ನನ್ನ ಕಥೆ - ವ್ಯಥೆ ಭಾಗ - ೨
ಅಬ್ಬಾ!! ಇವತ್ತಿನ ಸಂಪಾದನೆ ಚೆನ್ನಾಗಾಯ್ತು. .. ಆಶು ೪ ದಿನದಿಂದ ಹೊಸ ಫ್ರಾಕ್ ಗಾಗಿ ಹಠ ಹಿಡಿದಿದ್ದಾಳಲ್ಲ, ಇವತ್ತು ಮನೆಗೆ ಹೋಗುವಾಗ ತಗೊಂಡೇ ಹೋಗಬೇಕು.. ಅದೇನು ಋಣಾನೋಎಲ್ಲಾ ನಾಯಿಮರಿಗಳೂ ಸುಲಭವಾಗೇ ಮಾರಾಟ ಆಗ್ತಾ ಇವೆ. ಆದ್ರೂ ಈ ಟಾಮಿ ಮಾತ್ರ ಉಳೀತಾನೇ ಇದ್ಯಲ್ಲ... ಎಷ್ಟು ಮುದ್ದಾಗಿದೆ ಟಾಮಿ.. ನೋಡ್ತಾ ಇದ್ರೆ ಎತ್ತಿ ಮುದ್ದು ಮಾಡದಿರಲಾಗುವುದೇಇಲ್ಲ. ಶುಭ್ರ ಬಿಳಿಯ, ಹತ್ತಿಯಂತೆ ಮೃದುವಾದ ಜೊಂಪೆ ರೋಮ ಉಳ್ಳ ಪೊಮೆರಿಯನ್ ನಾಯಿ ಮರಿ. ಆದ್ರೂ ಯಾರೂ ಕೂಡ ತಾನು ಹೇಳುತ್ತಿರುವ ಬೆಲೆಗೆ ಕೊಳ್ಳಲು ತಯ್ಯಾರಿಲ್ಲ. ಕಡಿಮೆ ಬೆಲೆಗೆಕೊಡಲು ನನ್ನ ಮನಸ್ಸು ಕೂಡ ಒಪ್ಪುತ್ತಿಲ್ಲ. ತನ್ನ ಒಳ ಮನವೇನಾದರೂ ಟಾಮಿ ನನ್ನೊಂದಿಗೇ ಇರಲಿ ಎಂದು ಬಯಸುತ್ತಿದ್ಯಾ?? ಹ್ಹ್!!!! ಗೊತ್ತಿಲ್ಲ!!!! ಅದ್ಯಾಕೋ ಹಿಂದಿನ ರಾತ್ರಿ ಆಶು ಹೇಳಿದ್ದು ಪುನಃ ಕಿವಿಯಲ್ಲಿ ಗುಯ್ಗುಟ್ಟಲಾರಂಭಿಸಿತು... "ಪಪ್ಪ.. ನಾನು ನಿಮ್ಮ ಮಗಳಾಗಿದ್ದಕ್ಕೆ ಖುಶಿ ಉಂಟು ನನ್ಗೆ." ಹೆಮ್ಮೆಯಿಂದ ಬೀಗಿದ ಮನಸ್ಸಿನಿಂದಲೇ ಕೇಳಿದೆ, "ಅದ್ಯಾಕೆ ಮಗಳೇ" ಅಂತ. ಬಿಲ್ಲಿನಿಂದ ಬಿಟ್ಟ ಬಾಣದಂತೆ ಅವಳಿಂದ ಬಂದ ಮಾತು, ನನ್ಗೆ ಇಷ್ಟ ಇದ್ರೂ ಇಲ್ಲದಿದ್ದರೂ ಮನದಾಳಕ್ಕೆ ನಾಟಿತು. "ಮತ್ತೆ ನಾನು ಪೂವಿಯ (ಟಾಮಿಯ ಅಮ್ಮ) ಮಗು ಆಗಿದ್ದಿದ್ರೆ ನೀವು ನನ್ನ ಇನ್ಯಾರಿಗೋ ಮಾರಿಬಿಡ್ತಿದ್ರಲ್ಲ...!!!!!!!!!!!!! ಅದ್ಯಾಕೋ ಆಶು ಬಿಚ್ಚಿಟ್ಟ ವಾಸ್ತವದ ಸತ್ಯವನ್ನ ಒಪ್ಪಿಕೊಳ್ಳೋಕೆ ಮನಸ್ಸು ತಯ್ಯಾರಿರಲಿಲ್ಲ. ಕಿವುಡನಂತೆ ಅಲ್ಲಿಂದೆದ್ದು ಹೊರನಡೆದಿದ್ದೆ. ಮನಸ್ಸು ನಿನ್ನೆಯಿಂದ ಸರಿ ಇಲ್ಲ. ಯಾಕೋ ಮಾರಲೆಂದೇ ತಂದು, ಜತನದಿಂದ ಸಾಕುತ್ತಿರುವ ಎಳೆ ಮರಿಗಳನ್ನು ನೋಡುವಾಗ ನಾನಿಷ್ಟು ಕಟುಕನಾ ಅನಿಸತೊಡಗಿದೆ.. ಅದರಲ್ಲೂ ಟಾಮಿಬಹಳ ದಿನಗಳಿಂದ ನಮ್ಮ ಮನೆಯಲ್ಲೇ ಇರುವವ ಯಾಕೆಂದ್ರೆ ಬೇರೆ ಮರಿಗಳಂತೆ ಬಂದ ೩-೪ ದಿನಗಳಲ್ಲಿ ಮಾರಾಟ ಆಗದೇ ಉಳಿದಿದ್ದರಿಂದ, ಆಶುಗೆ ಒಳ್ಳೆಯ ಗೆಳೆಯನೇ ಆಗಿಬಿಟ್ಟಿದ್ದಾನೆ.. ಅಣ್ಣನ ಮನೆಯಿಂದ, ಈ ಟಾಮಿಯನ್ನು ತರುವಾಗ ಪೂವಿಯ ಗೋಳಂತೂ ಹೇಳತೀರದಾಗಿತ್ತು. ಈಗಲೂ ಸರ್ಯಾಗಿ ಊಟ ಕೂಡ ಮಾಡ್ತಾ ಇಲ್ಲ ಅಂತ ಅತ್ತಿಗೆ ಹೇಳಿದ್ದ್ರಲ್ಲ... ಯಾಕೋ ಇರುಸುಮುರುಸು.. ಟಾಮಿ-ಪೂವಿ ಬಗ್ಗೆ ಯೋಚಿಸಿದಂತೆಲ್ಲಾ ಹೆಚ್ಚಾಗುತ್ತಿದ್ದ ಸಂಕಟ, ಆವರಿಸುತ್ತಿದ್ದ ಖಿನ್ನತೆ, ಖಾಲಿಯಾಗುತ್ತಿದ್ದ ಮನಸ್ಸು ಹೊತ್ತೇ ಮನೆ ತಲುಪಿದೆ. ಬೋನಿನಲ್ಲಿದ್ದ ಟಾಮಿಯನ್ನುನೋಡುತ್ತಿದ್ದಂತೆ ಆಶು ಹಾರಿ ಬಂದಳು... "ಟಾಆಆಆಮಿ........ ಬಂದ್ಯಾ??? ನನ್ಗೊತ್ತಿತ್ತು ನೀನು ಪುನಃ ಬಂದೇ ಬರ್ತೀಯಾ ಅಂತ.. ಈವತ್ತು ದೇವ್ರಿಗೆ ಕೈ ಮುಗಿವಾಗ ಒಂದು ಊದಿನಕಡ್ಡಿಹೆಚ್ಚು ಹಚ್ಚಿದ್ದೆ ಟಾಮಿಯನ್ನ ಯಾರೂ ಕೊಂಡುಕೊಳ್ಳದ ಹಾಗೆ ಮಾಡು ದೇವ್ರೇ..ಅಂತ. ಸಧ್ಯ!! ಸಾರ್ಥಕ ಆಯ್ತು.."ಮಗಳು ಟಾಮಿಯ ಜೊತೆ ಮಾತನಾಡುತ್ತಾ, ದೇವರಿಗೆ ಥ್ಯಾಂಕ್ಸ್ ಹೇಳುತ್ತಾ, ತನ್ನದೇ ಲೋಕದಲ್ಲಿ ಮುಳುಗಿದಳು. ಯಾರೊಂದಿಗೂ ಸೇರದ ಟಾಮಿ ಅವಳ ಧ್ವನಿ ಕೇಳಿದೊಡನೆ, ಬೋನಿನಒಳಗೇ ಸುತ್ತುತ್ತಾ ತನ್ನವರನ್ನು ಸೇರಿದ ಹರ್ಷ ವ್ಯಕ್ತ ಪಡಿಸಲಾರಂಭಿಸಿತು.ನನ್ನ ಮನ ಪುನಃ ಮಗಳ ಮಾತುಗಳನ್ನ, ತಪ್ಪು-ಸರಿ, ಪಾಪ-ಪುಣ್ಯಗಳ ಕುರಿತು ಚಿಂತಿಸತೊಡಗಿತು...
ಸಾಲುಗಳು
- 314 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ