Skip to main content

ಅದ್ದೂರಿ ಸಾಹಿತ್ಯ ಸಮ್ಮೇಳನದಲ್ಲೊಂದು ಕಪ್ಪುಚುಕ್ಕೆ

ಬರೆದಿದ್ದುMarch 6, 2011
15ಅನಿಸಿಕೆಗಳು

ಮೊದಲಿಗೆ ಮರೆತುಹೋಗುತ್ತಿರುವ ವಿಚಾರವನ್ನು ಈಗ ಪ್ರಸ್ತಾಪಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಈ ಬಾರಿಯ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕೆಂದು ನಡೆಸಿದ ತಯಾರಿ ಕೊನೆ ಕ್ಷಣದಲ್ಲಿ ವೈಯಕ್ತಿಕ ಮತ್ತು ನೌಕರಿಯ ಕಾರಣಗಳಿಂದಾಗಿ ರದ್ದುಮಾಡಬೇಕಾಗಿ ಬಂದರೂ ಪತ್ರಿಕೆಗಳಲ್ಲಿ ’ನ್ಯೂಸೆನ್ಸ್’ ಛಾನಲ್ ಗಳಲ್ಲಿ ಬರುತ್ತಿದ್ದ ವರದಿಗಳನ್ನು ಓದಿ ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ. ಒಂದು ಕಾಲದಲ್ಲಿ ಸಾಹಿತ್ಯವೆಂಬುವುದು ಕೆಲ ಶ್ರೀಮಂತರಿಗೆ, ರಾಜ ಮಹಾರಾಜರ ಆಸ್ಥಾನಕಷ್ಟೇ ಸೀಮಿತವಾಗಿತ್ತು. ಆಗ ರಚನೆಯಾಗುತ್ತಿದ್ದ ಸಾಹಿತ್ಯ ಪ್ರಕಾರಗಳೂ ಅಷ್ಟೆ ಜನಸಾಮಾನ್ಯರನ್ನು ತಲುಪುತ್ತಲೇ ಇರಲಿಲ್ಲ. ವಚನಕ್ರಾಂತಿಯ ಕಾಲದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತಹ, ಸಾಮಾನ್ಯನೂ ಸಾಹಿತ್ಯರಚನೆಯಲ್ಲಿ ತೊಡಗಿಕೊಳ್ಳುವ ಅವಕಾಶ ಒದಗಿಬಂದರೂ ಅದು ಸಂಪೂರ್ಣವಾಗಿ ಶ್ರೀಸಾಮಾನ್ಯನ ಸ್ವತ್ತಾಗತೊಡಗಿದ್ದು ಆಧುನಿಕ ಕಾಲದ ಸಾಹಿತ್ಯ ಸಮ್ಮೇಳನಗಳು ಪ್ರಾರಂಭವಾದಮೇಲೆಯೇ. ಪ್ರಾರಂಭದಲ್ಲಿ ಸಾಹಿತ್ಯ ಕೃಷಿಗೆ ಒದಗಿ ಬಂದದ್ದೂ ಸಹ ಹಣವಂತರಿಗಷ್ಟೇ ಆದರೂ ಕ್ರಮೇಣ ಎಲ್ಲರಲ್ಲೂ ಆಸಕ್ತಿ ಮೂಡುತ್ತಾ ಬಂದ ’ಕನ್ನಡ ಸಾಹಿತ್ಯ ಸಮ್ಮೇಳನ’ ಇಂದು ಕರ್ನಾಟಕದ ನಿಜವಾದ ನಾಡಹಬ್ಬವೇ ಸರಿ. ಏಕೆಂದರೆ ಅಲ್ಲಿ ನಮ್ಮ ಘೋಷಿತ ನಾಡಹಬ್ಬವಾದ ಜಂಬೂಸವಾರಿಯಂತೆ ಏಕತಾನತೆ ಇರುವುದಿಲ್ಲ. ಸಮ್ಮೇಳನಾಧ್ಯಕ್ಷರ ಮೆರವಣಿಗೆ, ರಾಜಕಾರಣಿಗಳ ಭಾಷಣ ಮತ್ತಿತರ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ವೈವಿಧ್ಯಮಯವೇ.
ಇಂತಹ ಕನ್ನಡಿಗರ ಆಶೋತ್ತರಗಳನ್ನು ಜಗತ್ತಿಗೆ ಸಾರುವಂತಹ ಕಸ್ತೂರಿಯ ಪರಿಮಳದಂತೆ ಕನ್ನಡದ ಕಂಪನ್ನು ಪಸರಿಸುವಂತಹ ಸಮ್ಮೇಳನದ ಕೊನೆಯಲ್ಲಿ ಕನ್ನಡದ ಬೆಳವಣಿಗೆಗೆ ಪೂರಕವಾಗುವಂತಹ ನಿರ್ಣಯಗಳನ್ನು ತೆಗೆದುಕೊಂಡು ನಮ್ಮನ್ನಾಳುವ ಸರ್ಕಾರದ ಮೂಲಕ ಅವುಗಳನ್ನು ಜಾರಿಗೆ ತರುವಂತೆ ಮಾಡುವುದು ಸಮ್ಮೇಳನದ ಕೊನೆಯ ಮತ್ತು ಅತಿ ಪ್ರಮುಖ ಘಟ್ಟ. ರಾಜಕೀಯ ಇಚ್ಚಾಶಕ್ತಿಯ ಕೊರತೆ ಮತ್ತು ರಾಜಕಾರಣಿಗಳ ಕಿವಿಹಿಂಡಿ ಕೆಲಸ ಮಾಡಿಸುವ ಸಾಹಿತಿಗಳ ಕೊರತೆಯಿಂದಾಗಿ ಪ್ರತೀಬಾರಿಯ ನಿರ್ಣಯಗಳು ಮುಂದಿನ ಸಮ್ಮೇಳನದಲ್ಲಷ್ಟೇ "ಓಹ್! ನಿರ್ಣ್ಯಗಳ್ಯಾವುವೂ ಜಾರಿಯಾಗಿಲ್ಲವಲ್ಲ" ಎಂದು ನಿಮಗೆ, ನಮಗೆ, ಸಾಹಿತಿಗಳಿಗೆ, ಕನ್ನಡ ’ಓರಾಟ’ಗಾರರಿಗೆ ಮಾಧ್ಯಮಗಳಿಗೆ ಎಲ್ಲರಿಗೂ ಜ್ಞಾಪಕಬರುವುದು.
ಪ್ರತಿಸಾರಿಯಂತೆ ಈ ಬಾರಿ ಹೊಸ ನಿರ್ಣಯಗಳನ್ನು ಮಂಡಿಸುವುದರ ಬದಲು ಹಳೆಯ ನಿರ್ಣಯಗಳ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಚಿಂತಕರ ಚಾವಡಿಯ ಅಭಿಪ್ರಾಯವಾಗಿತ್ತು. ಅದೇ ರೀತಿಯ ನಿರ್ಣಯಗಳನ್ನು ಮಂಡಿಸುವುದರ ಜೊತೆಗೆ ಧುತ್ತನೆ ೨ ಹೊಸ ನಿರ್ಣಯಗಳನ್ನು ಸೇರಿಸಲಾಯಿತು. ಅವುಗಳಲ್ಲಿ ಮೊದಲೆನೆಯದು ಸಾಹಿತಿ, ಸಂಶೋಧಕ ಡಾಃ ಚಿ. ಮೂ. ರವರಿಗೆ ಬೆಂಗಳೂರು ವಿ.ವಿ ಕೊಡಮಾಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್ ಅನ್ನು ನಮ್ಮ ’ಘನತೆವೆತ್ತ’ ರಾಜ್ಯಪಾಲರಾದ ಹಂಸರಾಜ್ ಭಾರಧ್ವಾಜ್ (ಇವರಿಗೆ ರಾಜಕೀಯ ಪಾಲಕರು ಎನ್ನಬಹುದೇನೋ) ನಿರಾಕರಿಸಿದ್ದನ್ನು ಖಂಡಿಸಿ ತೆಗೆದುಕೊಂಡ ನಿರ್ಣಯ.
ನಿಜಕ್ಕೂ ಆ ರೀತಿಯ ನಿರ್ಣಯ ಸಮ್ಮೇಳನದ ಗೌರವವನ್ನು ಇಮ್ಮಡಿಗೊಳಿಸಿದ್ದಲ್ಲದೆ ಸಾರಸ್ವತಲೋಕದ ಒಗ್ಗಟ್ಟನ್ನು ಪ್ರದರ್ಶಿಸಿತು. ಆ ದಿನಕ್ಕೆ ಅದರ ಅವಶ್ಯಕತೆ ನಿಜಕ್ಕೂ ಇತ್ತು. ಏಕೆಂದರೆ ಚಿ.ಮೂ ಅವರ ಚಿಂತನೆಗಳು ಏನಾದರೂ ಇರಬಹುದು ಅದು ಬೇರೆಯ ಜಿಜ್ಞಾಸೆ, ಅವರು ನಮ್ಮ ನಾಡು ಕಂಡ ಅಪರೂಪದ ಸಂಶೋಧಕ ಇದ್ಯಾವುದೂ ತಿಳಿಯದ ರಾಜ್ಯಪಾಲರು ಚಿಕ್ಕಮಗುವೊಂದು ತನ್ನ ಕೈಲಿ ಹಿಡಿದಿದ್ದ ಪೆಪ್ಪರ್ಮೆಂಟನ್ನು ’ನಾನು ಯಾರಿಗೂ ಕೊಡುವುದಿಲ್ಲ’ ಎಂದು ಹಠಹಿಡಿಯುವಂತೆ ಚಿ.ಮೂ. ರವರ ಸಾಧನೆಗಳ ಅರಿವಿಲ್ಲದೆ  ’ನಾ ಕೊಡೊಲ್ಲಾ’ ಅಂದಿದ್ದು ಖಂಡನೀಯ.
ಆದರೆ ಮತ್ತೊಂದು ನಿರ್ಣಯವನ್ನೂ ಮಂಡಿಸಲಾಯಿತು ಅದೇ ’ಡಬ್ಬಿಂಗ್ ಕನ್ನಡ ಚಿತ್ರರಂಗಕ್ಕೆ ಬೇಡವೇ ಬೇಡ’ ಎಂಬ ಆತುರದ ತಿಳುವಳಿಕೆಯಿಲ್ಲದ ದೂರದೃಷ್ಠಿಯಿಲ್ಲದ ನಿರ್ಣಯ ಇಡೀ ಸಮ್ಮೇಳನದ ಕಪ್ಪುಚುಕ್ಕೆಯೇ ಸರಿ.
ಎಲ್ಲರಿಗೂ ತಿಳಿದಿರುವಂತೆ ಕನ್ನಡ ಸಾರಸ್ವತಲೋಕವು ಈಗ್ಗೆ ನಾಲ್ಕೈದು ಸಮ್ಮೇಳನಗಳ ಹಿಂದಿನವರೆಗೂ ಚಿತ್ರರಂಗವನ್ನೂ, ಚಿತ್ರಸಾಹಿತಿಗಳನ್ನೂ ಅಸ್ಪೃಶ್ಯರಂತೆ ದೂರವೇ ಇಟ್ಟಿತ್ತು. ಎಪ್ಪತ್ತರ ದಶಕದಲ್ಲಿ ಶ್ರೀಯುತರುಗಳಾದ ಅನಕೃ, ಪಿ. ಲಂಕೇಶ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚದುರಂಗ ಮುಂತಾದವರು ಚಿತ್ರರಂಗಲ್ಲಿ ಸಕ್ರಿಯವಾಗಿ ತೊಡಗಿಕೊಂಡರೂ ಎರಡೂ ರಂಗಗಳ ಅಂತರವೇನೂ ಕಡಿಮೆಯಾಗಿರಲಿಲ್ಲ. ಹೆಸರಾಂತ ಸಾಹಿತಿಗಳ ಕಾವ್ಯಗಳನ್ನು ಕಾದಂಬರಿಗಳನ್ನು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಿದ್ದರೂ ಅದೇ ಸಾಹಿತಿಗಳು ಚಿತ್ರಸಾಹಿತಿಗಳೊಡನೆ ಬೆರೆಯಲು ಸಿದ್ದರಿರಲಿಲ್ಲ. ಅದೇ ರೀತಿ ಹೆಸರಾಂತ ಚಿತ್ರಸಾಹಿತಿಗಳಾದ ಶ್ರೀಯುತರಾದ ಕು. ರಾ. ಸೀ, ಜಿ.ವಿ.ಅಯ್ಯರ್, ಶಿವಶಂಕರ್, ಸಾಹಿತ್ಯಬ್ರಹ್ಮ ಚಿ. ಉದಯಶಂಕರ್ ಮುಂತಾದವರನ್ನು ಸಾಹಿತಿಗಳೆಂದು ಒಪ್ಪಲು ಸಾರಸ್ವತಲೋಕ ಸಿದ್ದವಿರಲಿಲ್ಲ ಅದಕ್ಕೆ ಚಿತ್ರಲೋಕವೂ ತಲೆಕೆಡಿಸಿಕೊಂಡಿರಲಿಲ್ಲ. ಇಂತಹ ವೈರುಧ್ಯದ ಎರಡು ರಂಗಗಳು ಕಾಲಾನುಕ್ರಮವಾಗಿ ಬೆರತದ್ದು ಸಂತೋಷದವಿಚಾರವೇ ಸರಿ. ಅದು ಕನ್ನಡದ ಬೆಳವಣಿಗೆಗೆ ಬೇಕಾಗಿತ್ತೂ ಕೂಡ. ಆದರೆ ’ಡಬ್ಬಿಂಗ್ ಚಿತ್ರಗಳಿಂದಾಗಿ ಕನ್ನಡ ನಾಡಿನ ಸಂಸ್ಕೃತಿಗೆ ಧಕ್ಕೆಯುಂಟಾಗುತ್ತದೆಂಬ’ ತಲೆಬುಡವಿಲ್ಲದ ಯೋಚನೆ ನಮ್ಮ ಘನಸಾಹಿತಿಗಳ ತಲೆಯೊಳಗೆ ಹೊಕ್ಕಿದ್ದಾದರೂ ಹೇಗೆ? ಎಂಬುದು ಶತಕೋಟಿ ಡಾಲರ್ ನ ಪ್ರಶ್ನೆಯೇಸರಿ.
ಪ್ರಸ್ತುತ ಡಬ್ಬಿಂಗ್ ವಿವಾದವು ಕನ್ನಡಕ್ಕೆ ಮಾರಕವೋ ಪೂರಕವೋ ಎಂದು ಚರ್ಚಿಸುವ ಮೊದಲು ಕನ್ನಡ ಚಿತ್ರರಂಗದಿಂದ ಸಂಸ್ಕೃತಿಗೆ ಕೊಡುಗೆ ಇದೆಯೋ ಇಲ್ಲವೋ ಎಂದು ನೋಡಬೇಕಾಗುತ್ತದೆ. ಯಾವ ಕೋನದಿಂದ ಅಳೆದೂ ಸುರಿದು ನೋಡಿದರೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಾತಿರಲಿ ಅವುಗಳ ಗಂಧಗಾಳಿಯೂ ತಿಳಿಯದಂತಹ ಚಿತ್ರಗಳು ಬರುವುದು ಹೆಚ್ಚು. ಚಿತ್ರರಂಗದ ಪ್ರಕಾರ ’ಮಚ್ಚು-ಲಾಂಗು’, ’ಹೆಣ್ಣಿನ ಹೊಕ್ಕಳು ಮೇಲೆ ಹಣ್ಣಿನಿಂದ ಹೊಡೆಯುವುದು’, ನಾಯಕಿ ನೀರೊಳಗೆ ಬಿದ್ದನಂತರ ಮೇಲೆದ್ದು ಎಲ್ಲೆಲ್ಲಿಂದಲೋ ಮೀನು ತೆಗೆಯುವುದು, ಡಬ್ಬಲ್ ತ್ರಿಬ್ಬಲ್ ಮೀನಿಂಗ್ ಉಳ್ಳ ಸಂಭಾಷಣೆಗಳು ಇತ್ಯಾದಿ. ಇತ್ಯಾದಿ....ಗಳೆಲ್ಲಾ ನಮ್ಮ ಸಂಸ್ಕೃತಿಯ ಪ್ರತೀಕವೇ!!!!! ಹಾಗೆಂದು ಒಳ್ಳೆಯ ಚಿತ್ರಗಳು ಇಲ್ಲವೆಂದಲ್ಲ, ವರ್ಷದಲ್ಲಿ ಬಿಡುಗಡೆಯಾಗುವ ೧೦೦ - ೧೫೦ ಚಿತ್ರಗಳಲ್ಲಿ ೩ ಅಥವಾ ನಾಲ್ಕು ಅಷ್ಟೆ!!!! ಅವುಗಳಲ್ಲಿ ಸಣ್ಣ ಸಣ್ಣ ಬ್ಯಾನರ್ರಿನ ಚಿತ್ರಗಳು ಜನರನ್ನು ತಲುಪುವುದೇ ಇಲ್ಲ (ಉದಾಃ ಒಲವೇ ಮಂದಾರ).
ನಿಜಕ್ಕೂ ಒಂದು ಕಾಲವಿತ್ತು ನಮ್ಮ ಚಿತ್ರರಂಗ ಸಣ್ಣದಾಗಿತ್ತು, ವರ್ಷಕ್ಕೆ ಎರಡೋ ನಾಲ್ಕೋ ಚಿತ್ರಗಳು ಅದೂ ಮದ್ರಾಸಿನಲ್ಲಿ ತಯಾರಾಗುತ್ತಿದ್ದವು. ಅವುಗಳ ಗುಣಮಟ್ಟದ ಬಗ್ಗೆ ಎರಡು ಮಾತಿರಲಿಲ್ಲ. ಅಂದಿನ ಚಿತ್ರಗಳ ಬಹುತೇಕ ಸನ್ನಿವೇಶಗಳು, ಹಾಡುಗಳು, ಸಂಭಾಷಣೆಗಳು ಸಂಗೀತ ಎಲ್ಲವೂ ಆ ಚಿತ್ರದ ಕಥೆಗೆ ಪೂರಕವಾಗಿ ಮನೆ ಮಂದಿ ಆನಂದಿಸುವಂತಹ ಚಿತ್ರಗಳಾಗುತ್ತಿದ್ದವು. ಅಂದು ಡಬ್ ಮಾಡುತ್ತಿದ್ದಲ್ಲಿ ನಮ್ಮಲ್ಲಿನ ತಂತ್ರಜ್ಞರಿಗೆ ಕೆಲಸವಿಲ್ಲದಎ ಅತಂತ್ರರಾಗುತ್ತಿದ್ದರು, ಅದು ಅಂದು ಎಲ್ಲರೂ ಒಪ್ಪುವಮಾತಾಗಿತ್ತು. ಇಂದಿನ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡದಿರುವುದೇ ಲೇಸು!! ಇಂತಹ ಸಂಧರ್ಭದಲ್ಲಿ ಬೇರೇ ಭಾಷೆಯಲ್ಲಿ ತಯಾರಾಗುವ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಮಾಡಿದರೆ ಆಗುವ ಅನಾಹುತವೇನು? ಇಂದು ಇಲ್ಲಿ ಕೆಲಸಮಾಡುವ ನಮ್ಮ ಕನ್ನಡ ತಂತ್ರಜ್ಞರನ್ನು ಕಡೆಗಣಿಸಿ ಪ್ರತೀ ಚಿತ್ರಕ್ಕೂ ಲೈಟ್ ಬಾಯ್ ಗಳಿಂದ ಹಿಡಿದು ’ಆಕ್ಷನ್ -ಕಟ್’ ಹೇಳುವ ನಿರ್ದೇಶಕನವರೆಗೆ ಪರಭಾಷೆಯವರಿಗೇ ಮಣೆ ಹಾಕುವುದಿಲ್ಲವೇ? ಕನ್ನಡವೇ ಗೊತ್ತಿಲ್ಲದ ಸಂಭಾಷಣೆಕಾರರಿಂದ ಸಂಭಾಷಣೆ ಬರೆಸಿ ಚಿತ್ರ ನಿರ್ಮಿಸುವ ಕನ್ನಡಿಗ ನಿರ್ಮಾಪಕರಿಲ್ಲವೇ? ಕನ್ನಡದಲ್ಲಿ ನಾಯಕಿ ನಟಿಯರಿಲ್ಲವೆಂದು (ನಿಜ ಅರ್ಥದಲ್ಲಿ ಸರಿಯಾದ ಬಿಚ್ಚಮ್ಮ ನಟಿಯರಿಲ್ಲವೆಂದು) ಮೂಗು ಮೂತಿ ನೆಟ್ಟಗಿರದ ಅದೆಷ್ಟು ಪರಭಾಷಾ ನಟೀಮಣಿಯರಿಗೆ ಕೇಳಿದಷ್ಟು ಕಾಸು ಕೊಟ್ಟು ಮನೆ ಮಠ ಕಳೆದುಕೊಂಡು ’ಕೃತಾರ್ಥರಾದ’ ಅದೆಷ್ಟು ನಿರ್ಮಾಪಕ ನಿರ್ದೇಶಕರಿಲ್ಲ? ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಳ್ಳದೆ, ಅವಕಾಶ ನೀಡದೆ ಸತಾಯಿಸಿ, ಅವರು ಪಕ್ಕದ ಚಿತ್ರರಂಗದಲ್ಲಿ ಮಿಂಚತೊಡಗಿದಾಗ ’ಇವರು ನಮ್ಮವರು, ನಾನೇ ಅವರಿಗೆ ಅವಕಾಶ ಕೊಟ್ಟು ಮೇಲೆ ತಂದೆ’ ಎಂಬಿತ್ಯಾದಿ ಹೇಳಿಕೆಗಳನ್ನು ತೋರಿಕೆಗೆ ಕೊಟ್ಟು, ನಂತರ ಮನದಲ್ಲೇ ಮಂಡಿಗೆ ತಿನ್ನುವ ಭೂಪರೂ ನಮ್ಮ ಚಿತ್ರರಂಗದಲ್ಲಿದ್ದಾರೆ.
ಅದು ಹೋಗಲಿ ಬಿಡಿ. ದುಡ್ಡು ಮಾಡಬೇಕೆಂಬ ಏಕಮಾತ್ರ ಹಂಬಲದಿಂದ ಪರಭಾಷೆಯ ಚಿತ್ರಗಳನ್ನು ’ರೀಮೇಕ್’ ಮಾಡುವುವುದರಿಂದ ನಮ್ಮ ಸಂಸ್ಕೃತಿ ಅದು ಹೇಗೆ ಉದ್ಧಾರವಾಗುತ್ತದೋ? ಆ ದೇವರೇ ಬಲ್ಲ. ಮೂಲ ಚಿತ್ರದಲ್ಲಿದ್ದ ಅದೆಷ್ಟೋ ಅಸಂಬದ್ಧ ದೃಷ್ಯಗಳು, ಅಭಾಸಭರಿತ ಸಂಭಾಷಣೆಗಳು ಅದೇ ರೀತಿ ತರ್ಜುಮೆಗೊಂಡಿರುತ್ತವೆ. ಜೊತೆಗೆ ರೀಮೇಕ್ ಮಾಡುವವರು ಆ ಚಿತ್ರ ಯಾವಕಾರಣಗಳಿಂದಾಗಿ ಗೆದ್ದಿದೆ ಎಂಬ ವಿಶ್ಲೇಷಣೆ ಮಾಡುವುದೇ ಇಲ್ಲ. ಅದಕ್ಕಿಂತಲೂ ಮುಂಚೆಯೇ ಆ ಚಿತ್ರವನ್ನು ಅದೇ ಭಾಷೆಯಲ್ಲಿಯೇ ನಮ್ಮ ಕನ್ನಡ ಪ್ರೇಕ್ಷಕ ನೋಡಿರುತ್ತಾನೆ. ಅದರದೇ ರೀಮೇಕ್ ಬಂದಾಗ ಸಹಜವಾಗಿ ಥಿಯೇಟರೆಡೆಗೆ ಯಾಕಾದರೂ ಹೋಗುತ್ತಾನೆ? ಕನ್ನಡಚಿತ್ರಗಳನ್ನು ನೋಡಲು ಥಿಯೇಟರಿಗೆ ಜನ ಬರುತ್ತಿಲ್ಲ, ಪ್ರದರ್ಶನಶುಲ್ಕ ಹೆಚ್ಚಾಯ್ತು, ಪೈರಸಿ ಸಿ.ಡಿ. ಹಾವಳಿ ಎಂಬಿತ್ಯಾದಿ ಅಸಂಬದ್ಧ ಹೇಳಿಕೆಗಳು ಬೇರೆ. ಅಸಲಿಗೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಪೈರಸಿ ಸಿ.ಡಿ ಗಳಲ್ಲಿ ಮೂರೋ ನಾಲ್ಕೋ ಹೊಸ ಕನ್ನಡ ಚಿತ್ರಗಳ ಸಿ.ಡಿ ದೊರಕಿಯಾವು, ಅದೂ ವರ್ಷ- ಎರಡು ವರ್ಷದ ಹಿಂದೆ ಬಿಡುಗಡೆಯಾದ ಸಿನಿಮಾಗಳವು. ಅದೇ ನಿನ್ನೆಯೋ ಮೊನ್ನೆಯೋ ಬಿಡುಗಡೆಯಾದ ಹಿಂದಿ ತಮಿಳು ತೆಲುಗು ಚಿತ್ರಗಳ ಸಿ.ಡಿ ಯಾವುದು ಬೇಕು ಎಷ್ಟು ಬೇಕು ಸಿಗುತ್ತವೆ. ನಮ್ಮ ಸಿನಿಮಾ ಮಂದಿ ಅಗ್ಗದ ಪ್ರಚಾರಕ್ಕೊಸ್ಕರ ಮಧ್ಯೆ ಮಧ್ಯೆ ಬೀದಿ ಬದಿಯ ಸಿ.ಡಿ ಗಾಡಿಗಳ ಮೇಲೆ ದಾಳಿ ಮಾಡಿದಾಗಲೂ ಸಹ ಪರಭಾಷೆಯ ಸಿ.ಡಿಗಳಷ್ಟೇ ದೊರಕಿದ್ದು!!! ಏಕೆಂದರೆ ಜನಗಳಿಗೂ ಗೊತ್ತು ನಮ್ಮ ಸಿನಿಮಾಗಳ ಗುಣಮಟ್ಟ ಏನೂಂತ!! ಅಂದ ಮಾತ್ರಕ್ಕೆ ಪರಭಾಷೆಯ ಚಿತ್ರಗಳು ಸಕ್ಕತ್ತಾಗಿವೆ ಎಂದಲ್ಲ. ಅವರ ಚಿತ್ರಗಳಿಗೆ ಕೊಡುವ ಪ್ರಚಾರದ ವೈಖರಿ, ಅದಕ್ಕೆ ಬಳಸುವ ಪ್ರೋಮೋ ಗಳು ಆ ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೆ ಅವರ ಚಿತ್ರಗಳಲ್ಲಿ ಅವರು ಬಳಸುವ ತಂತ್ರಜ್ಞಾನ ಆ ಸಿನಿಮಾಗಳನ್ನು ನೋಡಲು ಭಾಷೆ ತಿಳಿಯದವರಿಗೂ ಪ್ರೇರೇಪಿಸುತ್ತದೆ. ಹೊಸ ಹೊಸ ತಂತ್ರಜ್ಞಾನಗಳಾದ ಡಿ.ಟಿ.ಎಸ್, ಡಿಜಿಟಲ್ ಎಫೆಕ್ಟ್, ಗ್ರಾಫಿಕ್ಸ್ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಮತ್ತು ಚಿತ್ರಕ್ಕೆ ಪೂರಕವಾಗಿ ಬಳಸಿರುತ್ತಾರೆ. ವಿಚಿತ್ರವೆಂದರೆ ’ಐ.ಟಿ ಸಿಟಿ’ ಬಿರುದಾಂಕಿತ ಬೆಂಗಳೂರಿನ ತಂತ್ರಜ್ಞರೇ ಅವೆಲ್ಲವನ್ನೂ ಚನ್ನೈ ಅಥವಾ ಹೈದರಾಬಾದ್ ನಲ್ಲಿ ಮಾಡಿರುತ್ತಾರೆ. ಇಂತಹ ಮುಂದುವರಿದ ಯುಗದಲ್ಲಿ ನಮ್ಮ ಕನ್ನಡ ಚಿತ್ರಗಳ ಗ್ರಾಫಿಕ್ಸ್ ಇನ್ನೂ ಹಾವು ಹಾಡಿಸುವುದಕ್ಕೋ, ಕಲ್ಲು ಬಸವನ ಕತ್ತು ಕುಣಿಸಲಿಕ್ಕೋ ಆನೆಗೆ ಕನ್ನಡಕ ಹಾಕಿಸುವದಕ್ಕಷ್ಟೇ ಸಿಮಿತವಾಗಿರುವುದು ದುರಂತವಲ್ಲದೆ ಮತ್ತೇನೂ ಅಲ್ಲ. ( ಈ ಮಾತು ಉಪೇಂದ್ರರ ’ ಸೂಪರ್’ಚಿತ್ರಕ್ಕೆ ಅನ್ವಯಿಸುದಿಲ್ಲ) ಜೊತೆಗೆ ಕನ್ನಡಿಗ ಪ್ರೇಕ್ಷಕನ ಕೆಟ್ಟ ಗ್ರಹಚಾರವಲ್ಲದೆ ಮತ್ತೇನು ಅಲ್ಲ. ಇವರ ಕೈ ಯಲ್ಲಿ ಅಂತಹ ಚಿತ್ರಗಳನ್ನು ತೆಗೆಯಲು ಆಗದಿದ್ದಲ್ಲಿ "ಡಬ್ಬಿಂಗ್" ಮಾಡುವುದರಲ್ಲಿ ತಪ್ಪೇನು? ಅದರಿಂದಾಗಿ ಸ್ಪರ್ಧಾತ್ಮಕತೆ ಹೆಚ್ಚುವುದಲ್ಲದೆ ಕನ್ನಡಿಗರೆ ಒಳ್ಳೆಯ ಚಿತ್ರಗಳು ಹೆಚ್ಚಾಗುತ್ತವೆ.
ಇನ್ನು ಕಥೆಗಳ ವಿಚಾರಕ್ಕೆ ಬಂದರೆ ’ಕನ್ನಡ್ದಲ್ಲಿ ಒಳ್ಳೆ ಕಥೆ ಕಾದಂಬ್ರಿ ಎಲ್ಲವ್ರೀ?’ ಎನ್ನುತ್ತಾ ಇಡೀ ಕನ್ನಡ ಸಾಹಿತ್ಯಕುಲಕ್ಕೇ ಅವಮಾನ ಮಾಡುತ್ತಾರೆ. ಇಂತಹ ಚಿತ್ರರಂಗದ ಪರವಾಗಿ ತೆಗೆದುಕೊಂಡ ಆ ನಿರ್ಣಯ ಕನ್ನಡದ ಬೆಳವಣಿಗೆಗೆ ಹೇಗೆ ಪೂರಕ? ಎಂದು ಬಲ್ಲವರೇ ಹೇಳಬೇಕು. ಸದ್ಯದಲ್ಲೇ ’ವಿಶ್ವ ಕನ್ನಡ ಸಮ್ಮೇಳನ’ ಆರಂಭವಾಗಲಿದೆ ಅಲ್ಲಿಯಾದರೂ ಇಂತಹ ಅಭಾಸಭರಿತ ನಿರ್ಣಯಗಳಾಗದಿರಲಿ.
ಹಾಗು ’ವಿಶ್ವ ಕನ್ನಡ ಸಮ್ಮೇಳನ’  ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ.
"ಸಿರಿಗನ್ನಡಂ ಗೆಲ್ಗೆ"

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

kmurthys ಸೋಮ, 03/07/2011 - 09:56

ಉಮಾಶಂಕರ್,ನಿಮ್ಮ ವಿಷ್ಲೇಶನೆ ಅದ್ಭುತವಾಗಿದೆ. ನಿಮ್ಮ ವಾದವನ್ನು ನಿಖರವಾಗಿ ಮಂಡಿಸಿದ್ದೀರಿ. ನಿಮ್ಮ ವಾದ ಮೆಚ್ಚುಮವಂತಹುದು! ನಿಜವಾಗಿ ಕನ್ನಡದ ಬಗ್ಗೆ ಕಳಕಳಿ ಇರುವವರ ಹೃದಯದ ಮಾತಿದು!  

ಉಮಾಶಂಕರ ಬಿ.ಎಸ್ ಮಂಗಳ, 03/08/2011 - 15:56

ಮೂರ್ತಿ ಸರ್ನಿಮ್ಮ ಪ್ರೋತ್ಸಾರ್ಹ ನುಡಿಗಳಿಗೆ ಅನಂತಾನಂತ ಧನ್ಯವಾದಗಳು ಸರ್ನಿಮ್ಮ ಉಮಾಶಂಕರ 

ವಿ.ಎಂ.ಶ್ರೀನಿವಾಸ ಮಂಗಳ, 03/08/2011 - 12:35

ನಮಸ್ಕಾರ ದೇವ್ರು.
ಡಬ್ಬಿಂಗ್ ಪರವಾಗಿ ನಾವೂ ಇದ್ದೇವೆ. ಇದೇ ವಿಷಯವಾಗಿ ಸಾಕಷ್ಟು ವಾದ-ವಿವಾದಗಳು ನನ್ನ ಮಟ್ಟದಲ್ಲಿ ಗಂಭೀರವಾಗಿಯೇ ನಡೆದ್ದಿದೆ. ಈಗ ಸ್ವಲ್ಪ ಬ್ಯುಸಿ ಇದ್ದೀನಿ, ನಿಮ್ಮ ಲೇಖನ ಓದಿ ಪ್ರತಿಕ್ರಿಯಿಸದೇ ಇರಲಾಗಲಿಲ್ಲ ಅದಕ್ಕೆ ಎರಡೇ ಸಾಲಲ್ಲಿ ಮುಗಿಸುತ್ತಿದ್ದೇನೆ. ಲೇಖನ ಸೊಗಸಾಗಿದೆ. ಓರಾಟಗಾರರು ಎಂಬ ಪದ ಎಲ್ಲರಿಗೂ ಅನ್ವಯಿಸುವಂತೆ ತಾವು ಬರೆದದ್ದು ನನಗೇಕೋ ರುಚಿಸಲಿಲ್ಲ.

ಉಮಾಶಂಕರ ಬಿ.ಎಸ್ ಮಂಗಳ, 03/08/2011 - 15:53

ಶ್ರೀನಿವಾಸ್ ಸರ್ ಮೊದಲಿಗೆ ಡಬ್ಬಿಂಗ್ ಪರವಾಗಿರುವುದಕ್ಕೆ ಮತ್ತು ಲೇಖನ ಮೆಚ್ಚಿದ್ದಕ್ಕೆ ಅನಂತಾನಂತ ಧನ್ಯವಾದಗಳು.ಎರಡನೆಯದಾಗಿ 'ಓರಾಟಗಾರರು' ಎನ್ನುವುದನ್ನು ಎಲ್ಲರಿಗೂ ಅನ್ವಯಿಸುವ ರೀತಿಯಲ್ಲಿ ನಾನು ಬರೆದಿಲ್ಲ. ಅದನ್ನು ಕೇವಲ 'ಓರಾಟಗಾರರಿಗೆ'ಮಾತ್ರ ಅನ್ವಯಿಸುವಂತೆ ಬರೆದಿದ್ದೇನೆ. ಅದರಿಂದ ನಿಜವಾದ ಹೋರಾಟಗಾರರಿಗೆ ನೋವುಂಟುಮಾಡುವುದು ನನ್ನ ಉದ್ದೇಶವಲ್ಲ.ಇತಿ ನಿಮ್ಮವ ಉಮಾಶಂಕರ 

ರೇವಣ್ಣ (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/09/2011 - 21:49

ಪ್ರಿಯ ಶಂಕರ್,ಚಿತ್ರ ರಿಮೇಕೋ, ಸ್ವಮೇಕೋ ಒಟ್ಟಿನಲ್ಲಿ ಚಿತ್ರಾರಂಭದಿಂದ ಕೊನೇವರೆಗೆ ಕನ್ನಡದಲ್ಲಿ ಆಯಿತು ಅಂದಾದರೆ ಪೋಷಕ ನಟನಟಿಯರು, ಸಹ ನಟನಟಿಯರು, ತಂತ್ರಜ್ನರಿಂದ ಹಿಡಿದು ಸ್ಪಾಟ್ ಬಾಯ್ಗಳ ತನಕ ಕನ್ನಡ ಸಿನೇಮಾವನ್ನೇ ನಂಬಿಕೊಂಡಿರುವವರು ಬದುಕಿಕೊಂಡಾರು ಎನ್ನುವ ಕಳಕಳಿಯುಳವರು ಡಬ್ಬಿಂಗನ್ನು ವಿರೋಧಿಸುತ್ತಾರೆ. ಇಲ್ಲವಾದಲ್ಲಿ ತಮಿಳು ಚಿತ್ರನಿರ್ಮಾಪಕರು ನಾಲ್ಕು ಡಬ್ಬಿಂಗ್ ಆರ್ಟಿಸ್ಟುಗಳನ್ನು ಕರೆಸಿಕೊಂಡು ಪುಂಖಾನುಪುಂಖವಾಗಿ ಚಿತ್ರಗಳನ್ನು ಡಬ್ ಮಾಡಿ ಮಾರಿದರೆ ಬೆಂಗಳೂರಿನಲ್ಲಿ ಕಷ್ಟಪಟ್ಟು ಮಾಡಿದ ಕನ್ನಡ ಚಿತ್ರಗಳನ್ನು ಮೂಸಿನೋಡದೇ ಡಬ್ ಮಾಡಿದ ಚಿತ್ರಗಳನ್ನೇ ಪ್ರದರ್ಶಿಸುವ ಪ್ರದರ್ಶಕರೂ, ಅವನ್ನು ನೋಡುವ ಕನ್ನಡ ಕಳಕಳಿಯ ಕವಿಹೃದಯಿಗಳೂ ಕಡಿಮೆಯಿಲ್ಲ. ಅಂತಹುದರಲ್ಲಿ ಡಬ್ಬಿಂಗ್ ವಿರೋಧಿಸಿದರೆ ತಪ್ಪು ಎನ್ನುತ್ತೀರಾ?ಎರಡು ಬ್ಯಾರೆಲ್ಲು ಕಾವೇರಿ ನೀರು ತಮಿಳುನಾಡಿಗೆ ಬಿಡಿ ಎಂದರೆ ಮಂಡ್ಯದ ಜನಕ್ಕೆ ಉಸಿರು
ಎದೆಗೇ ಸಿಕ್ಕಿಕೊಳುತ್ತದೆ ಆದರೆ ಬೇರೆಯವರ ಹೊಟ್ಟೆಪಾಡಿನ ವಿಚಾರ ಬಂದಾಗ ನೀವು
ಧಾರಾಳಿಗಳು.ರಿಮೇಕು ಪಥ್ಯವಾಗದ ನಿಮಗೆ ಡಬ್ಬಿಂಗು ವಿರೋಧ ಕಪ್ಪುಚುಕ್ಕೆ ಎನಿಸುವದು ಆಭಾಸ.ಅಲ್ಲದೇ ನಿಮ್ಮ ಲೇಖನದಲ್ಲಿ ಬೆಂಗಳೂರು ಐಟಿ ಸಿಟಿ ಆದ್ದರಿಂದ ಗ್ರಾಫಿಕ್ಸಿನಲ್ಲಿ ಮುಂದಿರಬೇಕು ಎನ್ನುವ ಬಾಲಿಶ ವಾದ ಮಂಡಿಸುತ್ತೀರ. ಗ್ರಾಫಿಕ್ಸ್ ಎನ್ನುವದು ಚಿತ್ರಕಲೆ ಎನ್ನುವ ಅರಿವು ಸಹ ನಿಮಗೆ ಇದ್ದಂತಿಲ್ಲ.  ಬೆಂಗಳೂರಿನಲ್ಲಿ ಯಾವುದೋ  ಪ್ರೋಗ್ರಾಮಿಗೆ ಸೋರ್ಸ್ ಕೋಡು ಕುಟ್ಟುತ್ತ ಕುಳುವ ಹುಡುಗ ಹುಡುಗಿಯರೆಲ್ಲ ಕಲಾಕಾರರಾದಾರೆ? ಅಲ್ಲದೇ ಐಟಿಯಲ್ಲಿ ಹೈದರಾಬಾದು, ಚೆನ್ನೈ ಏನು ತವಡು ಕುಟ್ಟುತ್ತಿವೆಯೆ?ಕನ್ನಡ ಚಿತ್ರಗಳು ಸೋಲಲು ಸಿನೇಮಾ ನೋಡುವದು ಶೋಕಿ ಎನ್ನುವ ಮನೋಭಾವವಿರುವ ಕರ್ನಾಟಕದ ಪರಂಪರೆ, ಟೀವಿಯ ಹಾವಳಿ ಮುಂತಾದವು ಕಾರಣವೇ ಹೊರತು ಚಿತ್ರಗಳ ಕಥೆಯಾಗಲಿ, ನಟರಾಗಲಿ ಕಾರಣರಲ್ಲ.-ರೇವಣ್ಣ

ಉಮಾಶಂಕರ ಬಿ.ಎಸ್ ಶುಕ್ರ, 03/11/2011 - 14:37

ಪ್ರಿಯ ರೇವಣ್ಣನವರೆ,ಮೊದಲಿಗೆ ನನ್ನ 'ಬಾಲಿಶ' ಲೇಖನವನ್ನೋದಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಓದಿ ಪ್ರತಿಕ್ರಿಯಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳುನಿಮ್ಮ ಪ್ರಕಾರ ಡಬ್ಬಿಂಗ್ ನಿಂದಾಗಿ ಚಿತ್ರರಂಗವನ್ನೇ ನೆಚ್ಚಿಕೊಂಡ ಪೋಷಕ ನಟನಟಿಯರು, ಸಹ ನಟನಟಿಯರು, ತಂತ್ರಜ್ನರಿಂದ ಹಿಡಿದು ಸ್ಪಾಟ್ ಬಾಯ್ಗಳ ತನಕ ಕನ್ನಡ ಸಿನೇಮಾವನ್ನೇ ನಂಬಿಕೊಂಡಿರುವವರು ಬದುಕಿಕೊಂಡಾರು, ಎಂಬ ನಿಮ್ಮ ಕಳಕಳಿ ಮೆಚ್ಚತಕ್ಕದ್ದೇ ಅದಕ್ಕೆ ನನ್ನ ಸಹಮತವೂ ಇದೆ. ಇಂತಹುದೇ ಆಲೋಚನೆಯುಳ್ಳ ಕೆಲವರಿಂದಾಗಿ ಇಂದು ಕನ್ನಡ ಪ್ರೇಕ್ಷಕರಿಗೆ ರಾಮಾಯಣ, ಮಹಾಭಾರತ ದಂತಹ ಧಾರಾವಾಹಿಗಳನ್ನು ಕನ್ನಡದಲ್ಲಿ ನೋಡುವ ಸೌಭಾಗ್ಯವಿಲ್ಲದಾಯ್ತುಎನ್ನುವುದನ್ನು ನೀವು ಮರೆತಂತಿದೆ. ನಿಮ್ಮಂತಹ ಪ್ರಾಜ್ಞರು ಹಿಂದಿ ಓದಿ ಅರ್ಥಮಾಡಿಕೊಳ್ಳುವವರು ಮಾತ್ರ ಅವುಗಳನ್ನು ನೋಡಿ ಆನಂದಿಸಿದರೆ ಹಿಂದಿ ಇಂಗ್ಲೀಷ್ ಬಾರದ ನಮ್ಮಂತಹ ಮೂಡಾತ್ಮರು ನಮ್ಮ ಘನ ನಿರ್ಮಾಪಕರು ತಯಾರಿಸುವಂತಹ 'ನಾಗದೇವತೆ'ನವಶಕ್ತಿ ಮುಂತಾದ 'ಭಕ್ತಿ' ಚಿತ್ರಗಜೊತೆಗೆ ಶಂಕರ್ ಐ.ಪಿ.ಎಸ್, ರಾಜೀವ್ ಗಳಂತಹ ಸ್ವಮೇಕು ಚಿತ್ರಗಳು ಶೌರ್ಯ, ಗನ್ ಗಳಂತ ರೀಮೇಕು ಚಿತ್ರಗಳನ್ನು ನೋಡಬೇಕಾದ್ದು ನಿಮ್ಮ ಪ್ರಕಾರ ಪೂರ್ವ ಜನ್ಮದ 'ಸುಕೃತ ಫಲವೇ' ಸರಿ. ಹೋಗಲಿ ಬಿಡಿ!! ಡಬ್ಬಿಂಗನ್ನು ಸ್ವಾಗತಿಸುವ ಭರದಲ್ಲಿ ಎಲ್ಲಾ ಚಿತ್ರಗಳೂ ಡಬ್ ಆಗಲಿ ಎಂದು ಹೇಳುತ್ತಿಲ್ಲ. ಸಾಮಾಜಿಕ ಕಳಕಳಿಯುಳ್ಳ, ತಾಂತ್ರಿಕತೆಯಿಂದಾಗಿ ಮನರಂಜನೆ ನೀಡುವಂತಹ ಚಿತ್ರಗಳನ್ನು ಡಬ್ ಮಾಡಬಹುದಲ್ಲವೇ?ಉದಾಃ ಹ್ಯಾರೀ ಪಾಟರ್, ರೋಬೋ ಇತ್ಯಾದಿ. 'ರೀ ಬಿಡ್ರೀ ಹ್ಯಾರೀ ಪಾಟರ್ ಯಾವ ಚಿತ್ರ, ನಮ್ಮ ಚಂದಮಾಮ ಕಥೆಗಳು ಇನ್ನೂಸೂಪರ್ ಆಗಿರುತ್ತವೆ' ಎಂದು ನೀವು ವಾದಿಸಿದರೆ ಅದು ನೂರಕ್ಕೆ ನೂರು ಭಾಗ ಸರ್ವಸಮ್ಮತದ ಮಾತು. ಹಾಗಿದ್ದಲ್ಲಿ ಆ ರೀತಿಯಚಿತ್ರಗಳನ್ನೇ ನಮ್ಮ ನಿರ್ಮಾಪಕರು ತಯಾರಿಸಲಿ ಬಿಡಿ, ಅವುಗಳಿಂದ ನಾವು ನಮ್ಮ ಮಕ್ಕಳು ಯಾಕೆ ವಂಚಿತರಾಗಬೇಕು?ಈ ರೀತಿಯ ಡಬ್ ಚಿತ್ರಗಳು ಬಂದಾಗ ನಮ್ಮವರಲ್ಲೂ ಸ್ಪರ್ಧಾತ್ಮಕತೆ ಬೆಳೆಸಿಕೊಳ್ಳದ ಪ್ರಜ್ಞಾವಂತರೇನಲ್ಲ ಎನ್ನುವುದು ತಮ್ಮ ಮಾತಿನ ತಾತ್ಪರ್ಯವೋ ಏನೋ ತಾವೇ ಸ್ಪಷ್ಟಪಡಿಸಬೇಕು. ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲಿ ಡಬ್ಬಿಂಗೂ ಇದೆ ರೀಮೇಕೂ ಇದೆ.ಅದರಿಂದಾಗಿ ಅಲ್ಲಿನ ಚಿತ್ರರಂಗವೇನೂ ಮುಚ್ಚಿಹೋಗಿಲ್ಲ, ಬದಲಾಗಿ ಬೆಂಕಿಗೆ ಬಿದ್ದ ಚಿನ್ನ ಹೊಳೆಯುವಂತೆ ಇನ್ನೂ ಹೊಳೆಯುತ್ತಿವೆ, ಬೆಳೆಯುತ್ತಿವೆ ಅಲ್ಲವೇ?ಇನ್ನೂ ಚಿತ್ರಗಳ ಡಬ್ಬಿಂಗ್ ಬಗ್ಗೆ ಮಮಕಾರ ತೋರದ ತಾವು ಅದೇ ಡಬ್ಬಿಂಗ್ ಜಾಹಿರಾ'ಥೂ'ಗಳನ್ನು ಒಪ್ಪಿಕೊಂಡಿರುವುದು ಯಾವ ನ್ಯಾಯ ಸ್ವಾಮಿ?ಇನ್ನು ಕಾವೇರಿ ನೀರಿನ ವಿಚಾರವನ್ನು ಡಬ್ಬಿಂಗ್ ಜೊತೆ ಥಳುಕು ಹಾಕಿರುವುದೇ ಹಾಸ್ಯಾಸ್ಪದವೇ ಸರಿ. ನಮ್ಮ ಬಳಿ ಹೆಚ್ಚಿದ್ದರೆ ಮಾತ್ರಬೇರೆಯವರಿಗೆ ದಾನ ಮಾಡಲು ಸಾಧ್ಯ ಅಲ್ಲವೇ? ಅಲ್ಲದೇ ಮಂಡ್ಯದವರು ಕಾವೇರಿ ನೀರನ್ನು ನದಿಯಲ್ಲಿ ಕಡಿಮೆ ನೀರಿದ್ದಾಗ ತಮಿಳುನಾಡಿಗೆ ಹರಿಸಿದಾಗ ಪ್ರತಿಭಟಿಸಿದ್ದಾರೆ ಹೊರತು ಹೆಚ್ಚಾಗಿದ್ದಾಗಲಲ್ಲ. ಹಾಗೆ ಮಾಡದಿದ್ದಲ್ಲಿ ಬೆಂಗಳೂರಿಗರಾದ ನಿಮಗೆ ಕುಡಿಯುವುದಕ್ಕಿರಲಿಯಾವುದಕ್ಕೂ ನೀರಿರುವುದಿಲ್ಲ. ಆ ಪ್ರತಿಭಟನೆಯಲ್ಲಿ ನಿಮಗೂ ಉಪಯೋಗವಿದೆಯಲ್ಲವೇ? ಹಾಗಿದ್ದಲ್ಲಿ ಕೆಲ ಸಾವಿರಮಂದಿಗಾಗಿಇಡೀ ೬ ಕೋಟಿ ಕನ್ನಡಿಗರ ಮನರಂಜನೆ ಕಿತ್ತುಕೊಳ್ಳುವುದು ನ್ಯಾಯ ಸಮ್ಮತವೆಂದು ನಿಮಗೆ ಹೇಗೆ ಕಾಣುತ್ತದೋ ಗೊತ್ತಿಲ್ಲ.ಇನ್ನು ನನಗೆ ಗ್ರಾಫಿಕ್ಸ್ ಬಗ್ಗೆ ಅಜ್ಞಾನವಿದೆ ನಿಜ 'ಬೆಂಗಳೂರಿನಲ್ಲಿ ಯಾವುದೋ  ಪ್ರೋಗ್ರಾಮಿಗೆ ಸೋರ್ಸ್ ಕೋಡು' ಕುಟ್ಟುವ ಹುಡುಗರು ಗ್ರಾಫಿಕ್ಸ್ ಬಗ್ಗೆ ಕೋಡು ಕುಟ್ಟುತ್ತಿಲ್ಲ ಎನ್ನುವ ನಿಮಗೆ ಕರ್ನಾಟಕದ ಪ್ರತೀ ಜಿಲ್ಲಾ ತಾಲ್ಲೋಕು ಕೇಂದ್ರಗಳಲ್ಲಿ ೨ಡಿ ಮತ್ತು ೩ಡಿ ಗ್ರಾಫಿಕ್ಸ್ ಗಳನ್ನು ಕಲಿಸುವ ಕೇಂದ್ರಗಳುಏಕೆ ಉದ್ಭವವಾಗುತ್ತಿರುವುದು ಯಾವುದಕ್ಕೆ ಆ ಹೊಸ ಕಲೆಯನ್ನು ಕಲಿಸುವುದಕ್ಕೆ ಅಲ್ಲವೇ?ಇನ್ನು ಕನ್ನಡ ಚಿತ್ರಗಳ ಸೋಲಿಗೆ ಕಾರಣ ಹುಡುಕುವ ಬರದಲ್ಲಿ ಕನ್ನಡ ಪ್ರೇಕ್ಷಕರನ್ನು ಶೋಕಿಲಾಲರು ಎನ್ನುವುದು ಇಡೀ ಕನ್ನಡ ಕುಲಕೋಟಿಗೆಮಾಡಿದಂತಹ ಅವಮಾನವಲ್ಲವೇ? ಕನ್ನಡಿಗರು ಉತ್ತಮ ಗುಣಮಟ್ಟದ, ಉತ್ತಮ ಕಥೆಗಳನ್ನು ಹೊಂದಿದ ಚಿತ್ರಗಳನ್ನು ಯಾವತ್ತೂ ತಿರಸ್ಕರಿಸಿಲ್ಲ ಎನ್ನುವುದನ್ನು ಅರಿಯದ ನೀವು ನಿಜಕ್ಕೂ ಅರಿಯದೆ ಮೇಲಿನಂತೆ ಮಾತನಾಡಿದ ನೀವು ಡಬ್ಬಿಂಗ್ ಅನ್ನು ಕೇವಲಸಂಕುಚಿತ ಮನೋಭಾವದಿಂದ ನೋಡುವುದು ಎಷ್ಟು ಸರಿ? ನೀವೇ ಉತ್ತರಿಸಬೇಕು. ಇನ್ನು ಈಗ ಬರುತ್ತಿರುವ ಚಿತ್ರಗಳನ್ನು ನೋಡಲುಥಿಯೇಟರಿಗೆ ಹೋಗಬೇಕೆನ್ನುವ ನಿಮ್ಮ ವಾದದಲ್ಲಿ ಖಂಡಿತಾ ಉರುಳಿಲ್ಲ. ಬರುತ್ತಿರುವ ಅಸಹ್ಯ ಚಿತ್ರಗಳನ್ನು ನೋಡುವ ಧೈರ್ಯ ನಿಮಗೂ ಇಲ್ಲಾ ನಮಗೂ ಇಲ್ಲಇನ್ನು ಟಿ. ವಿ. ಹಾವಳಿಯ ಬಗ್ಗೆ ಎರಡು ಮಾತಿಲ್ಲ ಆದರೆ ಅದರಿಂದ ಚಿತ್ರರಂಗಕ್ಕೆ ಉಪಯೋಗವಾಗಿಲ್ಲವೇ? ಚಿತ್ರಗಳ ಪ್ರಚಾರಕ್ಕೆಅವುಗಳ ಕೊಡುಗೆಯನ್ನು ಅಲ್ಲಗಳೆವಂತಿಲ್ಲ. ಟಿ.ವಿಯಾಗಲಿ ಡಬ್ಬಿಂಗ್ ಆಗಲಿ ಅವುಗಳನ್ನು ನಾವು ಉಪಯೋಗಿಸಿಕೊಳ್ಳುವ ಛಾತಿ ಚಿತ್ರರಂಗಕ್ಕೆ ಬೇಕಲ್ಲವೇ?ನಿಮ್ಮಉಮಾಶಂಕರಪ್ರಿಯ ರೇವಣ್ಣನವರೆ,ಮೊದಲಿಗೆ ನನ್ನ 'ಬಾಲಿಶ' ಲೇಖನವನ್ನೋದಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಓದಿ ಪ್ರತಿಕ್ರಿಯಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳುನಿಮ್ಮ ಪ್ರಕಾರ ಡಬ್ಬಿಂಗ್ ನಿಂದಾಗಿ ಚಿತ್ರರಂಗವನ್ನೇ ನೆಚ್ಚಿಕೊಂಡ ಪೋಷಕ ನಟನಟಿಯರು, ಸಹ ನಟನಟಿಯರು, ತಂತ್ರಜ್ನರಿಂದ ಹಿಡಿದು ಸ್ಪಾಟ್ ಬಾಯ್ಗಳ ತನಕ ಕನ್ನಡ ಸಿನೇಮಾವನ್ನೇ ನಂಬಿಕೊಂಡಿರುವವರು ಬದುಕಿಕೊಂಡಾರು, ಎಂಬ ನಿಮ್ಮ ಕಳಕಳಿ ಮೆಚ್ಚತಕ್ಕದ್ದೇ ಅದಕ್ಕೆ ನನ್ನ ಸಹಮತವೂ ಇದೆ. ಇಂತಹುದೇ ಆಲೋಚನೆಯುಳ್ಳ ಕೆಲವರಿಂದಾಗಿ ಇಂದು ಕನ್ನಡ ಪ್ರೇಕ್ಷಕರಿಗೆ ರಾಮಾಯಣ, ಮಹಾಭಾರತ ದಂತಹ ಧಾರಾವಾಹಿಗಳನ್ನು ಕನ್ನಡದಲ್ಲಿ ನೋಡುವ ಸೌಭಾಗ್ಯವಿಲ್ಲದಾಯ್ತುಎನ್ನುವುದನ್ನು ನೀವು ಮರೆತಂತಿದೆ. ನಿಮ್ಮಂತಹ ಪ್ರಾಜ್ಞರು ಹಿಂದಿ ಓದಿ ಅರ್ಥಮಾಡಿಕೊಳ್ಳುವವರು ಮಾತ್ರ ಅವುಗಳನ್ನು ನೋಡಿ ಆನಂದಿಸಿದರೆ ಹಿಂದಿ ಇಂಗ್ಲೀಷ್ ಬಾರದ ನಮ್ಮಂತಹ ಮೂಡಾತ್ಮರು ನಮ್ಮ ಘನ ನಿರ್ಮಾಪಕರು ತಯಾರಿಸುವಂತಹ 'ನಾಗದೇವತೆ'ನವಶಕ್ತಿ ಮುಂತಾದ 'ಭಕ್ತಿ' ಚಿತ್ರಗಜೊತೆಗೆ ಶಂಕರ್ ಐ.ಪಿ.ಎಸ್, ರಾಜೀವ್ ಗಳಂತಹ ಸ್ವಮೇಕು ಚಿತ್ರಗಳು ಶೌರ್ಯ, ಗನ್ ಗಳಂತ ರೀಮೇಕು ಚಿತ್ರಗಳನ್ನು ನೋಡಬೇಕಾದ್ದು ನಿಮ್ಮ ಪ್ರಕಾರ ಪೂರ್ವ ಜನ್ಮದ 'ಸುಕೃತ ಫಲವೇ' ಸರಿ. ಹೋಗಲಿ ಬಿಡಿ!! ಡಬ್ಬಿಂಗನ್ನು ಸ್ವಾಗತಿಸುವ ಭರದಲ್ಲಿ ಎಲ್ಲಾ ಚಿತ್ರಗಳೂ ಡಬ್ ಆಗಲಿ ಎಂದು ಹೇಳುತ್ತಿಲ್ಲ. ಸಾಮಾಜಿಕ ಕಳಕಳಿಯುಳ್ಳ, ತಾಂತ್ರಿಕತೆಯಿಂದಾಗಿ ಮನರಂಜನೆ ನೀಡುವಂತಹ ಚಿತ್ರಗಳನ್ನು ಡಬ್ ಮಾಡಬಹುದಲ್ಲವೇ?ಉದಾಃ ಹ್ಯಾರೀ ಪಾಟರ್, ರೋಬೋ ಇತ್ಯಾದಿ. 'ರೀ ಬಿಡ್ರೀ ಹ್ಯಾರೀ ಪಾಟರ್ ಯಾವ ಚಿತ್ರ, ನಮ್ಮ ಚಂದಮಾಮ ಕಥೆಗಳು ಇನ್ನೂಸೂಪರ್ ಆಗಿರುತ್ತವೆ' ಎಂದು ನೀವು ವಾದಿಸಿದರೆ ಅದು ನೂರಕ್ಕೆ ನೂರು ಭಾಗ ಸರ್ವಸಮ್ಮತದ ಮಾತು. ಹಾಗಿದ್ದಲ್ಲಿ ಆ ರೀತಿಯಚಿತ್ರಗಳನ್ನೇ ನಮ್ಮ ನಿರ್ಮಾಪಕರು ತಯಾರಿಸಲಿ ಬಿಡಿ, ಅವುಗಳಿಂದ ನಾವು ನಮ್ಮ ಮಕ್ಕಳು ಯಾಕೆ ವಂಚಿತರಾಗಬೇಕು?ಈ ರೀತಿಯ ಡಬ್ ಚಿತ್ರಗಳು ಬಂದಾಗ ನಮ್ಮವರಲ್ಲೂ ಸ್ಪರ್ಧಾತ್ಮಕತೆ ಬೆಳೆಸಿಕೊಳ್ಳದ ಪ್ರಜ್ಞಾವಂತರೇನಲ್ಲ ಎನ್ನುವುದು ತಮ್ಮ ಮಾತಿನ ತಾತ್ಪರ್ಯವೋ ಏನೋ ತಾವೇ ಸ್ಪಷ್ಟಪಡಿಸಬೇಕು. ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲಿ ಡಬ್ಬಿಂಗೂ ಇದೆ ರೀಮೇಕೂ ಇದೆ.ಅದರಿಂದಾಗಿ ಅಲ್ಲಿನ ಚಿತ್ರರಂಗವೇನೂ ಮುಚ್ಚಿಹೋಗಿಲ್ಲ, ಬದಲಾಗಿ ಬೆಂಕಿಗೆ ಬಿದ್ದ ಚಿನ್ನ ಹೊಳೆಯುವಂತೆ ಇನ್ನೂ ಹೊಳೆಯುತ್ತಿವೆ, ಬೆಳೆಯುತ್ತಿವೆ ಅಲ್ಲವೇ?ಇನ್ನೂ ಚಿತ್ರಗಳ ಡಬ್ಬಿಂಗ್ ಬಗ್ಗೆ ಮಮಕಾರ ತೋರದ ತಾವು ಅದೇ ಡಬ್ಬಿಂಗ್ ಜಾಹಿರಾ'ಥೂ'ಗಳನ್ನು ಒಪ್ಪಿಕೊಂಡಿರುವುದು ಯಾವ ನ್ಯಾಯ ಸ್ವಾಮಿ?ಇನ್ನು ಕಾವೇರಿ ನೀರಿನ ವಿಚಾರವನ್ನು ಡಬ್ಬಿಂಗ್ ಜೊತೆ ಥಳುಕು ಹಾಕಿರುವುದೇ ಹಾಸ್ಯಾಸ್ಪದವೇ ಸರಿ. ನಮ್ಮ ಬಳಿ ಹೆಚ್ಚಿದ್ದರೆ ಮಾತ್ರಬೇರೆಯವರಿಗೆ ದಾನ ಮಾಡಲು ಸಾಧ್ಯ ಅಲ್ಲವೇ? ಅಲ್ಲದೇ ಮಂಡ್ಯದವರು ಕಾವೇರಿ ನೀರನ್ನು ನದಿಯಲ್ಲಿ ಕಡಿಮೆ ನೀರಿದ್ದಾಗ ತಮಿಳುನಾಡಿಗೆ ಹರಿಸಿದಾಗ ಪ್ರತಿಭಟಿಸಿದ್ದಾರೆ ಹೊರತು ಹೆಚ್ಚಾಗಿದ್ದಾಗಲಲ್ಲ. ಹಾಗೆ ಮಾಡದಿದ್ದಲ್ಲಿ ಬೆಂಗಳೂರಿಗರಾದ ನಿಮಗೆ ಕುಡಿಯುವುದಕ್ಕಿರಲಿಯಾವುದಕ್ಕೂ ನೀರಿರುವುದಿಲ್ಲ. ಆ ಪ್ರತಿಭಟನೆಯಲ್ಲಿ ನಿಮಗೂ ಉಪಯೋಗವಿದೆಯಲ್ಲವೇ? ಹಾಗಿದ್ದಲ್ಲಿ ಕೆಲ ಸಾವಿರಮಂದಿಗಾಗಿಇಡೀ ೬ ಕೋಟಿ ಕನ್ನಡಿಗರ ಮನರಂಜನೆ ಕಿತ್ತುಕೊಳ್ಳುವುದು ನ್ಯಾಯ ಸಮ್ಮತವೆಂದು ನಿಮಗೆ ಹೇಗೆ ಕಾಣುತ್ತದೋ ಗೊತ್ತಿಲ್ಲ.ಇನ್ನು ನನಗೆ ಗ್ರಾಫಿಕ್ಸ್ ಬಗ್ಗೆ ಅಜ್ಞಾನವಿದೆ ನಿಜ 'ಬೆಂಗಳೂರಿನಲ್ಲಿ ಯಾವುದೋ  ಪ್ರೋಗ್ರಾಮಿಗೆ ಸೋರ್ಸ್ ಕೋಡು' ಕುಟ್ಟುವ ಹುಡುಗರು ಗ್ರಾಫಿಕ್ಸ್ ಬಗ್ಗೆ ಕೋಡು ಕುಟ್ಟುತ್ತಿಲ್ಲ ಎನ್ನುವ ನಿಮಗೆ ಕರ್ನಾಟಕದ ಪ್ರತೀ ಜಿಲ್ಲಾ ತಾಲ್ಲೋಕು ಕೇಂದ್ರಗಳಲ್ಲಿ ೨ಡಿ ಮತ್ತು ೩ಡಿ ಗ್ರಾಫಿಕ್ಸ್ ಗಳನ್ನು ಕಲಿಸುವ ಕೇಂದ್ರಗಳುಏಕೆ ಉದ್ಭವವಾಗುತ್ತಿರುವುದು ಯಾವುದಕ್ಕೆ ಆ ಹೊಸ ಕಲೆಯನ್ನು ಕಲಿಸುವುದಕ್ಕೆ ಅಲ್ಲವೇ?ಇನ್ನು ಕನ್ನಡ ಚಿತ್ರಗಳ ಸೋಲಿಗೆ ಕಾರಣ ಹುಡುಕುವ ಬರದಲ್ಲಿ ಕನ್ನಡ ಪ್ರೇಕ್ಷಕರನ್ನು ಶೋಕಿಲಾಲರು ಎನ್ನುವುದು ಇಡೀ ಕನ್ನಡ ಕುಲಕೋಟಿಗೆಮಾಡಿದಂತಹ ಅವಮಾನವಲ್ಲವೇ? ಕನ್ನಡಿಗರು ಉತ್ತಮ ಗುಣಮಟ್ಟದ, ಉತ್ತಮ ಕಥೆಗಳನ್ನು ಹೊಂದಿದ ಚಿತ್ರಗಳನ್ನು ಯಾವತ್ತೂ ತಿರಸ್ಕರಿಸಿಲ್ಲ ಎನ್ನುವುದನ್ನು ಅರಿಯದ ನೀವು ನಿಜಕ್ಕೂ ಅರಿಯದೆ ಮೇಲಿನಂತೆ ಮಾತನಾಡಿದ ನೀವು ಡಬ್ಬಿಂಗ್ ಅನ್ನು ಕೇವಲಸಂಕುಚಿತ ಮನೋಭಾವದಿಂದ ನೋಡುವುದು ಎಷ್ಟು ಸರಿ? ನೀವೇ ಉತ್ತರಿಸಬೇಕು. ಇನ್ನು ಈಗ ಬರುತ್ತಿರುವ ಚಿತ್ರಗಳನ್ನು ನೋಡಲುಥಿಯೇಟರಿಗೆ ಹೋಗಬೇಕೆನ್ನುವ ನಿಮ್ಮ ವಾದದಲ್ಲಿ ಖಂಡಿತಾ ಉರುಳಿಲ್ಲ. ಬರುತ್ತಿರುವ ಅಸಹ್ಯ ಚಿತ್ರಗಳನ್ನು ನೋಡುವ ಧೈರ್ಯ ನಿಮಗೂ ಇಲ್ಲಾ ನಮಗೂ ಇಲ್ಲಇನ್ನು ಟಿ. ವಿ. ಹಾವಳಿಯ ಬಗ್ಗೆ ಎರಡು ಮಾತಿಲ್ಲ ಆದರೆ ಅದರಿಂದ ಚಿತ್ರರಂಗಕ್ಕೆ ಉಪಯೋಗವಾಗಿಲ್ಲವೇ? ಚಿತ್ರಗಳ ಪ್ರಚಾರಕ್ಕೆಅವುಗಳ ಕೊಡುಗೆಯನ್ನು ಅಲ್ಲಗಳೆವಂತಿಲ್ಲ. ಟಿ.ವಿಯಾಗಲಿ ಡಬ್ಬಿಂಗ್ ಆಗಲಿ ಅವುಗಳನ್ನು ನಾವು ಉಪಯೋಗಿಸಿಕೊಳ್ಳುವ ಛಾತಿ ಚಿತ್ರರಂಗಕ್ಕೆ ಬೇಕಲ್ಲವೇ?ನಿಮ್ಮಉಮಾಶಂಕರ

ವಿ.ಎಂ.ಶ್ರೀನಿವಾಸ ಶುಕ್ರ, 03/11/2011 - 11:47

ರೇವಣ್ಣನವರೇ ಮತ್ತು ಉಮಾ ಶಂಕರ್ ರವರೇ.
ಈ ವಿಷಯದಲ್ಲಿ ವಾದ ಪ್ರತಿವಾದಗಳೇನೇ ಇದ್ದರೂ ಸಹ ಡಬ್ಬಿಂಗ್ ಚಿತ್ರಗಳಿಂದಾಗಿ ಮಾತ್ರ ನಮ್ಮಲ್ಲಿ ಕನ್ನಡದ ಅನಿವಾರ್ಯತೆಯನ್ನು ಸೃಷ್ಠಿಮಾಡಬಹುದೇ ಹೊರತು, ರಿಮೇಕ್ ಚಿತ್ರಗಳಿಂದ ಅಲ್ಲ. ಡಬ್ಬಿಂಗ ಚಿತ್ರಗಳಿಂದಾಗಿ ಕೆಲವೊಂದು ತೊಂದರೆಗಳು ಕನ್ನಡಿಗರನ್ನು ಕಾಡಬಹುದು ಎಂಬ ಮಾತು ನಿಜ. ಆದರೆ ಒಂದು ಸತ್ಯವನ್ನು ನಾನು ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ, ಸಿನಿಮಾ ಮಂದಿ ಜೊತೆ ಇರುವ ಅಲ್ಪ-ಸ್ವಲ್ಪ ಒಡನಾಟದ ಅನುಭವದ ಆಧಾರದಲ್ಲಿ ಹೇಳುವುದಾದರೆ, ಇವತ್ತಿನ ಕನ್ನಡ ಚಿತ್ರರಂಗದಲ್ಲಿರುವ ತಂತ್ರಜ್ಙರು ಮತ್ತು ಗ್ರೂಪ್ ಡಿ ಸಿಬ್ಬಂದಿಯಲ್ಲಿ ಬಹುತೇಕರು ಅನ್ಯಭಾಷಿಕರು. ಬೇಕಾದ್ರೆ ಸಮೀಕ್ಷೆ ನಡೆಸಿ ನೋಡಿ.
ಇನ್ನು ಡಬ್ಬಿಂಗ್ ಚಿತ್ರಗಳಿಂದಾಗಿ ಜಗತ್ತಿನ ಯಾವುದೇ ಭಾಷೆ ಸಿನಿಮಾವನ್ನು ನಮ್ಮದೇ ಭಾಷೆಯಲ್ಲಿ ನೋಡುವಂತಾದರೆ ಅದಕ್ಕಿಂತ ಸಂತೋಷದ ಸಂಗತಿ ಬೇರಾವುದಿದೆ. ಬೇಕಾದ್ರೆ ಕೆಲವೊಂದು ಈ ಕೆಳಗಿನ ನಿಯಮಗಳನ್ನು ಪಾಲಿಸಬಹುದು.
1. ಡಬ್ಬಿಂಗ್ ಕನ್ನಡಿಗರ ಬ್ಯಾನರ್ ನಡಿಯಲ್ಲಿಯೇ ನಡೆಯಬೇಕು.
2. ಡಿಸ್ಟ್ರಿಬ್ಯೂಟರ್ಸ್ ನಮ್ಮವರೇ ಆಗಿರಬೇಕು.
3. ತಮಿಳು-ತೆಲುಗು ಚಿತ್ರರಂಗದ ನಿರ್ಮಾಪಕರು ಒಂದು ವೇಳೆ ಆ ಸಿನಿಮಾವನ್ನು ಕನ್ನಡದಲ್ಲಿ ಡಬ್ಬಿಂಗ್ ಮೂಲಕ ಬಿಡುಗಡೆ ಮಾಡಬೇಕಾದ್ರೆ, ಖಂಡಿತವಾಗಿ ಕೆಲವರನ್ನಾದರೂ ಕನ್ನಡ ಕಲಾವಿದರನ್ನು ಅದರಲ್ಲಿ ಬಳಸಿಕೊಳ್ಳಬೇಕು. ಉದಾ: ಮಣಿರತ್ನಂ ರವರ ರಾವಣ ಚಿತ್ರ. ಹಿಂದಿಯಲ್ಲಿ ಅಭಿಷೇಕ್ ನಟಿಸಿದರೆ, ತೆಲುಗು-ತಮಿಳಿನಲ್ಲಿ ವಿಕ್ರಮ್ ನಟಿಸಿದ್ದರು. ಉಪೇಂದ್ರರ ಸೂಪರ್ ಸಿನಿಮಾದಲ್ಲಿ ಸಾಧುಕೋಕಿಲ ಜೊತೆಗಿನ ಕಾಮಿಡಿ ಸನ್ನಿವೇಷಗಳಲ್ಲಿ, ತೆಲುಗಿನ ಹಾಸ್ಯನಟ ಆಲಿ ಹಾಗೂ ಪೊಲೀಸ್ ಪಾತ್ರದಲ್ಲಿ ತೆಲುಗಿನ ಮತ್ತೊಬ್ಬ ಪೋಷಕ ಕಲಾವಿದ ಅಭಿನಯಸಿದ್ದಾರೆ.
4. ಡಬ್ಬಿಂಗ್ ಶುರುವಾದ ಮೇಲೆ ಯಾವುದೇ ಕಾರಣಕ್ಕೂ ಅನ್ಯಭಾಷೆಯ ಚಿತ್ರಗಳು ಇಲ್ಲಿ ಪ್ರದರ್ಶನವಾಗದಂತೆ ನೋಡಿಕೊಳ್ಳಬೇಕು.
5. ಡಬ್ಬಿಂಗ್ ಚಿತ್ರಗಳ ಮೇಲೆ ತೆರಿಗೆ ವಿಧಿಸಿ, ನಮ್ಮ ಚಿತ್ರರಂಗದ ನೌಕರರ ಕಲ್ಯಾಣಕ್ಕಾಗಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಅವರ ಜೀವನಕ್ಕೆ ಭದ್ರತೆಯನ್ನು ಒದಗಿಸಿವುದು.
6. ಅನ್ಯಭಾಷೆಯ ಬಹುನಿರೀಕ್ಷಿತ ಚಿತ್ರಗಳನ್ನು ಇಲ್ಲಿ 5-10 ಥಿಯೇಟರ್ ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಬಾರದು.
ಇವು ಮಾತ್ರವಲ್ಲದೇ ಇದೇ ಸಂಬಂಧವಾಗಿ ಸರ್ಕಾರದ ವತಿಯಿಂದ ಅಗತ್ಯ ಅಧ್ಯಯನ ನಡೆಯಬೇಕು. ಚಿತ್ರರಂಗದ ಗಣ್ಯರೂ ಸಹ ಈ ವಿಷಯವಾಗಿ ಧನಾತ್ಮಕ ನಿಲುವನ್ನು ತಾಳಬೇಕು. ಇದರೊಂದಿಗೆ ಅನ್ಯಭಾಷೆಯ ಸಿನಿಮಾಗಳ ರೀತಿಯಲ್ಲಿಯೇ ನಾವೂ ಸಹ ಅವರಿಗೆ ಸವಾಲೆಸೆಯುವಂತಹ ಸಿನಿಮಾಗಳನ್ನು ಮಾಡುತ್ತೇವೆ ಎಂಬ ಗಟ್ಟಿ ಧೈರ್ಯಮಾಡಬೇಕು. ಉದಾ: ಮಲಯಾಳಂ ಚಿತ್ರರಂಗ ನಮ್ಮ ಚಿತ್ರರಂಗಕ್ಕಿಂತ ಎಷ್ಟೋ ಚಿಕ್ಕದಿದ್ದರೂ ಸಹ, ಕೇಲವೇ ವರ್ಷಗಳ ಹಿಂದೆ ಕೇವಲ ಶಕೀಲ ಚಿತ್ರಗಳಿಗೆ ಸೀಮಿತವಾಗಿದ್ದ ಅದರ ಮಾರುಕಟ್ಟೆ ಇವತ್ತು ಇಡೀ ಭಾರತ ತಿರುಗಿನೋಡುವಂತೆ ವಿಸ್ತರಿಸಿಕೊಂಡಿದೆ. ವರ್ಷಕ್ಕೆ ಕನಿಷ್ಟ 10 ಮಲಯಾಳಂ ಸಿನಿಮಾಗಳು , ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿವೆ ಅಂದರೆ ನೀವು ನಂಬಲೇಬೇಕು.
ಡಬ್ಗಿಂಗ್ ನ್ನು  ಮಲಯಾಳಂನವರು ಜೀರ್ಣೀಸಿಕೊಳ್ಳಬಹುದು ಅಂದರೆ ನಮ್ಮಿಂದ ಯಾಕೆ ಅಸಾಧ್ಯ.? ಅದೂ 7 ಜ್ಞಾನಫೀಠಗಳನ್ನು ಪಡೆದು ಇಡೀ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ಕರುನಾಡಲ್ಲಿ ಒಳ್ಳೆ ಕಥೆಗಾರರಿಲ್ಲವೇ..? ಸವಾಲೆಸೆಯುವಂತಹ ನಿರ್ದೇಶಕರಿಲ್ಲವೇ..? ತಂತ್ರಜ್ಞರಿಲ್ಲವೇ..? ಅಸಲಿಗೆ ಏನಿಲ್ಲ ಈ ನಾಡಲ್ಲಿ.!! ಎಲ್ಲವೂ ಇದ್ದು ಏನೂ ಇಲ್ಲವೆಂದು ರಾಷ್ಟ್ರಮಟ್ಟದಲ್ಲಿ ಕರುನಾಡಿಗೆ ಅವಮಾನಮಾಡಲು ನಿಂತಿದ್ದಾರ ಈ ನಮ್ಮ ಡಬ್ಬಿಂಗ್ ವಿರೋಧಿಗಳು ಅಂತ ಅನುಮಾನ ಬರುತ್ತಿದೆ.!
ಕನ್ನಡದ ಅನಿವಾರ್ಯತೆ ಇಲ್ಲಿ ಸೃಷ್ಠಿಯಾದಾಗ ಮಾತ್ರ ಕನ್ನಡಿಗರಿಗೆ ಬೆಲೆ. ಇಲ್ಲವಾದರೆ ತೀರಾ ಕಷ್ಟ ಕಷ್ಟ. ಉದಾ: ನನ್ನ ಕಾರ್ ಮೇಲೆ ಕನ್ನಡವನ್ನು ನೋಡಿ, ಒಬ್ಬ ತಮಿಳಿನವನು ನನಗಾಗಬೇಕಿದ್ದ  ಟೆಂಡರ್ ನ್ನು ಅವನ ಭಾಷೆಯವರಿಗೇ ದಯಪಾಲಿಸಿಬಿಟ್ಟ. ನಾನು ಯಾವ ರಾಜ್ಯದಲ್ಲಿದ್ದೀನಿ ಅಂತ ಆ ಕ್ಷಣಕ್ಕೆ ಅನುಮಾನವಾಗಿದ್ದು ನಿಜ.!! ಇನ್ನೂ ಎಷ್ಟು ದಿವಸ ಈ ತರಹದ ಅನುಮಾನಗಳಿಗೆ ಕನ್ನಡಿಗರು ಒಳಗಾಗಬೇಕೋ ತಿಳಿಯುತ್ತಿಲ್ಲ.
ಅನ್ಯಭಾಷೆಯ ಚಿತ್ರಗಳನ್ನು ನಮ್ಮದೇ ಭಾಷೆಯಲ್ಲಿ ನೋಡುವಂತಾದರೆ, ನಮ್ಮವರ ಮೇಲೆ ಅನ್ಯಭಾಷೆಯ ಪ್ರಭಾವ ಖಂಡಿತ ಕಡಿಮೆಯಾಗುತ್ತದೆ. ಅನ್ಯಭಾಷಿಕರಿಗೆ ಕನ್ನಡಕಲಿಯುವ ಅನಿವಾರ್ಯತೆ ಉಂಟಾಗುತ್ತದೆ. ಹೇಗೂ ನಮ್ಮ ಚಿತ್ರರಂಗದವರು ಅನ್ಯಭಾಷೆಯವರಿಗೆ ಸವಾಲೆಯೆಸುವಂತಹ ಚಿತ್ರಗಳನ್ನು ಮಾಡಿ, ದೇಶದ ದೃಷ್ಠಿಯನ್ನು ನಮ್ಮ ನಾಡಿನತ್ತ ಸೆಳೆಯುವುದು ಅಷ್ಟರಲ್ಲೇ ಇದೆ. ಕಾದು ಕಾದು ಸುಸ್ತಾಗಿದೆ.  ಡಬ್ಬಿಂಗಾದ್ರೂ ಮಾಡಿ, ಥಿಯೇಟರ್ ಗಳನ್ನು ಕನ್ನಡಕಲಿಕೆ ಕೇಂದ್ರಗಳನ್ನಾಗಿಸುವ ತುರ್ತು ಅರಿತುಕೊಳ್ಳಬೇಕು.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 03/12/2011 - 19:43

ಪ್ರಿಯ ಶ್ರೀನಿವಾಸ್,ಕನ್ನಡದಲ್ಲಿ ರಾಮಾಯ್ಣ ಮಹಾಭಾರತ ನೋಡಲು ಆಗದೇ ಹೊಗಿದ್ದಕ್ಕೆ ನಮ್ಮ ಉಮಾಶಂಕರಗೆ ಇರುವ ಆಳವಾದ ನೋವು ನಿಮಗೆ ಇದ್ದ ಹಾಗೆ ಕಾಣುವದಿಲ್ಲ. ಡಬ್ಬಿಂಗ್ ಬರಲಿ, ಒಮ್ಮೆ ನೀರಿಗೆ ಬಿದ್ದು ಈಸಿ ನೋಡೋಣ ಎನ್ನುವ ಅನಿಸಿಕೆಯಿದೆ ಎನಿಸುತ್ತದೆ.ನಿಮಗೆ ರೋಬೋಟ್ನಂಥಾ ಪರಭಾಷಾ ಚಿತ್ರಗಳ ವಿತರಣೆ ಹಕ್ಕು ತೆಗೆದುಕೊಂಡು ಅವನ್ನು ಆದಷ್ಟು ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರರಂಗದ ಗಣ್ಯರೇ ಎಷ್ಟು ನಿಯಮಗಳನ್ನು ಗಾಳಿಗೆ ತೂರುತ್ತಾರೆ ಎಂದು ತಿಳಿದಿದೆ ಎಂದುಕೊಂಡಿದ್ದೇನೆ. ಅಂತಹುದರಲ್ಲಿ ಒಂದು ಸಲ ಯಾವುದೇ ರೂಪದಲ್ಲಿ ಡಬ್ಬಿಂಗನ್ನು ಬಿಟ್ಟುಕೊಂಡರೂ ಅದು ಈಗಲೇ ಏಳುತ್ತ ಬೀಳುತ್ತ ಸಾಗಿರುವ ಕನ್ನಡ ಚಿತ್ರರಂಗವನ್ನು ಮುಗಿಸದೇ ಇರದು. ಅವಕಾಶ ಸಿಕ್ಕರೆ ಡಬ್ಬಿಂಗ್ ಇಂದು ನಿಯಮಗಳಡಿಯಲ್ಲಿ ನಡೆಯುತ್ತದೆ ನಾಳೆ ನಿಯಮಗಳಿಲ್ಲದೇ ಓಡುತ್ತದೆ. ಇನ್ನು ಮೊದಲು ಚಿತ್ರ ನಿರ್ಮಾಣ ಕಲೆಗಾಗಿ ನಿರ್ಮಿಸುವವರಿಗಾಗಿದ್ದರೆ, ಇಂದು ಕಾಸಿದ್ದವರೆಲ್ಲ ನಿರ್ಮಾಪಕರೇ. ಅಂತವರಿಗೆ ಡಬ್ ಮಾಡುವ ಕೋಲು ಕೊಟ್ಟು ಹೊಡೆಸಿಕೊಳುವ ಬುದ್ಧಿವಂತಿಕೆ ಮಾಡಬಾರದು ಎಂಬುದು ನನ್ನ ಅಂಬೋಣ.ಪ್ರಿಯ ಶಂಕರ್,ಕರ್ನಾಟಕದ ಪ್ರತೀ ಜಿಲ್ಲಾ ತಾಲ್ಲೋಕು ಕೇಂದ್ರಗಳಲ್ಲಿರುವ ೨ಡಿ ಮತ್ತು ೩ಡಿ
ಗ್ರಾಫಿಕ್ಸ್ ಗಳನ್ನು "ಕಲಿಸುವ" ಕೇಂದ್ರಗಳು; ತೊಂಬತ್ತರ ದಶಕದ ಅಪ್ಟೆಕ್, ಐಜಿಐ ಮುಂತಾದ
"ವಿಶ್ವವಿಖ್ಯಾತ" ತರಬೇತಿ ಕೇಂದ್ರಗಳ ಅಪರಾವತಾರಗಳು. ಮೊದಲಿನವು ಏನಾಗಿದ್ದವು ಎಂದು ನಿಮಗೆ ಅರಿವಿದ್ದರೆ ಇವು ಏನಾಗುತ್ತವೆ ಎಂದು ತಿಳಿಯುತ್ತದೆ. ಆದರೆ ನೀವಂದುಕೊಂಡಂತೆ ಕಲೆ ಕಲಿಸಲಿಕ್ಕೆ ಆಗುವದಿಲ್ಲ. ಇದ್ದರೆ ಬೆಳೆಯುತ್ತದೆ"ಕನ್ನಡಿಗರು ಉತ್ತಮ ಗುಣಮಟ್ಟದ, ಉತ್ತಮ ಕಥೆಗಳನ್ನು ಹೊಂದಿದ ಚಿತ್ರಗಳನ್ನು ಯಾವತ್ತೂ ತಿರಸ್ಕರಿಸಿಲ್ಲ." ಅನ್ನುವ ನೀವು ಭ್ರಮಾ ಲೋಕದಲ್ಲಿದ್ದೀರ. ಲಾಭ ಮಾಡುವ ದಾರಿ "ಉತ್ತಮ ಗುಣಮಟ್ಟ, ಉತ್ತಮ ಕಥೆ" ಅಷ್ಟೇ ಆಗಿದ್ದಿದ್ದರೆ ಅದನ್ನು ಅನುಸರಿಸದೇ ನಷ್ಟ ಮಾಡಿಕೊಳುವ ಪ್ರಯತ್ನ ಯಾರಾದರೂ ನಿರ್ಮಾಪಕರು ಮಾಡಿಯಾರೇ? ಹಾಗಿದ್ದಲ್ಲಿ ಪೋಲೀಸ್ ಸ್ಟೋರಿ ಉತ್ತಮ ಕಥೆ ಅಥವಾ ಗುಣಮಟ್ಟಕೋಸುಗ ಗೆದ್ದಿತ್ತೇ? ಮೈಲಾರಿಯಲ್ಲಿ ಏನಿತ್ತು?ರೇವಣ್ಣ.

ಉಮಾಶಂಕರ ಬಿ.ಎಸ್ ಶನಿ, 03/12/2011 - 20:57

ಪ್ರಿಯ ರೇವಣ್ಣನವರೆ,ಯಾವುದೇ ಒಂದು ಹೊಸ ಕಾಯಿದೆ ಕಾನೂನು ಕಟ್ಟಳೆಗಳು ರೂಪಕ್ಕೆ ಬಂದಾಗ ಅವುಗಳ ಸಾಧಕ-ಭಾದಕಗಳನ್ನು ಚರ್ಚಿಸಿ ಆ ಕಾಯಿದೆಗೆ ಒಂದು ರೂಪಕೊಟ್ಟ ನಂತರವಷ್ಟೇ ಅದು ಸ್ವೀಕಾರರ್ಹ. ಅದೇ ರೀತಿ ಡಬ್ಬಿಂಗ್ ಅನ್ನು ಸ್ವೀಕರಿಸುವ ಮುನ್ನಅವುಗಳ ಸಾಧಕ-ಭಾದಕಗಳ ಬಗ್ಗೆ ವಿಸ್ತೃತ ಚರ್ಚೆ ಅತ್ಯಗತ್ಯ. ಅದೇ ರೀತಿ ನೀವು ಹೇಳಿದಂತೆ ಡಬ್ಬಿಂಗ್ ಚಿತ್ರಗಳೇ ಗೆಲುವು ಸಾಧಿಸಿ ಕನ್ನಡ ಚಿತ್ರಗಳು ಮೂಲೆಗುಂಪಾಗುತ್ತವೆ ಎನ್ನುವ ವಾದ ಕೇವಲ ಸೂತ್ರವಿಲ್ಲದ ಗಾಳಿಪಟದ ವಾದದಂತಿದೆ ಎನಿಸುವುದಿಲ್ಲವೇ?ಹಾಗೇನಾದರೂ ಆಗಿದ್ದಲ್ಲಿ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲಿ ಬರೀ ಡಬ್ಬಿಂಗ್ ಚಿತ್ರಗಳೇ ಇದ್ದು ಇಷ್ಟು ಹೊತ್ತಿಗೆಅವುಗಳು ನಾಮಾವಷೇಶವಾಗಬೇಕಿತ್ತಲ್ಲವೇ? ಆದರೆ ಹಾಗಗಲಿಲ್ಲ ಬದಲಾಗಿ ಅಲ್ಲಿನ ಚಿತ್ರಗಳು ಅಲ್ಲಿ ಉತ್ತಮ ಚಿತ್ರಗಳೇ ನಿರ್ಮಾಣಗೊಳ್ಳುತ್ತಿವೆಯಲ್ಲವೇ? ಅಲ್ಲಿ ಡಬ್ಬಿಂಗ್ ಚಿತ್ರಗಳು ಹೀಗೆ ಬಂದು ಹಾಗೆ ಹೋಗುತ್ತವೆ, ಅಲ್ಲೂ ಕೂಡ ಡಬ್ಬಿಂಗ್ ಬೇಡಎಂದಿದ್ದರೆ ಪರಭಾಷಾ ಚಿತ್ರಗಳ ಹಾವಳಿಯನ್ನು ಹಳಿಯುತ್ತಾ, ಅವರ ಭಾಷಾಚಿತ್ರಗಳ ಬಗ್ಗೆ ಒಂದಷ್ಟು ಅನುಕಂಪದ ಪ್ರತಿಭಟನೆಗಳಲ್ಲಿ ವೃತಾಃ ಕಾಲಹರಣ ಮಾಡಬೇಕಾಗುತ್ತಿತ್ತೋ ಏನೋ? ಡಬ್ಬಿಂಗ್ ನಿಂದಾಗಿ ಅಲ್ಲಿನ ಜನಗಳು ಎಲ್ಲಾ ಚಿತ್ರಗಳನ್ನು ಅವರ ಭಾಷೆಯಲ್ಲಿಯೇ ನೋಡುವಂತಾಗುತ್ತದೆ ಜೊತೆಗೆ ಮನಸ್ಸಿಗೆ ಮುದನೀಡುವ ಸನ್ನಿವೇಶಗಳುಬಂದಾಗ ಅರ್ಥಮಾಡಿಕೊಂಡು ಖುಷಿಪಡಬಹುದು. ಇಲ್ಲದಿದ್ದಲ್ಲಿ ಭಾಷೆ ಗೊತ್ತಿರುವವರು ಆ ಪರಭಾಷಾ ಚಿತ್ರ ನೋಡುತ್ತಾ ನಗುವಿನ ಸನ್ನಿವೇಶಗಳು ಬಂದಾಗ ಅವರ ಜೊತೆ ನಾವೂ ಸಹ 'ಹ್ಹಿ ಹಿಈಹ್ಹಿ ಹ್ಹಿಹ್ಹೀಈಈಈ.' ಎಂದು ಹಲ್ಲು ಕಿರಿದು ನಂತರ ಪಕ್ಕದವರನ್ನು 'ಏನಾಯ್ತು?' ಎನ್ನುವಾಗ ಆಗುವ ಅಭಾಸಭರಿತ ಅವಮಾನಕ್ಕಿಂತ ಡಬ್ಬಿಂಗ್ ಚಿತ್ರಗಳು ಒಳ್ಳೆಯದಲ್ಲವೇ? ಇನ್ನು "ಕನ್ನಡಿಗರು ಉತ್ತಮ ಗುಣಮಟ್ಟದ, ಉತ್ತಮ ಕಥೆಗಳನ್ನು ಹೊಂದಿದ ಚಿತ್ರಗಳನ್ನು ಯಾವತ್ತೂ ತಿರಸ್ಕರಿಸಿಲ್ಲ." ಎನ್ನುವ ಮಾತನ್ನು ನಾನು ಈಗಲೂ ಘಂಟಾಘೋಷವಾಗಿ ಹೇಳುತ್ತೇನೆ. ನಿಮಗೆ ತಿಳಿದಿರುವಂತೆ ಯಾವುದೇ ಒಂದು ಚಿತ್ರ ಗೆಲ್ಲಲು ಉತ್ತಮ ಪ್ರಚಾರವೂ ಅತ್ಯಗತ್ಯ. ಅದಿಲ್ಲದಿದ್ದರೆ ಆಸ್ಕರ್ ವಿಜೇತ ಚಿತ್ರವನ್ನೂ ಗೆಲ್ಲಿಸುವುದು ಕಷ್ಟ ಸಾಧ್ಯ ಅಲ್ಲವೇ? ನೀವು ಉದಾಹರಿಸಿದ ಆ ಎರಡೂ ಚಿತ್ರಗಳೂ ಕೆಟ್ಟಕಥೆಯಿದ್ದರೂ ಗೆದ್ದಿದ್ದು ಪ್ರಚಾರದಿಂದ. ಇಂದಿನ ಸಿನಿಮಾಗಳಿಗೆ ಅದೇ ಭೂಷಣ ಅಲ್ಲವೇ?ನಿಮ್ಮಉಮಾಶಂಕರ 

ರಾಜೇಶ ಹೆಗಡೆ ಶನಿ, 03/12/2011 - 22:34

ಹಾಯ್ ಉಮಾಶಂಕರ್ ಅವರೇ,
ಚಿಂತನೆಗೆ ಹಚ್ಚುವ ಲೇಖನ ಬರೆದದ್ದಕ್ಕಾಗಿ ವಂದನೆಗಳು.
ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಮಾಡಬೇಕೆ ಅನ್ನುವ ಚರ್ಚೆ ವಾಸ್ತವದ ತಳಹದಿಯ ಮೇಲೆ ಮಾಡಬೇಕಿದೆ.
ಹಿಂದೆ ನಾವು ಹಿಂದಿಯಲ್ಲಿ ರಾಮಾಯಣ ಮತ್ತು ಮಹಾಭಾರತ ನೋಡಿದೆವು. ಇವೆರಡು ಸೇರಿ ನೂರಾರು ಎಪಿಸೋಡುಗಳಾಗುತ್ತವೆ! ಆ ಸಮಯದಲ್ಲಿ ನಮ್ಮ ಊರಲ್ಲಿ ಗಲ್ಲಿ ಗಲ್ಲಿಗಳಲ್ಲಿ ಟಿವಿಯಲ್ಲಿ ಇದನ್ನು ಕನ್ನಡಿಗರು ನೋಡುತ್ತಿದ್ದರು! ಈಗ ಯಾವುದೇ ಗ್ರಾಮಕ್ಕೆ ಬೇಕಾದರೂ ಹೋಗಿ ನೋಡಿ. ಅಲ್ಲಿನ ಕನ್ನಡಿಗರ ಪುಟ್ಟ ಮಕ್ಕಳು ಡಿಟಿಎಚ್ ಮೂಲಕ ಕಾರ್ಟೂನ್ ನೆಟ್ ವರ್ಕ್, ಪೋಗೋ, ಡಿಸ್ನಿ ಮೊದಲಾದ ಚಾನೆಲ್ ನೋಡುತ್ತಿದ್ದಾರೆ. ಅವರಲ್ಲಿ ಇದು ಇಂಗ್ಲೀಷ್ ಅಥವಾ ಹಿಂದಿ ಬಗ್ಗೆ ಉತ್ಕಟ ಆಸಕ್ತಿ ಮೂಡಿಸುತ್ತದೆ. ಈಗಿನ ಮಕ್ಕಳು ಗೆಳೆಯರಿಂದ ಇದರ ಬಗ್ಗೆ ಅರಿತು ನೋಡುತ್ತಿದ್ದಾರೆ. ಇನ್ನು ಅನಿಮೇಶನ್ ಚಿತ್ರಗಳಂತೂ ಮಕ್ಕಳು ಹಟ ಮಾಡಿ ಪಾಲಕರನ್ನು ಕರೆದುಕೊಂಡು ಹೋಗಿ ನೋಡುತ್ತವೆ.
ಈ ಪೀಳಿಗೆ ಅಥವಾ ಇವರ ಮುಂದಿನ ಪೀಳಿಗೆ ಮುಂದೆ ಪಾಲಕರು ಮನೆಗೆ ಕನ್ನಡ ಮತ್ತು ಇಂಗ್ಲೀಷ್ ಪೇಪರ್ ಎರಡೂ ತರಿಸಿದರೂ ಇಂಗ್ಲೀಷ್ ಪೇಪರ್ ಮಾತ್ರ ಓದುವ ಸಾಲಿಗೆ ಸೇರಬಹುದು ಎಂಬುದು ನನ್ನ ಅನಿಸಿಕೆ.
ನಾಳೆ ನನ್ನ ಮಗನು ಬಯಸಿದರೆ ಆತನಿಗೆ ನೋಡ ಬೇಡ ಎಂದು ಹೇಳಲು ನನಗೆ ಸಾಧ್ಯವಾಗದು.  ಆದರೆ ಅವು ಕನ್ನಡದಲ್ಲಿದ್ದರೆ ಅದನ್ನು ನಾನು ಅವನಿಗೆ ಕನ್ನಡದಲ್ಲೇ ತೋರಿಸಲು ಸಾಧ್ಯವಾಗುತ್ತದೆ.
ಇದು ಮಕ್ಕಳ ವಿಚಾರ ಆದರೆ ಇನ್ನು ಯುವಕರು, ಯುವತಿಯರಲ್ಲಿ ಬೇರೆ ಭಾಷೆಯ ಉತ್ತಮ ಚಿತ್ರಗಳು ಜನಪ್ರಿಯವಾಗಿವೆ. ಡಿಟಿಎಚ್, ಡಿವಿಡಿ ಮಾಧ್ಯಮಗಳು ಜನರ ಮನೆಗೆ ಬೇರೆ ಭಾಷೆಯ ಮನೋರಂಜನೆಯನ್ನು ತಲುಪಿಸುತ್ತಿವೆ. ಇನ್ನು ವಲಸೆಗೆ ಬಂದ ಜನರ ಬಗ್ಗೆ ಮಾತೇ ಬೇಡ. ಇಲ್ಲಿ ತಮ್ಮ ಭಾಷೆಯ ಪ್ರೇಮ ಮುಂದುವರಿಸಿದ್ದಾರೆ.
ನಿಯಂತ್ರಿತ ರೀತಿಯಲ್ಲಿ ಡಬ್ಬಿಂಗ್ ಗೆ ಅನುಮತಿ ನೀಡಿದರೆ ಕನ್ನಡಕ್ಕೆ ಉತ್ತಮ ಎಂಬುದು ನನ್ನ ಅನಿಸಿಕೆ. ಒಂದು  ಒಕ್ಕೂಟ ಯಾವ ಚಿತ್ರ/ಚಾನೆಲ್/ಧಾರಾವಾಹಿ ಡಬ್ಬಿಂಗ್ ಆಗಬೇಕು ಎಂಬುದನ್ನು ನಿಯಂತ್ರಿಸಬೇಕು. ಅವರ ಅನುಮತಿ ಇಲ್ಲದಿದ್ದರೆ ಡಬ್ಬಿಂಗ್ ಆಗಕೂಡದು. ಏನಂತೀರಾ? ಇದರಿಂದ ಕನ್ನಡ ಚಿತ್ರಕ್ಕೆ ಆದಾಯ ಕಡಿಮೆ ಆಗದು. ಕನ್ನಡ ಚಿತ್ರವನ್ನೇ ನೋಡದ ಪ್ರೇಕ್ಷಕ ಸಮೂಹ ಕನ್ನಡದಲ್ಲಿ ಅವರ ಭಾಷೆಯ ಡಬ್ಬಿಂಗ್ ಚಿತ್ರ ನೋಡುತ್ತಾ ಕ್ರಮೇಣ ಉತ್ತಮ ಕನ್ನಡ ಚಿತ್ರ ಬಂದಾಗ ಅದನ್ನು ನೋಡಬಹುದು.
ಡಬ್ಬಿಂಗ್ ನ ವಿರೋಧ ಒಂದು ಕಾಲಘಟ್ಟದ ನಂತರ ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನು ನೋಡುವ ಪ್ರಮಾಣವನ್ನು ಹೆಚ್ಚಿಸಬಹುದು. ಆದರೆ ಕನ್ನಡಿಗರು ಈ ಡಬ್ಬಿಂಗ್ ವಿವಾದಕ್ಕೆ ತಲೆಕೆಡಿಸಿಕೊಂಡಂತಿಲ್ಲ. ಆಯಾ ಭಾಷೆಯ ಚಿತ್ರಗಳನ್ನು ಅದೇ ಭಾಷೆಯಲ್ಲಿಯೇ ನೋಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಬೇಕಾದಲ್ಲಿ ನಿಮ್ಮ ಮನೆಯ ಹತ್ತಿರ ಇರುವ ಡಿವಿಡಿ ಶಾಪ್ ಗೆ ಹೋಗಿ ವಿಚಾರಿಸಿ ನೋಡಿ. ಯಾವ ಸಿಡಿಗಳು ಹೆಚ್ಚು ಖರ್ಚಾಗುತ್ತಿದೆ ಅಂತಾ. ಹುಂ ಇದಕ್ಕೆ ಕೆಲವೆಡೆ ಅಪವಾದ ಇರಬಹುದು. ಆದರೆ ಹೆಚ್ಚು ಕಡೆ ಇದೇ ಟ್ರೆಂಡ್ ಕಾಣಿಸುತ್ತದೆ.
 ರಾಜ್ಯಾದ್ಯಾಂತ ಟ್ರೆಂಡ್ ಅನ್ನು ಅಧ್ಯಯನ ಮಾಡಿ ಮುಂದಿನ ಕ್ರಮ ಕೈಗೊೞಬೇಕಾಗಿದೆ.  ಒಮ್ಮೆ ಮಕ್ಕಳು ಹಾಗೂ ಜನ ಆಯಾ ಭಾಷೆಗೆ ಒಗ್ಗಿ ಹೋದ ಮೇಲೆ ಕನ್ನಡಕ್ಕೆ ಡಬ್ಬಿಂಗ್ ಮಾಡಲಾರಂಭಿಸಿದರೆ ಈಗ ಎಲ್ಲರೂ ಇಂಗ್ಲೀಷ್ ಮೊಬೈಲ್ ಗೆ ಒಗ್ಗಿ ಹೋದ ಮೇಲೆ ಬಂದ ಕನ್ನಡ ಮೊಬೈಲ್ ಗಳು ವಿಫಲವಾದ ರೀತಿಯಲ್ಲೇ ಆ ಪ್ರಯತ್ನಗಳು ಸೋಲುತ್ತವೆ. ಇವು ನನ್ನ ಅನಿಸಿಕೆಗಳು ಮಾತ್ರ.

ಉಮಾಶಂಕರ ಬಿ.ಎಸ್ ಶುಕ್ರ, 03/18/2011 - 22:09

ಪ್ರಿಯ ರಾಜೇಶ್ ಸರ್,"ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಮಾಡಬೇಕೆ ಅನ್ನುವ ಚರ್ಚೆ ವಾಸ್ತವದ ತಳಹದಿಯ ಮೇಲೆ ಮಾಡಬೇಕಿದೆ" ಎನ್ನುವ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಅದೇ ರೀತಿ ಇಂದು ಡಿ.ಟಿ.ಎಚ್ ಮತ್ತು ಕೇಬಲ್ ಟಿ.ವಿ.ಗಳಹಾವಳಿಯಿಂದಾಗಿ ಇಂದು ಎಲ್ಲರೂ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನೋಡುವುಂತಾಗಿದೆ ಮತ್ತು ನೋಡುತ್ತಿದ್ದಾರೆ ಕೂಡ. ಆದರೆ ಆ ಕಾರ್ಯಕ್ರಮಗಳು ನಿಜಕ್ಕೂ ಮನ ಮುಟ್ಟುವುದು ನಮ್ಮ ಸ್ವತಃ ಮಾತೃಭಾಷೆಯಲ್ಲಿ ನೋಡಿದಾಗ ಮಾತ್ರ ಆ ಕಾರ್ಯಕ್ರಮದ ಭಾವಾರ್ಥ ಮನಸ್ಸಿಗೆ ನಾಟುವುದು ನಂತರವೇ ಅದನ್ನು ಆಸ್ವಾದಿಸಲು ಸಾಧ್ಯವಾಗುವುದು. ನಮಗೆ ಪರಭಾಷೆಯ ಮೇಲೆ ಎಷ್ಟೇ ಹಿಡಿತವಿದ್ದರೂ ಆ ಭಾಷೆಯನ್ನು ನಾವು ಓದಿದಾಗ, ಕೇಳಿದಾಗ ನಮ್ಮ ಮನದ ಮೂಲೆಯಲ್ಲೆಲ್ಲೋ ಅದು ನಮ್ಮ ಮಾತೃಭಾಷೆಗೆ ತರ್ಜುಮೆಗೊಂಡ ನಂತರವಷ್ಟೇ ನಾವು ಅದೇ ಭಾಷೆಯಲ್ಲಿ ಪ್ರತಿಕ್ರಿಯುಸುವುದಕ್ಕೆ ಸಾಧ್ಯವೆನ್ನುವುದು ನನ್ನ ಅಭಿಪ್ರಾಯ. ನಾವು ನಮ್ಮ ಮಕ್ಕಳನ್ನಾಗಲಿ, ಮನೆಯವರನ್ನಾಗಲಿ ಒಳ್ಳೆಯ ಕಾರ್ಯಕ್ರಮಗಳು ಪರಭಾಷೆಯಲ್ಲಿ ಬಂದಾಗ ಅವುಗಳನ್ನು ನೋಡುವುದನ್ನು ತಡೆಹಿಡಿಯಲು ಸಾಧ್ಯವಿಲ್ಲ ಎನ್ನುವ ನಿಮ್ಮ ಮಾತನ್ನು ನಾನೂ ಅನುಮೋದಿಸುತ್ತೇನೆ. ಪ್ರಿಯ ರಾಜೇಶ್ ಸರ್,"ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಮಾಡಬೇಕೆ ಅನ್ನುವ ಚರ್ಚೆ ವಾಸ್ತವದ ತಳಹದಿಯ ಮೇಲೆ ಮಾಡಬೇಕಿದೆ" ಎನ್ನುವ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಅದೇ ರೀತಿ ಇಂದು ಡಿ.ಟಿ.ಎಚ್ ಮತ್ತು ಕೇಬಲ್ ಟಿ.ವಿ.ಗಳಹಾವಳಿಯಿಂದಾಗಿ ಇಂದು ಎಲ್ಲರೂ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನೋಡುವುಂತಾಗಿದೆ ಮತ್ತು ನೋಡುತ್ತಿದ್ದಾರೆ ಕೂಡ. ಆದರೆ ಆ ಕಾರ್ಯಕ್ರಮಗಳು ನಿಜಕ್ಕೂ ಮನ ಮುಟ್ಟುವುದು ನಮ್ಮ ಸ್ವತಃ ಮಾತೃಭಾಷೆಯಲ್ಲಿ ನೋಡಿದಾಗ ಮಾತ್ರ ಆ ಕಾರ್ಯಕ್ರಮದ ಭಾವಾರ್ಥ ಮನಸ್ಸಿಗೆ ನಾಟುವುದು ನಂತರವೇ ಅದನ್ನು ಆಸ್ವಾದಿಸಲು ಸಾಧ್ಯವಾಗುವುದು. ನಮಗೆ ಪರಭಾಷೆಯ ಮೇಲೆ ಎಷ್ಟೇ ಹಿಡಿತವಿದ್ದರೂ ಆ ಭಾಷೆಯನ್ನು ನಾವು ಓದಿದಾಗ, ಕೇಳಿದಾಗ ನಮ್ಮ ಮನದ ಮೂಲೆಯಲ್ಲೆಲ್ಲೋ ಅದು ನಮ್ಮ ಮಾತೃಭಾಷೆಗೆ ತರ್ಜುಮೆಗೊಂಡ ನಂತರವಷ್ಟೇ ನಾವು ಅದೇ ಭಾಷೆಯಲ್ಲಿ ಪ್ರತಿಕ್ರಿಯುಸುವುದಕ್ಕೆ ಸಾಧ್ಯವೆನ್ನುವುದು ನನ್ನ ಅಭಿಪ್ರಾಯ. ನಾವು ನಮ್ಮ ಮಕ್ಕಳನ್ನಾಗಲಿ, ಮನೆಯವರನ್ನಾಗಲಿ ಒಳ್ಳೆಯ ಕಾರ್ಯಕ್ರಮಗಳು ಪರಭಾಷೆಯಲ್ಲಿ ಬಂದಾಗ ಅವುಗಳನ್ನು ನೋಡುವುದನ್ನು ತಡೆಹಿಡಿಯಲು ಸಾಧ್ಯವಿಲ್ಲ ಎನ್ನುವ ನಿಮ್ಮ ಮಾತನ್ನು ನಾನೂ ಅನುಮೋದಿಸುತ್ತೇನೆ. 

ಕೆಎಲ್ಕೆ ಶನಿ, 03/19/2011 - 13:42

ಈ ವಿಶಯದ ಕುರಿತು ನಿಮ್ಮೊಂದಿಗೆ ವಾದಿಸುವದು ಬಹಳ ಇದೆ. ಸಮಯವಿದ್ದಾಗ ಬರೆಯುತ್ತೇನೆ.

ಉಮಾಶಂಕರ ಬಿ.ಎಸ್ ಶನಿ, 03/19/2011 - 21:12

 ಕೆ ಎಲ್ಕೆ ಸರ್ನಿಮ್ಮೊಡನೆ ಚರ್ಚಿಸಲು ಕಾತುರನಾಗಿದ್ದೇನೆನಿಮ್ಮಉಮಾಶಂಕರ ಬಿ.ಎಸ್

ಪುಂಡರ ಗಂಡ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/28/2011 - 17:10

ಪ್ರಿಯ ಉಮಾಶಂಕರ್ನಿಮ್ಮ ಲೇಖನ ಸಕಾಲಿಕವಾಗಿದೆ, ಆದ್ರೆ ನಿಮ್ಮ ಲೇಖನ ಸ್ವಲ್ಪ ಏಕಮುಖ ಸಂಚಾರದಂತಿದೆಏಕೆಂದರೆ ಡಬ್ಬಿಂಗ್ ನಿಂದಾಗಿ ಬರೀ ಚಿತ್ರರಂಗವಷ್ಟೇ ಅಲ್ಲ ಮೆಘಾ ಧಾರಾವಾಹಿಗಳೂಹರಿದು ಬರುತ್ತವೆ. ಈಗಿರುವ ಧಾರಾವಾಹಿಗಳನ್ನು ನೋಡಿ ಸಹಿಸಿಕೊಳ್ಳುವುದೇ ಕಷ್ಟ,ಅವುಗಳು ಪ್ರಾರಂಭವಾದ ಗಳಿಗೆಯಿಂದ ಮುಗಿವುವವರೆಗೂ ನಮ್ಮ ಕೈಗೆ ಟಿ.ವಿ.ರಿಮೋಟು ಬರುವುದೇ ಇಲ್ಲ. ಇನ್ನು ಡಬ್ಬಿಂಗ್ ಬಂದರೆ ದೇವರೇ ಗತಿ.ಆದ್ರೆ ಸಿನಿಮಾಕ್ಕೆ ಡಬ್ಬಿಂಗ್ ಇರಲಿ, ದರಿಧ್ರವಾಹಿಗಳೆಗೆ ಬೇಡ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/19/2011 - 20:31

ಗೀತಾ ಕೃಷ್ಣ ರವರ ಕಾಫೀಬಾರ್ ಉತ್ತರ ಕರ್ನಾಟಕದಲ್ಲಿ ಡಬ್ಬ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗಿದೆ ಅಂತಾ ಕೇಳಿದ್ದೇನೆ ನಿಜಾನ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.