Skip to main content

ಮೋಹಿನಿ ಭಸ್ಮಾಸುರ ಮತ್ತು ಲಾಡೆನ್

ಬರೆದಿದ್ದುMay 9, 2011
8ಅನಿಸಿಕೆಗಳು

ಮ್ಮ ಪುರಾಣದ ಆ ಮೋಹಿನಿ ಭಸ್ಮಾಸುರನಿಗೂ ಮೊನ್ನೆ ನಿಗುರಿದ ಒಸಾಮಾ ಬಿನ್ ಲಾಡೆನ್ ಗೂ ಎಷ್ಟು ಸಾಮ್ಯತೆ ಇದೆ ಅಲ್ಲವೇ? ಪರಮ ಮಾನವತಾ ದ್ವೇಷಿ ಒಸಾಮನ ಕಥೆ ಮೋಹಿನಿ ಭಸ್ಮಾಸುರನ ಕಥೆಗಳ ನಡುವೆ ಲವಲೇಶವೂ ವ್ಯತ್ಯಾಸವಿಲ್ಲ.ಅಂದು ಆ ಭಸ್ಮಾಸುರ ಶಿವನಿಂದ ತಾನು ಯಾರ ತಲೆಯನ್ನು ಮುಟ್ಟಿದರೆ ಅವರು ಭಸ್ಮವಾಗುವಂತಹ ವರಪಡೆದು ಅದನ್ನು ಅವನಮೇಲೆಯೇ ಪ್ರಯೋಗಿಸಲು ಮುಂದಾದಾಗ ವಿಷ್ಣುವು ಮೋಹಿನಿಯಾಗಿ ಬಂದು ನರ್ತಿಸಿ ಅವನನ್ನೇ ಭಸ್ಮ ಮಾಡಿದ. ಅದೇ ರೀತಿ ಈ ಒಸಾಮ ಕೂಡ ಅಮೇರಿಕದ ವರಪ್ರಸಾದ ಸೃಷ್ಠಿಯೇ!!!! ಒಂದು ವ್ಯತ್ಯಾಸವೆಂದರೆ ವರಪಡೆದು ಅದನ್ನು ಅವರ ಮೇಲೆಯೇ ಪ್ರಯೋಗಿಸಿದ್ದು!!! ಬೀಗುತ್ತಿದ್ದ ಅಮೇರಿಕಕ್ಕೆ ಅವರದೇ ಅಸ್ತ್ರಗಳಿಂದ, ಅವರದೇ ವಿಮಾನಗಳಿಂದ, ಅವರದೇ ನೆಲದಲ್ಲಿ, ಅವರ ಅಹಂಮಿಗೇ ಪೆಟ್ಟುಕೊಟ್ಟಗಲೇ ಅಮೇರಿಕಕ್ಕೆ ಭಯೋತ್ಪಾದನೆಯ ಭೀಕರತೆ ಅರ್ಥವಾಗಿದ್ದು, ಅದೇನೋ ಹೇಳುತ್ತಾರಲ್ಲ ’ಅಂಡು ಒದ್ದೆಯಾದಗಲೇ ಗೊತ್ತಾಗೋದು’ ಅನ್ನುವಹಾಗೆ!! ಇಂದು ಅದೇ ಅಮೇರಿಕಾ ಕೈಯಲ್ಲಿ ಅದೇ ಒಸಾಮ ಹತನಾಗಿದ್ದಾನೆ!! ತಾನೆ ಸಾಕಿದ ಮುದ್ದು ಕಂದನನ್ನು ಅಮೇರಿಕ ಕೊಂದು ನಿಟ್ಟುಸಿರಿಸಿದೆ, ಸದ್ಯ ತನ್ನ ಇತಿಹಾಸವನ್ನು ತಾನೆ ಮರೆತಂತೆ ಇಂದು ವರ್ತಿಸುತ್ತಿದೆ. ಅಮೇರಿಕವೆಂಬ ಜಗತ್ತಿನ ಶಸ್ತ್ರಾಸ್ತ್ರಗಳ ಕಾರ್ಖಾನೆ!! ಲಾಡೆನ್ ನ ಹುಟ್ಟು!!ತೀರಾ ಇತ್ತೀಚಿನವರೆಗೆ ಅಂದರೆ ೨೦೦೦ ಇಸವಿಯವರೆಗೆ ಅಮೇರಿಕಾದ ಆರ್ಥಿಕ ಮೂಲ ಕೇವಲ ಶಸ್ತ್ರಾಸ್ತ್ರ ಎನ್ನುವುದರಲ್ಲಿ ಎರಡುಮಾತಿಲ್ಲ. ಅಸಲಿಗೆ ಫೋರ್ಡ್, ಜನರಲ್ ಮೋಟಾರ್ಸ್ ಇತ್ಯಾದಿ ಅಮೇರಿಕಾದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿಗಳು ವಾಹನ ತಯಾರಿಸಿದ್ದಕ್ಕಿಂತ, ಪೆಂಟಗಾನ್ ನ ನಿರ್ದೇಶನದಂತೆ ಶಸ್ತ್ರಾಸ್ತ್ರಗಳನ್ನು ತಯಾಅರಿಸಿದ್ದೇ ಹೆಚ್ಚು!!! ಹಾಗೆ ತಯಾರಾದ ಶಸ್ತ್ರಾಸ್ತ್ರಗಳನ್ನು ತಾನೆ ಇಟ್ಟುಕೊಂಡರೆ ಏನು ಪ್ರಯೋಜನ ಹೇಳಿ? ಅದಕ್ಕೆಂದೇ ಅದು ಭಾರತೀಯ ಉಪಖಂಡದಲ್ಲಿ ಕೋಲಾಹಲವೆಬ್ಬಿಸಲು ಕಾಶ್ಮೀರ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುವಂತೆ ಮಾಡಲು ಇಸ್ಲಾಂನಲ್ಲಿ ಇಲ್ಲದ "ಜಿಹಾದ್" ಅನ್ನು ಪೋಷಿಸಿತು. ಅಲ್ಲದೆ ೧೯೮೦ರ ದಶಕದಲ್ಲಿ ಆಘ್ಪಾನಿಸ್ತಾನದಲ್ಲಿ ನೆಲೆಮಾಡಿದ್ದ ಸೋವಿಯಟ್ ಸೇನೆಯನ್ನು ಹಿಮ್ಮೆಟ್ಟಿಸಲು ಅಮೆರಿಕ ಹೂಡಿದ ತಂತ್ರಗಾರಿಕೆಯ ಪ್ರತಿಫಲ ಈ ಬಿನ್ ಲಾಡೆನ್ ಎಂಬ ದೈತ್ಯ. ವಿಶ್ವದ ಭೂಪಟದಲ್ಲಿ ಕಮ್ಯುನಿಸಂ ಇಲ್ಲದಂತೆ ಮಾಡುವ ಹುನ್ನಾರದಲ್ಲಿ ಅಮೆರಿಕ ಪ್ರಯೋಗಿಸಿದ ಅಸ್ತ್ರಗಳು ಹಲವಾರು. ಕೆಲವು ದೇಶಗಳಲ್ಲಿ ಆಂತರಿಕ ದಂಗೆ, ಇನ್ನು ಕೆಲವು ದೇಶಗಳ ಮೇಲೆ ನೇರ ಆಕ್ರಮಣ, ಕೆಲವು ದೇಶಗಳಿಗೆ ಆರ್ಥಿಕ ದಿಗ್ಭಂಧನ ಇವೆಲ್ಲವೂ ಅಸಾಧ್ಯ ಎನಿಸಿದರೆ ಬಂಡುಕೋರರ ಸೃಷ್ಟಿ. ಸೋವಿಯಟ್ ಸೇನೆಯನ್ನು ಎದುರಿಸಲು ಮತ್ತು ಕಮ್ಯುನಿಸಂ ವಿರುದ್ಧ ಜನಾಭಿಪ್ರಾಯ ಸೃಷ್ಟಿಸಲು ಅಮೆರಿಕದ ಸಾಮ್ರಾಜ್ಯಶಾಹಿ ಬಳಸಿದ್ದು ಎರಡು ಪ್ರಮುಖ ಅಸ್ತ್ರಗಳನ್ನು. ಮೊದಲನೆಯದು ಪೆಂಟಗನ್ನಲ್ಲಿ ತಯಾರಿಸಲಾಗುವ ಅತ್ಯಾಧುನಿಕ ಪಾಶವೀ ಶಸ್ತ್ರಾಸ್ತ್ರಗಳು. ಎರಡನೆಯದು ಅರಬ್ ರಾಷ್ಟ್ರಗಳಲ್ಲಿ ಪುಟಿದೇಳುತ್ತಿದ್ದ ಇಸ್ಲಾಮಿಕ್ ಜಿಹಾದ್ ಪರಿಕಲ್ಪನೆ ಮತ್ತು ಅದರ ಹಿಂದಿನ ಸಮರಶೀಲ ಧೋರಣೆ. ಈ ಎರಡೂ ಅಸ್ತ್ರಗಳ ಸಮ್ಮಿಲನದ ಮಾನಸ ಪುತ್ರನೇ ಒಸಾಮ ಬಿನ್ ಲಾಡೆನ್ ಎಂಬ ಪೆಡಂಭೂತ. ಸೌದಿ ಅರೇಬಿಯಾದಲ್ಲಿ ತನ್ನದೇ ಆದ ಗುಂಪು ರಚಿಸಿಕೊಂಡಿದ್ದ ಒಸಾಮಾನನ್ನು ಅಮೆರಿಕಕ್ಕೆ ಕರೆತಂದು, ಪಾಕಿಸ್ತಾನದ ನೆಲದಲ್ಲಿ ಆತನ ನಿಷ್ಠಾವಂತ ತಂಡಕ್ಕೆ ಶಸ್ತ್ರಾಸ್ತ್ರ ತರಬೇತಿ ನೀಡಿ, ಆಫ್ಘಾನಿಸ್ತಾನದ ಬೆಟ್ಟ ಕಣಿವೆಗಳಲ್ಲಿ ಸೋವಿಯಟ್ ಸೇನೆಯ ವಿರುದ್ಧ ಹೋರಾಡುವ ನೈಪುಣ್ಯತೆಯನ್ನು ಕಲಿಸಿ, ಒಂದು ಬಂಡುಕೋರ ಸೇನೆಯನ್ನೇ ಸೃಷ್ಟಿಸಿದ ಅಮೆರಿಕಾದ ಸಾಮ್ರಾಜ್ಯಶಾಹಿಗೆ ತಾನು ಸೃಷ್ಟಿಸಿದ್ದು ಒಂದು ಪೆಡಂಭೂತ ಎಂದು ಅರಿವಾಗುವಷ್ಟರಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಬೃಹತ್ ಕಟ್ಟಡ ಕುಸಿದು ಬಿದ್ದಿತ್ತು. ಎಚ್ಚೆತ್ತು ಒಸಾಮಾನನ್ನು ಬೇಟೆಯಾಡತೊಡಗಿದ ಅಮೆರಿಕಾಗೆ ಅದಕ್ಕೂ ಮುನ್ನ ಲಾಡೆನ್ ನಡೆಸಿದ ದುಷ್ಕೃತ್ಯ-ಕುಕೃತ್ಯಗಳಾಗಲೀ, ಬಾಂಬ್ ದಾಳಿಗಳಾಗಲೀ, ಭಯೋತ್ಪಾದಕ ಕೃತ್ಯಗಳಾಗಲೀ ಕಾಣಲೇ ಇಲ್ಲ. ಏಕೆಂದರೆ ದಾಳಿಗೊಳಗಾದದ್ದು ಅಮೆರಿಕದ ಪ್ರಜೆಗಳಲ್ಲ. ಬಳಸಲಾಗಿದ್ದು ಪೆಂಟಗನ್ನ ಶಸ್ತ್ರಾಸ್ತ್ರಗಳು. ಕಳೆದ ಹತ್ತು ವರ್ಷಗಳಿಂದ ತನ್ನ ಶತ್ರುವನ್ನು ವಿರತ ಶ್ರಮವಹಿಸಿ ಬೇಟೆಯಾಡಿದ ಅಮೆರಿಕಾ ಕೊನೆಗೂ ಲಾಡೆನ್ನನ್ನು ಅಂತ್ಯಗೊಳಿಸಿದೆ. ಅದೂ ತಾನು ತರಬೇತಿ ನೀಡಿದ ಪಾಕಿಸ್ತಾನದ ನೆಲದಲ್ಲೇ. ಬಹುಶಃ ಲಾಡೆನ್ಗೆ ಪಾಕಿಸ್ತಾನವೇ ಕರ್ಮಭೂಮಿಯಾಗಿತ್ತೇನೋ. ಸೃಷ್ಟಿಕರ್ತನಿಂದಲೇ ಹತನಾಗುವ ಭಾಗ್ಯ ಇದ್ದದ್ದು ನಮ್ಮ ಪುರಾಣಗಳಲ್ಲಿನ ರಾಕ್ಷಸರಿಗೆ ಮಾತ್ರ. ಈಗ ಲಾಡೆನ್ಗೂ ಅದು ಲಭಿಸಿದೆ.  ಅಮೇರಿಕ ಪಾಕಿ(ಪಿ)ಸ್ತಾನಗಳೆಂಬ ಭಾರತದ ಹಿತಶತ್ರುಗಳುಹಾಗೆ ನೋಡಿದ್ದಲ್ಲಿ ತನ್ನ ಸ್ವಾರ್ಥ ಸಾಧನೆಗಾಗಿ ಎಂತಹ ನೀಚ, ವಾಮಮಾರ್ಗ ಹಿಡಿಯಲು ತಯಾರಿರುವ ವಿಶ್ವದ ದೊಡ್ಡಣ್ಣನೇ ಮನುಕುಲಕ್ಕೆ ನಿಜವಾದ ಕಂಟಕ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದ ಪಾತ್ರ ಏನೂ ಇಲ್ಲವೆಂದರೆ ಇಲ್ಲದ ಪಾಪ ಸುತ್ತಿಕೊಂಡೀತು!!! ನಿಜವಾದ ಅರ್ಥದಲ್ಲಿ ಎರಡೂ ದೇಶಗಳು ಭಾರತದ ಹಿತಶತ್ರುಗಳೇ!! ಎರಡಕ್ಕೂ ಕಾಶ್ಮೀರ ಬೇಕೇ ಬೇಕು!! ತನ್ನ ರಾಜಕೀಯ ಸಂಕಷ್ಟ ನಿವಾರಿಸಲು ಪಾಕಿಸ್ತಾನಕ್ಕೆ, ಚೀನಾ, ರಷ್ಯಗಳನ್ನು ನಿಯಂತ್ರಿಸಲು ಆಯಕಟ್ಟಿನ ಜಾಗವಾದ್ದರಿಂದ ಅಮೇರಿಕಕ್ಕೆ!!!! ಆದ್ದರಿಂದ ಪಾಕೀಸ್ತಾನ ಚೀನಾದೊಡನೆ ಸೇರಿ ’ಡಬಲ್-ಗೇಮ್’ ಆಡುತ್ತಿದ್ದರೂ, ಭಾರತದಲ್ಲಿ ಹರಿದ ರಕ್ತದಕೋಡಿಗೆ ಪಾಪಿಸ್ತಾನವೇ ಕಾರಣವೆಂದೂ ತಿಳಿದ್ದಿದ್ದರೂ ಇದೇ ಅಮೇರಿಕ ’ಜಾಣಕುರುಡು’ ಪ್ರದರ್ಶಿಸಿತ್ತಾ ಬಂದಿತ್ತು. ತನ್ನ ಪರಮ ಶ(ಮಿ)ತ್ರುವಿನ ಕಾರ್ಯಸ್ಥಾನ ಪಾಕಿಸ್ತಾನವೆಂದೂ ತಿಳಿದ್ದಿದ್ದರೂ, ಒಸಾಮನ ಹತ್ಯೆಯದಿನ ಅದರ ವಿರುದ್ಧ ಗುಡುಗಿದ ಅಮೇರಿಕಾ ಈಗಾಗಲೆ ತಣ್ಣಗಾಗಿದ್ದಲ್ಲದೆ, ಅದರ ಶಸ್ತ್ರಾಸ್ತ್ರ ಪೂರೈಕೆ ಮತ್ತಿತರ ಸೇವೆಗಳು ’ಅಭಾದಿತ’ ಎನ್ನುತ್ತಿರುವುದನ್ನು ನೋಡಿದವರ್ಯಾರಿಗೂ ಅಮೇರಿಕದ ನಡೆ ಅರ್ಥವಾದೀತು!!! ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಸೇನಾ ಪಡೆ ಪಾಕಿಸ್ತಾನದಲ್ಲಿಯೇ ಹತ್ಯೆಗೈಯುವ ಮೂಲಕ ಪಾಕ್ ಮುಖವಾಡ ಬಯಲಾದಂತಾಗಿದೆ. ಅಷ್ಟೇ ಅಲ್ಲ ಲಾಡೆನ್ ಪಾಕ್ ಮಿಲಿಟರಿ ಬೇಸ್‌ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿಯೇ ವಾಸವಾಗಿದ್ದರೂ ಕೂಡ ಆತನನ್ನು ಯಾಕೆ ಹತ್ಯೆಗೈದಿಲ್ಲ ಅಥವಾ ಮಾಹಿತಿ ನೀಡಿಲ್ಲ ಎಂಬ ಪ್ರಶ್ನೆಗಳು ಕೇಳಿಬರತೊಡಗಿದೆ. ಅಮೆರಿಕ ನೇತೃತ್ವದ ಪಡೆ ಕಳೆದ ಹತ್ತು ವರ್ಷಗಳಿಂದ ಲಾಡೆನ್ ಬೇಟೆಯಲ್ಲಿ ತೊಡಗಿತ್ತು. ಆದರೆ ಪಾಕಿಸ್ತಾನ ಮಾತ್ರ ಲಾಡೆನ್ ಇರುವಿಕೆ ಬಗ್ಗೆ ಯಾವುದೇ ಸುಳಿವು ನೀಡದೆ, ಆತ ದೇಶದಲ್ಲಿ ಠಿಕಾಣಿಯೇ ಹೂಡಿಲ್ಲ ಎಂದು ಸಮಜಾಯಿಷಿ ನೀಡುತ್ತಿತ್ತು. ಏತನ್ಮಧ್ಯೆ ಭಾನುವಾರ ರಾತ್ರಿ ಇಸ್ಲಾಮಾಬಾದ್‌ನಿಂದ ೬೦ ಕಿಲೋ ಮೀಟರ್ ದೂರದಲ್ಲಿರುವ ಅಬೋಟಾಬಾದ್‌ನ ಮನೆಯಲ್ಲಿ ವಾಸವಾಗಿದ್ದ ಲಾಡೆನ್‌ನನ್ನು ಅಮೆರಿಕ ಸೇನೆ ಹತ್ಯೆಗೈದಿರುವುದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಅವೆಲ್ಲಕ್ಕಿಂತಲೂ ಪಾಕಿಸ್ತಾನದ ಸುಳ್ಳುಬುರುಕ ಹೇಳಿಕೆ, ಪಾಕ್ ಇಬ್ಬಗೆ ನೀತಿ ಜಗಜ್ಜಾಹೀರಾದಂತಾಗಿದೆ. ಇಷ್ಟೆಲ್ಲಾ ಆದರೂ ಲಾಡೆನ್ ಹತ್ಯೆಯ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸಂಪೂರ್ಣ ನೆರವು ನೀಡಿದೆ ಎಂದು ಅಮೆರಿಕ ಹೇಳಿಕೆ ನೀಡಿದೆ. ವಿಪರ್ಯಾಸ ಎಂಬಂತೆ ಲಾಡೆನ್ ಹತ್ಯೆ ಕುರಿತಂತೆ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯಾಗಲಿ, ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಸೇರಿದಂತೆ ಯಾರೊಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ!! ಲಾಡೆನ್ ನ ಹತ್ಯೆ ಭಯೋತ್ಪಾದನೆಯ ಅಂತ್ಯವಲ್ಲ!!ಈ ಮಾತು ಅಕ್ಷರಶಃ ಸತ್ಯ!! ಲಾಡೆನ್ ಸಾವು ಅಮೆರಿಕದಲ್ಲಿ ವಿಜೃಂಭಣೆಯಿಂದ ಸ್ವಾಗತಿಸಲ್ಪಟ್ಟಿದೆ. ಜನತೆ ಬೀದಿಗಿಳಿದು ಸಂಭ್ರಮಿಸುತ್ತಿದ್ದಾರೆ. ಅಧ್ಯಕ್ಷ ಒಬಾಮ ದಿಗ್ವಿಜಯದ ನಗೆ ಬೀರುತ್ತಿದ್ದಾರೆ. ಆ ಗುಂಗಿನಲ್ಲೇ ಮಂಕುಕವಿದ್ದಿದ್ದ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರಲ್ಲದೆ, ತಮ್ಮ ಆಡಳಿತ ವೈಪಲ್ಯಗಳನ್ನು ತೇಪೆ ಹಾಕಿ ಮರೆಮಾಚುವಲ್ಲಿ ಯಶಸ್ವಿಯಾಗಿದ್ದಾರೆ!!! ಆದರೆ ಅಮೆರಿಕ ಅಂತ್ಯಗೊಳಿಸಿರುವುದು ಒಬ್ಬ ಲಾಡೆನ್ನನ್ನು ಮಾತ್ರ. ಕಳೆದ ಎರಡು ದಶಕಗಳಲ್ಲಿ ಸಾಮ್ರಾಜ್ಯಶಾಹಿಗಳ ಅಧಿಕಾರಲಾಲಸೆಯ ಪ್ರತಿಫಲವಾಗಿ ವಿಶ್ವದಾದ್ಯಂತ ಸಾವಿರ ಲಾಡೆನ್ಗಳು ಸೃಷ್ಟಿಯಾಗಿದ್ದಾರೆ. ಪೆಂಟಗನ್ನಲ್ಲಿ ತಯಾರಾಗುವ ಶಸ್ತ್ರಾಸ್ತ್ರಗಳನ್ನು ಖರ್ಚು ಮಾಡಲು ಅಗತ್ಯವಾದ ಬಳಕೆದಾರರನ್ನು ಸಾಮ್ರಾಜ್ಯಶಾಹಿ ಸೃಷ್ಟಿಸುತ್ತಲೇ ಇದೆ. ಲಷ್ಕರ್, ಹೂಜಿ, ಜೆಇಎಮ್ ಹೀಗೆ ಹತ್ತು ಹಲವು ಸಂಘಟನೆಗಳು ಬೆಳೆಯುತ್ತಲೇ ಇವೆ. ಈ ಸಂಘಟನೆಗಳ ಹಿಂದಿರುವ ಶಕ್ತಿ ಯಾವುದೇ ಧರ್ಮ ಅಥವಾ ಧರ್ಮಾಧಾರಿತ ನಂಬಿಕೆಗಳಲ್ಲ. ಬದಲಾಗಿ ಸಾಮ್ರಾಜ್ಯಶಾಹಿಗಳ ಬಂಡವಾಳ ಮತ್ತು ಶಸ್ತ್ರಾಸ್ತ್ರ ಉದ್ಯಮ. ಒಬ್ಬ ಲಾಡೆನ್ ಮೃತನಾದದ್ದಕ್ಕೆ ಸಂಭ್ರಮಿಸುತ್ತಿರುವ ಸಂದರ್ಭದಲ್ಲೇ ಸೇಡಿನ ಪ್ರತಿದಾಳಿಯ ಮುನ್ಸೂಚನೆಯನ್ನೂ ನೀಡುತ್ತಿರುವ ಸಾಮ್ರಾಜ್ಯಶಾಹಿಗಳಿಗೆ ತಾವು ನಿಮರ್ಿಸಿದ ಕರ್ಮಭೂಮಿಯಲ್ಲಿ ಪಳಗಿ, ನುರಿತಿರುವ ಸಾವಿರಾರು ಒಸಾಮಾಗಳು ಪುಟಿದೇಳುತ್ತಾರೆ ಎಂಬ ಸತ್ಯದ ಅರಿವು ಇರಲೇ ಬೇಕು. ಪಾಪಪ್ರಜ್ಞೆಯೇ ಇಲ್ಲದ ಸಾಮ್ರಾಜ್ಯಶಾಹಿಗಳ ಆಕ್ರಮಣ ಶೀಲತೆ ಮತ್ತು ಅಧಿಪತ್ಯ ರಾಜಕಾರಣದ ಪ್ರವೃತ್ತಿ ಅಂತ್ಯಗೊಳ್ಳುವವರೆಗೂ ಭಯೋತ್ಪಾದನೆ ಅಂತ್ಯಗೊಳ್ಳುವುದೂ ಇಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಅರಬ್ ರಾಷ್ಟ್ರಗಳಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳತ್ತ ಒಮ್ಮೆ ಗಮನಹರಿಸಿದಲ್ಲಿ ಈ ಸತ್ಯ ದರ್ಶನವಾಗುತ್ತದೆ. ತನ್ನ ಆಥರ್ಿಕತೆಯ ರಕ್ಷಣೆಗಾಗಿ ಪ್ರಜಾತಂತ್ರವನ್ನೇ ಹೊಸಕಿ ಹಾಕಿ ನಿರಂಕುಶ ಪ್ರಭುಗಳನ್ನು, ಸರ್ವಾಧಿಕಾರಿಗಳನ್ನು ಪೋಷಿಸುವ ಸಾಮ್ರಾಜ್ಯಶಾಹಿಗಳು ಈಗ ಅರಬ್ ರಾಷ್ಟ್ರಗಳ ಬೀದಿಬೀದಿಗಳಲ್ಲಿ ಕೇಳಿಬರುತ್ತಿರುವ ಪ್ರಜಾಸತ್ತೆಯ ದನಿಗಳನ್ನು ಅಡಗಿಸುವ ಮಾರ್ಗಗಳತ್ತ ನೋಡುತ್ತಿದ್ದಾರೆ. ಲಿಬಿಯಾದತ್ತ ಒಮ್ಮೆ ಕಣ್ಣು ಹಾಯಿಸಿದರೆ ಭಯೋತ್ಪಾದನೆಯ ಗೂಡಾರ್ಥವನ್ನು ಗ್ರಹಿಸಬಹುದು. ಇವುಗಳೆಲ್ಲಾ ಅಂತ್ಯವಾಗಬೇಕಾದರೆ ಲಾಡೆನ್ ನಂತವರ ಅಂತ್ಯವಷ್ಟೇ ಸಾಲದು. ಭಯೋತ್ಪಾದನೆ ಅಂತ್ಯಕ್ಕೆ ಇಂದು ತಾರ್ಕಿಕ ನೆಲೆಗಟ್ಟಿಗಿಂತ ಜಾಗತಿಕ ಸೈದ್ದಾಂತಿಕ ಅರಿವು ಅತ್ಯಗತ್ಯ.ಏಕೆಂದರೆ ಒಸಾಮನಿಂದ ಸ್ಫೂರ್ತಿ ಪಡೆದು ಹತ್ತಾರು ದೇಶಗಳಲ್ಲಿ ಯುವಕರು ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಲ್ ಖೈದಾ, ಲಷ್ಕರ್ ತೊಯ್ಬಾ, ತಾಲಿಬಾನ್ ಮತ್ತಿತರ ಕುಖ್ಯಾತ ಸಂಘಟನೆಗಳು ತಮ್ಮದೇ ಆದ ನೆಲೆಗಳನ್ನು ವಿವಿಧ ದೇಶಗಳಲ್ಲಿ ಸ್ಥಾಪಿಸಿಕೊಂಡಿವೆ. ಹಾಗೆಯೇ ನಾಯಕರನ್ನು ಬೆಳೆಸಿವೆ. ಆದ್ದರಿಂದಲೇ ಒಸಾಮ ಹತ್ಯೆ ಈ ಸಂಘಟನೆಗಳ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಭಯೋತ್ಪಾದನೆಯ ಅಂತ್ಯವೂ ಅಲ್ಲ ಎಂದು ಹೇಳುವುದು. ಭಾರತದ ಮಾತಿಗೆ ಜಾಗತಿಕವಲಯಲ್ಲಿ ಆನೆ ಬಲ!!ಏನೇ ಆದರೂ ಒಸಾಮನ ಹತ್ಯೆಯಿಂದಾಗಿ ಭಾರತದ ಮಾತಿಗೆ ಆನೆಬಲ ಬಂದಂತಾಗಿರುವುದೂ ಸತ್ಯ!! ಭಯೋತ್ಪಾದಕರಿಗೆ ಪಾಕಿಸ್ತಾನ ಸ್ವರ್ಗವಾಗಿದೆ ಎಂದು ಭಾರತ ಮೊದಲಿನಿಂದಲೂ ಹೇಳುತ್ತ ಬಂದಿದೆ. ಆದರೆ ಪಾಕಿಸ್ತಾನ ಅದನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಒಸಾಮನನ್ನು ಇದೀಗ ಪಾಕಿಸ್ತಾನದಲ್ಲಿಯೇ ಅಮೆರಿಕ ಕೊಂದಿರುವುದು ಭಾರತದ ಮಾತಿಗೆ ಪುರಾವೆ ಒದಗಿಸಿದಂತಾಗಿದೆ. ಈ ಘಟನೆ ಅಂತರರಾಷ್ಟ್ರೀಯವಾಗಿ ಭಾರತದ ನಿಲುವಿಗೆ ಹೆಚ್ಚು ಬೆಂಬಲ ತಂದುಕೊಟ್ಟಿದೆ. ಪಾಕಿಸ್ತಾನದಲ್ಲಿ ಸದ್ಯ ಅರಾಜಕ ಪರಿಸ್ಥಿತಿ ಇರುವುದರಿಂದ ಮೂಲಭೂತವಾದಿಗಳ ಚಿತಾವಣೆ ಹೆಚ್ಚಾಗಿ ಏನು ಬೇಕಾದರೂ ಆಗಬಹುದು. ನಮ್ಮ ರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪಾಕಿಸ್ತಾನವನ್ನು ಮಣಿಸಲು ಅಮೇರಿಕದ ಹಾದಿ ಅನುಸರಿಸುವುದಕ್ಕಿಂತ ಪ್ರಜಾತಂತ್ರದ ದಾರಿಗಳನ್ನೇ ನಾವು ಅನುಸರಿಸಬೇಕಿದೆ. ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ಇದು ಕಷ್ಟ ಎನಿಸಬಹುದು. ಆದರೆ ಭಾರತಕ್ಕೆ ಬೇರೆ ದಾರಿಯಿಲ್ಲ. ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚುವಂತೆ ಮಾಡಬೇಕು. ಅಮೆರಿಕದ ಮೇಲೂ ಒತ್ತಡ ಹೇರಿ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮಾಡಬೇಕು. ಅದುವರೆಗೆ ಯಾವುದೇ ರೀತಿಯ ಅಂತರಾಷ್ಟ್ರೀಯ ನೆರವು ಸಿಗದಂತೆ ಮಾಡುವುದು ಮೊದಲು ಆಗಬೇಕಾದ ಕೆಲಸ. ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ. ಅಲ್ಲಿ ಪರಿಸ್ಥಿತಿ ಸುಧಾರಿಸಿದರೆ ನಮಗೂ ನೆಮ್ಮದಿ. ಸದ್ಯದ ಪರಿಸ್ಥಿತಿ ಭಾರತ ಮಟ್ಟಿಗೆ ಅನುಕೂಲವೇ ಆದರೂ ನಮ್ಮ ವೋಟ್ ಬ್ಯಾಂಕ್ ರಾಜಕಾರಣ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೋ ಕಾದು ನೋಡೋಣ    

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ವಿನಯ್_ಜಿ ಧ, 05/11/2011 - 13:18

ಪ್ರಿಯ ಉಮಾಶಂಕರ್ ರವರೆ,
ಎಲ್ಲಿಯವರೆಗೂ "ಡೊಡ್ಡಣ್ಣ" ನ ಕೈವಾಡ/ಹಸ್ತಕ್ಷೇಪ ಇತರ ದೇಶದ ಅಂತರಿಕ ವ್ಯವಹಾರಗಳಲ್ಲಿರುವುದೋ, ಅಲ್ಲಿಯವರೆಗೂ ಕದನ, ಯುದ್ದ, ದ್ವೇಷ ಎಲ್ಲಾ ಇದ್ದದೇ... ದುರಂತವೆಂದರೆ ನಮ್ಮ "ಘನ ಸರ್ಕಾರ" ವು ಅದರ ಅಡಿಯಲ್ಲಿರುವುದೇ...!! ತನ್ನ "ಡಾಲರ್" ಮತ್ತು "ಒಣ ಪ್ರತಿಷ್ಟೆ" ಗೋಸ್ಕರ ಅಮೇರಿಕ ಎಂತಹ "ತಂತ್ರ" ಗಳ ಪ್ರಯೋಗಿಸಲು ಹೇಸುವುದಿಲ್ಲ...!!
-- ವಿನಯ್

kmurthys ಧ, 05/11/2011 - 14:09

ಪ್ರಿಯ ಉಮಾಶಂಕರ್,ಇಷ್ಟೆಲ್ಲ ಆದಮೇಲೂ ಅಮೆರಿಕ ಮತ್ತು ಪಾಕಿಸ್ತಾನ ತಾವು ಮಾಡಿದ ತಪ್ಪುಗಳನ್ನು ಅರಿತು ತಮ್ಮ ನಡುವಳಿಗಕೆಗಳನ್ನು ತಿದ್ದುಕೊಳ್ಳುವುದು ನಂಬಲಸಾಧ್ಯ. ಒಬಾಮ ಈ ಘಟನೆಯನ್ನು ಚುನಾವಣೆ ಗೆಲ್ಲಲುಉಪಯೋಗಿಸಿಕೊಂಡರೆ ಪಾಕಿಸ್ತಾನ ಅಮೆರಿಕದಿಂದ ಇನ್ನಷ್ಟು ಹಣ ಕೀಳಲು ಪ್ರಯತ್ನಿಸಬಹುದು. ಭೂಗೊಳದಲ್ಲಿನ ತನ್ನ ಸ್ಥಾನ ಅಮೆರಿಕಕ್ಕೆ ಎಷ್ಟು ಮುಖ್ಯ ಎನ್ನುವುದು ಪಾಕಿಸ್ತಾನಕ್ಕೆ ಗೊತ್ತು. ಅದು ಏನುಮಾಡಿದರೂ ಗಲಾಟೆ ಮಾಡುವ ಮಗುವನ್ನು ಚಾಕಲೇಟು ಕೊಟ್ಟು ರಮಿಸುವ ತಾಯಿಯಂತೆ ಅಮೆರಿಕ ವ್ಯವಹರಿಸುವುದು ಖಂಡಿತ. ಮಿಕ್ಕೆಲ್ಲ ಕೂಗಾಟವೆಲ್ಲ ಮೇಲು ನೋಟಕ್ಕೆ ಮಾತ್ರ ಎನ್ನುವುದುಪಾಕಿಸ್ತಾನಕ್ಕೂ ಗೊತ್ತು.

ಮೂರ್ತಿ ಸರ್, ವಿನಯ್ ಸರ್,ನಿಮ್ಮ ಪ್ರತಿಕ್ರಿಯೆಗಳಿಗೆ ಅನಂತಾನಂತ ವಂದನೆಗಳು. ಇಂಗ್ಲೀಷಿನಲ್ಲಿ ಒಂದು ನಾಣ್ಣುಡಿಯಿದೆ "An idle mind is Devil's works shop"ಎನ್ನುವಂತೆ ಮೊದಲೇ ಅಮೇರಿಕವೆಂಬುದು ಸೋಮಾರಿಗಳ ದೇಶ, ಅವರುಗಳಿಗೆ ಮಾಡಲು ಕೆಲಸವಿರುವುದಿಲ್ಲ ಬೇರೆಯವರ ದುಡಿಮೇ ಅವರ ಅನ್ನಇಂತ ಒಂದು ದೇಶ 'ತಾನೆ ತೊಟ್ಟಿಲು ತೂಗಿ ಮಗುವನ್ನೂ ಜಿಗುಟುತ್ತದೆ'. ಅಂದು ರೊನಾಲ್ಡ್ ರೇಗನ್ ಕಾಲದಲ್ಲಿ ಇದೇ ಒಸಾಮ ಬಿನ್-ಲಾಡೆನ್ ನನ್ನು'ಸ್ವಾತಂತ್ರ್ಯ ಯೋಧ' ಎಂದು ಕರೆದು ಪೋಷಿಸಿ ರಷ್ಯಾವನ್ನು ಒಡೆದ ಅಮೇರಿಕ ಇಂದು ಅವನನ್ನೇ ಶತ್ರು ಎಂದೇಳಿ, ಅವನನ್ನು ಸೆರೆಹಿಡಿದರೆ ತನ್ನ ಬಣ್ಣವೆಲ್ಲಿ ಬಯಲಾಗುವುದೋ ಎಂಬ ಆತಂಕದಿಂದ ಒಸಕಿ ಸಮುದ್ರಕ್ಕೆಸೆದಿದೆ. ಇದಕ್ಕೆ ತಕ್ಕನಾಗಿ ಪಾಕಿಸ್ತಾನವೂ ನಟಿಸುತ್ತಾ ಜಾಗತಿಕ ಮಟ್ಟದಲ್ಲಿ ಅಮೇರಿಕದ 'ಜಿಗರಿ ದೋಸ್ತಿ' ಯಾಗಿಯೇ ಉಳಿದು, ಅತ್ತ ಚೀನಾದೊಡನೆಯೂ ಸುಖೀ ಸಂಸಾರ ನಡೆಸುತ್ತಾ ಭಾರತಕ್ಕೆ ಆತಂಕ ತಂದಿರುವುದೂ ಸುಳ್ಳಲ್ಲ 

ಕೆಎಲ್ಕೆ ಶುಕ್ರ, 05/13/2011 - 10:08

ಈ ಎಲ್ಲ ಲಾಡೆನ್ ವಿರುಧ್ಧದ ವಿಚಾರ, ಸಮಾಚಾರದ ನಡುವೆ ಒಂದು ವೈರುಧ್ಯವಿದೆ. ಇದೇ ಲಾಡೆನ್ ಅಮೇರಿಕಾದ ಕಟ್ಟಡಗಳೆರಡನ್ನು  ಚೆಂಡಿಗೆ ಲಗೋರಿ ಉರುಳಿದಂತೆ ಧರೆಗುರುಳಿಸಿದಾಗ ನಮಗೆಲ್ಲ ತುಸು ಕಳವಳವಾಯಿತೆ ಹೊರತು ಬೇಸರವೇನೂ ಆಗಲಿಲ್ಲ; ಒಳಗೊಳಗೇ ಭಯಂಕರ ಖುಶಿ ಆದುದಂತೂ ಖರೆ. ಕಾರಣ ಇಲ್ಲಿ ಲಾಡೆನ್ ಹಾಗೂ ಅಮೇರಿಕಾ ಇಬ್ಬರೂ ಭಸ್ಮಾಸುರರೇ, ಮೋಹಿನಿ ಯಾರೂ ಇಲ್ಲ!!

ಉಮಾಶಂಕರ ಬಿ.ಎಸ್ ಶನಿ, 05/14/2011 - 11:27

ನಿಜ ಕೆ. ಎಲ್ಕೆ ಸರ್ ಆ ರೀತಿ ಖುಷಿ ಪಟ್ಟವರಲ್ಲಿ ನಾನೂ ಒಬ್ಬ, ಅದೇ ರೀತಿ ಲಾಡೆನ್ ಸತ್ತಾಗಲೂ ಖುಷಿಪಟ್ಟುದ್ದುಂಟು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/26/2011 - 12:17

ಭಾರತಕ್ಕೆ ಆನೆ ಬಲವೇನೋ ಬಂದಿತ್ತು, ಆದರೆ ನಮ್ಮ ಚಿದು ಮಾಮನ ಘನ ಕಾರ್ಯವೈಕರಿಯಿಂದಾಗಿ ಕಾಟಾಚಾರದ ಲಿಸ್ಟು ಕಳುಹಿಸಿನಗೆಪಾಟಲಿಗೀಡಾದದ್ದಕ್ಕೆ ಯಾರನ್ನು ಹಳಿಯೋಣ?

NAVEEN navi ಭಾನು, 06/12/2011 - 12:25

nangea  esta aythu

GANGAYYA HIREMATH ಶನಿ, 07/07/2012 - 15:48

ಉಮಾಶಂಕರ್ ಸರ್, ದನ್ಯವಾದಗಳು,

ತುಂಭಾ ಉತ್ತಮವಾಗಿ ಅಮೇರಿಕಾದ ಬಗ್ಗೆ ಬರೆದಿ್ದಿರಿ ಅಮೇರಿಕಾ ತಾನು ಬದುಕಲು ಮತ್ತು ಸರ್ವಾದಿಕಾರಿ ಎಂತ ಇರಲು ಏನು ಮಡಲು ಸರಿ ಎನ್ನುವುದಕ್ಕೆ ಸದ್ದಾಂ ಹುಸೇನ ಮತ್ತು ಲಾಡನ್ ಇವರ ಉದಾರಣೆ ಸಾಕ್ಷಿ ಎಕೆಂದರೆ " ಬೆಕ್ಕು ಹುಲಿಯ ಸೋದರ ಮಾವ ಅಲ್ಲವೆ"

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.