Skip to main content

ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!

ಇಂದ Lavanya Naga
ಬರೆದಿದ್ದುAugust 20, 2011
1ಅನಿಸಿಕೆ

ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!

 ಒಂದೆಡೆ ಅಣ್ಣಾರನ್ನ ಬೆಂಬಲಿಸಿ ಜನ ಬೀದಿಗಿಳಿದರೆ, ಇನ್ನೊಂದೆಡೆ ಅಣ್ಣಾ ಹೋರಾಟವನ್ನ ಪ್ರಶ್ನಿಸಿ ಹಲವಾರು ಪ್ರಶ್ನೆಗಳೆದ್ದಿವೆ.

’ಜನಲೋಕಪಾಲ್’ ಬಂದ ತಕ್ಷಣ ಎಲ್ಲ ಭ್ರಷ್ಟರು ಮಾಯವಾಗ್ತಾರೆ ಅಂತ ಖುದ್ದು ಅಣ್ಣಾ ಮತ್ತು ಸಿವಿಲ್ ಸೊಸೈಟಿಯವರ್ಯಾರು ಸಹ ಎಲ್ಲೂ ಹೇಳಿಲ್ಲ.ಹಾಗಾಗ್ಯೂ ಇಂತ ವಾದ ಹುಟ್ಟು ಹಾಕಿದ್ದು ಯಾರು? ಬಹುಷಃ ಕಪಿಲ್ ಸಿಬಲ್ ಇರಬೇಕು ಅದನ್ನೆ ಹಿಡಿದು ಕೆಲವರು ’ಜನಲೋಕಪಾಲ್’ ಬಂದ್ರೆ ಭ್ರಷ್ಟಚಾರ ಮಾಯವಾಗುತ್ತಾ!? ಅಂತ ಕೇಳ್ತಾ ಇದ್ದಾರೆ ಕೆಲವರು. ಅಂತವರಿಗೊಂದು ಪ್ರಶ್ನೆ ಪೋಲಿಸ್ ಇಲಾಖೆ ಅನ್ನುವುದು ಬಂದು ಎಷ್ಟು ವರ್ಷಗಳಾಯ್ತು? ಕಳ್ಳತನ-ಕೊಲೆ-ದರೋಡೆ ನಿಂತಿದೆಯಾ ಸ್ವಾಮಿ!? ಇಲ್ಲ ತಾನೆ..! ಆದರೆ ಜನ್ರಿಗೊಂದು ಹೆದರಿಕೆಯಂತೂ ಇರುತ್ತದೆ ತಪ್ಪು ಮಾಡೋಕೆ ಹಾಗೆ ತಪ್ಪು ಮಾಡಿದವರನ್ನ ಹಿಡಿದು ಜೈಲಿಗೆ ಅವರು ನೂಕುತಿದ್ದಾರಲ್ವಾ? ಹಾಗೆಯೇ ಜನಲೋಕಪಾಲ ಅನ್ನುವುದು ಸಹ.ಅದು ಬಂದ ತಕ್ಷಣ ಎಲ್ಲ ಸರಿ ಹೋಗದು.ಅದು ಸುಧಾರಣೆಯ ಒಂದು ಅಸ್ತ್ರವಷ್ಟೆ.
 ಮತ್ತೆ ಕೆಲವರು ಭ್ರಷ್ಟಾಚಾರದ ಹಾಗೆಯೇ ದೇಶವನ್ನು ಕಿತ್ತು ತಿನ್ನುತ್ತಿರುವ ಜಾತೀಯತೆ, ಧರ್ಮಾಂಧತೆ, ಅಸ್ಪೃಶ್ಯತೆ, ರೈತರ ಆತ್ಮಹತ್ಯೆ ಇತ್ಯಾದಿಗಳ ಬಗ್ಗೆ ಇವರ ನಿಲುವುಗಳು ಏನು? ಈ ಚಳವಳಿಗೆ ನಿಜಕ್ಕೂ ಒಂದು ಸೈದ್ಧಾಂತಿಕ ಹಿನ್ನೆಲೆ ಇದೆಯೇ? ದೂರದರ್ಶಿತ್ವ ಇದೆಯೇ? ಅಂತೆಲ್ಲ ಕೇಳುತಿದ್ದಾರೆ.ಅಲ್ಲ ಗುರುಗಳೇ ಎಲ್ಲವನ್ನು ಅಣ್ಣಾ ಅವರೇ ಮಾಡಬೇಕಾ? ನೀವ್ಯಾಕೆ ಇದರ ಬಗ್ಗೆ ಬೀದಿಗಿಳಿಯಬಾರದು.ಅಷ್ಟಕ್ಕೂ ಅಣ್ಣಾ ಹೋರಾಟಕ್ಕಿಳಿಯುವ ಮೊದಲು ಭ್ರಷ್ಟಚಾರ ನಲಿದಾಡುವಾಗ ಎಲ್ಲೋಗಿತ್ತು ನಿಮ್ಮ ಈ ಲಾಜಿಕಲ್ (?) ಪ್ರಶ್ನೆಗಳು? ನೀವುಗಳೇನು ಮಾಡುತಿದ್ದೀರಿ? ಈ ಹೋರಾಟವನ್ನೇಕೆ ಜೆಪಿ ಚಳುವಳಿಗೆ ಸಮೀಕರಿಸುತಿದ್ದೀರಿ?
ಮುಂದುವರಿದು, ಪಾಪ ಹೀಗೆ ಆತಂಕ ವ್ಯಕ್ತ ಪಡಿಸುತ್ತಾರೆ : ಅಷ್ಟಕ್ಕೂ ಅಣ್ಣಾ ಹಜಾರೆ ಚಳವಳಿ ಒಂದು ರಾಜಕೀಯ ಹೋರಾಟವೇ ಅಲ್ಲವೇ? ಅದನ್ನು ಇಡಿಇಡಿಯಾಗಿ ಹ್ಯಾಂಡಲ್ ಮಾಡುತ್ತಿರುವುದು ಸಂಘ ಪರಿವಾರವೇ ಅಲ್ಲವೇ?
ಬೆಂಗಳೂರಿನ ಹೋರಾಟದಲ್ಲಿ ನಾನು ಒಬ್ಬ ಕಾರ್ಯಕರ್ತನಾಗೇ ಕೆಲಸ ಮಾಡುತಿದ್ದೇನೆ.ಅಲ್ಲಿ ಬೇರೆ-ಬೇರೆ ಧರ್ಮದ ಜನರು ಇದ್ದಾರೆ ಅನ್ನುವುದು ಅವರ ಜೊತೆ ಹತ್ತಿರದಿಂದ ಕೆಲಸ ಮಾಡಿರುವುದರಿಂದ ಗೊತ್ತಿದೆ.ಈ ಬೇರೆ ಧರ್ಮದವರು ಸಂಘ ಪರಿವಾರ ಪ್ರಾಯೋಜಿತವಾದರೆ ಬರುತಿದ್ದರಾ!? ಹೀಗೆಲ್ಲ ಆತಂಕ ಪಡುವ ನೀವೂ ಕಾಂಗ್ರೆಸ್ಸ್ ಬೆಂಬಲಿಗರ ಅಂತ ಕೇಳಿದರೆ ನಿಮಗೆ ನೋವಾಗೊಲ್ವಾ? ಖುದ್ದು ಕಾಂಗ್ರೆಸ್ಸ್ ವಿದೇಶಿ ಶಕ್ತಿಗಳ (ಇಟಾಲಿಯನ್ ಶಕ್ತಿ!? ) ಬಗ್ಗೆ ಆತಂಕ ಪಡುತ್ತಿರುವಾಗ ನೀವ್ಯಾಕೆ ದೇಶಿ ಶಕ್ತಿಗಳ ಬಗ್ಗೆ ತಲೆಕೆಡಿಸಿಕೊಂಡಿದ್ದೀರಾ?
ಇದು ಭಯಾನಕ ಪ್ರಶ್ನೆ : ಗಣಿ ಹಗರಣದಲ್ಲಿ ಸಾವಿರಾರು ಕೋಟಿ ರೂ. ಲೂಟಿಯಾದಾಗ, ಮುಖ್ಯಮಂತ್ರಿಯೇ ಹತ್ತಾರು ಭೂ ಹಗರಣಗಳಲ್ಲಿ ಸಿಕ್ಕಿಬಿದ್ದಾಗ, ದಲಿತರು-ದುರ್ಬಲರ ಮೇಲೆ ದೌರ್ಜನ್ಯಗಳು ನಡೆದಾಗ, ರೈತರ ಮೇಲೆ ಗೋಲಿಬಾರ್-ಲಾಠಿಚಾರ್ಜ್‌ಗಳು ನಡೆದಾಗ ಇದೇ ಫ್ರೀಡಂ ಪಾರ್ಕಿನಲ್ಲಿ ಯಾರೂ ಕಾಣಿಸಿಕೊಳ್ಳಲಿಲ್ಲವಲ್ಲ, ಯಾಕೆ? ಈಗ ಇದ್ದಕ್ಕಿದ್ದಂತೆ ಎದ್ದುನಿಂತಿರುವ ಸಮೂಹಸನ್ನಿಯಿಂದ ಚೀರಾಡುತ್ತಿರುವ ಗುಂಪಾದರೂ ಯಾವುದು? ಅದರ ಉದ್ದೇಶವಾದರೂ ಏನು? ಈ ಪ್ರಮಾಣದ ದೇಶಭಕ್ತಿ, ಸಾಮಾಜಿಕ ಕಳಕಳಿ ಹೀಗೆ ಒಮ್ಮಿಂದೊಮ್ಮೆಗೆ ಸೃಷ್ಟಿಯಾಗಿದ್ದಾದರೂ ಹೇಗೆ?
ನಾವು ಯಾವ ಗುಂಪು ಅಲ್ಲ ಸ್ವಾಮಿ.ಒಬ್ಬ ತಾತ-ಹಾಲು ಗಲ್ಲದ ಮೊಮ್ಮಗನ ಜೊತೆಯೂ ಅಲ್ಲಿಗೆ ಬರುತ್ತಾನೆ.ಆ ಮೊಮ್ಮಗನನ್ನು ಒಂದು ಗುಂಪಿಗೆ ಸೇರಿಸಿ ಬಿಡಿ ಸರಿ ಹೋಗುತ್ತೆ. ರೈತರ ಮೇಲೆ ಲಾಠಿ ಚಾರ್ಜ್,ಗೋಲಿಬಾರ್ ಆದಾಗ ಖುದ್ದು ರೈತರೆ ಒಂದೇ ಸೂರಿನಡಿ ನಿಲ್ಲುವುದಿಲ್ಲ.ಇನ್ನ ಸಾಮಾನ್ಯ ಜನರು ಬರುತ್ತಾರೆಯೇ? (ಅಂದ ಹಾಗೆ ಮೊನ್ನೆ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರ ಶೇಖರ್ ಬಂದು ಬೆಂಬಲಿಸಿದರು ನಮಗೆ ಅನ್ನುವುದನ್ನ ನೆನಪಿಸಲಿಚ್ಚಿಸುತ್ತೇನೆ). ಹಾಗೇಯೆ ಈ ದಲಿತರು-ದುರ್ಬಲರ ಕತೆ ಸಹ.ಅದಿನ್ನೆಷ್ಟು ಗೊತ್ತು ಗುರಿಯಿಲ್ಲದ ಸಂಘಟನೆಗಳನ್ನ ಮಾಡಿಕೊಂಡು ಜನರಿಂದ ದೂರಾಗಿರುವವರು ಯಾರು ಅನ್ನುವುದನ್ನ ಕೇಳಿಕೊಳ್ಳಿ. ಫ್ರೀಡಂ ಪಾರ್ಕಿನಲ್ಲಿ ಬಂದು ಕುಳಿತವರಲ್ಲಿ ಎಲ್ಲ ಜಾತಿಯ -ಧರ್ಮದ ಜನರಿದ್ದಾರೆ ಬೇಕಿದ್ದರೆ ಹೋಗಿ ಕೇಳಿಬನ್ನಿ. ಸುಖಾ ಸುಮ್ಮನೆ ಇದು ಮೇಲ್ವರ್ಗದ ಅಥವ ಮಧ್ಯಮ ವರ್ಗದ ಜನರ ಹಾರಾಟ-ಹೋರಾಟ ಅನ್ನುವುದೆಲ್ಲ ಬಹಳ ಸುಲಭ.ಅಲ್ಲಿ ಕಾಲೇಜು ಹುಡುಗರಿಂದ ಹಿಡಿದು ವಯೋ-ವ್ರುದ್ಧರು ಉಪವಾಸ ಕುಳಿತಿದ್ದಾರೆ.
ಉಪವಾಸ ಸತ್ಯಾಗ್ರಹದಂತ ಹೋರಾಟದ ಅಸ್ತ್ರ ಹಿಡಿದು ನಿಲ್ಲುವವರ ಮನಸ್ಥಿತಿಯ ಕುರಿತಾಗಿ ಮಹಮ್ಮದ್ ಅಲಿ ಜಿನ್ನಾ ಹೇಳಿರುವ ಮಾತುಗಳನ್ನ ಮತ್ತೆ ಮತ್ತೆ  ನೆನಪಿಸಿಕೊಳ್ಳುತಿದ್ದೇನೆ.
“ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” . ಇದು ಪಾಪ ಲಾಜಿಕ್ ಮಾತನಾಡುವ ಮನಸ್ಸುಗಳಿಗೂ ಅರ್ಥವಾಗಲಿ.
ಪ್ರಜಾಪ್ರಭುತ್ವವನ್ನ ಅಲುಗಾಡಿಸಲಾಗುತ್ತಿದೆ.ಸಂಸತ್ತಿನಲ್ಲಿ ಜೋಕ್ಪಾಲ್ ಮಂಡನೆಯಾಗಿದೆ ಅನ್ನುವವರು ಇದ್ದಾರೆ.ಸಂಸತ್ತಿನಲ್ಲಿ ಇದುವರೆಗೂ ನೆಪಕ್ಕೆ ೯ ಸಲ ಈ ಮಸೂದೆ ಬಂದು ಹೋಗಿದೆ,ಜಾರಿಯಾಗಿಲ್ಲ.೬೮ರಿಂದ ಕಾಯುತಿದ್ದೇವೆ.ಇನ್ನ ಎಷ್ಟು ವರ್ಶ ಕಾಯ್ಬೇಕು ಸ್ವಾಮಿ? ಭ್ರಷ್ಟರಿಂದ,ಭ್ರಷ್ಟರಿಗಾಗಿ,ಭ್ರಷ್ಟರಿಗೋಸ್ಕರ ಆಗಿರುವ ಹಲ್ಲಿಲ್ಲದ ಜೋಕ್ ಪಾಲ್ ನಮಗೆ ಬೇಕಿಲ್ಲ.ನಮಗೆ ಬೇಕಿರುವುದು ಜನರಿಂದ,ಜನರಿಗಾಗಿ,ಜನರಿಗೋಸ್ಕರ ಇರುವ ಸಶಕ್ತ ಲೋಕಪಾಲ್.
ಕಡೆಯದಾಗಿ, ಜನಲೋಕಪಾಲ ಮಸೂದೆ ಜಾರಿಯಾಗುವುದು ವ್ಯವಸ್ಥೆಯ ಬದಾಲವಣೆಯ ಒಂದು ಹಂತವಷ್ಟೆ.ಚುನಾವಣ ನೀತಿ ಇರಬಹುದು,ಹಾಗೇಯೆ ಇನ್ನಿತರ ಸಾಮಜಿಕ-ಪ್ರಾದೇಶಿಕ ಸಮಸ್ಯೆಗಳಿರಬಹುದು ಎಲ್ಲರಿಗೂ ಹೋರಾಡುವ ಹಕ್ಕಿದೆ.ಅಷ್ಟಕ್ಕೂ ಜನಲೋಕಪಾಲ್ ಬಂದರೆ ಹೋರಾಟದ ಹಕ್ಕನ್ನ ಕೇಂದ್ರ ಸರ್ಕಾರದಂತೆ ಕಿತ್ತುಕೊಳ್ಳುವುದಿಲ್ಲ.ಅನಗತ್ಯ ಆತಂಕದ ಉಯಿಲೆಬ್ಬಿಸುವುದು ಬೇಡ.
ಅಪರೂಪಕ್ಕೊಮ್ಮೆ ಈ ದೇಶದ ಜನ ಮೈ ಕೊಡವಿ ಎದ್ದು ನಿಂತಿದ್ದಾರೆ….ಕೈ ಜೋಡಿಸಲಾಗದಿದ್ದರೆ ಪರ್ವಾಗಿಲ್ಲ ಕಾಲೆಳೆಯುವ ಕೆಲಸ ಮಾಡುವುದನ್ನಾದರು ನಿಲ್ಲಿಸಿ ಬಿಡಿ…..

ಲೇಖಕರು

Lavanya Naga

ನನಗೆ ಕೊಪ ಜಾಸ್ತಿ... ಸ್ವಲ್ಪ ಮೊಂಡು... ಅಂತ ಫ್ರೆಂಡ್ಸ್ ಜೊತೆ ಅಮ್ಮನೂ ಅಂತರೆ... ಅದು ನನಗೆ ಗೊತ್ತಿಲ್ಲ... ತುಂಬಾ ಮಾತಾಡ್ತೀನಿ ಅಂತ ಅಂತ್ರೆ ಅವರೇ ಬಂದು ನನ್ನ ಹತ್ತರ ಮಾತ್ ಕೇಳ್ಸ್ ಗೊಂಡು ಹೋಗ್ತಾರೆ...

ಅನಿಸಿಕೆಗಳು

Prashanth.Kalai ಶನಿ, 09/03/2011 - 15:05

ನೀಮ್ಮ ಲೆಖನ ತುಂಬಾ ಚೆನ್ನಾಗೀದೆ..............

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.