ಓ..... ಪ್ರೇಯಸೀ..!
ಮಿತ್ರರೇ ಈ ಕವನವನ್ನು ಸುಮಾರು ೩೨ ವರ್ಷಗಳ ಹಿಂದೆ ನಾನು ಎರಡನೇ ವರ್ಷದ ಪದವಿಯಲ್ಲಿದ್ದಾಗ ರಚಿಸಿದ್ದು. ಆದರೆ ಎಲ್ಲೂ ಪ್ರಕಟಿಸಿರಲಿಲ್ಲ. ಇಂದು ಇಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಲು ಪ್ರಸ್ತುತ ಪಡಿಸಿದ್ದೇನೆ.
*******************************************
ಸಂಜೆ ಮಬ್ಬಿನಾ ಮಳೆಯಲೀ ನೆನೆದು
ಬರುತಿರಲು ನಾನು ರಸ್ತೆಯಲಿ ಅಂದು
ಕಂಡೆನಾನೋರ್ವ ತರುಣಿಯನು
ರಸ್ತೆಪಕ್ಕದಾ ಮರದಡಿಯಲಿ
ಮಳೆಯಲಿ ನೆನೆದಾ ಭಂಗಿಯಲಿ.
ನಾಹೋದೆ ಆಶ್ರಯಕೆ ಮರದೆಡೆಗೆ
ನೋಡಿದಳಾ ತರುಣಿ ನನ್ನಡಿಯಿಂದ ಮುಡಿಗೆ
ಅಂದಚೆಂದದ ಅವಳಂಗಾಂಗಗಳ ನೋಡಿ
ಮನದೊಳು ಬಂದವು ನೂರಾಸೆಗಳು ಮೂಡಿ
ಬಿಳಿಯುಡುಪಿನಾ ಬಾಲೆ ಕಣ್ಸನ್ನೆ ಮಾಡೆ
ಅವಳಿಂದೆಹಿಂದೆ ನಾನಡೆದು ಹೋದೆ
ಕರೆದೊಯ್ದಳಾಕೆ ದೂರದಾ ಮುರುಕು ಮಂಟಪಕೆ
ಎನ್ನಯಾ ಮನದಾಸೆ ಪೂರೈಸುವುದಕೆ
ಇನ್ನೇನು ಸ್ವರ್ಗ ಮೂರಿಂಚು ಎನಿಸಿ
ಕೈಯ್ಯಲೀ ಕೈಯ್ಯಿರಿಸಿ ಹೇಳ್ದೆ - ನೀನೇ ನನ್ನ ಪ್ರೇಯಸಿ.
ತಣ್ಣನೆಯ ಸುಳಿಗಾಳಿ ಆರ್ಭಟಿಸಿ ಬಂದು
ಸಿಡಿಲಿನಾ ಹೊಡೆತಕ್ಕೆ ಮಂಟಪವು ಬಿದ್ದು
ಹೆದರಿ ಎದ್ದು ನಿಂತೆ ಕನಸಿನಾ ತೆರೆ ಸರಿಸಿ
ಮಾಯವಾಗಿದ್ದಳು ನನ್ನಾ ಪ್ರೇಯಸಿ
ನಿರಾಸೆಯಾ ಛಾಯೆ ನನ್ನನಾವರಿಸಿ
ಜೋರಾಗಿ ಕೂಗಿ ಹೇಳ್ದೆ - ಓ ಪ್ರೇಯಸೀ
ದೂರಾದೆಯೇಕೆ ನೀ ನನ್ನಾಸೆಯಾ ಸವಿ ರೂಪಸಿ…!
ಸಾಲುಗಳು
- 221 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ