Skip to main content

ಬೀಸೋ ದೊಣ್ಣೆ ತಪ್ಪಿದರೆ! : ಭಾಗ 2

ಬರೆದಿದ್ದುNovember 27, 2010
1ಅನಿಸಿಕೆ

ಇದರ ಹಿಂದಿನ ಭಾಗ : ಬೀಸೋ ದೊಣ್ಣೆ ತಪ್ಪಿದರೆ! : ಭಾಗ 1
ಲಲಿತಾಂಬ ಮಹಾತ್ಮೆ-
ಇದ್ದಕ್ಕಿದ್ದ ಹಾಗೆ ಒಂದು ದಿನ ಬೆಳಗ್ಗೆ ನಮ್ಮ ಚಿಕ್ಕಪ್ಪನ ಫೋನ್ ಬಂತು. ನಮ್ಮ ಮನೆಯವರೊಂದಿಗೆ ಅರ್ಧ ಘಂಟೆ ಮಾತನಾಡಿದ ಮೇಲೆ, ಫೋನು ನನ್ನ ಕೈಗೆ ವರ್ಗಾಯಿಸಲ್ಪಟ್ಟಿತು. ಚಿಕ್ಕಪ್ಪ ಸಂಕ್ಷಿಪ್ತವಾಗಿ " ನಿಮ್ಮಪ್ಪ ಅಮ್ಮನ ಹತ್ತಿರ ಎಲ್ಲಾ ಮಾತನಾಡಿದ್ದೇನೆ, ನಾಳೆ ಎಂಟು ಘಂಟೆಗೆ ರೆಡಿಯಾಗಿರು. ಮಿಕ್ಕಿದ್ದೆಲ್ಲಾ ನಾಳೆ ಮಾತನಾಡೋಣ" ಎಂದು ಫೋನಿಟ್ಟರು.
ನಮ್ಮಪ್ಪ ಅಮ್ಮ ಮಾತ್ರ ಖುಷಿಯಾಗಿದ್ದಂತೆ ಕಂಡು ಬಂತು
ನನಗೆ ಕೇಳುವ ಹಾಗೆ ಅವರವರಲ್ಲೇ ಮಾತನಾಡಿಕೊಳ್ಳುತ್ತಿದ್ದರು "ದೀಕ್ಷಿತರ ಮನೆ ಅಂತೇ, ಆಚಾರ ವಿಚಾರ, ಸಂಪ್ರದಾಯ ಎಲ್ಲಾ ಚೆನ್ನಾಗಿ ಕಲಿಸಿರುತ್ತಾರೆ, ಶಂಕರ ಮಠದ ಹತ್ತಿರ ಮನೆ ಅಂದರೆ ಯಾರೋ ತುಂಬಾ ಸಂಪ್ರದಾಯಸ್ತರೇ ಇರಬೇಕು. ಹೆಸರು ನೋಡಿ! ಲಲಿತಾಂಬ ಅಂತಾ. ಎಷ್ಟು ಮುದ್ದಾಗಿದೆ. ದಿನಕ್ಕೆ ಹತ್ತು ಸರಿ ಕರೆದರೂ ಸಾಕು. ದೇವರ ಹೆಸರು ಹೇಳಿದ ಪುಣ್ಯ ಬರುತ್ತೆ."
ಕೇಳುತ್ತಾ ನನಗೆ ರಕ್ತ ಕುದಿಯಲಾರಂಭಿಸಿತು. ನಾನು ಮಾತು ತೆಗೆಯುವ ಮೊದಲೇ ನಮ್ಮಮ್ಮ " ಸಾಕು, ಇನ್ನೇನೂ ಕೊಂಕು ತೇಗೀಬೇಡಾ, ನಾಳೇ ಮದುವೇ ಏನಲ್ವಲ್ಲಾ? ಬರಿ ವಧು ಪರೀಕ್ಷೆ ತಾನೆ. ಇಷ್ಟಾ ಇಲ್ಲ ಆಂದ್ರೆ ಬೇಡಾ ಅಂದ್ರಾಯ್ತು. ನಮಗೇನು ತಿಳಿದಿಲ್ವಾ? ಕಂಡೂ ಕಂಡೂ ಏನು ಬಾವಿಗೆ ತಳ್ತೀವಾ?" ಅಂತಾ ಬಾಯಿ ಮುಚ್ಚಿಸಿದರು. ವಿಧಿಯಿಲ್ಲದೆ ನಾನು ತೆಪ್ಪಗಾದೆ.
ಮಾರನೇ ದಿನ ಬೆಳಗ್ಗೆ ಹನ್ನೊಂದು ಘಂಟೆಗೆ ಸರಿಯಾಗಿ ಅವರ ಮನೆಯಲ್ಲಿದ್ದೆವು.ಜೊತೆಗಿರಲಿ ಅಂತಾ ನನ್ನ ಆಪ್ತಮಿತ್ರ ವಾಸುವನ್ನೂ ಕರೆದೊಯ್ದಿದ್ದೆ.ನಮ್ಮ ಚಿಕ್ಕಪ್ಪ ಹೇಳಿದ್ದಕ್ಕೂ ಅಲ್ಲಿ ಕಂಡಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ನಾವು ಕಾಲಿಡುತ್ತಿದ್ದ ಹಾಗೆ ಮನೆಯವರೊಮ್ಮೆ ದಿಘ್ಮೂಢರಾದಂತೆ ಕಂಡು ಬಂತು. ಕಾರಣ ತಿಳಿಯಲಿಲ್ಲ.
ಉಭಯ ಕುಶಲೋಪರಿಗಳೆಲ್ಲಾ ವಾಡಿಕೆಯಂತೆ ಮುಗಿಯಿತು.
ಕನ್ಯಾಪಿತೃ ಬಾಯಿ ತೆಗೆದರು "ಹೆ ಹೆ, ಮನೆ ತುಂಬಾ ಬೇಗ ಬಿಟ್ಟಿರಿ ಅಂತಾ ಕಾಣುತ್ತೆ."
ನಮ್ಮಪ್ಪ " ಹಾಗೇನು ಇಲ್ವಲ್ಲ, ರಾಹುಕಾಲ ಕಳೆದು ಕೊಂಡು ಬರ್ತೀವಿ ಅಂತಾ ಮೊದಲೇ ಹೇಳಿದ್ವಲ್ಲಾ"
 ಕನ್ಯಾ ಪಿತೃ" ಹೆ ಹೆ ಹೆ ಓ ಹೋ ಇವತ್ತು ರಾಹುಕಾಲ ಬೆಳಗ್ಗೆ ಅಂತಾ ಮರ್ತೇ ಹೋಗಿತ್ತು ನೋಡಿ,ನಾನು ಸಂಜೆ ಬರ್ತೀರಾ ಅಂದು ಕೊಂಡಿದ್ದೆ"
ನಮ್ಮಪ್ಪ ಅಮ್ಮ, ಇಬ್ಬರ ಮುಖದಲ್ಲೂ ಅಸಮಾಧಾನದ ಗೆರೆ ಮೂಡಿತು. ದೀಕ್ಷಿತರ ವಂಶದವರಾಗಿ ರಾಹುಕಾಲ ಮರೆತುಹೋಯಿತು ಅಂದ್ರೆ ಏನರ್ಥ?
ಕನ್ಯಾ ಪಿತೃ-ಎರಡು ನಿಮಿಷ ಬಂದ್ಬಿಡ್ತಾಳೆ.
ನಾವು ಒಳಗೆ ಅಲಂಕಾರ ನಡೆಯುತ್ತಿರಬಹುದೆಂದು ಊಹಿಸಿದೆವು.ಆದರೆ ನಮ್ಮ ಊಹೆಗೆ ವ್ಯತಿರಿಕ್ತವಾಗಿ ರೂಮಿನಿಂದ ಪ್ರಭೃತಿಯೊಂದು ಈಚೆ ಬಂತು. ಇನ್ನೂ ಆಗ ತಾನೆ ಎದ್ದಂತಿತ್ತು. ಮುಕ್ಕಾಲು ಚೆಡ್ಡಿ, (ಥ್ರೀ ಪೋರ್ಥ್) ಮತ್ತೊಂದು ದೊಗಳೆ ಟೀ ಶರ್ಟು ಧರಿಸಿದ್ದಳು. ಬಾಪ್ ಕಟ್ ನಿಂದಾಗಿ ಕೂದಲು ಮುಖವೆಲ್ಲಾ ಮುಚ್ಚಿತ್ತು. ಕೈ ಹಣೆಯೆಲ್ಲಾ, ಯಾವುದೇ ಕುಂಕುಮ, ಬಳೆ ಇಲ್ಲದೆ ಬೋಳಾಗಿತ್ತು. ನಮ್ಮನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿದಳು. ಮತ್ತೊಮ್ಮೆ ಅವರಪ್ಪನ ಮುಖ ದಿಟ್ಟಿಸಿದಳು. ಅವರಪ್ಪ ಅರ್ಧ ಕೋಪದಿಂದಲೂ, ಇನ್ನರ್ಧ ಸಂಕೋಚದಿಂದಲೂ, "ಲಲ್ಲೀ ಇನ್ನೋ ಏನಮ್ಮಾ ಮಾಡ್ತಾ ಇದ್ದಿಯಾ? ಬೇಗ ರೆಡಿಯಾಗಿ ಬರಬಾರದಾ?" ಅಂತ ಗದರಿಸಿದರು. ನಮಗೆಲ್ಲ ಹುಡುಗಿ ಅವಳೇ ಎಂದು ತಿಳಿಯಿತು. ಲಲ್ಲಿ ಎಂಬುದು ಲಲಿತಾಂಬ ಎಂಬುದರ ಅಪಭ್ರಂಶ ರೂಪ ಎಂಬುದೂ ಹೊಳೆಯಿತು.ಅಪ್ಪ ಅಮ್ಮ ಇಬ್ಬರೂ ಮುಖ ಮುಖ ನೋಡಿಕೊಂಡರು
.
ಪಕ್ಕದಲ್ಲಿದ್ದ ವಾಸು "ಮಗಾ ನೋಡಿದ್ರೆ ಪಾಪ ಅನ್ನಿಸ್ತಾ ಇದೆ" ಎಂದ
ನಾನು" ಸಧ್ಯ! ನನ್ನ ಬಗ್ಗೆ ಕರುಣೆ ತೋರಿಸೋದಕ್ಕೆ ನೀನಾದ್ರೂ ಒಬ್ಬ ಇದಿಯಲ್ಲ" ಎಂದೆ
ಅದಕ್ಕವನು "ಏ ಥೂ! ನಾನು ನಿನ್ನ ಬಗ್ಗೆ ಹೇಳಿದ್ದಲ್ಲ. ಅವಳ ಬಗ್ಗೆ. ಮನೇಲಿ ಮುದ್ದಾಗಿ ಬೆಳೆಸಿದ್ದಾರೆ ಅಂತ ಕಾಣುತ್ತೆ. ನಿನ್ನ ಕಟ್ಕೊಂಡ್ರೆ ಇನ್ನೋ ಏನೇನು ಅನುಭವಿಸಬೇಕೋ" ಎಂದ
ಒಳಗಿನಿಂದ ಕೋಪ ಉಕ್ಕಿ ಬಂದರೂ ಅದುಮಿಟ್ಟುಕೊಂಡೆ
ಅವಳು ಪಿತೃವಾಕ್ಯ ಪರಿಪಾಲಕಳಾಗಿ ಕೇವಲ ಒಂದೂವರೆ ಘಂಟೆಯಲ್ಲಿ ರೆಡಿಯಾಗಿ ಬಂದಳು. ಚೂಡಿದಾರ ಧರಿಸಿದ್ದಳು ಎನ್ನುವುದೊಂದು ಬಿಟ್ಟರೆ, ಮೊದಲು ನೋಡಿದ ರೂಪಕ್ಕೂ, ಈಗಿನ ರೂಪಕ್ಕೂ ಹೆಚ್ಚೇನೂ ವ್ಯತ್ಯಾಸವಿರಲಿಲ್ಲ.ಮತ್ತೊಮ್ಮೆ ಉಭಯ ಕುಶಲೋಪರಿಗಳಾಗುವಷ್ಟರಲ್ಲಿ ತಿಂಡಿ ಬಂತು. ನನಗಿಷ್ಟವಾದ ಬಿಸಿಬೇಳೆ ಭಾತ್, ಜಾಮೂನು. ಮೆಣಸಿನಕಾಯಿ ಬಜ್ಜಿ.ಯಾಕೋ ಭಾವೀ ಅತ್ತೆಯ ಮೇಲೆ ಪ್ರೀತಿ ಉಕ್ಕಿ ಬಂತು.( ಆಮೇಲೆ ಗೊತ್ತಾಯಿತು ಕನ್ಯಾಪಿತೃ, ಚಿಕ್ಕಪ್ಪನ ಸಹೋದ್ಯೋಗಿ ಅಂತ)
ನಮ್ಮಮ್ಮ ದೇಶಾವರಿಯಾಗಿ ಮಾತನಾಡುತ್ತಾ "ನಿಮ್ಮ ಮಗಳೇ ಮಾಡಿದ್ದು ಅನ್ಸುತ್ತೆ" ಅಂದರು. ಅದಕ್ಕೆ ಪ್ರತ್ಯುತ್ತರವಾಗಿ ಅವಳ ತಾಯಿ ಬಿಗುಮಾನವಾಗಿ " ಛೇ ಛೇ. ಅವಳಿಗಿನ್ನೂ ಸ್ಟೌವ್ ಹತ್ತಿಸೋಕೂ ಬರಲ್ಲ, ಗಂಡನ ಮನೆಗೆ ಹೋದ ಮೇಲೆ ಮಾಡೋದು ಇದ್ದೇ ಇದೆ (!?) ಅದಕ್ಕೆ ನಾವು ಅವಳ ಕೈಲಿ ಯಾವ ಕೆಲಸವನ್ನೂ ಮಾಡಿಸೋಲ್ಲ" ಅಂದರು
ನಮ್ಮ ಚಿಕ್ಕಪ್ಪ ಮಾತು ಬದಲಿಸಲು " ಏನದು ಒಳಗಡೆ ಅಷ್ಟು ಜೋರಾಗಿ ಪಾತ್ರೆ ಸೌಂಡು ಬರ್ತಾ ಇದೆ" ಎಂದರು
ಆಗ ಲಲಿತಾಂಬ ಮುದ್ದಾಗಿ  " ಅಯ್ಯೋ! ಅದು ಪಾತ್ರೆ ಸೌಂಡಲ್ಲಾ ಅಂಕಲ್, ಹೆವಿ ಮೆಟಲ್ಸ್ ಮ್ಯೂಸಿಕ್ಕು, ನನಗೆ ತುಂಬಾ ಇಷ್ಟಾ."ಎಂದು  ಉಲಿದಳು
ನಮ್ಮಮ್ಮನ್ನ ಮುಖ ಗಡಿಗೆಯಷ್ಟಾಯಿತು."ಏನಮ್ಮಾ ಯಾವುದಾದರೂ ದೇವರ ನಾಮ ಕೇಳೋದು ಬಿಟ್ಟು, ಅದೇನೂಂತ ಇದನ್ನೇ ಕೇಳ್ತೀರೇ? ಸರಿ ಕುಂಕ್ಮ ಕೊಡಿ ಹೊರಡ್ತೀವಿ" ಅಂದರು .
ಅವರು ದೇವರ ಮನೆಗೆ ಹೋಗಿ ಅರ್ಧ ಘಂಟೆ ಹುಡುಕಿದ ಮೇಲೆ ಕುಂಕುಮದ ಭರಣಿ ಸಿಕ್ಕಿತು. ಅದರಲ್ಲಿ ಕುಂಕುಮ ಖಾಲಿಯಾಗಿತ್ತು. ನಮ್ಮಮ್ಮ ಕೋಪದಿಂದ ಚಿಕ್ಕಪ್ಪನ ಮುಖ ನೋಡಿದರು. ಅವರು ಕಣ್ಣು ತಪ್ಪಿಸಿ ತಾರಸಿ ನೋಡುತ್ತಾ, ಕುಳಿತಿದ್ದರು. ಅಂತೂ ಇಂತೂ ಅಲ್ಲಿಂದ ಹೊರಟಿದ್ದಾಯ್ತು.
ಹೊರಗೆ ಬಂದ ತಕ್ಷಣ, ತಡೆಹಿಡಿದಿದ್ದ ನಗುವೆಲ್ಲಾ, ಉಕ್ಕಿ ಬಂದು. ಮನಸಾರೆ ನಗಬೇಕೆಂದಿನಿಸಿದರೂ, ನಮ್ಮಮ್ಮ ದುಸುಮುಸು ಅನ್ನುತ್ತಲೇ ಇದ್ದಿದ್ದು ನೋಡಿ ಸುಮ್ಮನಾದೆ
ಚಿಕ್ಕಪ್ಪ ಮುಂಜಾಗರೂಕತೆಯಿಂದ "ನನಗೇ ಇಲ್ಲೇ ಒಂಚೂರು ಕೆಲ್ಸಾ ಇದೇ, ನಾನ್ಹಿಂಗೇ ಹೊರಡ್ತೀನಿ, ಭಾನುವಾರ ಸಿಕ್ತೀನಿ" ಅಂತಾ ಹೊರಟೇ ಬಿಟ್ಟರು.
ಮನೆಗೆ ಹೋಗೂವರೆಗೂ ನಮ್ಮಮ್ಮ ಮಾತನಾಡಲಿಲ್ಲ. ನಾನು ಒಳಗೊಳಗೇ ನಗುತ್ತಲೇ ಇದ್ದೆ. ಮನೆ ಹೋದ ತಕ್ಷಣ ಜ್ವಾಲಾಮುಖಿ ಸಿಡಿಯಿತು.
"ಏನಾಯ್ತು. ಸುಮ್ಮನೆ ಹಾಗೆ ಕಿಸಿಯೋಕೆ?"
"ಏನಿಲ್ಲಮ್ಮ, ನನಗಂತೂ ಹುಡುಗಿ ಹಂಡ್ರೆಡ್ ಪರ್ಸೆಂಟ್ ಒಪ್ಪಿಗೆ. ಹೇಳಿ ನಿಶ್ಚಿತಾರ್ಥ ಯಾವಾಗ ಇಟ್ಕೋತೀರಾ?" ನಗುತ್ತಲೇ ಕೇಳಿದೆ.
"ಹೂ, ಒಪ್ದೀರಾ ಏನ್ ಮಾಡ್ತ್ಯಾ, ನಿನಗೆ ಸರಿಯಾಗಿದ್ದಾಳೆ, ಹನ್ನೊಂದು ಘಂಟೆವರೆಗೂ ಬಿದ್ಕೊಂಡು, ಬಿಚ್ಚೋಲೆ ಗೌರಮ್ಮನ ಥರ, ಕೈಯಲ್ಲಿ ಒಂದು ಬಳೆ ಇಲ್ಲಾ, ಕಿವೀಲೊಂದು ವಾಲೆ ಇಲ್ಲಾ, ಹೋಕ್ಕೊಳ್ಳಿ, ಹಣೆಗೆ ಒಂದು ಕುಂಕುಮಾನಾದ್ರೂ ಬೇಡ್ವಾ? ಇಂಥವಳನ್ನ ಕಟ್ಟಿಕೊಂಡು ಉದ್ದಾರವಾದ ಹಾಗೇ, ಜೊತೆಗೆ ಸಾಲದು ಅಂತಾ ಅದೇನೋ ಸುಡುಗಾಡು ಹೆವಿಮೆಟಲ್ಸ್ ಮ್ಯೂಸಿಕ್ ಅಂತೆ" ನಮ್ಮಮ್ಮನ ಮಾತು ಪಟಾಕಿಯಂತೆ ಸಿಡಿಯಿತು.
"ಹೌದೌದು, ನೀವೇ ತಾನೇ ಹೇಳಿದ್ದು, ದೀಕ್ಷಿತರ ವಂಶ ಅಂತಾ" ನಾನು ಪ್ರತಿಕ್ರಯಿಸಿದೆ.
ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯ್ತು. ಹೋಗಿ ಬಾಗಿಲು ತೆಗೆದರೆ, ಜಿತಾ ನಾಯರ್ ಪ್ರತ್ಯಕ್ಷವಾಗಿದ್ದಳು. ಒಳಗೆ ಕರೆದೆ "ಹಲೋ ಆಂಟಿ" ಅನ್ನುತ್ತಲೇ ಒಳಗೆ ಅಡಿಯಿಟ್ಟಳು. "ಇಲ್ಲೇ ಫ್ರೆಂಡ್ ಮನೆಗೆ ಬಂದಿದ್ದೆ. ಹಾಗೇ ನೋಡಿಕೊಂಡು ಹೋಗೋಣ ಅಂತಾ ಬಂದೆ" ಅಂದಳು. ನಮ್ಮಮ್ಮ ಕೂಡ ಅವಳೊಡನೆ ನಗುನಗುತ್ತಾ ಹರಟೆ ಹೊಡೆಯಲಾರಂಭಿಸಿದರು.ಅವಳು ನಮ್ಮಮ್ಮನ ವೇಷ ಭೂಷಣ ನೋಡಿ, "ಏನಾಂಟಿ ಹೊರಗಡೆಯಿಂದೆಲ್ಲೋ ಬರದಾ ಇರೋ ಹಾಗಿದೆ" ಅಂದಳು.
ನಮ್ಮಮ್ಮ ಸುಮ್ಮನಿರಲಾರದೇ "ಹೌದಮ್ಮ, ಇವನಿಗೊಂದು ಹುಡುಗಿ ನೋಡೋಕೆ ಹೋಗಿದ್ವಿ, ಯಾಕೋ ಒಪ್ಪಿಗೆಯಾಗಲಿಲ್ಲ. ಅಲ್ಲಿಂದ ಈಗ ಬರ್ತಾ ಇದೀವಿ" ಅಂದರು. ಅವಳ್ಯಾಕೋ ಸಪ್ಪಗಾದಂತೆ ಕಂಡುಬಂತು. ಆಮೇಲೆ ಅವಳು ಹೆಚ್ಚು ಹೊತ್ತು ಅಲ್ಲಿರಲಿಲ್ಲ. "ನಾನಿನ್ನು ಬರ್ತೀನಿ ಆಂಟೀ, ನೀವೂ ಒಂದ್ಸಾರಿ ನಮ್ಮನೆಗೆ ಬನ್ನಿ" ಅಂತಾ ಹೊರಟೇ ಬಿಟ್ಟಳು.
ಅವಳು ಹೋದ ಮೇಲೆ ನಮ್ಮಮ್ಮ ಮತ್ತೆ ದಾಳಿ ಮಾಡಿದರು "ಯಾರೋ ಅವಳು"
"ನನ್ನ ಕಲೀಗು ಮಮ್ಮಿ"
"ಯಾವ ಜನಾನೋ"
"ಮಲೆಯಾಳಿಗಳು"
"ಮಾಂಸ ಮಡ್ಡಿ ತಿಂತಾರಾ"
( ಈ ಪ್ರಶ್ನೆಯಿಂದ ನಮ್ಮಮ್ಮನ್ನ ಹುನ್ನಾರ ಅರ್ಥವಾದಂತೆನಿಸಿತು)
"ಏನೋ ಗೊತ್ತಿಲ್ಲ ಮಮ್ಮೀ, ಆದರೇ ಮಲೆಯಾಳಿಗಳು ಸೈಡಲ್ಲಿ ಮೀನು ಇಲ್ಲದೆ, ಮೊಸರನ್ನಾ ತಿನ್ನಲ್ಲಾ ಅಂತಾ ಕೇಳಿದೀನಿ. ಅದು ಅವರಿಗೆ ಒಂಥರಾ ಉಪ್ಪಿನಕಾಯಿ ಇದ್ದ ಹಾಗೆ" ನಾನೆಂದೆ
ನಮ್ಮಮ್ಮ ಉರಿನೋಟವೊಂದನ್ನು ನನ್ನೆಡೆಗೆ ಎಸೆದು ಒಳಗೆ ಹೋದರು.
ಬೀಸೋ ದೊಣ್ಣೆ ತಪ್ಪಿದರೆ-
ಇದಾದ ಒಂದು ವಾರ ಮನೆಯಲ್ಲಿ ಯಾವುದೇ ವಿಶೇಷ ಘಟನೆ ನಡೆಯಲಿಲ್ಲ. ಒಂದು ದಿನ ಟೆರೇಸಿನಲ್ಲಿ ಕುಳಿತು ಏನೋ ಓದುತ್ತಿದ್ದಾಗ, ಅಮ್ಮ ಬಂದು ಪಕ್ಕ ಕುಳಿತು ಕೊಂಡರು. ಏನೆಂದು ವಿಚಾರಿಸಿದೆ.ಡೈರೆಕ್ಟಾಗಿ ಮ್ಯಾಟರಿಗೇ ಬಂದರು.
"ಯಾವುದಾದ್ರೂ ಹುಡುಗೀನಾ ಲವ್ ಮಾಡ್ತಾ ಇದ್ದಿಯಾ?" ಎಂದರು
ನಾನು " ಏನಮ್ಮಾ? ಹಾಗಿದ್ದಿದ್ರೆ ನಿನ್ನ ಹತ್ರ ಹೇಳದೀರಾ ಇರ್ತಾ ಇದ್ನಾ? ನನ್ನ ಮೇಲೆ ಅಷ್ಟೂ ನಂಬಿಕೆ ಇಲ್ವಾ?" ಎಂದೆ
ಅದಕ್ಕೆ ನಮ್ಮಮ್ಮ" ಹ್ಯಾಗಪ್ಪಾ ನಂಬೋದು,ಹೊರಗಡೇ ಕೆಲಸಾ ಅಂತಾ ಅಲಿಯೋರು ನೀವು, ಯಾವಾಗ್ಯಾವಾಗ ಏನು ಮಾಡ್ತೀರೋ ಯಾರಿಗ್ಗೊತ್ತು? ನಾಳೆ ದಿನಾ ಬಂದು, ಅಮ್ಮಾ, ನಾಬಿಬ್ರು ಮದುವೆ ಆಗ್ತಾ ಇದೀವಿ ಅಂದರೆ ಏನು ಮಾಡೋ ಹಾಗಿದ್ದೀವಿ" ಅಂದರು
ನಾನು ತಮಾಷೆಯಾಗಿ "ಬಿಡಮ್ಮ ಹಾಗಾದ್ರೆ, ನಾನು ಹಾಗೆ ಮಾಡಿದ್ರೆ ಏನು ಮಾಡ್ತ್ಯಾ? "ಎಂದೆ
"ನನಗೆ  ನಾಲ್ಕು ತೊಟ್ಟು ವಿಷ ತಂದು ಕೊಟ್ಟು, ನಿನಗೆ ಬೇಕಾದ ಹಾಗೆ ಮಾಡ್ಕೋ. ಇಲ್ಲಿವರೆಗೂ ನಮ್ಮೋರು ಅಂತ ಇರೋ ನಾಲ್ಕು ಜನರ ಮಧ್ಯೆ ತಲೇ ಎತ್ಕೊಂಡು ಬದುಕಿದ್ದೀನಿ, ನೀನು ಯಾವೋಳೊ ಬಿಕನಾಸೀನ ಕಟ್ಕೊಂಡು ಬಂದ್ರೆ ನಾನು ಮಾತ್ರ ಬದುಕಿರಲ್ಲ" ಎಂದರು. ಇಷ್ಟು ಹೇಳುವಷ್ಟರಲ್ಲಿ ಅವರ ಕಣ್ಣಾಲಿಗಳು ತುಂಬಿತ್ತು .ಪಾಪ ಅನ್ನಿಸಿತು
"ಅಮ್ಮಾ, ದೇವರಾಣೆಗೂ ಅಂಥಾ ಕೆಲಸ ನಾನು ಮಾಡಲ್ಲಾ ಅಂತಾ ನಿನಗೆ ಗ್ಯಾರಂಟೀ ಕೊಡ್ತೀನಿ, ಆದ್ರೆ ನೀನೊಂದು ಮಾತು ಕೊಡು ನನಗೆ" ಎಂದೆ.
ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿದರು
"ನಾನು ಹೇಳೂವರೆಗೂ, ಕನಿಷ್ಟ ಇನ್ನೊಂದು ವರ್ಷ, ನನಗೆ ಹೆಣ್ಣು ಹುಡುಕುವ ಸಾಹಸ ಮಾಡಬೇಡಿ" ಎಂದೆ
ಸ್ವಲ್ಪ ನೊಂದಂತೆ ಕಂಡು ಬಂದರೂ ತಕ್ಷಣ ಒಪ್ಪಿಕೊಂಡರು.
ಬೀಸೋ ದೊಣ್ಣೆ ತಪ್ಪಿತು ಅಂದು ಕೊಂಡೆ.
****************************************************************************
ಸರ್ವೇ ಜನಾ ಸುಖಿನೋ ಭವಂತು
ಈಗ ಮನೆಯಲ್ಲಿ ಚಿತ್ರಾನ್ನ ಮಾಡಿದರೂ ನಾನು ಮಾತನಾಡುವ ಹಾಗಿಲ್ಲ. ಮನೆಯಲ್ಲಿ ಮುಂಚಿನ ಹಾಗೆ ಮದುವೆಯ ಪ್ರಸ್ತಾಪ ಕೂಡ ಬರುತ್ತಿಲ್ಲ.ನಮ್ಮ ಚಿಕ್ಕಪ್ಪ ಮುಂಚಿನ ಹಾಗೆ ಮನೆಗೆ ಬರುತ್ತಿಲ್ಲ.
ಆಫೀಸಿನಲ್ಲಿ ಜಿತಾ ನಾಯರ್ ಜೊತೆ ಮಾತನಾಡಿಸುತ್ತಿಲ್ಲ. ಅದಕ್ಕೇ ಏನೋ ನಮ್ಮ ಸೀನಿಯರ್ ಇತ್ತೀಚೆಗೆ ನನ್ನ ಪರ್ಫಾಮೆನ್ಸ್ ಬಗ್ಗೆ ಖುಷಿಯಾಗಿದ್ದಾರೆ.
ನಮ್ಮ ಚಿಕ್ಕಪ್ಪ ಮಾತ್ರ ಎಲ್ಲಾ ಕಡೆ ನನ್ನ ಬಗ್ಗೆ ಶುದ್ದ ತಲೆಹರಟೆ, ಅಪಾಪೋಲಿ,ಅಧಿಕ ಪ್ರಸಂಗಿ, ಬೇಜಾವಬ್ದಾರಿ ಎಂದು ಚಾರಿತ್ರ್ಯವಧೆ ಮಾಡುತ್ತಿದ್ದಾರೆ. ನನಗೆ ಅದರ ಬಗ್ಗೆ ಒಂಚೂರೂ ಬೇಸರವಿಲ್ಲ. ಎಲ್ಲಾ ನಿಜ ತಾನೇ.
 (ವಿ.ಸೂ.-ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರ ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ. ಒಂದು ವೇಳೆ ಇದಕ್ಕೂ ನನ್ನ ಜೀವನಕ್ಕೂ ಹೋಲಿಕೆ ಕಂಡು ಬಂದಲ್ಲಿ ಅದು ಕೇವಲ ಕಾಕತಾಳೀಯವಾಗಿರುತ್ತದೆ)
 

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

Pora (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/06/2010 - 07:25

ಸ್ವಾಮಿ ಬಾಲಚಂದ್ರ, ನನ್ನ ಪರಿಸ್ಥಿತಿಯನ್ನು ಕದ್ದು ಕಥೆ ಮಾಡಿಹಾಕಿದಿರಲ್ಲ! ವ್ಯತ್ಯಾಸ ಒಂದೇ, ನನ್ನ ಕಥೆಯಲ್ಲಿ ಚಿಕ್ಕಪ್ಪನ ಬದಲು ದೊಡ್ಡಪ್ಪ ಖಳನಾಯಕನಾಗಿ ವಿಜ್ರಂಭಿಸುತ್ತಿದ್ದಾರೆ. ಜತೆಗೆ ಅವರ ಮಗ ಅಮೆರಿಕದಲ್ಲಿ ಇರುವುದರಿಂದ, ಅವರು ಹೇಳಿದ್ದು ನಮ್ಮಪ್ಪನಿಗೆ ವೇದವಾಕ್ಯ! ದೊಡ್ಡಪ್ಪ ಮನೆ ಹೊಸಿಲು ದಾಟಿದ ತಕ್ಷಣ ನನಗೆ ವರಾತ ಪ್ರಾರಂಭವಾಗುತ್ತದೆ, 'ಶ್ರೀಶನ ಹಾಗೆ ಅಪ್ಪ ಅಮ್ಮನ ಮಾತು ಕೇಳು..' (ನಾನು ಮತ್ತು ಶ್ರೀಶ ದೆಹಲಿಗೆ ಹೋಗಿದ್ದಾಗ ಬಿಯರ್ ಕುಡಿದಿದ್ದು ನೆನಪಾಗುತ್ತೆ). ನಿಮ್ಮ ಜಿತಾ ನಾಯರ್ ತರಹ ನಮ್ಮಲ್ಲಿ ಶಾಮಲಾ ಮೆನನ್ ಇದ್ದಾಳೆ, ಮೊನ್ನೆ ಹೋಮ್ ಸ್ಟೇ ಗೆ ಹೋಗುವಾಗ ಟೊಯೊಟಾ ಇನೋವಾ ದಲ್ಲಿ ನನ್ನ ಪಕ್ಕನೇ ಕೂತಿದ್ದಳು.ಪೋರ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.