಿರುವುದು...? ಹಾಗಿದ್ದಮೇಲೆ ಇಂದಿನ ಈ ಕ್ಷಿಪ್ರ ಬೆಳವಣಿಗೆಯಾಗುತ್ತಿರುವ ಕಾಲದಲ್ಲಿ ನಮಗಿಂತಾ ಒಂದು ಹೆಜ್ಜೆ ಮುಂದೆ ಹೋಗಿ ಜೀವನ ಸುಗಮ ಮಾಡಬೇಕಲ್ಲವೇ ಈ ನವಯುಗದ ಯುವಕರು...? ಅದುಬಿಟ್ಟು ಅವರೆಲ್ಲಾ ಹಳೇಕಾಲದವರು ಏನಾದ್ರೂ ಹೇಳಿಕೊಳ್ಳಲಿ ನಾವು ಮಾತ್ರಾ ಫ್ರೀ ಆಗಿ ಯಾರ ಅಂಕುಶವಿಲ್ಲದೇ ಜೀವನ ಮಾಡೋಣಾ ಎಂದು ತಾತ್ಸಾರದಿಂದ ಹೀಗೇ ಮುಂದುವರೆದರೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ತೊಂದರೆಗಳನ್ನು ನಮ್ಮದೇ ಜನ ಅನುಭವಿಸಬೇಕಾಗುತ್ತದೆ.  ಪರಿಸ್ಠಿತಿ ಹೀಗಿರುವಾಗ ಇವೆಲ್ಲದರ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ನಾವೇ ಮುಂದಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಇಲ್ಲವೇ ನಾನು ಶ್ರೀ ವೆಂಕಟ್ ಅವರ ಅಭಿಪ್ರಾಯಕ್ಕೆ ಉತ್ತರ ಕೊಡುತ್ತಾ ತಿಳಿಸಿರುವಂತೆ ಸರ್ಕಾರದ ಮೊರೆ ಹೋಗಬೇಕಾಗುತ್ತದೆ ಕೈಲಾಗದ ಅಸಹಾಯಕರಂತೆ....!

ನವೀನ್ ಚ೦ದ್ರ ಮಂಗಳ, 03/20/2012 - 09:16

 ಸಾರ್ ಎಲ್ಲರು ಸಾಮಾನ್ಯವಾಗಿ ಅನುಭವಿಸುವ ಮಾನಸಿಕ ಯಾತನೆಗಳನ್ನು ಚೆನ್ನಾಗಿ ಹೇಳಿದ್ದಿರಿ,,,,,    ಜೀವನವೆಂಬ ಪ್ರಯಾಣದಲ್ಲಿ ಎಲ್ಲಾ ರೀತೀಯ ಸಂದರ್ಭಗಳು, ವಿಚಿತ್ರ ಮನೋಭಾವದ ಮನುಜರು ಹೀಗೇ ಹಲವು ರೀತಿಯ ಚಟುವಟಿಕೆಗಳನ್ನುನಾವು ನೋಡಲೇಬೇಕಾಗುತ್ತದೆ.ಎಲ್ಲರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ,ತಪ್ಪು ಮಾಡ್ತಿರುವವರನ್ನು ನೀವು ತಪ್ಪುಮಾಡುತ್ತಿದ್ದಿರಿ ಎಂದು ಹೇಳುವ ಧೈರ್ಯ ಇಂದಿನ ಜನರಲ್ಲಿ ಕಡಿಮೆಯಾಗಿದೆ ಸಾರ್,,,ಕದಿಯುತ್ತಿರುವವನ ಬಗ್ಗೆ ಹೇಳಿಬಿಟ್ಟರೆ ಅವನು ಎಲ್ಲಿ ತನಗೆ ಕೇಡು ಮಾಡುತಾನೋ ಎಂಬ ಭಯ, ಮತ್ತೆ ತಪ್ಪುಗಳನ್ನೆ ಸರಿ ಎಂದು ವಾದಿಸುವವರು ಇನ್ನೊಂದು ಕಡೆ ಹೀಗೆ ಹಲವು ಜಂಜಾಟಗಳೆ ಮನುಷ್ಯನ ಮನಸ್ಸನ್ನು ಕೆಡಿಸಿವೆ.ಪ್ರತಿಯೊಂದಕ್ಕು ಕಾನೂನು ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ಮನುಷ್ಯರಿಗೆ ತಪ್ಪು ಯಾವುದು ಸರಿ ಯಾವುದು ಎಂಬವಿವೇಚನೆ ಇದ್ದೆ ಇರುತ್ತದೆ ಆದುದರಿಂದ ಭಯವನ್ನು ಬಿಟ್ಟು ತಪ್ಪನ್ನು ವಿರೋಧಿಸುವ ಮನೋಭಾವ ಮೊದಲು ಬರ್ಬೇಕು..ಇಲ್ಲವಾದರೆ ಈ ಕೆಟ್ಟ ರೀತೀಯಕೆಲಸಗಳು ನೆಡಿಯುತ್ತಲೆ ಇರುತ್ತದೆ.

ತ್ರಿನೇತ್ರ ಮಂಗಳ, 03/20/2012 - 12:00

ನಮಸ್ಕಾರ ನವೀನ್ ಚಂದ್ರ ಅವರಿಗೆ.
ಕಂಡಿತಾ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಸಥ್ಯವಾದ ಮಾತುಗಳು. ಎಲ್ಲದಕ್ಕೂ ಕಾನೂನು ಸರಿಹೊಂದುವುದಿಲ್ಲ. ನಮ್ಮ ಮನಸ್ಸಿನೊಳಗೇ ಅವು ಹುಟ್ಟಬೇಕು ಅವು ತಿಳಿಯದವರಿಗೆ ತಿಳಿಯುವ ರೀತಿಯಲ್ಲಿ ಹೇಳಿ ತಿಳಿಸಬೇಕು ಆಗ ನಿಜವಾದ ಮಾನವೀಯತೆ ಉಳ್ಳವರಾಗಿದ್ದರೆ ಅವರೂ ಪಾಲಿಸುವುದರಲ್ಲಿ ಸಂದೇಹವೇ ಇಲ್ಲ. 
ಉದಾಹರಣೆಗೆ ಈ ವಿಸ್ಮಯನಗರಿಯನ್ನೇ ತೆಗೆದುಕೊಳ್ಳಿ... ನಾವು ಕಟ್ಟಾ ಕನ್ನಡ ಪ್ರೇಮಿ ನನ್ನ ನರನಾಡಿಗಳಲ್ಲಿ ಕನ್ನಡದ ರಕ್ತ ಹರಿಯುತ್ತಿದೆ ಎಂದೆಲ್ಲಾ ಮೇಲೆ ಮಾತ್ರಾ ಬೊಗಳೆ ಬಿಡುತ್ತಾ ಕನ್ನಡ ಬರೆಯಲು ಸಾಧ್ಯವಿರುವ ಎಲ್ಲಾಕಡೆಯೂ ನಿರರ್ಗಳವಾಗಿ ಇಂಗ್ಲೀಷ್ ಪದಪುಂಜಗಳ ಮಹಾಪೂರವನ್ನೇ ಹರಿಸುತ್ತಾ ತಮ್ಮಬಗ್ಗೆ ಬಡಾಯಿ ಕೊಚ್ಚಿಕೊಂಡು ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ತಿಳಿಸಿ ಹೇಳಿದರೆ ಕನ್ನಡಮ್ಮನ ಕ್ಷಮೆಯಿರಲಿ ಎಂದು ಮತ್ತೆ ಅವರ ಅತೀ ಪ್ರಿಯವಾದ ಇಂಗ್ಲೀಷನ್ನೇ ಬಳಸುತ್ತಾ ಇದ್ದಾರೆ ಅದನ್ನು ದಿನ ನಿತ್ಯ ನಾನು ನೋಡುತ್ತಿದ್ದೇನೆ. ಒಂದೆರಡು ಉತ್ಸಾಹೀ ಯುವಕರಿಗೆ ಸಲಹೆ ಕೂಡಾ ನೀಡಿದ್ದೆ ಅದನ್ನವರು ಪರಿಪಾಲಿಸಿದ್ದಾರೆ ಕೂಡಾ ಆದರೆ ಮತ್ತೆ ಕೆಲವರು  ಅಂದುಕೊಳ್ಳುವವರು ಏನಾದರೂ ಅಂದುಕೊಳ್ಳಲಿ ನಮಗೇನು ಎಂದು ತಾತ್ಸಾರ ಮನೋಭಾವದಿಂದ  ಯಥಾ ಪ್ರಕಾರ ಮುಂದುವರೆಯುತ್ತಿದ್ದಾರೆ.
ಆದ್ದರಿಂದ ನಾವು ಮಾಡುವ ಕಾರ್ಯ ಮಾಡಿ ತಪ್ಪು ಕಂಡಾಗ ತಿಳಿಸಿ ಹೇಳುವ ಕರ್ತವ್ಯ ನಿಭಾಯಿಸೋಣಾ.... ಮುಂದಿನದು ಅವರವರಿಗೇ ಇರಲಿ ಅಲ್ಲವೇ...! ಧನ್ಯವಾದಗಳೊಂದಿಗೆ - ತ್ರಿನೇತ್ರ. 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.