Skip to main content

ಮಧುಮೇಹವೆಂಬ ಗುಪ್ತಗಾಮಿನಿ.......೫

ಬರೆದಿದ್ದುJuly 5, 2011
3ಅನಿಸಿಕೆಗಳು

ಇದರ ಮೊದಲ ಭಾಗ ಮಧುಮೇಹವೆಂಬ ಗುಪ್ತಗಾಮಿನಿ ಭಾಗ ೧, ಎರಡನೆಯ ಭಾಗ ಮಧುಮೇಹವೆಂಬ ಗುಪ್ತಗಾಮಿನಿ ಭಾಗ 2, ಮೂರನೆಯ ಭಾಗ ಮಧುಮೇಹವೆಂಬ ಗುಪ್ತಗಾಮಿನಿ ಭಾಗ ೩ ಮತ್ತು ಮಧುಮೇಹವೆಂಬ ಗುಪ್ತಗಾಮಿನಿ ಭಾಗ ೪ ಓದಿರಿ.
ಮ್ಮ ದೇಹ ಮತ್ತು ನಮ್ಮ ದೇಹಕ್ಕೆ ಬೇಕಾದ ಆಹಾರದ ಬಗ್ಗೆ ತಿಳಿದುಕೊಂಡೆವು. ನಾವು ಸೇವಿಸುವ ಆಹಾರದಲ್ಲಿ ಮುಖ್ಯವಾಗಿ ಮೂರು ಬಗೆಯ ಸತ್ವಗಳಿರುತ್ತವೆ ಎಂದು ಹೇಳಿದೆ.
೧. ಆಹಾರದಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವ ಕಾರ್ಬೋಹೈಡ್ರೇಟ್ ಎಂಬ ಸತ್ವಕ್ಕೆ ಸೇರಿದ ಸಕ್ಕರೆ, ನಮ್ಮ ಎಲ್ಲಾ ಚಟುವಟಿಕೆಗಳಿಗೆ, (ಚಲನೆ, ಮಾತನಾಡುವುದು, ಆಲೋಚನೆಮಾಡುವುದು, ಹೃದಯದ ಬಡಿತ, ಶ್ವಾಸಕೋಶಗಳ ಕಾರ್ಯಕ್ಕೆ, ಕರುಳುಗಳ ಕಾರ್ಯಕ್ಕೆ ಸೇರಿದಂತೆ) ಬೇಕಾದ ಶಕ್ತಿಯನ್ನು ಪೂರೈಸುತ್ತದೆ. ಮತ್ತು, ನಾವು ಸೇವಿಸಿದ ಕಾರ್ಬೋಹೈಡ್ರೇಟ್ ನ ಪ್ರಮಾಣ ನಮ್ಮ ಅಗತ್ಯಕ್ಕಿಂತಲೂ ಹೆಚ್ಚಾಗಿದ್ದಲ್ಲಿ, ಅದು ಗ್ಲೈಕೊಜೆನ್ ಮತ್ತು ಕೊಬ್ಬಿನ ರೂಪಕ್ಕೆ ಪರಿವರ್ತನೆಗೊಂಡು ದೇಹದಲ್ಲಿ ಶೇಖರವಾಗುತ್ತದೆ.
೨. ನಮ್ಮ ದೇಹವನ್ನು ಒಂದು ಯಂತ್ರಕ್ಕೆ ಹೋಲಿಸಿದರೆ, ಯಂತ್ರವನ್ನು ಬಳಸಿದಂತೆಲ್ಲಾ ಅದರ ಭಾಗಗಳು ಸವೆದು ಹೋಗುವಂತೆ, ನಮ್ಮ ದೇಹದ ಜೀವಕೋಶಗಳು ಮತ್ತು ಅಂಗಾಂಶಗಳೂ ಸ್ವಲ್ಪಮಟ್ಟಿಗೆ ದಿನದಿನವೂ ಸವೆದು ಹೋಗುತ್ತವೆ. ಇವುಗಳ ದುರಸ್ತಿಗೆ ಬೇಕಾದದ್ದು ಪ್ರೋಟೀನ್ ಎಂಬ ಇನ್ನೊಂದು ಸತ್ವ. ಇದಲ್ಲದೆ, ಕಿಣ್ವಗಳ, ಹಾರ್ಮೋನ್ ಗಳ ಮತ್ತು ಇನ್ನೂ ಅನೇಕ ಸಂಯುಕ್ತ ರಸಾಯನಿಕಗಳನ್ನು ತಯಾರಿಸಲು ಈ ಸತ್ವ ಬೇಕಾಗುತ್ತದೆ.
೩. ಫ್ಯಾಟ್ ಅಥವಾ ಲಿಪಿಡ್ (lipid) ಎಂಬ ಮೂರನೇ ಸತ್ವ, ನಮ್ಮ ಶಕ್ತಿ ಪೂರೈಕೆಗಾಗಿ, ( ಬಹಳ ದಿನಗಳಿಂದ ಯಾವುದೇ ಕಾರಣದಿಂದ ಸಾಕಷ್ಟು ಕಾರ್ಬೋಹೈಡ್ರೇಟನ್ನು ಸೇವಿಸದೇ ಇದ್ದಾಗ) ಬಳಕೆಯಾಗುತ್ತದೆ. ಇದಲ್ಲದೆ ಇನ್ನೂ ಕೆಲವು ಅಗತ್ಯಗಳಿಗಾಗಿ ಇದರ ಅವಶ್ಯಕತೆ ದೇಹಕ್ಕಿದೆ.
ಈಗ ಸಕ್ಕರೆಯ ಬಗ್ಗೆ ಇನ್ನಷ್ಟು ವಿವರಗಳನ್ನು ತಿಳಿಯೋಣ.
೦೧. ಯಾವುದೇ ಕಾರಣದಿಂದ ರಕ್ತದಲ್ಲಿ ಸಕ್ಕರೆಯ ಅಂಶ ಕುಸಿದರೆ, ೬೦ ಮಿ.ಗ್ರಾಂ ಗಳಿಗಿಂತಲೂ ಕಡಿಮೆ, ದೇಹದಲ್ಲಿ ತೀವ್ರ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಹೈಪೋಗ್ಲೈಸೀಮಿಯಾ (hypoglycemia) ಎನ್ನುತ್ತಾರೆ. ರಕ್ತದಲ್ಲಿ ಸಕ್ಕರೆಯ ಅಂಶ ೪೦೦ ಮಿ.ಗ್ರಾಂ ಗಳಿಗಿಂತಲೂ ಹಲವಾರು ದಿನಗಳಷ್ಟು ಕಾಲ ಹೆಚ್ಚಾಗಿದ್ದರೂ, ಅಂತಹ ಪ್ರಮಾದವೇನೂ ಆಗದೇ ಇರಬಹುದು. ಆದರೆ, ಹೈಪೋಗ್ಲೈಸೀಮಿಯಾ ಎನ್ನುವ ಪರಿಸ್ಥಿತಿಯನ್ನು ದೇಹ ಕೆಲವು ಗಂಟೆಗಳಷ್ಟು ಕಾಲವೂ ತಡೆದುಕೊಳ್ಳಲಾರದೆ. ಇದು ಒಂದು ಪ್ರಮಾದ ಪರಿಸ್ಥಿತಿ. (emergency situation). ಹಾಗಾಗಿಯೇ, ಮಧುಮೇಹಿಗಳನ್ನು ಉಪಚರಿಸುವ ವೈದ್ಯರು ಇದರ ಬಗ್ಗೆ ಎಚ್ಚರದಿಂದಿರುತ್ತಾರೆ. ೪೦೦ ಮಿ.ಗ್ರಾಂ ಸಕ್ಕರೆಯ ಮಟ್ಟವನ್ನು ಹೊಂದಿರುವ, ಹೊಸದಾಗಿ ಕಂಡುಹಿಡಿಯಲ್ಪಟ್ಟ ಮಧುಮೇಹಿಯೊಬ್ಬ ವೈದ್ಯರ ಬಳಿಗೆ ಸಲಹೆಗಾಗಿ ಬಂದಾಗ, ಅವನ ಸಕ್ಕರೆ ತುಂಬಾ ಹೆಚ್ಚಾಗಿರುವುದನ್ನು ಗಮನಿಸಿ, ತಕ್ಷಣವೇ ಅವನಿಗೆ ಅತಿ ಅಧಿಕ ಪ್ರಮಾಣದ (high dose) ಔಷಧಿಗಳನ್ನು ಕೊಡುವುದಿಲ್ಲ (ಕೆಲವು ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ). ಸ್ಪಲ್ಪ ಕಡಿಮೆ ಪ್ರಮಾಣದ ಔಷಧಿಗಳಿಂದ ಚಿಕಿತ್ಸೆ ಆರಂಭಿಸಿ, ಆ ಮಧುಮೇಹಿಯ ಪ್ರತಿಕ್ರಿಯೆಯನ್ನು ಆಗಾಗ ರಕ್ತ ಪರೀಕ್ಷೆ ಮಾಡುವ ಮೂಲಕ ಗಮನಿಸಿ, ಕ್ರಮೇಣ ಔಷಧಿಗಳ ಪ್ರಮಾಣವನ್ನು ಹೆಚ್ಚಿಸುತ್ತಾರೆ. ರಕ್ತದಲ್ಲಿ ಸಕ್ಕರೆಯ ಅಂಶ ಬಹಳ ಕಡಿಮೆಯಾದಾಗ, ದೇಹದ ಮೇಲೆ ಏನು ಪರಿಣಾಮ ಉಂಟಾಗುತ್ತದೆ ಎಂಬುದನ್ನು ಆಗಲೇ ಹೇಳಿದ್ದೇನೆ.
೦೨. ಈಗ ಬಹಳ ಮುಖ್ಯವಾಗಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿದ್ದರೆ (ಮಧುಮೇಹಿಗಳಿಗಿರುವಂತೆ) ದೇಹದ ಮೇಲೆ ಯಾವ ಪರಿಣಾಮಗಳುಂಟಾಗುತ್ತವೆ ಎಂಬುದನ್ನು ತಿಳಿಯೋಣ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿದ್ದರೆ ಅದಕ್ಕೆ ಹೈಪರ್ ಗ್ಲೈಸೀಮಿಯಾ (hyperglycemia) ಎನ್ನುತ್ತಾರೆ
a.ರಕ್ತದಲ್ಲಿ ಸಕ್ಕರೆ ಹೆಚ್ಚಾದ ಆರಂಭಿಕ ದಿನಗಳಲ್ಲಿ ಗ್ಲುಕೋಸ್ ದೇಹದ ಕೆಲವು ಬಗೆಯ ಪ್ರೋಟೀನ್ ಗಳೊಂದಿಗೆ ಸಂಯೋಗ ಹೊಂದಿ, ಗ್ಲೈಕಾಸಿಲೇಟೆಡ್ ಪ್ರೋಟೀನ್ (glycosylated protein ) ಎಂಬ ಸಂಯುಕ್ತ ವಸ್ತುವನ್ನು (complex) ಉಂಟುಮಾಡುತ್ತದೆ. ಅದೇ ರೀತಿ, ರಕ್ತದಲ್ಲಿರುವ ಹೆಮೋಗ್ಲೋಬಿನ್ ಜೊತೆ ಸಂಯೋಗ ಹೊಂದಿದಾಗ ಗ್ಲೈಕಾಸಿಲೇಟೆಡ್ ಹೆಮೋಗ್ಲೋಬಿನ್ (glycosylated hemoglobin) ಎನ್ನುವ ಸಂಯುಕ್ತ ವಸ್ತುವು ಉಂಟಾಗುತ್ತದೆ. ಮಧುಮೇಹದಲ್ಲಿ ದೇಹಕ್ಕೆ ಉಂಟಾಗುವ ಬಹುಮಟ್ಟಿನ ಹಾನಿಗೆ ಈ ಗ್ಲೈಕಾಸಿಲೇಟೆಡ್ ಪ್ರೋಟೀನ್ ಗಳೇ ಕಾರಣ. ಮೊದಲು ಈ ಗ್ಲೈಕಾಸಿಲೇಟೇಡ್ ಹೆಮೋಗ್ಲೋಬಿನ್ ನನ್ನು ಪತ್ತೆ ಮಾಡುವುದಕ್ಕೆ ಮತ್ತು ರಕ್ತದಲ್ಲಿ ಅದರ ಮಟ್ಟವನ್ನು ಅಳೆಯುವುದಕ್ಕೆ ಯಾವುದೇ ಟೆಸ್ಟ್ ಇರಲಿಲ್ಲ. ಆದರೆ ಈಗ ಅದು ಸಾಧ್ಯವಾಗಿದೆ. ಹೀಗಾಗಿ, ಅದನ್ನು ರಕ್ತದಲ್ಲಿ ಪರೀಕ್ಷೆ ಮಾಡುವ ಮೂಲಕ, ಮಧುಮೇಹವನ್ನು ಆರಂಭಿಕ ದಿನಗಳಲ್ಲಿಯೇ ಪತ್ತೆ ಹಚ್ಚಬಹುದು, ಮತ್ತು ಚಿಕಿತ್ಸೆ ಸಫಲವಾದಂತೆ, ಇದರ ಮಟ್ಟ ರಕ್ತದಲ್ಲಿ ಇಳಿಮುಖವಾಗುವುದರಿಂದ, ಚಿಕಿತ್ಸೆ ಯಶಸ್ವಿಯಾಗಿರುವುದೋ ಇಲ್ಲವೋ, ಮತ್ತು ಯಶಸ್ವಿಯಾಗಿದ್ದರೆ ಎಷ್ಟರ ಮಟ್ಟಿಗೆ ಫಲಕಾರಿಯಾಗಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಈ ಆರಂಭಿಕ ದಿನಗಳಲ್ಲಿ, ರೋಗಿಗೆ ಯಾವುದೇ ಬಗೆಯ ತೊಂದರೆಗಳಿರದೇ ಯಾವುದೇ ರೋಗ ಲಕ್ಷಣಗಳೂ (symptoms) ಕಂಡುಬರದೇ ಇರಬಹುದು. ಕೆಲವು ಬಾರಿ, ಸಕ್ಕರೆಯ ಮಟ್ಟ ೩೦೦ ಕ್ಕಿಂತಲೂ ಅಧಿಕವಾಗಿದ್ದರೂ, ರೋಗಿ ಅದನ್ನು ಗಮನಿಸದೇ ಇರಬಹುದು. ಈ ಸ್ಥಿತಿಗೆ ಎಸಿಮ್ಪ್ಟೋಮ್ಯಾಟಿಕ್ ಸ್ಥಿತಿ (asymptomatic state)
b. ರಕ್ತದಲ್ಲಿ ಸಕ್ಕರೆಯ ಅಂಶ ೧೮೦ ಮಿ.ಗ್ರಾಂ ದಾಟಿದಾಗ, ರಕ್ತದಲ್ಲಿನ ಸಕ್ಕರೆಯ ಸ್ವಲ್ಪ ಅಂಶ ಮೂತ್ರದ ಮೂಲಕ ಹೊರಹೋಗಲಾರಂಭಿಸುತ್ತದೆ. ಆಣೆಕಟ್ಟಿನ ಹಿಂದೆ ಸಂಗ್ರಹವಾದ ನೀರಿನ ಮಟ್ಟ, ಆಣೆಕಟ್ಟೆಯ ದ್ವಾರದ ಮಟ್ಟ ತಲುಪಿದಾಗ, ಹೆಚ್ಚಿನ ನೀರು, ಆಣೆಕಟ್ಟೆಯ ದ್ವಾರದ ಮೂಲಕ ಹೊರಬೀಳುವುದಕ್ಕೆ ಇದನ್ನು ಹೋಲಿಸಬಹುದು. ಹಾಗಾಗಿ ಸಕ್ಕರೆಯ ಈ ಮಟ್ಟವನ್ನು ರೀನಲ್ ಥ್ರೆಶೋಲ್ಡ್ (renal threshold) ಎಂದರೆ, ಈ ಮಟ್ಟಕ್ಕಿಂತಲೂ (೧೮೦ ಮಿ.ಗ್ರಾಂ) ಹೆಚ್ಚಾದರೆ, ಮೂತ್ರಪಿಂಡಗಳು ಸಕ್ಕರೆಯನ್ನು ತಡೆಹಿಡಿಯಲು ಸಾಧ್ಯವಾಗುವುದಿಲ್ಲ.
c. ಈ ರೀತಿ, ಸಕ್ಕರೆ ಮೂತ್ರದಲ್ಲಿ ಹೋಗಲಾರಂಭಿಸಿದಾಗ ಆ ವ್ಯಕ್ತಿ ವಿಸರ್ಜಿಸುವ ಮೂತ್ರದ ಪ್ರಮಾಣವೂ ಹೆಚ್ಚಾಗುತ್ತದೆ. ಮೂತ್ರದಲ್ಲಿ ಹೊರಬೀಳುವ ಸಕ್ಕರೆಯ ಪ್ರತಿ ಅಂಶಕ್ಕೂ ಒಂದು ನಿಗದಿತ ಪ್ರಮಾಣದಲ್ಲಿ ನೀರಿನ ಅಂಶವೂ ಹೊರಬೀಳಲೇಬೇಕಾದುದು ಒಂದು ಭೌತಿಕ ನಿಯಮ. ಹೀಗಾಗಿ, ಮೂತ್ರದಲ್ಲಿ ವಿಸರ್ಜನೆಯಾಗುವ ಸಕ್ಕರೆಯ ಪ್ರಮಾಣ ಹೆಚ್ಚಿದಂತೆಲ್ಲಾ, ಆ ವ್ಯಕ್ತಿ ವಿಸರ್ಜಿಸುವ ಮೂತ್ರದ ಪ್ರಮಾಣವೂ ಹೆಚ್ಚಾಗುತ್ತದೆ. ಒಬ್ಬ ಆರೋಗ್ಯವಂತೆ ವಯಸ್ಕ ವ್ಯಕ್ತಿ ದಿನವೊಂದಕ್ಕೆ, ವಿಸರ್ಜಿಸುವ ಮೂತ್ರದ ಪ್ರಮಾಣ, ೧.೫ ರಿಂದ್ ೨.೫ ಲೀಟರ್ ಇರುತ್ತದೆ. ಮಧುಮೇಹಿಗಳಲ್ಲಿ ಇದು ಹೆಚ್ಚಾಗಿ ೫.೦ ಲೀಟರ್ ಗಳವರೆಗೂ ಹೆಚ್ಚಬಹುದು. ಮೂತ್ರಕೋಶದಲ್ಲಿ (urinary bladder) ಸಂಗ್ರಹಿಸಿಟ್ಟುಕೊಳ್ಳಬಹುದಾದ ಮೂತ್ರದ ಒಂದು ಮಿತಿಯಿರುವುದರಿಂದ, ಮಧುಮೇಹಿಗಳು ಹಲವಾರು ಸಲ ಮೂತ್ರ ವಿಸರ್ಜನೆ ಮಾಡಬೇಕಾಗಿ ಬರುತ್ತದೆ. ಅದಕ್ಕಾಗಿ ಮಧುಮೇಹಕ್ಕೆ ಬಹುಮೂತ್ರದ ಕಾಯಿಲೆ ಎಂದು ಕೂಡ ಕರೆಯುತ್ತಾರೆ.
d. ದೇಹದಿಂದ ನೀರಿನ ಅಂಶ ಈ ರೀತಿ ನಷ್ಟವಾದಾಗ, ದೇಹವು ಅದನ್ನು ಸರಿದುಂಬಿಸಬೇಕಾಗುತ್ತದೆ. ತೀವ್ರವಾದ ಬಾಯಾರಿಕೆಯಾಗಿ, ನೀರಿನ ದಾಹ ಹೆಚ್ಚಾಗುತ್ತದೆ ಮತ್ತು ಪ್ರತಿದಿನದ ನೀರಿನ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ಅಪರೂಪಕ್ಕೆ, ಈ ರೀತಿ ಮೂತ್ರದಲ್ಲಿ ಆಗುವ ನೀರಿನ ನಷ್ಟ ವಿಪರೀತವಾಗಿ, ಡಿಹೈಡ್ರೇಶನ್ (dehydration) ಎಂಬ ಪ್ರಮಾದ ತಲೆದೋರಬಹುದು.
e. ನಮಗೆ ಪ್ರತಿದಿನ ಬೇಕಾಗುವಷ್ಟೇ ನೀರನ್ನು ಸೇವಿಸುವಂತೆ ಮಾಡುವ ಮತ್ತು ಅಗತ್ಯವಿದ್ದಷ್ಟು ಮಾತ್ರ ಆಹಾರವನ್ನು ಸೇವಿಸುವಂತೆ ಮಾಡುವ ವ್ಯವಸ್ಥೆ ನಮ್ಮ ಮಿದುಳಿನ ಒಂದು ಹೈಪೋಥೆಲಾಮಸ್ ಎಂಬ ಭಾಗದಲ್ಲಿ ಇದೆ. ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾದಾಗ ಹಸಿವನ್ನುಂಟು ಮಾಡಿ ನಮ್ಮನ್ನು ಆಹಾರ ಸೇವಿಸುವಂತೆ ಪ್ರಚೋದಿಸುತ್ತದೆ, ಇಲ್ಲವೇ, ಸಕ್ಕರೆಯ ಅಂಶ ಹೆಚ್ಚಾದಾಗ ಒಂದು ಬಗೆಯ ತೃಪ್ತ ಭಾವವನ್ನು ಮೂಡಿಸಿ, ಹಸಿವನ್ನು ಮರೆ ಮಾಡುತ್ತದೆ. ಇದನ್ನು ಗಮನಿಸಿದಾಗ, ಮಧುಮೇಹಿಗಳಿಗೆ ಹಸಿವಾಗಬಾರದು. ಆದರೆ ವಾಸ್ತವದಲ್ಲಿ, ಮಧುಮೇಹಿಗಳಲ್ಲಿ ಹಸಿವು ಬಹಳ (ಕೆಲವೊಮ್ಮೆ ತಡೆದುಕೊಳ್ಳಲಾರದಷ್ಟು) ಇದಕ್ಕೆ ಕಾರಣ, ರಕ್ತದಲ್ಲಿ ಸಕ್ಕರೆ ಹೆಚ್ಚಿದ್ದರೂ, ಜೀವಕೋಶಗಳಿಗೆ ಅದು ಬೇಕಾದ ಪ್ರಮಾಣದಲ್ಲಿ ಸಿಕ್ಕುತ್ತಿಲ್ಲವಾದ್ದರಿಂದ, ದೇಹ ಇದನ್ನು ಉಪವಾಸ ಸ್ಥಿತಿಯಂತೆ ಪರಿಗಣಿಸಿ, ಹಸಿವನ್ನು ಪ್ರಚೋದಿಸುತ್ತದೆ.
f. ಮಧುಮೇಹಿಗಳಲ್ಲಿ ಕಂಡುಬರುವ ಇನ್ನೊಂದು ಸಾಮಾನ್ಯ ಲಕ್ಷಣವೆಂದರೆ, ದೇಹದ ತೂಕ ಕಡಿಮೆಯಾಗುತ್ತಿರುವುದು. ಬಹಳಷ್ಟು ಜನರಲ್ಲಿ ಮಧುಮೇಹ ಪತ್ತೆಯಾಗುವುದು ಈ ರೋಗಲಕ್ಷಣದಿಂದಲೇ. ವಿನಾ ಕಾರಣ ದೇಹದ ತೂಕ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಆತಂಕಗೊಂಡು ವೈದ್ಯರ ಸಲಹೆಯನ್ನು ಪಡೆದಾಗ, ಬಹಳಷ್ಟು ಸಮಯದಲ್ಲಿ ಅದಕ್ಕೆ ಕಾರಣ ಮಧುಮೇಹವೆಂದು ಪತ್ತೆಯಾಗುತ್ತದೆ.

ಲೇಖಕರು

Dr. K. Ramesh Babu

ವಾಸ್ತವ ವಾದಿ

ನಾನು ಸುಮಾರು ನಲವತ್ತು ವರ್ಷಗಳಷ್ಟು ಕಾಲ ವೈದ್ಯಕೀಯರಂಗದಲ್ಲಿ 'ಮೆಡಿಸಿನ್' ಎಂಬ ವಿಷಯದಲ್ಲಿ ಅಧ್ಯಾಪಕನಾಗಿ ಮತ್ತು ತಜ್ಗ್ನ ವೈದ್ಯನಾಗಿ ಕೆಲಸಮಾಡಿ, ಸದ್ಯಕ್ಕೆ ಒಂದು ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕೆಲಸದಲ್ಲಿದ್ದೇನೆ. ಕತೆಯಗಳನ್ನು ಪ್ರಬಂಧಗಳನ್ನು ಬರೆಯುವುದು ನನ್ನ ಹವ್ಯಾಸಗಳಲ್ಲಿ
ಒಂದು. ಇದುವರೆಗೂ ನನ್ನ ವೃತ್ತಿಯಲ್ಲಿನ ಅನುಭವಗಳನ್ನು ಆಧರಿಸಿ ಒಂದು ಪುಸ್ತಕ ಪ್ರಕಟಿಸಿದ್ದೇನೆ ಮತ್ತು ಸುಧಾ, ಸಂಯುಕ್ತ ಕರ್ನಾಟಕ ಮತ್ತು ಹೊಸತು ಪತ್ರಿಕೆಗಳಲ್ಲಿ ಹಲವಾರು ಕತೆಗಳನ್ನು ಮತ್ತು ಪ್ರಬಂಧಗಳನ್ನು ಬರೆದಿದ್ದೇನೆ. ವಿಸ್ಮಯನಗರಿಯಲ್ಲಿ ಲೇಖನಗಳನ್ನು ಬರೆಯುವ ಉದ್ದೇಶವಿದೆ.

ಅನಿಸಿಕೆಗಳು

ಪ್ರಿಯ ಡಾ.ಕೆ.ರಮೇಶ್ ಬಾಬುರವರೆ,  ನಾನು ಆಕಸ್ಮಿಕವಾಗಿ ‘ವಿಸ್ಮಯನಗರಿ’ಗೆ ಬಂದೆ, ವಿಸ್ಮಯದಿಂದ ನಿಮ್ಮ ಮಧುಮೇಹದ ಕುರಿತ ಲೇಖನ ಓದಿದೆ. ಒಂದು ರೂಪಾಯಿ ಫೀಸೂ ಇಲ್ಲದೆ ಸಾಕಷ್ಟು ಮಾಹಿತಿ ಲಭ್ಯವಾಯಿತು. ನಿಮ್ಮೊಂದಿಗೆ ಮಾತನಾಡಬೇಕು ಅನ್ನಿಸಿತು. ನನ್ನ ಸಂಪರ್ಕ psheshadri@gmail.com ನಿಮ್ಮದು?  ನಮಸ್ಕಾರ, ಪಿ.ಶೇಷಾದ್ರಿ

Dr. K. Ramesh Babu ಗುರು, 07/07/2011 - 22:49

ತಮ್ಮ ಮೆಚ್ಚುಗೆಗೆ ಧನ್ಯವಾದಗಳು, ಶ್ರೀ ಶೇಷಾದ್ರಿಯವರೆ.  ತಾವು "ಬೆಟ್ಟದ ಜೀವ" ಚಿತ್ರದ ನಿರ್ದೇಶಕ ಪಿ.ಶೇಷಾದ್ರಿಯವರಿರಬೇಕೆಂದು ಊಹಿಸುತ್ತೇನೆ. ?ತಮ್ಮಿಂದ ಮೆಚ್ಚುಗೆ ಕೇಳಿ ಸಂತಸವಾಯಿತು. ವಿಸ್ಮಯನಗರಿಯಲ್ಲಿ ಮಧುಮೇಹದ  ಬಗ್ಗೆ ಒಂದು ಸರೆಣಿ ಲೇಖನ ಬರೆಯುತ್ತಿದ್ದೇನೆ. ಇದುವರೆಗೂ ಆರು ಕಂತುಗಳನ್ನು ಪ್ರಕಟಿಸಿದ್ದೇನೆ. ಪ್ರತಿ ಎರಡು ದಿನಕ್ಕೊಮ್ಮೆ ಒಂದು ಕಂತನ್ನು ಪ್ರಕಟಿಸುತ್ತಿದ್ದೇನೆ. ತಮಗೆ ಆಸಕ್ತಿಯಿದ್ದಲ್ಲಿ ಎಲ್ಲವನ್ನೂ ಓದಬಹುದು.ಶಿವರಾಮ ಕಾರಂತರ ಭಕ್ತರೊಲ್ಲಬ್ಬನಾದ ನಾನು ಬಹಳ ಮೆಚ್ಚಿಕೊಂಡ ಕಾದಂಬರಿ "ಬೆಟ್ಟದ ಜೀವ" .ಆದರೆ, ಇನ್ನೂ ಅದರ ಚಲನಚಿತ್ರದ ಆವೃತ್ತಿಯನ್ನು ನೋಡುವ ಅವಕಾಶ ದೊರೆತಿಲ್ಲ. ತುಂಬಾ ಚೆನ್ನಾಗಿದೆ ಎಂದು ಕೇಳಿದ್ದೇನೆ. ಚಿತ್ರ ನೋಡಿದ ನಂತರ ತಮಗೆ ಮತ್ತೆ ಬರೆಯುತ್ತೇನೆ. ನನ್ನಇಮೇಲ್ ವಿಳಾಸ. karababu@gmail.com  ವಂದನೆಗಳು.

Nanjunda Raju Raju ಸೋಮ, 07/11/2011 - 12:06

ಸನ್ಮಾನ್ಯರೇ, ಮಧುಮೇಹಿಗಳ ದೇಹದಲ್ಲಿ ನಡೆಯುವ ಆಂತರಿಕ ಕ್ರಿಯೆಗಳಬಗ್ಗೆ ನಮಗೆ ತಿಳಿದಿರಲಿಲ್ಲ. ದೇಹದಲ್ಲಾಗುವ ಏರುಪೇರುಗಳು. ಅಂಗಾಂಗಗಳ ಸೋಲು, ಮೂತ್ರವಿಸರ್ಜನೆ, ಹಸಿವು, ಬಯಾರಿಕೆ, ಸುಸ್ತು, ಇವುಗಳಿಂದಾಗುವ ಯಾತನೆ. ನಮ್ಮಿಂದ ಹೇಳಿಕೊಳ್ಳಲಾಗುತ್ತಿರಲಿಲ್ಲ. ನಿಮ್ಮ ವಿವರಣೆಯಿಂದ ಮನಸ್ಸಿಗೆ ನೆಮ್ಮದಿಯಾಯ್ತು. ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.