ಇದು ಕನ್ನಡ ಪ್ರೇಮ ಮತ್ತು ಅಭಿವೃದ್ಧಿಯೇ...?
ಇದು ಕನ್ನಡ ಪ್ರೇಮವೇ...?
ಈ ನಮ್ಮ ಕನ್ನಡ ಭಾಷೆಯನ್ನು ಬೆಳೆಸಿ ಉದ್ಧಾರ ಮಾಡುವ ನಮ್ಮ ಪ್ರಯತ್ನ ಎತ್ತ ಸಾಗುತ್ತಿದೆ ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಒಂದಂತೂ ನಿಜ... ಅದೆಂದರೆ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಪರಬಾಷಾ ಪ್ರೇಮ ಹೆಚ್ಚಾಗುತ್ತಿರುವುದು ಮತ್ತು ಕೀಳು ದರ್ಜೆಯ ಸಾಹಿತ್ಯ ಮತ್ತು ಹಾಸ್ಯಕ್ಕೆ ಬೇಡಿಕೆ ಹೆಚ್ಚುತ್ತಿರುವುದು. ಇದಕ್ಕೆ ಇತ್ತೀಚಿಗೆ ಬಿಡುಗಡೆಯಾದ ಒಂದು ಚಿತ್ರದ ಹಾಡು... "ಪ್ಯಾರ್ ಗೇ..." ಅದೇನೋ ಆಗ್ಬಿಟ್ಟೈತಂತೆ.... ಮುಂದೆ ಹೇಳಲೂ ಅಸಹ್ಯವಾಗುವಷ್ಟರ ಮಟ್ಟಿಗೆ ಕೆಟ್ಟ ಸಾಹಿತ್ಯ ಬರೆದು ಹಾಸ್ಯದ ಹೆಸರಿನಲ್ಲಿ ಒಂದು ಜನಾಂಗದ ಆಡು ಭಾಷೆಯನ್ನು ಸಾಧ್ಯವಾದಷ್ಟೂ ತೆಗಳಿ ಹೀಯಾಳಿಸಿ ಅಪಮಾನ ಮಾಡುವ ರೀತಿಯಲ್ಲಿ ಹಾಡಿಸಲಾಗಿದೆ ಆ ಹಾಡನ್ನು. ಈ ರೀತಿ ನಮ್ಮದೇ ಭಾಷೆಯನ್ನು ಯಾರಾದರೂ ಅವಹೇಳನಕಾರೀ ರೀತಿಯಲ್ಲಿ ಹೀಯಾಳಿಸಿ ಮಾತಾಡಿದರೆ ನಮಗೆ ಎಷ್ಟು ಸಹಿಲಾಗದೋ ಅಷ್ಟೇ ಕೋಪ ಅವರಿಗೂ ಬರುತ್ತದೆ ಎಂದು ಅರಿತಿರಲಿಲ್ಲ ಎಂದು ಕಾಣುತ್ತದೆ ಆ ಹಾಡಿನ ಕರ್ತರು.
ಇಂತಹಾ ವಿದ್ಯಮಾನಗಳಿಂದ ಒಂದು ಕೋಮಿನ ಜನರ ಮನಸ್ಸು ಕೆಟ್ಟಲ್ಲಿ ಕೋಮು ಗಲಭೆ ಆಗಿ ಜನಸಾಮಾನ್ಯರ ಶಾಂತಿಗೆ ಭಂಗ ಬಂದರೂ ಆಶ್ಚರ್ಯವಿಲ್ಲ. ಅವರು ಈ ಹಾಡನ್ನು ಕೇಳಿಸಿಕೊಂಡೂ ಕೇಳದವರಂತೆ ಕಿವಿ ಮುಚ್ಚಿಕೊಂಡು ಸಹಿಸಿಕೊಂಡಿರುವುದರಿಂದ ಸಧ್ಯ ಆರೀತಿಯ ವಾತಾವರಣ ಉಂಟಾಗಲಿಲ್ಲ...! ಹಾಗೆ ಆಗುವುದೂ ಬೇಡ. ಇಂತಹಾ ಕೆಟ್ಟ ಗೀತೆಗಳನ್ನು ಮೆಚ್ಚಿ ಸಹಬ್ಬಾಸ್ ಎಂದು ಹೊಗಳಿ ಹಾಡಿದ್ದೇ ಹಾಡಿದ್ದು ನಮ್ಮ ಕನ್ನಡ ಜನ...! ಇದು ನಮ್ಮ ಸಹೃದಯೀ ಮತ್ತು ಸಹಬಾಳ್ವೆಯನ್ನು ಆಧರಿಸುವ ಕನ್ನಡಿಗರ ಮನಸ್ಸಿಗೆ ನಿಜವಾಗಿ ಒಪ್ಪುವುದೇ ಒಮ್ಮೆ ಯೋಚಿಸಿನೋಡಿ...! ಕಂಡಿತಾ ಸಲ್ಲದು. ನಿಜವಾದ ಅಂತಹಾ ಸಧ್ಭಾವನೆ, ಬ್ರಾಥೃ ಪ್ರೇಮ ಇರುವವರು ಇಂತಹಾ ಹಾಡುಗಳನ್ನು ಕೇಳಿಯೂ ಕೇಳದವರಂತೆ ಅಥವಾ ಅರ್ಥವಾದರೂ ಅರ್ಥವಾಗದವರಂತೆ ಕಿವಿಮುಚ್ಚಿ ಸುಮ್ಮನೆ ಕೂರುವ ಬದಲು ಅವುಗಳನ್ನು ಧಿಕ್ಕರಿಸಬೇಕು. ಆಗಲೇ ಇಂತಹಾ ಸಾಹಿತ್ಯ ಸಂಗೀತಗಳನ್ನು ಹುಟ್ಟುಹಾಕುವವರಿಗೆ ಸ್ವಲ್ಪ ಬಿಸಿ ಮುಟ್ಟಿ ಪರಿಸ್ಥಿತಿ ಹದಗೆಡುವ ಮುನ್ನವೇ ಎಚ್ಚೆತ್ತುಕೊಳ್ಳುವಂತಾಗುವುದು. ಇಲ್ಲವಾದರೆ ಮೊದಲೇ ಹೇಳಿದಂತೆ ಈ ಚಿತ್ರರಂಗದಲ್ಲಿ ಕನ್ನಡವನ್ನು ಆ ದೇವರೇ ಕಾಪಾಡಬೇಕು...!
ಒಬ್ಬರಿಗೆ ತಪ್ಪಾಗಿ ಕಾಣುವುದು ಮತ್ತೊಬ್ಬರಿಗೆ ಸರಿಯಾಗಿರಬಹುದು, ನಮಗೆ ಅಸಹ್ಯವಾಗಿ ಕರ್ಣ ಕಠೋರವೆನ್ನಿಸಿರುವ ಇಂತಹಾ ಹಾಡನ್ನು ಮೆಚ್ಚಿ ಹೊಗಳಿರುವ ಲಕ್ಷಾಂತರ ನಮ್ಮದೇ ಕನ್ನಡಿಗರಿಗೆ ಕರ್ಣ ಮಧುರವೆನ್ನಿಸುತ್ತಿರಬಹುದು. ಸರಿಯಾಗಿ ಕನ್ನಡವನ್ನು ಓದಿ, ಬರೆಯಲು ಅರ್ಥ ಮಾಡಿಕೊಳ್ಳಲೂ ಬಾರದ ನಮ್ಮ ಅದೆಷ್ಟೋ ಕನ್ನಡಿಗರು ಹಿಂದೆ ಆ ಪರಭಾಷಾ ಹಾಡುಗಳಾದ "ರಾ.. ರಾ..." ಎನ್ನುತ್ತಾ ಕುಣಿದು ಕುಪ್ಪಳಿಸುತ್ತಿದ್ದ ಜನ ಇಂದು "ಕೊಲವೆರಿ...ಕೊಲವೆರಿ..." ಎನ್ನುತ್ತಿದ್ದಾರೆ.....! ಈ ಹಾಡಿನ ಅರ್ಥ ಅದೆಷ್ಟು ಜನರಿಗೆ ಆಗಿರುವುದೋ ನನಗಂತೂ ತಿಳಿಯದು ಆದರೂ ಯಾರೋ ಹಾಡಿದರೆಂದು ತಾವೂ ಕಾಲು ಕುಣಿಸುತ್ತಾ ತಾಳ ಹಾಕುತ್ತಾ ಅದರ ಪ್ರಚಂಡ ಯಶಸ್ಸಿಗೆ ನಮ್ಮದೂ ಒಂದು ಓಟು ಎಂಬಂತೆ ಬಹಳಷ್ಟು ಕನ್ನಡಿಗರು ಆ ಹಾಡುಗಳ ಸೀಡೀ ಕೊಂಡು ಅವರ ಅಭಿವೃದ್ಧಿಗೆ ಸಹಕರಿಸುತ್ತಾ ತಮ್ಮ ಮನೆಯಲ್ಲೂ ಹಾಡಿಸುತ್ತಿದ್ದಾರೆ ಗುಂಗುನಿಸುತ್ತಿದ್ದಾರೆ. ಇಂತಹಾ ಕೃತ್ರಿಮ ಕನ್ನಡ ಪ್ರೇಮಿಗಳಿರುವುದರಿಂದಲೇ ಶ್ರೇಯಾ ಘೋಶಾಲ್, ಸೋನು ನಿಗಂ ಇತ್ಯಾದಿ ಪರಭಾಷಾ ಗಾಯಕರು ಹುಟ್ಟು ಕನ್ನಡದವರಲ್ಲದಿದ್ದರೂ ತಮ್ಮ ಜೀವನಕ್ಕಾಗಿ ಕನ್ನಡವನ್ನು ಅಲ್ಪ ಸ್ವಲ್ಪ ಕಲಿತು ಕನ್ನಡದವರಿಗಿಂತಾ ಸ್ಪಷ್ಟವಾಗಿ ಉಚ್ಛಾರಣೆ ಮಾಡಿ ಹಾಡುತ್ತಾ ನಮ್ಮ ಕನ್ನಡಿಗರ ಮನ ಮತ್ತು ಹೃದಯಗಳನ್ನು ಸೂರೆಗೊಂಡು ಹುಚ್ಚುಹಿಡಿಸುತ್ತಿರುವುದು ಅಲ್ಲವೇ...? ಹಾಗೊಂದು ವೇಳೆ ನಿಜವಾಗಿ ನಮ್ಮ ಕನ್ನಡ ನಾಡಿನಲ್ಲಿ ಸೂಕ್ತ ಪ್ರತಿಭೆಗಳಿಲ್ಲ ಎನ್ನುವವರು ಈ ಟೀವಿಯವರು ಎಸ್.ಪೀ. ಬಾಲಸುಭ್ರಮಣ್ಯಂ ಅವರ ಸಾರಥ್ಯದಲ್ಲಿ ನಡೆಸಿಕೊಡುತ್ತಿರುವ "ಎದೆತುಂಬಿ ಹಾಡುವೆನು" ಕಾರ್ಯಕ್ರಮವನ್ನು ಒಮ್ಮೆಯಾದರೂ ನೋಡಲಿ ಆಗ ತಿಳಿಯುತ್ತದೆ ನಮ್ಮಲ್ಲಿ ಎಂತೆಂತಹಾ ಪ್ರತಿಭೆಗಳಿವೆ ಎಂದು...! ಸಣ್ಣ ಸಣ್ಣ ಮಕ್ಕಳೂ ಪ್ರಭುದ್ಧ ವಯಸ್ಕರನ್ನೂ ಮೀರಿಸುವಂತಾ ಕಂಠಸಿರಿ ಹೊಂದಿದ್ದಾರೆ.
ನಮ್ಮ ಕನ್ನಡ ಸಿನಿಮಾದಲ್ಲಿ ಬೇರೆ ಭಾಷೆಯ ಹಾಡುಗಳನ್ನು ಹಾಕಿ ಹಾಡಿಸುವಂತೆ ನಮ್ಮ ಯಾವ ನೆರೆ ರಾಜ್ಯದವರು ತಮ್ಮ ಚಿತ್ರಗಳಲ್ಲಿ ಕನ್ನಡ ಹಾಡು ಹೇಳಿಸಿ, ಕೇಳಿ ಮೆಚ್ಚುತ್ತಾರೆ ಎಂಬುದು ಕನ್ನಡಿಗರಿಗೆ ತಿಳಿಯದ ವಿಚಾರವೇನಲ್ಲ....! ಸಂಗೀತಕ್ಕೆ ಭಾಷೆಯ ತಾರತಮ್ಯ ಇರಬಾರದು ನಿಜ ಆದರೆ "ನಮ್ಮ ಭಾಷೆ-ನಮ್ಮ ನಾಡು-ನಮ್ಮ ಉದ್ಧಾರ" ಕ್ಕೆ ಮೊದಲ ಆಧ್ಯತೆ ಇರಬೇಕು ಎಂಬುದನ್ನು ಮರೆತು ಪರಭಾಷಾ ವ್ಯಾಮೋಹದಿಂದ ಬೇರಾವುದೋ ಭಾಷೆಯನ್ನು ಉದ್ಧರಿಸ ಹೊರಡುವುದು ಸ್ವಜನ ಪಕ್ಷಪಾತ, ಸ್ವ-ಭಾಷಾ ದ್ರೋಹವಾಗುತ್ತೆ. ಅವರವರ ಭಾವಕ್ಕೆ ಅವರವರ ಬಕುತಿಗೆ.. ಎಂಬಂತೆ ಮೆಚ್ಚುವುದು ಬಿಡುವುದು ಅವರವರ ಇಚ್ಛೆಗೆ ಬಿಟ್ಟಿದ್ದು. ತಪ್ಪಾಗಿದ್ದರೂ ಅದು ಸರಿಯೆಂದು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಹಿಂದೆ ಮುಂದೆ ನೋಡಬೇಕಾದ ಈ ಪರಿಸ್ಥಿತಿ ಬಂದೊದಗಿರುವುದು ಕನ್ನಡ ನಾಡಿಗೆ ಕನ್ನಡ ಭಾಷೆಯ ಪ್ರಗತಿ ಮತ್ತು ಶ್ರೇಯೋಭಿವೃದ್ಧಿಗೆ ಬಂದಿರುವ ಧೌರ್ಭಾಗ್ಯ....! ಕೇವಲ ನಮ್ಮ ಕನ್ನಡ ಸಿನಿಮಾ, ರಂಗಭೂಮಿ ಮತ್ತು ಆಲ್ಬಮ್ ನಿರ್ಮಾಪಕರು. ನಿರ್ಧೇಶಕರು, ಗೀತ ರಚನಾಕಾರರು, ಸಂಗೀತ ಸಂಯೋಜಕರು ಇಂತಹಾ ನವ ಉಧಯೋನ್ಮುಖ ಕಲಾವಿಧರಿಗೆ ಪ್ರೋತ್ಸಾಹ ನೀಡಿ ಮುಂದೆ ತರಬೇಕಷ್ಟೇ. ಹಾಗಿಲ್ಲದೇ 'ನೆರೆಮನೆಯ ಬೇಳೆ ಸಾರೇ ಕೋಳೀ ಸಾರಿಗೆ ಸಮಾನ' ಎನ್ನುತ್ತಾ ಹೀಗೇ ಮುಂದುವರೆದಲ್ಲಿ ನಮ್ಮ ಕನ್ನಡ ಕಂಡಿತಾ ಬೆಳೆಯುವುದಿಲ್ಲ ಉದ್ಧಾರವಾಗುವುದಿಲ್ಲ...!
ಇನ್ನು ಕನ್ನಡ ಚಿತ್ರಗಳಲ್ಲಿ ಹಾಸ್ಯದ ವಿಚಾರಕ್ಕೆ ಬಂದರೆ ಅದು ನಿಜವಾಗಿಯೂ ಹಾಸ್ಯವಲ್ಲ, ಅಪಹಾಸ್ಯ ಎನ್ನಿಸುತ್ತದೆ. ಕೆಲವು ಚಿತ್ರಗಳಲ್ಲಿ ಅದ್ಯಾವುದೋ ಕೋಕಿಲಾ... ಎಂಬುವರು ಮತ್ತು ರಂಗಾಯಣದಂತಹಾ ಪ್ರತಿಷ್ಠಿತ ಭೂಮಿಕೆಯಿಂದ ಬಂದಿರುವಂತಾ ಮತ್ತೊಬ್ಬ ಹಾಸ್ಯ ಕಲಾವಿಧರೂ ಹುಚ್ಚರಂತೆ ಮೇಕಪ್ ಹಾಕಿಸಿಕೊಂಡು ಕೆಟ್ಟದಾಗಿ ಕನ್ನಡ ಮಾತಾಡುತ್ತಾ ಅತೀ ಓವರ್ ಎನ್ನುವಂತಾ ನಟನೆ ಪ್ರಧರ್ಶಿಸುತ್ತಾ ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತಾ ಅದನ್ನೇ ಹಾಸ್ಯವೇನೋ ಎಂದು ಸ್ವೀಕರಿಸಿ ಒಪ್ಪಿಕೊಳ್ಳುವಂತೆ ಮಾಡುತ್ತಿದ್ದಾರೆ. ಅಂತಹಾ ಕೀಳು ದರ್ಜೆಯ ಹಾಸ್ಯ ಕೇವಲ ಒಂದು ವರ್ಗದ ಜನರಿಗೆ ಮಾತ್ರಾ ಮೆಚ್ಚುಗೆಯಾಗುವುದೆಂದು ನಮ್ಮ ನಿರ್ಮಾಪಕ ಮಹೋದಯರಿಗೆ ಚೆನ್ನಾಗಿ ತಿಳಿದಿದ್ದು ಅತೀ ಹೆಚ್ಚು ಪ್ರೇಕ್ಷಕರಾಗಿರುವ ಅಂತಹಾ ವರ್ಗದವರನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲವಾದ್ದರಿಂದ ಇಂತಹಾ ಸಾಹಿತ್ಯ ಹಾಡು ಮತ್ತು ಹಾಸ್ಯ ಸನ್ನಿವೇಶಗಳು ಚಿತ್ರದಿಂದ ಚಿತ್ರಗಳಿಗೆ ಪುನರಾವೃತ್ತಿ ಆಗುತ್ತಲೇ ಇರುತ್ತವೆ. ಆದರೆ ನಮ್ಮ ನಿಮ್ಮಂತಾ ಬಹಳಷ್ಟು ಜನ ಸಾಮಾನ್ಯರಿಗೆ ಅವೆಲ್ಲಾ ಒಪ್ಪಿಗೆಯಾಗುವುದಿಲ್ಲ. ತಪ್ಪು ಮಾಡಿ ಅದು ತಪ್ಪೆಂದು ಬೇರೆಯವರಿಂದ ತಿಳಿದ ಮೇಲೆ ಅಯ್ಯೋ ತಪ್ಪಾಗಿ ಹೋಯಿತಲ್ಲಾ ಎಂದು ಕೊರಗುವುದರ ಬದಲು ತಪ್ಪು ಎಂದು ಅರಿತಮೇಲಾದರೂ ಅದನ್ನು ತಿದ್ದಿಕೊಂಡು ನಡೆದಲ್ಲಿ ಅದಕ್ಕಿಂತಾ ಉತ್ತಮ ಯಾವುದೂ ಇಲ್ಲ ಎನ್ನುವುದು ನನ್ನ ಅನಿಸಿಕೆ.
ಎಲ್ಲಾ ರಂಗದಲ್ಲೂ ಪ್ರತಿಯೊಬ್ಬರೂ ಕನ್ನಡ ಬೆಳೆಸಿ ಪ್ರೋತ್ಸಾಹಿಸುವಲ್ಲಿ ಅವರವರ ಪ್ರಯತ್ನ ಅವರು ಮಾಡುತ್ತಿದ್ದಾರೆ ಆದರೆ ಕನ್ನಡ ಕನ್ನಡ ಎಂದು ಬಾಯಲ್ಲಿ ಜಪಿಸುತ್ತಾ ಒಳಗೆ ಮಾತ್ರಾ ಬೇರೆ ಭಾಷೆಗಳ ಚಿತ್ರಗಳು ಮತ್ತು ಸಂಗೀತ ಉತ್ತಮ ಎನ್ನಿಸಿ ಅವುಗಳನ್ನು ಯಥಾವತ್ ಬಟ್ಟಿ ಇಳಿಸುವ ಇಂತಹಾ ಪರಭಾಷಾ ವ್ಯಾಮೋಹಿಗಳು ನಿಜವಾದ ಮಾತೃಭಾಷಾ ಪ್ರೇಮವಿದ್ದರೆ ಈ ಕನ್ನಡ ಮಣ್ಣಿನಲ್ಲಿ ಹುಟ್ಟಿ ಕನ್ನಡದ ಅನ್ನ ತಿಂದು ನೀರು ಕುಡಿದು ಬೆಳೆದಿರುವುದನ್ನು ಅರಿತು ಇನ್ನು ಮುಂದೆಯಾದರೂ ತಮ್ಮನ್ನು ತಾವೇ ತಿದ್ದಿಕೊಂಡು ನಡೆದಲ್ಲಿ ಈ ಕನ್ನಡ ತಾಯಿಯ ಋಣ ಅಲ್ಪಸ್ವಲ್ಪವಾದರೂ ತೀರಿಸಿ ಕನ್ನಡದ ನಿಜವಾದ ಬೆಳವಣಿಗೆಗೆ ಸಹಕರಿಸಿದಂತಾಗುತ್ತದೆ ಎಂದು ನನ್ನ ನಂಬಿಕೆ. ಈ ನನ್ನ ಅಭಿಪ್ರಾಯಗಳನ್ನು ಯಾರನ್ನೂ ನಿಂದಿಸಲಾಗಲೀ ಅಥವಾ ಮತ್ತೊಬ್ಬರನ್ನು ಮೆಚ್ಚಿಸಲಾಗಲೀ ಬರೆದಿಲ್ಲ. ನನ್ನ ಮತ್ತು ನನ್ನಂತಾ ಸಹ ಮನಸ್ಕ ಮಿತ್ರರ ಅನಿಸಿಕೆಗಳನ್ನೇ ಇಲ್ಲಿ ಪ್ರತಿಬಿಂಬಿಸಿದ್ದೇನೆ ಆದ್ದರಿಂದ ಅನ್ಯತಾ ಭಾವಿಸಿ ಯಾರೂ ಯಾವುದೇ ರೀತಿಯಲ್ಲೂ ಮನಸ್ಸಿಗೆ ಘಾಸಿ ಮಾಡಿಕೊಳ್ಳಬಾರದಾಗಿ ವಿನಂತಿ.
ಸಾಲುಗಳು
- Add new comment
- 1186 views
ಅನಿಸಿಕೆಗಳು
ಮಾನ್ಯ ತ್ರಿನೇತ್ರರವರೇ, ಕನ್ನಡ
ಮಾನ್ಯ ತ್ರಿನೇತ್ರರವರೇ, ಕನ್ನಡ ಚಲನ ಚಿತ್ರಗಳ ಹಾಗು ಹೋಗುಗಳ ಬಗ್ಗೆ ಒಳ್ಳೆಯ ವಿವರವಾದ ಲೇಖನ ಬರೆದಿದ್ದೀರಿ. ಇದು ನಮ್ಮ ನಿಮ್ಮ ಅನುಭವಕೂಡ ಆಗಿರುತ್ತದೆ. ಸಾಮಾನ್ಯವಾಗಿ, ಚಿತ್ರೋಧ್ಯಮ ಒಂದು ವ್ಯಾಪಾರವಾಗಿರುವುದರಿಂದ, ಅವರಿಗೆ ಭಾಷೆ ಉಳಿದರೆಷ್ಟು ಬಿಟ್ಟರೆಷ್ಟು? ಕನ್ನಡ ಕಲಾವಿದರು ಇದರೆಷ್ಟು ಬಿಟ್ಟರೆಷ್ಟು? ಇಂತಹುದರಲ್ಲಿ ಡಬ್ಬಿಂಗ್ ವಿರೋಧ ಬೇರೆ! ಒಟ್ಟಿನಲ್ಲಿ ಕನ್ನಡ ಚಿತ್ರೋಧ್ಯಮದಲ್ಲಿ ಸಂಪೂರ್ಣ ಕನ್ನಡಿಗರು ಸಿಗುವುದು ಕಷ್ಟವೆ? ಇದರೊಂದಿಗೆ ಮತ್ತೊಂದು ಸಮಸ್ಯೆ ಚಲನ ಚಿತ್ರ ಮಂದಿರಗಳ ಅವ್ಯವಸ್ಠೆ. ಇದನ್ನು ಕೇಳುವವರು ಯಾರು ಇಲ್ಲ. ಒಟ್ಟಿನಲ್ಲಿ ಲೇಖನ ಚೆನ್ನಾಗಿದೆ. ವಂದನೆಗಳೊಡನೆ.
ನಮಸ್ಕಾರ ನಂಜುಂಡರಾಜು ಅವರಿಗೆ.
ನಮಸ್ಕಾರ ನಂಜುಂಡರಾಜು ಅವರಿಗೆ. ಧನ್ಯವಾದಗಳು ತಮ್ಮ ಅನಿಸಿಕೆಗಳ ಮುಖಾಂತರ ನನ್ನ ಅನಿಸಿಕೆಗಳಿಗೆ ಸಹಮತಿ ವ್ಯಕ್ತಪಡಿಸಿದ್ದಕ್ಕೆ. ಕನ್ನಡವಾಗಲೀ, ಚಲನ ಚಿತ್ರವಾಗಲೀ, ಅವುಗಳನ್ನು ವಿತರಿಸಿ ಪ್ರದರ್ಶಿಸುವ ಚಿತ್ರಮಂದಿರಗಳ ವ್ಯವಸ್ಥೆಯಾಗಲೀ ಅಥವಾ ಯಾವುದೇ ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ಮಾಡಲು ಅವುಗಳ ಬಗ್ಗೆ ಚಿಂತಿಸಿ ಉತ್ತಮಗೊಳಿಸುವ ಬಗ್ಗೆ ಯೋಜನೆಗಳನ್ನು ಮಾಡುವಂತಾ ನಮ್ಮ ರಾಜಕಾರಣಿಗಳು ದಿನವೂ ದೊಂಬರಾಟ ನಡೆಸುತ್ತಾ ತಮ್ಮ ತಮ್ಮ ಸೀಟು ಗಿಟ್ಟಿಸಿ ಉಳಿಸಿಕೊಳ್ಳುವುದರಬಗ್ಗೆಯೇ ಹೆಚ್ಚು ಕಾಳಜಿವಹಿಸುತ್ತಾ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸರ್ಕಾರ ಮತ್ತು ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಬ್ರಷ್ಟ ಅಧಿಕಾರಿಗಳೇ ಕಾರಣ. ಒಟ್ಟಿನಲ್ಲಿ ನನ್ನ ಮತ್ತೊಂದು ಲೇಖನವಾದ 'ಹೀಗಿದೆ ನಮ್ಮ ನಾಗರೀಕತೆ ಮತ್ತು ವಿಕಾಸ' ದಲ್ಲಿ ಬರೆದಿರುವಂತೆ ಅದಕ್ಕೆಲ್ಲಾ ಎಲ್ಲಾ ಸಹಿಸಿಕೊಂಡು ಸುಮ್ಮನಿರುವ ನಾವೇ ಕಾರಣ...! ಸಹಕಾರ ಹೀಗೇ ಇರಲಿ. -ತ್ರಿನೇತ್ರ.
ಉತ್ತಮವಾದ ಲೇಖನ, ಕನ್ನಡ
ಉತ್ತಮವಾದ ಲೇಖನ, ಕನ್ನಡ ಚಿತ್ರರಂಗದವರು ಇದನ್ನು ಓದಿಕೊಂಡರೆ ಚೆನ್ನಾಗಿತ್ತು.
ನಮ್ಮ ಕನ್ನಡ ಚಿತ್ರರಂಗ
ನಮ್ಮ ಕನ್ನಡ ಚಿತ್ರರಂಗ ಗೆದ್ದೆತ್ತಿನ ಬಾಲ ಹಿಡಿಯೋದು ತುಂಬಾ ಹಳೆ ಚಾಳಿ.ಬೇರೆ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿರೋ ಹಾಡುಗಳು,ಚಿತ್ರಗಳು,ಕಾಮಿಡಿ ದೃಶ್ಯಗಳು ನಮ್ಮ ಕನ್ನಡದಲ್ಲಿ ಸಾಕಷ್ಟು ಸಾರಿ ನಾವು ನೋಡಿದ್ದೇವೆ.ಹಾಗಂತ ನಮ್ಮಲ್ಲಿ ಪ್ರತಿಭೆಗಳು ಇಲ್ಲ ಅಂತ ಅಲ್ಲ.ಆದರೆ ನಮ್ಮವರು ಯಾವಾಗಲು ಸೇಫ್ ಆಗಿ ಹೆಜ್ಜೆ ಇಡುತ್ತಾರೆ.ಅಲ್ಲ್ಯಾರೋ ವಾಹ್ ಅಂದಿರೋ ಸೀನ್ ನಮ್ಮ ಜನರು ವಾಹ್ ಅಂದುಬಿಡುತ್ತಾರೆ ಅನ್ನೋ ಯೋಚನೆಯಲ್ಲಿ ಚಿತ್ರಗಳು ತಯಾರಾಗುತ್ತಿವೆ.ಹೊಸ ಪ್ರತಿಭೆಗಳಿಗೆ ನಾವು ಯಾವತ್ತು ನೋ ಅಂದಿಲ್ಲ.ತ್ರಿನೇತ್ರ ಅವರೇ ನಿಮ್ಮ ಲೇಖನ ತುಂಬಾ ಹಿಡಿಸಿತು.ನಿಮ್ಮ ಕಿವಿಮಾತು ಕನ್ನಡ ಚಿತ್ರರಂಗದವರು ಎರಡು ಕಿವಿಗಳಲ್ಲಿ ಕೇಳಿಸಿಕೊಂಡರೆ ಒಳ್ಳೆಯದು.
ಪ್ರವೀಣ್ ಅವರೇ, ತಮ್ಮ ಸ್ಪಷ್ಟ
ಪ್ರವೀಣ್ ಅವರೇ, ತಮ್ಮ ಸ್ಪಷ್ಟ ಅನಿಸಿಕೆಗಳನ್ನು ಹಂಚಿಕೊಂಡು ಒಂದೆರಡು ಸಾಲುಗಳನ್ನು ಬರೆದಿದ್ದಕ್ಕೆ ಧನ್ಯವಾದಗಳು. ನೀವು ಹೇಳುವುದು ಸಥ್ಯ ಆದರೆ ದುರಂತವೆಂದರೆ ಈ ಲೇಖನ ನಿಜವಾಗಿ ಓದಿ ತಿಳಿಯಬೇಕಾದ ಚಿತ್ರ ರಂಗದವರಿಗೆ ತಲುಪುವುದಿಲ್ಲ ಎಂದು ನನಗೆ ತಿಳಿದಿದೆ. ಕೇವಲ ನಮ್ಮ ನಿಮ್ಮಂತ ಒಂದಿಬ್ಬರು ಅನಿಸಿದ್ದನ್ನು ಬರೆದರೆ ಅದನ್ನು ಹತ್ತಿಪ್ಪತ್ತು ಜನ ಓದಿ ನಮ್ಮ ಅಭಿಪ್ರಾಯಕ್ಕೆ ಸಹಮತಿಸುವವರು ಸಹಬ್ಬಾಸ್ ಗಿರಿ ಕೊಟ್ಟು ಬೆನ್ನು ತಟ್ಟಿ ಮತ್ತಷ್ಟು ಪ್ರೇರೇಪಿಸುತ್ತಾರೆ ಮತ್ತೆ ಕೆಲವರು ಅಯ್ಯೋ ಕೇವಲ ಬರಹದಲ್ಲಿ ಅವರ ಕೋಪ ತಾಪ ವ್ಯಕ್ತಪಡಿಸಿದರೇನು ಬಂತು ಪ್ರಯೋಜನ ನಿಜವಾದ ಕಣಕ್ಕಿಳಿದು ಹೋರಾಡಬೇಕಲ್ಲವೇ ಎಂದು ಸುಮ್ಮನಾಗಿಬಿಡುತ್ತಾರೆ. ಆದರೆ ಆ ಲೇಖನದ ನಿಜವಾದ ನಾಡಿಯ ಮಿಡಿತವನ್ನು ಅರಿತು ತಾವೂ ಈ ಸಮಾಜದಲ್ಲಿ ಒಬ್ಬ ವ್ಯಕ್ತಿ ತಮಗೂ ಒಂದು ನಿರ್ದಿಷ್ಟ ನಿಟ್ಟಿನಲ್ಲಿ ಪ್ರಾಮಾಣಿಕ ಕರ್ತವ್ಯ ಪಾಲನೆಯ ಜವಾಬ್ದಾರಿ ತಮ್ಮ ಮೇಲಿದೆ ಎಂದು ಅರಿತು ಅಲ್ಪಸ್ವಲ್ಪವಾದರೂ ತಿದ್ದಿಕೊಂಡು ನಡೆದು ಇತರರಲ್ಲೂ ಜಾಗೃತಿ ಮೂಡಿಸಿ ಅವರನ್ನೂ ಸಚೇತನಗೊಳಿಸುವಂತಾದರೆ ನಮ್ಮ ಈ ಕಾರ್ಯ ಸಮಾಜ ಸುಧಾರಣೆಯ ಹಾದಿಯಲ್ಲಿ ಸ್ವಲ್ಪ ಮಟ್ಟಿಗಾದರೂ ಸೇವೆ ಸಲ್ಲಿಸಿದಂತಾಗುತ್ತದೆ ಅಲ್ಲವೇ...? ಅದೇ ನನ್ನ ನಿಮ್ಮ ಮೂಲ ಉದ್ದೇಶ. ಸಹಕಾರಕ್ಕೆ ಮತ್ತೊಮ್ಮೆ ಧನ್ಯವಾದಗಳು. -ತ್ರಿನೇತ್ರ.