Skip to main content

ಹಳಿ ತಪ್ಪಿದ ಬಾಂಡ್.. ಅಣ್ಣಾ ಬಾಂಡ್...!!

ಬರೆದಿದ್ದುMay 14, 2012
4ಅನಿಸಿಕೆಗಳು

ಅಂತೂ ಬಹು ನಿರೀಕ್ಷೆಯ "ಅಣ್ಣಾ ಬಾಂಡ್" ಚಿತ್ರ ಮೇ ೧ ರಂದು ರಾಜ್ಯದ, ಹೊರರಾಜ್ಯದ ಮತ್ತು ವಿದೇಶಗಳಲ್ಲಿನ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಬಹುನಿರೀಕ್ಷೆಯೊಂದಿಗೆ ಚಿತ್ರ ನೋಡ ಹೊರಟ ಅಭಿಮಾನಿ ಪ್ರಭುಗಳಿಗೆ "ದುನಿಯಾ" ಸೂರಿ ಭಾರಿ ನಿರಾಶೆ ಮಾಡಿಬಿಟ್ಟಿದ್ದಾರೆ. ಅಂತೂ "ಜಾಕಿ" ಚಿತ್ರದ ನಂತರದ ಅತಿನಿರೀಕ್ಷೆಯೋ, "ಬಾಂಡ್" ಹೆಸರ ಪ್ರಭಾವವೋ..., "ಅಣ್ಣಾ ಬಾಂಡ್" ಎಲ್ಲವನ್ನು ತಲೆಕೆಳಗು ಮಾಡಿಬಿಟ್ಟಿದೆ...! [img_assist|nid=22094|title=ಅಣ್ಣ ಬಾಂಡ್|desc=ಅಣ್ಣ ಬಾಂಡ್|link=node|align=right|width=624|height=472]   ಚಿತ್ರ ಕೃಪೆಃ havyas90downloads    ಚಿತ್ರದ ಸಾರಂಶವಿಷ್ಟೇ: ಸಿನೆಮಾ ಶುರುವಾಗುವುದೇ ಕೆಲವು ವ್ಯಕ್ತಿಗಳು (ರೌಡಿಗಳು ಮತ್ತು ಸಮಾಜಘಾತಕ ಶಕ್ತಿಗಳು) ಹುಚ್ಚರಂತೆ ವರ್ತಿಸುತ್ತ "ಅಣ್ಣಾ ಬಾಂಡ್ ನೋಡ್ತಾಯಿದ್ದಾನೆ, ಕೆಟ್ಟ ಕೆಲಸ ಮಾಡಬೇಡಿ..." ಎಂಬ ಮಾತು ಬಡಬಡಿಸುತ್ತ, ಅಕಾಶ ನೋಡುತ್ತ ನಗರದ ವಿವಿದೆಡೆ ಅರೆನಗ್ನ ಸ್ಥಿತಿಯಲ್ಲಿ ಬಿದ್ದಿರುತ್ತಾರೆ. ನಗರ ತುಂಬ ಇದೇ "ಸೆನ್ಸೆಷನ್ ನ್ಯೂಸ್". ಇದೆಲ್ಲದರ ನಡುವೆ ನಮ್ಮ ನಾಯಕ ಬಾಂಡ್ ರವಿ (ಪುನೀತ್) ಮಾರ್ಕೆಟಿನ ತರಕಾರಿ ಕಸದ ನಡುವೆ ಬಿದ್ದಿರುವ ೧೦-೧೫ ಹೆಣಗಳ ಸಾಲಿನಲ್ಲಿ ಕಾಣಿಸುತ್ತಾರೆ ( ಮೊದಲ ಸೀನಿನಲ್ಲೇ ಅವರು ಹೋಗಿಬಿಟ್ಟರಾ ಎಂದು ಅಂದುಕೊಳ್ಳಬೇಡಿ...!!). ಅಲ್ಲಿಂದ ಹೆಣಗಳನ್ನ ಶವಾಗಾರಕ್ಕೆ ಸಾಗಿಸುವ ಪೋಲೀಸರು ತಮ್ಮ ಕಾರ್ಯ ಮುಗಿಸಿ ಹೊರಟಾಗ, ದಗ್ಗನೆ ಏಳುತ್ತಾರೆ ನೋಡಿ ನಮ್ಮ ಬಾಂಡ್..!! ಸೀದ ಏದ್ದವರೆ ರಾಜಕಾರಣಿಯ ಮಗನನ್ನ ಹೊತ್ತೊಯ್ದು "ಚಿತ್ರ-ವಿಚಿತ್ರ"  ಕಾಟ ಕೊಟ್ಟು ಸತಾಯಿಸುತ್ತಾರೆ. ಎಲ್ಲ "ಚಾರ್ಲಿ" ಗೋಸ್ಕರ..!! ಅಂತೂ ಇದು "ಚಾರ್ಲಿ" ಹುಡುಕುವ ಕಾರ್ಯ ಎಂದು ಅರಿವಿಗೆ ಬರುವ ಮೊದಲೇ "ಹೀ ಇಸ್ಸ್ ಅಣ್ಣಾ ಬಾಂಡ್" ಹಾಡು ಬಂದಿರುತ್ತದೆ. "ಮೂಳೆಗಾಡಿ" ಯ ಮೇಲೆ ಆಸೀನರಾದ ಅಣ್ಣಾ ಬಾಂಡ್ ನ ಗ್ರಾಫಿಕ್ಸ್ ನ ದೃಶ್ಯವೈಭವ... ( ಗಾಡಿಯ ರಚನೆ ಪ್ರಕೃತಿ ಬನವಾಸಿಯವರದ್ದು). ನಂತರ ದೃಶ್ಯ "ಸದಾ ಸಂಚಾರಿ" ಮನೆಯಲ್ಲಿ ಬಾಂಡ್ ರವಿ ಒಬ್ಬ ನಿರ್ದೇಶಕನ (ನೀನಾಸಂ ಸತೀಶ್) ಹಿಡಿದು ತಂದು ಅವನ ಹತ್ತಿರ ತನ್ನ "ಜೀವನದ ಕಥೆಯನ್ನು" ಸಿನಿಮಾ ಮಾಡುವ ಬಗ್ಗೆ ಹೇಳುತ್ತಾನೆ. ಅಲ್ಲಿಗೆ ಶುರುವಾಗುತ್ತದೆ "ರವಿ" ಬಾಂಡ್ ಆದ ಬಗೆ...   ಚಿತ್ರದ ಮೊದಲಾರ್ಧ ರವಿ "ಮೀರಾ" (ಪ್ರಿಯಮಣಿ) ಳ ಓಲೈಕೆಯಲ್ಲೇ ಕಳೆದುಹೋಗುತ್ತದೆ. ಆಗಲೂ ಪ್ರೇಕ್ಷಕ ಪ್ರಭುವಿಗೆ "ಈ ಚಾರ್ಲಿ ಯಾರು..?" ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಅಂತೂ ವಿರಾಮದ ಸಮಯದಲ್ಲಿ ನಮ್ಮ ನಾಯಕನಿಗೆ ತನ್ನ ದೋಸ್ತಿ ಚಪಾತಿ ಬಾಬುವಿನ (ರಂಗಾಯಣ ರಘು) ಜೊತೆ ಸೇರಿ "ದೊಡ್ಡ ಮನುಷ್ಯನಾಗುವ" ಹಂಬಲದೊಂದಿಗೆ ಸಿಟಿ ಕಡೆಗೆ ಪಯಣ ಮಾಡುವ ಹೊತ್ತಿಗೆ ತಾನು ಕೆಲಸ ಮಾಡುತ್ತಿದ್ದ "ಉಳುಕು ಸ್ಪೆಷಲಿಸ್ಟ್" ಅಂಗಡಿಯ ಮಾಲಿಕನ (ವಿ. ಮನೋಹರ್) ಕೊಲೆಯ ಅರೋಪ ತಲೆ ಮೇಲೆ ಬೀಳುತ್ತದೆ. ಅದೇ ಸಮಯದಲ್ಲಿ ಒಬ್ಬ ಸೇನ ಯೋಧ ಇವರನ್ನ ದೂರದ ಪ್ರದೇಶದಲ್ಲಿನ ಮನೆಯೊಂದಕ್ಕೆ ಕರೆದೊಯ್ಯುತ್ತಾನೆ. ಅವನನ್ನು ಪೋಲೀಸನೆಂದೇ ಭಾವಿಸುವ ಇವರು ಮನೆ ತಲುಪಿದಾಗ ತಮ್ಮನ್ನು ಆ ಮನೆಗೆ ಕರೆತಂದ ನಿಜ ವಿಷಯ ಗೊತ್ತಾಗುತ್ತದೆ (ಹಾಗೇ ಪ್ರೇಕ್ಷಕರ ಮುಂದೆ "ಚಾರ್ಲಿ" ಯ (ಜಾಕಿ ಶ್ರಾಫ್) ಕಥೆ ಬಿಚ್ಚಿಕೊಳ್ಳುತ್ತದೆ..)   ಮುಂದೆ "ಚಾರ್ಲಿ" ದ್ವೇಷ, ಮೀರಾಳ ತಂದೆ ಮತ್ತು ಚಾರ್ಲಿಯ ನಡುವೆ ಇರುವ ಸೇಡು, ಮೀರಾಳ ತಂಗಿ ದಿವ್ಯಾ (ನಿಧಿ ಸುಬ್ಬಯ್ಯ) ಗೂ ಚಾರ್ಲಿಗೂ ಇರುವ ಸಂಬಂಧಗಳ ನಡುವೆ ಕಥೆ ಗಿರಕಿ ಹೊಡೆಯುತ್ತದೆ. ಚಿತ್ರದ ಕಥೆ ಒಂದೇ ಏಳೆಯದದಾದರೂ ಬರೀ "ಹಾಡು" ಮತ್ತು "ಫೈಟ್" ಗಳಿಂದ ತುಂಬಿ ಹೋಗಿದೆ. "ಜಾಕಿ" ಚಿತ್ರವನ್ನು ಈ ಚಿತ್ರ ಮೀರುವುದೆಂಬ ನಿರೀಕ್ಷೆ ಹೊತ್ತ ಪ್ರೇಕ್ಷಕ ಪ್ರಭುವಿಗೆ ನಿರಾಸೆಯಾಗುವುದೇ ಇಲ್ಲಿ. ಅದೇ ಏಕತನದ ಸಾಹಿತ್ಯ (ಯೋಗ್ ರಾಜ್ ಭಟ್) ಮತ್ತು ಸಂಗೀತ (ವಿ. ಹರಿಕ್ರಿಷ್ಣ) ಸೂರಿಯವರನ್ನು ಇನ್ನೂ ತಮ್ಮ ಹಿಂದಿನ ಚಿತ್ರಗಳ ಗುಂಗಿನಿಂದ ಹೊರಗೆ ತಂದಿಲ್ಲವೆಂದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸುತ್ತದೆ.(ಬಹುಶ: ಅದಕ್ಕೆ ಏನೋ ವಾರದ ಕೊನೆಯ ದಿನ (ಶನಿವಾರ) ವಾದರೂ ಅರ್ಧ ಚಿತ್ರಮಂದಿರ ಸರಿಯಾಗಿ ತುಂಬಿರಲಿಲ್ಲ..!!)   ಕೊನೆಯ ಮಾತು: ಸೂರಿಯವರು ಚಿತ್ರದ ಕತೆಯನ್ನು ಮರೆತು ಕೇವಲ "ಬಾಂಡ್ ವೈಭವದ" ಹಿಂದೆ ಹೊರಟ ಫಲ ಚಿತ್ರದುದ್ದಕ್ಕೂ ಕಾಣುತ್ತದೆ. ಇಬ್ಬರು "ಸುಂದರ ಹೀರೋಯಿನ್" ಗಳಿದ್ದರೂ ಕೇವಲ "ನೆಪ" ಮಾತ್ರದ ಪಾತ್ರವಾಗಿಬಿಟ್ಟಿದ್ದಾರೆ. ಮಿಕ್ಕ ಪಾತ್ರಗಳು ಕೇವಲ "ಬಂದು ಹೋಗುವ" ಮಟ್ಟಕ್ಕಿವೆ. ಚಿತ್ರವೆಲ್ಲಾ "ಪುನೀತ್-ರಘು" ಮಯವೆಂದರೂ ಅಡ್ಡಿಯಿಲ್ಲ. ಜಾಕಿ ಶ್ರಾಫ್ ರ "ಕನ್ನಡ" ತಾಳ್ಮೆಗೆಡಿಸುತ್ತದೆ (ಅವರ ದನಿಗೆ "ದಬ್ಬಿಂಗ್" ಬೇಕಿತ್ತು..). ಅಂತೂ ಒಂದಂತೂ ನಿಜ, ಸತ್ವವಿಲ್ಲದ ಕಥೆ.., ನಿರೀಕ್ಷೆಯ "ಭಾರ"... ಎಲ್ಲಾ ಸೇರಿ ಬಾಂಡ್ ಅನ್ನು "ಅನ್ನ" ವಿಲ್ಲದೆ ಸೊರಗಿಸಿದೆ..!!Anna bond, puneeth

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

venkatb83 ಗುರು, 05/17/2012 - 00:22

ಕೊನೆಯ ಮಾತು: ಸೂರಿಯವರು ಚಿತ್ರದ ಕತೆಯನ್ನು ಮರೆತು ಕೇವಲ "ಬಾಂಡ್ ವೈಭವದ" ಹಿಂದೆ ಹೊರಟ ಫಲ ಚಿತ್ರದುದ್ದಕ್ಕೂ ಕಾಣುತ್ತದೆ. ಇಬ್ಬರು "ಸುಂದರ ಹೀರೋಯಿನ್" ಗಳಿದ್ದರೂ ಕೇವಲ "ನೆಪ" ಮಾತ್ರದ ಪಾತ್ರವಾಗಿಬಿಟ್ಟಿದ್ದಾರೆ. ಮಿಕ್ಕ ಪಾತ್ರಗಳು ಕೇವಲ "ಬಂದು ಹೋಗುವ" ಮಟ್ಟಕ್ಕಿವೆ. ಚಿತ್ರವೆಲ್ಲಾ "ಪುನೀತ್-ರಘು" ಮಯವೆಂದರೂ ಅಡ್ಡಿಯಿಲ್ಲ. ಜಾಕಿ ಶ್ರಾಫ್ ರ "ಕನ್ನಡ" ತಾಳ್ಮೆಗೆಡಿಸುತ್ತದೆ (ಅವರ ದನಿಗೆ "ದಬ್ಬಿಂಗ್" ಬೇಕಿತ್ತು..). ಅಂತೂ ಒಂದಂತೂ ನಿಜ, ಸತ್ವವಿಲ್ಲದ ಕಥೆ.., ನಿರೀಕ್ಷೆಯ "ಭಾರ"... ಎಲ್ಲಾ ಸೇರಿ ಬಾಂಡ್ ಅನ್ನು "ಅನ್ನ" ವಿಲ್ಲದೆ ಸೊರಗಿಸಿದೆ..!------------------------------------------------------------------------------------------------------ +೧   ವಿನಯ್      ಅವ್ರೆ  ನಿಮ್ಮಿಂದ    ಇದೇ ಮೊದಲ  ಚಿತ್ರ ವಿಮರ್ಶೆ ..!! (ನಾ  ಗಮನಿಸಿದ  ಹಾಗೆ).. ಹೋದ  ವಾರ  ಅಸ್ಟೇ  ನಾ ಸಂತೋಷ್  ಚಿತ್ರಮಂದಿರದಲ್ಲಿ   ಈ ಚಿತ್ರ ನೋಡಿದೆ.. ನಾ ಹೋದಾಗ ಇಡೀ ಚಿತ್ರ ಮಂದಿರ- ಬುಧವಾರ -ಹೌಸ್ ಫುಲ್...  ಅದಕ್ಕೆ ಮೊದಲು ದಟ್ಸ್ ಕನ್ನಡ http://kannada.oneindia.in/movies/review/2012/05/01-power-star-puneeth-anna-bond-movie-review-aid0172.html ಮತ್ತು ಹಲವು ಪತ್ರಿಕೆಗಳಲ್ಲಿ ಬಂದ ವಿಮರ್ಶೆ(ಚೆನ್ನಾಗಿಲ್ಲ ಅಂತಲೇ ಇದ್ದವು) ನೋಡಿ- ಓದಿಯೂ ನಾ ಚಿತ್ರ ನೋಡಲು ಹೋದೆ... 
ನಿಮ್ಮ(ಎಲ್ಲರ್ರ) ಹಾಗೆ ಈ ಚಿತ್ರವನ್ನು ನಾ ಸಹಾ ಸಾಕಷ್ಟು ನಿರೀಕ್ಷೆ  ಇಟ್ಟುಕೊಂಡು ನೋಡಲು ಹೋಗಿದ್ದೆ , ಅದಕ್ಕೆ ಕಾರಣ- ಸೂರಿ ಅಪ್ಪು ಎರಡನೇ ಸಮಾಗಮ(ಜಾಕಿ ನಂತರ) ಜಾಕಿಯ  ಯಶಸ್ಸು , ಅಣ್ಣಾ ಬಾಂಡ್ ಶೀರ್ಷಿಕೆ ಎಲ್ಲವೂ ನಿರೀಕ್ಷೆ ಹುಟ್ಟಿಸಿದವೇ( ಆ ಅಸ್ಥಿಪಂಜರದ ಬೈಕ್ ಸಹಾ..!!) ನಾ ಎಂಟ್ರಿ ಕೊಟ್ಟದ್ದು  ಸ್ಟುಡಿಯೋ ಒಂದರಲ್ಲಿ  (ದುನಿಯಾ   ಟೀ ವೀ..!!) ಅಣ್ಣ ಬಾಂಡ್ ಬಗ್ಗೆ ಚರ್ಚೆ ನಡೆವಾಗ..:(( ಮತ್ತು ಇದೆ ನನ್ ಮೊತ್ತ  ಮೊದಲ ಸಿನೆಮ- ಚಿತ್ರ ಶುರು ಆದ ಮೇಲೆ ಹೋಗಿ ನೋಡಿದ್ದು.)  .:(( ಆದರೂ ಸಮಾಧಾನ ಮಾಡಿಕೊಂಡು  ಕುಳಿತು ನೋಡಿದೆ, ನನ್ನ ನಿರೀಕ್ಷೆ ಸುಳ್ಳಾಗಲು ಇಂಟರ್ವಲ್ ವರೆಗೂ ಕಾಯಬೇಕಾಯ್ತು ..:((

ನನ್ನ ಅನಿಸಿಕೆ ಪ್ರಕಾರ- ಚಿತ್ರೀಕರಣ (ಹಾಡು) ಸೂಪರ್, ಕಥೆ-ಚಿತ್ರ ಕಥೆ ಮತ್ತೊಮ್ಮೆ ಜಂಗ್ಲಿ- ಜಾಕಿ ಯನ್ನೇ ನೆನಪಿಸುವುದು..:(((
ಹಾಡುಗಳಲ್ಲಿ ಶೀರ್ಷಿಕೆ ಗೀತೆ ಮತ್ತು ಏನೆಂದು ಹೆಸರಿಡಲಿ ಬಿಟ್ಟರೆ ಬಾಕಿ ಎಲ್ಲ ವ್ಯರ್ಥ ಹಾಡು-ಸಾಹಿತ್ಯ..:((
ಹೊಡೆದಾಟ ಸೂಪರ್... ಅಪ್ಪು ಅಭಿನಯ- ತಲ್ಲೀನತೆ ಮೆಚ್ಚಿದೆ ...
ಅಲ್ಲಲ್ಲಿ ಖರ್ಚು  ಮಾಡಿದ್ದು  ಕಣ್ಣಿಗೆ  ಕಾಣಿಸಿದರೂ  'ಪರಮಾತ್ಮದಷ್ಟು '  ಖರ್ಚು ಕಾಣಿಸೋಲ್ಲ..:((

ಸೂರಿ ಇನ್ನು 'ಓಬಿರಾಯನ' ಕಾಲದಲ್ಲೇ ಇರುವರು ಅಂತ ಗೊತ್ತಾಯ್ತು..:((
ಅಲ್ಲದೆ ಅವರು ಇನ್ನು ಜಂಗ್ಲಿ- ಜಾಕಿ ಚಿತ್ರಗಳ ಗುಂಗಿಂದ ಆಚೆ ಬಂದಿಲ್ಲ..!!
ಅವರು ಸ್ವಲ್ಪ ದಿನ 'ವಾನ ಪ್ರಸ್ಥಾಶ್ರಮ' ಸೇರೋದು ವಾಸಿ..:(((
ಕೆಲವೊಮ್ಮೆ ಅತಿಯಾಗಿ ಭರವಸೆ ಹುಟ್ಟಿಸುವವರು  ಕೊನೆಗೆ ಹೀಗೆಯೇ ಮಾಡುವರು...!! ಅನ್ನಿಸುತ್ತಿದೆ.. 
ನಂಗೆ ಇಡೀ ಚಿತ್ರದಲ್ಲಿ  ಬೇಡವಾದುದು ಅನ್ನಿಸಿದ್ದು. ಕಥೆ- ಚಿತ್ರ ಕಥೆ- ಮತ್ತು ಆ ಜಾಕಿ ಶ್ರಾಫ್(ಜಾಕಿ ಅಂತ ಹೆಸರಿದೆ ಅಂತ ಕರೆದು ತಂದರೆ??)) .. ಇಂಥಾ ಚಿತ್ರಕ್ಕ್ಕೆ  ಬೇರೊಬ್ಬ ಖಳನೆ ಸೂಕ್ತ.. ಹೋಗಿ ಹೋಗಿ ಬಾ....ವುಡ್ ನಲ್ಲಿ ಕೆಲಸ ಇಲ್ಲದೆ, ತನ್ನ ಮಗನನ್ನ ಮುಂದೆ ತರಲು ಶ್ರಮಿಸುತ್ತಿರುವ ಆ ಜಾಕಿ ಶ್ರಾಫ್ ಬೇಕಿರಲಿಲ್ಲ...!!  ಅಲ್ಲದೆ ಅವರ ಬಾಯಿಂದಲೇ ಕನ್ನಡ ಮಾತಾಡಿಸುವ ಪ್ರಯತ್ನ ಓಕೆ, ಆದರೆ ಚಿತ್ರ ಮಂದಿರದಲ್ಲಿ ಆ ಮಾತುಗಳನ್ನ ಕೇಳಿದರೆ  ತಮಿಳ್- ತೆಲುಗು ಡಬ್ಬಿಂಗ್ ಸಿನೆಮ ನೋಡಿದ ಅನುಭವವೇ ಆಗುವುದು. ಇದು ಚಿತ್ರ ನೋಡಿದ ಎಲ್ಲರ ಅನುಭವ ..!!
ನಾ ಈ ಚಿತ್ರದ ಬಗ್ಗೆ ವಿಮರ್ಶೆ ಬರೆಯೋಣ ಅಂದುಕೊಂಡಿದ್ದೆ...
ಆದರೆ ನೋಡಿ ಆದಮೇಲೆ ೧-೧ ಸಾರಿ ಚಿಂತಿಸಿ, ಬರೆಯೋಕೆ ಏನೂ ಕಾಣಿಸದೆ ಸುಮ್ಮನಾದೆ... 

ಇನ್ನು ಮೇಲೆ ಅಪ್ಪು ಒಳ್ಳೆಯ ಕಥೆಗಳನ್ನೇ ಆರಿಸಿ ಅಭಿನಯಿಸಬೇಕು...ಅದೇ ರೀತಿಯ ಹಾಡು- ನೃತ್ಯ- ಹೊಡೆದಾಟ- ಸಂಭಾಷಣೆ  ಇನ್ನೂ ಬೇಕೇ?  ಅತಿ ಆದರೆ ಅಮೃತವೂ ವಿಷ ಅಂತ ಗೊತ್ತಾಗಿಲ್ಲವೆ? 
ಸ್ವಲ್ಪ ದಿನ ಈ ಭಟ್ಟರು ಮತ್ತು ಸೂರಿ ಯಿಂದ   ದೂರ  ಇದ್ದರೆ  ಒಳ್ಳೆಯದು ....:(((( 
ರಂಗಾಯಣ ರಘು ಅವರನ್ನ ಅದೇ ತರಹದ ಪಾತ್ರಗಳು- ದ್ವಂದ್ವ ಸಂಭಾಷಣೆಯಲ್ಲಿ  ನೋಡಿ-ಕೇಳಿ  ಅವರನ್ನು ಸೂರಿಯನ್ನು- ಭಟ್ಟರನ್ನು  ಜೊತೆ ಮಾಡಿ 'ವಾನ ಪ್ರಸ್ಥಾಶ್ರಮಕ್ಕೆ' ಕಳಿಸುವುದು ಸೂಕ್ತ ಅನ್ನಿಸಿದೆ.. :())))
ನಮ್ಮ ಅಮೂಲ್ಯ ಸಮಯವನ್ನು - ಹಣವನ್ನು ವ್ಯಯಿಸಿ  ಚಿತ್ರ ನೋಡಲು ಹೋದ ನಮಗೆ ಆ ಚಿತ್ರದ ಬಗ್ಗೆ  ಒಳ್ಳೆಯದು ಕೆಟ್ಟದ್ದು ಹೇಳಲು ಸಕಾರಣವಿದೆ... 
ನಿಮ್ಮ ವಿಮರ್ಶೆ ಸೂಕ್ತವಾಗಿದೆ.. 

ಶುಭವಾಗಲಿ... 

 

ವಿನಯ್_ಜಿ ಗುರು, 05/17/2012 - 12:39

ನಿಮ್ಮ ನೇರ ನುಡಿಗಳಿಗೆ ಮತ್ತು ಮುಕ್ತ ಹೃದಯದ ಪ್ರತಿಕ್ರಿಯೆಗೆ ಬಹಳ ಧನ್ಯವಾದಗಳು ವೆಂಕಟ್ ರವರೆ... :) ,
"ನಿಮ್ಮಿಂದ  ಇದೇ ಮೊದಲ  ಚಿತ್ರ ವಿಮರ್ಶೆ.." ಇಲ್ಲ, ಕನ್ನಡ ಚಿತ್ರದ ಮಟ್ಟಿಗೆ ಇದು ಎರಡೆಯನದು.. :) (ಮೊದಲ ಬರಹ ಇಲ್ಲಿದೆಃ http://www.vismayanagari.com/vismaya11/node/8759)
ನೀವು ಚಿತ್ರದ ಪ್ರಾರಂಭವಾಗಿ ಐದು ನಿಮಿಷ ಮಾತ್ರ ತಡವಾಗಿ ಬಂದಿರಷ್ಟೆ, ನೀವು ಹೇಳಿದಂತೆ ಅಪ್ಪು ಅಭಿನಯದ ಬಗ್ಗೆ ನಿಜಕ್ಕೂ ಎರಡು ಮಾತಿಲ್ಲ. ಅದರೆ ಉಳಿದಂತೆ ನೀವು ಮೇಲೆ ಬರೆದ ಅಭಿಪ್ರಾಯಗಳ ಬಗ್ಗೆ ನನ್ನ ಸಹಮತವಿದೆ. ಹೌದು ಈ ಚಿತ್ರ ನೋಡಿದ ನನ್ನ ಮಿತ್ರರು ಇದರ ಬಗ್ಗೆ ಹೇಳಿದ್ದುಃ Just waste of money. ಕೋಟಿಗಟ್ಟಲೆ ಹಣ ಕರ್ಚು ಮಾಡಿ ಅದೇ ಮಾಮೂಲು ರೀತಿಯ ಹಾಡು- ನೃತ್ಯ- ಹೊಡೆದಾಟ- ಸಂಭಾಷಣೆ ಬರೆದರೆ (ತಮ್ಮ ಹಿಂದಿನ ಚಿತ್ರ ಹಿಟ್ ಆಯಿತು ಎಂಬ ಒಂದೇ ಕಾರಣಕ್ಕೆ..) ಈಗ ಇರುವ ಪ್ರೇಕ್ಷಕರೂ "ಕಣ್ಮರೆ" ಯಾಗುವ ಕಾಲ ದೂರವಿಲ್ಲ. ಅಮೇಲೆ ಕನ್ನಡ ಚಿತ್ರವನ್ನ ಆ ಚಿತ್ರದ ನಿರ್ಮಾಪಕರು ಮತ್ತು ಅದಕ್ಕೆ ಸಂಬಂಧಪಟ್ಟವರೇ ಮಾತ್ರ ನೋಡಿಕೊಳ್ಳಬೇಕಾಗುತ್ತದೆ...! ಹಾಗಾಗದಂತೆ ತಡೆಯಲು ನಿರ್ದೇಶಕರು ತಮ್ಮ ಹಳೆಯ "ಫಾರ್ಮೂಲಾ" ಗಳನ್ನ ಬದಿಗೊತ್ತಿ ಉತ್ತಮ ಗುಣಮಟ್ಟದ ಕಥೆಗಳನ್ನ ಚಿತ್ರವಾಗಿಸಬೇಕು...
-- ವಿನಯ್
 

ಕವನ ಪೈ( ಉಡುಪಿ) (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/18/2012 - 09:43

ನಿಮ್ಮ ಲೇಖನ ಓದದೇ ತುಂಬಾ ದಿನಗಳಾಗಿತ್ತು. ಬಹುದಿನದ "ಕಾಯುವಿಕೆ" ಕೊನೆಗಾಣಿಸಿದ್ದಕ್ಕೆ ಅಭಿನಂದನೆಗಳು. ನಾನು ನಿಮ್ಮ ಚಿತ್ರವಿಮರ್ಶೆ ನೋಡಿ ಚಿತ್ರ ನೋಡುವ ಸಂಪ್ರದಾಯ ಶುರು ಮಾಡಿಕೊಂಡಿದ್ದೆ. ಯಾಕೆಂದರೆ ನೀವು ಚೆನ್ನಾಗಿ ಹಾಗೂ ಸರಿಯಾಗಿ ಬರೆಯುತ್ತೀರಿ. ನಿಮ್ಮ ವಿಮರ್ಶೆ ನೋಡಿ ಹೋಗಿ ಚಿತ್ರ ನೋಡಿದರೆ ಕೊಟ್ಟ ಕಾಸಿಗೆ ಮೋಸವಿಲ್ಲ.ಆದರೆ ನಿಮ್ಮ ಚಿತ್ರ ವಿಮಶ್ರೆಗೆ ಕಾಯದೆ ಅಣ್ಣಾಬಾಂಡ್ ನೋಡಹೋಗಿ ಮೋಸ ಹೋದೆ. ನನ್ನ ಮನದಾಳದ ಮಾತುಗಳನ್ನೇ ನೀವೂ ಹೇಳಿದ್ದೀರಿ. ನಿಮಗೆ ಹುಡುಗಿಯರ ಮನದ ಮಾತುಗಳು ಅದು ಹೇಗೆ ಅಶ್ಟು ಸಲೀಸಾಗಿ ತಿಳಿದು ಬಿಡುತ್ತದೆ?
 

ವಿನಯ್_ಜಿ ಶುಕ್ರ, 05/18/2012 - 11:48

... :) :) ಪ್ರತಿಕ್ರಿಯಿಸಿದಕ್ಕೆ ಬಹಳ ಧನ್ಯವಾದಗಳು... - ವಿನಯ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.