Skip to main content

ಏಟಿಎಂ ಗಳಲ್ಲಿ ಕನ್ನಡದ ಹಣೆಬರಹ

ಬರೆದಿದ್ದುNovember 28, 2013
11ಅನಿಸಿಕೆಗಳು

ಮೊನ್ನೆ ಬೆಂಗಳೂರಿನಲ್ಲಿ ಏಟಿಎಂ ಹಲ್ಲೆ ಘಟನೆ ನಂತರ ಪೋಲಿಸರು ಸಾವಿರಾರು ಏಟಿಎಂಗಳನ್ನು ಮುಚ್ಚಿಸಿದರು. ಹಲವಾರು ಏಟಿಎಂ ಗಳ ಮೇಲೆ ಇದನ್ನು ಸುರಕ್ಷತೆ ಕಾರಣದಿಂದ ಮುಚ್ಚಲಾಗಿದೆ ಎಂದು ಇಂಗ್ಲೀಷ್ ಅಲ್ಲಿ ಮಾಹಿತಿ ಬರೆದಿದ್ದರು. ಆದರೆ ಕನ್ನಡದಲ್ಲಿ? ಉಹೂಂ ನಾನಂತೂ ನೋಡಿಲ್ಲ. ಇಷ್ಟೇ ಯಾಕೆ. ಅಕಸ್ಮಾತ್ ಏಟಿಎಂ ಅಲ್ಲಿ ಹಣ ಇಲ್ಲದಿದ್ದರೂ ಅಥವಾ ಕೆಲಸ ಮಾಡುತ್ತಿಲ್ಲವಾದರೂ ಕನ್ನಡದಲ್ಲಿ ಬರೆದಿರುವದಿಲ್ಲ. NO CASH ಅಥವಾ NOT WORKING ಎಂದು ಬೋರ್ಡ್ ಹಾಕಿರುತ್ತಾರೆ.

ನನ್ನ ಪ್ರಶ್ನೆ ಇಷ್ಟೇ ಕನ್ನಡ ಶಾಸ್ತ್ರೀಯ ಭಾಷೆ ಆಗಿಲ್ಲ ಎಂದು ಮೊಸಳೆ ಕಣ್ಣೀರು ಸುರಿಸುತ್ತಾ ಧರಣಿ, ಲಾಬಿ ಮಾಡಿದ ನಾವು ಇಂತಹ ಕಡೆ ಕನ್ನಡ ಬಳಕೆ ಆಗದಿದ್ದಾಗ ಯಾಕೆ ಧರಣಿ ಕೂರುವದಿಲ್ಲ? ರಾಜಕೀಯ ಅಥವಾ ಹಣದ ಲಾಭ ಇಲ್ಲವೆಂದೇ? ಎಲ್ಲೋ ಒಂದು ಹಿಂದಿ ಬೋರ್ಡ್ ಇದ್ದಿದ್ದರೆ ಆ ಏಟಿಎಂ ಅನ್ನು ಒಡೆದು ಬಿಡುತ್ತಿದ್ದರೇನೋ. ಆದರೆ ಕನ್ನಡಕ್ಕೆ ಬದಲಾಗಿ ಬರೀ ಇಂಗ್ಲೀಷ್ ಅಲ್ಲಿ ಮಾಹಿತಿ ನೀಡಿದಾಗ ಸುಮ್ಮನಿರುತ್ತೇವೆ. ರಾಜಕೀಯ ಅಥವಾ ಹಣದ ಲಾಭವಿಲ್ಲವೆಂದೆ?

ಇನ್ನು ಏಟಿಎಂ ಅಲ್ಲಂತೂ ಹೆಚ್ಚಿನ ಕಡೆ ಕನ್ನಡ ಇಂಟರ್ಫೇಸ್ ಇರುವದಿಲ್ಲ. ಬೆರಳೆಣಿಕೆ ಕಡೆ ಇದ್ದರೂ ಕೆಟ್ಟ ಭಾಷಾಂತರದ ಸಮಸ್ಯೆ. ಅದಕ್ಕಿಂತ ಇಂಗ್ಲೀಷ್ ಅಲ್ಲಿ ಓದಿದರೆ ಬೇಗ ಅರ್ಥ ಆಗುತ್ತದೆ. ಉದಾಹರಣೆಗೆ Collect your cash ಎಂಬುದನ್ನು "ನಿಮ್ಮ ನಗದು ಪಡೆದುಕೊೞಿ" ಎಂದು ಕೆಟ್ಟದಾಗಿ ಭಾಷಾಂತರಿಸಿರುತ್ತಾರೆ. "ನಿಮ್ಮ ಹಣ ತೆಗೆದುಕೊೞಿ" ಎಂದು ಜನರಿಗೆ ಅರ್ಥವಾಗುವಂತೆ ಬರೆದಿದ್ದರೆ ಎಷ್ಟು ಚೆನ್ನಾಗಿರುತಿತ್ತು? ಅಲ್ವಾ? ಕನ್ನಡಿಗರಿಗೆ ಹಣ ಎಂದರೆ ಕೂಡಲೆ ನೆನಪಿಗೆ ಬರುವದು ಕ್ಯಾಶ್ ಹೊರತು ಕ್ರೆಡಿಟ್ ಕಾರ್ಡ್, ಚೆಕ್ ಅಲ್ಲ. ಇದು ಬರಿ ಬೆಂಗಳೂರಿನ ಕಥೆ ಅಲ್ಲ. ಇಡೀ ಕರ್ನಾಟಕದಲ್ಲಿರುವ ಏಟಿಎಂ ಗೆ ಹೋದರೆ ನೋಡ ಸಿಗುವದು.

ಇಂದು ಕನ್ನಡಿಗರು ಮಕ್ಕಳಿಗೆ ಕನ್ನಡ ಕಲಿಸಲು ಆಸಕ್ತಿ ತೋರಿಸದಿರಲು, ಇತರ ಭಾಷಿಕರು ಮಕ್ಕಳಿಗೆ ಇಂಗ್ಲೀಷ್ ಮಾತ್ರ ಕಲಿಸಲು ಇಂತಹ ಘಟನೆಗಳ ಮುಖ್ಯ ಕಾರಣ. ಇಂತಹ ಸಾವಿರಾರು ಘಟನೆಗಳು ಕನ್ನಡವನ್ನು ದಿನಬಳಕೆಯಿಂದ ದೂರ ಮಾಡುತ್ತಿದೆ. ಕನ್ನಡಿಗರಿಗೆ ಭಾಷೆಯ ಮೇಲೆ ಅಭಿಮಾನವಿಲ್ಲವೆಂದು ಹೇಳುವ ಮುನ್ನ ಇಂತಹ ಕಡೆ ಕನ್ನಡ ಬಳಕೆ ಹೆಚ್ಚಿಸಬೇಕು. ಅಷ್ಟೇ ಅಲ್ಲ ಸರಿಯಾದ ಸುಲಭವಾಗಿ ಅರ್ಥ ಆಗುವ ಕನ್ನಡ ಬಳಸಬೇಕು. ಏನಂತೀರಾ? ಈ ಲೇಖನಕ್ಕೆ ಕನ್ನಡದಲ್ಲಿ ಟೈಪ್ ಮಾಡಿ ಅನಿಸಿಕೆ ವ್ಯಕ್ತಪಡಿಸುವದು ಕಷ್ಟ ಅಂತೀರಾ? ಇಂಗ್ಲೀಷ್ ಅಲ್ಲೇ ಮಾಡಿ ಪರವಾಗಿಲ್ಲ!!

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ಪಿಸುಮಾತು ಗುರು, 11/28/2013 - 16:16

ಹೌದು, ಕೆಲವು ಎಟಿಎಂ ಗಳಲ್ಲಿ ಕನ್ನಡ ಆಯ್ಕೆಯೇ ಇಲ್ಲದೆ ಆಂಗ್ಲ ಮತ್ತು ಹಿಂದಿ ಆಯ್ಕೆ ಇದೆ. ನಮ್ಮ ಪ್ರದೇಶದ ಒಂದು ಎಟಿಎಂ ನಲ್ಲಿ ಕನ್ನಡದ ಬದಲು ಮರಾಠಿ ಇದೆ. ಮತ್ತೊಂದರಲ್ಲಿ ‘ಕನ್ನಡ‘ ಗುಂಡಿ ಒತ್ತಿದರೆ ಮರಾಟಿ ತೆರೆದುಕೊಳ್ಳುತ್ತದೆ. 

ರಾಜೇಶ ಹೆಗಡೆ ಶನಿ, 11/30/2013 - 08:02

ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಪತಿ ಅವರೇ,


ವಾಸ್ತವಿಕವಾಗಿ ಕರ್ನಾಟಕದಲ್ಲಿನ ಎಲ್ಲ ಏಟಿಎಂ ಗಳಲ್ಲಿ ಕನ್ನಡದಲ್ಲಿ ಏಟಿಎಂ ಬರೀ ಇಂಟರ್ ಫೇಸ್ ಇರಬೇಕು. ಬೇರೆ ಭಾಷೆ ಬೇಕಾದರೆ ಬದಿಯಲ್ಲಿ ಎಲ್ಲಾದರೂ Languages ಎಂಬ ಬಟನ್ ನೀಡಿ ಅಲ್ಲಿ ಬೇರೆ ಭಾಷೆ ಆಯ್ಕೆ ಮಾಡುವ ಹಾಗಿರಬೇಕು ಅನ್ನುವದು ನನ್ನ ಅನಿಸಿಕೆ. ಆಗ ಕನ್ನಡ ಬಲ್ಲವರಿಗೆ ಉಪಕಾರ ಆಗುತ್ತದೆ. ಒಬ್ಬರೋ ಇಬ್ಬರೋ ದನಿ ಎತ್ತಿದರೆ ಇದಕ್ಕೆ ಕ್ರಮ ಯಾರೂ ತೆಗೆದು ಕೊೞುವದಿಲ್ಲ.


ಕನ್ನಡ ಸಮ್ಮೇಳನಗಳು ಇಂತಹ ವಿಚಾರಗಳ ಬಗ್ಗೆ ದನಿ ಎತ್ತಿ ಕನ್ನಡ ಇಂಟರ್ಫೇಸ್ ಎಲ್ಲ ಏಟಿಎಂ ಅಲ್ಲಿ ತರುವಲ್ಲಿ ಯಶಸ್ವಿಯಾದರೆ ಉತ್ತಮ. ಸರಕಾರ ಕನ್ನಡದ ಪರವಾಗಿ ಏಟಿಎಂ ಕಾನೂನನ್ನು ತಂದರೆ ಕೂಡಾ ಇದಕ್ಕೆ ನೆರವಾಗಬಹುದು.

ಪಿಸುಮಾತು ಶನಿ, 11/30/2013 - 09:35

ನಿವು ಹೇಳಿದ್ದು ಸರಿ, ಕರ್ನಾಟಕದಲ್ಲಿ ಕನ್ನಡ ಪ್ರಮುಖ ಭಾಷೆಯಾಗಿ ದೊರೆಯಬೇಕು. ಆಂಗ್ಲ ಅಥವಾ ಹಿಂದಿಯನ್ನು ಪಕ್ಕದಲ್ಲಿ ನೀಡಿದರೆ ಬೇಕಾದವರು ಉಪಯೋಗಿಸುತ್ತಾರೆ.

ನವೀನ್ ಚ೦ದ್ರ ಶುಕ್ರ, 11/29/2013 - 10:45

ಇದೊಂದು ಕನ್ನಡಿಗರ ಹಾಗೂ ಕನ್ನಡಭಾಷೆಯ ದುರಂತವೇ ಸರಿ,ನವೆಂಬರ್ ನಲ್ಲಾದರೂ ಇದ್ದ ಕನ್ನಡಾಭಿಮಾನ ಅದು ಈಗ ಮಾಯವಾಗುತ್ತಿದೆ,, 

ಮುಂದೆನಾಗುವುದೋ ತಿಳಿಯದು,,,

ರಾಜೇಶ ಹೆಗಡೆ ಶನಿ, 11/30/2013 - 08:07

ಧನ್ಯವಾದಗಳು ನವೀನ ಚಂದ್ರ,


ಅಭಿಮಾನದ ತಳಹದಿಯಲ್ಲಿ ಕನ್ನಡ ಭಾಷೆ ಬೆಳೆಯದು ಅನಿವಾರ್ಯತೆ ಆದಾಗ ಮಾತ್ರ ಅದು ಬೆಳೆಯುವದು. ಕನ್ನಡ ಭಾಷೆ ಎಲ್ಲ ಕಡೆ ಉಪಯುಕ್ತ ಭಾಷೆ ಆಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೆ ಕನ್ನಡ ಬೆಳೆಯುವದು.

ರವಿಶಾಂತ್ ಶನಿ, 12/14/2013 - 14:45

ನಲ್ಮೆಯ ರಾಜೇಶ ಹೆಗಡೆಯವರೆ,

ಪ್ರಸ್ತುತ ನಮ್ಮ ಕರ್ನಾಟಕದ ನಮ್ಮ ಭಾಷೆಯ ನಿಸ್ಟೂರತೆಯ ನಿಜಸ್ವರೂಪವನ್ನ ನೀವಾದರು ಚಿಂತಿಸಿ ಹಲವರಿಗೆ ತಿಳಿಯಪಡಿಸಿದ, ನಿಮ್ಮೀರೀತಿ ನನಗೆ ತುಂಬಾ ಮೆಚ್ಚುಗೆಯಾಗಿದೆ,

ಆತ್ಮೀಯರೆ ಪ್ರಥಮವಾಗಿ ನಿಮಗೆ ನನ್ನ ನಮನಗಳು,

ಕನ್ನಡಾಂಬೆಯ ಮಕ್ಕಳೆಲ್ಲ ನಿಮ್ಮಂತೆಯೆ ಚಿಂತೆಸಿ ಬದಳಾದರೆ,

ಉಪೇಂದ್ರರವರು ನಟಿಸಿದ "ಸೂಪರ್" ಚಿತ್ರದ ಅಂತಿಮ ಸಮಯದಲ್ಲಿನ ಕತೆಯಂತೆ ಕರ್ನಾಟಕ ಬೆಳೆಯಬಲ್ಲದು,

ಎಲ್ಲದಕ್ಕು ಮನಸ್ಸು ಬೇಕು "ಮನಸ್ಸಿದ್ದರೆ ಮಾರ್ಗ".

ನಿಮಗಿರುವಂತ ಭಾಷಾಪ್ರೇಮ ಕನ್ನಡದ ಕಂದಗಳಿಗೆಲ್ಲ ಆ ದೇವರು ಕರುಣಿಸಲಿ ಎಂಬುದು ನನ್ನ ಆಶಯ.

ಧನ್ಯವಾದಗಳೊಂದಿಗೆ.

ರವಿಶಾಂತ್.

RKUMAR ಶನಿ, 01/04/2014 - 19:49

ಹೊಸ ವರುಶದ ಶುಭಾಶಯಗಳು ರಾಜೇಶ ಅವರಿಗೆ

  ಅನಿಸಿಕೆ ಚನ್ನಾಗಿದೆ ಆದರೆ ಸರ್ಕರಕ್ಕೆ ನಾಚಿಕೆ ಆಗಬೆಕು ಕರ್ಮ .

ದಿನಕ್ಕೆ ೧ ಪಕ್ಶಕ್ಕೆ ಹಾರುವ ಗೊಸುಂಬೆಗಳ ನಾಟಕ ನೋಡುವ ಕರ್ಮ ಅಲ್ವ ಇವರ ಆಟಕ್ಕೆ ಕೊನೆ ಇಲ್ವ . 

Nanjunda Raju Raju ಭಾನು, 02/02/2014 - 20:39

ಮಾನ್ಯರೇ, ನಮ್ಮ ರಾಜ್ಯದಲ್ಲಿ  ಕನ್ನಡ ಬಳಕೆ ಮತ್ತು ಅಭಿವೃದ್ದಿಪಡಿಸಲೆಂದೇ ಒಂದು ಇಲಾಖೆ ಇರಬೇಕಲ್ಲವೇ?

Nanjunda Raju Raju ಧ, 06/11/2014 - 20:02

ಸನ್ಮಾನ್ಯ ರಾಜೇಶ್ ಹೆಗಡೆಯವರೇ, ಇದು ನಮ್ಮ ಕನ್ನಡದ ದುರ್ಗತಿ ಎನ್ನಬಹುದು. ನಾವೂ ಕೂಡ ಸುಮಾರು ೫೦-೬೦ ವರುಷಗಳಿಂದ ನೋಡುತ್ತಿದ್ದೇವೆ. ನಮ್ಮ ಕನ್ನಡವನ್ನು ಪ್ರಮುಖ ಸ್ಠಾನಕ್ಕೆ ತರಲು ಎಷ್ಟೋ ಜನರು ಹೋರಾಡಿದ್ದಾರೆ. ಕೆಲವರು ಪ್ರಾಣವನ್ನೊ ತೆತ್ತಿದ್ದಾರೆ. ಇದರಿಂದ ನವೆಲ್ಲಾ ಹತಾಶರಾಗಿದ್ದೇವೆ. ಚಿಕ್ಕ ವಯಸ್ಸಿನಲ್ಲಿ ಸರಕಾರಿ ಶಾಲೆಯಲ್ಲಿ ಓದಿ ಎಂಟನೇ ತರಗತಿಗೆ ಬಂದಾಗ ಬಹುತೇಕ ಆಂಗ್ಲ ಭಾಷೆಯನ್ನು ತಾತ್ಸಾರವಾಗಿ ಕಂಡು, ಕನ್ನಡ ಮಾಧ್ಯಮದಲ್ಲಿ ಓದಿದೆವು. ಅದೇ ಪಿ.ಯು.ಸಿ ಗೆ ಹೋದಾಗ ಕನ್ನಡ ಮಾಧ್ಯಮದಲ್ಲಿ ಪಾಠ ಮಾಡುವುದಿಲ್ಲ. ಬೇಕಾದರೆ ನೀವೇ ಪುಸ್ತಕಗಳನ್ನು ಓದಿ ಪರೀಕ್ಷೆ ಬೇಕಾದರೆ ಕನ್ನಡದಲ್ಲಿ ಬರೆಯಬಹುದೆಂದರು. ಆದರೆ ನಾವು ದೊಡ್ಡವರಾದಾಗ, ಎಲ್ಲವೂ ಇಂಗ್ಲೀಷ್ ಮಯವಾಗಿತ್ತು. ಬ್ಯಾಂಕಿನಲ್ಲಿ ಅಕೌಂಟ್ ತೆರೆದು ಕನ್ನಡದಲ್ಲಿ ಬರೆದರೆ, ಚಲನ್ ತೆಗೆದುಕೊೞುತ್ತಿರಲಿಲ್ಲ. ಚೆಕ್ ಮಾನ್ಯತೆ ಆಗುತ್ತಿರಲಿಲ್ಲ. ಕನ್ನಡದಲ್ಲಿ ಸಹಿ ಮಾಡುವಂತಿರಲಿಲ್ಲ. ಕೆಲವು ಅರ್ಜಿಗಳು ಅಂಗ್ಲ ಭಾಷೆಯಲ್ಲಿರುತ್ತಿದ್ದವು. ಈಗ ಬಹುತೇಕ ವಿದೇಶಿ ಬ್ಯಾಂಕುಗಳು ಬಂದಿರುವುದರಿಂದ ಕನ್ನಡದಲ್ಲಿ ವ್ಯವಹರಿಸುವಂತಿಲ್ಲ. ಅದೇ ರೈಲಿನಲ್ಲಿ ಕನ್ನಡ ಭಾಷೆಯಲ್ಲಿ ಬರೆದ ಬೋಗಿಗಳು ಇರುತ್ತಿರಲಿಲ್ಲ. ಈಗಲೂ ಇನ್ನೂ ಕೆಲವು ಸಮಸ್ಯೆಗಳು ಹಾಗೆಯೇ ಇವೆ. ಅಂದರೆ, ನಮ್ಮ ವಾಹನಗಳಿಗೆ ಕನ್ನಡದಲ್ಲಿ ನಂಬರ್ ಬರೆಸುವಂತಿಲ್ಲ. ಬರೆದರೆ ದಂಡ ತೆರಬೇಕು. ನಮ್ಮ ಕನ್ನಡಿಗರಾದ ಆರ್.ಟಿ.ಓ ಮತ್ತು ಪೊಲೀಸ್ ಅಧಿಕಾರಿಗಳೇ ದಂಡ ಹಾಕುತ್ತಾರೆ. ಅದೇ ವಾಹನದ ವಿಮೆ ಮಾಡಿಸುತ್ತೇವೆ ಎಂದರೆ ಅದರ ಪಾಲಿಸಿ ಆಂಗ್ಲ ಭಾಷೆಯಲ್ಲಿರುತ್ತದೆ. ಹಾಗೆಯೇ ನಮ್ಮ ಜೀವ ವಿಮೆ ಮಾಡಿಸಿದರೆ ಬಾಂಡ್ ಸಂಪೂರ್ಣವಾಗಿ ಆಂಗ್ಲಮಯವಾಗಿರುತ್ತದೆ. ಅದೇ ನಮ್ಮ ರಾಜ್ಯದಲ್ಲಿ ತಯಾರಾದ ಕನ್ನಡ ಚಲನ ಚಿತ್ರಗಳನ್ನು ಮಾತ್ರ ನೋಡಬೇಕು. ಅದೇ ಬೇರೆ ಭಾಷೆಯ ಚಿತ್ರಗಳನ್ನು ಡಬ್ಬಿಂಗ್ ಮಾಡಿ ನೋಡುವಂತಿಲ್ಲ.  ಬೇರೆ ರಾಜ್ಯದವರು ಬೇರೆ ದೇಶದ, ಬೇರೆ ರಾಜ್ಯದ ಭಾಷಾ ಚಿತ್ರಗಳನ್ನು ಡಬ್ಬಿಂಗ್ ಮಾಡಿ ನೋಡಬಹುದು. ಇದರಿಂದಾಗಿ ಟಿ.ವಿ. ಬಂದ ನಂತರ ಅನಿವಾರ್ಯವಾಗಿ ಬೇರೆ ಭಾಷೆಗಳ ಚಿತ್ರಗಳನ್ನು ನೋಡುತ್ತಾ ಆ ಭಾಷೆಗಳ ಪರಿಚಯವನ್ನೂ ಮಾಡಿಕೊೞಬೇಕಾಗಿದೆ. ನಮ್ಮ ರಾಜ್ಯದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಬೇರೆ ರಾಜ್ಯದವರ ವಲಸೆ ಹೆಚ್ಚಾಗಿ ಅವರವರ ಭಾಷೆಯನ್ನು ಬೆಳೆಸುತ್ತಿದ್ದಾರೆ. ಎಂತಹ ಸಂದರ್ಭ ಬಂದರು ಅವರ ಭಾಷೆಯನ್ನು ಅವರು ಬಿಡುವುದಿಲ್ಲ. ಅದೇ ಕನ್ನಡಿಗರು ನಮ್ಮ ಭಾಷೆ ಮರೆತು ಅವರ ಭಾಷೆಯನ್ನು ಕಲಿಯುತ್ತಿದ್ದಾರೆ. ಕನ್ನಡಿಗರೆಲ್ಲಾ ಕೂಲಿ ಕಾರ್ಮಿಕರಾಗುತ್ತಿದ್ದಾರೆ. ಅನ್ಯ ಭಾಷಿಕರು ಶ್ರೀಮಂತರಾಗುತ್ತಿದ್ದಾರೆ. ಅವರ ಬಳಿ ನಮ್ಮ ಕನ್ನಡಿಗರು ಮನೆ ಕೆಲಸವೋ, ಕಾರಿನ ಡ್ರೈವರೋ, ಅವರ ಕಚೇರಿಯ ಜವಾನನೋ ಆಗುತ್ತಾರೆ. ನಗರದ ಅಕ್ಕಪಕ್ಕದ ಜಮೀನುಗಳನ್ನು ಕನ್ನಡೇತರರು ಖರೀದಿಸಿ, ಅಪರ್ಟ್ ಮೆಂಟ್ ಕಟ್ಟಿಸುತ್ತಿದ್ದಾರೆ. ಕನ್ನಡಿಗರು ಬಾಡಿಗೆಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನು ನ್ಯಾಯಾಲಯದಲ್ಲಿ ಕನ್ನಡ ಸಂಪೂರ್ಣವಾಗಿ ಬಳಕೆಯಲ್ಲಿಲ್ಲ. ಬೇಡಿಕೆ, ವಾದ, ಸಾಕ್ಷಿ ಹೇಳಿಕೆ, ದಾಖಲೆಗಳು ಕನ್ನಡದಲ್ಲಿದ್ದರೂ ಆಂಗ್ಲ ಭಾಷೆಯಲ್ಲಿ ತೀರ್ಪು ಬರುತ್ತದೆ. ಇನ್ನು ಉಚ್ಚ ನ್ಯಾಯಾಲಯದಲ್ಲಿ ಕನ್ನಡ ವಾದವೂ ಇಲ್ಲ ತೀರ್ಪೂ ಇಲ್ಲ. ಹೀಗಾದರೆ ಕನ್ನಡ ಉಳಿಯುವುದೆಲ್ಲಿ. ಒಂದು ರೀತಿಯಲ್ಲಿ ಕನ್ನಡಿಗರಾದ ನಾವು ನದಿಯಲ್ಲಿ ವಿರುದ್ದ ದಿಕ್ಕಿನಲ್ಲಿ ಈಜುತ್ತಿದ್ದೇವೆ ಎನಿಸುತ್ತದೆ.

ರಾಜೇಶ ಹೆಗಡೆ ಗುರು, 06/12/2014 - 06:22

ನಮಸ್ಕಾರ ನಂಜುಂಡರಾಜು ಅವರೇ,

ಕನ್ನಡದ ದುರ್ಗತಿಗೆ ಕನ್ನಡಿಗರೇ ಕಾರಣ. ನಮ್ಮಲ್ಲಿರುವ ಜಡತ್ವ, ಸೋಮಾರಿತನ, ಕನ್ನಡ ಅಂದರೆ ಇಷ್ಟೇ ಅನ್ನುವ ಸಂಕುಚಿತ ಮನೋಭಾವ. ಇತರ ಭಾಷಿಕರಲ್ಲಿರುವ ಭಾಷಾಭಿಮಾನ, ದುಡಿಮೆ ನಮ್ಮಲ್ಲಿದ್ದರೆ ನಮ್ಮ ಕನ್ನಡ ಇನ್ನಷ್ಟು ಬೆಳೆಯುತಿತ್ತು.

ಡಬ್ಬಿಂಗ್ ನಿಷೇಧ ಕನ್ನಡಿಗರೇ ಹೇರಿದ್ದು ಬೇರೆಯವರಲ್ಲ. ಇಂದು ನಾವು ಹಲವು ಸಿನಿಮಾ, ಧಾರಾವಾಹಿ ಬೇರೆ ಭಾಷೆಯಲ್ಲಿ ನೋಡುತ್ತಿದ್ದರೆ ಅದಕ್ಕೆ ನಾವೇ ಕಾರಣ. ಇತರ ಭಾಷಿಕರು ಅವರ ಭಾಷೆಯಲ್ಲಿ ಸಿನಿಮಾ ನೋಡುತ್ತಿದ್ದರೆ ಅದು ತಪ್ಪಲ್ಲ. ಆದರೆ ಹಲವು ಪೀಳಿಗೆ ಕಲಿತರೂ ಕನ್ನಡ ಅನಿವಾರ್ಯ ಅನ್ನುವ ಸ್ಥಿತಿ ಇರುವದಕ್ಕೆ ನಾವೇ ಕಾರಣ. ಪ್ರತಿ ಹಂತದಲ್ಲಿ ಹಿಂದಿ ತೆಗಳುತ್ತಾ ಇಂಗ್ಲೀಷ್ ಅನ್ನು ಕನ್ನಡಕ್ಕೆ ಪರ್ಯಾಯ ಭಾಷೆಯನ್ನಾಗಿ ಬೆಳೆಸಿರುವದರಲ್ಲಿ ನಮ್ಮ ಕೊಡುಗೆ ತುಂಬಾ ಇದೆ.

ನಾವು ಕನ್ನಡ ಕೇವಲ ಸಾಹಿತ್ಯಕ ಭಾಷೆ ಅಲ್ಲ ನಮ್ಮ ಕೈಯಲ್ಲಿರುವ ಮೊಬೈಲು, ಕಂಪ್ಯೂಟರ್, ಅಂಗಡಿಯಲ್ಲಿರುವ ವಸ್ತುಗಳು, ಬ್ಯಾಂಕ್, ವಿಮೆ ಮೊದಲಾದ ಹಲವು ರಂಗಗಳಲ್ಲೂ ಮೆರೆಯ ಬೇಕಾದ ಭಾಷೆ ಅನ್ನುವದನ್ನು ಮನಗಾಣಬೇಕು. ಆದರೆ ಕನ್ನಡ ಚಳುವಳಿ ಕೇವಲ ರಾಜಕೀಯ ಪ್ರೇರಿತವಾಗಿ ಅಷ್ಟೇ ಉಳಿದಿದೆ. ಅದರಲ್ಲಿ ಕನ್ನಡದ ಹಿತಾಸಕ್ತಿ ಬಹಳ ಕಡಿಮೆ.

 

Nanjunda Raju Raju ಗುರು, 06/12/2014 - 11:46

ಮಾನ್ಯ ಮೇಲಧಿಕಾರಿಗಳೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.