ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ಟೈಂಸ್ ಆಫ್ ಇಂಡಿಯಾ ಕನ್ನಡದಲ್ಲಿ ಅದರ ಇಂಗ್ಲೀಷ್ ಪತ್ರಿಕೆಯ ಅನುವಾದವನ್ನು ತರಲು ಹೊರಟಿದೆ. ಇದು ನಾವು ತುಂಬಾ ಸಂತೋಷ ಪಡಬೇಕಾದ ವಿಷಯ. ಆಗ ಕನ್ನಡದಲ್ಲಿ ವಿದೇಶಿ, ರಾಷ್ಟ್ರೀಯ ಸುದ್ದಿಗಳನ್ನು ಇನ್ನಷ್ಟು ಹೊಸ ದೃಷ್ಟಿ ಕೋನದಲ್ಲಿ ನಾವು ಓದುವಂತಾಗುತ್ತದೆ. ಕನ್ನಡ ಭಾಷೆ ಇನ್ನಷ್ಟು ಬೆಳೆಯುತ್ತದೆ. ಇದರಿಂದ ನಮ್ಮ ಸಂಸ್ಕೃತಿ ಹಾಳಾಗುತ್ತದೆ ಇತ್ಯಾದಿ ವಾದಗಳೆಲ್ಲ ಬರೀ ಬೊಗಳೆ ಮಾತ್ರ. ಈಗಾಗಲೇ ಲಕ್ಷಾಂತರ ಕನ್ನಡಿಗರು ಇಂಗ್ಲೀಷ್‌ನಲ್ಲಿ ಇದೇ ಪತ್ರಿಕೆಯನ್ನು ಓದುತ್ತಿದ್ದಾರೆ. ಇಂಗ್ಲೀಷನಲ್ಲಿ ಇದ್ದರೆ ಓಕೆ ಕನ್ನಡದಲ್ಲಿ ಬಂದರೆ ನಾಟ್ ಓಕೆ ಎಂಬ ವಾದ ಇಂಗ್ಲೀಷ್ ಗೊತ್ತಿರದ ಕನ್ನಡಿಗರ ಮೇಲೆ ಮಾಡುವ ದಬ್ಬಾಳಿಕೆಯೇ ಹೊರತು ಬೇರಾವ ಉದ್ದೇಶವು ಇಲ್ಲ.
ಇನ್ನು ಇದು ಬಂದರೆ ವಿಜಯಕರ್ನಾಟಕ ಮುಚ್ಚಿಹೋಗುತ್ತೆ ಎಂದೂ ಕೆಲವರು ಅನವಶ್ಯಕ ಭಯಗೊಳ್ಳುತ್ತಿದ್ದಾರೆ. ವಿಜಯಕರ್ನಾಟಕ ತುಂಬಾ ಸಮೃದ್ದಿಯಿಂದ ಕೂಡಿದ ಪತ್ರಿಕೆ. ಅಷ್ಟು ಸುಲಭವಾಗಿ ಮುಚ್ಚಿಹೋಗುವಂತಹದ್ದಲ್ಲ. ಹೊಸ ಪತ್ರಿಕೆ ಈಗಿರುವ ವಿಜಯಕರ್ನಾಟಕವನ್ನೂ ಮೀರಿಸುವಷ್ಟು ಚೆನ್ನಾಗಿ ಬಂದರೆ ಬರಲಿ ಬಿಡಿ! ಕನ್ನಡಕ್ಕೆ ಇನ್ನೂ ಒಳ್ಳೆಯ ಪತ್ರಿಕೆ ಸಿಕ್ಕಂತಾಗುತ್ತದೆ. ಏನಂತೀರಾ? ನಾವು ಬದಲಾವಣೆಗಳನ್ನು ಒಪ್ಪಿಕೊಳ್ಳೋಣ.
ಸಾಲುಗಳು
- Add new comment
- 5987 views
ಅನಿಸಿಕೆಗಳು
Re: ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ಟೈಂಸ್ ಆಫ್ ಇಂಡಿಯಾ ಹೊಸ ಕನ್ನಡ ಆವೃತ್ತಿ ತರುವುದು ಸಂತಸದ ವಿಷಯವೇ.ಅದರೆ ಅದಕ್ಕಾಗಿಅವರು "ಉಷಾ ಕಿರಣ" ಪತ್ರಿಕೆ ಯನ್ನು ಕೊಲ್ಲುವುದು ಬೇಡವಿತ್ತು. ಗಿರೀಶ್ ಕಾರ್ನಾಡ್ ಕನ್ನಡಕ್ಕೆ ಜ್ನಾನಪೀಠ ಕೊಟ್ಟಿದ್ದಾರೆ. ನಾವು ಅವರಿಗೆ ಏನು ಕೊಟ್ಟಿದ್ದೇವೆಂದು ಪತ್ರಿಕೆಯ ತುಂಬಾ ಬೆಂಗಳೂರಿನ ಪಬ್ ಗಲ್ಲಿ ನಡೆವ ಪಾರ್ಟಿಯಲ್ಲಿ ಅರೆ ಬೆತ್ತಲೆಯಾಗಿ ಕುಣಿಯುತ್ತಿರುವ ಹುಡುಗಿಯರ ಚಿತ್ರ ಪ್ರಕಟಿಸದಿರಲಿ ಟೈಂಸ್ ಆಫ್ ಇಂಡಿಯಾ .
ಒಂದು ಇಂಗ್ಲೀಷ್ ಪತ್ರಿಕೆಯ ಕನ್ನಡ ಅನುವಾದ ನೀಡುವ ಬದಲು "ಉಷಾ ಕಿರಣ" ಪತ್ರಿಕೆ ಯನ್ನು ಬೆಳೆಸಿದ್ದರೆ ಸಾಲದಿತ್ತೇ.
ಉತ್ತರ: ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ಉಷಾಕಿರಣ ನಿಲ್ಲಿಸಬೇಕಿತ್ತೋ ಬೇಡವೋ ಇದು ಚರ್ಚೆ ಮಾಡಬಹುದಾದ ವಿಷಯ.
ಆದರೆ ಗಮನಿಸಿ ಈಗಾಗಲೇ ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡಪ್ರಭ ಇತ್ಯಾದಿ ಕೊಡುತ್ತಿದ್ದ ವಿಷಯವನ್ನೇ ಬೇರೇ ರೀತಿ ಉಷಾಕಿರಣ ಕೊಡುತ್ತಿತ್ತು ಅಷ್ಟೇ. ಅದರಲ್ಲಿ ನನಗೇನು ಹೊಸತನ ಕಾಣಿಸಲಿಲ್ಲ. ಒಮ್ಮೆ ಟೈಂಸ್ ಆಫ್ ಇಂಡಿಯಾ ಓದುವಾಗ ಅದರಲ್ಲಿನ ಲೇಖನಗಳು ಕನ್ನಡದಲ್ಲಿದ್ದರೆ ಹೇಗಿರುತ್ತೆ ಅಂತ ಊಹೆ ಮಾಡಿ. ಅದರಲ್ಲಿ ನಿಜಕ್ಕೂ ಅತ್ಯಂತ ಒಳ್ಳೆಯ ಲೇಖನಗಳು ಬರುತ್ತವೆ.
ನಾವು ಕನ್ನಡಿಗರು ಬಾವಿಯಲ್ಲಿರುವ ಕಪ್ಪೆ ಆಗುವದು ಬೇಡ. ನಮ್ಮ ಕನ್ನಡ ಇದ್ದ ಹಾಗೇ ಇರಲಿ ವ್ಯಾಕರಣ ಬದಲಾಗಬಾರದು ಇತ್ಯಾದಿ ಮೂರ್ಖ ನಿಲುವುಗಳು ಕನ್ನಡದ ಅಂತ್ಯಕ್ಕೆ ಕಾರಣವಾಗುತ್ತದೇ ಹೊರತು ಅದರ ಬೆಳವಣಿಗೆಗೆ ಖಂಡಿತ ಅಲ್ಲ.
ಇಂದಿನ ಪೀಳಿಗೆಗೆ ಕನ್ನಡ ನೀರಸ ಭಾಷೆಯಾಗುತ್ತಿದೆ. ಇಂಗ್ಲೀಷ್ ಮೋಹ ಹೆಚ್ಚುತ್ತಿದೆ. ಇಂಗ್ಲೀಷ್‌ನಲ್ಲಿ ಏನೇನು ಬರುತ್ತೋ ಅದೆಲ್ಲ ಕನ್ನಡದಲ್ಲಿ ಅಷ್ಟೇ ರಸವತ್ತಾಗಿ ಸಿಕ್ಕರೆ ಸ್ವಲ್ಪ ಸಹಾಯ ಆಗುತ್ತದೆ. ತುಂಬಾ ಮಡಿವಂತಿಕೆ ಬೇಕಾಗಿಲ್ಲ. ಸುಂದರ ಗುಲಾಬಿಗೆ ಕೈ ಹಾಕಿದಾಗ ಮುಳ್ಳುಗಳು ಚುಚ್ಚುವಂತೆ, ತಂಗಾಳಿ ಬರಲಿ ಎಂದು ಕಿಟಕಿ ತೆಗೆದಾಗ ಸೊಳ್ಳೆಗಳು ಬಂದು ಕಚ್ಚುವಂತೆ ಈ ಹೊಸ ಕನ್ನಡ ಪತ್ರಿಕೆ ಕೆಲವು ಅಸಭ್ಯತೆಯನ್ನು ತರಬಹುದಾದರೂ ಅದು ಸಹನೀಯ. ಅವರ ಬಳಿ ಉತ್ತಮ ಬಂಡವಾಳವಿದೆ. ಅದನ್ನು ಬಳಸಿ ಉತ್ತಮ ಪತ್ರಿಕೆ ನಡೆಸುವ ಜಾಣತನ ಇದೆ. ಅದನ್ನು ನಾವು ಸಪೋರ್ಟ್ ಮಾಡೋಣ. ಹಾಕಿದ ಬಂಡವಾಳ ಬರಲಿ ಎಂಬ ಅವರ ವ್ಯಾಪಾರೀ ಮನೋಭಾವದಲ್ಲಿ ತಪ್ಪೇನಿಲ್ಲ. ಹಾಗೇ ನಡೆಸದ ಪತ್ರಿಕೆ ಹೆಚ್ಚು ಕಾಲ ಬದುಕುವದೂ ಇಲ್ಲ. ಹಾಗೆ ಬದುಕಿದರೂ ಅದರಲ್ಲಿ ಹೊಸತನವಿರುವದಿಲ್ಲ.
ಇದು ಇಂಗ್ಲೀಷ್ ಪತ್ರಿಕೆ ಅನುವಾದವಾದರೂ ಯಾವ ಕನ್ನಡ ಪತ್ರಿಕೆಯೂ ಅಂತರಾಷ್ಟ್ರೀಯ, ರಾಷ್ಟ್ರೀಯ ವಿಷಯಗಳನ್ನು ಟೈಂಸ್ ಆಫ್ ಇಂಡಿಯಾ ಬರೆದ ಶೈಲಿಯಲ್ಲಿ ಕೊಡುತ್ತಿಲ್ಲ. ಅದು ಕನ್ನಡಕ್ಕೆ ಹೊಸತು. ಏನಂತೀರಾ?
Re: ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ಇಲ್ಲ ರಾಜೇಶ್ ಅವರೆ ನೀವು ಕೆಳುವಶ್ಟು ಒಳ್ಳೆ ರೀತಿಯಲ್ಲಿ ನಡ್ಸಲ್ಲ ಟೈಮ್ಸ್ ಆಫ್ ಇಂಡಿಯನೋರು.
ಅವರಿಗೆ ಕನ್ನಡ ಕರ್ನಾಟಕ ಅಂದ್ರೆ ಅಸಡ್ಡೆ. ಒಂದು ಇಲ್ಲ ಎರಡು ಸರ್ತಿ ಆದ್ರೆ ಏನೋ ಅನ್ನಬಹುದು.ಸದಾ ಅವರು ನಮ್ಮ ಭಾಷೆ ಹಾಗು ನಾಡನ್ನು ಕೀಳಾಗಿ ನೋಡ್ತಾರೆ.
ಎಲ್ಲಾ ದಿನ ಪತ್ರಿಕೆಗಳಲ್ಲು ಬರೋ ಸಮಾಚಾರ ಒಂದೇ ಆದ್ರೆ ಅದನ್ನ ವ್ಯಕ್ತ ಪಡಿಸೊ ರೀತಿಲಿ ಇರೋದು ಜಾಣತನ- ಅದು ಅವರ ಭಾಷಾಭ್ಹಿಮಾನ, ನಾಡು,ಸಂಸ್ಕೃತಿ ಬಗ್ಗೆ ಇರೊ ಒಲವನ್ನು ತೋರಿಸುತ್ತೆ.
ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ.ಆದ್ರೆ ಅಶ್ಲೀಲತೆಯನ್ನಲ್ಲ!!...
Re: ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ಅಶ್ಲೀಲತೆಯನ್ನು ನಾನೂ ಒಪ್ಪಲ್ಲ. ಆದರೆ ಕನ್ನಡಕ್ಕೆ ವಿದೇಶಿ ಹಾಗೂ ರಾಷ್ಟ್ರೀಯ ವಿಷಯಗಳನ್ನು ವಿವರವಾಗಿ ಹೇಳುವ ಪತ್ರಿಕೆ ಬೇಕು. ಕನ್ನಡಿಗನ ಜ್ಞಾನ ಪರಿಧಿ ಹೆಚ್ಚಬೇಕು. ಇತ್ತೀಚೆಗೆ ಪಾಶ್ಚಿಮಾತ್ಯ ಅನುಕರಣೆ ಸಾಮಾನ್ಯವಾಗುತ್ತಿದೆ. ಅವರು ಫೇಸ್ ಮಾಡೋ ಸಮಸ್ಯೆಗಳನ್ನು ಯಾವೂದೇ ರೀತಿಯ ಬೇಧ ಭಾವವಿಲ್ಲದೇ ಆಧುನಿಕ ದೃಷ್ಟಿಕೋನದಲ್ಲಿ ನೋಡಿ ಎನಾಲಿಸಿಸ್(Analysis) ಮಾಡೋ ಪತ್ರಿಕೆ ಬೇಕು. ಆ ವಿಷಯದಲ್ಲಿ ಅವರು ಮುಂದಿದ್ದಾರೆ. ಆದ್ರೆ ಇಂಗ್ಲೀಷ್ ಪತ್ರಿಕೆಯಲ್ಲಿರೋ ಹಾಗೆ ಫಾರಿನ್ ಹುಡ್ಗಿರ ಅರೆನಗ್ನ ಚಿತ್ರ ಹಾಕಿದ್ರೆ ಗಲಾಟೆ ಮಾಡೋಣ. ಹೊಸತನ್ನು ಬಂದಾಗ ಅದನ್ನು ಸ್ವಾಗತಿಸೋಣ. ಯಾರಿಗೆ ಗೊತ್ತು ನಮ್ಮ ಕನ್ನಡದ ಅಭಿವೃದ್ದಿಗೆ ಸಹಾಯಕ ಆಗ್ಬಹುದು. ಪಾಸಿಟಿವ್ ಆಗಿ ಯೋಚನೆ ಮಾಡೋಣ. ಪತ್ರಿಕೆನೆ ಬರದೆ ಅದು ಹಾಗೆ ಇರತ್ತೆ ಹೀಗೆ ಇರತ್ತೆ ಅಂತ ಕಲ್ಪನೆ ಮಾಡ್ದ್ರೆ ಅದಕ್ಕೆ ಅರ್ಥ ಇಲ್ಲ. ಇದು ನನ್ನ ಅನಿಸಿಕೆ.
ಕನ್ನಡದಲ್ಲಿ ಕನ್ನಡದ ಬಗ್ಗೆ ವಿರೋಧವಾಗಿ ಬರದ್ರೆ ಆ ಅನುವಾದಕರು ಬಫೂನ್‌ಗಳೇ ಆಗಿ ಬಿಡ್ತಾರೆ. ಅನವಶ್ಯಕ ಭಯ ಬೇಡ.
Re: ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ಮಿತ್ರರೇ,
ಕನ್ನಡ hep n happenning ಭಾಷೆಯಲ್ಲ ಎಂಬ ಒಂದು ಅನಿಸಿಕೆ ಎಲ್ಲ ಯುವಕರಲ್ಲಿ ಮೂಡಿದೆ. ಕನ್ನಡದಲ್ಲೂ ಇಂಗ್ಲೀಷ್‌ನ್ನು ಮೀರಿಸುವಂತೆ ಬರೆಯಬಹುದು ಎಂದು ನಮ್ಮ ಯುವಜನತೆಗೆ ಅರಿವು ಬರಲಿ.ಇದರಿಂದ ಭಾಷೆ ಬೆಳೆಯಲಿ. 15 ವರ್ಷಗಳಿಂದ TOI ಇಂಗ್ಲೀಷ್‌ನಲ್ಲಿ ಅದೇನು ಮೋಡಿ ಮಾಡಿತ್ತೋ ಅದು ಈಗ ಕನ್ನಡದಲ್ಲಿ ಮರುಕಳಿಸಲಿ ಎಂದು ಶುಭ ಹಾರೈಸುವೆ.
Re: ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ನೀವು ಹೇಳುವುದು ಒಂದು ರೀತಿಯಲ್ಲಿ ಸರಿ ಆಗಿದ್ದರು, ಈಗಾಗಲೆ ನಮ್ಮ ಗೆಳೆಯರು ಹೇಳಿದಂತೆ ಟೈಮ್ಸ್ ಓಫ್ ಇಂಡಿಯ ನಲ್ಲಿ ಬರುವ ಬಹುತೇಕ ಲೇಕನಗಳು ಕನ್ನಡ ಹಾಗೂ ಕನ್ನಡಿಗರ ವಿರುದ್ಧವಾಗಿರುತ್ತದೆ. ಅಸ್ಟೇಕೆ ಒಮ್ಮೆ ಅವರು ಈ ಪತ್ರಿಕೆ ಬಗ್ಗೆ ಕೊಟ್ಟಿರುವ ಜಾಹೀರಾತನ್ನು ಗಮನಿಸಿ, ಅಲ್ಲಿ ಕೊಟ್ಟಿರುವ ಕನ್ನಡಿಗರ ಹೆಸರುಗಳನ್ನು ಗಮನಿಸಿ, ಐಶ್ವರ್ಯ ರೈ ಅಂತೆ , ಇವಳು ತಾನು ಎಂದು ತಾನು ಕನ್ನಡಿಗಳು ಅಂತ ಹೇಳಿ ಕೊಳ್ಳಲು ಹೆಮ್ಮೆ ಪಟ್ತಿಲ್ಲ. ನಮ್ಮ ಹೆಮ್ಮೆಯ ಕನ್ನಡಿಗರಾದ ಕುವೆಂಪು, ವಿಶ್ವೇಶ್ವರಯ್ಯ, ಶಿವರುದ್ರಪ್ಪ, ಡಾ || ರಾಜ್ ಇವರ ಯಾರ ಹೆಸರುಗಳು ವ್ಯಕ್ತವಾಗಿಲ್ಲ. ಇಲ್ಲೇ ಗೊತ್ತಾಗುತ್ತೆ ಟೈಮ್ಸ್ ಓಫ್ ಇಂಡಿಯಾದವರ ಕನ್ನಡ ಪ್ರೇಮ.
Re: ನಾವು ಬದಲಾವಣೆಯನ್ನು ಒಪ್ಪಿಕೊಳ್ಳೋಣ
ನಮ್ಮ ಜನರು ಮೇಲೆ ಹೋದಂತೆ ಕನ್ನಡದ ಬಗ್ಗೆ ಅಸಡ್ಡೆ ಜಾಸ್ತಿಯಗುತ್ತೆ.ಇದ್ದಕ್ಕೆ ಮೂಲ ಕಾರಣ ಅವರಲ್ಲಿರುವ ಕೀಳರಿಮೆ.ಕನ್ನಡ ಮಾತನಾಡಿದರೆ,ಕನ್ನಡ ಪತ್ರಿಕೆ ಓದಿದರೆ ಏನೋ ಒಂಥರಾ ಕೀಳು ಅಂತ ಬಾವನೆ ಬೆಳೆಸಿಕೊಂಡಿರುತ್ತಾರೆ.ನಮ್ಮ ಜನರಿಗೆ ಬೇಕಾಗಿರುವುದು ಮೊದಲು ಆತ್ಮ ವಿಶ್ವಾಸ.ತಾವು ಯಾವದ್ರಲ್ಲು ಕಮ್ಮಿ ಇಲ್ಲ ಅಂತ ತೋರಿಸಬೇಕು..ಈಗ ವಿಜಯ ಕರ್ನಾಟಕ ಮತ್ತು ಟೈಮ್ಸ್ ಆಫ್ ಇಂಡಿಯಾ ಎರಡು ಬರಿ ಜಾಹಿರಾತು ತುಂಬಿಕೊಂಡು ತುಂಬಾ ಅಸಹ್ಯವಾಗಿದೆ. ಕೆಲವೊಂದು ಕ್ಷೇತ್ರಗಳಿಗೆ ಬೇಕಾಗಿರುವುದು ಒಂದು ನಿಸ್ಪ್ರುಹ ಮನಸ್ಸು ಮತ್ತು ವಿಷಯದ ಮೇಲೆ ಶ್ರದ್ದೆ..ಅಂತ ಕ್ಷೇತ್ರಕ್ಕೆ ಬರಿ ವ್ಯಾಪಾರಿ ಬುದ್ದಿ ಬಂದು ಬಿಟ್ಟರೆ ಏನಾಗುತ್ತದೆ ಅನ್ನುವುದ್ದಕೆ ಸಾಕ್ಷಿ ಈಗಿನ ವಿಜಯ ಕರ್ನಾಟಕ.
prasadhegde