Skip to main content

ಸುಜಿತಾ ( ಬೊಂಬೆ ಹೇಳಿದ ಕಥೆ )

ಬರೆದಿದ್ದುNovember 30, 2009
6ಅನಿಸಿಕೆಗಳು

ನಾನು ಬೆಂಗಳೂರಿನಿಂದ ಹೊರಟಾಗ ಆಗಲೇ ಸಂಜೆಯಾಗಿತ್ತು. ಹೋಗುತ್ತಿರುವುದು ಇಲ್ಲೇ ಪಕ್ಕದ ರಾಜ್ಯದಲ್ಲಿರುವ ಶಬರಿಮಲೆಗಾದರೂ ಮನೆಯವರು ಕಾರು ಹೊರಡುವಾಗ ಹುಶಾರಾಗಿ ಡ್ರೈವ್ ಮಾಡಿ ( ಎಂದು ಇಪ್ಪತ್ತು ಸಾರಿ), ಹೋಗಿ ತಲುಪಿದ ತಕ್ಷಣ ಮರೆಯದೆ ಫೋನ್ ಮಾಡು ( ಎಂದು 18 ಸಾರಿ )ಅಂತಾ ಹೇಳಿದ್ದು ಕೇಳುತ್ತಿದ್ದರೆ ನಗು ಬರುತ್ತಿತ್ತು. ಆದರೂ ಅವರು ಹೇಳಿದ್ದಕ್ಕೆಲ್ಲಾ ಹೂ ಗುಟ್ಟಿ ಅಲ್ಲಿಂದ ಹೊರಟು ನಂಜನಗೂಡು ತಲುಪಿ, ಅಲ್ಲಿಂದ ಸುಲ್ತಾನ್ ಬತ್ತೇರಿಯ ಗಡಿ ದಾಟಿದಾಗ 9 ಘಂಟೆ. 2 ದಿನದಿಂದ ನಿದ್ರೆಯಿಲ್ಲದಿದ್ದಕ್ಕೋ ಏನೋ ಕಣ್ಣು ಎಳೆಯುತ್ತಿತ್ತು. ನಮ್ಮ ಹುಡುಗರ ಗಾಢ ನಿದ್ರೆ ನೋಡಿದರೆ ಎಬ್ಬಿಸಲು ಮನಸು ಬರಲಿಲ್ಲ. ಸಮಯ ಒಂದು ಘಂಟೆ ಆದಾಗ ಮಾತ್ರ ಇನ್ನು ತಾಳಲಾರೆ ಎಂಬಂತೆ ಚಹಾ ಕುಡಿಯೋಣವೆಂದು ಕಾರು ನಿಲ್ಲಿಸಿದೆ.
ಚಹಾ ಕುಡಿಯುತ್ತಿದ್ದ ಹಾಗೆ ಕಾರು ನಿಂತಿದ್ದಕ್ಕೋ ಎನೋ, ಗೆಳೆಯರೆಲ್ಲಾ ಒಬ್ಬೊಬ್ಬರಾಗಿ ಏಳಲು ಶುರು ಮಾಡಿದರು. ಶಿವು ನನ್ನ ಹತ್ತಿರ ಬಂದು " ನೀವಿನ್ನಿ ಮಲಗಿ ಚಂದ್ರು ಸ್ವಾಮಿ, ನನಗೆ ಒಳ್ಳೆ ನಿದ್ದೆ ಆಗಿದೆ , ಇನ್ನು ನಾನೇ ಓಡಿಸ್ತೇನೆ. ಎಂದಾಗ ನನಗೆ ಪರಮಾನಂದ. ಆವಾಗಲೂ ಶಿವುಗೆ , ಶಿವು ದಯವಿಟ್ಟು ಭಕ್ತಿನಾ ಮನಸ್ಸಿನಲ್ಲಿ ಇಟ್ಟಿಕೋ, ನನಗೆ ಮಾತು ಮಾತಿಗೆ ಸ್ವಾಮಿ ಅಂತ ಕರೆದ್ರೆ, ಇರಿಟೇಟ್ ಆಗುತ್ತೆ ಎಂದೆ. ತಕ್ಷಣ ಶಿವು ಜಾಗ್ರತನಾಗಿ " ಅದು ಹಾಗಲ್ಲ ಸ್ವಾಮಿ" ಎಂದು ಏನು ದೊಡ್ಡ ಕ್ಲಾರಿಫಿಕೇಶನ್ ಕೊಡಲು ಹೋದವನು, ನನ್ನ ಕೆಂಪಾದ ಕಣ್ಣು ನೋಡಿ, ನನ್ನೊಡನೆ ವಾದ ಮಾಡುವ ವ್ಯರ್ಥ ಪ್ರಯತ್ನಕ್ಕೆ ತಡೆ ಹಾಕಿದ. ಚಹಾ ಕುಡಿದವನೇ ಹೋಗಿ ಹಿಂದಿನ ಸೀಟಿನಲ್ಲಿ ಒರಗಿದರೆ ಹತ್ತೇ ನಿಮಿಷಕ್ಕೆ ಗಾಢ ನಿದ್ರೆ.
ಏನೇನೋ ವಿಚಿತ್ರ ಕನಸುಗಳ ಸಂತೆ. ಗಾಡಿಯ ಓಲಾಟ. ನಮ್ಮ ಹುಡುಗರಿಗೆ ಒಂದು ಭರ್ಜರಿ ನಿದ್ರೆ ಮುಗಿದಿದ್ದರಿಂದ ಬೇಡ ಬೇಡವೆಂದರೂ ಕೇಳುವ ಅವರ ಗಟ್ಟಿ ದನಿಯ ಹರಟೆ. ಇದೆಲ್ಲವುಗಳ ಮಧ್ಯೆ ನಿದ್ದೆ ಯಾವಗ ಬಂತೋ ತಿಳಿಯಲಿಲ್ಲ.

"ಗುರೂ ಟೀ ಕುಡಿಯೋಣ ನಿಲ್ಲಿಸ್ತೀಯಾ ಗುರು"
" ದಿಸಕ್ಕೆ ಎಷ್ಟು ಸಾರಿ ಟೀ ಕುಡಿತಿಯಾ ಸ್ವಾಮಿ"
" ಇಲ್ಲಪ್ಪಾ ಯಾಕೋ ನಿದ್ದೆ ಬರುವ ಹಾಗಾಗ್ತಾ ಇತ್ತು ಅದಕ್ಕೆ ಕೇಳಿದೆ ಅಷ್ಟೇ"
" ಸರಿ ಸ್ವಾಮಿ ಮುಂದೆ ಯಾವ್ದಾದ್ರೂ ಅಂಗಡಿ ಕಂಡ್ರೆ ಗಾಡಿ ಲೆಫ್ಟೀಗಾಕ್ಕೋತೀನಿ"
" ಸರಿ ಸ್ವಾಮಿ "

ಗಾಡಿ ಬಹುಶಃ ನಿಂತಿರಬೇಕು. ಮತ್ತೆ ಸಂಭಾಷಣೆ ಶುರುವಾಯಿತು
"ಸಾರ್, ಇಲ್ಲಿಂದ ಗುರುವಾಯೂರ್ ಎಷ್ಟು ದೂರ? "
" ಎನ್ನಾ"
" ಗುರುವಾಯೂರ್ ನೂತಿ ಎತ್ತರಿ ಕೀಲೋ ಮೀಟರ್ ಇರಿಕಿದಿ
" ಗುರುವಾಯೂರಾ, ನೀಂಗೆ ನೇರಾ ಪೋಣಾ.ನೂತಿ ಅಂಬದಿ ಕೀಲೋ ಮೀಟರಾ "
" ಸರಿ ಥ್ಯಾಂಕ್ಸ ಸ್ವಾಮಿ"
" ......................."

ಯಾಕೋ ನಿದ್ರೆ ಬಾರದು ಎನ್ನಿಸಿತು. ಹಾಗಂತ ಸಂಪೂರ್ಣ ಎಚ್ಚರವೂ ಆಗದ ಸ್ಥಿತಿ . ಮಲಗಿದಲ್ಲೇ ಎಲ್ಲಿದ್ದೇವೆಂದು ತಿಳಿಯುವ ಪ್ರಯತ್ನ ಮಾಡಿದೆ. ಯಾವುದು ಹಳೆಯ ಹೆಂಚಿನ ಮನೆಯ ಮುಂದೆ ಕಾರು ನಿಲ್ಲಿಸಿ ಹುಡುಗರೆಲ್ಲಾ ಹೊರಗೆ ಹೋಗಿದ್ದರು. ಆ ಮನೆ ಸಂಪೂರ್ಣ ಕುಸಿಯುವ ಹಂತ ತಲುಪಿದ್ದ ಹಳೇ ಮನೆ. ಅದರ ಹಿನ್ನಲೆಯಲ್ಲಿ ಅಸ್ಪಷ್ಟವಾಗಿ ಕಾಣುವ ಅಡಿಕೆ ಮರಗಳು. ಅಷ್ಟರಲ್ಲೇ ಅಪ್ರಯತ್ನಪೂರ್ವಕವಾಗಿ ನನ್ನ ಕಣ್ಣುಗಳು ಆ ಮನೆಯ ಮಾಡಿನತ್ತ ಹೊರಟಿತು. ಅಲ್ಲಿ ಎರಡು ಸಣ್ಣ ಸಣ್ಣ ಗೊಂಬೆಗಳನ್ನು ನೇತು ಹಾಕಿದ್ದಾರೆ ಗೊಂಬೆಗಳು ಚೆನ್ನಾಗಿದ್ದರೂ, ಅವು ತುಂಬಾ ಹಳೆಯದ್ದಾದ್ದರಿಂದ ತಮ್ಮ ಬಣ್ಣ, ರೂಪ ಕಳೆದುಕೊಂಡು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಆ ಚವತಿಯ ಬೆಳದಿಂಗಳ ಹಿನ್ನಲೆಯಲ್ಲೆ ಯಾಕೋ ಏನೋ ಆ ಗೊಂಬೆಗಳು ನನ್ನತ್ತಲೇ ನೋಡುತ್ತಿರುವಂತೆ ಭಾಸವಾಗುತ್ತಿದೆ. ಇದು ಸ್ವಪ್ನವೋ, ನನ್ನ ಭ್ರಮೆಯೋ ತಿಳಿಯುತ್ತಿಲ್ಲ. ಮತ್ತೆ ಕಣ್ಣು ಮುಚ್ಚಿದೆ ಅನ್ನಿಸುತ್ತೆ . ಮತ್ತೆ ನಿದ್ರೆ

" ಟೀ ಸಕತ್ತಾಗಿತ್ತಲ್ವಾ ಸ್ವಾಮಿ "
" ಆ ಆ ಆ ಆ ಆ ಆ ಆ ಆ "
" ಹೂ ಗುರೂ, ಈ ಕೇರಳದಲ್ಲೆಲ್ಲಾ ಟೀ ಸೂಪರ್ರಾಗಿ ಮಾಡ್ತಾರೆ "
" ಏಯ್ ಏಯ್ '
" ಹೌದು ಗುರು, ನೀರಿನ ಬಾಟ್ಲು ತಗೋಂಡ್ರಿ ತಾನೇ ? "
" ಎನ್ನಾ" ( ಏನು )
" ಅವಡೆ ನೋಕ್ಕ ಆ ಶರಕನ್ನೆ " ( ಅಲ್ಲಿ ನೋಡು ಆ ಹುಡುಗನ್ನಾ)
" ತಗೋಂಡ್ಬುಟ್ಟೆ, ಮತ್ತೆ ಯಾವಾಗ್ ಅಂಗಡಿ ಸಿಗುತ್ತೋ ಏನೋ"
" ಎಂಡ ಶರಕಾ ( ಯಾವ ಹುಡುಗಾ) "

ಮಾತನಾಡುತ್ತಿರುವುದು ಬೊಂಬೆಗಳೋ ಅಥವಾ ನಮ್ಮ ಹುಡುಗರೋ, ಯಾವುದೂ ತಿಳಿಯಲಾಗದ ವಿಚಿತ್ರ ಸ್ಥಿತಿ. ಯಾಕೋ ಉಸಿರು ಕಟ್ಟಿದ ಹಾಗಾಗುತ್ತಿದೆ, ಕಣ್ಣ ಮುಂದೆ ಆ ಬೊಂಬೆಗಳು ಕುಣಿಯುತ್ತಿದೆ.ಕೂಗಬೇಕು ಅನ್ನಿಸಿದರೂ ಬಾಯಿ ತೆರೆಯಲಾಗುತ್ತಿಲ್ಲ. ಕತ್ತನ್ನು ಯಾರೋ ಅದುಮಿದ ಅನುಭವ.
ಕಣ್ಣ ಮುಂದೆ ಎರಡು ಬೊಂಬೆಗಳು ಬಂದು ನಿಂತ ಹಾಗಾಯಿತು. ಈಗ ಆ ಬೊಂಬೆಗಳು ಹಳತಾಗಿರಲಿಲ್ಲ. ಈಗಷ್ಟೇ ತಯಾರಿಸಿದ ಹೊಚ್ಚ ಹೊಸ ಬೊಂಬೆಗಳ ಹಾಗಿದೆ. ಜರಿಯ ಪಂಚೆ. ಕೆಂಪು ಅಂಗಿ. ತಲೆಗೆ ರುಮಾಲು ಧರಿಸಿರುವ ಗಂಡು ಬೊಂಬೆ, ಜರಿ ಸೀರಿ ಉಟ್ಟು. ಸರ್ವಾಲಂಕಾರ ಭೂಷಿತವಾದ ಒಂದು ಹೆಣ್ಣು ಬೊಂಬೆ. ಎರಡೂ ಬೊಂಬೆಗಳು ತಮ್ಮೊಳಗೆ ಮಾತನಾಡುತ್ತಿವೆ. ಅವು ಮಾತನಾಡುತ್ತಿರುವುದು. ಮಲಯಾಳಂನಲ್ಲಿ , ಅದೂ ಶುದ್ದವಾದ ನಾಡ ಭಾಷೆ. ನನಗೆ ಮಲಯಾಳಂ ನ ಗಂಧ ಗೊತ್ತಿಲ್ಲ. ಆದರೆ ಆ ಬೊಂಬೆಗಳು ಮಾತನಾಡುತ್ತಿರುವುದು ಅರ್ಥವಾಗುತ್ತಿದೆ. ಯಾವುದೋ ದ್ವಂದ್ವಗಳ ಸುಳಿಯಲ್ಲಿ ಮನಸ್ಸು ಸಿಕ್ಕಿ ಗಿರಗಿರನೆ ತಿರುಗುತ್ತಿದೆ.

" ನಮ್ಮ ಮನೆಗೆ ಬಂದ ಹೊಸ ಸೊಸೆಯನ್ನ ನೋಡಿದ್ಯಾ"
" ಒಳ್ಳೆ ಅಪ್ಸರೆ ಹಾಗಿದಾಳೆ"
" ಅವಳ ಕೂದ್ಲು ನೋಡಿದ್ಯಾ"
" ಅಯ್ಯೋ, ಆ ಹುಡುಗ ಅವಳ ನಾಲ್ಕಡಿ ಉದ್ದ ಕೂದಲು ನೋಡಿಯೇ ಮರುಳಾಗಿದ್ದಂತೆ, ನಾನು ಅದರಲ್ಲಿ ನೇಣು ಹಾಕಿಕೊಂಡರು ನನಗೆ ಆನಂದವಾಗುತ್ತೆ ಅಂತಾ ಮೊನ್ನೆ ಯಾರ ಹತ್ರಾನೋ ಮಾತಾಡ್ತಾ ಇದ್ದ "
" ಅವಳ ಬಣ್ಣ ನೋಡು "
" ಅಹಾಹಾ , ಒಳ್ಳಿ ಪುಟವಿಟ್ಟ ಬಂಗಾರ ಹಾಗಿದೆ"
" ಏಯ್, ನೀನೇನು ನನ್ನ ಗಂಡಾನೋ ಅಥವಾ ಆ ಹುಡುಗಿ ಪ್ರಿಯಕರಾನೋ, ಒಳ್ಳೆ ಕವಿಯಂತೆ ಆ ಹುಡುಗಿನಾ ವರ್ಣನೆ ಮಾಡ್ತಾಯಿದ್ಯಾ?"
" ನನಗೆಲ್ಲಿದೆ, ಆ ಪುಣ್ಯ, ಆ ಹುಡುಗ ಒಳ್ಳೆ ರಾಜಕುಮಾರ ಇದ್ದ ಹಾಗಿದ್ದಾನೆ, ನಾನೋ ಇರೋದೆ ಮುಕ್ಕಾಲಡಿ, ಅದಕ್ಕೆ ನಿನ್ನಂಥಾ ಮಾಯಾಂಗನೆ ಕೈಲಿ ಸಿಕ್ಕಿ ಸಾಯ್ತಾ ಇದ್ದೀನಿ"
ಢಂ ಢಕ್ಕುಂ ಢಂ ಢಕ್ಕುಂ ಡಢಡ ಢಕ್ಕುಂ
" ಸರಿ ಬಾಯ್ಮಚ್ಚು, ಮದುವೆ ದಿಬ್ಬಣ ಬಂತು ಅನ್ಸುತ್ತೆ, ನೀನಿರೋ ಅಂದಕ್ಕೆ ನಾನು ಸಿಕ್ಕಿರೋದೇ ಹೆಚ್ಚು"

===========================================================

" ಏನು ಹುಡುಗ್ರೋ ಎನೋಪ್ಪಾ, ಮದುವೆಯಾಗಿ ಮೂರು ತಿಂಗಳಾಯ್ತು, ಆದರೂ ಅವಳ ಸೆರಗು ಹಿಡಿದುಕೊಂಡೇ ತಿರಗ್ತಾ ಇರ್ತಾನೆ"
" ಅವಳೇನು ಕಡಿಮೇನಾ? ಅವನು ಮನೆಗೆ ಬರೋದೆ ಸಾಕು, ಇವಳ ಮುಖ ಅರಳಿದ ಹೂವಿನಂಗೆ ಆಗುತ್ತೆ "
" ಈ ಪ್ರೀತಿ ಮಾಡೋರಿಗೆ, ಪ್ರೀತ್ಸಿ ಪ್ರೀತ್ಸಿ ಬೇಜಾರಾಗಲ್ವಾ ಗಂಡೇ? "
" ಪ್ರೀತ್ಸಿದ ಕೂಡ್ಲೇ ಬೇಜಾರಾಗೋದಿಕ್ಕೆ , ಹುಡುಗಿ ಏನು ನಿಂತರಾ ಅನ್ಕೊಂಡ್ಯಾ? ಅವಳೂ....................."
" ಸಾಕು, ಸಾಕು , ದಿನಾಗ್ಲೂ ಆ ಹುಡುಗಾ ಹೊಗಳೋದು ಕೇಳೀನೇ ಕಿವಿ ತೂತು ಬಿದ್ದೋಗಿದೆ, ಇದರ ಮಧ್ಯ ನಿಂದು ಬೇರೆ"
"ಗುಣಕ್ಕೆ ಮಾತ್ಸರ್ಯ ಇರಬಾರ್ದು ಕಣೆ. ನೋಡು ನೋಡು, ಎಂಥಾ ಬಂಗಾರದಂಥಾ ಜೋಡೀ"

=====================================================================

" ಯಾಕಿವತ್ತು, ಹುಡುಗಾ ಒಂಥರಾ ಇದ್ದ ? ಮದುವೆ ಆಗಿ ಒಂದು ವರ್ಷದಲ್ಲಿ ಅವ್ನು ಸಪ್ಪಗಿದ್ದಿದ್ದು ಇವತ್ತೇ ನೋಡಿದ್ದು. ಏನಾಯ್ತು? ನಿಂಗೇನಾರೂ ಗೊತ್ತಾಯ್ತ ?
" ಹೂ. ಅಪ್ಪ ಅಮ್ಮ ಇಬ್ರೂ ಮಾತಾಡ್ತಾ ಇದ್ರು"
" ಏನಂತಾ?"
" ಈ ಹುಡುಗಿ ನೀರು ತರಕ್ಕೆ ಹೋದಾಗ, ಈ ಊರಿನ ಪಾಳೇಗಾರನ ಮಗ ಅವಳ್ನ ಕೆಣಕಿದನಂತೆ. ನಿನ್ನ ನೋಡಿ ನನ್ನ ತಲೆ ಕೆಟ್ಟು ಹೋಗಿದೆ. ಆ ಮನೆ ಬಿಟ್ಟು ಬಾ, ನಿನ್ನಾ ರಾಣಿ ಥರಾ ನೋಡ್ಕೋತೀನಿ..................."
" ಸಾಕು, ಸುಮ್ನಿರು. ಅವನಿಗೇನು ಬಂದಿತ್ತು. ಕೇಡುಗಾಲ?. ನೋಡಿದ್ರೆ ಮಹಾಲಕ್ಷ್ಮಿ ಹಾಗಿದಾಳೆ, ಅದ್ರಲ್ಲೂ ಮದ್ವೆ ಆದ ಹುಡುಗಿ ಬೇರೆ"
" ಅಷ್ಟೇ ಅಲ್ಲ, ನೀನು ಒಪ್ಲಿಲ್ಲಾಂದ್ರೆ ನಿನ್ನ ಗಂಡಂಗೆ ಒಂದು ಗತಿ ಕಾಣಸ್ತೀನಿ ಅಂತ ಹೇಳಿದ್ನಂತೆ. ಪಾಪ ಆ ಹುಡುಗಿ ಅವರತ್ತೆ ಹತ್ರ ಹೇಳಿ ಕಣ್ಣೀರು ಹಾಕ್ಕೋತಾ ಇತ್ತು"
" ಹುಡುಗಾ ಸುಮ್ನಿದ್ನಾ? "
" ಸುಮ್ನಿದ್ದಾನಾ ಅವನು ? ತಕ್ಷಣ ಬಿಚ್ಚು ಗತ್ತಿ ತಗೊಂಡು, ಕುದುರೆ ಏರೋದಕ್ಕೆ ಹೋಗಿದ್ದ ?
" ಆಮೇಲೆ?"
" ಅವರಪ್ಪ ಅಮ್ಮ ಬಂದು , ಬೇಡ ಮಗೂ ನಮಗ್ಯಾಕೆ ದೊಡ್ಡೋರ ಸಹವಾಸ, ಇನ್ನು ಮೇಲೆ ಸ್ವಲ್ಪ ದಿನ ಅವಳನ್ನ ಹೊರಗಡೆ ಕಳಿಸೋದು ಬೇಡ ಅಂತ ಸಮಾಧಾನ ಮಾಡಿದ್ರು, ಊರ ಹಿರಿಯರೂ ಹಾಗೇ ಹೇಳಿದ್ರು "

===================================================================================

ಕಟ್ ಕಟ್, ದಡಾಕ್ ದಡಾಕ್, ಕಟ್ ಕಟ್
" ಎಲೇ ಹರುಕು ಬಾಯೋಳೇ, ಏನೆ ಅದು ರಾತ್ರಿಯೆಲ್ಲಾ ಹಲ್ಲು ಕಡಿತಾ ಇದ್ದಿಯಾ?
" ಅಯ್ಯೋ ಗಂಡ್ಸೇ, ಸ್ವಲ್ಪ ಎದ್ಧು ನೋಡು ಅಲ್ಲಿ, ಅದು ನಾನು ಹಲ್ಲು ಕಡೀತಾ ಇರೋ ಸದ್ದಲ್ಲಾ. ಇಂಥಾ ಅಪರರಾತ್ರಿಯಲ್ಲಿ ಯಾರೋ ಬಂದು, ಮನೆ ಮುಂದೆ ಅಗೀತಾ ಇದ್ದಾರೆ."
"ಹೌದು, ಆ ನಗ್ನವಾಗಿದ್ದಾನಲ್ಲ. ಅವನ ಕೈಲಿರೋದೇನು, ಆ ಮಡಿಕೆ ಥರಾ ಇದಿಯಲ್ಲಾ "
" ಅಲ್ನೋಡು. ಇನ್ನೊಬ್ಬ. ಆ ತಗಡಿನ ಥರಾ ಇರೋದನ್ನ ಆ ಗುಂಡಿ ಒಳಗೇ ಹಾಕ್ತಾ ಇದಾನೆ "
" ಅಯ್ಯೋ, ನಾರಯಣಾ ಇದೇನು ಮಾಡ್ತಾ ಇದಾರೆ ಇವ್ರು. ರಾಕ್ಷಸ ಜನ?
" ಇನ್ನು ಈ ಮನೇನ ದೇವ್ರೇ ಕಾಪಾಡಬೇಕು "

==========================================================================

" ಒಳ್ಳೇ ಬಿಚ್ಚಿದ ಕತ್ತಿ ಹಾಗೆ ದಿವಿನಾಗಿದ್ದ ಹುಡುಗ. ಹೇಗೆ ಆಗೋದ ನೋಡು?"
"ದಿನಾಲೂ ರಕ್ತ ರಕ್ತಾನೇ ವಾಂತಿ ಮಾಡ್ಕೋತಾನೇ. ಅನ್ನ ಕಂಡ್ರೆ ಬೆಚ್ಚಿ ಬೀಳ್ತಾನೆ , ಹಾಡು ಹಗಲಲ್ಲೇ ನಾಯಿ ಥರಾ ಊಳಿಡ್ತಾನೆ"
" ಇನ್ನು ಕಾಪಾಡಿದ್ರೆ, ಗುರುವಾಯೂರು ಕೃಷ್ಣನೇ ಕಾಪಾಡಬೇಕು"
" ನನಗೇನೋ ಆ ಹುಡುಗ ಬದುಕುಳೀತಾನೆ ಅಂತಾ ನಂಬಿಕೆ ಇಲ್ಲ "
"ಥೂ, ಬಿಡ್ತು ಅನ್ನು.ತುಂಬಿದ ಮನೇಲಿ ಎಂಥಾ ಮಾತಾಡ್ತಾ ಇದ್ದೀಯ? ಇಲ್ಲಾ ಸರಿ ಹೋಗಿ ಆ ಜೋಡಿ ಮತ್ತೆ ಮೊದಲಿನ ಥರಾ ನಗುನಗುತ್ತಾ ಇದ್ರೆ ಸಾಕು"

======================================================================================

" ಇದೇನಿದು, ಏನೋ ಏಣಿ ಥರ ಇರೋದ್ರ ಮೇಲೆ ಹುಡುಗ್ನ ಮಲಗ್ಸಿದಾರೆ, ಆ ಹೆಣ್ಣುಮಗು ಯಾಕೆ ಹಾಗೆ ಅರಚ್ಕೋತಾ ಇದೆ "
" ಆ ಹುಡುಗನಿಗಿನ್ನು ಭೂಮಿ ಋಣಾ ತೀರಿತು"
" ಆಂ"
" ಹೌದು, ಇನ್ನು ಆ ಹುಡುಗಿ ಜೀವನಾ ಪೂರ್ತಿ ಕಣ್ಣೀರಲ್ಲಿ ಕೈ ತೊಳೆಯೋ ಹಾಗಾಯ್ತು"
" ಛೇ ಛೇ , ದೇವರು ಎಂಥಾ ನಿರ್ದಯಿ. ಜೊತೆಗೆ ಆ ಹುಡುಗೀನೂ ಕರೆಸ್ಕೊಂಡು ಬಿಟ್ಟಿದ್ರೆ ಚೆನ್ನಾಗಿರೋದು"

============================================================

" ಅರೆರೇ, ಏನಿದು ಮನೆಯೊಳಗೆ ಕಾವಲು ಭಟರೆಲ್ಲ ಈ ರೀತಿ ನುಗ್ಗುತಾ ಇದಾರೆ "
" ಅಲ್ನೋಡು, ಆ ಹುಡುಗಿ ಕೈ ಹಿಡಿದು ಎಳಿತಾ ಇದಾರೆ. ಇನ್ನೂ ಗಂಡ ಸತ್ತು ಒಂದು ಪಕ್ಷವಾಗಿಲ್ಲ. ಇವರೇನು ಮನುಷ್ಯರೋ ಇಲ್ಲ ರಾಕ್ಷಸರೋ"
" ದೇವರೇ, ಅಗೋ ಆ ಹುಡುಗಿ ಕೈಯಲ್ಲಿರುವ ಹರಳು ಬಾಯಿಗೆ ಹಾಕ್ಕೋಳ್ತಾ ಇದಾಳೆ"
" ಅವಳ ಬಾಯಿಂದ ರಕ್ತಾ ಬರುತ್ತಿದೆ"
" ಶಿವನೇ, ಇವಳೂ ನಿನ್ನ ಪಾದ ಸೇರ್ಕೋಂಡ್ಳು ಅನ್ಸುತ್ತೆ"

" ಸುಜಿತಾ...............ನೈನು ನಿಂಡೇ ಒಡನೇ ವರುಂ ( ಸುಜಿತಾ ನಾನು ನಿನ್ನ ಜೊತೆ ಬರ್ತೀನಿ)
" ಅಯ್ಯೋ ವಿಧಿಯೇ, ಈ ಜೋಡಿ ಸ್ವರ್ಗದಲ್ಲಾದರೂ ಸುಖವಾಗಿರಲಿ"

" ಸುಜಿತಾ...............ನೈನು ನಿಂಡೇ ಒಡನೇ ವರುಂ"

" ಆ ಗಾಡಿಯಲ್ಲಿ ಮಲಗಿರೋ ಹುಡುಗನ್ನ ನೋಡು ನಮ್ಮ ಸುಜಿತ್ ಹಾಗೇ ಇಲ್ಲವೇ"

"ಸುಮ್ನಿರು, ಆ ಜೋಡಿ ಸತ್ತು ನೂರಾ ಹದಿನೇಳು ವರ್ಷವಾಯ್ತು"

" ಚಂದ್ರು ಸ್ವಾಮಿ, ಎದ್ದೇಳೀ ಗುರುವಾಯೂರ್ ಬಂತು"
" ಪಾಪ, ಓಳ್ಳೇ ನಿದ್ದೆ ಅನ್ಸುತ್ತೆ ಸ್ವಾಮಿಗಳಿಗೆ "

"ಸುಜಿತಾ...............ನೈನು ನಿಂಡೇ ಒಡನೇ ವರುಂ"

" ಬೇಗ ಎದ್ದೇಳಿ ಸ್ವಾಮಿ, ಇನ್ನೂ ಸ್ನಾನ ಮಾಡ್ಕೋಂಡು ದರ್ಶನಕ್ಕೆ ಹೋಗ್ಬೇಕು"

==================================================================

ಧಡಕ್ಕನೆ ಒಮ್ಮೆ ನಿದ್ರೆಯಿಂದೆ ಎಚ್ಚರವಾಯಿತು. ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಲಲು ಕೆಲವು ನಿಮಿಷಗಳೇ ಬೇಕಾಯಿತು. ಸಮಯ ನೋಡಿಕೊಂಡಿ, ಬೆಳಗಿನ ಜಾವ ನಾಲ್ಕು ಘಂಟೆ.
ಅಂದರೆ ನಾನು ಇಷ್ಟು ಹೊತ್ತು ಕಂಡಿದ್ದು ಕನಸೇ? ಯಾವುದೂ ಅರಿಯುತ್ತಿಲ್ಲ. ತಲೆಯೆಲ್ಲಾ ನೋಯುತ್ತಿತ್ತು. ಮಂಕಾಗಿ ಎದ್ದು ಕಲ್ಯಾಣಿಯ ಕಡೆ ಸಾಗಿದೆ. ಕಲ್ಯಾಣಿಯಲ್ಲಿ ಮುಳುಗುವಾಗ ಸುಜಿತಾ ಎಂಬ ಆರ್ತ ನಾದವೊಂದು ಕೇಳಿದಂತಾಗಿ, ನನ್ನ ಕಣ್ಣಿಂದ ಬಿಸಿ ಹನಿಯೊಂದು ಕೆಳಗುರುಳಿ ಕಲ್ಯಾಣಿಯ ಕೊರೆಯುವ ನೀರಿನಲ್ಲಿ ಒಂದಾಗಿ ಹೋಯ್ತು.

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

nimmashivu ಗುರು, 12/03/2009 - 00:31

ಕಥೆಯ ನಿರೂಪಣಾ ಶೈಲಿ ತುಂಬಾ ಚೆನ್ನಾಗಿದೆ .... :) ಕತೆಯು ಚೆನ್ನಾಗಿದೆ...
-ನಿಮ್ಮ ಶಿವು :)

ಬಾಲ ಚಂದ್ರ ಸೋಮ, 12/07/2009 - 09:23

ಧನ್ಯವಾದಗಳು ಶಿವು

ಸಸ್ನೇಹ
ಬಾಲ ಚಂದ್ರ

ಶಿವಕುಮಾರ ಕೆ. ಎಸ್. ಗುರು, 12/03/2009 - 16:09

> ಒಳ್ಳೇ ಪ್ರಯತ್ನ... ಹಳೇ ಕತೆ, ಹೊಸ ನಿರೂಪಣೆ!
> ಕಥಾ ಹಂದರ ಇನ್ನೂ ಸ್ವಲ್ಪ ಬಿಗಿಯಿದ್ದಿದ್ದರೆ ಚೆನ್ನಾಗಿರುತ್ತಿತ್ತು...
> 'ಈ ಊರಿನ ಪಾಳೇಗಾರನ ಮಗ ಅವಳ್ನ ಕೆಣಕಿದನಂತೆ. ನಿನ್ನ ನೋಡಿ ನನ್ನ ತಲೆ ಕೆಟ್ಟು ಹೋಗಿದೆ. ಆ ಮನೆ ಬಿಟ್ಟು ಬಾ, ನಿನ್ನಾ ರಾಣಿ ಥರಾ ನೋಡ್ಕೋತೀನಿ...' ಅನ್ನೋ ವಾಕ್ಯ ಬಂದ ಕೂಡಲೇ ಮುಂದೆ ಏನಾಗಬಹುದು ಅನ್ನುವುದರ ಸುಳಿವು ಸಿಕ್ಕಿಹೋಗುತ್ತೆ...
> ಗೊಂದಲವನ್ನುಂಟುಮಾಡುವ ಭಾಷಾ ಪ್ರಯೋಗದ ಕೆಲವು ಉದಾಹರಣೆಗಳು - 'ಏಣಿ ಥರ ಇರೋದ್ರ ಮೇಲೆ ಹುಡುಗ್ನ ಮಲಗ್ಸಿದಾರೆ', - 'ಕೈಯಲ್ಲಿರುವ ಹರಳು ಬಾಯಿಗೆ ಹಾಕ್ಕೋಳ್ತಾ ಇದಾಳೆ',
> ನಾನ್ಯಾವಾಗ ನಿನ್ನ ಜೊತೆ ಮಾಲೆ ಹಾಕ್ಕಂಡು ಶಬರಿಮಲೆ/ಗುರುವಾಯೂರಿಗೆ ಬಂದೆ ಅಂತಾ ಗೊತ್ತಿಲ್ಲ! :D
> ಸೋ, ನೀನೇನೋ ಸುಜಿತಾ? :P ಸುಮ್ಮಸುಮ್ಮನೇ ನಿನಗೆ ಕಣ್ಣು ತುಂಬಿ ಬಂದಂತಾಗುತ್ತಲೇ ಇರುತ್ತದೆ - 'ಸುಜಿತಾ ಎಂಬ ಆರ್ತ ನಾದವೊಂದು ಕೇಳಿದಂತಾಗಿ, ನನ್ನ ಕಣ್ಣಿಂದ ಬಿಸಿ ಹನಿಯೊಂದು ಕೆಳಗುರುಳಿ ಕಲ್ಯಾಣಿಯ ಕೊರೆಯುವ ನೀರಿನಲ್ಲಿ ಒಂದಾಗಿ ಹೋಯ್ತು.' - 'ಈಗಲೂ ಮಳೆ ಹುಯ್ಯುತಿದೆ,ಮತ್ತು ನನ್ನ ಕಣ್ಣು ತುಂಬಿ ಬಂದಂತಾಗುತ್ತಿದೆ', -'ಸಾಗರ ಸೇರುವ ಮುನ್ನ ಒಮ್ಮೆ ನಿನ್ನ ನೋಡಿಕೋ ನಿನ್ನಲ್ಲಿ ಒಂದುಬಿಂದು ನನ್ನ ಕಣ್ಣೀರು'... ಏನ್ವಿಷ್ಯಾ?

:D

ಬಾಲ ಚಂದ್ರ ಶುಕ್ರ, 12/04/2009 - 11:29

ಶಿವಣ್ಣ,
ನಿಮಗೆ ಕಾಲೆಳಿಯಲು ಬೇರೆ ಯಾರೂ ಸಿಗಲಿಲ್ವೆ.? :sick:
ನಾನಿನ್ನೂ ಅನುಭವದಲ್ಲೂ, ವಯಸ್ಸಿನಲ್ಲೂ ಚಿಕ್ಕ ಹುಡುಗ. ನಿಮ್ಮಷ್ಟು ಒಳ್ಳೆ ಲೇಖಕನಲ್ಲ .ಹಾಗಂತ ಹೀಗೆ ಚುಡಾಯಿಸಿದರೆ ಹೇಗೆ?
ಧನ್ಯವಾದಗಳೊಂದಿಗೆ

ಸಸ್ನೇಹ
ಬಾಲ ಚಂದ್ರ

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/07/2009 - 10:19

ಬಾಲಚಂದ್ರ, ಶಿವಕುಮಾರ ಹೆಳಿದ್ದು ಸರಿಯಾಗೇ ಇದೆ. Also he sounds serious. ಅವರು 'ಕಾಲೆಳೆಯುತ್ತಿದ್ದಾರೆ' ಎಂದು ತಾವು ಅಂದುಕೊಂಡಿದ್ದರೆ ಅದು ನಿಮ್ಮ ಅನುಕಂಪೇಕ್ಷೆ. ತನ್ನ ಲೇಖನವನ್ನು ಸಹಾನುಭೂತಿಯ ಕೊಳವೆಯಿಂದ ಇತರರು ಓದಬೇಕೆಂದು ಬಯಸುವವ ಎಂದೂ ಬೆಳೆಯಲಾರ. ಕಥೆ ಬಹಳ ಎಳಸು. ತಾವು ಇನ್ನೂ
ಮಾಗಬೇಕಿದೆ.

ಬಾಲ ಚಂದ್ರ ಸೋಮ, 12/07/2009 - 11:48

ಖಂಡಿತಾ ನನಗೆ ಯಾರ ಅನುಕಂಪದ ಅವಶ್ಯಕತೆಯೂ ಇಲ್ಲ.
ನನ್ನ ಲೇಖನವನ್ನು ಸಹಾನುಭೂತಿಯ ಕೊಳವೆಯ ಮೂಲಕ ಓದಬೇಕಾಗೂ ಇಲ್ಲ. ನನ್ನ ಲೇಖನವನ್ನು ಆದಷ್ಟೂ ಕಟುವಾಗಿ ವಿಮರ್ಶಿಸಿದರೆ ಅಷ್ಟರಮಟ್ಟಿಗೆ ನಾನು ಧನ್ಯ. ಯಾಕೆಂದರೆ ಹತ್ತು ಉಳಿಪೆಟ್ಟುಗಳು ಒಂದು ಕಲ್ಲನ್ನು ಶಿಲ್ಪವಾಗಿಸುತ್ತದೆಂದು ನಾನು ಬಲ್ಲೆ. ಇನ್ನು ನಾನು ಎಳಸು ಎಂದು ನೀವು ಮತ್ತೆ ಯಾಕೆ ಹೇಳಬೇಕು?
ನಾನಿನ್ನೂ ವಯಸ್ಸಿನಲ್ಲೂ, ಅನುಭವದಲ್ಲೂ ಸಣ್ಣವನು
ನಾನು ಕಲಿಯುವುದಿನ್ನೂ ಸಾಕಷ್ಟಿದೆ ಎಂದು ನಾನೇ ಹೇಳಿಕೊಂಡಿದ್ದೇನಲ್ಲ. ಲೇಖಕನೊಬ್ಬ ಮಾಗಲು ಇಷ್ಟು ಬಾಗಿದರೆ ಸಾಕಲ್ಲವೇ?

ಸಸ್ನೇಹ
ಬಾಲ ಚಂದ್ರ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.