Skip to main content

ಮಾತುಗಾರ ಮಲ್ಲಣ್ಣ ನೀತಿಗಾತಿ ನಿಂಗವ್ವ

ಬರೆದಿದ್ದುFebruary 2, 2011
1ಅನಿಸಿಕೆ

ಚಿಕ್ಕಂದಿನಲ್ಲಿ ಎಂದೋ ಒಮ್ಮೊಮ್ಮೆ ನಿದ್ದೆ ಬಾರದಿದ್ದಾಗ ನನ್ನ ಅಮ್ಮ ತನಗೆ ಗೊತ್ತಿರುವ ನೀತಿ, ಪುರಾಣ, ಹಾಸ್ಯ ಕಥೆಗಳನ್ನು ಹೇಳಿ ಮಲಗಿಸುತ್ತಿದ್ದರು. ಹಾಗೆ ಕೇಳಿದ ಒಂದು ಜಾನಪದ ಕಥೆ ನಿಮಗಾಗಿ ಜಾನಪದ ಭಾಷೆಯಲ್ಲೇ ಬರೆಯಲು ಯತ್ನಿಸಿದ್ದೇನೆ. ನಿಮಗೂ ಹಿಡಿಸಬಹುದು ಎಂದುಕೊಂಡಿದ್ದೇನೆ.
ಒಂದಾನೊಂದು ಊರಿನಲ್ಲಿ ಮಲ್ಲಣ್ಣ ಅಂತ ಒಬ್ಬ ಇದ್ದ. ಅವ್ನು ಸಿಕ್ಕಾಪಟ್ಟೆ ಮಾತಾಡ್ತಿದ್ದ, ಯಾವ ಪ್ರಶ್ನೆ ಕೇಳುದ್ರೂ ಉತ್ತರ ಅಂವುಂತವು ಸಿಕ್ತಿತ್ತು. ಅದುಕ್ಕೆ ಅವ್ನ ಜನಗೊಳೆಲ್ಲಾ ತುಂಬ ಪ್ರೀತಿಯಿಂದ ’ಮಾತಿಗಾರ ಮಲ್ಲಣ್ಣ’ ಅಂತ ಕರೀತಿದ್ರು. ಅವ್ನಪ್ಪ ಯಾವತ್ತೋ ಅಂವ ಚಿಕ್ಕೋನಿದ್ದಾಗ ತೀರೋಗ್ಬುಟ್ಟ. ಅವ್ನ ಅವ್ವನೇ ಅವ್ನ ಸಾಕಿ ದೊಡ್ಡೋನು ಮಾಡಿದ್ಲು. ಹಿಂಗಿದ್ದ ಮಲ್ಲಣ್ಣಂಗೆ ಮದ್ವೆ ವಯ್ಸು ಬಂತು. ಅವ್ನ ಅವ್ವ ಪಕ್ಕದಳ್ಳಿಲಿದ್ದ ನೀತಿಗಾತಿ ನೀಲವ್ವನ ಮಗಳು ನಿಂಗವ್ವನನ್ನ ತಂದು ಮದ್ವೆ ಮಾಡಿದ್ಲು. ಅವ್ಳೇನು ಕಮ್ಮಿ ಕುಳಾ ಅಲ್ಲ ಒಬ್ಳೇ ಮಗಳು, ದೊಡ್ಡ ಆಸ್ತಿ ಅಪ್ಪ ಇಲ್ಲ, ಬಾಳ ಒಳ್ಳೆಯೋಳು. ಅವ್ಳಪ್ಪ ನಾಕ್ ಜನಕ್ಕೆ ನೀತಿ ಹೇಳ್ತಿದ್ದ ಅದುಕ್ಕೆ ಇವ್ಳನ್ನ ಊರ್ನೋರೆಲ್ಲಾ "ನೀತಿಗಾತಿ ನಿಂಗವ್ವ" ಅಂತಿದ್ರು. ಹೆಸ್ರುಗೆ ತಕ್ಕಂಗೆ ಅವ್ಳೂ ನೀತಿ ಬೋದ್ನೆ ಮಾಡೋಳೆಯಾ.
ನಿಂಗಣ್ಣುಂಗೆ ವತ್ತಾರಿಂದ ಸಂದ್ಗಂಟ ಗದ್ದೇತವೇ ಗೆಯ್ಯುದಾಗದು, ಮದ್ದಿನ್ಕೆ ನಿಂಗಿ ಇಟ್ಟ ಗದ್ದೆತಕೆ ತರೋಳು, ಸಂದೆ ಹಟ್ಟಿಗೋಗಿ ದನ್ಗೊಳ್ಗೆ ನೀರು ನಿಡಿ ನೋಡೋದ್ರಲ್ಲೇ ಟೇಮಾಗೋಗದು. ಹಂಗಾಗಿ ಮನೇಲಿ ಅವ್ವನ ಯೋಗಕ್ಸೇಮ ಸರಿಯಾಗಿ ವಿಚಾರ್ಸಕಾಗಿರ್ನಿಲ್ಲ.
 
ಆದ್ರೆ ನಿಂಗವ್ವ ಬಾಳಾ ಚತ್ರಿ ಮನೇಲಿದ್ದ ಅತ್ತೆಗೆ ವತ್ತುಗ್ಸರ್ಯಾಗಿ ಇಟ್ಟೂ ಇಲ್ಲಾ!ಬಟ್ಟೂ ಇಲ್ಲಾ!! ಮನೆ ಕೆಲ್ಸಾನೆಲ್ಲಾ ಆ ಹಣ್ಣು ಮುದ್ಕಿ ಕೈಲೇ ಮಾಡ್ಸೋಳು!
ತಾನು ಮಾತ್ರ ಕಾಲ್ಮೇಲ್ ಕಾಲ್ ಹಾಕ್ಕಂಡು ’ಜೂರತ್ತು’ ತೋರ್ಸೋಳು. ಇದ್ನೆಲ್ಲಾ ಮಗುನತ್ರನೋ ಬ್ಯಾರೆಯವ್ರತಾವೋ ಹೇಳ್ಕಂಡ್ರೆ ಮನೆ ಮರ್ಯಾದಿ ಹೊಯ್ತುದಲ್ಲಾ ಅಂತ ಅವ್ಡು ಕಚ್ಕಂಡಿದ್ಲು ಮಲ್ಲಣ್ಣರವ್ವ. ಇಂಗಿದ್ದ ಮಲ್ಲಣ್ಣುಂಗೆ ಒಬ್ಬ ಮಗ ಹುಟ್ದ. ಗಂಡ ಇದ್ದಾಗ ಚಿಣುಮಿಣ್ಕಿಯಂಗೆ ತೆಪ್ಪಗಿದ್ದು ಅತ್ತೇನ ಚೆನ್ನಾಗಿ ಬವ್ಣಿಸ್ತಿದ್ದೋಳು, ಮಲ್ಲಣ್ಣ ಅತ್ಲಾಗೋಗದೇ ತಡ ತನ್ನ ವರಾತ ಸುರು ಹಚ್ಕೋತಿದ್ಲು. ಬಯ್ಯದೇನ್ಕೇಳಿ, ಅತ್ತೆ ಸ್ವಾಟೆಗೆ ತಿವಿಯದೇನ್ಕೇಳಿ, ಅವ್ಳುಗೆ ಒದಿಯಾದೇನ್ಕೇಳಿ ಒಂದಲ್ಲ ಎರ್ಡಲ್ಲಾ ಇವ್ಳಕಾಟ. ದಿನಾ ತರೇವಾರಿ ಸಿಕ್ಸೆ ಕೊಡೋಳು ಅತ್ತೆಗೆ. ಇಂಗೇ ಒಂದಿನ ಕೆಲ್ಸಾ ಮಾಡಿ ಸುಸ್ತಾಗಿ ಸೊಸೆ ಕೈಲಿ ಬೈಗ್ಳ, ಒದೆ ತಿನ್ಕಂಡು ಸುಸ್ತಾಗಿ ಮಲ್ಗಿದ್ದ ಮಲ್ಲಣ್ಣರವ್ವುಂಗೆ ತನ್ನ ಮೊಮ್ಮಗ ಅಳೋದು ಕೇಳುಸ್ನಿಲ್ಲ!! ಆದ್ರೆ ಅಲ್ಲೇ ಎಲ್ಲೋ ಅಡ್ಗೆ ಕ್ವಾಣೆವಳೀದ್ದ ನಿಂಗವುಂಗೆ ಅದ್ರ ಸದ್ದು ಕೇಳ್ಸಿ ಈಚ್ಗೆ ಬಂದೋಳೆ
 
ಆದ್ರೆ ನಿಂಗವ್ವ ಬಾಳಾ ಚತ್ರಿ ಮನೇಲಿದ್ದ ಅತ್ತೆಗೆ ವತ್ತುಗ್ಸರ್ಯಾಗಿ ಇಟ್ಟೂ ಇಲ್ಲಾ!ಬಟ್ಟೂ ಇಲ್ಲಾ!! ಮನೆ ಕೆಲ್ಸಾನೆಲ್ಲಾ ಆ ಹಣ್ಣು ಮುದ್ಕಿ ಕೈಲೇ ಮಾಡ್ಸೋಳು!ತಾನು ಮಾತ್ರ ಕಾಲ್ಮೇಲ್ ಕಾಲ್ ಹಾಕ್ಕಂಡು ’ಜೂರತ್ತು’ ತೋರ್ಸೋಳು. ಇದ್ನೆಲ್ಲಾ ಮಗುನತ್ರನೋ ಬ್ಯಾರೆಯವ್ರತಾವೋ ಹೇಳ್ಕಂಡ್ರೆ ಮನೆ ಮರ್ಯಾದಿ ಹೊಯ್ತುದಲ್ಲಾ ಅಂತ ಅವ್ಡು ಕಚ್ಕಂಡಿದ್ಲು ಮಲ್ಲಣ್ಣರವ್ವ. ಇಂಗಿದ್ದ ಮಲ್ಲಣ್ಣುಂಗೆ ಒಬ್ಬ ಮಗ ಹುಟ್ದ. ಗಂಡ ಇದ್ದಾಗ ಚಿಣುಮಿಣ್ಕಿಯಂಗೆ ತೆಪ್ಪಗಿದ್ದು ಅತ್ತೇನ ಚೆನ್ನಾಗಿ ಬವ್ಣಿಸ್ತಿದ್ದೋಳು, ಮಲ್ಲಣ್ಣ ಅತ್ಲಾಗೋಗದೇ ತಡ ತನ್ನ ವರಾತ ಸುರು ಹಚ್ಕೋತಿದ್ಲು. ಬಯ್ಯದೇನ್ಕೇಳಿ, ಅತ್ತೆ ಸ್ವಾಟೆಗೆ ತಿವಿಯದೇನ್ಕೇಳಿ, ಅವ್ಳುಗೆ ಒದಿಯಾದೇನ್ಕೇಳಿ ಒಂದಲ್ಲ ಎರ್ಡಲ್ಲಾ ಇವ್ಳಕಾಟ. ದಿನಾ ತರೇವಾರಿ ಸಿಕ್ಸೆ ಕೊಡೋಳು ಅತ್ತೆಗೆ. ಇಂಗೇ ಒಂದಿನ ಕೆಲ್ಸಾ ಮಾಡಿ ಸುಸ್ತಾಗಿ ಸೊಸೆ ಕೈಲಿ ಬೈಗ್ಳ, ಒದೆ ತಿನ್ಕಂಡು ಸುಸ್ತಾಗಿ ಮಲ್ಗಿದ್ದ ಮಲ್ಲಣ್ಣರವ್ವುಂಗೆ ತನ್ನ ಮೊಮ್ಮಗ ಅಳೋದು ಕೇಳುಸ್ನಿಲ್ಲ!! ಆದ್ರೆ ಅಲ್ಲೇ ಎಲ್ಲೋ ಅಡ್ಗೆ ಕ್ವಾಣೆವಳೀದ್ದ ನಿಂಗವುಂಗೆ ಅದ್ರ ಸದ್ದು ಕೇಳ್ಸಿ ಈಚ್ಗೆ ಬಂದೋಳೆ
"ಏನೇ ರಂಡೇ!! ನನ್ಮಗ ಅರ್ಚಾದೆ ಕೇಳ್ದೋಳಂಗ್ಬಿದ್ದಿದ್ದೀಯಲ್ಲಾ!! ನಿಂಗ್ಬರ್ಬಾರ್ದ್ಬರ! ನಿಮಗ್ಳು ಸವ್ತಿ ಮಗಾ ಆಗಿದ್ರೆ ಇಂಗೇ ಬುಟ್ಬುಡ್ತಿದ್ದೋ? ಎದ್ಮಗಾ ನೋಡ್ಕಮ್ಮೀ" ಅಂತ ಕೂಗಾಡಿದ್ಲು.
"ಅಯ್ಯೋ!! ತಾಯಿ! ದಿನಾ ನೋಡ್ಕತಿರ್ನಿಲ್ವೆ, ಇವತ್ಯಾಕೋ ಆಯ್ತಿಲ್ಲಾ ವಸಿ ನೀನೇ ನೋಡ್ಕವ" ಅಂತ ಗ್ವಾಗರ್ದ್ಲು ಮುದ್ಕಿ.
"ಎಷ್ಟೇ ಮುದ್ಕಿ ಸೊಕ್ಕು ನಿಂಗೆ, ನಂಗೇ ಹಿಂದಿರಿಕಂಡು ಜವಾಬೇಳಂಗಾದ, ನನ್ಸವ್ತಿ ಮುಂಡೇ, ತಡೀ ನಿಂಗ್ಮಾಡ್ತೀನಿ" ಅಂದೋಳೇ ಅಡ್ಗೆ ಮನೆಯಿಂದ ಈರುಳ್ಳಿ, ಬೊಳ್ಳುಳ್ಳಿ, ಮೆಣ್ಸಿನ್ಕಾಯಿ, ಒನ್ಕೆ ತಂದೋಳೇ
"ಲೇ! ನನ್ಸವ್ತಿ ಅತ್ತೆ ಅನ್ನುಸ್ಕೊಂಡೋಳೆ! ಏಳ್ಲೇ ಮ್ಯಾಕೆ! ಮೆಣ್ಸಿನ್ಕಾಯಿ ಗೆಜ್ಜೆ ಮಾಡಿ ಕಾಲುಕಟ್ಕಂಡು, ಬೆಳ್ಳುಳ್ಳಿ ವಾಲೆ ಮಾಡಿ ಕಿವಿಗಾಕ್ಕಂಡು, ಈರುಳ್ಳಿ ಸರಾ ಮಾಡಿ ಕತ್ಗಾಕಂಡು, ಒನ್ಕೆ ತಾಳ ಹಾಕ್ಕಂಡು ಕುಣೀ ಬಾಮ್ಮಿ!! ಆಗ್ಲೆ ಅಳ್ತಿರೋ ನನ್ಮಗ ಅಳು ನಿಲ್ಸಾದು" ಅಂತಾ ಆ ಮುದ್ಕಿ ಸೊಂಟುದ್ಮೇಲೆ ಜಾಡಿಸಿ ಒದ್ಲು.
’ಇನ್ನೂ ಅಂಗೇ ಇದ್ರೆ ಈ ನನ್ಸೊಸೆ ತಾಟ್ಗಿತ್ತಿ ಬುಟ್ಟಾಳೆ!! ಎಂಗಾರ ಮಾಡಿ ಮಗ ಮಲ್ಲಣ್ಣುಂಗೆ ಇವ್ಳು ಕೊಡೋ ಕಾಟವ ತಿಳ್ಸುಬುಡ್ಬೇಕು! ಇನ್ನ ನನ್ಕೈಯಾಗೆ ತಡೆಯಕಾಗಾಕಿಲ್ಲ’ ಎನ್ನುತ್ತಾ ಮುದುಕಿ ಮೆಣ್ಸಿನ್ಕಾಯಿ ಗೆಜ್ಜೆ ಮಾಡಿ ಕಾಲುಕಟ್ಕಂಡು, ಬೆಳ್ಳುಳ್ಳಿ ವಾಲೆ ಮಾಡಿ ಕಿವಿಗಾಕ್ಕಂಡು, ಈರುಳ್ಳಿ ಸರಾ ಮಾಡಿ ಕತ್ಗಾಕಂಡು, ಒನ್ಕೆ ತಾಳ ಹಾಕ್ಕಂಡು ಕುಣೀಯಾಕೆ ಸುರುಮಾಡುದ್ಲು. ಇವ್ಳದ್ರುಷ್ಟಾನೋ, ನಿಂಗಿ ದುರಾದ್ರುಷ್ಟಾನೋ ಅವತ್ತು ಮಲ್ಲಣ್ಣ ವತ್ನಂತೆ ಮದ್ದೀನುಕ್ಮುಂಚೆ ಮನೆಗ ಬಂದ.
ಇನ್ನೇನು ಬಾಗ್ಲು ಬಡೀಬೇಕು ಮನೆಯೊಳಗಿಂದ ಅವ್ವನ ಕೀರಾಟ ಕ್ಯೋಳಿ ಯಾಕೋ ಅನ್ಮಾನ ಬಂದು, ಮನೆಮ್ಯಾಕ್ಕತ್ತಿ ಮಾಡಿ ಕಿಂಡಿಯಿಂದ ಇಣ್ಕಿ ನೋಡ್ತಾನೆ, ನಿಂಗಿ ತನ್ನವ್ವುನ್ನ ಮೆಣ್ಸಿನ್ಕಾಯಿ ಗೆಜ್ಜೆ ಮಾಡಿ ಕಾಲುಕಟ್ಕಂಡು, ಬೆಳ್ಳುಳ್ಳಿ ವಾಲೆ ಮಾಡಿ ಕಿವಿಗಾಕ್ಕಂಡು, ಈರುಳ್ಳಿ ಸರಾ ಮಾಡಿ ಕತ್ಗಾಕಂಡು, ಒನ್ಕೆ ತಾಳ ಹಾಕ್ಕಂಡು ಕುಣಿಸ್ತಾವ್ಳೆ!! ಎಲ್ಲಿಲ್ಲುದ ಕ್ವಾಪ ಬಂದು ಇವತ್ತು ನಿಂಗಿ ಕತೆ ಮುಗಿಸ್ಬುಡುವ ಅನ್ಕಂಡು ಮನೆ ಮ್ಯಾಲಿಂದ ಕ್ಯಳಕ್ಕೆ ನೆಗ್ದು, ಚಕ್ಡಿ ಸಿಗಾಕಿದ್ದ ಮಚ್ಚ ಕೈಗ್ತಗಂಡ. ತಕ್ಸಣ ಅವ್ನ ಮನ್ಸು ’ದುಡುಕ್ಬ್ಯಾಡ’ ಅಂತ ಎಚ್ಚರ್ಸ್ತು
" ಮೇಯ್! ನಿಂಗಿ! ನಾನಿಲ್ದಾಗ ನಮ್ಮವ್ವುನ್ನ ಎಂಗ್ನೋಡ್ಕತಿದ್ದೀ ಅನ್ನೋದು ಗೊತ್ತಾಯ್ತು, ’ಮುಯ್ಯಿಗ್ಮುಯ್ಯಿ’ ಅನ್ವಂಗೆ ನಿಮ್ಮವ್ವುನ್ನ ತಲೆ ಬೋಳ್ಸಿ ಏಳೂರಲ್ಲಿ ಮೆರ್ವಣ್ಗೆ ಮಾಡ್ಸಿ ನಿನ್ಕೈಲೇ ಏಳ್ಮನೆ ಬೂದೀನ ನಿಮ್ಮವ್ವುಂಗೆ ಎರ್ಚಿಸಿ, ನಿಮ್ಮವ್ವುಂಗೆ ನಿನ್ಕೈಲಿ ಪೊರ್ಕೆ ಸೇವೆಮಾಡ್ಸಿ, ನಿಂಗೆ ನಿಮ್ಮವ್ವುನ್ಕೈಲಿ ಹುಣ್ಸೆ ಚಬ್ಬೆ ಏಟ ಉರ್ನೋರ್ಮುಂದೆ ಒಡಿಸ್ನಿಲ್ಲಾಂದ್ರೆ ನನ್ನೆಸ್ರ ’ಮಲ್ಲಣ್ಣ’ ಅಂತಾ ಕರೀಬ್ಯಾಡ ಕಣಮ್ಮಿ" ಅಂತ ಸಪ್ತಾ ಮಾಡಿ ಮನ್ಸಿಗೆ ಸಮಾಧಾನ ಮಾಡ್ಕಂಡು
"ಮೇಯ್! ನಿಂಗಿ ಬಾಗ್ಲು ತೆಗ್ಯಮ್ಮೀ!!" ಅಂತ ಬಾಗ್ಲು ಬಡ್ದ. ನಿಂಗಿ ಎದೆ ಧ್ವಸ್ಗುಟ್ಟೋಯ್ತು!!
"ಎಂದೂ ಇಲ್ದ ನನ್ಗಂಡ ಇವತ್ಯಾಕೆ ಇಷ್ಟು ಜಲ್ದಿ ಬಂದ!!" ಅನ್ಕಳೋಷ್ಟ್ರಲ್ಲಿ ತಿರ್ಗ ಮಲ್ಲಣ್ಣ ಬಾಗ್ಲು ಬಡ್ದ
"ಎಷ್ಟೋತ್ತಮ್ಮೀ !! ಬಾಗ್ಲು ತಗ್ಯಾಕೆ!" ಎಂದ
"ನೀವ ಬತ್ತೀರಿ ಆಂತಾ ಗೊತ್ತಿರ್ನಿಲ್ಲಾ!! ಈಗ ನೀರುಗ್ಕುಂತೀವ್ನಿ, ತಡೀರಿ ವಸಿ ಬಂದೆ" ಅಂದ್ಲು.
"ಅವ್ವ! ಎಲ್ಲ್ಗೋದ್ಲಮ್ಮಿ? ಅವ್ಳುಗೇ ತಗ್ಯಾಕ್ಯೋಳು" ಅಂದ. ನಿಂಗೀಗೆ ಏನ್ಮಾಡ್ಬೇಕು ಅಂತಾ ತಿಳೀನಿಲ್ಲಾ.
"ಇಲ್ಕಣೀ! ಅತ್ಯವ್ವುಂಗೆ ಮೈ ಉಸಾರಿಲ್ಲಾ!! ಮಲ್ಗವಳೆ" ಅಂತ ಬುಡಾಂಗು ಬುಟ್ಳು.
’ಎಂತಾ ಸುಳ್ಳೇಳಿಯೇ ರಂಡೇ, ತಡ್ಕೊ ನಿಂಗೆ ಸರ್ಯಾಗ್ಮಾಡ್ತೀನಿ’ ಅನ್ಕಂಡು ಜಗ್ಲಿ ಮ್ಯಾಲೆ ಕುಂತ್ಕಂಡ. ಅಷ್ಟ್ರಲ್ಲಿ ಅತ್ತೆ ತಾವ್ಕೆ ಬಂದ ನಿಂಗವ್ವ
"ಮೇಯ್! ಬೋಸುಡಿ! ಸರ್ಯಾಗ್ಕೇಳುಸ್ಕೊ! ನಿನ್ಮಗುಂತವೇನಾರ ಬಾಯ್ಬುಟ್ಟೋ ನಿನ್ಮಗ ಯಾವಾಗ್ಲೂ ಹಟ್ಟಿ ವಳ್ಗೇ ಇರಲ್ಲ ಅವ್ನು ಅತ್ಲಾಗೋದಾಂದ್ರೆ ನಿನ್ಪ್ರಾಣ ಸಿವ್ನು ಪಾದ ಸೇರ್ಕಂಡಗೆಯ ಲೆಕ್ಕ" ಅಂತ ತನ್ನತ್ತೆನ ಹೆದ್ರುಸುದ್ಲು. ’ಆಯ್ಕ ತಿನ್ನೊ ಕೋಳಿ ಕಾಲ್ಮುರುದ್ರು ಅನ್ವಂಗೆ ನಾನ್ಯಾಕೆ ನನ್ಮಗುಂತಾವೇಳಿ ಪ್ರಾಣ ಕಳ್ಕಬೇಕು ಅನ್ಕಂಡು ತೆಪ್ಗಾದ್ಲು ಆ ಪಾಪದ ಮುದ್ಕಿ.
ಸಾನ ಮಾಡೋಳಂಗೆ ತಲ್ಗೆ ಬಟ್ಟೆ ಸುತ್ಕಂಡು ಬಂದು ಬಾಗ್ಲು ತೆಗೆದ್ಲು ನಿಂಗವ್ವ. ಒಳಕ್ಕೆ ಬಾಳಾ ಗಾಬ್ರಿಯಾದೊನಂಗೆ ಒಳಕ್ಬಂದ ಮಲ್ಲಣ್ಣ
"ಮ್ಯೇಯ್!! ನಿಂಗಿ" ಅಂದ ಅದ್ಕೇಳುದ್ದೇ ತಡ ’ಅಯ್ಯೋ ಇವ್ನ ಮನೆಕಾಯ್ವಾಗ ಆಚೆಕಡೆ ನಿಂತ್ಕಂಡು ಏನಾರ ಕ್ಯೊಳಿಸ್ಕಂಡ್ನೊ ಎಂಗೆ’ ಅಂತ  ಎದೆವಳ್ಗೆ ಅವ್ಲಕ್ಕಿ ಕುಟ್ದಂಗಾಯ್ತು.
"ಏನ್ಕಣೀ?" ಅಂದ್ಲು.
"ವಸಿ ಧೈರ್ಯ ತಂದ್ಕಮಿ” ಅನ್ನದ ಕ್ಯೊಳಿ ವಸಿ ಸಮಾಧಾನ ಆದ್ರು ಇನ್ನೇನೋ ಇರ್ಬೇಕು ಅಂತ ಗಾಬ್ರಿಯಾಯ್ತು
"ಈಗ್ತಾನೆ, ನಿಮ್ಮೂರ ಮಾದಣ ಸಿಕ್ಕಿದ್ದ......ನಿಮ್ಮವ್ವುಂಗೆ......" ಅಂತೀಳಿ ಸುಮ್ಕೆ ಅವ್ಳ ಮಖನೋಡ್ತಾ ನಿಂತ್ಗಂಡ.
"ಏನಂದ ಮಾದಣ್ಣ, ಅದೇನೇಳ್ಕಣಿ..........." ಅಂದ್ಲು.
"....ಏನಿಲ್ಲ... ನಿಮ್ಮವ್ವುಂಗೆ ಏಳೂರ್ಗಾಳಿ ಮೆಟ್ಕಂಡಿದ್ದಂತೆ... ಅದ್ಕೆ ಗದ್ತವಿಂದ ಓಡಬಂದೆ.. ವಸಿ ಪಂಚೆ ತತ್ತಾ, ನಾನೋಗಿ ನೋಡ್ಕಂಡ್ಬತ್ತೀನಿ." ಅಂತ ಅವ್ಸುರ್ದಲ್ಲಿ ಓಡೋದ.
ಇತ್ಲಾಗೆ ಅತ್ತೇ ಮನ್ಗೆ ಬಂದ ಅಳಿನ ನೋಡಿ ಅತ್ತೆಗೆ ಸಂತೋಸ ಆದ್ರೂ, ಏನೂ ಯೋಳ್ದೆ ನನ್ನಳೀಮಯ್ಯ ಯಾಕ್ಬಂದ ಅನ್ಕಂಡು.
"ಏನಳಿಯಂದ್ರೆ ಚೆಂದಾಕಿದ್ದೀರಾ?" ಅನ್ವಷ್ಟ್ರಲ್ಲೇ.
" ಅಯ್ಯೋ ಬುಡಿ ಅತ್ತೆ, ನಂಗೇನಾದದು ಉಣ್ಕತಿನ್ಕಂದು ಗುಂಡ್ಕಲ್ಲಂಗಿವ್ನಿ, ಆಗಿರಾದೆಲ್ಲಾ ನಿಂಮಗುಳ್ಗೆಯಾ..."
"ಏನಾಯ್ತು ಅಳೀಯಂದ್ರೆ... ಎಂಗೌಳೆ.." ಅಂತಾ ಬಡ್ಕಳಾಕೆ ಸುರು ಮಾಡ್ಬುಟ್ಳು
"ಬಡ್ಕಳವಂತದೇನಾಗಿಲ್ಲ.. ಬಾಣ್ತಿ ಅಲ್ವೇ.. ವಸಿ ಸನ್ನಿ ಹಿಡ್ದೊಳಂಗಾಡ್ತಾವ್ಳೆ ಅಷ್ಟೇಯಾ..." ಅಂದ
" ಅಂಗಾರೆ ಏನ್ಮಾಡ್ಬೇಕು ಈಗ ..?" ಅಂತ ಕ್ಯೊಳುದ್ಲು ಅತ್ತೆ.
" ಹಿಡ್ಕಂಡಿರಾದು ಸಾಮಾನೆ ಸನ್ನಿ ಅಲ್ವಂತೆ, ಅದ್ಕೆ ದಾರೀಲಿ ಬತ್ತ ಜೋಯಿಸ್ರು ತಕೆ ಹೋಗ್ಬಂದೆ, ಇವ್ಳ್ಗಿಡಿದೀರಾದು ಅವ್ವನ ಸನ್ನಿಯಂತೆ, ಅದೋಗ್ಬೇಕು ಅಂದ್ರೆ, ಅವ್ಳ ಹೆತ್ತವ್ವ ಅಂದ್ರೆ ನೀವು, ವಸಿ ಸ್ರಮ ಪಡ್ಬೇಕು ಅಷ್ಟೆಯಾ" ಅಂದ
" ಇರೋಳೊಬ್ಮಗ್ಳು ಅವ್ಳು ಸುಕುಕ್ಕೆ ಏನ್ಮಾಡಾಕೂ ನಾ ತಯಾರು" ಅಂತ ದೈರ್ಯ ಯೋಳುದ್ಲು, ದೈರ್ಯ ತಗಂಡ ಮಲ್ಲಣ್ಣ
" ಏನಿಲ್ಲಾ!! ಅದ್ನಿಮ್ಕೈಲಾಗಲ್ಲ ಬುಡಿ.." ಅಂದ
" ಕಚ್ಚೆ ಕಟ್ಕಂಡು ಮೆರ್ಯದಾಗ್ಲಿ, ಕತ್ತೆ ಉಚ್ಚೇನಾದ್ರೂ ಕುಡ್ದು ನನ್ಮಗ್ಳು ಗುಣಾ ಮಾಡೇನು, ನೀವು ಯೋಚ್ನೆ ಮಾಡ್ಬೇಡಿ ಯೋಳಿ" ಅಂತ ಗ್ವಾಗರುದ್ಲು.
" .. ಓ!! ಇರ್ಲಿ ಬುಡಿ ಅತ್ಲಾಗೆ ಅತ್ಯವ್ವ, ಕಷ್ಟವೋ ಸುಖ್ವೋ ಕಟ್ಗಂಡ್ಮೇಲೇ ಅನ್ಸರುಸ್ಕಬೇಕು, ಹೆಂಗೋ ನನ್ಕರ್ಮ ನಾ ಅನ್ಬವ್ಸೇನು, ನಿಮ್ಗ್ಯಾಕ್ಯೋಳಿ ಆ ತೊಂದ್ರೆ...."ಅಂತ ವಸಿ ಎಳ್ದಾಡ್ದ. ಅತ್ತೆ ಪಿತ್ತ ವಸಿ ನೆತ್ತಿಗೇರ್ತು.
 "ನೋಡಿ ಅಳೀದೇವ್ರೇ, ನೀವೀಗ್ಯೋಳ್ನಿಲಾಂದ್ರೆ ನಾ ಸುಮ್ಕಿರಲ್ಲಾ ಅಷ್ಟೇಯಾ !! " ಅಂದ್ಲು.. ಇನ್ನುವೆ ಸತಾಯ್ಸಾದು ಬ್ಯಾಡಾ ಅನ್ಕಂಡ ಮಲ್ಲಣ್ಣ
"ನಿಮ್ಮಗ್ಳುಗೆ ಹಿಡ್ದಿರಾದು ಅಂತಿಂತಾ ಸಾಮಾನೆ ಸನ್ನಿಯಲ್ಲ, ಏಳೂರ ಸ್ಮಸಾನ ಸಾಡೇ ಸನ್ನಿಯಂತೆ..... ಅದ್ಬುಡ್ಬೇಕಂದ್ರೆ ಅವ್ಳೆತ್ತವ್ವ ಅಂದ್ರೆ ನೀವು ಜಡೆಯಿಲ್ದಂಗೆ ತಲೆಯ ನುಣ್ಗೆ ಬೋಳ್ಸಕಂಡು, ಮೈತುಂಬ ಬರೀ ಬೇವುನ್ಸೊಪ್ಪ ಸುತ್ಗಂಡು, ಮೂರ್ಮುಂಡೇರ್ಮನೆ ಬೂದೀನ ತಕ್ಕಂಡು, ತಮ್ಟೆ ಸದ್ನೊಂದ್ಗೆ ಜೋಡ್ಗತ್ತೆ ಸಾರೋಟ್ಮೇಲೆ ನಿಂತ್ಗಂಡು, ಊರೂರ್ಮೇಲೆ ಕುಣ್ಕಂಡು, ನಿಮ್ಮಗ್ಳ ಊರೆಬ್ಬಾಗ್ಲಲ್ಲಿ ನಿಲ್ಲಿಸ್ಕಂಡು, ಬೂದಿ ಎರ್ಚಿ, ಮುಸ್ಸಂದುಗ್ಮುಂಚೆ ಬೇವುನ್ಬಡ್ಕೆಲಿ ಬಡುದ್ರೆ ಇನ್ನೇಳೇಳ್ ಜನ್ಮುಕ್ಕೂ ಆ ಸನ್ನಿ ಬರಲ್ವಂತೆ ಅತ್ತ್ಯವ್ವ.... ಅಂಗಂತ ನಮ್ಮೂರ ತಂಬ್ಡಪ್ಪ ಯೋಳ್ದ. ಏನೇ ಆದ್ರೂ ನೀವು ನನ್ನತ್ತೆ ಅಂದ್ರೆ ನಮ್ಮವ್ವುನ ಸಮಾನ, ನೀವು ಬ್ಯಾರೆ ಅಲ್ಲ ನಮ್ಮವ್ವ ಬ್ಯಾರೆ ಅಲ್ಲ, ನಿಮ್ಮಗ್ಳುಗೆ ಹಿಡ್ಕಂಡಿರೂ ಸನ್ನಿ ಅವ್ಳ ಜೀವ ತಗುದ್ರೂ ಪರ್ವಾಗಿಲ್ಲಾ, ಅವ್ಳುಕೊಟ್ಟಿರೋ ಮಗಿನ್ಮಕ ನೋಡ್ಕಂಡು ಮರೀಬೋದು, ಆದ್ರೆ ನಂಗೆಣ್ಕೊಟ್ಟು ಕಣ್ಕೊಟ್ದೇವ್ರ್ಗೆ ಸಮಾ ಆಗೀರೋ ನಿಮ್ಮುನ್ನ ಅವ್ಮಾನ ಮಾಡಾದು ಯಾವ ನ್ಯಾಯ ಬುಡಿ ಅತ್ಯವ್ವ, ನನ್ಕರ್ಮ ನಾ ಅನ್ಬವ್ಸೇನು" ಅಂತ ಒಂದೇ ಉಸುರ್ಗೆ ವದ್ರಿ ಸುಮ್ಕಾದ.
"ಇಷ್ಟೇಯೇ ಅಳಿಯಂದ್ರೆ ಮಾಡ್ಬೇಕಾಗಿರಾದು, ನೀವೇನು ತಲೆ ಕೆಡಿಸ್ಕಬೇಡಿ, ನಿಮ್ಗೆ ನಮ್ಯಾಲೆ ಎಷ್ಟು ಪ್ರೀತಿ ಅದೇ ಅನ್ನಾದು ನಮ್ಗೇನು ಇಡೀ ಹತ್ತಳ್ಳೀಗೇ ಗೊತ್ತು, ನೀವೋಗಿ ಅದೇನು ತಯಾರಿ ಬೇಕೋ ತಾಡೂಡ್ಮಾಕಳಿ, ಮುಸ್ಸಂದುಗ್ಮುಂದೆ ನಿಮ್ಮೂರೆಬ್ಬಾಗ್ಲುತಾಕೆ ಬತ್ತೀನಿ, ನನ್ಮಗ್ಳು ಕರ್ಕಂಡು ನೀವು ಬನ್ನಿ, ಅದ್ಯಾವ ಸನ್ನಿ ಇದ್ದಾದು ನಾನು ನೋಡೇ ಬುಡ್ತೀನಿ" ಅಂತ ಧೈರ್ಯ ಯೋಳಿ ಅಳಿಯಿನ್ನ ಕಳ್ಗುದ್ಲು.
ಎದ್ನೋ ಬಿದ್ನೋ ಅನ್ಕಂಡು ಮಲ್ಲಣ್ಣ ಅವ್ನ ಮನೆಗೋಡ್ಬಂದ ಒಂದೇ ಉಸ್ರುಗೆ
"... ಮ್ಯೇಯ್ ನಿಂಗಿ!!... " ಅಂತಾ ಬಾಗ್ಲು ಬಡ್ದ, ’ನಮ್ಮವ್ವುನ್ಗೇನಾಯ್ತೋ ಅಂತ’ ಇಟ್ನು ಉಣ್ದೆಯ ತಲೇ ಮ್ಯಾಲೆ ಕೈಯೊತ್ಗಂಡು ಕುಂತಿದ್ದ ನಿಂಗೀಗೆ ಗಂಡನ ಸದ್ಕೇಳುದ್ದೇ ತಡ ಒಂಟೋಗಿದ್ ಜೀವ ಬಂದಂಗಾಯ್ತು.
" ಏನ್ಕಣಿ, ಅವ್ವೆಂಗವ್ಳೆ?" ಅಂತ ಅತ್ಕಂಡು ಕ್ಯೋಳುದ್ಲು.
"ಏನ್ಯೋಳ್ಲಮ್ಮಿ ನಿಮ್ಮವ್ವುನ್ಕತೆಯಾ? ಆ ಸಿವ್ನೆ ಕಾಪಾಡ್ಬೇಕು" ಅಂತ ಅಳ್ತಾ ಕೂತ್ಕಂಡ, ಗಂಡ ಅಳಾದ್ನೋಡಿ ನಿಂಗೀಗೆ ಅಳ ತಡೀಯಾಕ್ಕಾಗ್ನಿಲ್ಲ.
" ನೀವಳಾದ್ನಿಲ್ಸಿ, ಅದೇನಾಯ್ತು ಅಂತೇಳ್ದೆವೋದ್ರೆ, ಒಡೋಗಿ ಇತ್ಲು ಬಾವಿಗೆ ನೆಗ್ದುಬುಟ್ಟೇನು? ಅದೇನಾಯ್ತೇಳ್ಕಣೀ?" ಅಂತ ಜೋರಾಗಳಾಕ್ಸುರುಮಾಡುದ್ಲು.
"ಎಂಗ್ಯೋಳ್ಲಮ್ಮೀ? ಬೂದಿ ಗಾಳಿಮೆಟ್ಗಂಡು, ಬೋಳ್ತಲೆಮಾಡ್ಕಂಡು, ಮೈತುಂಬ ಬರೀ ಬೇವುನ್ಸೊಪ್ಪ ಸುತ್ಗಂಡು, ತಮ್ಟೆ ಸದ್ನೊಂದ್ಗೆ ಜೋಡ್ಗತ್ತೆ ಸಾರೋಟ್ಮೇಲೆ ನಿಂತ್ಗಂಡು, ಊರೂರ್ಮೇಲೆ ಕುಣ್ಕಂಡು ಇತ್ಲಾಗೆ ಬತ್ತಾವ್ಳೆ ಕಣಾಮ್ಮಿ, ಇದ್ನೆಲ್ಲಾ ನೋಡಾಕೆ ಆ ದೇವ್ರು ನನ್ನಿನ್ನೂ ಬದುಕ್ಸವ್ನಲ್ಲಪ್ಪ, ಸಿವ್ನೆ, ಅಷ್ಟೊಳ್ಳೆ ಅತ್ತೆಗೆ ಇಂತಾ ಗಾಳಿ ಮೆಟ್ಗಬಾರ್ದಿತ್ತು " ಅಂತ ಅವ್ಳಿಂತ ಹೆಚ್ಗೆ ಗೋಳಾಡ್ದ.
" ಅಯ್ಯೋ ಸಿವ್ನೆ ನಮ್ಮವ್ವುಂಗೆ ಬರ್ಬಾದವೆಲ್ಲಾ ಬಂದವಲ್ಲಪ್ಪ ಸಿವ್ನೆ, ಈಗೇನ್ಮಾಡಾದೋ ನಮ್ಮಪ್ಪ" ಅಂತಾ ಎದೆ ಬಾಯಿ ಬಡ್ಕಂಡು ಒದ್ದಾಡಾಕ್ಸುರುಮಾಡುದ್ಲು.
" ಸಮಾದಾನ ಮಾಡ್ಕಮೀ, ಸಮಾದಾನ ಮಾಡ್ಕೋ, ನಿಮ್ಮವ್ವುಂಗೆ ಗಂಡ್ಮಕ್ಳಿಲ್ದಿದ್ರೆನಂತೆ, ನಾನಿಲ್ವ ಎಲ್ಲಾನು ಸರಿ ಮಾಡ್ತೀನಿ, ನೀ ಅಳ್ಬ್ಯಾಡ" ಅಂತ ತಲೆ ಸವ್ರುದ.
"ಎಂಗ್ಸಮಾದಾನಿಸ್ಕಳಾದೇಳ್ಕಣಿ, ಏನಾರ ಮಾಡಿ ನಮ್ಮವ್ವುನ್ನ ಸರಿ ಮಾಡ್ಕಣಿ" ಅಂತ ಗ್ವಾಗರದ್ಲು.
" ಅಂಗೆ ದಾರೀಲ್ಬತ್ತಾ, ಜೋಯಿಸ್ರು, ತಂಬ್ಡಪ್ಪ ಇಬ್ರುನ್ನೂ ನೋಡ್ಕಂಡು, ಏನ್ಮಾಡುದ್ರೆ ಸರಿವೋದಾದು ಅಂತ ಕೇಳ್ಕಬಂದೀವ್ನಿ ಕಣಮ್ಮೀ" ಅಂದ
" ಅದೇನೇಳ್ಕಣಿ, ನಮ್ಮವ್ವುಂಗೆ ನಾ ಏನ್ಮಾಡಾಕು ತಯಾರು " ಅಂದ್ಲು
" ಇನ್ನೇನಿಲ್ಲಾ, ನಿನ್ನಣೇತುಂಬಾ ಕುಂಕುಮವ ಬಳ್ಕಂಡು, ಮೊಣ್ಕಾಲ್ಕಂಟ ಎಂಟ್ಗಜ್ದ ಕೆಂಪ್ಸೀರೆ ಉಟ್ಗಂಡು, ತಲೆ ಕೂದ್ಲ ಗಾಳಿಗ್ಬುಟ್ಟು, ಮೂರ್ಮನೆಯಿಂದ ಮೋಟಂಚಿ ಬರ್ಲ ತಕ್ಕಂಡು, ಮುಸ್ಸಂದುಗ್ಮುಂಚೆ, ಮುಂಬಾಗ್ಲಲಿ, ನಿಮ್ಮವ್ವುನ ಮಖ ತಲೆ ಕೆರುದ್ರೆ, ಮುಂದ್ಲು ಜಲ್ಮುಕ್ಕೂ ತಿರ್ಗಿ ಬರ್ದಂಗೋದದಂತೆ. ಇದೆಲ್ಲಾ ನಿನ್ಕೈಲಾಗಲ್ಲ ಬುಡಮ್ಮೀ, ಅದೂ ಅಲ್ದೆಯಾ, ಎತ್ತವ್ವುಂಗೆ ಮಗ್ಳು ಬರ್ಲಲಿ ಒಡುದ್ರೆ, ಜಗ ಏನಂದಾದು, ಇದೆಲ್ಲಾ ಆಗು ಮಾತಲ್ಲ ತಗೀ. ಬಂದ್ಕರ್ಮ ಎಂಗೋ ನೀಸ್ಕಳವ" ಅಂತ ಗೋಳಾಡ್ದ.
"ಇಷ್ಟೇಯೇ, ನಮ್ಮವ್ವ ಗುಣಾಆಗಾಕೆ ನಾ ಏನಾರಾ ಮಾಡೇನು!! ನೀವೇನು ಬಾದೆ ಪಟ್ಗಬ್ಯಾಡ್ಕಣಿ, ನಮ್ಮವ್ವೆಲ್ಲವ್ಳೇಳ್ಕಣಿ" ಅಂದ್ಲು ನಿಂಗಿ.
"ಮ್ಯೇಯ್!! ಇನ್ನೊಸಿ ಯೋಚ್ನೆಮಾಡಮಿ, ಮೆಟ್ಗಂಡಿರೋ ಗಾಳಿ ಒದಾದೋ ಬುಟ್ಟಾದೋ ಯಾರ್ಗೊತ್ತು, ಆದ್ರೆ ನೀ ಇಂಗೆಲ್ಲಾ ಮಾಡಾದು ನಂಗ್ಸರಿ ಕಾಣಾಕಿಲ್ಕಣಮಿ" ಅಂದ. ನಿಂಗಿಗೆ ಎಲ್ಲಿಲ್ದ ಕ್ಯಾಣ ಬಂದ್ಬುಡ್ತು.
" ಅಲ್ಕಣೀ, ನಿಮ್ಮವ್ವುಂಗೇನಾರ ಇಂಗೆ ಆಗಿದ್ರೆ ನೀವೇನಾರ ಬುಟ್ಬುಡೋರಾ? ನಾನಂತು ಅಂಗ್ಮಾಡಿ ನಮ್ಮವ್ವುಂಗ್ಮೆಟ್ಗಂಡಿರೋ ಗಾಳಿ ಬುಡ್ಸೋಳೇಯಾ, ಈಗ ನಮ್ಮಎಲ್ಲವ್ಳೆ? ಅಷ್ಟ್ಯೋಳ್ಕಣಿ" ಅಂತ ತಾಕೀತ್ಮಾಡುದ್ಲು.
"ಏಳೂರ್ಕುಣ್ಕಂಡು, ಮುಸ್ಸಂದ್ಗೆಮುಂದಾಗಿ, ಊರ್ಬಾಗ್ಲುಗೆ ಬಂದ್ರೂ ಬರ್ಬೋದು" ಅಂದ.
ಮುಸ್ಸಂದೆ ಆಯ್ತಾ ಬಂತು ಅತ್ಲಿಂದ ಮಲ್ಲಣ್ನತ್ತೆ ಜಡೆಯಿಲ್ದಂಗೆ ತಲೆಯ ನುಣ್ಗೆ ಬೋಳ್ಸಕಂಡು, ಮೈತುಂಬ ಬರೀ ಬೇವುನ್ಸೊಪ್ಪ ಸುತ್ಗಂಡು, ಮೂರ್ಮುಂಡೇರ್ಮನೆ ಬೂದೀನ ತಕ್ಕಂಡು, ತಮ್ಟೆ ಸದ್ನೊಂದ್ಗೆ ಜೋಡ್ಗತ್ತೆ ಸಾರೋಟ್ಮೇಲೆ ನಿಂತ್ಗಂಡು, ಊರೂರ್ಮೇಲೆ ಕುಣ್ಕಂಡು, ನಿಮ್ಮಗ್ಳ ಊರೆಬ್ಬಾಗ್ಲಲ್ಲಿ ನಿಲ್ಲಿಸ್ಕಂಡು, ಬೂದಿ ಎರ್ಚಿ,  ಬೇವುನ್ಬಡ್ಕೆ ಕೈಲಿಡ್ಕಂಡು ಬಂದ್ರೆ, ಊರೊಳ್ಗಿಂದ ಹೆಡ್ತಿ ನಿಂಗಿ ಹಣೆ ನಿನ್ನಣೇತುಂಬಾ ಕುಂಕುಮವ ಬಳ್ಕಂಡು, ಮೊಣ್ಕಾಲ್ಕಂಟ ಎಂಟ್ಗಜ್ದ ಕೆಂಪ್ಸೀರೆ ಉಟ್ಗಂಡು, ತಲೆ ಕೂದ್ಲ ಗಾಳಿಗ್ಬುಟ್ಟು, ಮೂರ್ಮನೆಯಿಂದ ಮೋಟಂಚಿ ಬರ್ಲ ತಕ್ಕಂಡು
"ಬಾರೆ ಸೀಮ್ಗಿಲ್ದ ಗಾಳಿ ನಿನ್ನ ನುಂಗಿ ನೀರ್ಕುಡೀತೀನಿ" ಅಂತ ಊರ್ನೋರ್ಮುಂದೆ ಕೇಕೆ ಹಾಕುದ್ದ ನೋಡ್ದ ಅತ್ತೆಗೆ ’ಓ ಹ್ಹೋ! ಇವ್ಳುಗಿಡ್ದಿರೋ ಸನ್ನಿ ಸಾಮಾನೆದಲ್ಲ ನನ್ನ ಮುತ್ನಂತ ಅಳಿಯ ಇವ್ಳ ತಡ್ಕಂಡಿರಾದೇ ಹೆಚ್ಚು’ ಅನ್ಕಂಡು
" ನಿಂಗಿಡ್ದಿರಾದು, ಸನ್ನಿಯಾದ್ರೆನು, ಕುನ್ನಿಯಾದ್ರೇನು, ಬೇವುನ್ಬಡ್ಕೇಲಿ ಬಡ್ದು, ಬೇಲಿದಾಟಿಸ್ನಿಲ್ಲಾಂದ್ರೆ ನಾನು ನೀತಗಾರ್ನ ಮನೆಯೋಳೇ ಅಲ್ಲಾ" ಅಂತ ಅಬ್ರುಸ್ಕಂಡು ಬರಾದ್ನೋಡಿ ನಿಂಗಿಗೆ ’ಒಹ್ಹೋ! ಇಂಗೆ ಬುಟ್ರೆ ಗಾಳಿ ನಮ್ಮವ್ವುನ್ನ ಗಟಾರ್ಕೆ ತಳ್ಳಿ, ಗಂಡಾಂತ್ರ ತರಾದು ದಿಟ್ವೆಯಾ’ ಅನ್ಕಂಡು ಮೊಟಂಚಿ ಬರ್ಲಿಂದ ಮಖ, ತಲೆ ಕೆರ್ಯಾಕೆ ಸುರುಮಾಡಿದ್ಲು. ಇವ್ಳಾವಾಗ ಮಕ ಕೆರ್ಯಾಕೆ ಬಂದ್ಲೋ ಮೂರ್ಮುಂಡೇರ್ಮನೆ ಬೂದಿಯ ಇವ್ಳಮ್ಯಾಕೆರ್ಚಿ, ಬೇವಿನ್ಸೊಪ್ಪಿಂದ ಒಡಿಯಾಕ್ಸುರುಮಾಡುದ್ಲು. ಇವ್ರಿಬ್ರ ಜಗ್ಳ ನೋಡಿ ಊರೋರ್ಗೆಲ್ಲಾ ಒಳ್ಳೆ ತಮಾಸೆ ಸಿಕ್ತು. ಇಬ್ರು ಬಡ್ದಾಡಿ ಸುಸ್ತಾಗಿ ಕೆಳಕ್ಬಿದ್ಮೇಲೆ ಮಲ್ಲಣ್ಣ ಇಬ್ರುನುವೆ ಮನೆಗೊತ್ಗಬಂದಾಕ್ದ. ವಸಿ ವತ್ತೋದ್ಮೇಲೆ ಇಬ್ರುಗುವೆ ಎಚ್ರಾಯ್ತು. 
" ನಿಂಗೀ ಎಂಗಿದ್ದೀಯಮ್ಮಿ ?" ಅಂತಾ ಅವ್ವ ಕ್ಯೋಳುದ್ಲು. ನಿಂಗೀಗೆ ಅನ್ಮಾನ ಬತ್ತು, ’ಎಲಾ! ಇವ್ಳ ಗಾಳಿ ಮೆಟ್ಗಂಡಿದ್ದು ಇವುಳ್ಗೆ ನನ್ನೆ ಚೆನ್ನಾಗಿದ್ದೀಯಾ ಅಂತಾವ್ಳಲ್ಲ ಅನ್ಕಳ್ವಷ್ಟ್ರಲಿ
" ನಿನ್ನೋಡುದ್ರೆ ಸನ್ನಿ ಬುಟ್ಟಂಗದೆ, ಆ ಸಿವ ದೊಡ್ಡೋನು, ನನ್ಮೊಮ್ಮಗೀಗೆ ಅವ್ವುನ್ನ ಉಳುಸ್ಬುಟ್ಟ" ಅಂತ ಬೋಳ್ತಲೇಲಿ ಛಾವ್ಣಿ ನೋಡ್ಕಂಡು ಕೈ ಮುಗ್ದಾಗ ನಿಂಗೀ ಅನ್ಮಾನ ಇನ್ನೂ ಜಾಸ್ತಿಯಾಗಿ ಗಂಡ ಮಲ್ಲಣ್ಣನ್ಕಡೆಗೆ ನೋಡುದ್ಲು. ಮೀಸೆ ಮರೇಲಿ ಅವ್ನು ನಗಾದಾ ನೋಡಿ ’ಇದೆಲ್ಲಾ ಇವುನ್ದೇ ಕಿತಾಪತಿ’ ಅಂತ ಗೊತ್ತಾಗೋಯ್ತು.
" ಇರ್ಲಿ ಇದ್ಕೆ ತಕ್ಕಂಗೆ ಇವತ್ರಾತ್ರಿ ಆ ಮುಂಡೆ ನಮ್ಮತ್ತೆ ಕತೆ ಮುಗಿಸ್ನಿಲ್ಲಾ.!!! ನನ್ನೆಸ್ರು ಬೇರೆ ಕಟ್ಟು ಅಂತಾ ಅನ್ಕಂಡು ಸಾನ ಮಡಿ ಮಾಡ್ಕಂಡು ಇಟ್ಟು ಉಂಡ್ಬುಟ್ಟು ಎಲ್ಲಾ ಮನಿಕಂಡ್ರು. ಆ ಮುದ್ಕಿರಿಬ್ರು ಕಷ್ಟ ಸುಖ ಮಾತಾಡ್ಕಂಡು ಪಕ್ಪದಲಿ ಮನಿಗಿದ್ರು. ಒಂದೊತ್ತಲಿ ನಿಂಗಿ ಎದ್ಬಂದೋಳೇ, ಅಲ್ಲೇ ಹಸಿನ್ಕತ್ಗೆ ಕಟ್ಟಿದ್ದ ಕರೀ ದಾರ ತಕ್ಕಂಡು ಕೈಎಣ್ಣೆ ದೀಪದ್ಬೆಳ್ಕಲಿ ತನ್ನತ್ತೆ ಕಾಲ್ಗೆ ಕಟ್ಟುದ್ಲು. ಅಲ್ಲೇ ಪಕ್ದಲಿ ಒಂದು ದೊಡ್ಡ ಗೋಣಿಚೀಲಾನೂ ಮಡ್ಚಿ ಮಡ್ಗುದ್ಲು.
"ಅತ್ಯವ್ವ ನಿನ್ಮಗ ಇವತ್ಮಾಡಿರೋ ಅವ್ಮಾನುಕ್ಕೆ ನಾಳೆ ವತ್ತಾರಿಕೆ ನಿನ್ನ ಮೂಡ್ಲು ತೊರೆಲಿ ತೇಳುಸ್ತೀನಿ" ಅನ್ಕಂಡು ಹೋಗಿ ಮನೀಕಂಡ್ಲು. ಮಲ್ಲಣ್ಣುಂಗೆ ಇವ್ಳು ಸರೊತ್ತಲಿ ನಿಂಗಿ ಆಚ್ಗೂ ಇಚ್ಗೂ ಕಳ್ಬೆಕ್ಕೊಡ್ಡಾದಂಗೊಡ್ಡಾಡದ ನೋಡಿ ಅನ್ಮಾನ ಬಂದು ನೋಡ್ತಾನೆ, ಅವ್ರವ್ವುನ ಕಾಲಲಿ ಕರೀ ದಾರ!! ’ಯಾವ್ದುಕು ಇರ್ಲಿ’ ಅನ್ಕಂಡು ಆ ದಾರವ ತಗ್ದು ನಿಂಗಿಯ ಅವ್ವುನ ಕಾಲ್ಗೆ ಕಟ್ಬುಟ್ಟು ಸದ್ಮಾಡ್ದೆ ಹೋಗಿ ಮನಿಕಂಡ.
ವತ್ತಾರೆ ಕೋಳಿ ಕೂಗಾಕ್ಮುಂಚೆನೆಯಾ ನಿಂಗಿ ಎದ್ದೋಳೆಯಾ ದೀಪ ಗೀಪ ಹಸ್ಸುದ್ರೆ ಎಲ್ಲಿ ಎಲ್ರಿಗೂ ಎಚ್ರಾದಾದೋ ಅನ್ಕಂಡು ಕತ್ಲೇಲೆ ಅವ್ವ ಅತ್ತೇದೀರು ಮನ್ಗಿರಾತಕೆ ತಡ್ಕಾಡ್ಕಂಡು ಹೋಗಿ, ಕರೀದಾರ ಕಟ್ಟಿರೋ ಕಾಲ ಗುರ್ತು ಮಾಡ್ಕಂಡು ಪಕ್ದಲಿದ್ದ ಗೋಣೀಚೀಲ್ದೋಳಕೆ ಮೆತ್ಗೆ ತುಂಬ್ಕಂಡ್ಲು. ಮೂಟೆ ಕಟ್ಟಿ ಸದ್ಮಾಡ್ದಂಗೆ ಹೊತ್ಗಂಡೋಗಿ ಮೂಡ್ಲು ತಿಟ್ನ ತೊರೆವಳಾಕ್ಕೆ ಎಸ್ದುಬುಟ್ಳು. ಹೊತ್ತುಟ್ಟಾಕ್ಮುಂಚೆ ಹಟಿಗ್ಬಂದು ಸೇರ್ಕಂಡ್ಲು.
ಚೆಂದಾಗಿ ಬೆಳ್ಕಾದ್ಮೇಲೆ ನೋಡ್ತಾಳೆ ಅವ್ರತ್ತೆ ಮೊಮ್ಮಗೀನ್ಜೊತೆ ಆಟಾಡ್ತಾವ್ಳೆ!!! ಅದ್ನೋಡಿ ನಿಂಗಿ ಎದೆ ಧೊಸ್ಸುಕ್ಕಂತು!!!

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ಹೇಮಾವತಿ ಶುಕ್ರ, 10/28/2011 - 16:36

 ತುಂಬಾ ಚೆನ್ನಾಗಿದೆ ಸಾರ್,  ಅಜ್ಜಿ ಅಜ್ಜ ಕೂತು ಮೊಮ್ಮಕ್ಕಳಿಗೆ ಕಥೆ ಹೇಳಿದಂಗೆ ಇದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.