Skip to main content

ಬೆಟ್ಟದ ಜೀವ-ನಿರ್ಜೀವ ಬೆಟ್ಟ

ಬರೆದಿದ್ದುJuly 5, 2011
14ಅನಿಸಿಕೆಗಳು

[img_assist|nid=9255|title=bettada jeeva|desc=|link=node|align=left|width=130|height=98]ಬೆಟ್ಟದ ಜೀವ- ಹೆಸರು ಕೇಳಿದರೆ ಸಾಕು ಮೈ ಎಲ್ಲಾ ಪುಳಕ. ದಟ್ಟ ಅರಣ್ಯ, ಗೋಪಾಲಯ್ಯ, ಶಂಕರಮ್ಮ, ದೇರಣ್ಣ, ಬಟ್ಯ, ಹುಲಿ ಬೇಟೆ, ಪಾಂಜ ಎಂಬ ಹಾರುವ ಬೆಕ್ಕು , ಕಾಟು ಮೂಲೆ ನಾರಾಯಣ, ಹೀಗೆ ಅಸಂಖ್ಯಾತ ಚಿತ್ರಗಳು ಕಣ್ಣ ಮುಂದೆ ಸುಳಿಯುತ್ತದೆ.ಜ್ಜಾನ ಪೀಠ ಪ್ರಶಸ್ತಿ ವಿಜೇತರಾದ ಡಾ. ಕೆ.ಶಿವರಾಮ ಕಾರಂತರ ಬಹು ಪ್ರಖ್ಯಾತ ಕಾದಂಬರಿ.
ಇಂಥ ಕಾದಂಬರಿಯೊಂದು ಚಲನಚಿತ್ರವಾದಾಗ ಹತ್ತಿಕ್ಕಲಾಗದ ಕುತೂಹಲ ಮೂಡುವುದು ಸಹಜ. ಹೆಸರಾಂತ ನಿರ್ದೇಶಕರಾದ ಪಿ ಶೇಷಾದ್ರಿ ಬೆಟ್ಟದ ಜೀವ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಚಲನ ಚಿತ್ರವಾಗಿಸಿದ್ದಾರೆ. ಬಹಳಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರ ಹಲವಾರು ಜನರಿಂದ ಮನ್ನಣೆ ಪಡೆಯಿತು. ಅದನ್ನು ನಂಬಿ ಚಲನ ಚಿತ್ರ ಮಂದಿರಕ್ಕೆ ದೌಡಾಯಿಸಿದಾಗ ನನ್ನ ಅಲ್ಪಮತಿಗೆ ಬಂದ ಕೆಲವು ವಿಷಯಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ೧) "ಬೆಟ್ಟದ ಜೀವ"  ಕಾದಂಬರಿಯಲ್ಲಿ  ಬರುವ ಚಿತ್ರಣ ಸುಮಾರು ನೂರು ವರ್ಷಗಳ ಕೆಳಗೆ ಸಂಭವಿಸಿರುವಂತಹ ಚಿತ್ರಣ. ಆಗಿನ ಕಾಲದಲ್ಲಿ ಬ್ರಿಟಿಷ್ ಆಡಳಿತ ನಡೆಯುತ್ತಿತ್ತು. ನಿರ್ದೇಶಕರು ಹೆಚ್ಚುವರಿಯಾಗಿ ಸ್ವಾತಂತ್ರ್ಯ ಸಂಗ್ರಾಮವನ್ನು ತಮ್ಮ ಚಲನಚಿತ್ರಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ ಬ್ರಿಟಿಶ್ ಸಿಪಾಯಿಗಳಿಗೆ ಈಗಿನ ಆಧುನಿಕ ಪೋಲಿಸರ ಸಮವಸ್ತ್ರ ಕೊಡಿಸಿದ್ದಾರೆ.೨) ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರನೊಬ್ಬ ಕರಪತ್ರ ಹಂಚುವಾಗ ಹಿನ್ನಲೆಯಲ್ಲಿನ ದೇವಸ್ಥಾನಕ್ಕೆ ನಿಯಾನ್ ದೀಪದ ಫಲಕ ಕಂಡು ಬರುತ್ತದೆ. ಇದರಿಂದ ಸುಮಾರು ನೂರು ವರ್ಷಗಳ ಮೊದಲೇ ಅಂದರೆ ವಿದ್ಯುತ್ ಕಂಡು ಹಿಡಿಯುವ ಮೊದಲೇ ನಮ್ಮ ನಾಗರೀಕತೆ ಅತ್ಯುನ್ನತ ಮಟ್ಟದಲ್ಲಿತ್ತು ಎಂದು ತಿಳಿಯುತ್ತದೆ. ೩) ಕೆಳಬೈಲಿನ ಗೋಪಾಲಯ್ಯನವರ ಮನೆಯನ್ನು ಕಥಾನಾಯಕ ಅಕಸ್ಮಾತ್ತಾಗಿ ಸಂಧಿಸುತ್ತಾನೆ. ಅದು ದಟ್ಟ ಕಾಡಿನಲ್ಲಿರುವ ಮನೆ. ಸ್ವಾತಂತ್ರ್ಯ ಹೋರಾಟಗಾರನಾಗಿರುವ ಆತ ಗೋಪಾಲಯ್ಯನವರಿಂದ ಊರಿನಲ್ಲಿ ಯಾವುದೇ ಪೋಸ್ಟಾಫೀಸು, ಆಸ್ಪತ್ರೆ ಹಾಗು ಪೋಲಿಸ್ ಸ್ಟೇಶನ್ ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳುತ್ತಾನೆ. ಅಂತಹ ಕುಗ್ರಾಮ ಅದು. ಸುತ್ತಲೂ ದಟ್ಟವಾದ ಅರಣ್ಯ. ಆದರೆ ಮನೆಯ ಬಳಿ ಹಾದು ಹೋಗಿರುವ ಕರೆಂಟ್ ತಂತಿ ಹಾಗೂ ಟೆಲಿಫೋನ್ ತಂತಿಯನ್ನು ನೋಡಿ ಆನಂದಿಸಬಹುದು. ೪) ಇಡೀ ಕಥೆ ನಡೆಯುವುದು ದಕ್ಷಿಣ ಕನ್ನಡದ ಹವ್ಯಕರ ಮನೆಯೊಂದರಲ್ಲಿ. ಶಿವರಾಮ ಕಾರಂತರು ತಮ್ಮ ಕಾದಂಬರಿಯಲ್ಲಿ ಹೀಗೆಂದು ಉಲ್ಲೇಖಿಸಿದ್ದಾರೆ" ಅವರು ಮಾತನಾಡುತ್ತಿದ್ದ ಭಾಷೆ , ಕನ್ನಡವೇ ಎನ್ನಿಸುವಷ್ಟು ವಿಚಿತ್ರವಾಗಿತ್ತು. ನಮ್ಮ ಮನೆಯ ಭಾಷೆ ಕೂಡ ಕನ್ನಡದ ಒಂದು ಅಪಭ್ರಂಶ ರೂಪವೇ.ಗೋಪಾಲಯ್ಯನವರು ಅವರ ಹೆಂಡತಿಯೊಡನೆ ಮಾತನಾಡುವಾಗ ಸರಾಗವಾಗಿ ಹೈಗನ್ನಡದಲ್ಲಿ (ಹವ್ಯಕ ಕನ್ನಡ ) ಸಂಭಾಷಿಸುತ್ತಿದ್ದರು.ಆದರೆ ಚಲನಚಿತ್ರದಲ್ಲಿ ಮೂಡಿ ಬಂದಿರುವುದು ಕನ್ನಡದ ಗ್ರಾಂಥಿಕ ರೂಪ. ಅದನ್ನೇ ನಿರ್ದೇಶಕರು ಹೈಗನ್ನಡವೆಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ೫) ಕಾದಂಬರಿಯುದ್ದಕ್ಕೂ ಬರುವ ಕಥೆ. ವಯಸ್ಸಾದ ಹಿರಿಯ ಜೀವಗಳೆರೆಡು ತಮ್ಮ ಬಾಳಿನ ಮುಸ್ಸಂಜೆಯಲ್ಲಿ ಅನುಭವಿಸುತ್ತಿರುವ ರಾಗ, ದುಃಖಗಳ ಬಾಳ್ವೆ. ತಮ್ಮ ಅನ್ಯೋನ್ಯತೆ ಪ್ರೀತಿ ಪ್ರೇಮಗಳು, ಸರಸ ವಿರಸಗಳಿಂದ ಅವರು ಓದುಗರ ಮನಸ್ಸುನ್ನು ಆರ್ದ್ರರಾಗಿಸುತ್ತಾರೆ. ಚಲನಚಿತ್ರದಲ್ಲಿ  ಕೇವಲ ಎರಡು ಪೇಲವ ದೃಶ್ಯಗಳಲ್ಲಿ ಇದನ್ನು ತೋರಿಸಿ ಮುಗಿಸಲಾಗಿದೆ. ೬) ಕಥಾನಾಯಕ ಶಿವರಾಮ ಕಾರಂತರು, ಕಾಟು ಮೂಲೆಯ ನಾರಾಯಣ ಎಲ್ಲರೂ ಹವ್ಯಕ ಅಥವಾ ಕೋಟಾ ಬ್ರಾಹ್ಮಣರೇ. ನದಿ ನೀರಿನಲ್ಲಿ ವಸ್ತ್ರ ಕಳಚಿ ಸ್ನಾನ ಮಾಡುವ ದೃಶ್ಯ ತೋರಿಸುವಾಗ ಇಬ್ಬರಿಗೂ ಜನಿವಾರ ಹಾಕುವುದನ್ನು ನಿರ್ದೇಶಕರು ಮರೆತಿದ್ದಾರೆ. ೭)  ಬೆಟ್ಟದ ಜೀವ ಕಾದಂಬರಿ ತನ್ನ ಅಪೂರ್ವವಾದ ಪ್ರಕೃತಿ ಚಿತ್ರಣದಿಂದ ಮನ ಗೆಲ್ಲುತ್ತದೆ. ಆದರೆ ದೃಶ್ಯ ಮಾಧ್ಯಮವಾದ ಚಲನಚಿತ್ರ  ಅಬ್ಭಿಗಳ ಲಾಸ್ಯ, ದಟ್ಟವಾದ ಕಾಡು, ವಿಭಿನ್ನ ಹೊಳೆದಂಡೆಯ ದೃಶ್ಯಗಳನ್ನು ತೋರಿಸಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತು ಹೋಗಿವೆ. ೮) ಆನೆಯನ್ನು ಓಡಿಸಲು ಹೋಗುವಾಗ ಎಲ್ಲರೂ ಕೈಯಲ್ಲಿ ಗರ್ನಾಲು ಅಥವಾ ಬಂದೂಕು ಹಿಡಿದು ಓಡಿ ಹೋಗುವುದು ವಾಡಿಕೆ. ಈ ದೃಶ್ಯ ಮಲೆನಾಡಿನವರೆಲ್ಲರಿಗೂ ಚಿರ ಪರಿಚಿತ. ಆದರೆ ಚಲನಚಿತ್ರ ದಲ್ಲಿ ಗುಂಪೊಂದು ಆನೆಗಳನ್ನು ಓಡಿಸಲು ಸಣ್ಣ ಕೋಲುಗಳು ಹಾಗೂ ಪುಟ್ಟ ಕತ್ತಿಗಳನ್ನು ಹಿಡಿದು ಓಡಿ ಹೋಗುತ್ತಾರೆ.! ೯) ಗೋಪಾಲಯ್ಯನವರ ಮಗ ಶಂಭು ಕಾದಂಬರಿಯಲ್ಲಿ ಒಬ್ಬ ಲಂಪಟನಂತೆ ಚಿತ್ರಿಸಲಾಗಿದೆ. ನಿರ್ದೇಶಕರು ಚಲನಚಿತ್ರದಲ್ಲಿ ಆತನನ್ನು ಸ್ವಾತಂತ್ರ್ಯ ಹೋರಾಟಗಾರನಂತೆ ಬಿಂಬಿಸಲಾಗಿದೆ. ಜೊತೆಗೆ ಲಂಪಟನ ಸ್ಥಾನವನ್ನೂ ಕಾಯ್ದಿರಿಸಲಾಗಿದೆ. ಇದು ಬಹುಶಃ ಉದ್ದೇಶ ಪೂರ್ವಕವಿರಲಾರದು. ೧೦) ಬೆಟ್ಟದ ಜೀವ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಲನಚಿತ್ರ ಎಂಬ ಪ್ರಶಸ್ತಿ ಗಳಿಸಿದೆ. ಕಾರಣ ಗೊತ್ತೇ? ಇಲ್ಲಿ ಬ್ರಿಟಿಶರನ್ನು ಹುಲಿಯ ರೀತಿಯಲ್ಲಿ ಪ್ರತಿಮಾತ್ಮಕವಾಗಿ ತೋರಿಸಲಾಗಿದೆ. ಕನಸಿನಲ್ಲಿ ಹುಲಿಗಳಿಗೆ ( ಬ್ರಿಟಿಶರಿಗೆ ) ಹೆದರುವ ಕಥಾನಾಯಕ , ಕೊನೆಗೆ ಕರ್ಪಿನಲ್ಲಿ ( ಪಂಜರದಲ್ಲಿ ) ಬಿದ್ದ ನಿಜವಾದ ಹುಲಿಯನ್ನು ಸಾಯಿಸದೆ ಇರುವಂತೆ ಜನರಿಗೆ ಉಪದೇಶ ನೀಡಿ ಅಹಿಂಸೆಯ ಮಹತ್ವವನ್ನು ಸಾರುತ್ತಾನೆ.ಈ ಚಿತ್ರಣದಲ್ಲಿ ಕಥೆ ತನ್ನ ಎರಡು ಸಾಧ್ಯತೆಗಳನ್ನು ಕಳೆದುಕೊಳ್ಳುತ್ತದೆ.ಹುಲಿಯ ಬೇಟೆಯನ್ನು ರೋಚಕವಾಗಿ ತೋರಿಸುವುದು/ಬ್ರಿಟಿಶರ ವಿರುದ್ದ ಉಗ್ರವಾಗಿ ಹೋರಾಡುವುದು. ಇಂತಹ ಹಲವಾರು ನ್ಯೂನತೆಗಳಿಂದ ಬೆಟ್ಟದ ಜೀವ ಯಾವುದೇ ರೀತಿಯಲ್ಲಿ ಪ್ರೇಕ್ಷಕರ ಮನ ಗೆಲ್ಲದೇ ಕೇವಲ ಪ್ರಶಸ್ತಿಗಾಗಿ ಮೊಳ ನೇಯ್ದಿರುವ ಒಂದು ನಿರ್ಜೀವ ಬೆಟ್ಟದಂತೆ ಕಾಣುತ್ತದೆ. ( ಬೆಟ್ಟದ ಜೀವ ಕಾದಂಬರಿಯ ಸಂಕ್ಷಿಪ್ತ ವಿಮರ್ಶೆ ಬೇಕಾದರೆ ವಿಸ್ಮಯ ನಗರಿಯ ಓದುಗರಾದ ತೇಜಸ್ವಿನಿ ಹೆಗಡೆ ಬರೆದಿರುವ ಲೇಖನವನ್ನು ವೀಕ್ಷಿಸಬಹುದು  http://www.vismayanagari.com/node/5173)  

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಪ್ರಿಯರೇ,

ನನ್ನ ‘ಬೆಟ್ಟದ ಜೀವ’ ಚಲನಚಿತ್ರ ನೋಡಿ ‘ವಿಸ್ಮಯನಗರಿ’ಯಲ್ಲಿ ಪ್ರತಿಕ್ರಿಯಿಸಿದ್ದೀರಿ.  ಅದರ ‘ಲಿಂಕ್’ ಅನ್ನೂ ನನಗೆ ಕಳುಹಿಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು.  ನಿಮ್ಮ ಅಭಿಪ್ರಾಯಕ್ಕೆ ಉತ್ತರಿಸುವುದು ಉಚಿತವೆಂದು ಭಾವಿಸಿ ಬರೆಯುತ್ತಿದ್ದೇನೆ.  ನೀವು ಚಿತ್ರದಲ್ಲಿ ಇಷ್ಟವಾಗದ ಹತ್ತು ಅಂಶಗಳನ್ನು ಪಟ್ಟಿ ಮಾಡಿದ್ದೀರಿ.  ಅದೇ ಅನುಕ್ರಮದಲ್ಲಿ ಓದಿಕೊಳ್ಳಬೇಕಾಗಿ ವಿನಂತಿ.

೧. ‘ಬೆಟ್ಟದ ಜೀವ’ವನ್ನು ಕಾರಂತರು ಬರೆದದ್ದು ಸುಮಾರು ೧೯೪೩ನೇ ಇಸವಿಯ ಆಸುಪಾಸಿನಲ್ಲಿ.  ಕಾದಂಬರಿಯಲ್ಲಿ ಯುದ್ಧದ ಪ್ರಸ್ತಾಪ ಬರುವುದರಿಂದ, ಇದರ ಕಾಲ ಬಹುಶಃ ಸುಮಾರು ಎರಡನೇ ಮಹಾಯುದ್ಧದ ಸಮಯ (೧೯೩೯-೪೫) ಎಂದು ಭಾವಿಸಬಹುದು.  ನನ್ನ ಚಿತ್ರಕ್ಕೂ ಅದೇ ಆವರಣವನ್ನು ಆಯ್ದುಕೊಂಡೆ. ಚಿತ್ರದಲ್ಲಿ ಬಳಸಿರುವ ಪೊಲೀಸ್ ಧಿರಿಸು, ಆ ಕಾಲದ್ದೇ...  ಇದಕ್ಕಾಗಿ ಸಂಶೋಧನೆ ಕೂಡ ನಡೆಸಿ, ಫೋಟೋ ಸಂಗ್ರಹಿಸಿ ಕಾಸ್ಟ್ಯೂಮ್ ತಯಾರಿಸಿದ್ದೇವೆ.  ಇನ್ನೊಮ್ಮೆ ಗಮನಿಸಿ...

೨. ಹೌದು, ಚಿತ್ರದ ಮೂರನೇ ಶಾಟ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಗೋಪುರದ ನಿಯಾನ್ ದೀಪ ಬಂದಿದೆ.  ನನಗೆ ಚಿತ್ರದಲ್ಲಿ ಅದೇ ದೇವಸ್ಥಾನದ ಪರಿಸರವನ್ನು ತೋರಿಸಬೇಕಿತ್ತು.  ಯಾವ ಕೋನದಿಂದ ಹುಡುಕಿದರೂ ದೀಪವನ್ನು ಅವಾಯ್ಡ್ ಮಾಡಲು ಸಾಧ್ಯವಾಗಲಿಲ್ಲ.  ಅದನ್ನು ಬೇರೆ ವಸ್ತುವಿನಿಂದ ಮುಚ್ಚುವುದು ಕೂಡ ಸಾಧ್ಯವಾಗಲಿಲ್ಲ.  ದೇವಸ್ಥಾನದವರನ್ನು ತೆಗೆಯಲು ಕೇಳಿದಾಗ ಅವರು ಕೂಡ ಒಪ್ಪಲಿಲ್ಲ.  ಇದಕ್ಕೆ ಬದಲಿಯಾಗಿ ನಮಗೆ ಅಂಥ ದೇವಸ್ಥಾನದ ಸೆಟ್ ಹಾಕುವ ಆರ್ಥಿಕ ಶಕ್ತಿ ಇರಲಿಲ್ಲ.  ಹಾಗಾಗಿ ಅನಿವಾರ್ಯವಾಗಿ ಅದು ಕಾಣುತ್ತದೆ ಎಂದು ಗೊತ್ತಿದ್ದರೂ ಉಳಿದ ಅಂಶಗಳು ಮುಖ್ಯ ಅನಿಸಿದ್ದರಿಂದ ಅಲ್ಲೇ ಚಿತ್ರೀಕರಿಸಿದೆವು... (ನಮ್ಮ ತಪ್ಪನ್ನು ಹೊಟ್ಟೆಗೆ ಹಾಕಿಕೊಳ್ಳಿ ಗುರುವೇ)

೩. ಮೇಲಿನಂತೆಯೇ, ಕೂಜುಗೋಡಿನ ಆ ಮನೆಯವರೂ ತಂತಿ ತೆಗೆಯಲು ಹೊರಟಾಗ ಇದೇ ತಕರಾರು ತೆಗೆದರು. ಅದು ಕಾಣದಂತೆ ಮಾಡಲು ಸಾಕಷ್ಟು ಶ್ರಮಿಸಿದೆವು, ಆಗಲಿಲ್ಲ.  ಇದನ್ನು ಮರೆ ಮಾಡಲು ಇದ್ದದ್ದು ಡಿಜಿಟಲ್ ತಂತ್ರಜ್ಞಾನ ಒಂದೇ.  ಎಲ್ಲಿಯ ‘ಎಂಥಿರನ್’ ಎಲ್ಲಿಯ ‘ಬೆಟ್ಟದಜೀವ!’  ಜೊತೆಗೆ ಆ ಖರ್ಚು ಭರಿಸುವ ಶಕ್ತಿಯೂ ನಮ್ಮಲ್ಲಿರಲಿಲ್ಲ. ಹಾಗಾಗಿ ಅದನ್ನೂ ಹಾಗೇ ಬಿಟ್ಟೆವು.  (ಅದು ಚಿತ್ರದಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಹಗ್ಗ ಕಟ್ಟಿದಂತೆ ಕಾಣುತ್ತದೆ ಎಂಬ ಸಮಾಧಾನದೊಂದಿಗೆ) ಮೇಲಿನ ಎರಡೂ ಪ್ರಕರಣಗಳಲ್ಲಿ ನಿಮಗೆ ಉಂಟಾಗಿರುವ ಕಸಿವಿಸಿ ನಮಗೂ ಉಂಟಾಗಿದೆ... ಇದಕ್ಕಾಗಿ ಕನ್ನಡ ಪ್ರೇಕ್ಷಕರ ಹಾಗೂ ತಮ್ಮ ಕ್ಷಮೆ ಕೋರುತ್ತೇನೆ.  ಕ್ಷಮಿಸುವಿರಾ?

೪.‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಕಾರಂತರು ಹವ್ಯಕರ ಕಥೆ ಹೇಳುವಾಗಲೂ ಹವ್ಯಕ ಭಾಷೆಯನ್ನು ಬಳಸಿಲ್ಲ.  ತಮ್ಮ ಮಾಮೂಲಿ ಕಾದಂಬರಿಯ ಭಾಷಾ ಶೈಲಿಯನ್ನು ಬಳಸಿದ್ದಾರೆ.  ನಾವು ಉದ್ದೇಶಪೂರ್ವಕವಾಗಿಯೇ ಚಿತ್ರದಲ್ಲಿ ಅದಕ್ಕೆ ಹವ್ಯಕ ಸ್ಲ್ಯಾಂಗ್ ಕೊಡಲು ಪ್ರಯತ್ನಿಸಿದೆವು.  ಗೋಪಾಲಯ್ಯ ತಮ್ಮ ಪತ್ನಿಯೊಂದಿಗೆ ಮಾತ್ರ ಆ ಭಾಷೆ ಬಳಸುತ್ತಾರೆ.  ಮನೆಗೆ ಬಂದ ಅತಿಥಿಯೊಂದಿಗೆ ಅವನ ಶೈಲಿಯ ಭಾಷೆಯಲ್ಲಿ ಮಾತಾಡಲು ಪ್ರಯತ್ನಿಸುತ್ತಾರೆ, ಹಾಗೇ ಆಳು-ಕಾಳುಗಳೊಂದಿಗೆ ಅವರ ಧಾಟಿಯಲ್ಲಿ... ಇದು ಸಹಜ ಅಲ್ಲವೇ?  ಆ ಅತಿಥಿ ಮೈಸೂರು ಸೀಮೆಯವನು ಎಂಬುದನ್ನು ತಾವು ಗಮನಿಸಬೇಕು.  ಇನ್ನೊಂದು ಮಾತು, ಆ ಪ್ರದೇಶದಲ್ಲಿ ಪ್ರತಿ ಹದಿನೈದು ಕಿಲೋಮೀಟರ್‌ಗೆ ಭಾಷೆ, ಶೈಲಿ, ನುಡಿಗಟ್ಟು ಬದಲಾಗುವುದನ್ನು ನಾನು ಗಮನಿಸಿದ್ದೇನೆ.  ನಮ್ಮೊಂದಿಗೆ ಚಿತ್ರೀಕರಣದ ಸಂದರ್ಭದಲ್ಲಿ ಹವ್ಯಕರೊಬ್ಬರನ್ನು ಇಟ್ಟುಕೊಂಡೆ ಚಿತ್ರೀಕರಿಸಿದೆವು..  ಆದರೂ ಕೆಲವು ಕಡೆ ನಮ್ಮ ಕಲಾವಿದರು ತಪ್ಪು ಮಾಡಿದ್ದಾರೆ.  ತಪ್ಪೊಪ್ಪಿಗೆ ಮಾಡಿಕೊಳ್ಳುತ್ತೇವೆ... ಆಗಬಹುದೇ?

೫.ನಾನು ಚಿತ್ರದಲ್ಲಿ ಚಿತ್ರೀಕರಿಸಿರುವುದು ಪೇಲವ ದೃಶ್ಯಗಳು ಎಂದು ನಿಮಗೆ ಅನಿಸಿದರೆ, ನಾನೇನು ಮಾಡಲಿ? ಅದು ನಿಮ್ಮ ಅಭಿಪ್ರಾಯ.  ಆದರೆ, ಇದನ್ನೇ ಮೆಚ್ಚಿಕೊಂಡು ಸಾಕಷ್ಟು ಚಿತ್ರಪ್ರೇಮಿಗಳು ಇದ್ದಾರೆ... ಅಷ್ಟು ಜನ ಮೆಚ್ಚಿಕೊಂಡಿದ್ದರಿಂದಲೇ ಚಿತ್ರ ನಾಲ್ಕನೇ ವಾರಕ್ಕೆ ಮುಂದುವರಿದಿದೆ...  ಇತ್ತೀಚಿನ ವರ್ಷಗಳಲ್ಲಿ ಯಾವುದೇ ‘ಆಪ್‌ಬೀಟ್’ ಚಿತ್ರ ಇಷ್ಟು ಓಡಿರಲಿಲ್ಲ ಎಂದು ಪತ್ರಿಕೆಗಳು ಬರೆದಿವೆ.

೬. ನಿಮ್ಮಗೆ ಗೊತ್ತಿರಲಿ, ಚಿತ್ರದಲ್ಲಿ ಬರುವ ‘ಶಿವರಾಮು’ ಕಾದಂಬರಿಕಾರ ಕಾರಂತರು ಎಂದು ನಾನು ಎಲ್ಲೂ ಹೇಳಿಲ್ಲ.  ಕಾದಂಬರಿಯಲ್ಲೂ ಶಿವರಾಮ ಕಾರಂತರೂ ಹಾಗೆ ಹೇಳಿಲ್ಲ.  ಇಡೀ ರಚನೆ ಪ್ರಥಮಪುರುಷದಲ್ಲಿ ಇರುವುದರಿಂದ ಹೀಗೆ ಓದುಗರು ಭಾವಿಸುತ್ತಾರೆ.  ಇದನ್ನು ಕಾರಂತರು ಎಲ್ಲೂ ಒಪ್ಪಿಲ್ಲ, ಹಾಗೆಯೇ ಅಲ್ಲಗಳೆದಿಲ್ಲ.   ಹಿಂದೆಯೇ ಹೇಳಿದಂತೆ, ನನ್ನ ಚಿತ್ರದಲ್ಲಿ ಶಿವರಾಮು ಮೈಸೂರು ಸೀಮೆಯವನು.  ನಿಮ್ಮ ಇನ್ನೊಂದು ಆರೋಪ ಇದೆಯಲ್ಲ, ಜನಿವಾರದ್ದು, ಅದು ನಿಮ್ಮ ತಪ್ಪು ಗ್ರಹಿಕೆ.  ನದಿಯಲ್ಲಿಯ ಸ್ನಾನದ ದೃಶ್ಯದಲ್ಲಿ ಗೋಪಾಲಯ್ಯನವರು ಜನಿವಾರ ಬಳಸಿದ್ದಾರೆ.  ದಯಮಾಡಿ ಇನ್ನೊಮ್ಮೆ ಚಿತ್ರನೋಡಿ ಸ್ವಾಮಿ..

೭. ಇದೂ ಕೂಡ ನಿಮ್ಮ ಸ್ವಂತ ಅಭಿಪ್ರಾಯ... ಉತ್ತರದ ಅವಶ್ಯಕತೆಯಿಲ್ಲ ಎಂದು ಭಾವಿಸುತ್ತೇನೆ.

೮. ಆಗಿನ ಕಾಲದಲ್ಲಿ ಎಲ್ಲರ ಬಳಿಯೂ ಬಂದೂಕು ಇರುತ್ತಿರಲಿಲ್ಲ.  ಅಲ್ಲಿ ಆನೆ ಓಡಿಸಲು ಹೋದ ಸುಮಾರು ೧೦-೧೫ ಜನರಲ್ಲಿ ಮೂವರು ಬಂದೂಕು ಹಿಡಿದಿದ್ದಾರೆ.  ಇನ್ನಿತರರು ಇತರೆ ಆಯುಧ ಹಿಡಿದಿದ್ದಾರೆ.  ಎಲ್ಲರೂ ಬಂದೂಕು ಹಿಡಿದರೆ ಆಗಲೂ ನೀವು ಮೂಗು ಮುರಿಯುತ್ತಿದ್ದಿರೋ ಏನೋ?

೯. ಕಾರಂತರು ಕಾದಂಬರಿಯಲ್ಲಿ ಶಂಭುವನ್ನು ಎಲ್ಲೂ ಲಂಪಟನಂತೆ ಚಿತ್ರಿಸಿಲ್ಲ.  ಒಂದು ಪಾತ್ರ ಮಾತ್ರ ಹಾಗೆ ಹೇಳುತ್ತದೆ.  ಅದೇ ನಿಜ ಎಂದು ನೀವು ಏಕೆ ಭಾವಿಸುತ್ತೀರಿ?  ಅದು ಲಕ್ಷ್ಮಿಯ ಅಭಿಪ್ರಾಯ... ಚಿತ್ರಕ್ಕೆ ಸ್ವಾತಂತ್ರ್ಯದ ಹಿನ್ನೆಲೆ ನಮ್ಮ ಅಶಯವನ್ನು ಬೆಂಬಲಿಸುತ್ತದೆ ಎಂದು ನಿರ್ಧರಿಸಿ, ಕಾದಂಬರಿಯ ಹಕ್ಕುಗಳನ್ನು ಪಡೆಯುವಾಗ,  ಹಕ್ಕುದಾರರಿಗೆ ತಿಳಿಸಿ ರೈಟ್ಸ್ ಪಡೆದಿದ್ದೇನೆ.  ಯಾವುದೇ ಕೃತಿ ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋಗುವಾಗ ಬೇರೆಯದೇ ಕಲಾಕೃತಿಯಾಗುತ್ತದೆ; ಕಲಾಕೃತಿಯಾಗಬೇಕು...  ಇದು ಬರೀ ಅನುವಾದವಲ್ಲ ಮಿತ್ರಾ, ರೂಪಾಂತರ...

೧೦. ನಿಜ, ಹುಲಿ ಬ್ರಿಟಿಷರ ಪ್ರತಿಮಾರೂಪ.  ಶಿವರಾಮು ಗಾಂಧೀವಾದಿಯಾಗಿರುವುದರಿಂದ ಅಹಿಂಸೆ ತತ್ವ ಪಾಲಿಸುತ್ತಾನೆ.  ಗಾಂಧೀವಾದವನ್ನು ನೆನಪಿಸಿಕೊಳ್ಳಿ.  ಹುಲಿಯನ್ನು ಕೊಲ್ಲುವ ರೋಚಕತೆ, ಬ್ರಿಟಿಷರ ವಿರುದ್ಧದ ಉಗ್ರತೆ ಎರಡೂ ನನ್ನ ಚಿತ್ರಕ್ಕೆ ಬೇಡಾಗಿತ್ತು, ಹಾಗಾಗಿ ಬಳಸಿಲ್ಲ.

ಇನ್ನೂ ಚಿತ್ರದಲ್ಲಿ ಹಲವಾರು ನ್ಯೂನತೆಗಳಿವೆ ಎಂದು ತಿಳಿಸಿದ್ದೀರಿ.  ಇರಬಹುದು.  ಯಾವ ಕೃತಿ ಸಂಪೂರ್ಣ ಹೇಳಿ?

ಈ ಪತ್ರ ಮುಗಿಸುವ ಮುಂಚೆ, ನನ್ನದು ಒಂದೇ ಒಂದು ಪುಟ್ಟ ಸಲಹೆ,

ಯಾವುದೇ ಕಲಾಕೃತಿಯನ್ನು ನೋಡುವಾಗ ಅದನ್ನು ಆಸ್ವಾದಿಸಲು ನೋಡಿ.  ತಪ್ಪು ಹುಡುಕುತ್ತಾ ಕುಳಿತರೆ ಯಾವ ಕಲಾಕೃತಿಯನ್ನೂ ಅನುಭವಿಸಲು ಸಾಧ್ಯವಿಲ್ಲ.  ಆದರೂ ಕನ್ನಡ ಚಿತ್ರ ನೋಡಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

ನಮಸ್ಕಾರ

ಪಿ.ಶೇಷಾದ್ರಿ
ಚಿತ್ರನಿರ್ದೇಶಕ
(೫ ಜುಲೈ ೨೦೧೧)

ಬಾಲ ಚಂದ್ರ ಧ, 07/06/2011 - 20:17

ಪಿ ಶೇಷಾದ್ರಿಯವರೇ,ತಪ್ಪಾದಲ್ಲಿ ಕ್ಷಮೆ ಕೇಳಿ, ತಪ್ಪಿಲ್ಲದಿದ್ದಲ್ಲಿ ಸಮಜಾಯಷಿ ನೀಡಿ, ನನ್ನ ವೈಯುಕ್ತಿಕ ಅಭಿಪ್ರಾಯಕ್ಕೆ ಯಾವುದೇ ವಿವರಣೆ ನೀಡದೇ , ನೀವು ಬರೆದ ಪ್ರತಿಕ್ರಿಯೆ ಖುಷಿ ನೀಡಿತು. ನಿಮ್ಮ ಸೌಜನ್ಯ ಬಹಳ ಇಷ್ಟವಾಯಿತು. ನಿಮ್ಮ  ನೇರ ವಿನಯವಂತಿಕೆಗೆ ವಂದನೆ
ಒಂದೆರೆಡನ್ನು ಬಿಟ್ಟರೆ  ನಿಮ್ಮ ಎಲ್ಲಾ ಸಮಜಾಯಿಷಿಗಳನ್ನು ಅನಿವಾರ್ಯವಾಗಿ ಒಪ್ಪಲೇ ಬೇಕಾಗಿದೆಏಕೆಂದರೆ, ನಾನು ಚಿತ್ರವನ್ನು ಒಬ್ಬ ಪ್ರೇಕ್ಷಕನಾಗಿ ನೋಡಿದ್ದೇನೆ ಅಷ್ಟೇ? ನಿರ್ದೇಶಕರ ಇತಿ ಮಿತಿಗಳುನನಗೆ ಹೇಗೆ ತಾನೇ ತಿಳಿಯಬೇಕು.ಆದರೂ ಇವೆರೆಡು ಮಾತು ಮಾತ್ರ ಹೇಳಲೇ ಬೇಕಾಗಿದೆ.
೧) ಕಾದಂಬರಿಯಲ್ಲಿ ಬರುವ ಶಿವರಾಮುವಿನ ಪಾತ್ರ ಖಂಡಿತ ಶಿವರಾಮ ಕಾರಂತರದೇ. ಸಾಕ್ಷಿಯಾಗಿ ಮುನ್ನುಡಿಯಲ್ಲಿ ಈ ಮಾತುಗಳಿವೆ "ತೆಂಕಣ ದಿಕ್ಕಿನಲ್ಲಿ ಕಳಂಜಿ ಮಲೆ ಎಂಬ ಬೆಟ್ಟದ ಸಾಲಿದೆ. ಆ ಭವ್ಯ ನೋಟ ನನ್ನನ್ನು ಅಲ್ಲಿಗೂ ಆಕರ್ಷಿಸಿತು. ಮಿತ್ರರೊಡನೆ ಆ ಬೆಟ್ಟದ ಹಾದಿಯಾಗಿ ಏರಿ ಇಳಿಯುವ ಸಾಹಸಮಾಡಿದೆ. ಕಾಡಿನ ದಾರಿ ತುಳಿಯುತ್ತಿದ್ದ ಹೊತ್ತಿನಲ್ಲಿ- ದುರ್ಗಮ ಕಾಡಿನ ನಡುವೆ ಒಂದು ವಿಶಾಲ ಅಡಿಕೆ ತೋಟ ಕಂಡೆ. ಏಳೆಂಟು ಎಕ್ರೆ ಕಾಡನ್ನು ಸವರಿ ಒಬ್ಬ ಮುದುಕ, ದೇರಣ್ಣ ಗೌಡ ಎಂಬಾತ ಅಲ್ಲಿ- ಕೆಲವೇ ಕೂಲಿಗಳ ಜತೆಗೆ ನೆಲಸಿ ಬಲು ವಿಶಾಲ ಅಡಿಕೆ ತೋಟ ಮಾಡಿದ್ದನ್ನು ಕಂಡೆ. ಆತನಿಗೆ ಅರುವತ್ತು ವರ್ಷ ಪ್ರಾಯ ಸಂದಿರಬಹುದು.ತಾನೊಬ್ಬನೇ ಅಲ್ಲಿ ಕೂಲಿಗಳು ಜತೆಗೆ ದುಡಿದು ಮಾಡಿದ ಆ ತೋಟ ನನಗೆ ಅಚ್ಚರಿ ಹುಟ್ಟಿಸಿತು. ಮುಂದೇ ಅದೇ ಪರಿಸರದಲ್ಲಿ ಅಲೆದಾಡಿದಾಗ ಕಟ್ಟ ಎಂಬಲ್ಲಿ ಗೋವಿಂದಯ್ಯ ಎಂಬಹಿರಿಯರು ಅತಿಸಾಹಸದ ಕೃಷಿಕರಾಗಿ ದುಡಿದುದನ್ನು ಕಂಡೆ .......................ಅವರ ಧೀಮಂತಿಕೆ, ಸಾಹಸಬೆರಗುಗೊಳಿಸಿತು. ಅವರ ಬದುಕಿನ ಸಮಗ್ರ ಚಿತ್ರಣ ಕಣ್ಮುಂದೆ ಕುಣಿಯತೊಡಗಿತು......................ಗೋವಿಂದಯ್ಯನವರ ಬದುಕಿನ ಸಾರಸರ್ವಸ್ವವನ್ನೂ ಬರೆದು ಮುಗಿಸಿದೆ."
 ೨) ಇನ್ನುಳಿದದ್ದು ಜನಿವಾರದ ಕಥೆ. ಗೋವಿಂದಯ್ಯ ಜನಿವಾರ ಧರಿಸಿಲ್ಲ ಎಂದು ನಾನೆಲ್ಲೂ ಹೇಳಿಲ್ಲ.ಕಾಟುಮೂಲೆ ನಾರಾಯಣ ಮತ್ತು ಶಿವರಾಮು ಪಾತ್ರಧಾರಿಯ ಹೆಗಲಲ್ಲಿ ಜನಿವಾರವಿಲ್ಲ ಎಂದು ಹೇಳಿದ್ದೇನೆ.ಇದೇನು ಅಂಥ ದೊಡ್ಡ ವಿಷಯವೇನಲ್ಲ. ಆದರೂ ಚಿತ್ರವನ್ನೂ ಇಂಥ ಸಣ್ಣ ಪುಟ್ಟ ನ್ಯೂನತೆಗಳು ನುಂಗಿ ಹಾಕದಿರಲೆಂದು ನಮ್ಮ ಆಶಯ.
ಖಂಡಿತ ಯಾವ ಕೃತಿಯೂ ನ್ಯೂನತೆಯಿಂದ ಮುಕ್ತವಾಗಿಲ್ಲ. ಆದರೆ ಮೇಲ್ನೋಟಕ್ಕೆ ಕಾಣುವ ನ್ಯೂನತೆಗಳಿದ್ದರೆಪ್ರೇಕ್ಷರಿಗೆ ಕಿರಿಕಿರಿ ಮೂಡುವುದು ಸಹಜ. ಇಂಥ ಸಮಯದಲ್ಲಿ ತರಾಸು ರವರ ಕಾದಂಬರಿ "ಹಂಸಗೀತೆ" ನೆನಪಿಗೆ ಬರುತ್ತಿದೆ. ಒಂದು ಶ್ರೇಷ್ಟ ಕಾದಂಬರಿಯನ್ನು ಆ ರೀತಿಯಲ್ಲಿ ಚಿತ್ರವಾಗಿಸಿದರೆ ಚೆನ್ನ ಎಂದು  ನಮ್ಮ ಆಶಯ. ನಮ್ಮ ನಿರೀಕ್ಷೆಗಳು ಬೆಟ್ಟದಷ್ಟಿದ್ದುದರಿಂದ ಚಿತ್ರ ನಮಗೆ ಹೆಚ್ಚಿನ ಖುಷಿ ಕೊಡುವುದರಲ್ಲಿ ಸೋತಿವೆ ಎನ್ನಬಹುದು. ಇಲ್ಲಿ ತಪ್ಪು ನಮ್ಮ ನಿರೀಕ್ಷೆಯದ್ದೇ ಇರಬಹುದು.
ಕೊನೆಯದಾಗಿ ಒಂದು ಖಾಸಗಿ ವಿನಂತಿ,ಈಗಿನ ಪ್ರೇಕ್ಷಕರ ಮುಂದೆ ಆಯ್ಕೆಗಳು ಹೆಚ್ಚು. ಕನ್ನಡ ಚಿತ್ರವೊಂದು ಅದರಲ್ಲೂ ಕಲಾತ್ಮಕ ಚಿತ್ರಕ್ಕೆ ಪ್ರೇಕ್ಷಕರ ಸಂಖ್ಯೆ ಬಹಳ ಸೀಮಿತ. ಬೆಂಗಳೂರಿನ ಎರಡು ದುಬಾರಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವ " ಬೆಟ್ಟದ ಜೀವ", ವಾರಾಂತ್ಯದಲ್ಲಿ ಕುಟುಂಬ ಸಮೇತ ನೋಡಬೇಕೆಂದರೆ ಸುಮಾರು ೧೦೦೦ ರೂ ಖರ್ಚಿನ ಬಾಬ್ತುಕಾರಂತರ ಆಶಯ ಸಾಮಾನ್ಯರಿಗೆ ಮುಟ್ಟುವುದಾದರೂ ಹೇಗೆ?
ತಪ್ಪು ಹುಡುಕುವ ಭರದಲ್ಲಿ ಎಲ್ಲಾದರೂ ನಿಂದಿಸಿದ್ದೇನೇ ಎನ್ನಿಸಿದರೆ, ವಯಸ್ಸಿಗೆ ಮೀರಿದ ವರ್ತನೆ ಎನ್ನಿಸಿದರೆ, ಕ್ಷಮೆ ಇರಲಿಸಸ್ನೇಹಬಾಲ ಚಂದ್ರ. 

Ashwath paani ಗುರು, 07/07/2011 - 12:15

ತಪ್ಪಾದಲ್ಲಿ ಕ್ಷಮೆ ಕೇಳಿ, ತಪ್ಪಿಲ್ಲದಿದ್ದಲ್ಲಿ ಸಮಜಾಯಷಿ ನೀಡಿ, ನನ್ನ ವೈಯುಕ್ತಿಕ ಅಭಿಪ್ರಾಯಕ್ಕೆ ಯಾವುದೇ ವಿವರಣೆ ನೀಡದೇ , ನೀವು ಬರೆದ ಪ್ರತಿಕ್ರಿಯೆ ಖುಷಿ ನೀಡಿತು. ನಿಮ್ಮ ಸೌಜನ್ಯ ಬಹಳ ಇಷ್ಟವಾಯಿತು. ನಿಮ್ಮ  ನೇರ ವಿನಯವಂತಿಕೆಗೆ ವಂದನೆ............. ರಿ ಸ್ವಾಮಿ ಅದು ನಿಮ್ ವಿಮರ್ಶೆ ನೋಡಿ ವ್ಯಂಗ್ಯ ಮಾಡಿರೋ ಹಾಗಿದೆ. ನಿಮ್ ಬೆನ್ನ ನೀವೆ ನೆಕ್ಕೊತಿರ?

ಬಾಲ ಚಂದ್ರ ಗುರು, 07/07/2011 - 12:33

ಪ್ರಿಯ ಅಶ್ವಥ್ ಪಾಣಿಯವರೇ,ಅದು ಕೇವಲ ನನ್ನನ್ನು ಮಾತ್ರ ಉದ್ದೇಶಿಸಿ ಕೇಳಿದ್ದರೆ ವ್ಯಂಗ್ಯ ಎನ್ನಬಹುದಿತ್ತು.ಆದರೆ ಸಮಸ್ತ ಕನ್ನಡ ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ. ಅಂದರೆ ಎಲ್ಲಾ ಕನ್ನಡ ಪ್ರೇಕ್ಷಕರಲ್ಲಿ ವ್ಯಂಗ್ಯವಾಗಿಕ್ಷಮೆ ಕೇಳಿದ್ದಾರೆ ಎನ್ನುತ್ತೀರಾ?ಸಸ್ನೇಹಬಾಲ ಚಂದ್ರ

ಸೂರಿ ಧ, 07/13/2011 - 12:18

       ಶೇಷಾದ್ರಿಯವರೆ ಬಾಲಚ೦ದ್ರ ರವರ ಅನಿಸಿಕೆಗಳು ಉತ್ತಮವಾಗಿವೆ. ಒ೦ದು ಉತ್ತಮ ಚಿತ್ರ ಮಾಡುವಾಗ ಕೆಲವು ನ್ಯೂನ್ಯತೆಗಳು ಸಾಮಾನ್ಯ
ಆದರೆ ಕನ್ನಡದಲ್ಲಿ ಕಾದ೦ಬರಿ ಆದಾರಿತ ಚಿತ್ರಗಳು ಇನ್ನು ಹೆಚ್ಚು ಬೇಕು. ಅವುಗಳು ಸಾಹಿತ್ಯಕ್ಕೆ ಯಾವುದೇ ದೋಷ ತರದ೦ತಿರಬೇಕು.

Lokesh Kumar (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 07/26/2011 - 20:39

Sheshadri avare,
E chitra nodabeku anta namage bahala aase, aadare, naviruva deshadalli, namage, kannada chitragalu nodalu siguvudu bahala aparoopa, illave illa anna bahudu, Naanu, Americadalli, Minneapolis emba nagaradalli iddene, dayavittu, namage, ee chitra noduva bhagya karunisi. Kannada chitra galu illi barodilla, aadarinda, naavu kelavu baari pirated chitra noda bekagutade(Kshame irali sir)..:(. Kaarana, naavu kannada chitra rangada abhimani galu. Chitra nodale bekemba chata. Namma vinanti yenendare, eega, kannada chitra galannu, Youtube/Movies nalli, atava Netflix anta site galalli, chitra galannu official release maadalu sadyavo? Naanu/Nannatavaru, hana kottu nodalu ready iratare.
Naanu. idakke munche Poona nalli idde, allu ide golu.
Dayavittu, nimma abhipraya tilisi.
Loki

ನಿನಾ ಬಿಲ್ಲ೦ಪದವು (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/06/2011 - 12:17

ಈ ಚಿತ್ರ ನಮ್ಮಲ್ಲಿ ಚಿತ್ರಿಕಣವಾಗಿಲ್ಲ ಅನ್ನೋದೆ ಬೇಸರ....

Ashwath paani ಧ, 07/06/2011 - 12:41

ಯಾವುದೇ ಕಲಾಕೃತಿಯನ್ನು ನೋಡುವಾಗ ಅದನ್ನು ಆಸ್ವಾದಿಸಲು ನೋಡಿ.  ತಪ್ಪು ಹುಡುಕುತ್ತಾ ಕುಳಿತರೆ ಯಾವ ಕಲಾಕೃತಿಯನ್ನೂ ಅನುಭವಿಸಲು ಸಾಧ್ಯವಿಲ್ಲ.  ಆದರೂ ಕನ್ನಡ ಚಿತ್ರ ನೋಡಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು...............ಇಷ್ಟು ಮಾತ್ರ ಹೇಳಿ ನಿಮ್ಮ ಪತ್ರ ಮುಗಿಸಿದ್ದಾರೆ ನಿಮ್ಮ ಉತ್ತರ ಸಾಕಾಗಿತ್ತು ಎಂಬುದು ನನ್ನ ಭಾವನೆ. ಇಡೀ ಸಿನಿಮಾ ಒಂದು ಒಳ್ಳೇ ಕಾಲಕೃತಿ ಹಾಗಿತ್ತು. ನಿಜಕ್ಕೂ ಅಸಾಧಿಸಿದ್ದೇನೆ. ಧನ್ಯವಾದಗಳು ಶೇಷಾದ್ರಿ ಅವರಿಗೆ.

ಬಾಲ ಚಂದ್ರ ಅವರೆ,
ನಿಮ್ಮ ಬರವಣಿಗೆಯ ಶೈಲಿ ನಾಟಕೀಯವಾದರೂ ತುಂಬಾ ಚೆನ್ನಾಗಿದೆ! ಶೇಷಾಧ್ರಿ ಅವರ ಪ್ರತಿಕ್ರಿಯೆ ಕೂಡ ಅಷ್ಟೇ ಅಧ್ಬುತವಾಗಿದೆ! ಈ ವಿಮರ್ಷೆ ಒಂತರಾ "ಕಿಕ್" ಕೊಟ್ಟಿತು!ಆದು ಹೇಗೇ ಇರಲಿ, ಕನ್ನಡಿಗನಾಗಿ, ಒಬ್ಬ ಚಿತ್ರ ಪ್ರೇಮಿಯಾಗಿ, ಅದರಲ್ಲೂ ಕನ್ನಡ ಚಲನಚಿತ್ರ ವೆಬ್‍ಸೈಟ್ ಒಂದರ ಸ್ತಾಪಕನಾಗಿ (http://www.viggy.com/), ನಿಮ್ಮಲ್ಲಿ ನನ್ನದೊಂದು ವಿನಂತಿಃ

  1. Appreciate the effort. While the Kannada film industry is dying with poor quality movies and remakes, there are only a few filmmaker like Mr. Sheshadri, Mr. Kasaravalli, Mr. Nagathihalli etc are trying to create something original, and unique. As Kannadigas, it’s our responsibility to support and encourage such effort before its ruined in the name of “mainstream cinemas”
  2. Like mentioned above, nothing is perfect in life – let alone the digital medium! Yes, to your point, it can be done in post production but our producers can’t afford it!
  3. I highly encourage you to watch some of the “highly” acclaimed Hollywood films like Harry Potter and The Chamber of Secrets, Terminator 3 etc. Harry Potter and The Chamber of Secrets has 289 mistakes!!!
  4. You can read more funny stuff on http://www.moviemistakes.com/best.php

Since I’m not living there, I didn’t get a chance to watch “Bettada Jeeva” but I’ve heard a lot of good words about the movie. Let’s encourage the good effort and ignore the negligible part!Viggy Hegde  

kA Antha (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/07/2011 - 13:43

ಒಂದು ಕ್ಫತಿಯನ್ನ ಓದುವುದಕ್ಕೂ, ಒಂದು ಕ್ಫತಿಯನ್ನು ದ್ಫಶ್ಯಕ್ಕೆ ಅಳವಡಿಸುವುದಕ್ಕೂ ಸಾಕಷ್ಟು ಶ್ರಮಬೇಕು. ನಿಜವಾದ ಪ್ರೇಕ್ಷಕನಿಗೆ ಕ್ಫತಿ ಇಷ್ಟವಾದರೆ, ಅವನಿಗೆ ಮನೋರಂಜನೆ ಅಥವಾ ತಿಳುವಳಿಕೆ ಸಿಕ್ಕರೆ ಸಾಕು. ಅಲ್ಲಿ ಕ್ಫತಿಯ ಮತ್ತು ನಿರ್ದೇಶಕನ ಯಶಸ್ಸು ಸಿಕ್ಕಂತೆ. ಒಂದು ಕ್ಫತಿ ಅಥವಾ ಚಿತ್ರದ ಬಗ್ಗೆ ವಿಮರ್ಶೆ ಮಾಡುವಾಗ ಸಾಧ್ಯ ಅಸಾಧ್ಯತೆ ಬಗ್ಗೆ ಸ್ವಲ್ಪ ಮಟ್ಟಿನ  ಅರಿವಿದ್ದರೆ ಸಾಕು.

Ashwath paani ಶನಿ, 07/09/2011 - 11:54

ಅಲ್ವಾ? ಕರೆಕ್ಟ್

ನಿಮ್ಮ ವಿಮರ್ಶೆ ಸ್ವಲ್ಪ ಅತಿರೇಕವಾಗಿದೆ.  ಮೊಸರಲ್ಲಿ ಕಲ್ಲು ಹುಡುಕುವ ತರಹ

Chandrashekahar (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/20/2011 - 18:38

ಹಣ ಇರಲಿಲ್ಲ ಅದಕ್ಕೆ ಸಿನಿಮಾದಲ್ಲಿ ನ್ಯೂನತೆಗಳಿವೆ ಎಂದು ಸಮಜಾಯಿಶಿ ಕೊಡುವುದಕ್ಕೆ ಸಾಧ್ಯವಿಲ್ಲ.  ಎಂಥಿರನ್ ನ ಉದಾರಣೆಯಾಗಿ ಕೊಡುವುದರ ಬದಲು. ನಮ್ಮ ಪುಟ್ಟಣ್ಣ ಕಣಗಾಲರ ಸಿನಿಮಾಗಳ ಉದಾರಣೆ ಏಕೆ ತಗೋಳೊದಿಲ್ಲ?.  ಅವರ ಎಲ್ಲಾ ಸಿನಿಮಾಗಳು ಕಡಿಮೆ ಹಣದಲ್ಲೇ ಮಾಡಿದ ಚಿತ್ರಗಳು. ಆದರೆ ಒಂದೊಂದು ಚಿತ್ರಗಳು ಹತ್ತು ಎಂಥಿರನ್ ಗೆ ಸಮನಾಗಿವೆ ಅದೂ ತಾಂತ್ರಿಕವಾಗಿ!. ನಮ್ಮ ನಿರ್ದೇಶಕರು ಯಾಕೆ ಇದನ್ನು ಆರ್ಥ ಮಾಡಿಕೊಳ್ಳಲ್ವೋ ನಾಕಾಣೆ. ಸಿನಿಮಾ ಮಾಡಲು ತಲೆ ಬೇಕು ಬರೀ ಹಣವಲ್ಲ.

Chandrashekahar (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/20/2011 - 18:40

ಹಣ ಇರಲಿಲ್ಲ ಅದಕ್ಕೆ ಸಿನಿಮಾದಲ್ಲಿ ನ್ಯೂನತೆಗಳಿವೆ ಎಂದು ಸಮಜಾಯಿಶಿ ಕೊಡುವುದಕ್ಕೆ ಸಾಧ್ಯವಿಲ್ಲ.  ಎಂಥಿರನ್ ನ ಉದಾರಣೆಯಾಗಿ ಕೊಡುವುದರ ಬದಲು. ನಮ್ಮ ಪುಟ್ಟಣ್ಣ ಕಣಗಾಲರ ಸಿನಿಮಾಗಳ ಉದಾರಣೆ ಏಕೆ ತಗೋಳೊದಿಲ್ಲ?.  ಅವರ ಎಲ್ಲಾ ಸಿನಿಮಾಗಳು ಕಡಿಮೆ ಹಣದಲ್ಲೇ ಮಾಡಿದ ಚಿತ್ರಗಳು. ಆದರೆ ಒಂದೊಂದು ಚಿತ್ರಗಳು ಹತ್ತು ಎಂಥಿರನ್ ಗೆ ಸಮನಾಗಿವೆ ಅದೂ ತಾಂತ್ರಿಕವಾಗಿ!. ನಮ್ಮ ನಿರ್ದೇಶಕರು ಯಾಕೆ ಇದನ್ನು ಆರ್ಥ ಮಾಡಿಕೊಳ್ಳಲ್ವೋ ನಾಕಾಣೆ. ಸಿನಿಮಾ ಮಾಡಲು ತಲೆ ಬೇಕು ಬರೀ ಹಣವಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.