ದೇಶಪ್ರೇಮವಿಲ್ಲದ ’ಜಾತ್ಯಾ’ತೀತ ರಾಷ್ಟ್ರದಲ್ಲಿ ಮಾತ್ರ ಇಂತಹ ಘಟನಾವಳಿಗಳು ಸಾಧ್ಯ!!
ಸ್ವಾತಂತ್ರ್ಯ ದಿನದಂದು ಟಿ. ವಿಯಲ್ಲಿ ಬರುತ್ತಿದ್ದ ಹಲವಾರು ಭಾಷಣಗಳಲ್ಲಿ ’ಭಾರತ ಒಂದು ಜಾತ್ಯಾತೀತ ರಾಷ್ಟ್ರ’ ಎಂದು ಅನೇಕಬಾರಿ ಇಣುಕಿದ್ದರಿಂದ ಪಕ್ಕದಲ್ಲೇ ಕುಳಿತಿದ್ದ ೧೧ ವರ್ಷದ ನನ್ನ ಅಣ್ಣನ ಮಗ ’ಚಿಕ್ಕಪ್ಪ ಜಾತ್ಯಾತೀತ ರಾಷ್ಟ್ರ ಎಂದರೇನು?’ ಎಂದ. ’ಯಾವುದೇ ಜಾತಿ ಭೇಧವಿಲ್ಲದೆ, ಎಲ್ಲಾ ಧರ್ಮದವರು ಸಮಾನವಾಗಿ ಬದುಕುವ ರಾಷ್ಟ್ರಕ್ಕೆ ಜಾತ್ಯಾತೀತ ರಾಷ್ಟ್ರ ಎನ್ನುತ್ತಾರೆ’ ಎನ್ನುವ ೨೦ - ೨೫ ವರ್ಷಗಳ ಕೆಳಗೆ ಸ್ಕೂಲಿನಲ್ಲಿ ಕಲಿತದ್ದನ್ನು ಅವನಿಗೆ ವಿವರಿಸಿದೆ.’ಅಂದ್ರೆ, ನಾವು ಯಾರನ್ನೂ ನೀವು ಯಾವ ಜಾತಿ ಅಂತ ಕೇಳಬಾರದು ಅಲ್ವೇ?’ ಎಂಬ ಅವನ ಮರು ಪ್ರಶ್ನೆಗೆ ’ಹೌದಪ್ಪ’ ಎಂದು ತಲೆಯಾಡಿಸಿದೆ.’ಹಾಗಾದ್ರೆ ನಮ್ಮ ಸ್ಕೂಲು ಅರ್ಜಿಯಲ್ಲಿ ’ನಿಮ್ಮ ಜಾತಿ ಯಾವುದು ನಮೂದಿಸಿ’ ಅಂತ ಯಾಕಿರುತ್ತೆ?’ ಎಂಬ ಅವನ ಮತ್ತೊಂದು ಮರುಪ್ರಶ್ನೆಗೆ ನಾನು ಅಕ್ಷರಶಃ ನಿರುತ್ತರನಾಗಿದ್ದೆ!ಏಕೆ ಈ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆಂದರೆ ನಾವು ನಮ್ಮ ಮಕ್ಕಳಲ್ಲಿ ’ನಮ್ಮ ದೇಶ’ ’ನಮ್ಮ ಭಾಷೆ’ ಎಂದು ಕಲಿಸುವುದಕ್ಕಿಂತಾ ಮೊದಲೇ ’ನಮ್ಮ ಜಾತಿ’ ಎಂಬ ವಿಷಬೀಜವನ್ನು ನಮಗರಿವಿಲ್ಲದಂತೆಯೇ ನೆಟ್ಟು ಬೆಳೆಸಿ, ಅದು ಹೆಮ್ಮರವಾಗುವಂತೆ ನೋಡುಕೊಳ್ಳುವಲ್ಲಿ ಯಶಸ್ವಿಯೂ ಆಗಿರುತ್ತೇವೆ!! ಎಷ್ಟರ ಮಟ್ಟಿಗೆ ಎಂದರೆ ಇಮಾಮ್ ಬುಖಾರಿ ಯಂತಹ ಕರ್ಮಠರು ’ಅಣ್ಣಾ ಮುಸ್ಲೀಮರನ್ನು ಹೋರಾಟಕ್ಕೆ ಏಕೆ ಆಹ್ವಾನಿಸಿಲ್ಲ’ ಎಂದು ಕೇಳಿದಾಗ ಒಂದು ಸದುದ್ದೇಶಕ್ಕಾಗಿ ಹೋರಾಡುತ್ತಿರುವ ಅಣ್ಣಾ ಹಜಾರೆಯವರನ್ನು ಅನುಮಾನದಿಂದ ನೋಡುತ್ತೇವೆಯೇ ಹೊರತು ’ಯಾಕಪ್ಪ ಇಮಾಮ್ ಸಾಬ್ರೇ, ನೀವೇನು ಭಾರತೀಯರಲ್ಲವೇ?, ನಿಮಗೇನು ಭ್ರಷ್ಟಾಚಾರದ ಬಿಸಿ ತಟ್ಟಿಲ್ಲವೇ? ಅಣ್ಣಾ ಹಜಾರೆ ಕರೆ ಕೊಟ್ಟಿದ್ದು, ಹೋರಾಡುತ್ತಿರುವುದು ಬರೀ ಹಿಂದೂಗಳಿಗೋಸ್ಕರವಷ್ಟೇ ಅಲ್ಲ, ಮುಸ್ಲೀಮರು, ಕ್ರಿಸ್ತರು, ಬೌದ್ಧರು ಇತರರೂ ಸಹಬಾಳ್ವೆ ನಡೆಸುವ ’ಜಾತ್ಯಾ’ತೀತವಾದ ಭಾರತಕ್ಕೆ’ ಎಂದು ತಪರಾಕಿ ಕೊಡುವ ಕೊಡುವ ಧೈರ್ಯ ಯಾವೊಬ್ಬ ಭಾರತೀಯ ನಾಯಕನಿಗೂ ಇರಲಿಲ್ಲ! ಬದಲಾಗಿ ಹೋರಾಟವನ್ನು ಹತ್ತಿಕ್ಕಲು ಇದನ್ನೇ ಗುರಾಣಿಯಂತೆ ಬಳಸಲು ಆಡಳಿತ ಸರ್ಕಾರ ತಯಾರಿ ನಡೆಸುತ್ತಿದ್ದರೆ, ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಕಿವಿ ಹಿಂಡಿ ಸರಿದಾರಿಗೆ ತರಬೇಕಾದ ವಿಪಕ್ಷಗಳು ’ಜನಲೋಕಪಾಲ ಕಾಯ್ದೆ ಬಂದರೆ ನಮ್ಮ ಬುಡವೂ ನೀರಾದೀತು?’ ಎಂಬ ಭಯದಿಂದ ಜಾಣಕಿವುಡು - ಕುರುಡು ಪ್ರದರ್ಶಿಸುತ್ತವೆ.ಈಗ್ಗೆ ಎರಡು ಮೂರು ವರ್ಷಗಳ ಕೆಳಗೆ ಆಸ್ಟ್ರೀಲಿಯಾದಲ್ಲಿ ಭಯೋತ್ಪಾದಕರ ದಾಳಿಯಾದಾಗ ಅಲ್ಲಿನ ಭಯೋತ್ಪಾದನಾ ಸಂಘಟನೆಯೊಂದು ಇದೇ ರೀತಿ ಹೇಳಿಕೆ ನೀಡಿದಾಗ ಆಗಿನ ಪ್ರಧಾನಿ ’ಜಾನ್ ಹೋವಾರ್ಡ’ ಕೊಟ್ಟ ಉತ್ತರ ’ಮೊದಲು ನೀವು ಆಸ್ಟ್ರೇಲಿಯನ್ನರು, ನಂತರ ನಿಮ್ಮ ಧರ್ಮ, ಹಾಗಿದ್ದಲ್ಲಿ ನಿಮಗಿಲ್ಲಿ ಜಾಗ, ಇಲ್ಲವೇ ಪರಿಸ್ಥಿತಿ ಎದುರಿಸಿ!’ ಎಂಬ ದಿಟ್ಟ ಉತ್ತರ ಕೊಟ್ಟಿದ್ದರು. ಹಾಗೆ ಉತ್ತರಿಸಲು ನಮ್ಮ ನಾಯಕರಿಗೇಕೆ ಸಾಧ್ಯವಿಲ್ಲ?ಅದು ಒತ್ತಟ್ಟಿಗಿರಲಿ ಒಂದು ಉತ್ತಮ ಸಾಮಾಜಿಕ ಉದ್ದೇಶದಿಂದ ಕೂಡಿದ ಒಂದು ಚಳುವಳಿಯನ್ನು ಹೇಗೆಲ್ಲಾ ಹತ್ತಿಕ್ಕಬಹುದೆಂದು ಯು. ಪಿ. ಎ ಸರ್ಕಾರವನ್ನು ನೋಡಿ ಇಡೀ ಪ್ರಪಂಚವೇ ಕಲಿಯಬೇಕು!! ಮಾತುಕತೆಗೆ ಆಹ್ವಾನಿಸುವ ನೆಪದಲ್ಲಿ ಕಾಲಹರಣ ಮಾಡುತ್ತಾ ಸಂಸದೀಯ ಸಮಿತಿ ಮುಂದೆ ನಿಮ್ಮ ಕರಡನ್ನು ಇಡಬೇಕು, ಇದು ಸಂಸತ್ ವ್ಯವಸ್ಥೆ, ಅದನ್ನು ಮುರಿಯಲಾಗದು, ಹಾಗದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅತೀ ದೊಡ್ಡ ಅವಮಾನ!! ಇತ್ಯಾದಿ, ಇತ್ಯಾದಿ ಬೊಗಳೆ ಬಿಡುವ ಕೇಂದ್ರ ಸರ್ಕಾರ, ತನಗೆ ಬೇಕಾದ ಅದೆಷ್ಟೋ ಮಸೂದೆಗಳನ್ನು ಸಂಸದೀಯ ಸಮಿತಿ ಮುಂದಿಡದೆ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವುದನ್ನು ಮರೆತೇ ಬಿಡುತ್ತದೆ. ಜೊತೆಗೆ ಅರುಣಾ ರಾಯ್, ಅರುಂಧತಿ ರಾಯ್ ಅಂತಹವರನ್ನು ಮಾಧ್ಯಮಗಳ ಮೂಲಕ ಛೂ ಬಿಟ್ಟು, ಬೆಣ್ಣೆಯಲ್ಲಿ ಕೂದಲು ತೆಗೆವಂತಹ ನಾಜೂಕಾದ ಹೇಳಿಕೆಗಳನ್ನು ಕೊಡಿಸಿ ಚಳುವಳಿಯನ್ನೇ ದಾರಿತಪ್ಪಿಸುವ ತನ್ನ ಚಾಳಿಯನ್ನು ಮುಂದುವರೆಸುತ್ತದೆ. ಇದಕ್ಕೆಲ್ಲಾ ಕಳಶಪ್ರಾಯವೆಂಬಂತೆ ಪ್ರಣವ್ ಮುಖರ್ಜಿ ಎನ್ನುವ ದೂರ್ವಾಸ ಮುನಿಯನ್ನು ಸರ್ಕಾರದ ಪರವಾಗಿ ಅಣ್ಣಾತಂಡದೊಡನೆ ಮಾತುಕತೆಗೆ ಕಳುಹಿಸಿ ’ಏನಾದರೂ ಮಾಡಿಕೊಳ್ಳಿ, ಅಣ್ಣಾ ಸತ್ತರೆ ನಮಗೇನೂ ನಷ್ಟವಿಲ್ಲ’ ಎಂಬಂತಹ ಬೇಜಾವಬ್ದಾರಿ ಸಂದೇಶವನ್ನು ಕಳುಹಿಸುತ್ತದೆ.ಅಸಲಿಗೆ ಜನಲೋಕಪಾಲ ಕಾಯ್ದೆಯಿಂದ ಜನರಿಗೆ ಕೆಟ್ಟದ್ದಾಗುತ್ತದೋ ಒಳ್ಳೆಯದಾಗುತ್ತದೋ ಅದರ ಜಿಜ್ನಾಸೆ ಬೇರೆ. ಆದರೆ ಸರ್ಕಾರವೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಅದರ ಬಗ್ಗೆ ನಿರಾಸಕ್ತಿ ತೋರುವ ಮೂಲಕ ಪ್ರತೀ ಹಂತದ ಭ್ರಷ್ಟಾಚಾರದಿಂದ ಬೇಸತ್ತ ಜನಗಳಲ್ಲಿ ಜನಲೋಕಪಾಲ ಮಸೂದೆಯಿಂದ ಮಾತ್ರ ಭ್ರಷ್ಟಾಚಾರದ ಬುಡಮೇಲು ಸಾಧ್ಯ! ಎನ್ನುವ ಆಶಾಕಿರಣ ಮೂಡಿಸಲು ಕಾರಣವಾಗಿವೆ. ಅದಲ್ಲದೆ ಸರ್ಕಾರ ಮತ್ತು ಕೆಲ ’ಬುದ್ಧಿ ಜೀವಿಗಳು’ ಹೇಳುವಂತೆ ’ಅಣ್ಣಾ ತಂಡ ಬ್ಲಾಕ್-ಮೇಲ್ ತಂತ್ರ ಅನುಸರಿಸುತ್ತಿದೆ’ ಎನ್ನುವ ಮಾತು ಸ್ವಲ್ಪ ಸತ್ಯಕ್ಕೆ ಹತ್ತಿರವೆನಿಸಿದರೆ ರಾಜಕೀಯ ಪಕ್ಷಗಳ ಹಠಮಾರಿತನದ ಧೋರಣೆಯಿಂದ ’ಮಾಡಿದರೆ ತಪ್ಪೇನು?’ ಆಗಲಾದರೂ ಒಳಿತಾದೀತು ಎನ್ನುವ ಭಾವನೆ ಸಾಮಾನ್ಯನದ್ದು.ಬಹುಶಃ ಈ ವ್ಯತಿರಿಕ್ತಗಳಿಗೆ ನಮ್ಮ ದೇಶದ ಇತಿಹಾಸವೂ ಕಾರಣ! ಇದುವರೆಗೆ ನಮ್ಮದೇಶದಲ್ಲಿ ನಡೆದ ಹೋರಾಟಗಳೆಲ್ಲವೂ ಬಡವರಿಂದ, ಶೋಷಿತವರ್ಗದವರಿಂದ ಪ್ರಾರಂಭವಾದರೂ ಅವುಗಳ ಫಲ ಉಂಡವರು ಉಳ್ಳವರೇ! ಸ್ವಾತಂತ್ರ್ಯ ಸಂಗ್ರಾಮವನ್ನೇ ತೆಗೆದುಕೊಳ್ಳಿ ಅದು ಪ್ರಾರಂಭವಾಗಿದ್ದು ಮಾತ್ರ ಬ್ರಿಟೀಷರ ದಬ್ಬಾಳಿಕೆಯ ತಾಪ ತಾಳಲಾರದ ಬಡವರ್ಗದವರಿಂದಾದರೂ ಅದು ಬಲಿತು ಪಕ್ವವಾಗುವ ವೇಳೆಗೆ ಮುಂದಾಳತ್ವ ವಹಿಸಿದ್ದು ಸುಖದ ಸುಪ್ಪತ್ತಿಗೆಯ ಸಿರಿವಂತರಾದ ಗಾಂಧಿ, ನೆಹರು, ಸರ್ದಾರ್ ಪಟೇಲ್ ಮುಂತಾದವರು. ಅಂದಮಾತ್ರಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರವೇನೂ ಇಲ್ಲ ಎನ್ನುವುದು ಮುಠ್ಠಾಳತನವಾದೀತು! ಆದರೆ ಅವರಿಗೆಲ್ಲಾ ಸ್ವಾತಂತ್ರ್ಯದ ’ಫಲ’ದ ಬಗ್ಗೆ ಸ್ಪಷ್ಟ ಪರಿಕಲ್ಪನೆಯಿದ್ದೀತು! ಇದೆಲ್ಲವೂ ಅವರು ಅಧಿಕಾರಕ್ಕೆ ಬಂದಕೂಡಲೆ ಸ್ಪಷ್ಟವೂ ಆಗಿ ಹೋಗಿತ್ತು! ಕೇವಲ ಒಬ್ಬ ಲಾಲ ಬಹದ್ದೂರ್ ಶಾಸ್ತ್ರಿಯವರನ್ನು ಬಿಟ್ಟರೆ ಉಳಿದವರೆಲ್ಲಾ ಅಧಿಕಾರದಿಂದ ಏನೆಲ್ಲಾ ಗಳಿಸಬಹುದೆಂದು ತೋರಿಸಿಕೊಡುವುದರ ಮೂಲಕ ಸಾಮಾನ್ಯರೂ ಸಹ ದೇಶವನ್ನು ಮರೆತು ಅಧಿಕಾರಕ್ಕೆ ಆಸೆಪಡುವಂತಾಗಿದ್ದರಿಂದಲೇ ಇಂದು ಭ್ರಷ್ಟಾಚಾರವೆಂಬುದು ಒಂದು ಗುಣವಾಗದ ಅರ್ಬುದ ರೋಗಕ್ಕಿಂತ ಹೆಚ್ಚಾಗಿ ಬೆಳೆದು ನಿಂತಿದೆ.ಇದಕ್ಕೆ ವ್ಯತಿರಿಕ್ತ ಎಂಬಂತೆ ನಮ್ಮ ಪಕ್ಕದ ಚೀನಾ, ರಷ್ಯಾ, ಜರ್ಮನಿ ಮತ್ತಿತರ ದೇಶಗಳಲ್ಲಿ ಕ್ರಾಂತಿ ನಡೆದದ್ದು ಬಡವರಿಂದಲೇ. ಆದರೆ ಅಧಿಕಾರ ಅನುಭವಿಸಿ ದೇಶವನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸಿದವರು ಯಾರೂ ಸಹ ಸಿರಿವಂತರಾಗಿರಲಿಲ್ಲ, ಅದು ಹಿಟ್ಲರ್ ಆಗಿರಬಹುದು, ಲೆನಿನ್ ಆಗಿರಬಹುದು ಅಥವಾ ಮಾವೋತ್ಸೆ ತುಂಗ್ ಆಗಿರಬಹುದು ಎಲ್ಲರೂ ಹಸಿವನ್ನು ಕಂಡವರೇ. ಜನಸಾಮಾನ್ಯನ ಕಷ್ಟಗಳನ್ನು ಅನುಭವಿಸಿದವರೇ ಆದ್ದರಿಂದ ಅವರಿಗೆ ಚೆನ್ನಾಗಿ ಗೊತ್ತಿತ್ತು. ದೇಶ ಮುಂದುವರಿಯಬೇಕೆಂದರೆ ದೇಶಪ್ರೇಮ ಎಲ್ಲರಲ್ಲೂ ಮೂಡಬೇಕು ಆಗಷ್ಟೇ ಏಕತೆ ಮೂಡಲು ಸಾಧ್ಯ ಎನ್ನುವುದು. ಅವರ ವೈಚಾರಿಕತೆ ಅವರ ಕಾರ್ಯವೈಖರಿಯ ವಿಚಾರಗಳು ಬೇರೆಯೇ ಆದರೂ ಅವರ ಗುರಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರಿಸುವುದೇ ಆಗಿತ್ತು ಅದರಲ್ಲಿ ಅವರು ಯಶಸ್ವಿಯೂ ಆದರು. ಆದರೆ ಅಂದೇ ನಮ್ಮ ನಾಯಕರುಗಳು ಅಧಿಕಾರದಾಸೆಗಾಗಿ ದೇಶವನ್ನು ಮೂರು ಭಾಗ ಮಾಡಿದ್ದಾಯಿತು, ’ಜಾತ್ಯಾತೀತ’ ರಾಷ್ಟ್ರವಾದರೂ ಪ್ರತಿಯೊಂದು ಧರ್ಮಕ್ಕೂ ಪ್ರತ್ಯೇಕ ಕಾನೂನುಗಳಾದವು. ಎಲ್ಲದರಲ್ಲೂ ಅಧಿಕಾರಗಳಿಸುವುದೇ ಮುಖ್ಯ ಚಿಂತನೆಗಳಾದವು. ’ವೋಟ್-ಬ್ಯಾಂಕ್’ ಎಂಬ ಹೊಸ ಪರಿಕಲ್ಪನೆ ನಮ್ಮ ಭಾರತದ ನಾಯಕರುಗಳಿಂದ ವಿಶ್ವಕ್ಕೇ ಪರಿಚಯವಾಯ್ತು!. ಅದು ಇಂದಿಗೂ ಮುಂದುವರೆದು ಸರ್ಕಾರದ ಎಲ್ಲಾ ಸವಲತ್ತುಗಳು ಕೇವಲ ಶ್ರೀಮಂತರಿಗೇ ಮಾತ್ರ ಮೀಸಲಾಗಿವೆ. ಅವರು ಕಟ್ಟುವ ತೆರಿಗೆಗೆ ಭಾರತದ ಬೆನ್ನೆಲುಬು ಮಧ್ಯಮವರ್ಗದವರಿಂದ ವ್ಯಾಪಾರದ ಹೆಸರಿನಲ್ಲಿ ಮತ್ತಷ್ಟು ಕಿತ್ತು ತಿಂದು ದುಂಡಗಾಗಿದ್ದಾರೆ. ಆದರೆ ನಿಜ ಅರ್ಥದಲ್ಲಿ ದೇಶ ಮುನ್ನಡೆಯುತ್ತಿರುವುದು ಅದೇ ಮಧ್ಯಮ ವರ್ಗದವರ ಬೆವರಿಳಿಸಿ ಸಂಪಾದಿಸಿದ ’ತೆರಿಗೆಯಿಂದ’. ಸ್ವಲ್ಪವಾದರೂ ದೇಶ ಪ್ರೇಮವನ್ನು ಅವರ ಮುಂದಿನ ಪೀಳಿಗೆಗಳಲ್ಲಿ ಬೆಳೆಸಲು ಪ್ರಯತ್ನಿಸಿದ್ದರೆ ಭ್ರಷ್ಟಾಚಾರವಿಲ್ಲದ ಒಂದು ಆದರ್ಶ ’ಜಾತ್ಯಾತೀತ’ ರಾಷ್ಟ್ರವಾಗಿರುತ್ತಿತ್ತು ನಮ್ಮ ಭಾರತ!
ಸಾಲುಗಳು
- Add new comment
- 2063 views
ಅನಿಸಿಕೆಗಳು
ನಿಮ್ಮ ಮಾತು ಎಲ್ಲೋ ಒಂದು ಕಡೆ
ನಿಮ್ಮ ಮಾತು ಎಲ್ಲೋ ಒಂದು ಕಡೆ ನಿಜ ಅನಿಸಿದ್ದು, ಮೊನ್ನೆ ಸ್ವಾತಂತ್ರ್ಯ ಉದ್ಯಾನವನಕ್ಕೆ ಭ್ರಷ್ಠಾಚಾರದ ವಿರುದ್ದದ ಹೋರಾಟಕ್ಕೆ ಸಾಥ್ ಕೊಡೋಣ ಅಂತ ಹೋಗಿದ್ದಾಗ, ಅಲ್ಲಿ ಒಬ್ಬ ಭಾಷಣಕಾರ " ಈ ಚಳುವಳಿಯನ್ನು ಮದ್ಯಮವರ್ಗದವರ ಚಳುವಳಿ" ಎಂದು ಬಿಂಬಿಸಲಾಗುತ್ತಿದೆ, ಆದರೆ ಇದು ಈ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ಕೂಗು ಎಂಬುದು ತಿಳಿದಿರಲಿ ಎಂದು ಹೇಳಿದಾಗ, ನಿಮ್ಮ ಈ ಮಾತು ನೆನಪಾಯಿತು. ಉಲ್ಲೇಖ:ಸ್ವಾತಂತ್ರ್ಯ ಸಂಗ್ರಾಮವನ್ನೇ ತೆಗೆದುಕೊಳ್ಳಿ ಅದು ಪ್ರಾರಂಭವಾಗಿದ್ದು ಮಾತ್ರ ಬ್ರಿಟೀಷರ ದಬ್ಬಾಳಿಕೆಯ ತಾಪ ತಾಳಲಾರದ ಬಡವರ್ಗದವರಿಂದಾದರೂ ಅದು ಬಲಿತು ಪಕ್ವವಾಗುವ ವೇಳೆಗೆ ಮುಂದಾಳತ್ವ ವಹಿಸಿದ್ದು ಸುಖದ ಸುಪ್ಪತ್ತಿಗೆಯ ಸಿರಿವಂತರಾದ ಗಾಂಧಿ, ನೆಹರು, ಸರ್ದಾರ್ ಪಟೇಲ್ ":. ಬಹುಶಃ ಈ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬೆಂಬಲ ಸಿಗದೇ ಯಾವುದಾದರೂ ಹೋರಾಟ ಯಶಸ್ವಿಯಾಗಿದೆ ಅಂತ ನನಗನ್ನಿಸದು. ಈ 2ನೇ ಸ್ವಾತಂತ್ರ್ಯ ಚಳುವಳಿ ಯಶಸ್ವಿಯಾಗದಿದ್ದರೆ, ಅದರ ಉದ್ದೇಶಗಳು ಈಡೇರದಿದ್ದರೆ ಖಂಡಿತವಾಗಿ ಮುಂದಿನ ಪೀಳಿಗೆ ನೆಮ್ಮದಿಯ ದಿನಗಳನ್ನು ಕಾಣಲಾಗದು. ಸ್ವಾತಂತ್ರ್ಯದಿಂದ ಸಾಮಾಜಿಕ ಸಮಾನತೆಯನ್ನು ಸಾಧಿಸಿ ಉತ್ತುಂಗಕ್ಕೇರಬೇಕಾಗಿದ್ದ ನಮ್ಮ ದೇಶ, ಬಡವ-ಶ್ರೀಮಂತ ಎಂಬ ಕಂದಕಕ್ಕೆ ಬಿದ್ದು ಅದಃಪತನದತ್ತ ಸಾಗುತ್ತಿದೆ. ಈಗ ನಾವೆಲ್ಲರೂ ಎಚ್ಚೆತ್ತು ಈ ಸಂಗ್ರಾಮದ ಯಶಸ್ಸಿಗೆ ಶ್ರಮಿಸದಿದ್ದರೆ, ಸಂಪತ್ತು ಕೆಲವೇ ವ್ಯಕ್ತಿಗಳ ಕೈ ಸೇರಿ, ಯಾರ ಬಳಿ ಹಣವಿದೆಯೋ ಅವನೇ ಈ ಸಮಾಜದ ನಾಯಕ ಎಂಬ ದುರಂತ ಸ್ಥಿತಿಗೆ ತಲುಪಬೇಕಾಗುತ್ತದೆ ಎಂಬ ಎಚ್ಚರಿಕೆ ಯುವಜನತೆಗೆ ಇರಬೇಕು.
ನೀವು ಹೇಳಿದ ಮಾತು ತಾತ್ಕಾಲಿಕ
ನೀವು ಹೇಳಿದ ಮಾತು ತಾತ್ಕಾಲಿಕ ಸತ್ಯ. ಸತ್ಯ ಇನ್ನೊಂದಿದೆ, ಅದೆ ಪ್ರಕೃತಿ. ಪ್ರಕೃತಿಯ ಮುಂದೆ ಯಾವುದೇ ಶ್ರೀಮಂತಿಕೆ ನಡೆಯಲಾರದು. ಕಾರ್ಲ್ ಮಾರ್ಕ್ಸ್ ೧೦೦ ವರ್ಷಗಳ ಹಿಂದೆ ತನ್ನ ದಾಸ್ಕ್ಯಾಪಿಟಲ್ ಗ್ರಂಥದಲ್ಲಿ ಹೇಳಿದ್ದಾನೆ. ಈ ವ್ಯವಸ್ಥೆಯಲ್ಲಿ ಶ್ರೀಮಂತ ಶ್ರೀಮಂತ ಆಗತಾನೆ ಹೋಗುತ್ತಾನೆ, ಬಡವ ಬಡವನಾಗತಾನೆ ಹೋಗುತ್ತಾನೆ, ಒಂದು ದಿನ ಬಡವ ಕ್ರಾಂತಿ ಮಾಡುತ್ತಾನೆ. ಅದು ಎಂತಹ ಕ್ರಾಂತಿ ಕ್ರಾಂತಿ. ಪ್ರಪಂಚದಲ್ಲಿ ಆ ದಿನಗಳು ಬರಬಹುದು.
ಬಸವರಾಜ್ ಸರ್ ನಮ್ಮ ದೇಶದಲ್ಲಿ ಸಧ್
ಬಸವರಾಜ್ ಸರ್ನಮ್ಮ ದೇಶದಲ್ಲಿ ಸಧ್ಯ ಬಡವರು ಅಥವಾ ಶ್ರೀಮಂತರು ಇಬ್ಬರಿಗೂ ಭ್ರಷ್ಟಾಚಾರದ ಬಿಸಿ ತಟ್ಟುವುದಿಲ್ಲ ಹಾಗಾಗಿ ಕ್ರಾಂತಿ ಯಾದರೆ ಅದು ಮಧ್ಯಮವರ್ಗದಿಂದಷ್ಟೇ ಸಾದ್ಯ. ಅದು ಈಗ ಪ್ರಾರಂಭವಾಗಿದೆ ಎನ್ನುವುದು ನನ್ನ ಅನಿಸಿಕೆನಿಮ್ಮಉಮಾಶಂಕರ
ಶ್ರೀನಿವಾಸ್ ಸರ್ ಬಹುಶಃ ಇದು ನೀವು
ಶ್ರೀನಿವಾಸ್ ಸರ್ಬಹುಶಃ ಇದು ನೀವು ಹೇಳಿದಂತೆಯೇ ಇದು ೨ನೇ ಸ್ವಾತಂತ್ರ್ಯ ಸಂಗ್ರಾಮವೇ ಸರಿ. ಬಹುಶಃ ಇದು ತಿಳಿದ ನಂತರವೇ ಕಾಂಗ್ರೇಸ್ಸಿನ ಕಣ್ಣಿಲ್ಲದ ಮಣಿ 'ಪ್ರೋಗ್ರಾಮ್ದ್' ಫಾರಂ ಕೋಳಿ 'ರಾಹು' ಲ್ ಗಾಂಧಿ 'ಕಣಿ' ಮುತ್ತುಗಳನ್ನುದುರಿಸಿದೆನಿಮ್ಮ ಉಮಾಶಂಕರ
ಪ್ರಿಯ ಉಮಾಶಂಕರ್, ಭಯಂಕರ
ಪ್ರಿಯ ಉಮಾಶಂಕರ್,
ಭಯಂಕರ ಹುರುಪಿನಲ್ಲಿರುವಂತೆ ಕಾಣುತ್ತಿದೆ, ಭ್ರಷ್ಟಾಚಾರವನ್ನು ಬುಡಸಮೇತ ಗುಡಿಸಿ ಹಾಕಲು ಕಸಬರಿಗೆ ಹಿಡಿದು ನಿಂತಿದ್ದೀರಿ. ನಿಮ್ಮೊಂದಿಗೆ ನಾವೂ ಇದ್ದೇವೆ.
ಪ್ರಿಯ ಶ್ರೀನಿವಾಸರೆ,
ಬಡವ ಶ್ರೀಮಂತ ಎನ್ನುವ ಅಸಮಾನತೆ ಇಲ್ಲದಿದ್ದರೆ ದೇಶ ಉದ್ದಾರವಾಗುತ್ತದೆ ಎಂಬ ನಿಮ್ಮ ನಿಲುವಿಗೆ ನನ್ನ ಸಹಮತವಿಲ್ಲ. ಸಮಾನತೆ ಜಾತಿಯಲ್ಲಿರಲಿ, ಶಿಕ್ಶಣದಲ್ಲಿರಲಿ, ಲಿಂಗದಲ್ಲಿರಲಿ, ಒಪ್ಪೋಣ. ಅದು ಸಂಪತ್ತಿಗೂ ಅನ್ವಯವಾಗಬೇಕು ಎಂದಾಗ ವ್ಯವಸ್ಥೆಯೊಂದು ಕುಸಿಯುತ್ತದೆ. ಬಡವ-ಶ್ರೀಮಂತ , ಬಲಿಶ್ಟ - ಬಲ್ಲಿದ ಇವು ಯಾವುದೇ ವ್ಯವಸ್ಥೆಯ ಅಡಿಪಾಯ. ಅದು ಈ ಸಮಾಜದ ಅಸ್ಥಿತ್ವದಿಂದಲೂ ಇತ್ತು ...ಮುಂದೂ ಇರುತ್ತದೆ. ಯಾವತ್ತು ಎಲ್ಲರೂ ಸಮಾನರಾಗಿ..ಸುಖ ಸಂತೋಶದಿಂದ ಜೀವಿಸಲು ಪ್ರಾರಂಭಿಸುತ್ತಾರೋ ಆಗ ಕಾಲದ ಅಂತ್ಯ.
"...................ಹೀಗೆ ಆ ರಾಜ ರಾಣಿ ನೂರು ಮಕ್ಕಳ ಹೆತ್ತು ಸುಖವಾಗಿ ರಾಜ್ಯಭಾರ ನಡೆಸಿದರು" ಎನ್ನುವಲ್ಲಿ ಕಥೆ ಮುಗಿದಂತೆ !
ಪ್ರೀತಿಯ ಕೆಲ್ಕೆಜಿ. ನೀವು ಆ ರೀತಿ
ಪ್ರೀತಿಯ ಕೆಲ್ಕೆಜಿ.ನೀವು ಆ ರೀತಿ ಅರ್ಥಮಾಡಿಕೊಂಡ್ರಾ..??!! ನಾನು ಹೇಳಿದ್ದು ಈ ದೇಶದ ಸಂಪತ್ತು ಕೆಲವೇ ವ್ಯಕ್ತಿಗಳ ಕೈ ಸೇರಿ, ಹಣವಿರುವವನೇ ನಾಯಕನಾಗುವ ಕಾಲ ಬಂದುಬಿಟ್ಟರೆ, ಜನನಾಯಕರು (ಅಣ್ಣಾ ಹಜಾರೆಯವರಂತಹವರು) ಹುಟ್ಟಲಾರರು, ಹುಟ್ಟಿದರೂ ಉಳ್ಳವರಿಂದಾಗಿ ಆತ ನಾಯಕನಾಗಿ ಬೆಳೆಯಲಾರ, ಒಂದು ವೇಳೆ ಜನನಾಯಕರು ಬೆಳೆಯದಿದ್ದರೆ ಜನಸಾಮಾನ್ಯರ ಬದುಕು ಹಸುನಾಗಲಾರದು ಎಂಬುದಷ್ಟೆ ನನ್ನ ಮಾತಿನ ಉದ್ದೇಶ. ಸಮಾಜದಲ್ಲಿ ವರ್ಗಗಳು ಇದ್ದರೇನೆ ಯಾವುದೇ ಸಮಾಜ ಪರಿಪೂರ್ಣವೆನಿಸಿಕೊಳ್ಳುವುದು ಅದು ಮಾಲೀಕ-ಕಾರ್ಮಿಕ ವರ್ಗವಾಗಿರಬಹುದು, ಶ್ರೀಮಂತ-ಬಡವನಾಗಿರಬಹುದು. ಆದರೆ ಯಾವುದೇ ಆಗಿರಲಿ, ಅದು ತನ್ನ ಮಿತಿಯಲ್ಲಿರುವ ತನಕ ಯಾರಿಗೂ ತೊಂದರೆಯಿಲ್ಲ,ಆದರೆ ಭಾರತದಲ್ಲಿ ಎಲ್ಲವೂ ತನ್ನ ಮಿತಿಯಲ್ಲಿದೆ ಅಂತ ನಿಮಗನ್ನಿಸುತ್ತಿದೆಯಾ ಕೆಎಲ್ಕೆ ಜಿ..??? ಒಂದು ವೇಳೆ ಅದು ತನ್ನ ಮಿತಿಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ ತಾನೇ ..??---------------- ತಾನು ಈ ಸಾಮ್ರಾಜ್ಯದ ರಾಜ, ನನ್ನಂತಹ ಪರಾಕ್ರಮಿ ಇನ್ನಿಲ್ಲ. ಪ್ರಜೆಗಳೆಲ್ಲರೂ ನನ್ನ ಸೇವಕರು ಎಂದು ಭಾವಿಸಿ, ಪ್ರಜೆಗಳಿಗೆ ಕೊಡಬಾರದ ಕಾಟ ಕೊಟ್ಟಿದ್ದರ ಫಲವಾಗಿ, ಅವನ ಅತಿಯಾದ ಹಿಂಸೆಯನ್ನು ಸಹಿಸಿಕೊಳ್ಳಲಾರದೆ, ಪ್ರಜೆಗಳೆಲ್ಲ ಗುಳೆಹೊರಟುಹೋದ ಪರಿಣಾಮ ರಾಜ್ಯ ಅನಾಥವಾಯಿತು, ರಾಜನಿಗೆ ಯಾರನ್ನು ಆಳಬೇಕು ಎಂಬುದು ಗೊತ್ತಿಲ್ಲದೆ ಹುಚ್ಚನಾದ ಎಂಬಲ್ಲಿಗೆ ಕಥೆ ಮುಗಿಯುತ್ತದೆ. ಈ ತರಹದ ಕಥೆಗಳು ನಮಗೇನು ಹೊಸತಲ್ಲ ಬಿಡಿ ಕೆಎಲ್ಕೆಜಿ.!!
ಹ್ಹ..ಹ್ಹಾ..ಹ್ಹಾ..ಮಾತಿನಲ್ಲಿ
ಹ್ಹ..ಹ್ಹಾ..ಹ್ಹಾ..ಮಾತಿನಲ್ಲಿ ಚತುರರು ನೀವು. ನಿಮ್ಮ ಕೊನೆಯ ಪ್ಯಾರ ಖುಶಿ ನೀಡಿತು.
ಹೌದು. ಬಡವ-ಸಿರಿವಂತರ ನಡುವೆಯ ವ್ಯತ್ಯಾಸ ಭಾರತದಲ್ಲಿ ಬಹಳೇ ಇದೆ, ಅದು ಅತಿ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲೆಲ್ಲ ಕಾಣುವ ಸಮಸ್ಯೆ.
ಪ್ರಿಯ ಕೆ ಎಲ್ಕೆ ಸರ್, ಮೊದಲಿಗೆ ನ
ಪ್ರಿಯ ಕೆ ಎಲ್ಕೆ ಸರ್,ಮೊದಲಿಗೆ ನಿಮ್ಮ ಸದಾಭಿಪ್ರಾಯಗಳಿಗೆ ನನ್ನ ಅನಂತಾನಂತ ಧನ್ಯವಾದಗಳು,ಭ್ರಷ್ಟಾಚಾರವೆಂಬುದು ಗುಡಿಸಿದರೆ ಹೋಗುವ ಕಸವಲ್ಲ, ತೊಳೆದರೆ ಹೋಗುವ ಕೊಳೆಯೂ ಅಲ್ಲ, ನಮ್ಮ ಪೂರ್ವಜರಿಂದ ನಮ್ಮ ಹಿಂದಿನ ಪೀಳಿಗೆಯಿಂದ ನಮ್ಮ ಪೀಳಿಗೆಯ ಮೂಲಕ ಮುಂದಿನ ಪೀಳಿಗೆಗೆ ಪ್ರಾಶನವಾಗುತ್ತಿರುವ ಸವಿಯಾದ ವಿಷ!! ಅದನ್ನು ಕಿತ್ತು ಹಾಕುವುದು ಸುಲಭವಲ್ಲ! ಅದಕ್ಕಾಗಿ ಸಾಂಘಿಕ ಹೋರಾಟ ಅತ್ಯಗತ್ಯ.ಇನ್ನು ನನ್ನ ಭಯಂಕರ ಹುರುಪಿಗಿಂತ, ನೀವು ಬರೆಯುತ್ತಿಲ್ಲವಲ್ಲ! ಎನ್ನುವ ಕೊರಗೇ ನನಗೆ ಜಾಸ್ತಿ!ನಿಮ್ಮಉಮಾಶಂಕರ
ಉಮಾ ಶಂಕರ್, ಅದ್ಕೆ ಅಲ್ವೇ ಹೇಳೋದು
ಉಮಾ ಶಂಕರ್,ಅದ್ಕೆ ಅಲ್ವೇ ಹೇಳೋದು ಪುಸ್ತಕ ಓದೋಕೆ ಬದ್ನೆಕಾಯ್ ತಿನ್ನೋಕೆ ಅಂತ!ಹೆಸರಿಗೆ ಮಾತ್ರ ಜಾತ್ಯಾತೀತ ರಾಷ್ಟ್ರ ಆದ್ರೆ ಎಲ್ಲವನ್ನು ಜಾತಿಯಿಂದಲೇ ನಿರ್ಧರಿಸುತಾರೆ!
ನಿಮ್ಮ ಲೇಖನ ಚಾಟಿ ಬೀಸಿದಂತಿದೆ ಇತ್ತೀಚಿಗೆ ನೀವ್ ಬ್ರಸ್ತಾಚಾರದ ಬಗ್ಗೆ ಬೇಜಾನ್ ಬರಿತಿದೀರ. ಮಾತು ಅದು ಈ ಸಮಯದಲ್ಲಿ ಸರಿಯಾಗೇ ಇದೆ... ನಿಮ್ಮ ಮನದಾಳ ಅರ್ಥವಾಯ್ತು... ನಿಮ್ಮಿಂದ ಇನ್ನಸ್ಟು ಲೇಖನ ನಿರೀಕ್ಷೆಯಲ್ಲಿ..
ಉಮಾಶಂಕರ್ ಸರ್, "ಭಾರತ ಒಂದು
ಉಮಾಶಂಕರ್ ಸರ್, "ಭಾರತ ಒಂದು ಜಾತ್ಯಾತಿತ ರಾಷ್ರ್ಟ ನಾವೇಲ್ಲರುಒಂದು ಇಲ್ಲಿ ವಾಸಿಸುವ ನಾವೇಲ್ಲರು ಭಾರತಾಭೆಂಯ ಮಕ್ಕಳು ಎಂದು ನಾನು ಪ್ರಾಧಮಿಕ ಶಿಕ್ಷಣದಲ್ಲಿ ಕಲಿತಿದ್ದೆ. ನಂತರ ಪದವಿ ಮಟ್ಟಕ್ಕೆ ಬಂದಾಗ ಮೇಲಿನ ಪದದ ಅರ್ಥವಾಗತೊಡಗಿತು ನಾನು ಜಾತ್ಯಾತಿತ ಭಾರತದಲ್ಲಿ ಇದ್ದೇವಾ? ಅಂತ, ನಾನು ಒಬ್ಬ ಭಗಂತ ಸಿಂಗ್ ಅನುಯಾಯಿ ಬ್ರಿಟಿಷರು ಭಾರತವನ್ನಾಳಲು ಏನೇನು ತಂತ್ರ ಮಾಡಿದರು ಮುಂದೆ ಈ ಕಾಂಗ್ರೇಸ್ ಸರ್ಕಾರ ಅಂದಿನಿಂದಲು ಅದನ್ನೆ ಮುಂದುವೆರೆಸುತ್ತಾ ಬಂದಿದೆ. ಕೊನೆಯಾದಾಗಿ " ನಾವು ಭಾರತೀಯರು ಭಾರತ ಅಭಿವೃದಿಗಾಗಿ ನಮ್ಮ ಯೋಜನೆ ಇರಬೇಕೆ ಹೊರತು ಜಾತಿ ಆದಾರಿತ ಯೋಜನೆ ಆಗಬಾರದು" ಎಂದುವುದು ನಮ್ಮ ಆಶಯ