Skip to main content
ಕಾಶ್ಮೀರದ ಡಲ್ ಸರೋವರದ ಸುಂದರ ಪ್ರಕೃತಿ ಚಿತ್ರ

ಕಾಶ್ಮೀರದ ಎಲ್ಲರೂ ಉಗ್ರವಾದಿಗಳೇ..?

ಬರೆದಿದ್ದುJune 25, 2012
6ಅನಿಸಿಕೆಗಳು

 


ಸುಡು ಸುಡುವ ಬೇಸಿಗೆಯ ಕಾಲದಲ್ಲೂ ತಾನೂ ತಂಪಾಗಿ ಅದರೆಡೆಗೆ ಬಂದವರಿಗೆಲ್ಲಾ ತಂಪು ನೀಡಿ ತನ್ನೊಡಲು ಮತ್ತು ಮಡಿಲೊಳಗೆ ಅಪಾರ ಪ್ರಕೃತಿ ಸೌಂಧರ್ಯದ ಭಾಂಢಾರವನ್ನೇ ತುಂಬಿಕೊಂಡು ಈ ದೇಶದವರನ್ನಷ್ಟೇ ಅಲ್ಲದೇ ವಿದೇಶದವರನ್ನೂ ತನ್ನತ್ತ ಆಕರ್ಶಿಸುವ ಶಕ್ತಿಯುಳ್ಳ ನಮ್ಮ ಭಾರತ ದೇಶದ ಮಣಿ ಮುಕುಟ ಹಾಗೂ ಈ ದೇಶದ ಸ್ವರ್ಗ ಎಂದೇ ಹೆಸರಾಗಿರುವ ಸುಂದರ ನಾಡು ಕಾಶ್ಮೀರ. ಈ ಕಾಶ್ಮೀರ ನಮ್ಮ ದೇಶದಲ್ಲಿರುವುದಕ್ಕೆ ನಾವು ಭಾರತೀಯರಾಗಿ ಹೆಮ್ಮೆ ಪಡಬೇಕು. ಅಷ್ಟೊಂದು ನೈಸರ್ಗಿಕ ತಾಣಗಳನ್ನೂ ಹಿಮಾವೃತ ಗಿರಿ ಶಿಖರ ಸರೋವರಗಳು ಇತ್ಯಾದಿ ಪ್ರಕೃತಿ ಸಂಪತ್ತಿನಿಂದ ಸುತ್ತುವರೆದು ವಿಶ್ವದೆಲ್ಲೆಡೆ ಅಪಾರ ಖ್ಯಾತಿ ಪಡೆದಿದ್ದರೂ ಅಲ್ಲಿ ಈ ಹಿಂದೆ ನಡೆದ ನಡೆಯುತ್ತಿರುವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವರ್ತಮಾನದ ವಿದ್ಯಮಾನಗಳು ಹಾಗೂ ಘಟನೆಗಳಿಂದಾಗಿ ಕಾಶ್ಮೀರ ಎಂದರೆ ಉಗ್ರರು ಹಾಗೂ ದೇಶ ವಿಭಾಜಕ ಶಕ್ತಿಗಳಿಂದ ತುಂಬಿತುಳುಕುತ್ತಿರುವ ನಾಡು ಎಂದು ಅಪಖ್ಯಾತಿಗೊಳಗಾಗಿರುವುದೂ ಅಷ್ಟೇ ಸತ್ಯ.


ಇಂತಹಾ ಕಾಶ್ಮೀರದಲ್ಲಿ ಪ್ರವಾಸ ಮಾಡಬೇಕೆಂದು ಬಹಳ ವರುಷಗಳಿಂದ ಪ್ರಯತ್ನಿಸಿದರೊ ಇನ್ನೇನು ಹೊರಡಬೇಕು ಅಷ್ಟರಲ್ಲಿ ಒಂದಲ್ಲ ಒಂದು ಗಲಾಟೆ ಬಂದ್ ಇತ್ಯಾದಿ ಗಳಿಂದಾಗಿ ಆ ಪ್ರವಾಸ ರದ್ದು ಮಾಡಬೇಕಾಗಿ ಬಂದಿತ್ತು. ಪ್ರತೀ ವರ್ಷದಂತೆ ಈ ವರ್ಷವೂ ಏಪ್ರಿಲ್ ನಲ್ಲಿ ಮಗನ ಶಾಲೆಗೆ ಬೇಸಿಗೆ ರಜೆ ಬರುವುದಿದ್ದು ಅವನು ಮತ್ತು ಶ್ರೀಮತಿ ಯೊಂದಿಗೆ ಪ್ರವಾಸದ ಪೂರ್ವ ಯೋಜನೆ ಮಾಡಿಕೊಂಡಿದ್ದೆವು. ಬಹುಷಃ ನಮ್ಮ ಅದೃಷ್ಟ ಚೆನ್ನಾಗಿತ್ತು ಎನ್ನಿಸುತ್ತದೆ ಇತ್ತೀಚೆಗೆ ಅಲ್ಲಿ ಯಾವುದೇ ತೊಂದರೆಗಳಾಗಲಿ ಕರ್ಫ್ಯೂ ಗಳಾಗಲೀ ಆಗಿಲ್ಲ ಪರಿಸ್ಥಿತಿ ಸುಧಾರಿಸಿದೆ ಎಂದು ತಿಳಿದುಬಂತು. ಹಾಗಾಗಿ ನಿಧರಿಸಿದ್ದ ದಿನಾಂಕದಂದೇ ಬೆಂಗಳೂರಿನಿಂದ ಹೊರಟು ದೆಹಲಿಯ ಮುಖಾಂತರ ಕಾಶ್ಮೀರದ ರಾಜಧಾನಿಯಾದ ಶ್ರೀನಗರ ವನ್ನು ತಲುಪಿದೆವು. ೪೩ ಡಿಗ್ರೀ ಯಲ್ಲಿ ಬೆಂದು ಬೇಯುತ್ತಿದ್ದ ದೆಹಲಿಯ ಬಿಸಿಲಿನ ಝಳವನ್ನು ಅನುಭವಿಸಿ ಬೇಸತ್ತಿದ್ದ ನಮ್ಮನ್ನು ಆ ಶ್ರೀನಗರದ ಶೀತಲ ಗಾಳಿ ಸ್ವಾಗತಿಸಿತ್ತು. ಏರ್ ಪೋರ್ಟ್ ಹೊರಗಡೆ ನಮಗಾಗಿ ಮೊದಲೇ ಕಾದಿರಿಸಿದ್ದ ಟ್ಯಾಕ್ಸೀ ಹಿಡಿದು ಸೀದಾ ಹೋಟೆಲ್ ತಲುಪಿ ಲಗೇಜ್ ಇರಿಸಿ ಮುಖ ಕೈ ಕಾಲು ತೊಳೆದು ಮದ್ಯಾಹ್ನದ ಊಟ ಮುಗಿಸಿ ಸ್ಥಳ ವೀಕ್ಷಣೆಗೆಂದು ಹೊರಟೆವು. ಮೊದಲ ದಿನವೇ ಶ್ರೀನಗರದ ಮುಖ್ಯ ಆಕರ್ಷಣೆಯಾದ ಡಲ್ ಸರೋವರದ ಸುತ್ತ ಇರುವ ಮುಖ್ಯ ರಸ್ತೆಯಲ್ಲಿ ತಂಪುಗಾಳಿ ಸವಿಯುತ್ತಾ ಓಡಾಡಿ ಸರೋವರದ ಸೊಭಗನ್ನು ಅದರ ಅಂಚಿನಲ್ಲಿ ಎಲೆಗಳೆಲ್ಲ ಉದುರಿಹೋಗಿದ್ದ ಬೋಳು ಮರಗಳು ಹಾಗೂ ಬರೀ ಪುಷ್ಪ ಗುಚ್ಛಗಳಿಂದ ತುಂಬಿ ತುಳುಕುತ್ತಿದ್ದ ವಿವಿಧ ವೃಕ್ಷರಾಶಿಗಳು ಇತ್ಯಾದಿಗಳನ್ನು ನೋಡಿ ಸವಿದು ಕಣ್ತುಂಬಿಸಿಕೊಂಡೆವು. ನಂತರ ಅಲ್ಲಿನ ವಿಖ್ಯಾತ ಟ್ಯೂಲಿಪ್ ಹೂವಿನ ತೋಟ ತಲುಪಿದೆವು. ವಾಹ್ಹ್... ಅದೆಂತಹಾ ಸೌಂಧರ್ಯ ಸೊಭಗು ತುಂಬಿದ ಹೂದೋಟವದು..! ವಿವಿಧ ವರ್ಣಗಳ ಕೇವಲ ಟ್ಯೂಲಿಪ್ ಹೂಗಿಡ ಗಳಿಂದಲೇ ತುಂಬಿ ತುಳುಕುತ್ತಿದ್ದ ವಿಶಾಲ ತೋಟ ಅದಾಗಿತ್ತು. ಕೇವಲ ಕ್ಯಾಲೆಂಡರ್ ಮತ್ತು ಪೋಸ್ಟರ್ ಗಳಲ್ಲಿ ಮಾತ್ರಾ ನೋಡಿದ್ದಂತಾ ನಮಗೆ ಆ ನೈಜ ದೃಶ್ಯವನ್ನು ನೋಡಿ ಮನಸ್ಸೆಲ್ಲಾ ಸಂತಸದಿಂದ ತುಂಬಿತು. ಕೆಲಹೊತ್ತು ಅಲ್ಲಿ ವಿಹರಿಸಿ ಕಾಲ ಕಳೆದು ಅಲ್ಲಿ ಸಿಗುವ ವಿಶೇಷ ಬಾದಾಮಿ ಮಿಶ್ರಿತ ಚಹಾ - ಖೇವಾ ದ ಸವಿಯನ್ನೂ ಸವಿದೆವು. ಅದಾದ ನಂತರ ಮೊಘಲ್ ಗಾರ್ಡನ್, ಇತ್ಯಾದಿ ವಿವಿಧ ತೋಟಗಳನ್ನು ನೋಡಿ ಆ ತೋಟದಲ್ಲಿ ನಮ್ಮಂತೆಯೇ ಬಂದಿದ್ದ ಅಲ್ಲಿನ ಕಾಲೇಜಿನ ಚೆಲುವೆಯರ ಗುಂಪೊಂದರ ಚಿತ್ರವನ್ನೂ ತೆಗೆದುಕೊಂಡೆವು. ಎಲ್ಲಾ ಮುಗಿಸಿ ಮತ್ತೆ ಹೋಟೆಲ್ ತಲುಪಿ ಆ ದಿನ ನೋಡಿದ ಎಲ್ಲಾ ಸ್ಥಳಗಳನ್ನು ಮನದಲ್ಲೇ ಮೆಲುಕು ಹಾಕುತ್ತಾ ನಿದ್ರೆಹೋದೆವು.


ಮರುದಿನ ಪೆಹಲ್ಗಾಂ ಎಂಬ ಸ್ಥಳ ವೀಕ್ಷಣೆಗೆಂದು ನಿರ್ಧರಿಸಲಾಗಿತ್ತು. ಅದರಂತೆ ನಮ್ಮ ಟ್ಯಾಕ್ಸೀ ಡ್ರೈವರ್ ನಾವು ಬೆಳಗಿನ ತಿಂಡಿ ಮುಗಿಸುವ ಹೊತ್ತಿಗೆ ಸರಿಯಾಗಿ ಬಂದ. ಅದರಲ್ಲಿ ಡ್ರೈವರ್ ತನ್ನ ಹೆಂಡತಿ ಮತ್ತು ನಾಲ್ಕು ತಿಂಗಳ ಪುಟ್ಟ ಹೆಣ್ಣು ಮಗುವನ್ನೂ ಕರೆತಂದಿದ್ದ. ಅದನ್ನೇರಿ ಪೆಹಲ್ಗಾಂ ಕಡೆ ಪ್ರಯಾಣ ಬೆಳೆಸಿದೆವು. ರಸ್ತೆಯ ಇಕ್ಕೆಲಗಳ ಜಮೀನುಗಳಲ್ಲಿ ಸಾಸುವೆ ಬೆಳೆ ಹೂ ಬಿಟ್ಟಿದ್ದು ಎಲ್ಲಿ ನೋಡಿದರಲ್ಲಿ ಇಡೀ ಭೂಮಿಯೇ ಹಳದೀ ಹೂಗಳ ಹೊದ್ದಿಕೆ ಹೊದ್ದಿದೆಯೇನೋ ಎನ್ನುವಂತೆ ಕಾಣುತ್ತಿತ್ತು. ಮತ್ತೆ ಕೆಲವು ಕಡೆ ಕೇಸರಿ ಹೂವಿನ ಬೆಳೆ ಅದರದ್ದೇ ವಿಶೇಷ ಆಕರ್ಷಣೆ ಹೊಂದಿದ್ದು ಕಣ್ಣಿಗೆ ತಂಪು ನೀಡುತ್ತಿತ್ತು. ಮದ್ಯಾಹ್ನ ಸುಮಾರು ಹನ್ನೊಂದೂವರೆಯ ಹೊತ್ತಿಗೆ ಪೆಹಲ್ಗಾಂ ನಲ್ಲಿ ಲಿದ್ಧರ್ ನದೀ ತೀರವನ್ನು ತಲುಪಿದೆವು. ಅದೊಂದು ವಿಶಾಲವಾದ ಮೈದಾನ. ಹಸಿರು ಹುಲ್ಲಿನ ಹಾಸು, ಸುತ್ತಲೂ ಆಗಸದೆತ್ತರಕ್ಕೆ ಬೆಳೆದು ನಿಂತಿದ್ದ ಪೈನ್ ಮರಗಳು ಅದನ್ನು ಸುತ್ತುವರೆದ ಹಿಮಾವೃತ ಗಿರಿ ಶಿಖರಗಳು ಅದರ ನಡುವೆ ಎರಡು ಭಾಗವಾಗಿ ಝುಳು ಝುಳು ಶಬ್ಧ ಮಾಡುತ್ತಾ ಸ್ಪಟಿಕದಷ್ಟು ಪಾರಧರ್ಶಕವಾದ ನೀರು ತುಂಬಿ ಹರಿಯುತ್ತಿದ್ದ ಲಿದ್ಧರ್ ನದಿ. ಪ್ರವಾಸದ ಪರಿಪೂರ್ಣ ಆನಂದ ಅನುಭವಿಸ ಬಯಸುವ ಪ್ರವಾಸಿಗರಿಗೆ ಇನ್ನೇನು ಬೇಕು...? ಕೊರೆಯುವ ಶೀತಲ ಜಲವಾಗಿದ್ದು ಹೆಚ್ಚು ಹೊತ್ತು ನದೀ ನೀರಿನಲ್ಲಿ ಆಟವಾಡಲಾಗಲಿಲ್ಲವಾದರೂ ಸ್ವಲ್ಪ ಹೊತ್ತು ಮಾತ್ರ ಕೈಕಾಲು ಆಡಿಸಿ ಹುಲ್ಲ ಹಾಸಿನ ಮೇಲೆ ಹೊರಳಾಡಿ.. ಹಾಗೇ ಸುತ್ತುತ್ತಾ ಕುದುರೆ ಸವಾರಿ ಮಾಡಿ ನಂತರ ಅಲ್ಲೇ ಜಮಖಾನಾ ಹಾಸಿ ಆ ಗಾಡಿಯ ಮಾಲೀಕ ಮತ್ತು ಡ್ರೈವರ್ ನಮಗಾಗಿ ಅವರ ಮನೆಯಲ್ಲೇ ತಯಾರಿಸಿ ತಂದಿದ್ದ ವಿಶೇಷ ಕಾಶ್ಮೀರೀ ಭೋಜನ ವನ್ನು ಎಲ್ಲರಿಗೂ ಉಣಬಡಿಸಿದರು. ನೀಲಾಗಾಸದ ಕೆಳಗೆ ನಿಸರ್ಗದ ಮಡಿಲಲ್ಲಿ ಕುಳಿತು ಮಾಡುತ್ತಿದ್ದ ಆ ಭೋಜನಕ್ಕೆ ವಿಶೇಷ ರುಚಿ ಕೂಡಿಬಂದು ಯಾವುದೇ ಪಂಚತಾರಾ ರೆಸಾರ್ಟ್ ನ ಬಫೆ ಊಟಕ್ಕೂ ಕಡಿಮೆಯಿರಲಿಲ್ಲ. ಹೊಟ್ಟೆ ತುಂಬಾ ಉಂಡು ಅಲ್ಲೇ ಸ್ವಲ್ಪ ಹೊತ್ತು ಹುಲ್ಲ ಹಾಸಿನ ಮೇಲೆ ಮಲಗಿ ವಿಹರಿಸಿ ಮತ್ತೆ ವಾಪಸ್ ಪ್ರಯಾಣ ಬೆಳೆಸಿದೆವು. ನಾಳೆ ರಾತ್ರಿ ಹೋಟೆಲ್ ನಲ್ಲಿರುವ ಬದಲು ಅತಿಥಿಯಾಗಿ ನಮ್ಮ ಮನೆಯಲ್ಲೇ ಉಳಿದು ನಮ್ಮ ಕಾಶ್ಮೀರೀ ಆತಿಥ್ಯವನ್ನು ಸ್ವೀಕರಿಸಬೇಕೆಂದು ಟ್ಯಾಕ್ಸೀ ಮಾಲೀಕ ಮತ್ತವನ ಮಡದಿ ಕೇಳಿಕೊಂಡರು. ಆ ಕ್ಷಣ ನನಗೇನು ಹೇಳಬೇಕೋ ತಿಳಿಯದಾಯ್ತು, ಮೊದಲೇ ಕಾಶ್ಮೀರೀ ಮುಸ್ಲಿಮರು ಹಾಗಾಗಿ ಎಲ್ಲಿ ಯಾವ ಉಗ್ರವಾದಿಗಳ ಕೈಗೆ ಸಿಕ್ಕಿ ಇಲ್ಲ ಸಲ್ಲದ ತಲೆನೋವು ನಾವೇ ಯಾಕೆ ತಂದುಕೊಳ್ಳಬೇಕು ಎನ್ನಿಸಿ ಏನೂ ಹೇಳದೇ ಸುಮ್ಮನಾದೆ. ಸ್ವಲ್ಪಹೊತ್ತು ಬಿಟ್ಟು ಅವರು ಮತ್ತೆ ಕೇಳಿದರು ನಮ್ಮ ಮನೆಯಲ್ಲಿ ಉಳಿಯಲು ನಿಮಗೆ ಭಯವಾಗುತ್ತಿದೆಯೇ..? ಹಾಗೇನಿದ್ದರೂ ಎಲ್ಲಾ ಬಿಡಿ, ಒಮ್ಮೆ ನಮ್ಮ ಮನೆಗೆ ಬಂದು ನೋಡಿ ಕಾಶ್ಮೀರೀ ಮುಸ್ಲಿಮರ ಮನಸ್ಸು ಹೃದಯಗಳ ಭಾವನೆ ಮತ್ತು ಜೀವನ ಶೈಲಿ ಇವುಗಳ ಬಗ್ಗೆ ನಿಜವಾದ ಪರಿಚಯ ಆಗುತ್ತದೆ ಎಂದ. ನಾನು ಹಾಗೇನಿಲ್ಲಾ.. ನಮ್ಮಂತೆ ನೀವೂ ಮನುಷ್ಯರು ತಾನೇ... ನಾಳೆ ರಾತ್ರಿ ಉಳಿವ ಬಗ್ಗೆ ಅಲ್ಲವೇ ನೋಡೋಣಾ ನಾಳೆ ತಿಳಿಸುತ್ತೇನೆ... ಎಂದು ಸುಮ್ಮನಾದೆ. ಹಾಗೇ ಕಾಶ್ಮೀರದ ಅಲ್ಲಿನ ಜನತೆಯ ಅವರ ಆಚಾರ ವಿಚಾರಗಳು ಇತ್ಯಾದಿಗಳ ಬಗ್ಗೆ ಇನ್ನೂ ಏನೇನೋ ಮಾತಾಡುತ್ತಾ ಸಂಜೆ ಎಂಟರ ವೇಳೆಗೆ ಶ್ರೀನಗರ ತಲುಪಿದೆವು.


 ಕಾಶ್ಮೀರದ ಸುಂದರಿಯರ ಚಿತ್ರ


ಕಾಶ್ಮೀರದ ಸುಂದರಿಯರ ಚಿತ್ರ


ಆ ರಾತ್ರಿ ಡಲ್ ಸರೋವರದೊಳಗೆ ನಿರ್ಮಿಸಲಾಗಿರುವ ಹೌಸ್ ಬೋಟ್ ಒಂದರಲ್ಲಿ ವಿಶ್ರಮಿಸುವುದೆಂದು ಗೊತ್ತುಪಡಿಸಲಾಗಿತ್ತು ಅದರಂತೆ ಶಿಖಾರ ಎಂಬ ಸಣ್ಣ ಸಣ್ಣ ಉದ್ದನೆಯ ದೋಣಿಗಳಲ್ಲಿ ನಮ್ಮನ್ನು ನ್ಯೂ ಬ್ಯೂಟೇ ಸ್ಟಾರ್ ಎಂಬ ದೋಣಿ ಮನೆಗೆ ಕರೆದೊಯ್ಯಲಾಯ್ತು. ಅದರ ಮಾಲೀಕ ನಮ್ಮನ್ನು ಸ್ವಾಗತಿಸಿ ನಮಗೆ ಕಾದಿರಿಸಿದ್ದ ರೂಮಿಗೆ ಕರೆದೊಯ್ದು ಅಲ್ಲಿನ ನಿಯಮ ರೀತಿ ನೀತಿಗಳ ಬಗ್ಗೆ ಅಕ್ಕ ಪಕ್ಕದ ರೂಮಿನಲ್ಲಿರುವ ಯಾತ್ರಿಗಳಿಗೆ ತೊಂದತೆಯಾಗದಂತೆ ನಿಶ್ಯಬ್ಧತೆ ಕಾಪಾಡಬೇಕೆಂದು ತಿಳಿಸಿ ಹೊರಟ. ಅದೊಂದು ಸುಸಜ್ಜಿತವಾದ ದೋಣಿ ಮನೆ. ಸುತ್ತಲೂ ಐದಾರು ಅಡಿ ಆಳದ ನೀರಿದ್ದು ಆ ಮನೆಗಳನ್ನು ಸಂಪೂರ್ಣ ಮರದಲ್ಲಿ ಮರದ ಕಂಬಗಳ ಮೇಲೆ ಕಟ್ಟಲಾಗಿದ್ದು ಮಾಮೂಲು ದೋಣಿಗಳಂತೆ ಅಲುಗಾಡುವುದಿಲ್ಲ. ಮರದ ಕೆತ್ತನೆ ಕೆಲಸ ನಿಜವಾಗಿಯೂ ಯಾವುದೋ ಅರಮನೆಯಲ್ಲಿರುವುವೇನೋ ಎಂಬಂತೆನಿಸಿತ್ತು. ಬಾಥ್ ಟಬ್ ಗೀಝರ್ ಎಲ್ ಸೀ ಡೀ ಟೀವೀ ರೂಮ್ ಹೀಟರ್ ಇತ್ಯಾದಿ ಎಲ್ಲಾ ಸೌಕರ್ಯಗಳು ಅದರೊಳಗಿದ್ದು ಯಾವುದೇ ಪಂಚತಾರ ಹೋಟೆಲ್ಲಿಗೂ ಕಡಿಮೆಯಿರಲಿಲ್ಲ. ಅಂತಹಾ ಸಾವಿರಾರು ದೋಣಿ ಮನೆಗಳು ಇಡೀ ಸರೋವರದಲ್ಲಿ ಒಂದರ ಪಕ್ಕ ಒಂದು ಅಂಟಿಕೊಂಡಂತಿದ್ದು ಬೇಸಿಗೆ ಕಾಲದಲ್ಲಿ ಪ್ರವಾಸಿಗರಿಗೆ ಒಂದು ಆಕರ್ಷಣಾ ಸ್ಥಳವಾಗಿವೆ. ಛಳಿಗಾಲದಲ್ಲಿ ಇಡೀ ಸರೋವರ ಮಂಜುಗಡ್ಡೆಯಾಗಿ ಪರಿವರ್ತನೆಗೊಂಡು ಅದರ ಮೇಲೆ ಮೈದಾನದಂತೆ ಕ್ರಿಕೆಟ್ ಸ್ಕೇಟಿಂಗ್ ಮತ್ತೆಲ್ಲಾ ಆಟ ಆಡಬಹುದಂತೆ. ಅಲ್ಲಿ ಊಟ ಮಾಡಬೇಕೆಂದರೆ ಮುಂಗಡ ತಿಳಿಸಿರಬೇಕಾಗಿತ್ತು ನಾವು ಹಾಗೆ ಹೇಳಿರಲಿಲ್ಲವಾದ್ದರಿಂದ ಮತ್ತೆ ಹೊರಗಡೆ ದೋಣಿಯಲ್ಲಿ ಮುಖ್ಯ ರಸ್ತೆಗೆ ಬಂದು ಹೋಟೆಲೊಂದರಲ್ಲಿ ಊಟ ಮಾಡಿ ಮತ್ತೆ ದೋಣಿಮನೆ ಸೇರಿ ವಿಶ್ರಮಿಸಿದೆವು.


ಮತ್ತೆ ಮೂರನೇ ದಿನ ಗುಲ್ಮಾರ್ಗ್ ಎಂಬ ಸ್ಥಳ ನೋಡುವುದಾಗಿ ನಮ್ಮ ಯೋಜನೆಯಿತ್ತು ಆದರೆ ನಮ್ಮ ಟ್ಯಾಕ್ಸೀ ಡ್ರೈವರ್ ಆ ರಸ್ತೆ ಹಿಮಾವೃತವಾಗಿದ್ದು ಮುಖ್ಯ ಸ್ಥಳ ತಲುಪಲು ಸುಮಾರು ದೂರ ಕಾಲ್ನಡಿಗೆಯಲ್ಲಿ ನಡೆಯಬೇಕೆಂದು ತಿಳಿಸಿ ಸ್ವಲ್ಪ ದೂರವಾದರೂ ಸರಿ ಇದಕ್ಕಿಂತಲೂ ಹೆಚ್ಚು ಆಕರ್ಷಣೀಯವಾದ ಸೋನ್ ಮಾರ್ಗ್ ಎಂಬ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆಂದು ತಿಳಿಸಲು ನಾವೂ ಸಮ್ಮತಿಸಿದೆವು . ಅದರಂತೆ ಹೊರಟು ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಮಹಾ ವೃಕ್ಷಗಳು ಪುಷ್ಪಭರಿತ ಅಕ್ರೋಟ್ ಬಾದಾಮಿ ಮತ್ತು ಸೇಬಿನ ಮರಗಳ ಅಂದವನ್ನು ಕಣ್ಣಾರೆ ಕಂಡು ಮನಸಾರೆ ಸವಿಯುತ್ತಾ ಮಧ್ಯಾಹ್ನ ಸುಮಾರು ಹನ್ನೆರಡೂವರೆಯ ಹೊತ್ತಿಗೆ ಸೋನ್ ಮಾರ್ಗ್ ತಲುಪಿದೆವು. ಅಬ್ಭಬ್ಭಾ... ಅದೆಂತಹಾ ದೃಶ್ಯವದೂ.. ಎರಡು ದಿನಗಳ ಹಿಂದಷ್ಟೆ ಹಿಮವನ್ನು ಕತ್ತರಿಸಿ ರಸ್ತೆ ಮಾಡಲಾಗಿದ್ದು ರಸ್ತೆಯ ಇಕ್ಕೆಲಗಳಲ್ಲೂ ಹಾಗೆ ಕತ್ತರಿಸಿ ಹಾಕಿದ್ದ ರಾಶಿರಾಶಿ ಹಿಮ ಮತ್ತು ಮಂಜುಗಡ್ಡೆಗಳೇ ತುಂಬಿದ್ದವು. ನಾವೆಲ್ಲಾ ಹಿಂದೆಂದೂ ಪ್ರತ್ಯಕ್ಷವಾಗಿ ಕಂಡಿರದಿದ್ದ ಹಿಮರಾಶಿಯಿಂದ ಇನ್ನೂ ಮುಚ್ಚಿದ್ದ ಗಿರಿ ಶಿಖರಗಳು ಹುಲ್ಲುಗಾವಲು ಬಂಡೆಗಳು ನದೀತೀರಗಳು ಎಲ್ಲಿ ನೋಡಿದರಲ್ಲಿ ಮಂಜುಗಡ್ಡೆ ಹಿಮ ಹಿಮ ಹಿಮವನ್ನುಳಿದು ಮತ್ತೇನೂ ಇರಲಿಲ್ಲ... ನನ್ನ ಮಡದಿ ಮತ್ತು ಮಗ ಇಬ್ಬರಿಗೂ ಭೂಲೋಕದಲ್ಲಿನ ಕೈಲಾಸ ಅಥವಾ ಸ್ವರ್ಗ ಎಂದರೆ ಇದೇಯಿರಬಹುದೇನೋ ಎನ್ನುವಷ್ಟು ಆನಂದವಾಗಿ ಹಿಮಾಚ್ಛಾದಿತ ಬೆಟ್ಟದ ತಪ್ಪಲಿನಲ್ಲಿ ಕುಣಿದು ಕುಪ್ಪಳಿಸಿ ಹಿಮದ ಉಂಡೆಗಳನ್ನು ಮಾಡಿ ಒಬ್ಬರಮೇಲೊಬ್ಬರು ಎಸೆದಾಡುತ್ತಾ ಆಟವಾಡಿದರು.


ನಂತರ ಎಲ್ಲಾ ಪ್ರವಾಸಿಗರೂ ಬಯಸುವಂತೆ ಅಲ್ಲಿನ ಆಟಗಳಾದ ಸ್ಕೀಯಿಂಗ್ ಸ್ಕೇಟಿಂಗ್ ಆಡಲು ಬಯಕೆಯಾದರೂ ಅದರಲ್ಲಿ ಅನುಭವವಿರದಿದ್ದುದರಿಂದ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಸ್ಲೆಡ್ಜ್ ಎಂಬ ಚಕ್ರವಿಲ್ಲದ ಗಾಡಿಗಳಲ್ಲಿ ಕುಳಿತೆವು. ಅವುಗಳನ್ನು ಹಗ್ಗ ಕಟ್ಟಿ ಬಹಳ ಕಷ್ಟ ಪಟ್ಟು ಹಿಮತುಂಬಿದ ಬೆಟ್ಟದ ಮೈಮೇಲೆ ಎಳೆದುಕೊಂಡು ಸುಮಾರು ನೂರೈವತ್ತು ಇನ್ನೂರು ಅಡಿ ಎತ್ತರದವರೆಗೂ ಹೋಗಿ ಅಲ್ಲಿ ಅವರು ನಮ್ಮ ಮುಂದೆ ಅದೇ ಗಾಡಿಯಲ್ಲಿ ಕುಳಿತು ಅವರನ್ನು ಬಿಗಿಯಾಗಿ ತಬ್ಬಿ ಹಿಡಿದುಕೊಳ್ಳುವಂತೆ ಹೇಳಿ ನಂತರ ಅಲ್ಲಿಂದ ಕೆಳಗಿನವರೆಗೂ ಜಾರಿಬಿಡುತ್ತಾರೆ. ಆಗ ಹಳ್ಳ ದಿಣ್ಣೆಗಳಲ್ಲಿ ಏರುತ್ತಾ ಇಳಿಯುತ್ತಾ ವೇಗವಾಗಿ ಜಾರುತ್ತಾ ಸಾಗಿ ತಳ ಸೇರುವ ಆ ಆಟ ಎಷ್ಟು ಆಡಿದರೂ ಕಡಿಮೆ ಎನ್ನಿಸುವುದರಲ್ಲಿ ಸಂದೇಹವೇ ಇಲ್ಲ. ಆಟ ಮುಗಿದ ಮೇಲೆ ಅಲ್ಲೇ ಇದ್ದ ಸಣ್ಣ ಹೋಟೆಲಿನಲ್ಲಿ ಸಿಕ್ಕ ಮ್ಯಾಗ್ಗೀ ನೂಡಲ್ ಬಿಸ್ಕೆಟ್ ತಿಂದು ಚಹಾ ಕುಡಿದೆವು. ಕತ್ತಲಾಗುವ ಮೊದಲೇ ಆ ಹಿಮಾವೃತ ತಾಣದಿಂದ ಹೊರಗೆ ಹೊರಟುಬಿಡಬೇಕು ಎಂದು ತಿಳಿದಿದ್ದೆವು ಕಾರಣ ಯಾವ ಸಮಯದಲ್ಲಾದರೂ ಮಳೆ ಅಥವಾ ಹಿಮಪಾತವಾದರೆ ಮತ್ತೆ ರಸ್ತೆ ಮುಚ್ಚಿಹೋಗುವ ಸಂದರ್ಭಗಳಿರುತ್ತವೆ ಹಾಗಾಗಿ ಸಮಯಕ್ಕೆ ಸರಿಯಾಗಿ ವಾಪಸ್ ಪ್ರಯಾಣ ಬೆಳೆಸಿದೆವು.


ಇದು ಹೂಗೊಂಚಲುಗಳಿಂದ ತುಂಬಿರುವ ಬಾದಾಮಿ ಮರ ಪೆಹಲ್ಗಾಂ ಎಂಬ ರಮಣೀಯ ಸ್ಥಳಕ್ಕೆ ಹೋಗುವ ರಸ್ತೆಯ ಇಕ್ಕೆಲಗಲಲ್ಲಿ ಬೆಳೆದು ಹೂವು ಬಿಟ್ಟಿರುವ ಸಾಸುವೆ ಬೆಳೆ


ನೆನ್ನೆ ಆ ಟ್ಯಾಕ್ಸೀ ಮಾಲೀಕ ಅವರ ಮನೆಯಲ್ಲಿ ಉಳಿಯಲು ಕೇಳಿಕೊಂಡ ಬಗ್ಗೆ ನಿನ್ನ ವಿಚಾರ ಏನು ಎಂದು ನನ್ನವಳನ್ನು ಕೇಳಲು ಅದು ನಿಮಗೆ ಸೇರಿದ್ದು, ಇಲ್ಲಿನ ಸ್ಥಿತಿ ಗತಿಗಳು ಇವೆಲ್ಲಾ ಆಗ್ಗಾಗೆ ಇಲ್ಲಿ ಬಂದು ಹೋಗುವ ನಿಮಗೆ ಚೆನ್ನಾಗಿ ತಿಳಿದಿರುವುದರಿಂದ ನೀವು ಹೇಗೆ ಹೇಳುತ್ತೀರೋ ಹಾಗೆ ನಾವೂ ಎಂದು ನನ್ನ ನಿರ್ಧಾರವನ್ನೇ ನೀರೀಕ್ಷಿಸುತ್ತಿರಲು ನಾನೂ ಗಟ್ಟಿ ಮನಸ್ಸು ಮಾಡಿ ಧೈರ್ಯ ಮತ್ತು ಸಾಹಸಗಳು ಇಲ್ಲದ ಜೀವನವೂ ಒಂದು ಜೀವನವೇ..? ಅವೆಲ್ಲಾ ಸ್ವಲ್ಪ ಇದ್ದರೇ ಚೆನ್ನ... ನೀವು ಜತೆಗಿದ್ದರೆ ಮತ್ತೇನು ಹೂಂ ಅದೇನಾಗುತ್ತೋ ನೋಡೇ ಬಿಡೋಣಾ.. ಕೆಟ್ಟದ್ದನ್ನು ಯೋಚಿಸುವುದು ಬೇಡ ಒಳ್ಳೆಯ ಮನಸ್ಸಿನಿಂದ ಹೋಗಿ ಉಳಿಯೋಣಾ ಮುಂದಿನದು ಎಲ್ಲಾ ಆ ಶೃಷ್ಠಿ ಶಕ್ತಿಯ ಮೇಲೆ ಬಿಟ್ಟು ಬಂದದ್ದನ್ನು ಅನುಭವಿಸೇ ತೀರೋಣಾ.. ಎಂದು ಹೇಳಿ ಆ ಡ್ರೈವರ್ ಮುಸ್ಥಾಕ್ ಗೆ ತಿಳಿಸಿದೆ.. ಹೂಂ ಸರೀ ನೀನು ಎಲ್ಲಿ ಕರೆದುಕೊಂಡು ಹೋಗುತ್ತೀಯೋ ಹೋಗು ನಾವು ಸಿದ್ಧರಿದ್ದೇವೆ ಎನ್ನಲು ತುಂಬಾ ಸಂತೋಷಗೊಂಡು ಅವನ ಕಣ್ಗಳಲ್ಲಿ ಕಾಂತಿ ಹೊಮ್ಮಿತ್ತು. ಬಹುತ್ ಶುಕ್ರಿಯಾ ಆಪ್ ಕೋ ಹಮಾರಾ ಮೆಹ್ಮಾನ್ ಬನ್ಕರ್ ರಹ್ನೇಕೋ ಮಾನ್ ಲಿಯಾ... (ತುಂಬಾ ಧನ್ಯವಾದಗಳು ತಮಗೆ ನಮ್ಮ ಅತಿಥಿಯಾಗಿ ಆ ರಾತ್ರಿ ನಮ್ಮ ಮನೆಯಲ್ಲಿ ಉಳಿಯಲು ಒಪ್ಪಿದ್ದಕ್ಕೆ) ಎಂದ. ಸಂಜೆ ಏಳರ ಸಮಯವಾಗುತ್ತಿತ್ತು ಟ್ಯಾಕ್ಸೀ ಮುಸ್ಥಾಕ್ ನ ಮನೆಯ ಗೇಟಿನ ಮುಂದೆ ನಿಂತಾಗ. ಅಲ್ಲಿನ ಡಲ್ ಸರೋವರದ ದಕ್ಷಿಣ ಬಾಗದಲ್ಲಿರುವ ಈದ್ಗಾ ಮೈದಾನದ ಪಕ್ಕ ಇದ್ದ ಸಂಪೂರ್ಣ ಮುಸ್ಲಿಮರೇ ವಾಸಿಸುತ್ತಿದ್ದ ಒಂದು ಇಲಾಖೆಯಲ್ಲಿ ಅವರ ಮನೆ ಸ್ಥಿತವಾಗಿತ್ತು. ದೊಡ್ಡ ಗೇಟು ಹಾಕಲಾಗಿದ್ದ ಕಾಂಪೌಂಡಿನ ಒಳಗೆ ಮುಂಬಾಗದಲ್ಲಿ ಎರಡಂತಸ್ತಿನ ಹೊಸ ತಾರಸೀ ಮನೆ ಮತ್ತು ಹಿಂಬಾಗದಲ್ಲಿ ಒಂದತಸ್ತಿನ ಹಳೇ ಮನೆ ಇತ್ತು.


ಶ್ರೀನಗರದ ವಿಖ್ಯಾತ ಟ್ಯೂಲಿಪ್ ಹೂವಿನ ತೋಟದ ಚಿತ್ರಗಳು


ಶ್ರೀನಗರದ ವಿಖ್ಯಾತ ಟ್ಯೂಲಿಪ್ ಹೂವಿನ ತೋಟದ ಚಿತ್ರಗಳು


ನಮ್ಮನ್ನು ಇಳಿಸಿ ಲಗೇಜ್ ಗಳನ್ನು ತೆಗೆದುಕೊಂಡು ಹೋಗಿ ಮೊದಲನೇ ಅಂತಸ್ತಿನಲ್ಲಿ ಅತಿಥಿಗಳಿಗಾಗೇ ಮೀಸಲಿರಿಸಿದ್ದ ಒಂದು ದೊಡ್ಡ ಹಾಲಿನಲ್ಲಿ ಇರಿಸಿ ಕೆಳಗಡೆಯಿದ್ದ ಬಾಥ್ ರೂಮ್ ತೋರಿಸಿ ಅಲ್ಲಿ ಸ್ನಾನ ಮಾಡಿ ಚಹಾಗೆ ಬನ್ನಿ ಎಂದು ತಿಳಿಸಿದ. ನನ್ನ ಹೆಂಡತಿ ’ತೀನ್ ಬಕರೇ ಭುರೀ ತರಫ್ ಉನ್ಕೇ ಹಾತ್ ಫಸ್ ಚುಕೇ ಹೈ ಕಬ್ ಔರ್ ಕೈಸೇ ಕಾಟೇಂಗೇ ಇಂತಝಾರ್ ಕರ್ನಾ ಹೈ’(ಅಂದರೆ ಮೂರು ಕುರಿಗಳು ಅವರ ಕೈಗೆ ಸಿಕ್ಕಿಕೊಂಡಿವೆ ಯಾವಾಗ ಮತ್ತೆ ಹೇಗೆ ಕಡಿಯುತ್ತಾರೋ ಕಾದುನೋಡಬೇಕಷ್ಟೇ..) ಎಂದು ನನ್ನನ್ನು ಛೇಡಿಸುತ್ತಾ ಹೇಳಿದಳು. ನನ್ನ ಮಗ ಇದೆಲ್ಲಾ ಬೇಕಿತ್ತಾ ಪಪ್ಪಾ.. ಎಂದು ಅವನ ಅಸಹಮತಿಯನ್ನು ಅವನದೇ ರೀತಿಯಲ್ಲಿ ಸೂಚಿಸಿದ್ದ. ಬಂದಿದ್ದಂತೂ ಆಗಿದೆ ಇನ್ನು ಎಲ್ಲಾ ಅನುಭವಿಸಿಯೇ ತೀರಬೇಕು ಎಂದು ಮತ್ತೆ ಗಟ್ಟಿಮನಸ್ಸು ಮಾಡಿಕೊಂಡು ತುಂಬಾ ಛಳಿ ಇದ್ದುದರಿಂದ ಸ್ನಾನ ಮಾಡಲಿಲ್ಲ ಹಾಗೇ ಮುಖ ಕೈಕಾಲು ತೊಳೆದು ಅವರ ಹಿಂಬಾಗದ ಮನೆಯ ಹಾಲಿಗೆ ಹೋದೆವು. ಅಲ್ಲಿ ಒಂದೂ ಕುರ್ಚಿ ಸೋಫಾಗಳಿರದೇ ಇಡೀ ಮನೆಯ ನೆಲದ ತುಂಬಾ ಕೈನೇಯ್ಗೆಯಿಂದ ತಯಾರಿಸಲ್ಪಟ್ಟಿದ್ದ ಉತ್ತಮ ಕಲೆಗಾರಿಕೆಯಿಂದ ತುಂಬಿದ್ದ ಸುಂದರ ಕಾರ್ಪೆಟ್ ಹಾಸಲಾಗಿದ್ದು ಗೋಡೆಯ ಕಡೆ ಒರಗಿಕೊಳ್ಳಲು ದಿಂಬುಗಳನ್ನಿರಿಸಲಾಗಿತ್ತು. ನಮ್ಮನ್ನು ಮುಸ್ಥಾಕ್ ನ ತಂದೆ, ತಾಯಿ ಮತ್ತು ಅತ್ತಿಗೆಯರು ಸ್ವಾಗತಿಸಿ ಕೂರಲು ಹೇಳಿ ಅವರು ದಿನ ನಿತ್ಯ ಸೇವಿಸುವ ಕಾಶ್ಮೀರೀ ಚಹಾ ಮತ್ತು ಬನ್ ರೀತಿಯ ರೊಟ್ಟಿ ತಂದಿಟ್ಟರು. ಅವರೂ ನಮ್ಮ ಜತೆ ಸೇರಿ ಚಹಾ ಸೇವಿಸಲಾರಂಭಿಸಿದರು. ಮೊದಲ ಸಿಪ್ ಕುಡಿದ ಕೂಡಲೇ ನಾನು ಮಗ ಮತ್ತು ಹೆಂಡತಿ ಎಲ್ಲಾ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದೆವು ಪ್ರಶ್ನಾರ್ಥಕವಾಗಿ. ಏಕೆಂದರೆ ಆ ಚಹಾದ ರುಚಿ ನಾವು ಕುಡಿಯುವ ಸಾಮಾನ್ಯ ಚಹಾದಂತಿರಲಿಲ್ಲ. ಮತ್ತೊಂದು ಸಿಪ್ ಗುಟುಕರಿಸಿ ಅದೇನೋ ಕಸಿವಿಸಿಯಾದಂತಾಗಿ ಪೂರ್ತಿ ಹೇಗಪ್ಪಾ ಕುಡಿದು ಮುಗಿಸೋದೂ ಎಂದು ಅನುಮಾನಿಸುತ್ತಲೇ ಅವರನ್ನು ಕೇಳಿಯೇಬಿಟ್ಟೆವು ಇದೆಂತಹಾ ಚಹಾ ಎಂದು. ಅವರು ಇದು ನಾವು ದಿನ ನಿತ್ಯ ಕುಡಿವ ಕಾಶ್ಮೀರೀ ಚಹಾ.. ಮಾಮೂಲೀ ಚಹಾದಂತೆಯೇ ಹಾಲು ಟೀ ಎಲೆ ಹಾಕಿ ಸಕ್ಕರೆಯ ಬದಲು ಅದಿಗೆ ಉಪ್ಪು ಹಾಕುತ್ತೇವೆ ಅದು ಆರೋಗ್ಯಕ್ಕೆ ಅತ್ಯುತ್ತಮ ಎಂದರು. ಮನದೊಳಗೇ ಅತ್ಯುತ್ತಮ ಅದೇನಾದರೂ ಇರಲಿ ಆದರೆ ದಿನಾ ಸಕ್ಕರೆ ಹಾಕಿ ಟೀ ಕುಡಿಯುತ್ತಿದ್ದ ನಮಗೆ ಉಪ್ಪು ಚಹಾದ ಕಹಿ ಅನುಭವ ಜೀವನದಲ್ಲೇ ಮರೆಯಲಾಗದು. ಸ್ವಲ್ಪ ಸ್ವಲ್ಪ ಕುಡಿದು ಸಬೂಬು ಹೇಳಿ ಹಾಗೇ ಬಿಟ್ಟುಬಿಟ್ಟೆವು. ಮನದಲ್ಲೇ ನಾನಂದುಕೊಳ್ಳುತ್ತಿದ್ದೆ ನನ್ನ ಹೆಂಡತಿಯೇನಾದರೂ ಸಕ್ಕರೆ ಬದಲು ಪಕ್ಕದಲ್ಲೇ ಇರಿಸಿದ್ದ ಡಬ್ಬದಿಂದ ಉಪ್ಪು ಹಾಕಿ ಈ ರೀತಿ ಚಹಾ ಮಾಡಿ ತಂದಿರಿಸಿದ್ದಿದ್ದಲ್ಲಿ ಭೂಮಿ ಆಕಾಶ ಒಂದಾಗುವ ಹಾಗೆ ಎಗರಾಡಿ ರಂಪ ಮಾಡಿಬಿಡುತ್ತಿದ್ದೆ ಆದರೆ ಅತಿಥಿ ಸತ್ಕಾರ ನಡೆಯುತ್ತಿದ್ದ ಆ ವೇಳೆ ಅಸಹಾಯಕನಾಗಿ ಒಲ್ಲದ ಮನಸ್ಸಿನಿಂದ ಅವರ ಆತಿಥ್ಯವನ್ನು ಸ್ವೀಕರಿಸಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಅಲ್ಲಿ ಸುತ್ತಮುತ್ತಲೂ ಅಂದರೆ ಪ್ರತಿಯೊಂದು ಗಲ್ಲಿಗಳಲ್ಲೂ ಒಂದೊಂದು ಮಸೀದಿಯಿದ್ದು ಒಂದೇ ಸಮಯಕ್ಕೆ ಎಲ್ಲಾ ಸ್ಪೀಕರ್ ಗಳಲ್ಲಿ ’ಅಲ್ಲಾ....ಹು ಅಕ್ಬರ್...’ ಎಂದು ಸಂಜೆಯ ಪ್ರಾರ್ಥನೆಗಾಗಿ ಸೂಚಿಸಲಾಗುತ್ತಿತ್ತು. ಒಟ್ಟಿನಲ್ಲಿ ನಾವು ಭಾರತ ದೇಶದಲ್ಲಿದ್ದರೂ ಪರದೇಶದ ಪರಕೀಯರ ನಡುವೆ ಇರುವುದೇನೋ ಎಂದು ಬಾಸವಾಗುತ್ತಿತ್ತು. ಚಹಾ ಮುಗಿಸಿದಮೇಲೆ ಅವರ ತಂದೆ ಅವರ ಮನೆಯವರು, ಕಾರೋಬಾರು ಇತ್ಯಾದಿಗಳ ಬಗ್ಗೆ ವಿವರವಾದ ಪರಿಚಯ ತಿಳಿಸಿದರು. ಅದರಿಂದ ತಿಳಿದ ವಿಷಯವೆಂದರೆ ಅವರು ಧರ್ಮದಿಂದ ಮುಸ್ಲಿಮರಾಗಿದ್ದರೂ ಯಾವುದೇ ಕಾರಣಕ್ಕೂ ಪಾಕ್ ಪ್ರೇಮಿಗಳಾಗಿಲ್ಲ, ಹುಟ್ಟಿನಿಂದ ಇಲ್ಲೇ ಇದ್ದು ಬೆಳೆದು ದೊಡ್ಡವರಾಗಿ ಇಲ್ಲೇ ನಮ್ಮ ಟೂರ್ ಮತ್ತು ಟ್ರಾವಲ್ ಏಜೆನ್ಸೀ ಹಾಗೂ ಉಪಯೋಗಿಸಿದ ವಾಹನಗಳನ್ನು ಕೊಂಡು ಮಾರುವ ತಮ್ಮದೇ ಕಾರೋಬಾರು ನಡೆಸುತ್ತಿದ್ದು ಅವರ ಇಬ್ಬರು ಗಂಡು ಮಕ್ಕಳು ಅವರದೇ ಟ್ಯಾಕ್ಸೀ ಓಡಿಸುತ್ತಾರೆ ಮತ್ತೊಬ್ಬ ಮಗ ಕಾಶ್ಮೀರದ ಹೆಸರುವಾಸಿ ಪಡೆದಿರುವ ಪಾಶ್ಮಿನಾ ಎಂಬ ಬಹಳ ದುಬಾರಿ ಹಾಗೂ ಶ್ರೇಷ್ಠ ಮಟ್ಟದ ಉಣ್ಣೆಯ ಶಾಲುಗಳನ್ನು ತಮ್ಮದೇ ಆದ ಕೈಮಗ್ಗದಲ್ಲಿ ನೇಯ್ದು ಹೊರದೇಶಗಳಿಗೆ ರಫ್ತು ಮಾಡುತ್ತಾರೆಂದೂ ತಿಳಿಸಿದರು.


ಶ್ರೀನಗರದ ವಿಖ್ಯಾತ ಟ್ಯೂಲಿಪ್ ಹೂವಿನ ತೋಟದ ಚಿತ್ರಗಳು


ಕಾಶ್ಮೀರದ ಹೊರಗಿನ ಸಾಮಾನ್ಯ ಜನ ತಿಳಿದಿರುವಂತೆ ಎಲ್ಲಾ ಮುಸ್ಲಿಮರೂ ಉಗ್ರವಾದಿಗಳಲ್ಲ, ಪಾಕಿಸ್ತಾನೀ ಬೆಂಬಲಿಗರಲ್ಲ. ಎಲ್ಲೋ ಕೆಲವರು ತಮ್ಮ ಕ್ಷಣಕಾಲದ ಹಣದ ಮತ್ತು ಅಧಿಕಾರದ ಆಸೆಗೆ ಬಲಿ ಬಿದ್ದು ದಾರಿ ತಪ್ಪಿರುವ ನಿರುದ್ಯೋಗೀ ಯುವಕರು ಮತ್ತು ಧರ್ಮದ ಹೆಸರಿನಲ್ಲಿ ನೆರೆಯ ವಿರೋಧೀ ದೇಶಗಳ ಬೆಂಬಲ ಪಡೆಯುತ್ತಿರುವ ಪಟ್ಟಭಧ್ರ ಹಿತಾಸಕ್ತಿಗಳು ಒಟ್ಟಿಗೇ ಸೇರಿ ಹಲವಾರು ಅಪಹರಣ, ಕೊಲೆ, ಸುಲಿಗೆ, ದಂಗೆ, ಇತ್ಯಾದಿ ಹೀನ ಕೃತ್ಯಗಳನ್ನು ಮಾಡುತ್ತಾ ರಾಜ್ಯದ ಜನರ ಶಾಂತಿಗೆ ಭಂಗ ತರಲು ಯತ್ನಿಸಿ ನಮ್ಮಂತಾ ಬಹಳಷ್ಟು ದೇಶಪ್ರೇಮ ಇರುವ ಇಲ್ಲಿನ ಜನತೆಗೂ ಕೆಟ್ಟ ಹೆಸರು ತರುತ್ತಿದ್ದಾರೆ. ಆ ರೀತಿ ಹಿಂಸೆ, ಬಂದ್ ಇತ್ಯಾದಿ ಆದಾಗ ಪೋಲೀಸರು ಮತ್ತು ಸೇನಾ ಕಾರ್ಯಾಚರಣಾ ಪಡೆಯವರು ದಿನ ನಿತ್ಯ ಕರ್ಫ್ಯೂ ಹಾಕಿ ಸಿಕ್ಕ ಸಿಕ್ಕವರನ್ನು ಹಿಂದೆ ಮುಂದೆ ನೋಡದೇ ಎಳೆದೊಯ್ದು ಇಲ್ಲ ಸಲ್ಲದ ಆರೋಪ ಹೊರಿಸಿ ಕಂಬಿ ಎಣಿಸುವಂತೆ ಮಾಡುವುದೇ ಅಲ್ಲದೇ ನಮ್ಮ ಹೆಂಗಸರು ಮಕ್ಕಳುಗಳನ್ನೂ ಹಿಂಸಿಸಿ ಅತ್ಯಾಚಾರ ಅನಾಚಾರಗಳನ್ನು ಎಸಗುತ್ತಾರೆ. ಇಂತಹಾ ನಿತ್ಯ ದೌರ್ಜನ್ಯಗಳಿಂದ ನಾವು ಬೇಸತ್ತಿದ್ದರೂ ಎಲ್ಲಾ ಸಹಿಸಿಕೊಂಡು ಸುಮ್ಮನಿದ್ದೇವೆ. ಕಾರಣ ಇದು ನಮ್ಮ ದೇಶ ನಮ್ಮ ನಾಡು, ಆ ರೀತಿಯ ಹರತಾಳ, ಬಂದ್ ಗಳಾದಾಗ ನಮ್ಮ ಜೀವನ ಅಸ್ತವ್ಯಸ್ತವಾಗುತ್ತದೆ ಕಾರೋಬಾರಿಗೆ ಮತ್ತದರಿಂದ ಬರುವ ಆದಾಯಕ್ಕೂ ಕಲ್ಲು ಬೀಳುತ್ತದೆ ಆದ್ದರಿಂದ ಇದೆಲ್ಲಕ್ಕೂ ನಮ್ಮ ವಿರೋಧವಿದೆ. ನಿಮ್ಮಂತಹಾ ಈ ದೇಶದವರಷ್ಟೇ ಅಲ್ಲದೇ ಜಪಾನ್, ರಷಿಯಾ, ಚೀನಾ ಮುಂತಾದ ವಿದೇಶೀ ಅತಿಥಿಗಳೂ ನಮ್ಮಲ್ಲಿ ಬಂದು ಉಳಿದು ನಮ್ಮ ಆಥಿತ್ಯ ಸ್ವೀಕರಿಸಿ ಹೋಗುತ್ತಾರೆ. ಅವರೆಲ್ಲರಿಗೂ ನಾವು ನಮ್ಮ ಕಾಶ್ಮೀರಿಗಳ ಬಗ್ಗೆ ತಿಳಿಸುತ್ತೇವೆ ಅದರಿಂದಾದರೂ ’ಕಾಶ್ಮೀರೀ ಮುಸ್ಲಿಮರೆಲ್ಲಾ ಉಗ್ರವಾದಿಗಳು’ ಎಂಬ ಅಪ ಪ್ರಚಾರ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಿ ನಾವೂ ಈ ದೇಶದವರು, ಈ ದೇಶದ ಪ್ರಗತಿ ಮತ್ತು ಏಳಿಗೆಯೇ ನಮ್ಮ ಏಳಿಗೆ ಯೆಂದು ನಂಬಿರುವ ಜನರೂ ಇದ್ದಾರೆ ಎಂದು ತಿಳಿದು ಆ ಹಿಂದಿನ ಕಾಶ್ಮೀರದ ಘನತೆ ಗೌರವಗಳು ಮತ್ತೆ ಮರುಕಳಿಸಿ ಬಂದು ’ಕಾಶ್ಮೀರ ಎಂದರೆ ಜನ್ನತ್ - ಈ ಭೂಲೋಕದ ಸ್ವರ್ಗ’ ಎಂದು ಜನರಲ್ಲಿ ನಂಬಿಕೆ ಮೂಡುವ ಕಾಲವನ್ನು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು. ಅವರ ಆ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿತ್ತು.


ಶ್ರೀನಗರದ ವಿಖ್ಯಾತ ಟ್ಯೂಲಿಪ್ ಹೂವಿನ ತೋಟದ ಚಿತ್ರಗಳು


ಅದಾದ ನಂತರ ಮನೆಯ ಹೆಂಗಸರು ಪುಟ್ಟ ಪುಟ್ಟ ಮಕ್ಕಳು ಎಲ್ಲಾರೂ ಜತೆಯಲ್ಲಿ ಕುಳಿತು ಅಲ್ಲಿನವರ ಮದುವೆ ಅವರ ವೇಶಭೂಷಣ ಪೋಶಾಕುಗಳು ಇತ್ಯಾದಿಗಳ ಬಗ್ಗೆ ಕೆಲವು ಫೋಟೊ ಆಲ್ಬಮ್ ನಲ್ಲಿದ್ದ ಚಿತ್ರಗಳನ್ನು ತೋರಿಸುತ್ತಾ ಸಂಕ್ಷಿಪ್ತ ವಿವರ ನೀಡಿದರು. ಕೊನೆಗೆ ರಾತ್ರಿ ಸುಮಾರು ಒಂಬತ್ತೂವರೆಯ ಹೊತ್ತಿಗೆ ರಾತ್ರಿ ಭೋಜನದ ವ್ಯವಸ್ಥೆ ಮಾಡಿ ಅಲ್ಲಿಯೇ ಎಲ್ಲರೊಟ್ಟಿಗೆ ಕುಳಿತು ಕಾಶ್ಮೀರೀ ವಿಶೇಷ ಭಕ್ಷ್ಯಗಳಾದ ರೋಗನ್ ಜೋಶ್, ರಿಸ್ತಾ, ಗೋಸ್ತಾಬಾ ಹಾಗೂ ಬಿರಿಯಾನಿ ಗಳಿಂದ (ಎಲ್ಲವೂ ಮಾಂಸಾಹಾರಿ ವ್ಯಂಜನಗಳು) ಸಮೃದ್ಧವಾದ ರುಚಿಯಾದ ಊಟವನ್ನು ಹೊಟ್ಟೆತುಂಬಾ ಮಾಡಿದೆವು. ಕಾಶ್ಮೀರೀ ಪಂಡಿತರೆಂಬ ಖಟ್ಟಾ ಬ್ರಾಹ್ಮಣರೂ ಕೂಡಾ ಪಕ್ಕಾ ಮಾಂಸಾಹಾರಿಗಳು ಎಂದರೆ ನಿಮಗೆ ಆಶ್ಚರ್ಯವಾಗಬಹುದು ಆದರೂ ಅದು ನಂಬಲೇಬೇಕಾದ ಸಥ್ಯ. ರಾತ್ರಿ ಮಲಗಿದ್ದೇ ತಡಾ ಬೆಳಗಿನಿಂದ ಸುತ್ತಿ ಸುಸ್ತಾಗಿದ್ದ ಕಣ್ಣಿಗಳಿಗೆ ಅದುವರೆಗೂ ಇದ್ದ ಒಂದು ರೀತಿ ಅಳುಕು, ಭಯ ಎಲ್ಲಾ ದೂರಾಗಿ ಅದ್ಯಾವಾಗ ನಿದ್ರೆ ಹತ್ತಿತೋ ತಿಳಿಯಲೇಇಲ್ಲ.


ಬೆಳಿಗ್ಗೆ ಎದ್ದು ಸ್ನಾನ ತಿಂಡಿ ಮುಗಿಸಿ ಮತ್ತೆ ವಾಪಸ್ ಪ್ರಯಾಣಕ್ಕೆಂದು ಏರ್ ಪೋರ್ಟ್ ತಲುಪಿದೆವು. ಅಲ್ಲಿ ಇಳಿಸಿದಾಗ ಮುಸ್ಥಾಕ್ ನಿಗೆ ಎಲ್ಲಾ ಸುತ್ತಾಡಿಸಿ ಸ್ಥಳಗಳು ಮಾತ್ರವೇ ಅಲ್ಲದೇ ಅವನೇ ಹೇಳಿದ್ದಂತೆ ಕಾಶ್ಮೀರೀ ಮುಸ್ಲಿಮರ ಅತಿಥಿ ಸತ್ಕಾರ, ಔದಾರ್ಯ ಇವುಗಳ ಬಗ್ಗೆ ಪರಿಚಯ ಮಾಡಿಕೊಟ್ಟು ಅದುವರೆಗೂ ನಮ್ಮ ಮನದಲ್ಲಿದ್ದ ತಪ್ಪು ಕಲ್ಪನೆಗಳನ್ನು ಸ್ವಲ್ಪಮಟ್ಟಿಗೆ ದೂರಮಾಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿ ಮೊದಲೇ ನಿರ್ಧರಿಸಿದ್ದ ರೀತಿ ಬಾಡಿಗೆ ಹಾಗೂ ಅವರುಣಬಡಿಸಿದ ಔತಣ ಹಾಗೂ ರಾತ್ರಿ ಕಳೆಯಲು ಆಸರೆ ಗಳಿಗಾಗಿ ಟಿಪ್ಸ್ ರೂಪದಲ್ಲಿ ಹೆಚ್ಚುವರಿ ಹಣವನ್ನು ಕೊಟ್ಟು ಅವನನ್ನು ಕಳುಹಿಸಿಕೊಟ್ಟೆವು. ಅಬ್ಭಾ.. ಅಂತೂ ಕೆಟ್ಟ ಧೈರ್ಯ ಮಾಡಿ ಒಂದು ಸಾಹಸಕ್ಕೆ ಕೈಹಾಕಿ ಯಾವುದೇ ತಕರಾರು ತೊಂದರೆಗಳಿಲ್ಲದೇ ಕ್ಷೇಮವಾಗಿ ತಲುಪಿದ್ದಕ್ಕೆ ತುಂಬಾ ಸಂತಸವಾಗಿತ್ತು... ಮಡದಿ ಮತ್ತು ಮಗನ ಮೊಗಗಳಲ್ಲೂ ಕಿರುನಗೆ ಮೂಡಿತ್ತು. ಕೇವಲ ಒಂದೆರಡು ಘಂಟೆಗಳ ಕಾಲದಲ್ಲಿ ಒಂದು ಹೊಸ ಸ್ಥಳದ ಜನರ ಜೀವನ ಶೈಲಿ ರೀತಿ ನೀತಿ ನಡೆ ನುಡಿ ನಂಬಿಕೆ ವ್ಯವಹಾರ ಇವೆಲ್ಲಾ ಅಲ್ಪಸ್ವಲ್ಪ ತಿಳಿಯಬಹುದೆಂದಾದರೆ ಅದರ ಬಗ್ಗೆ ಸಾಕಷ್ಟು ಸಮಯ ಕೊಟ್ಟು ಇನ್ನೂ ವಿವರವಾಗಿ ತಿಳಿದಲ್ಲಿ ಅವರ ಸಮಸ್ಯೆಗಳನ್ನು ಅರಿತು ಸಮಂಜಸವಾದ ಪರಿಹಾರಗಳನ್ನು ರೂಪಿಸುವುದು ಅವುಗಳನ್ನು ಜಾರಿಗೆ ತರುವುದು ಯಾವುದೇ ಸರ್ಕಾರಕ್ಕಾಗಲೀ ಜನಪ್ರತಿನಿಧಿಗಳಿಗಾಗಲೀ ಅಥವಾ ಸ್ವಯಂಸೇವಾ ಸಂಸ್ಥೆಗಳಿಗಾಗಲೀ ಕಷ್ಟಕರವಾದ ಕೆಲಸವಲ್ಲವೇನೋ ಎನ್ನಿಸಿತು. ಒಟ್ಟಿನಲ್ಲಿ ಕಾಶ್ಮೀರದ ಎಲ್ಲಾ ಮುಸ್ಲಿಮರೂ ಉಗ್ರವಾದಿಗಳಲ್ಲ ಎಂಬ ಸತ್ಯದ ಸ್ಪಷ್ಠ ಅರಿವಾಗಿತ್ತು....!


 

ಲೇಖಕರು

ತ್ರಿನೇತ್ರ

ನಾವಿರೋದೇ ಹೀಗೆ...!

ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!

ಅನಿಸಿಕೆಗಳು

Ravindranath.T.V. ಧ, 06/27/2012 - 09:40

ಪ್ರಿಯ ತ್ರಿನೇತ್ರರವರೇ,


           ನಿಮ್ಮ ಕಾಶ್ಮೀರದ ಬಗ್ಗೆ ಬರೆದ ಲೇಖನ ತುಂಬಾ ಚೆನ್ನಾಗಿದೆ. ಅಲ್ಲಿ ನಡೆಯುತ್ತಿರುವ ವಾಸ್ತವ ಸಂಗತಿಗಳ ಬಗ್ಗೆ ಒಳ್ಳೆಯ ಮತ್ತು ಉಪಯುಕ್ತ ಮಾಹಿತಿ ನೀಡಿದ್ದಿರಿ. ಅಲ್ಲಿ ತೆಗೆದ


ಛಾಯಾಚಿತ್ರಗಳು ಅತ್ಯುತ್ತಮವಾಗಿವೆ. ನಾನು ನೇರವಾಗಿ ಕಾಶ್ಮೀರ ನೋಡಿದಷ್ಟೇ ಸಂತೋಷವಾಯ್ತು.


                                          ರವೀಂದ್ರನಾಥ್.ಟಿ.ವಿ.(ರವಿಚಂದ್ರವಂಶ್)

ತ್ರಿನೇತ್ರ ಧ, 06/27/2012 - 10:21

ಮಿತ್ರ ರವೀಂದ್ರನಾಥ್ ಅವರೇ,


ಲೇಖನವನ್ನು ಓದಿ ಮೆಚ್ಚುಗೆಯ ನುಡಿಗಳನ್ನು ಬರೆದು ತಿಳಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನದ ಉದ್ದೇಶವೇ ನಾವು ನೋಡಿ ನಮ್ಮ ಅನುಭವಕ್ಕೆ ಬಂದಿದ್ದನ್ನು ಇತರರೊಂದಿಗೆ ಹಂಚಿಕೊಳ್ಳುವುದೇ ಆಗಿತ್ತು. ಆ ಪ್ರಯತ್ನ ಸ್ವಲ್ಪಮಟ್ಟಿಗಾದರೂ ಯಶಸ್ವಿಯಾಗಿರುವುದು ನನಗೆ ಸಂತಸ ತಂದಿದೆ. ಈ ಲೇಖನದಲ್ಲಿ ಪ್ರಕಟಿಸಿದ ಚಿತ್ರಗಳು ಮತ್ತು ಬರಹ ಸರಿಯಾಗಿ ಬಾರದೇ ನನಗೇ ಮೆಚ್ಚುಗೆಯಾಗಿರಲಿಲ್ಲ ಆದರೆ ಮಾನ್ಯ ಮೇಲಧಿಕಾರಿಯವರು ಅದನ್ನು ಸರಿಪಡಿಸಿ ಈ ರೀತಿ ವ್ಯವಸ್ಥಿತವಾಗಿ ಜೋಡಿಸಿ ಪ್ರಕಟಿಸಿದ್ದಾರೆ. ಅವರಿಗೂ ಧನ್ಯವಾದಗಳು. -ತ್ರಿನೇತ್ರ. 

ಪಿಸುಮಾತು ಧ, 06/27/2012 - 10:33

ಲೇಖನವನ್ನು ಸಮಯಾಭಾವದಿಂದ ಪೂರ್ತಿ ಓದಲಾಗಿಲ್ಲ. ಅರ್ಧ ಓದಿದೆ. ತುಂಬಾ ಚೆನ್ನಾಗಿ ವಿವರಿಸಿದ್ದೀರಿ. 

ತ್ರಿನೇತ್ರ ಧ, 06/27/2012 - 11:39

ನಮಸ್ಕಾರ ರಾಜೇಶ್ ಹೆಗಡೆಯವರಿಗೆ.
ನನ್ನ ಈ ಲೇಖನವನ್ನು ಬರೆದು ಅದರಲ್ಲಿ ಚಿತ್ರಗಳನ್ನು ಹಾಕಿ ಸರಿಯಾಗಿ ವ್ಯವಸ್ಥಿತವಾಗಿ ಜೋಡಿಸುವಲ್ಲಿ ನಾನು ಸೋತಿದ್ದೆ. ಪ್ರಕಟಿಸಿದಮೇಲೆ ತಿಳಿಯಿತು ಕೆಲವು ಕಡೆ ಫಾಂಟ್ಸ್ ತಂತಾನೇ ಬದಲಾಗಿ ಫಾರ್ಮ್ಯಾಟಿಂಗ್ ಕೂಡಾ ಹೊಂದದೇ ಅಲ್ಲೀ ಇಲ್ಲೀ ಹರಡಿಹೋಗಿ ನನಗೇ ಬೇಸರ ತರುವಂತಿತ್ತು. ಆದರೆ ಅದನ್ನು ಅಳಿಸಿಹಾಕಲೂ ನನಗೆ ಇಷ್ಟವಿರಲಿಲ್ಲ. ಎರಡು ಮೂರು ಬಾರಿ ಬದಲಿಸಲು ಪ್ರಯತ್ನಿಸಿ ಸೋತಿದ್ದೆ. ಈ ತೊಂದರೆಯಿಂದಾಗಿಯೇ ಇನ್ನೂ ಹಲವಾರು ಸುಂದರ ಚಿತ್ರಗಳನ್ನು ಹಾಕಲಾಗಲಿಲ್ಲ. ಆದರೆ ಇಂದು ಮುಖಪುಟ ದಲ್ಲಿ ಆ ಲೇಖನ ಕಂಡು ತೆರೆದು ನೋಡಿದಾಗ ನನಗೆ ಆಶ್ಚರ್ಯ ಕಾದಿತ್ತು. ಎಲ್ಲವೂ ನಾನಂದುಕೊಂಡಿದ್ದ ರೀತಿಯಲ್ಲೇ ಸುವ್ಯವಸ್ಥಿತವಾಗಿ ಜೋಡಿಸಿ ಪರಿಸ್ಕೃತಗೊಳಿಸಿ ಪ್ರಕಟಿಸಿ ಓದುಗರಿಗೆ ಕಿರಿಕಿರಿಯಾಗದಂತೆ ಮಾಡಿದ್ದೀರಿ. ತಮಗೆ ತುಂಬಾ ತುಂಬಾ ಧನ್ಯವಾದಗಳು. -ತ್ರಿನೇತ್ರ.

ರಾಜೇಶ ಹೆಗಡೆ ಭಾನು, 07/01/2012 - 18:12

ಕಾಶ್ಮೀರದ ಸುಮಧುರ ಪ್ರವಾಸದ ಅನುಭವದ ಜೊತೆ ಅಷ್ಟೇ ಸುಂದರವಾದ ಚಿತ್ರ ನೀಡಿ ಅಲ್ಲಿಗೆ ಹೋಗಬೇಕೆಂಬ ಹಂಬಲವನ್ನು ಉಂಟು ಮಾಡಿದ್ದೀರಾ.

ಕಾಶ್ಮೀರದಲ್ಲಿರುವ ಕೆಲವೇ ಕೆಲವು ದುಷ್ಕರ್ಮಿಗಳಿಂದ ಅದಕ್ಕೆ ಕೆಟ್ಟ ಅಭಿಪ್ರಾಯ ಬಂದಿರುವದು ನಿಜಕ್ಕೂ ವಿಷಾದನೀಯ. ನಿಮ್ಮ ಲೇಖನ ಓದಿದ ಕೆಲವರಿಗಾದರೂ ಕಾಶ್ಮೀರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವದರಲ್ಲಿ ಸಂದೇಹವೇ ಇಲ್ಲ. :)

ತ್ರಿನೇತ್ರ ಸೋಮ, 07/02/2012 - 12:09

 ಶ್ರೀ ರಾಜೇಶ್ ಅವರೇ... ಈ ಲೇಖನ ಮತ್ತು ಅದರಲ್ಲಿನ ಚಿತ್ರಗಳನ್ನು ಮೆಚ್ಚಿ ಪ್ರೋತ್ಸಾಹದ ನುಡಿಗಳನ್ನು ಬರೆದಿದ್ದಕ್ಕೆ ಧನ್ಯವಾದಗಳು. ನಾನು ಕೇಳಿಕೊಂಡಿರುವಂತೆ ಇದರ ವಿಡಿಯೋ ಚಿತ್ರವನ್ನೂ ದಯಮಾಡಿ ಪ್ರಕಟಿಸಿದಲ್ಲಿ ಓದುಗರಿಗೆ ಇನ್ನೂ ಹೆಚ್ಚು ಅನುಕೂಲವಾಗುವುದೆಂದು ನನ್ನ ಭಾವನೆ. -ತ್ರಿನೇತ್ರ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.