Skip to main content

ವಸಂತಾಗಮನವೆಂಬ ಸವೆದು ಹೋದ ಕ್ಲೀಷೆ!

ಬರೆದಿದ್ದುApril 14, 2010
8ಅನಿಸಿಕೆಗಳು

ಪ್ರಿಲ್ ಇಸ್ ದಿ ಕ್ರುಯೆಲೆಸ್ಟ್ ಮಂತ್! ಅಂತಾ ಎಲ್ಲೋ ಓದಿದ ನೆನಪು.
ನಿದ್ರಾಹೀನ ರಾತ್ರಿಗಳು. ತೂಕಡಿಕೆಯ ಮುಂಜಾವು. ಆದರೆ ಮುಂಜಾನೆಯಲ್ಲಿ ನಿದ್ರಿಸುವ ಹಾಗಿಲ್ಲ. ಎಲ್ಲಿ ಜನರೆಲ್ಲ ನಮ್ಮನ್ನು ಓವರ್ ಟೇಕ್ ಮಾಡಿಬಿಡುತ್ತಾರೋ? ಎಂಬ ಭಯದಲ್ಲಿ ಅದೇ ಕೆಲಸ, ವ್ಯವಹಾರಗಳಲ್ಲಿ ತೊಡಗಿಕೊೞಲೇ ಬೇಕಾದ ಅನಿವಾರ್ಯತೆ.
ಮೇಲೆ ನಿಗಿ ನಿಗೆ ಕೆಂಡ ಚೆಲ್ಲುವ ಕ್ರೂರವಾದ ಮಧ್ಯಾಹ್ನ .ಹೊರಗೆ ಕಾಲಿಟ್ಟರೆ ಧೂಳು, ವಾಹನಗಳ ಹೊಗೆ. ಮೇಲೆ ಸೂರ್ಯನ ಪ್ರತೀಕಾರ. ಸ್ವಲ್ಪ ದೂರ ನಡೆದರೂ ಸರಿ, ಮನೆಗೆ ಬಂದ ತಕ್ಷಣ ಮುಖದಲ್ಲಿ ಚಪ್ಪಲಿಯಲ್ಲಿ ಹೊಡೆಸಿಕೊಂಡವರ ಕಳೆ.
ಮಧ್ಯಾಹ್ನ ನಿಧಾನವಾಗಿ ಸರಿಯುತ್ತಿದ್ದ ಹಾಗೆ  ಮತ್ತೆ ಸಂಜೆ. ಮತ್ತದೇ ಸಂಜೆ, ಅದೇ ಬೇಸರ, ಅದೇ ಏಕಾಂತ.
ಥೂ! ಎಂಥಾ ಏಕತಾನತೆ.ಈ ಲೈಫಿಗೆ ನನ್ನ ಎಕ್ಕಡಾ ತಗೊಂಡು ಹೊಡೆಯ. ಎಲ್ಲಾದರೂ ದೂರ ಹೋಗಿಬಿಡಬೇಕು. ಎಲ್ಲಿಗೆ? ಹಿಮಾಲಯ? ಛೇ ಛೇ ವಯಸ್ಸಿನ್ನೂ ಇಪ್ಪತ್ನಾಲ್ಕರ ಆಸುಪಾಸು. ಊಟಿ? ಒಂಟಿಯಾಗಿ ಹೋದರೆ ನೋಡಿದವರು ಕ್ಯಾಕರಿಸಿ ನಕ್ಕಾರು. ಇನ್ನು ಶೃಂಗೇರಿ,ಹೊರನಾಡು,ಕಳಸಗಳೆಲ್ಲೆಲ್ಲಾ ಇದೇ ಬವಣೆ. ಸೆಕೆಯೆಂಬ ಶಾಪ.
ಇಷ್ಟಕ್ಕೂ ಈ ಬೇಸಿಗೆ ಹೀರುತ್ತಿರುವುದು, ನಮ್ಮ ಮೈಯೊಳಗಿನ ಸತ್ವವನ್ನೋ? ನಮ್ಮ ಕ್ರಿಯಾಶೀಲತೆಯನ್ನೋ? ಅಥವಾ ನಮ್ಮ ಜೀವನೋತ್ಸಾಹವನ್ನೋ? ಗೊತ್ತಿಲ್ಲ. ಏನನ್ನೋ ಹೀರುತ್ತಿರುವದಂತೂ ನಿಜ.
ಮೊದಲು ಹೀಗಿರಲಿಲ್ಲ. ವಸಂತವೆಂದರೆ ಕೋಗಿಲೆ ಕುಹೂ, ಹಣ್ಣಿನ ರಾಜ ಮಾವಿನ ಸವಿ, ಎಲ್ಲೆಲ್ಲೂ ಹೊಂಗೆ ಹೂಗಳ ಕಂಪು. ತಣ್ಣಗಿನ ಬೆಂಗಳೂರು , ಬೆಚ್ಚಗಿನ ನೆನಪುಗಳು. ಈಗ ಇದನ್ನೆಲ್ಲಾ ನೆನಪಿಸಿಕೊಂಡರೆ ಅದಕ್ಕೆ ನಾಸ್ಜಾಲಿಯ ಎಂದು ಹೆಸರಿಡುತ್ತಾರೆ ಸೈಕ್ರಿಯಾಟಿಸ್ಟುಗಳು.
ಮಲೆನಾಡಿನ ಲೊಕೇಶನ್ನು, ಧಗಿಧಗಿಸುವ ಮಧ್ಯಾಹ್ನ.ಹೊಂಗೆ ಮರದ ನೆರಳ ಕೆಳಗೆ ಒಂದು ಈಸಿ ಚೇರು. ಕೈಯಲ್ಲಿ ಬೈರಪ್ಪನವರ ಕಾದಂಬರಿ. ಇಚ್ಚೆಯನರಿತು ನಡೆವ ಸಂಗಾತಿ.ಇಂಥದೊಂದು ಕನಸನ್ನು ಬೆಂಗಳೂರೆಂಬ ಕಿರಾತಕ ನಗರದಲ್ಲಿ, ಯಾವುದೋ ಆಫೀಸಿನ ಏಸಿಯಲ್ಲಿ ಕುಳಿತ ಕೆಲಸ ಮಾಡುವ  ಅನ್ ಸಾಟಿಸ್ ಫೈಡ್ ಎಮ್ಮೆನ್ಸಿ ನೌಕರರಿಗೆ ವರ್ಣಿಸುವುದಾದರೂ ಹೇಗೆ?  ಇವೆರಡರಲ್ಲಿ ನಂದು ಯಾವ ಗ್ರೂಪು. ನಾನು ಕನಸುಗಳನ್ನು ಬೆಂಬತ್ತೀದ್ದೀನೋ ಅಥವಾ ಕನಸುಗಳೇ ನನ್ನನ್ನು ಬೆಂಬತ್ತಿವೆಯೋ?
ಹೇಗೆ ಇರಲಿ. ಇಂಥಾ ದರಿದ್ರ ಕಾಲದಲ್ಲೂ ಐಸಿಯು ವಾರ್ಡಿನ ಆಕ್ಸಿಜನ್ನಿನಂತೆ ಬರುವ ಅಕಾಲಿಕ ಅಶ್ವಿನಿಯೋ ಭರಣಿಯೋ ಮಳೆ. ಓಡಿಹೋಗಿ ತೊಯ್ಯುವಷ್ಟರಲ್ಲಿ ನಿಂತು ಹೋದಾಗ ಆ ಭಗವಂತನ ಮೇಲೆ ಅಸಹಾಯಕ ಸಿಟ್ಟು. ಮತ್ತೆ ಶುರುವಾದರೆ ಕ್ಷಮಾ ಯಾಚನೆ. ಮಣ್ಣಿನ ಗಂಧಕ್ಕೆ ಅರಳುವ ಮೂಗಿನ ಹೊೞೆಗಳು. ರೋಡಿನಲ್ಲಿ ಬೈಕಿನಿಂದ ಕೊಚ್ಚೆ ಹಾರಿಸಿ ಪಾದಾಚಾರಿಗಳ ಶಾಪ ಮತ್ತು ಕೆಸರು ಬಟ್ಟೆ ನೋಡಿದಾಗ ಸಿಗುವ ಅಮ್ಮನ ಬೈಗುಳವೆಂಬ ಬೋನಸ್ಸು. "ಇಂಥಾ ಎರಡು ಮಳೆ ಬಿದ್ರೆ ಮಾವಿನಹಣ್ಣು ಚೀಪಾಗುತ್ತೆ ನೋಡಿ" ಅಂತಾ ಯಾರೋ ದೇಶಾವರಿ ಚರ್ಚೆ ಮಾಡುತ್ತಿದ್ದರೆ, ಒಳಗೊಳಗೇ ಖುಷಿ. ಇದಕ್ಕೆಲ್ಲಾ ಕಳಸವಿಟ್ಟ ಹಾಗೆ ನೆನಪಾಗುವ " ಮತ್ತೆ ಮಳೆ ಹುಯ್ಯುತಿದೆ, ಎಲ್ಲ ನೆನಪಾಗುತಿದೆ "ಎಂಬ ಅನಂತಮೂರ್ತಿಯವರ ಕವನ.ಇನ್ನೊಂದಷ್ಟು ದಿನ ಬದುಕಬಹುದೆಂಬ ಜೀವನ್ಮುಖಿ ಧೋರಣೆ. ಮಾರನೆಯ ದಿನ ತಂಪು ತಂಪು ಮುಂಜಾನೆ. ಥಣ್ಣನೆಯ ಹವೆ.
ಮತ್ತೆ ಅಕಾಲಿಕ ಮಳೆಯಿಂದ ಹೆಚ್ಚಾಗುವ ಸೆಖೆ. ಮೈಯೆಲ್ಲಾ ಅಂಟಂಟಾಗಿ ನಮ್ಮ ದೇಹದ ಮೇಲೆ ನಮಗೇ ರೇಜಿಗೆ. ಥತ್ತೇರಿಕೆ ಅಂತಾ ಅನ್ನಿಸಿಬಿಡುವ ವಾತಾವರಣ. ಹೊರಗೆ ಸಿಗರೇಟು ಸೇದಲು ಹೋದರೆ. ಕಾರ್ಮೋಡದಂಚಿನಲ್ಲೊಂದು ಮಿಂಚು. ಆಫೀಸಿನ ರೋಡು ತುಂಬಾ ಮೈಯೆಲ್ಲಾ ಹೂಬಿಟ್ಟು ನಗುತ್ತಿರುವ ಕೆಂಪು, ನೀಲಿ ಹಳದಿ ಬಣ್ಣದ ತುಲಿಪ್ ಮರಗಳು.
 
ವಸಂತ ಬಂದ ಋತುಗಳ ರಾಜ. ಎಂದ ಕವಿಯ ಮೇಲೆ ವಿನಾಕಾರಣ ಸಿಟ್ಟು.
ವಸಂತಕ್ಕೊ೦ದು ನಮಸ್ಕಾರ
 
 
 
 

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಕೆಎಲ್ಕೆ ಧ, 04/14/2010 - 14:59

ಚೆನ್ನಾಗಿದೆ ಲೇಖನ. ಹೆಡ್ಡಿಂಗ್ ಆಕರ್ಷಕ.

ಉಮಾಶಂಕರ ಬಿ.ಎಸ್ ಗುರು, 04/15/2010 - 16:31

ನಿಮ್ಮ ಅನುಭವ ಸರ್ವರಿಗೂ ಆಗಿಯೇ ಇರುತ್ತದೆ, ಆದರೆ ನೀವು ಹೇಳಿರುವ ರೀತಿ ಚೆನ್ನಾಗಿದೆ ಸರ್

ಬಾಲ ಚಂದ್ರ ಶುಕ್ರ, 04/16/2010 - 10:52

ಧನ್ಯವಾದಗಳು ಕೆಎಲ್ಕೆ ಮತ್ತು ಉಮಾಶಂಕರ್,
ಸಸ್ನೇಹ
ಬಾಲ ಚಂದ್ರ

Shafeer A.A ಸೋಮ, 04/19/2010 - 15:42

 ಲೇಖನ ತುಂಬಾ ಚೆನ್ನಾಗಿದೆ. ಉಸಿರುಗಟ್ಟಿಸುವ ಸೆಖೆ, ಒಣ ವಾತಾವರಣಗಳಿಂದ ಕ್ಷೀಣಿಸಿ ಹೋದ
ಬೆಂಗಳೂರಿಗರ ಮೈ ಮನದ ಒದ್ದಾಟವನ್ನು ಬಹಳ ಅಂದವಾಗಿ ಕಾವ್ಯಾತ್ಮಕ ಶೈಲಿಯಲ್ಲಿ ಇಲ್ಲಿ ಬರೆದಿದ್ದರಿಂದ ಬಹುಶಃ ದೇವರಿಗೂ ನಮ್ಮ ಮೇಲೆ ಮರುಕ ಹುಟ್ಟಿದೆ. ಮಳೆ ಹನಿಗಳು ಬೆಂಗಳೂರಿನ ಮಣ್ಣಿಗೆ ಮುತ್ತಿಡಲು COMPETE ಮಾಡ್ತಾ ಇವೆ.

BENKKY (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/20/2010 - 12:45
ರಾಜೇಶ ಹೆಗಡೆ ಧ, 04/21/2010 - 20:27

ವಸಂತ ಕಾಲದ ಅನುಭವವನ್ನು ಶಬ್ಧಗಳ ಮಾಲೆಯನ್ನು ಪೋಣಿಸಿ ಅತಿ ಸುಂದರವಾಗಿ ನೀಡಿದ್ದೀರಿ ಬಾಲಚಂದರ್ ಅವರೇ Smile
ಇತ್ತೀಚೆಗೆ ಪ್ರತಿದಿನ ಸಂಜೆ ಬರುತ್ತಿರುವ ಮಳೆ ಬೆಂಗಳೂರಿನ ಸೆಕೆಯನ್ನು ಕಡಿಮೆ ಮಾಡಿದೆ. ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.Cool

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.