Skip to main content

ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲವೇ ಇಲ್ಲ!!!!!

ಬರೆದಿದ್ದುJuly 5, 2011
10ಅನಿಸಿಕೆಗಳು

ಫೇಸ್-ಬುಕ್ಕಿನಲ್ಲಿ ಹಜಾರೆಯಣ್ಣನಿಗೆ ’ಗೆದ್ದು ಬಾ! ನೀವು ಮುಂದೆ ನಾವು ನಿಮ್ಮ ಬೆನ್ನಿಂದೆ’ ಇತ್ಯಾದಿ ಇತ್ಯಾದಿ.. ಬರೆದು ’ವಿಶ್ವಕಪ್’ಗೆಲ್ಲಲು ಬೆಂಬಲಿಸಿದ್ದಕ್ಕಿಂತಲೂ ಹೆಚ್ಚಾಗಿ ಬೆಂಬಲಿಸಿದ್ದಾಯ್ತು, ಟ್ವಿಟ್ಟರ್ ನಲ್ಲಿ ಗಂಟಲ ಪಸೆ ಆರುವವರೆಗೂ ಚುಚ್ಚಿ ನುಡಿದದ್ದೇ ಬಂತು, ಬ್ಲಾಗು ತಾಣಗಳಲ್ಲಿ ಪುಟಗಟ್ಟಲೆ ಲೇಖನವನ್ನು ಬರೆದು ಕೈ ನೋಯಿಸಿಕೊಂಡದ್ದೇ ಭಾಗ್ಯ. ಗಂಟಲು ನರ ಕಿತ್ತರಿಯುವಂತೆ ಕೂಗಿ ಕೂಗಿ ಮಾಡಿದ ಭ್ರಷ್ಟ ವಿರೋಧಿ ಭಾಷಣಗಳು ಕಿವಿಯಲ್ಲಿ ಗುಂಯ್ ಗುಡುವಮೊದಲೇ ಮರೆತೂ ಆಗಿಹೋಯ್ತು!! ಈ ನಡುವೆ ವಿದೇಶದಲ್ಲಿರುವ ಕಪ್ಪು ಹಣವನ್ನು ಲೆಕ್ಕಹಾಕಲು ಕ್ಯಾಲ್ಕುಲೇಟರ್ ಅಲ್ಲ ಕಂಪ್ಯೂಟರ್ ಕೈಲೂ ಆಗೊಲ್ಲ, ಅದೇನಾದರೂ ಭಾರತಕ್ಕೆ ವಾಪಸ್ಸು ಬಂದರೆ ಹಳ್ಳಿಯಿಂದ ದಿಲ್ಲಿಯವರೆಗೆ ’ಡಬಲ್-ರೋಡು’ ಮಾಡಬಹುದು, ಎಲ್ಲರಿಗೂ ಮನೆ, ಸೈಟು, ತೆರಿಗೆಯಿಲ್ಲದ ಜೀವನ .................... ಹೀಗೆ ಪುಂಖಾನುಫುಂಖವಾಗಿ ಹರಿದಾಡಿದ ಎಸ್ಸೆಮ್ಮೆಸ್ಸುಗಳು ಮಿಂಚಂಚೆಗಳು ಸಿರಿವಂತರಲ್ಲಿ ನಿರ್ಲಿಪ್ತತತೆ, ಬಡವರಲ್ಲಿ ನಿರ್ಲಕ್ಷ್ಯ ಮೂಡಿಸಿದರೆ ನಮ್ಮಂತಹ ಮಧ್ಯಮವರ್ಗದವರಲ್ಲಿ ಕಮರಿಹೋದ ಕನಸುಗಳಿಗೆ ರೆಕ್ಕೆ ಪುಕ್ಕ ಬರಿಸಿ, ಬೆಂಜ್ ಕಾರಿನಲ್ಲಿ ಕುಳಿತು ವಿಮಾನದಲ್ಲಿ ಹಾರಾಡುವ ಆಸೆಗಳನ್ನು ಹಗಲುಗನಸು ಕಾಣುತ್ತಾ ಎಸ್ಸೆಮ್ಮೆಸ್ ಓದುತ್ತಾ ಈಡೇರಿಸಿಕೊಂಡದ್ದೂ ಆಯ್ತು!!!! ಆ ಮಂಪರಿನಲ್ಲಿ ಭಷ್ಟಾಚಾರವನ್ನು ತುಳಿಯಲು ಹೆಚ್ಚಾಗಿ ಬೆಂಬಲಿಸಿದ್ದು ’ಭಾರತದ ಈಗಿನ ಬೆನ್ನೆಲುಬು’ ಅದೇ ಮಧ್ಯಮವರ್ಗ!
ಭ್ರಷ್ಟವಿರೋಧಿ ಅಲೆ ಹೇಗೆ ಅಪ್ಪಳಿಸಿತೆಂದರೆ "ಸಧ್ಯ ಪೀಡೆ ಇನ್ನೇನು ತೊಲಗಿತು" ಎಂದು ನಿಟ್ಟುಸಿರು ಬಿಡುವ ಮುನ್ನ ಮತ್ತೆ ಅದೇ ಭ್ರಷ್ಟಾಚಾರ ಕೂಗಿ ಕೂಗಿ ಹೇಳಿತ್ತು "ಗೆದ್ದದ್ದು ನಾನೆ!!" ಗೆದ್ದಲು ಹಿಡಿದಿದ್ದು ನೀವೇ!!" ಎಂದು. ಅಣ್ಣಾ ಹಜಾರೆಯ ಉಪವಾಸಕ್ಕೆ ಕಿಮ್ಮತ್ತಿಲ್ಲದಂತಾಯ್ತು, ರಾಮದೇವ್ ಬಾಬನ ’ಸ್ಟಂಟನ್ನು’ ಟೆಂಟಿನ ಸಮೇತ ಕಿತ್ತದ್ದಷ್ಟೇ ಆಗಿದ್ದು!! ಕೂದಲೂ ಕೂಡ ಕೊಂಕಿಸಲಾಗಲಿಲ್ಲ!!
ಆದರೆ ಈ ನಡುವೆ ಬಂದ ಲೋಕಪಾಲ ಮಸೂದೆ ಮಾತ್ರ ಭ್ರಷ್ಟರ ಬೆನ್ನುರಿಯಲ್ಲಿ ನೀರಿಳಿಸಿದ್ದು ಮಾತ್ರ ಅಷ್ಟೇ ಸತ್ಯ! ಆದರೆ ಅದನ್ನು ಜಾರಿಗೆ ತರದಿರಲು ಆಡಳಿತ ಪಕ್ಷದ ಸಿಂಗಲೀಕ ಕಪಿ ಚೇಷ್ಟೆಯ ಜೊತೆಗೆ ವಿರೋಧ ಪಕ್ಷಗಳ ಜಾಣ ಕಿವುಡು-ಕುರುಡು ನಟನೆಗಳು ಕಾರಣವಾದವು! ಮೊದಲಿಗೆ ಲೋಕಪಾಲ ಮಸೂದೆಯ ಕರಡು ಸಮಿತಿ ಹೋಳಾಯ್ತು, ಆಗಲಾದರೂ ವಿಪಕ್ಷಗಳು ಚಾಟಿ ಬೀಸದೆ ’ನರ್ತನ’ದಲ್ಲಿ ತೊಡಗಿದ್ದವು. ನಂತರ ಸರ್ವಪಕ್ಷ ಸಭೆಯನ್ನು ’ಪಿಳ್ಳೆನೆಪ’ದಿಂದ ಬಹಿಷ್ಕರಿಸಿದ್ದಾಯ್ತು!! ಏಕೆಂದರೆ ಸರಿಯಾದ ಲೋಕಪಾಲ ಜಾರಿಗೆ ಬಂದರೆ ಅವರಿಗೂ ತೊಂದರೆ ಅಲ್ಲವೇ? ಅದಕ್ಕಾಗಿಯೇ ಲೋಕಪಾಲದ ಹೋರಾಟವನ್ನು ಯಶಸ್ವಿಯಾಗಿ ವಿಪಕ್ಷಗಳ ಪರೋಕ್ಷ ಬೆಂಬಲದೊಂದಿಗೆ ಮೂಲೆಗುಂಪುಮಾಡಿದ್ದಾಯ್ತು. ಆದರೂ ಚಲಬಿಡದ ತ್ರಿವಿಕ್ರಮನಂತೆ ಭ್ರಷ್ಟಾಚಾರವನ್ನು ತುಳಿದು ಪಾತಾಳ ಕಾಣಿಸಬೇಕೆಂದು ಹಜಾರೆಯವರು ಹಠತೊಟ್ಟಿದ್ದಾರೆ. ಆದರೆ ಈ ಬಾರಿ ಅವರಿಗೆ ದೊರಕುತ್ತಿರುವ ಬೆಂಬಲ ಅಷ್ಟಕ್ಕಷ್ಟೇ ಎನ್ನಬಹುದು. ಅದಕ್ಕೆ ಪ್ರತಿಯಾಗಿ ಸರ್ಕಾರ ಈಗಿನಿಂದಲೇ ಅದನ್ನಣಿಯಲು ಬಲೆ ಹೆಣೆದು ಸಿದ್ದವಾಗಿರುವ ಮುನ್ಸೂಚನೆ ಎಂಬಂತೆ "ಬಾಬಾರಿಗೆ ಆದ ಗತಿ ಅಣ್ಣಾರವರಿಗೂ ಕಾದಿದೆ" ಎಂಬ ಅಪ್ರಬುದ್ಧ, ನಾಚಿಕೆಗೇಡಿನ ಮಾತು ಹೊರಬಿದ್ದಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಂದ "ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲವೇ ಇಲ್ಲ" ಎನ್ನುವುದು ಮನವರಿಕೆಯಾಗಿದೆ. ಹಾಗಾಗಿ ಅಣ್ಣಾರವರು ಸೇರಿದಂತೆ ಎಲ್ಲಾ ಭ್ರಷ್ಟಾಚಾರ ವಿರೋಧಿಗಳು ಇಡೀ ಆಂದೋಲನಕ್ಕೆ ಹೊಸ ಸ್ವರೂಪ ಕೊಡುವ ಅಗತ್ಯ ಪ್ರಸ್ತುತದಲ್ಲಿ ಅತ್ಯವಶ್ಯಕ. ಯಾವುದೋ ಒಂದು ಕಾಯ್ದೆ ಗುಣಪಡಿಸಲಾಗದ ಅರ್ಬುದ ರೋಗದಂತಹ ಭ್ರಷ್ಟಾಚಾರವನ್ನು ತಡೆದುಬಿಡುತ್ತದೆ ಎನ್ನುವುದು ಹಾಸ್ಯಸ್ಪದವಾಗಿರುವಾಗ ಕಾಯ್ದೆಯ ಜಾರಿಗೆ ಹೋರಾಟವನ್ನು ಬಿಟ್ಟು ಬದಲೀ ವ್ಯವಸ್ಥೆಗೆ ಹೋರಾಡಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ. ಅದನ್ನೇ ಇಲ್ಲಿ ಪ್ರಸ್ತಾಪಿಸಲು ಹೊರಟಿದ್ದೇನೆ.
ಪ್ರಚಲಿತದಲ್ಲಿ ಭ್ರಷ್ಟಾಚಾರ ಮೂಲ ಅಡಗಿರುವುದು ರಾಜಕಾರಣಿಗಳಲ್ಲೂ ಅಲ್ಲ, ಅಧಿಕಾರಿವರ್ಗದಲ್ಲೂ ಅಲ್ಲ, ಮತ್ಯಾರಲ್ಲೂ ಅಲ್ಲ. ಅದು ಬೆಚ್ಚಗೆ ಹರಿದಾಡುವುದು "ನೋಟು ಚಲಾವಣೆ" ಎಂಬ ಬಲಿಷ್ಠ ವ್ಯವಸ್ಥೆಯಡಿ! ಆ ರೂಪಾಯಿ ನೋಟೇ ಇಲ್ಲದಂತಾದರೆ ಭ್ರಷ್ಟಾಚಾರಕ್ಕೆ ಜಾಗವೆಲ್ಲಿ?!?!?!?!?! ಅಲ್ಲವೇ.
ಅರೆರೆ!!! ಇದೇನಿದು ಹಣವೇ ಇಲ್ಲದೇ ಬದುಕು ಸಾಧ್ಯವೇ?? ಉಮಾಶಂಕರ ನಿಂಗೆಲ್ಲೋ ತಲೆಕೆಟ್ಟಿರಬೇಕು?!?! ಎಂದು ಯಾರಿಗಾದರೂ ಅನ್ನಿಸುವುದು ಸಹಜವೇ! ನಾನು ಇಲ್ಲಿ ಹಣಕಾಸು ವ್ಯವಹಾರವನ್ನು ನಿಲ್ಲಿಸಿ ಎಂದೇನು ಹೇಳುತ್ತಿಲ್ಲ!! ಬದಲಿಗೆ ನಾಣ್ಯ, ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿ e-Transaction ಅಥವ e-ವ್ಯವಹಾರಿಕತೆಯನ್ನು ಜಾರಿಗೆ ತಂದಾಗ ಭ್ರಷ್ಟಾಚಾರಕ್ಕೆ ಜಾಗವೇ ಇರುವುದಿಲ್ಲ ಅಲ್ಲವೇ? ಬಹುಶಃ Confuse  ಆಗಿರಬೇಕು ಅಲ್ಲವೇ?
ಭ್ರಷ್ಟಾಚಾರದ ಮೂಲ ಉದ್ದೇಶವೆಂದರೆ ತೆರಿಗೆ ವಂಚಿಸಿ ಹಣ ಶೇಖರಿಸುವುದು. ಅದನ್ನು ಯಾವ ರೂಪದ್ಲ್ಲಿ ಶೇಖರಿಸಲು ಸಾಧ್ಯ? ನೋಟುಗಳ ಮೂಲಕವಷ್ಟೇ ಶೇಖರಿಸಲು ಸಾಧ್ಯ. ಆ ನೋಟುಗಳೇ ಇಲ್ಲದಿದ್ದರೆ??!!! ಏನನನ್ನು ಶೇಖರಿಸಲು ಸಾಧ್ಯ? ಎಲ್ಲಾ ದಿನನಿತ್ಯದ ವ್ಯವಹಾರಗಳಾದ ತರಕಾರಿ ಕೊಳ್ಳುವುದರಿಂದ ಹಿಡಿದು, ಸಿನಿಮಾ ಟಿಕೇಟು ಖರೀದಿ, ಪಾನೀಪೂರಿ ತಿನ್ನುವುದಕ್ಕೆ ಕೊಡುವ ಕಾಸು ಜಮಾವಣೆಯನ್ನು ಸೇರಿದಂತೆ ರಿಯಲ್ ಎಸ್ಟೇಟಿನಂತಹ ದೊಡ್ಡ ವ್ಯವಹಾರಗಳವರೆಗೆ ಬ್ಯಾಂಕ್ ಅಕೌಂಟಿನ ಮೂಲಕ ವ್ಯವಹರಿಸಲು ಅನುಕೂಲವಾಗುವಂತಹ ವ್ಯವಸ್ಥೆಯ ಜಾರಿಗಾಗಿ ಹೋರಾಡಿದರೆ ಮಾತ್ರ ಭ್ರಷ್ಟಾಚಾರವೆಂಬ ಕೊಳಕನ್ನು ತೊಳೆಯಲು ಸಾಧ್ಯವೇ ಹೊರತು ಯಾವುದೋ ಒಂದು ಕಾಯ್ದೆಯಿಂದಲ್ಲ.
ನಿಮಗೆ ನಗು ಬರಬಹುದು, ಅಥವಾ ಇದು ಹೇಗೆ ಸಾಧ್ಯವೆಂದು ಆಶ್ಚರ್ಯವೂ ಆಗಬಹುದು. ಇಂದು ಭ್ರಷ್ಟಾಚಾರವೆನ್ನು ನಾವು ವಿದೇಶದಲ್ಲಿ ಅಡಗಿರುವ ಕಪ್ಪು ಹಣಕ್ಕಷ್ಟೇ ಸೀಮಿತಗೊಳಿಸಿ, ಪ್ರಸ್ತುತದಲ್ಲಿ ನಮ್ಮ ದೇಶದಲ್ಲಿ ನಡೆಯುವ ಪ್ರತಿಯೊಂದು ಕ್ಷಣಕ್ಕೂ ನಡೆಯುತ್ತಿರುವ ವ್ಯವಹಾರಗಳಿಂದ ಹುಟ್ಟುತ್ತಿರುವ ಕಪ್ಪುಹಣದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ನಿಮಗೆ ಆಶ್ಚರ್ಯಕರವಾದ ಉದಾಹರಣೆ ಕೊಡುತ್ತೇನೆ. ರಸ್ತೆಬದಿಯ ಪಾನೀಪೂರಿಯವನನ್ನು ತೆಗೆದುಕೊಳ್ಳಿ. ಮೈಸೂರಿನ ಕೆ.ಡಿ ರಸ್ತೆಯಲ್ಲೊಬ್ಬ ಪಾನೀಪುರಿಯನ್ನು ತುಂಬಾ ಚೆನ್ನಾಗಿ ಮಾಡುತ್ತಾನೆ ಒಂದು ಒಂದು ಪ್ಲೇಟಿಗೆ ಕೇವಲ ೧೦ ರೂ. ದಿನವೊಂದಕ್ಕೆ ಸುಮಾರು ಸಾವಿರ ಪ್ಲೇಟ್ ಮಾರುತ್ತಾನೆ. ಅಂದರೆ ಅವನ ಒಟ್ಟಾರೆ ವ್ಯವಹಾರ ದಿನವೊಂದಕ್ಕೆ ಸುಮಾರು ೧೦೦೦೦ ರೂ. ಅಂದರೆ ತಿಂಗಳಿಗೆ ಸುಮಾರು ೩ ಲಕ್ಷರೂಪಾಯಿಗಳು!!! ಅದಕ್ಕೆ ಅವನೇನು ಸರ್ಕಾರಕ್ಕೆ ತೆರಿಗೆ ಕಟ್ಟುವುದಿಲ್ಲ, ಪೋಲಿಸಿನವನಿಗೆ ಕೊಟ್ಟರೂ ೧೦೦ ಅಥವಾ ಇನ್ನೂರು ರೂ ಕೊಡಬಹುದು. ಇದನ್ನೆಲ್ಲಾ ಅವನು ಹೊಟ್ಟೇಪಾಡಿಗೆ ಮಾಡುತ್ತಿದ್ದರೂ ತೆರಿಗೆ ವಂಚಿಸಿದ ಹಣವಾದ್ದರಿಂದ ಅದು ಕಪ್ಪು ಹಣವೇ ಅಲ್ಲವೇ? ಅಲ್ಲಿಗೆ ಅವನೂ ಭ್ರಷ್ಟನೇ!!! ಹಗಲೂ ರಾತ್ರಿ ಪಾಳಿಯಲ್ಲಿ ಕಣ್ಣಿಗೆ ನಿದ್ದೆಯಿಲ್ಲದೇ ಕಂಡವರ ಮನೆಯ ಗೇಟು ಕಾಯುವ ಒಬ್ಬ ಸಾಮಾನ್ಯ ಸೆಕ್ಯುರಿಟಿ ಗಾರ್ಡ್ ತಿಂಗಳಿಗೆ ಗಳಿಸುವ ೫ - ೬೦೦೦ ರೂ ಪುಡಿಗಾಸಿನ ಸಂಬಳದಲ್ಲಿ TDS ಎಂದು ತೆರಿಗೆ ಮುರಿದುಕೊಂಡು ಅವನನ್ನು ಸಂಕಷ್ಟಕ್ಕೀಡುಮಾಡುವುದಲ್ಲದೆ, ಆ ತೆರಿಗೆ ಹಣವನ್ನು ವಾಪಸ್ಸು ಪಡೆಯಲು ತಿರುಗಿ ಅಲೆದು ಅದರಲ್ಲೂ ಸ್ವಲ್ಪ ಲಂಚಕೊಟ್ಟು ಹೈರಾಣಾಗುತ್ತಾನೆ!! ಆದರೆ ಇದ್ಯಾವುದೇ ಜಂಜಾಟವಿಲ್ಲದೆ "ಪೋಲೀಸ್ನೋರ್ಗು ಕೊಡ್ಬೇಕು ಸ್ವಾಮಿ" ಎನ್ನುತ್ತಾ ತನ್ನ ಗಿರಾಕಿಗಳ ಅನುಕಂಪ ಗಿಟ್ಟಿಸಿ ಗಂಟುಮಾಡಿಕೊಳ್ಳುವ ರಸ್ತೆ ಬದಿ ವ್ಯಾಪಾರಿ ಎಲ್ಲರೂ ನೋಡುತ್ತಿರುವಂತೆ ಭ್ರಷ್ಟನಾಗುತ್ತಾನೆ.  ಇಂತಹ ರಸ್ತೆಬದಿ ವ್ಯಾಪಾರಿಗಳು ಒಂದುಂದು ಊರಿನಲ್ಲೂ ಇದ್ದಾರೆ. ಇನ್ನು ನಗರ ಪ್ರದೇಶಗಳಲ್ಲಿ ಎಷ್ಟಿರಬೇಡ? ಅವರಿಂದ ದೇಶದ ಬೊಕ್ಕಸಕ್ಕಾಗುತ್ತಿರುವ ನಷ್ಟವೆಷ್ಟು?? ನಾನೇನು ಈ ಮಾತನ್ನು ಅವರ ಮೇಲಿನ ದ್ವೇಶದಿಂದಾಗಲಿ, ಹೊಟ್ಟೆಯುರಿಯಿಂದಾಗಲಿ ಹೇಳುತ್ತಿಲ್ಲ. ಭ್ರಷ್ಟತೆಯ ಆಕಾರಗಳಲ್ಲಿ ಇದು ಒಂದೆದು ಹೇಳುತ್ತಿದ್ದೇನೆ. ನಾನು ಈ ರೀತಿ ಯೋಚಿಸಲು ಕಾರಣ ಮತ್ತದೇ "ನೋಟು". ನಿಮಗೆ ತಿಳಿದಿರಲಿ ಒಂದು ಸಾವಿರದ ನೋಟನ್ನು ಮುದ್ರಿಸಲು ಮುನ್ನೂರು ರೂಪಾಯಿಗಳವರೆಗೆ ಖರ್ಚಾಗುತ್ತದೆ, ಅದೇ ರೀತಿ ನೂರರ ನೋಟಿಗೆ ಇನ್ನೂರು ರೂಪಾಯಿಗಳಿಗಿಂತಲೂ ಹೆಚ್ಚಾಗುತ್ತದೆ ಎಂದು ಕೇಳಿದ್ದೇನೆ (ಸರಿಯೋ ತಪ್ಪೋ ಬಲ್ಲವರು ನಿಖವಾಗಿ ಹೇಳಿ). ಆ ನೋಟನ್ನೇ ಮುದ್ರಿಸದಿದ್ದರೆ ಅದರ ಖರ್ಚನ್ನು ಬೇರೆ ಕಾರ್ಯಕ್ಕೆ ಉಪಯೋಗಿಸಬಹುದಲ್ಲವೇ?
ಇಂದು ವಿಜ್ನಾನ-ತಂತ್ರಜ್ನಾನ ಬಹಳಷ್ಟು ಮುಂದುವರಿದಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅದೇ ಪಾನಿಪೂರಿ ತಿಂದ ನಂತರ ಅಂಗಡಿಯವನಿಗೆ ಒಂದು ಎಸ್ಸೆಮ್ಮೆಸ್ಸು ಮೂಲಕ ಹಣ ತಲುಪಿಸುವಂತಾಗಬಾರದೇಕೆ? ಅದೇ ರೀತಿ ಆತನೂ ಸಹ ತನ್ನ ಬಳಿ ಕೆಲಸ ಮಾಡುವ ಹುಡಗನಿಗೆ ನೋಟು ಕೊಡುವ ಬದಲು ಅವನದೇ ಮೊಬೈಲ್ ನಿಂದ ಆ ಹುಡುಗನ ಅಕೌಂಟಿಗೆ ಹಣ ವರ್ಗಾಯಿಸುವಂತಾಗಬೇಕು. ಅಷ್ಟೇ ಅಲ್ಲ ತನ್ನ ಹೊಲದಲ್ಲಿ ಕೂಲಿ ಮಾಡುವ ಕೂಲಿಕಾರನಿಗೆ ರೈತ ತನ್ನ ಅಕೌಂಟಿನಿಂದಲೇ ಹಣವನ್ನು ನೇರವಾಗಿ ವರ್ಗಮಾಡುವಂತಾಗಬೇಕು. ’ಅವನು ರೈತ ಅವನಿಗೆ ಅಕೌಂಟು ಚಲಾವಣೆ ತಿಳಿಯಲು ಹೇಗೆ ಸಾಧ್ಯ್?’ ಎಂಬ ಪ್ರಶ್ನೆ ಇಲ್ಲ ಅಸಹಜವೇ ಸರಿ. ಏಕೆಂದರೆ ಓದು ಬರಹ ತಿಳಿಯದ, ಸಾರಿಗೆ ಸಂಪರ್ಕವಿಲ್ಲದ, ಹೆಸರೂ ಗೊತ್ತಿಲ್ಲದ ಹಳ್ಳಿಯೊಂದರಲ್ಲಿ ತನ್ನ ವೃದ್ಧಾಪ್ಯವೇತನಕ್ಕಾಗಿ ಬ್ಯಾಂಕಿನಲ್ಲಿ ಅಕೌಂಟು ತೆರೆದು ಪ್ರತಿ ತಿಂಗಳು ತಪ್ಪದೇ ಹಣ ಡ್ರಾ ಮಾಡುವುದನ್ನು ಕಲಿತಿರುವ ವೃದ್ದೆ/ವೃದ್ಧನಿಗೇ ಗೊತ್ತಾದ ಮೇಲೆ ರೈತನಿಗೆ ತಿಳಿಯುವುದಿಲ್ಲ ಎನ್ನಲು ಸಾಧ್ಯವೇ?
ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಹಣವಿಲ್ಲದೆ ಭೂ ನೊಂದಣಿಯನ್ನು ಬ್ಯಾಂಕ್ ಅಕೌಂಟ್ ಮೂಲಕವೇ ಹಣ ವರ್ಗಾಯಿಸಿ ನೊಂದಾಯಿಸಿಕೊಳ್ಳುವಂತಾಗಬೇಕು. ಆಗಲೇ ಗಗನದಲ್ಲಿರುವ ಭೂಮಿಯ ಬೆಲೆ ನೆಲಕ್ಕಿಳಿಯುವುದು ಹಾಗೂ ಕಪ್ಪ ಹಣ ರಿಯಲ್ ಎಸ್ಟೇಟ್ ನಲ್ಲಿ ಚಲಾವಣೆಯಾಗುವುದೂ ಸಹ ನಿಲ್ಲುವುದು. ಏಕೆಂದರೆ ಪ್ರಸ್ತುತ ಭೂ ನೊಂದಣೆಯಲ್ಲಿ ವ್ಯಾಪರವಾಗುವ ಮೊತ್ತವೇ ಬೇರೆ ನೊಂದಣಾ ಪತ್ರದಲ್ಲಿ ಕಾಣಿಸುವ ಮೊತ್ತವೇ ಬೇರೆ!! ಹಾಗಾಗಿ ಹೆಚ್ಚಿನ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ತಲುಪದೆ ಕಪ್ಪು ಹಣವಾಗಿ ಪರಿವರ್ತನೆಗೊಳ್ಳುತ್ತದೆ. ಇದೆಲ್ಲಾ ಸರ್ಕಾರಕ್ಕೆ ತಿಳಿದಿಲ್ಲವೆಂದಲ್ಲ, ಎಷ್ಟೋ ವ್ಯವಹಾರಗಳು ಅಧಿಕಾರಿಗಳ ಕಣ್ಗಾವಲಿನಲ್ಲಿ ’ಬೆಚ್ಚಗೆ’ ನಡೆಯುತ್ತವೆ!!
 ಇಂತಹ ಅದೆಷ್ಟೋ ಅವ್ಯವಹಾರಗಳಿಗೆ ಕಡಿವಾಣ ಹಾಕಿ ಭ್ರಷ್ಟತೆಯನ್ನು ಬಡಿದೋಡಿಸಲು ’ನೋಟಿಲ್ಲದ’ ವ್ಯವಹಾರವೇ ಸೂಕ್ತ. ಅದಕ್ಕಾಗಿ ಕಾಯ್ದೆ ಕರಡು ಕಾನೂನು ಎಂದು ಹೋರಾಡುವುದು ಪ್ರಸ್ತುತಕ್ಕೆ ಬೇಕಿಲ್ಲ. ಹೊಸ ವ್ಯವಸ್ಥೆ ಜಾರಿಗೆ ಹೋರಾಟ ಸೂಕ್ತವೆನಿಸುತ್ತದೆ. ನೀವೇನಂತೀರಿ?

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ಕಿರಿಕ್ ಕೃಷ್ಣಪ್ಪ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/07/2011 - 12:34

ನಮಸ್ಕಾರ ಸಾರ್!! ಓಹೋ! ಏನ್ ತಲೆ ಸಾರ್!! ಕಾಸಿಲ್ಲಾಂದ್ರೆ ಬದ್ಕೋದು ಹೇಗೆ

ಉಮಾಶಂಕರ ಬಿ.ಎಸ್ ಶನಿ, 07/09/2011 - 10:57

ಪ್ರೀತಿಯ ಕೃಷ್ಣಪ್ಪನವರೆ,ಕಾಸಿಲ್ಲದೇ ಬದುಕಲು ಸಾಧ್ಯವಿಲ್ಲ ನಿಜ, ಆದರೆ ನೋಟು ನಾಣ್ಯಗಳಿಲ್ಲದೆ ಬದುಕಬಹುದಲ್ಲವೇ?ನಿಮ್ಮಉಮಾಶಂಕರ

Nanjunda Raju Raju ಶುಕ್ರ, 07/08/2011 - 11:03

ಮಾನ್ಯ ಶ್ರೀ ಉಮಾಶಂಕರ ಬಿ.ಎಸ್ ರವರೇ, ನಿಮ್ಮ ಸಲಹೆ ಓದುಗರಾದ ನಾವು ಒಪ್ಪಿಕೊಳ್ಳುತ್ತೇವೆ. ಅದನ್ನು ಕಾಯ್ದೆ ರೂಪಕ್ಕೆ ತರುವವರು ಯಾರು? ನಾವು ನೀವಂತು ಅಲ್ಲ. ನಿಮ್ಮ ಲೇಖನದಂತೆ ಯಾರನ್ನು ನೀವು ಆಕ್ಷೇಪಿಸಿರುತ್ತೀರೋ ಅವರೇ ಮಾಡಬೇಕು. ಬಕಾಸುರರ ಬಾಯಿಗಳಿಗೆ ಕುಕ್ಕೆ (ಹಳ್ಳಿಯ ಕಡೆ ಕಣದಲ್ಲಿ ಎತ್ತುಗಳು ಕಾಳುಗಳನ್ನು ತಿನ್ನದಂತೆ ಸಣ್ಣ ಬುಟ್ಟಿ ಕಟ್ಟುತ್ತಾರೆ) ಹಾಕುವಂತೆ ಸಲಹೆ ಕೊಡುತ್ತೀರಲ್ಲ. ಒಪ್ಪುತ್ತಾರಾ! ಅಂತಹ ಅಣ್ಣಾ ಹಜಾರೆ, ರಾಮ್ ದೇವ್ ರವರಂತವರ ಮೇಲೆ ಗೂಬೆ ಕೂರಿಸಿ ಮೂಲೆಗುಂಪು ಮಾಡಿರುತ್ತಾರೆ. ಇದೇ ರೀತಿ ಹೋರಾಟ ಮಾಡಲು ಹೋಗಿ ಒಬ್ಬ ಸಾದು ತಮ್ಮ ಪ್ರಾಣತೆತ್ತರು. ಅದಕ್ಕೆ ಬೆಲೆಯೇ ಇಲ್ಲದಂತಾಯಿತು. ಇನ್ನು ನಾವು ನೀವು ಏನು ಮಾಡಲು ಸಾಧ್ಯ ಏನಂತಿರಿ?

ಉಮಾಶಂಕರ ಬಿ.ಎಸ್ ಶನಿ, 07/09/2011 - 09:38

ಪ್ರೀತಿಯ ನಂಜುಡರಾಜ್ನಿಮ್ಮ ಮಾತು ಅಕ್ಷರಶಃ ನಿಜ ಬೆಕ್ಕಿಗೆ ಗಂಟೆ ಕಟ್ಟುವವರು ಬೇಕಾಗಿದ್ದಾರೆ. ಆದರೆ ಸಂಘಟಿತ ಹೋರಾಟಕ್ಕೆ ಬೆಲೆಯಿದೆಯಲ್ಲವೇ?ನಿಮ್ಮಉಮಾಶಂಕರ

Basavaraj G ಶುಕ್ರ, 07/08/2011 - 18:11

ಭಾರತದಲ್ಲಿ ಹೋರಾಟ ಮುಷ್ಕರ ಇವು ನೆಪ ಮಾತ್ರ. ಭ್ರಷ್ಟಾಚಾರಕ್ಕೆ ಮೂಲ ಕಾರಣ Rapid Growth of papulation. ಅನ್ನ ಆಹಾರ ಉತ್ಪಾದನೆ ಮೀರಿ ಜನ ಸಂಖ್ಯೆ ಬೆಳೆಯುತ್ತಿದೆ. ಸೃಷ್ಟಿಯಾಗುತ್ತಿರುವ ಉದ್ಯೋಗಗಳೆಲ್ಲ ಈ ಜನ ಸಂಖ್ಯೆ ನುಂಗಿ ನೀರು ಕುಡಿಯುತ್ತಿದೆ. ನಿರುದ್ಯೋಗಿಗಳು ಉದ್ಯೋಗ ಸಿಗದೆ ರಾಜಕೀಯಕ್ಕೆ ಇಳಿಯುತ್ತಿದ್ದಾರೆ. ಅಲ್ಲಿ ಭ್ರಷ್ಟತನದಿಂದ ದುಡ್ಡು ಮಾಡುತ್ತಾರೆ. ಇನ್ನೂ ಕೆಲವರು ಭಯೋತ್ಪಾಕ ಸಂಘಟನೆಗಳಿಗೆ ಸೇರುತ್ತಿದ್ದಾರೆ. ನೋಟುಗಳು ಎಷ್ಟಿದ್ದರೇನು, ನೋಟುಗಳಿಂದ ಇಂದಿನ ಜನಸಂಖ್ಯೆಗೆ ಆಹಾರ ಉತ್ಪಾದನೆ ಮಾಡಲು ಸಾಧ್ಯವೆ. ಶ್ರೀ ಉಮಾಶಂಕರವರು ಒಂದು ಉದಾಃ ಕೊಟ್ಟಿದ್ದಾರೆ. ಒಬ್ಬ ಪಾನಿಪೂರಿ ಮಾರುವವ ದಿನಕ್ಕೆ ೧೦೦ ಪಾನಿ ಮಾರಿ ೧೦೦೦/- ಗಳಿಸಿದರೆ ಅವನ ತಿಂಗಳ ಆದಾಯ ೩೦೦೦೦/- ಅವನು ದಿನಕ್ಕೆ ೧೦೦ ಪಾನಿಪೂರಿ ಮಾರುವ ಗುರಿಇಟ್ಟುಕೊಂಡಿದ್ದಾನೆ. ಅದೇ ಅವನ ಬಳಿ ೧೦೦೦ ಪಾನಿಪೂರಿ ಕೋರಿದರೆ ಅವನಿಂದ ಒದಗಿಸಲು ಸಾಧ್ಯವಿಲ್ಲ. ಹಾಗೆ ದೇಶದಲ್ಲಿನ ರೈತರು ಒಂದು ನಿಗದಿತ ಪ್ರದೇಶದಲ್ಲಿ ನಿಗದಿತ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡುತ್ತಾರೆ. ಆದರೆ ಜನಸಂಖ್ಯೆ ಹೆಚ್ಚಿದಂತೆ ಬೆಳೆಯುವ ಪ್ರದೇಶ ಹೆಚ್ಚಾಗಾಲರದು. ಅದುರಿಂದ ನಾವು ಯಾವುದೇ ಮಸೂದೆ ತಂದರು ಅದು ಗುರಿ ತಲುಪುವುದು ಕಷ್ಟ ಸಾಧ್ಯ. ಶ್ರೀ ಉಮಾಶಂಕರವರು ನೋಟಿನ ಚಲಾವಣೆ ಸ್ಥಗಿತಗೊಳಿಸಬೇಕು ಎಂದಿದ್ದಾರೆ. ಲಂಚವನ್ನು ನೋಟಿನ ರೂಪದಲ್ಲೆ ನೀಡಬೇಕೆ ಕಾರು, ಸೈಟು, ಅಕ್ಕಿ, ಗೋದಿ ರೂಪದಲ್ಲು ಪಡೆದವರು ಮತ್ತು ನೀಡಿದವರು ನಮ್ಮ ಸಮಾಜದಲ್ಲಿ ಇದ್ದಾರೆ. ಮೂಲವಾಗಿ ಸಾರ್ವಜನಿಕರು ಪ್ರಮಾಣಿಕರಾಗಬೇಕೆ ಹೊರತು. ವ್ಯವಸ್ಥೆಯಲ್ಲು. ಸಾರ್ವಜನಿಕರು ಪ್ರಮಾಣಿಕರಾಗಬೇಕಾದರೆ ಜನಸಂಖ್ಯೆ ಮಿತಿಯಲ್ಲಿರಬೇಕು. ಬಯಕೆಗಳು ನೂರು ಅವುಗಳನ್ನು ತೃಪ್ತಿಪಡಿಸುವ ಮೂಲಗಳ ಮಿತಿಗಯಾಗಿವೆ. ಹೀಗಿರುವಾಗ ಮೂಲಗಳನ್ನು ಅವಲಂಬಿಸಿ ಜನಸಂಖ್ಯೆ ಇದ್ದಾಗ ಈ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ.

ಉಮಾಶಂಕರ ಬಿ.ಎಸ್ ಶನಿ, 07/09/2011 - 09:35

ಪ್ರೀತಿಯ ಬಸವರಾಜ್ ಸರ್"ಭಾರತದಲ್ಲಿ ಹೋರಾಟ ಮುಷ್ಕರ ಇವು ನೆಪ ಮಾತ್ರ. ಭ್ರಷ್ಟಾಚಾರಕ್ಕೆ ಮೂಲ ಕಾರಣ Rapid Growth of papulation." ಎಂಬ ನಿಮ್ಮ ಮಾತುಗಳನ್ನು ನಾನು ಅಕ್ಷರಸಹ ಒಪ್ಪುತ್ತೇನೆ. ಆದರೆ ಲಂಚ ಕೊಡುವವರು ಬೇರೇ ರೂಪದಲ್ಲೂ ಕೊಡಬಹುದು ನಿಜ ಆದರೆ ಅದನ್ನು ಕೊಡುವವರೂ ಸಹ ನೋಟು ಬಳಸದೇ ಅವುಗಳನ್ನು ಕೊಂಡುಕೊಳ್ಳುವಂತೆ ಮಾಡಿದರೆ ಮಾಡಿದರೆ ಕೊಡುವವನೂ ಸಿಕ್ಕಿ ಹಾಕುಳ್ಳುತ್ತಾನಲ್ಲವೇ? ಆ ಭಯದಿಂದಲಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎನ್ನುವುದು ನನ್ನ ಅನಿಸಿಕೆಇದಕ್ಕೆ ನೀವೇನಂತೀರಿನಿಮ್ಮ ಉಮಾಶಂಕರ

venkatb83 ಸೋಮ, 07/11/2011 - 10:57

ಉಮ ಅವ್ರೆ ನಿಮ್ಮ ,ಸಮಜದ ಬ್ರಸ್ತಾಚಾರ ನಿರ್ಮೂಲನೆಯ  ಕಾಲಜಿ ಅರ್ಥವಾಗ್ತೆ. ಈಗಿನ ಹೊರಾತ ಆರಮ್ಭ ಅಸ್ತೆ,  ಬರು ಬರುತ್ತ ಇದು ತೀವ್ರ ಮತ್ತಕ್ಕೆ ಹೊಗಿ, ನಿವು- ನಾವು ಅನ್ದು ಕೊನ್ದನ್ಗೆ ಆಗ್ತೆ. ಸ್ವಲ್ಪ ಕಾಯ್ಬೆಕಸ್ತೆ.

ಉಮಾಶಂಕರ ಬಿ.ಎಸ್ ಸೋಮ, 07/11/2011 - 16:28

ವೆಂಕಟ್ ಸರ್ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳುಎಲ್ಲರೂ ಅಂದುಕೊಳ್ಳುವಂತೆ ಎಲ್ಲರಿಗೂ ಒಳ್ಳೆಯದಾದರೆ ಕಾಯಲು ನಾನೂ ಸಹ ಸಿದ್ಧ.ನಿಮ್ಮಉಮಾಶಂಕರ

pavu ಶುಕ್ರ, 07/15/2011 - 13:35

ಸರ್  ಭ್ರಷ್ಟಾಚಾರ ಎಂಬುದು ಈಗ ದೇಶಕ್ಕೆ ಮಾರಕ ಹಾಗೂ ಪೂರಕವಾಗಿ ನಿಂತಿದೆ.ಅದಿಕಾರಿಗಳು ಏನೇ ಬಿಟ್ಟರು ಲಂಚ ತೆಗೆದುಕೊಳ್ಳೋದು ಬಿಡಲ ಅನ್ನುತ್ತಾರೆ.ನಿರುದ್ಯೋಗಿಗಳು ಲಂಚ ಕೊಟ್ಟಾದರೂ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನುತ್ತಾರೆ.ಇದು ಒಂಥರಾ ಅಂಟು ರೋಗ ಔಷಧಿ ಕೊಟ್ಟರು ಬೆನ್ನು ಬಿಡದ ಖಾಯಿಲೆ ಆಗಿ ಈ ಭ್ರಷ್ಟಾಚಾರ ನಿಂತಿದೆ.ನ್ಯಾಯ ನೀತಿ ನಿಯತ್ತು  ಈ ತತ್ವಗಳ ರೀತಿ ದುಡಿಯಬೇಕು ಎಂದು ಕೊಂಡವರನ್ನು ಈ ಸಮಾಜ ಬದಲಾಯಿಸುತ್ತಿದೆ....................ಸ್ವಾಮಿ.
 
 

Basavaraj G ಧ, 07/20/2011 - 11:30

ಉಮಾಶಂಕರವರೆ ಬೆಕ್ಕಿಗೆ ಗಂಟೆ ಕಟ್ಟುವುದಲ್ಲ ಲೇಖನಗಳಂದ ಸಾಮಾನ್ಯ ಪ್ರಜ್ಞೆ ಬೆಳೆದರೆ ಸಾಕು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.