ಭಿಕ್ಷೆ ಮತ್ತು ಭಕ್ಷೀಸು
ಜೇಬಿನಲ್ಲಿದ್ದ ನೋಟಿನ ಕಂತೆಗಳ ಭಾರದಿಂದ ಪಕ್ಕದಲ್ಲಿರುವ ಬಾರಿಗೆ ಹೋಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆನಿಸುತ್ತಿತ್ತು ಮನೋಜನಿಗೆ. ರಸ್ತೆ ದಾಟಿ ಬಾರಿನ ಬಾಗಿಲಿನತ್ತ ಹೆಜ್ಜೆ ಹಾಕುತ್ತಿದ್ದಾಗ ಅಡ್ಡ ಬಂದನೊಬ್ಬ ಕೊಳಕು ಬಟ್ಟೆಯ ಭಿಕ್ಷುಕ. 'ಅಣ್ಣಾ...' ಎಂದು ಕೈ ಚಾಚಿದ. ಪರ್ಸಿನಲ್ಲಿರುವ ಚಿಲ್ಲರೆಯ ನೆನಪಾದರೂ ಸಹ ಅದನ್ನು ಆ ಭಿಕ್ಷುಕನಿಗೆ ಕೊಡಬೇಕು ಅನಿಸಲಿಲ್ಲ ಮನೋಜನಿಗೆ. 'ಮೈ ಬಗ್ಗಿಸಿ ದುಡಿಯಲು ಆಗದ ಸೋಮಾರಿಗಳು ಈ ತರಹ ಭಿಕ್ಷೆ ಬೇಡುವುದು' ಎಂಬ ಜಾಣ್ಣುಡಿ ನೆನಪಾಗಿ ತಲೆ ಅಡ್ಡಡ್ಡ ಆಡಿಸಿ ಬಾರಿನತ್ತ ನಡೆದನು. ಪೆಗ್ಗಿನ ಮೇಲೆ ಪೆಗ್ಗು ಕೆಳಗಿಳಿದು ಮೈಮೇಲೆ ಭಗವಂತನ ಆವಾಹನೆಯಾಗಿತ್ತು. ನೆಲದ ಜೊತೆಯಲ್ಲಿ ಕುಳಿತಿರುವ ಖುರ್ಚಿಯೂ ಸಹ ಅಲುಗಾಡುತ್ತಿರುವಂತಿತ್ತು. ತೊದಲುತ್ತಿರುವ ನಾಲಿಗೆಯನ್ನು ತಹಬಂದಿಗೆ ತಂದು 'ಬಿಲ್ ತಗೊಂಡು ಬಾ' ಎಂದು ವೇಟರ್ ಗೆ ಹೇಳಿದನು. ವೇಟರ್ ತಂದ ಬಿಲ್ ನೋಡಿ ಜೇಬಿನಿಂದ ಹಣವನ್ನು ತೆಗೆದು ಅವನ ಕೈಗೆ ಕೊಟ್ಟನು. ಬಿಲ್ ಹಣವನ್ನು ಪಾವತಿಸಿ ಉಳಿದ ಚಿಲ್ಲರೆಯನ್ನು ತಂದುಕೊಟ್ಟ ವೇಟರ್ ಗೆ ನೂರು ರೂಪಾಯಿಯ ನೋಟೊಂದನ್ನು ನೀಡಿ 'ಟಿಪ್ಸ್' ಎಂದನು. ಥ್ಯಾಂಕ್ಸ್ ಎಂದು ಹೇಳಿ ಅದನ್ನು ಜೇಬಿಗಿಳಿಸಿದ ವೇಟರ್ ಮುಂದಿನ ಟೇಬಲ್ಲಿನತ್ತ ನಡೆದನು. ಅಲುಗಾಡುತ್ತಿರುವ ಧರೆಯನ್ನು ಹೇಗೋ ಸಂಭಾಳಿಸಿ ಬಾಗಿಲಿನತ್ತ ನಡೆದ ಮನೋಜನಿಗೆ ಎಲ್ಲವೂ ಎರಡೆರಡಾಗಿ ಕಾಣಿಸುತ್ತಿತ್ತು. ಬಿಲ್ ಕೌಂಟರಿನ ಪಕ್ಕ ಬರುವಷ್ಟರಲ್ಲಿ ದೊಪ್ಪನೆಂದು ಕೆಳಗೆ ಉರುಳಿದ್ದನು. ಇವನನ್ನು ನೋಡಿದ ಬಿಲ್ ಕೌಂಟರಿನಲ್ಲಿ ಕುಳಿತಿದ್ದ ದಢೂತಿ ಆಸಾಮಿ, 'ಇವರದ್ದು ಇದೇ ಆಗೋಯ್ತು' ಎಂದು ಗೊಣಗುತ್ತಾ ವೇಟರ್ ನನ್ನು ಕೂಗಿ 'ಇವರನ್ನು ಕರೆದುಕೊಂಡು ಹೋಗಿ ಹೊರಗೆ ಬಿಟ್ಟು ಬಾ ಹೋಗು' ಎಂದನು. ಒಲ್ಲದ ಮನಸ್ಸಿನಿಂದಲೇ ಅವನ ಕೈ ಹಿಡಿದು ಎಬ್ಬಿಸಿ ಬಾಗಿಲಿನತ್ತ ನಡೆಸಿಕೊಂಡು ಹೋದನು ಅವನಿಂದ ನೂರು ರೂಪಾಯಿಯ ಭಕ್ಷೀಸು ಪಡೆದುಕೊಂಡಿದ್ದ ವೇಟರ್. ಬಾಗಿಲನ್ನು ದಾಟಿ ರಸ್ತೆಯ ಹತ್ತಿರ ಬಂದು ನಿಲ್ಲಿಸಿ, ವಾಪಸ್ಸು ತಿರುಗಿದ ವೇಟರ್ ನನ್ನು ದೈನ್ಯತಾ ಭಾವದಿಂದ ನೊಡುತ್ತಾ 'ನನ್ನನ್ನು ರಿಕ್ಷಾ ಸ್ಟಾಂಡಿನ ತನಕ ಬಿಟ್ಟು ಬಾರಪ್ಪಾ ಪ್ಲೀಸ್' ಎಂದನು ಮನೋಜ. 'ಕಂಠಪೂರ್ತಿ ಕುಡಿಯುವಾಗ ಗೊತ್ತಾಗಲ್ವಾ, ನನಗೆ ಕೆಲಸ ಇದೆ' ಎಂದು ಹೇಳಿ ಮನೋಜನನ್ನು ಅಲ್ಲಿಯೇ ಬಿಟ್ಟು ಬಾರಿನೊಳಗೆ ನಡೆದನು. ಮನೋಜನಿಗೆ ತಲೆ ಗಿರ್ರೆನ್ನುತ್ತಿತ್ತು. ಮುನ್ನೂರು ಮೀಟರ್ ದೂರದಲ್ಲಿರುವ ರಿಕ್ಷಾ ಸ್ಟಾಂಡಿನ ಹತ್ತಿರ ಹೋಗುವಷ್ಟು ತ್ರಾಣವಿರಲಿಲ್ಲ. ಬಾರಿನ ಪಕ್ಕದ ಅಂಗಡಿಯ ಮುಚ್ಚಿದ ಬಾಗಿಲನ್ನು ಆಸರೆಯಾಗಿಟ್ಟುಕೊಂಡು ನಿಂತುಕೊಳ್ಳಲು ಪ್ರಯತ್ನಿಸತೊಡಗಿದನು. ಬಳಕ್ಕನೆ ವಾಂತಿ ಮಾಡಿಕೊಂಡನು. ಕಣ್ಣಿಗೆ ಕತ್ತಲು ಆವರಿಸಿತು.
ಅವನು ನಿಧಾನವಾಗಿ ಕಣ್ಣು ತೆರೆದನು. ತಲೆಗೆ ಯಾರೋ ಸುತ್ತಿಗೆಯಿಂದ ಬಡಿಯುತ್ತಿರುವ ಅನುಭವ. ತಾನು ಎಲ್ಲಿದ್ದೇನೆ ಎಂಬುದು ತಿಳಿಯಲಿಲ್ಲ. ತಾನೆಲ್ಲೋ ಮಲಗಿದ್ದೇನೆ. ಇದು ನನ್ನ ಹಾಸಿಗೆಯಂತೂ ಅಲ್ಲ. ಮೈಮೇಲೆ ಯಾವುದೋ ಬಟ್ಟೆಯನ್ನು ಹಾಸಿದ್ದಾರೆ. ಅವನು ಧಿಗ್ಗನೆ ಎದ್ದು ಕುಳಿತನು. ಪಕ್ಕದಲ್ಲಿ ಅದೇ ಕೊಳಕು ಭಿಕ್ಷುಕ ಕುಳಿತಿದ್ದನು. 'ಅಣ್ಣಾ ರಾತ್ರಿ ನೀವು ಸಿಕ್ಕಾಪಟ್ಟೆ ಕುಡಿದು ಜ್ಞಾನತಪ್ಪಿ ಬಿದ್ದಿದ್ರಿ. ನಾನೇ ನಿಮ್ಮನ್ನು ಇಲ್ಲಿ ತಂದು ಮಲಗಿಸಿದ್ದು' ಎಂದನು. ಮನೋಜನಿಗೆ ಗಾಬರಿಯಾಯಿತು. ಅಂದರೆ ತಾನು ರಾತ್ರಿಯಿಂದ ರಸ್ತೆಯ ಪಕ್ಕ ಭಿಕಾರಿಯಂತೆ ಮಲಗಿದ್ದೆನು ಎಂದು ತಿಳಿದು ಶಾಕ್ ಆಯಿತು. ಒಮ್ಮೆಲೆ ಕೈ ಪ್ಯಾಂಟಿನ ಜೇಬಿನತ್ತ ಹೋಯಿತು. ಅದರೊಳಗಿದ್ದ ನೋಟಿನ ಕಂತೆ ಕೈಗೆ ತಾಗಿದ ಕೂಡಲೇ ಹೋದ ಜೀವ ಬಂದ ಹಾಗಾಯಿತು. ರಾತ್ರಿಯ ಘಟನೆಗಳು ಒಂದೊಂದಾಗಿ ನೆನಪಾದವು. ಈ ಭಿಕ್ಷುಕ ನನ್ನೆದುರಿಗೆ ಬಂದು ಕೈ ಚಾಚಿದ್ದಾಗ ಇವನಿಗೆ ಚಿಲ್ಲರೆಯನ್ನೂ ನೀಡಿರಲಿಲ್ಲ. ಆದರೆ ಇವನು ನನ್ನನ್ನು ಉಪಚರಿಸಿ ಇಲ್ಲಿ ಮಲಗಿಸಿದ್ದಾನೆ. ಅಲ್ಲದೇ ಜೇಬಿನಲ್ಲಿದ್ದ ಹಣವನ್ನೂ ಸಹ ಮುಟ್ಟಿಲ್ಲ ಎಂಬುದರ ಅರಿವಾಗಿ ಅವನ ಬಗ್ಗೆ ಹೆಮ್ಮೆಯೆನಿಸಿತು. ಹಾಗೆಯೇ ತನ್ನಿಂದ ನೂರು ರೂಪಾಯಿಯ ಭಕ್ಷೀಸು ಪಡೆದಿದ್ದ ವೇಟರ್ ನ ಕೃತಘ್ನತೆಯೂ ನೆನಪಾಯಿತು. ಒದ್ದೆಯಾದ ಕಂಗಳನ್ನು ಒರೆಸಿಕೊಳ್ಳುತ್ತಾ ಎದ್ದ ಮನೋಜ ಭಿಕ್ಷುಕನಿಗೆ 'ಥ್ಯಾಂಕ್ಸ್' ಎಂದು ಹೇಳಿ ಹೊರಡಲನುವಾದ. 'ಅಣ್ಣಾ...' ಎಂಬ ಧ್ವನಿ ಕೇಳಿ ಭಿಕ್ಷುಕನತ್ತ ತಿರುಗಿದನು. ಕೈಚಾಚಿ ಅದೇ ದೀನ ಮುಖದೊಂದಿಗೆ ಕುಳಿತಿದ್ದ ಆ ಭಿಕ್ಷುಕ. ಕೈಯನ್ನು ಜೇಬಿನೊಳಗೆ ತೂರಿಸಿ ನೂರರ ಎರಡು ನೋಟುಗಳನ್ನು ತೆಗೆದು ಭಿಕ್ಷುಕನತ್ತ ಚಾಚಿದನು. 'ಅಷ್ಟೆಲ್ಲಾ ಬೇಡಣ್ಣಾ. ಒಂದ್ ಹತ್ತು ರೂಪಾಯಿ ಇದ್ದರೆ ಕೊಡಿ ಚಾ ಕುಡಿತೀನಿ' ಎಂದಾಗ ಮನೋಜನಿಗೆ ಹೃದಯದಲ್ಲಿ ಸಲಾಕೆಯಿಂದ ಇರಿದ ಅನುಭವವಾಯಿತು. ಬೇಡವೆನ್ನುತ್ತಿದ್ದರೂ ಒತ್ತಾಯಪೂರ್ವಕವಾಗಿ ಆ ನೋಟುಗಳನ್ನು ಅವನ ಕೈಯಲ್ಲಿಟ್ಟು ನಡೆದನು. ಭಿಕ್ಷೆಗೂ ಮತ್ತು ಭಕ್ಷೀಸಿಗೂ ಏನು ವ್ಯತ್ಯಾಸವೆಂದು ಮನಸ್ಸು ಪ್ರಶ್ನಿಸುತ್ತಿತ್ತು.
- ಸ.Kha.
ಸಾಲುಗಳು
- Add new comment
- 1274 views
ಅನಿಸಿಕೆಗಳು
ನನ್ನ ಕಥೆ ಹೇಗಿದೆಯೆಂದು ನಿಮ್ಮ
ನನ್ನ ಕಥೆ ಹೇಗಿದೆಯೆಂದು ನಿಮ್ಮ ಅಭಿಪ್ರಾಯ ತಿಳಿಸಿ.
ನನ್ನ ಕಥೆ ಹೇಗಿದೆಯೆಂದು ನಿಮ್ಮ
ನನ್ನ ಕಥೆ ಹೇಗಿದೆಯೆಂದು ನಿಮ್ಮ ಅಭಿಪ್ರಾಯ ತಿಳಿಸಿ.
Thumbha channagide
Thumbha channagide
ಧನ್ಯವಾದ ಚಂದ್ರ ರವರೆ...
ಧನ್ಯವಾದ ಚಂದ್ರ ರವರೆ...
ತುಂಬ ಚೆನ್ನಗಿದೆ
ತುಂಬ ಚೆನ್ನಗಿದೆ