Skip to main content

ಏಪ್ರಿಲ್ ಫೂಲ್ !

ಬರೆದಿದ್ದುMay 2, 2010
11ಅನಿಸಿಕೆಗಳು

ಬೆಂಗಳೂರಿನ ಕಾಲೇಜೊಂದರ ಕ್ರೀಡಾಂಗಣ. ಮಧ್ಯದಲ್ಲಿರುವ ಬಾಸ್ಕೆಟ್ ಬಾಲ್ ಅಂಗಳದ ಸುತ್ತಲೂ ಕಿಕ್ಕಿರಿದು ತುಂಬಿಕೊಂಡು ಕೂತ ವಿದ್ಯಾರ್ಥಿಗಳು. ಸುಮ್ಮನೇ ಹೀಗೆ ಗಾಳಿ ಸೋಕಿದರೂ ಕಿಸಕ್ಕೆನ್ನುವ ವಯಸ್ಸಿನ ಹುಡುಗಿಯರು, ಬೆನ್ನ ಹಿಂದ ಕೂತ ಹುಡುಗರ ನಿಮಿತ್ತ ಮಾತ್ರದ 'ಏನ್ ಮಗಾ' ಡಯಲಾಗುಗಳಿಗೆ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಮಧ್ಯೆ ಮಧ್ಯೆ ತಮ್ಮೊಳಗೇ ಮಾತಾಡಿಕೊಂಡು ನಗುತ್ತ, 'ನಾವು ಈಗಷ್ಟೇ ನಕ್ಕಿದ್ದು ನೀವಂದಿದ್ದಕ್ಕಲ್ಲ' ಎನ್ನುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಹುಡುಗರ ಕ್ರಿಯಾಶೀಲತೆ ಇನ್ನೂ ಹೆಚ್ಚುತ್ತಿದೆ. ಪಿಯುಸಿಯಿಂದ ಹಿಡಿದು ಡಿಗ್ರಿಯವರೆಗೆನ, ಸಾವಿರಗೆಟ್ಟಲೆ ಇರುವ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಈ ಕಲರವದ ಮಧ್ಯೆ, ಹಳ್ಳಿಯೊಂದರ ಕಾಲೇಜಿನಿಂದ ಮೊದಲ ಬಾರಿಗೆ ಬೆಂಗಳೂರಿಗೆ ಬಂದು, ಕ್ರೀಡಾಂಗಣದ ಮಧ್ಯದಲ್ಲಿ ಒಬ್ಬನೇ ನಿಲ್ಲಬೇಕೆಂದರೆ ಎಂಟೆದೆ ಬೇಕು!

ಹಾಗೆ ನಿಂತಿದ್ದಾನೆ, ದೂರದ ಅಂಕೋಲಾದಿಂದ ಬಂದಿರುವ ಗಣಪತಿ ನಾಯ್ಕ! ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ!
ಬಾಸ್ಕೆಟ್ ಬಾಲ್ ಅಂಗಳದ ಒಂದು ತುದಿಯಲ್ಲಿ ನಿಂತಿರುವ ಆತ ಇನ್ನೊಂದು ತುದಿಯ ಬೋರ್ಡಿಗೆ ಎದುರಾಗಿ ನಿಂತಿದ್ದಾನೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ, ಈ ತುದಿಯಿಂದ ಆ ತುದಿಯ ಬಲೆಯಲ್ಲಿ ಚೆಂಡನ್ನು ತೂರಿಸಿದ್ದೇ ಆದಲ್ಲಿ ಆತನ ವಿದ್ಯಾಭ್ಯಾಸದ ಖರ್ಚನ್ನು ಭರಿಸುವುದರ ಜೊತೆಗೆ, ಆತ ಬಯಸಿದಲ್ಲಿ ಬೆಂಗಳೂರಿನ ಅದೇ ಕಾಲೇಜಿನಲ್ಲಿ ಕಲಿಯುವ ಮತ್ತು ಉಚಿತವಾಗಿ ಹಾಸ್ಟೆಲಿನಲ್ಲಿ ಇರುವ ಅವಕಾಶವನ್ನೂ ಕೊಡುತ್ತೇವೆಂದು ಅವನಿಗೆ ಹೇಳಲಾಗಿದೆ. ಆತನಿಗೆ ಮೂರು ಅವಕಾಶ ನೀಡಲಾಗಿದೆ.

ಅವನು ಈ ಸವಾಲನ್ನು ಒಪ್ಪಿಕೊಂಡಿರುವುದು ಬೆಂಗಳೂರಿನಲ್ಲಿ ಕಲಿಯುವ ಆಸೆಗಲ್ಲ. ಬೆಂಗಳೂರು ಹಾಳು ಬಿದ್ದು ಹೋಗಲಿ. ತನಗೆ ಊರಲ್ಲಾದರೂ ಉಚಿತವಾಗಿ ಕಲಿಯುವ ಅವಕಾಶವಾದರೆ, ತಾನು ಬೆಳಿಗ್ಗೆ ಪೇಪರ್ ಮತ್ತು ಹಾಲು ಹಂಚಿ, ಸಾಯಂಕಾಲ ಟ್ಯೂಷನ್ ಹೇಳಿ ಸಂಪಾದಿಸುವ ಹಣವನ್ನು ಅಪ್ಪನಿಗೆ ಕೊಡಬಹುದು. ಅಷ್ಟರ ಮಟ್ಟಿಗೆ ಅಪ್ಪ ಹಮಾಲಿ ಕೆಲಸ ಮಾಡುವುದು ತಪ್ಪುತ್ತದೆ!

ಆದರೆ ಆತನಿಗೆ ತಿಳಿಯದ ವಿಷಯವೊಂದಿದೆ!

ಈ ತುದಿಯಲ್ಲಿ ನಿಂತು ಆ ತುದಿಯ ಬೋರ್ಡಿನಲ್ಲಿ ಗೋಲು ಗಳಿಸುವುದು ಅವನಿಂದ ಹೇಗೂ ಸಾಧ್ಯವಿಲ್ಲವೆಂಬುದು ಆಯೋಜಕರಿಗೆ ಗೊತ್ತು. ತನ್ನ ಬಡತನದಿಂದಾಗಿ ಆಸೆಗೆ ಬಿದ್ದು ಒಪ್ಪಿಕೊಂಡಿದ್ದಾನೆಂಬುದೂ ಅವರಿಗೆ ತಿಳಿದಿದೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡು ಆತ ಗೋಲಿಗಾಗಿ ಯತ್ನಿಸುತ್ತಿದ್ದರೆ, ಆತ ಚೆಂಡನ್ನು ಎಸೆದ ಎರಡನೇ ಕ್ಷಣಕ್ಕೇ ಜೋರಾಗಿ ಕೂಗಿ, ಕೇಕೆ ಹೊಡೆದು, ಚಪ್ಪಾಳೆ ತಟ್ಟುವಂತೆ ಸುತ್ತಲೂ ಕೂತ ಹುಡುಗ ಹುಡುಗಿಯರಿಗೆ ಗುಟ್ಟಾಗಿ ಹೇಳಲಾಗಿದೆ. ತಾನು ಗೋಲು ಹೊಡೆದೆನೆಂದೇ ಅವನಿಗೆ ಭ್ರಮೆ ಹುಟ್ಟಿಸುವುದು ಅವರ ಉದ್ದೇಶ. ಹಾಗೆ ಆತ ಸುಳ್ಳೇ ಆನಂದದಿಂದ ಕುಣಿಯುತ್ತಿದ್ದರೆ ಆತನ ಮುಖದ ಭಾವನೆಯನ್ನು ಚಿತ್ರೀಕರಿಸಲು ವೀಡಿಯೋ ಕ್ಯಾಮೆರಾಗಳು ಸಿಧ್ಧವಾಗಿವೆ. ಮುಂದೆ ಅದು ಟೀವಿ ಚ್ಯಾನೆಲ್ಲೊಂದರ ರಿಯಾಲಿಟಿ ಕಾರ್ಯಕ್ರಮದಲ್ಲಿ ಮನರಂಜನೆಯಾಗಿ ಪ್ರಸಾರವಾಗಲಿದೆ! ಹಾಗೆ ಆತನನ್ನು 'ಕುರಿ' ಮಾಡಲಿದ್ದೇವೆಂದು ಟೀವಿ ವೀಕ್ಷಕರಿಗೂ ಕಾರ್ಯಕ್ರಮದ ಮೊದಲೇ ಹೇಳಲಾಗಿರುತ್ತದೆ. ಅದು ಮೋಜನ್ನು ಮತ್ತಷ್ಟು ಹೆಚ್ಚಿಸುತ್ತದೆಂದು ಅವರಿಗೆ ಅನುಭವದಿಂದ ತಿಳಿದಿದೆ. ಈ ಯೋಚನೆ ಮೊದಲು ಬಂದಿದ್ದು ಕಾಲೇಜಿನ ಪ್ರಿನ್ಸಿಪಾಲರಿಗೆ. ಯಾವತ್ತೂ ಸೋತಿರದ ತಮ್ಮ ಬಾಸ್ಕೆಟ್ ಬಾಲ್ ತಂಡದ ಇವತ್ತಿನ ಸೋಲಿಗೆ ಕಾರಣನಾದ ಯಕಃಶ್ಚಿತ್ ಅಂಕೋಲಾ ಟೀಮಿನ ಕ್ಯಾಪ್ಟನ್, ಗಣಪತಿ ನಾಯ್ಕನ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುವುದು ತುಂಬಾ ಚಿಕ್ಕ ಕಾರಣ. ಅದಕ್ಕಿಂತ ದೊಡ್ಡ ಕಾರಣವೆಂದರೆ ತಮ್ಮ ಕಾಲೇಜಿನ ಹೆಸರು ಈ ಬಾರಿ ಟೀವಿಯ ಕಾರ್ಯಕ್ರಮದಲ್ಲಿ ಬರುವುದು. ಮುಂದಿನ ವರ್ಷದ ಅಡ್ಮಿಷನ್ ವ್ಯವಹಾರಕ್ಕೆ ಇದು ತುಂಬಾ ಅನುಕೂಲ.

ಪ್ರಿನ್ಸಿಪಾಲರು ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆ ಹೊಡೆದರು. ಅವರ ಕೇಕೆ ಮುಗಿಲು ಮುಟ್ಟುತ್ತಿದ್ದಂತೆ ಗಣಪತಿ ನಾಯ್ಕನಿಗೆ ಒಂದು ಕ್ಷಣದ ಮಟ್ಟಿಗೆಎದೆ ನಿಂತಂತಾಯಿತು. ಆತನಿಗೆ ತಾನು ಪೇಪರ್ ಹಂಚುತ್ತಿದ್ದ ದಿನಗಳು ನೆನಪಾದವು! ಗಲ್ಲಿಯ ನಡುವಿನ ಚಿಕ್ಕ ಚಿಕ್ಕ ಮನೆಗಳು. ಮುಖ್ಯರಸ್ತೆಯೆಂದು ಕರೆಯಲ್ಪಡುವ ದೊಡ್ಡಗಲ್ಲಿಯಲ್ಲೇ ನಿಂತು ಅಡ್ಡರಸ್ತೆಯೆಂದು ಕರೆಯಲ್ಪಡುವ ಚಿಕ್ಕಗಲ್ಲಿಯ ಮನೆಗಳ ಕಂಪೌಂಡುಗಳಿಗೆ ಪೇಪರ್ ಎಸೆಯುತ್ತಿದ್ದ ರೀತಿ. ಚೂರೂ ಗುರಿ ತಪ್ಪದೇ! ಅದು ಮುಂದೊಂದು ದಿನ ಪ್ರಯೋಜನಕ್ಕೆ ಬಂತು!

ಗಣಪತಿ ನಾಯ್ಕ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಅಂಕೋಲಾದಲ್ಲೇ. ಅವನಿರುವ ಪರಿಸರದಲ್ಲಿ ವಿದ್ಯಾಭ್ಯಾಸ ಎನ್ನುವುದೊಂದು ಅವಶ್ಯಕತೆ ಎಂದು ಯಾರಿಗೂ ಅನಿಸಿಲ್ಲ. ಹುಡುಗ ದುಡಿಯುವ ವಯಸ್ಸಿಗೆ ಬರುವವರೆಗೆ ಶಾಲೆಯಲ್ಲಿರಲಿ ಎಂಬ ಕಾರಣಕ್ಕೆ ಎಲ್ಲರಂತೆ ಅವನೂ ಶಾಲೆಗೆ ದೂಡಲ್ಪಟ್ಟವ. ಅವನಿಗೂ ಅಷ್ಟೆ, ತಾನು ಕಲಿಯಬೇಕು ಎಂದು ಯಾವತ್ತೂ ಅನಿಸಿಲ್ಲ. ಅದಕ್ಕೆ ತಕ್ಕಂತೆ ರಿಟೈರ್ ಆಗಲು ಕೆಲವೇ ವರ್ಷಗಳಿರುವ ಮಾಸ್ತರು. ಗಣಿತಕ್ಕೊಬ್ಬರು, ಸೈನ್ಸಿಗೊಬ್ಬರು, ಅದಕ್ಕೊಬ್ಬರು, ಇದಕ್ಕೊಬ್ಬರು ಎನ್ನುವಷ್ಟೆಲ್ಲಾ ದೊಡ್ಡ ಶಾಲೆಯಲ್ಲ ಅದು. ಶಾಲೆಗೊಬ್ಬ ಮಾಸ್ತರು, ಅವರು ಕಲಿಸಿದ್ದೇ ವಿದ್ಯೆ. ಇಂಥ ಸ್ಥಿತಿಯಲ್ಲಿ ಮಾಸ್ತರರ ಅನುಕೂಲಕ್ಕೆ ಸಿಕ್ಕಿದ್ದು ವಿನಾಯಕ ಭಟ್ಟ. ಆತ ಗಣಿತದಲ್ಲಿ ಎಷ್ಟು ಹುಶಾರಿ ಎಂದರೆ ಮಾಸ್ತರು ಕೇಳುವ ಮೊದಲೇ ಹೇಳಿಬಿಡುವ. ಮಾಸ್ತರಿಗೆ ಬೇಕಾದ್ದೂ ಅದೇ. ಇವತ್ತೋ ನಾಳೆಯೋ ಸ್ಕೂಲು ಬಿಟ್ಟುಬಿಡುವ ಗಣಪತಿ ನಾಯ್ಕನಂತವರೆದುರಿಗೆ ಗಂಟಲು ಹರಿದುಕೊಳ್ಳುವುದಕ್ಕಿಂತ ವಿನಾಯಕ ಭಟ್ಟನಂತವನೊಬ್ಬನನ್ನು ಮಾದರಿಯಾಗಿಟ್ಟುಕೊಂಡು ಬಿಟ್ಟರೆ ಗಣಿತ ಕಲಿಸಿ ಮುಗಿಸಿದಂತೆಯೇ. ಅವನಿಗೆ ಅರ್ಥವಾದರೆ ಇಡೀ ಕ್ಲಾಸಿಗೆ ಅರ್ಥವಾದಂತೆ ಲೆಕ್ಕ! ಕಲಿತು 'ಮುಂದೆ' ಬರಬೇಕಾದ ವಿನಾಯಕ ಭಟ್ಟನಿಗೂ, ವಿದ್ಯೆ ಕಲಿಸಬೇಕಾದ ಮಾಸ್ತರಿಗೂ ಮಧ್ಯೆ ತಾವೆಲ್ಲ ಅಪ್ರಸ್ತುತ ಎಂದು ಗಣಪತಿಗೆ ಅನಿಸತೊಡಗಿತು. ಮಾಸ್ತರು ಕಲಿಸಬೇಕಾದ್ದು ಯಾರಿಗೆ? ಏನೂ ಗೊತ್ತಿಲ್ಲದ ತನಗಾ ಅಥವಾ ಸ್ವತಃ ಮಾಸ್ತರದೇ ಅವಶ್ಯಕತೆಯಿಲ್ಲದ ವಿನಾಯಕ ಭಟ್ಟನಿಗಾ? ಇಷ್ಟು ಲೆಕ್ಕಾಚಾರವೂ ಅರ್ಥವಾಗದ ಮಾಸ್ತರು ಬರೇ ಗಣಿತದ ಲೆಕ್ಕಾಚಾರದಲ್ಲಿ ಮಾತ್ರ ಬುಧ್ಧಿವಂತರು ಎಂಬ ಲೆಕ್ಕಾಚಾರಕ್ಕೆ ಗಣಪತಿ ಬಂದ. ಇನ್ನೇನು ತಂದೆಯೊಂದಿಗೆ ತಾನೂ ದಿನಾ ದುಡಿಮೆಗೆ ಇಳಿಯುವುದೇ ಸರಿ ಎಂಬ ನಿರ್ಧಾರಕ್ಕೆ ಬಂದ ಗಣಪತಿಯ ಅದೃಷ್ಟ ತಿರುಗುವುದಿತ್ತು.

ಮಾಸ್ತರರಿಗೆ ಅದೇ ವರ್ಷ ವರ್ಗವಾಯಿತು! ಅದಕ್ಕೆ ಕಾರಣ ಬಿಜಾಪುರ ಶಾಲೆಯ ಪೀಟಿ ಮಾಸ್ತರರು. 'ಹೆಡ್ ಮಾಸ್ತರರಾಗಿ ಪ್ರೊಮೋಷನ್ ಬೇಕೆಂದರೆ ದೂರದ ಅಂಕೋಲಾಗೆ ಟ್ರಾನ್ಸ್ ಫರ್ ಮಾಡುತ್ತೇವೆ ನೋಡು' ಎಂಬ ಬೆದರಿಕೆಯನ್ನೊಪ್ಪಿ ಅಂಕೋಲಾ ಶಾಲೆಗೆ ವರ್ಗವಾಗಿ ಬಂದ ಬಿರಾದರ್ ಮಾಸ್ತರು!

ಬಿರಾದಾರ್ ಮಾಸ್ತರು ಯುವಕರು. ಅವರ ಮಾತಿಗೊಮ್ಮೆ ಬರುವ 'ಅವುನವುನ' ಥರದ ಬೈಗುಳಗಳನ್ನು ಕೇಳಿ ಮೊದಮೊದಲು 'ಹೊಸ ಮಾಸ್ತರು ಅಧೀಕ್ಷಣಿ' ಎಂದುಕೊಂಡರೂ, ಕ್ರಮೇಣ ಅದು ಬಯಲುಸೀಮೆಯವರು, ಅಲ್ಪವಿರಾಮ, ಪೂರ್ಣವಿರಾಮಗಳಿಗೆ ಬದಲಾಗಿ ಬಳಸುವ ಶಬ್ದಗಳೆಂದು ಗಣಪತಿ ನಾಯ್ಕನಂತವರಿಗೆ ಅರ್ಥವಾಗತೊಡಗಿತು. ಸ್ವಾಭಾವಿಕವಾಗಿಯೇ ಗಣಿತ, ಸೈನ್ಸುಗಳ ಜೊತೆಗೆ ಬಿರಾದರ ಮಾಸ್ತರರು ಕ್ರೀಡೆಗೂ ಉತ್ತೇಜನ ಕೊಡತೊಡಗಿದರು. 'ಯೇ ನಿಮ್ಮವುನ, ಏನಿಡೀ ದಿನ ಕ್ರಿಕೆಟ್ ಆಡ್ತೀರಲೇ? ಹುಸ್ಸೂಳಿಮಕ್ಕಳ್ರ್ಯಾ, ಬಾಸ್ಕೆಟ್ ಬಾಲ್ ಆಡೂಣ ನಡೀರಲೇ, ನಾ ಕಲಿಸ್ತೇನಿ' ಎಂದಂದು ಬಾಸ್ಕೆಟ್ ಬಾಲ್ ಆಟವನ್ನು ಪರಿಚಯಿಸಿದರು. ಪೇಪರ್ ಎಸೆದು ರೂಢಿಯಿದ್ದ ಗಣಪತಿ ನಾಯ್ಕ, ಈ ಆಟವನ್ನು ಎಲ್ಲರಿಗಿಂತ ಮೊದಲು ಕಲಿತ! ಆಟದಲ್ಲಿ ಮಿಂಚುತ್ತಿದ್ದ ಹುಡುಗರಿಗೆ, ಗಣಿತ, ಸೈನ್ಸಿನ ಕ್ಲಾಸಿನಲ್ಲಿ ಪೆಟ್ಟು ತಿನ್ನುವುದರಿಂದ ರಿಯಾಯತಿ ದೊರೆಯತೊಡಗಿತು. ಸಹಜವಾಗಿಯೇ ಬಡವರ ಮಕ್ಕಳು ಮಾಸ್ತರರ ಜೊತೆಗೆ ಹುರುಪಿನೊಂದಿಗೆ ಆಟದ ತರಬೇತಿ ಪಡೆಯತೊಡಗಿದರು. ಏಳನೇ ತರಗತಿ ಮುಗಿಯುತ್ತಿದ್ದಂತೆ ಶಾಲೆ ಬಿಡಬೇಕೆಂದಿದ್ದ ಹುಡುಗರನ್ನು ಒತ್ತಾಯ ಮಾಡಿ ಹೈಸ್ಕೂಲಿಗೆ ಸೇರಿಸಿದ್ದೇ ಬಿರಾದರ ಮಾಸ್ತರರು. ವಿದ್ಯಾಭ್ಯಾಸದ ಖರ್ಚಿಗೆ ಮತ್ತು ದುಡಿಯುವ ವಯಸ್ಸಿಗೆ ಬಂದ (!) ಮಕ್ಕಳು ಹೈಸ್ಕೂಲಿಗೆ ಸೇರಲು ತಂದೆತಾಯಿಯರ ವಿರೋಧವಿರುವಂಥವರಿಗೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡುವಂತೆ ಹುರಿದುಂಭಿಸಿದರು. ಗಣಪತಿ ನಾಯ್ಕನ ಉದಾಹರಣೆಯಂತೂ ಆಗಲೇ ಇತ್ತಲ್ಲ! ಹಾಗಾಗಿ ಪ್ರಾಥಮಿಕ ಶಾಲೆಯ ಬಾಸ್ಕೆಟ್ ಬಾಲಿನ ತಂಡ ಹೈಸ್ಕೂಲಿನಲ್ಲೂ ಮುಂದುವರೆಯಿತು. ಸ್ಕೂಲು ಮುಗಿದ ಮೇಲೆ ದುಡಿಮೆ ಶುರು. ಅದು ಮುಗಿದ ಮೇಲೆ ಬಾಸ್ಕೆಟ್ ಬಾಲ್ ತರಬೇತಿ. ಅಷ್ಟೊತ್ತಿಗಾಗಲೇ ಮೆಲ್ಲಗೆ ಸಂಜೆಗತ್ತಲು. ಹುಡುಗರಿಗೆ ಅರೆಗತ್ತಲೆಯಲ್ಲೇ ಆಟದ ಅಭ್ಯಾಸ. ಬೋರ್ಡಿನ 'ಭುಂ' ಎನ್ನುವ ಶಬ್ದವೇ ಸ್ಥಳಸೂಚಿ!

ತಮ್ಮ ಪ್ರಚಾರಕ್ಕಾಗಿ ಏರಿಯಾದ ಪುಡಿ ರೌಡಿಗಳು ಆಯೋಜಿಸುವ ಹೊನಲುಬೆಳಕಿನ ವಾಲಿಬಾಲ್ ಪಂದ್ಯಗಳಿರುತ್ತವಲ್ಲ? ವಾಲಿಬಾಲ್ ಜೊತೆಗೆ ಬಾಸ್ಕೆಟ್ ಬಾಲ್ ಪಂದ್ಯವನ್ನೂ ನಡೆಸುವಂತೆ ಬಿರಾದರ ಮಾಸ್ತರರು ಇಂಥವರ ಮನವೊಲಿಸಿದರು. ಮಾಸ್ತರರಿಗೆ ಅದೇನು ಹುಚ್ಚೋ! ಇಷ್ಟು ಪ್ರತಿಭೆಯುಳ್ಳ ಹುಡುಗರು ಕೇವಲ ಬಡತನದಿಂದಾಗಿ ಕೊಳೆಯಬಾರದು ಎಂಬುದು ಅವರ ಯೋಚನೆ. ಆಟದ ನೆಪದಲ್ಲಾದರೂ ಹುಡುಗರು ಸ್ಕೂಲುಗಳಿಗೆ ಅಂಟಿಕೊಂಡಿರಲಿ ಎಂಬುದು ಅದರ ಹಿಂದಿನ ಉದ್ದೇಶ. ಮುಂದೇನಾದರೂ ಹುಡುಗರು ಗೆಲ್ಲತೊಡಗಿದರೆ ಅದರಿಂದಾಗಿ ಬರುವ ಚೂರುಪಾರು ದುಡ್ಡು ಈ ಮಕ್ಕಳಿಗೆ ಸಹಾಯವಾದೀತೆಂಬ ದೂರದ ಆಸೆ. ಹಾಗಾಗಿ ತಮ್ಮದೇ ಖರ್ಚಿನಲ್ಲಿ ಹುಡುಗರನ್ನು ದೂರದ ಊರಿನ ಸ್ಪರ್ಧೆಗಳಿಗೂ ಕರೆದೊಯ್ಯತೊಡಗಿದರು. ಈ ಮಧ್ಯೆ ಅಂಕೋಲಾದ ಬೆಲೇಕೇರಿ ಬಂದರಿಗೆ ಬಂದು ಬೀಳುವ ಗಣಿ ಧೂಳಿನ ದೆಸೆಯಿಂದಾಗಿ, ಪುಡಿ ರೌಡಿಗಳ ಕೈಯಲ್ಲಿ ದುಡ್ಡು ಓಡಾಡತೊಡಗಿ, ಹೊನಲುಬೆಳಕಿನ ಪಂದ್ಯದ ಬಹುಮಾನದ ಮೊತ್ತ ಇಪ್ಪತ್ತು ಸಾವಿರದವರೆಗೂ ಏರಿ, ಗಣಪತಿ ನಾಯ್ಕನ ಜೊತೆ ಇನ್ನೂ ಏಳೆಂಟು ಜನ ಕಾಲೇಜು ಮೆಟ್ಟಿಲು ಹತ್ತುವಂತಾಯ್ತು. ಆದರೂ ಬದುಕು ಸಾಗಿಸಲು ಅಷ್ಟು ಸಾಕೆ? ತುಂಬ ಅತಂತ್ರದ ಸಂಪಾದನೆಯ ನಡುವೆ ಒಂದು ಡಿಗ್ರಿಯನ್ನಾದರೂ ಸಂಪಾದಿಸಬೇಕೆಂಬುದು ಇನ್ನೂ ಮರೀಚಿಕೆಯೇ. ಮೊದಲು ಹುಂಬರಂತೆ, ಬಾಸ್ಕೆಟ್ ಬಾಲ್ ಹುಚ್ಚಿಗೆ ಹೈಸ್ಕೂಲು ಮುಂದುವರಿಸಿದ್ದ ಹುಡುಗರಿಗೆ, ಈಗ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ, 'ಡಿಗ್ರಿ ಗಳಿಸುವುದು' ತಮ್ಮ ಜೀವನಕ್ಕೆ ಎಂಥ ತಿರುವನ್ನು ತರಬಲ್ಲುದೆಂಬುದರ ಸುಳಿವು ಹತ್ತಿತು. ಬಿರಾದರ್ ಮಾಸ್ತರರು ಬಯಸಿದ್ದೇ ಅದು! ಒಮ್ಮೆ ವಿದ್ಯೆಯ ರುಚಿ ಹತ್ತಿದ ಮನುಷ್ಯ ತನ್ನ ದಾರಿ ತಾನೇ ಕಂಡುಕೊಳ್ಳಬಲ್ಲ! ಒಂದು ಕಾಲದಲ್ಲಿ ಬಾಸ್ಕೆಟ್ ಬಾಲಿನ ಆಸೆಗಾಗಿ ವಿದ್ಯೆ ಕಲಿಯಲು ಬಂದ ಹುಡುಗರು ಇವತ್ತು ವಿದ್ಯೆ ಕಲಿಯುವ ಆಸೆಗಾಗಿ ಬಾಸ್ಕೆಟ್ ಬಾಲ್ ಆಡತೊಡಗಿದರು!

ಹಾಗೆ ಬಾಸ್ಕೆಟ್ ಬಾಲ್ ಹಿಡಿದ ಅಂಕೋಲಾದ ಬಡಹುಡುಗರು ಬೆಂಗಳೂರಿನ ಪಂದ್ಯಾವಳಿಯವರೆಗೆ ಬಂದು ಮುಟ್ಟಿದರು. ಈ ಸಾರಿಯ ಬಸ್ ಚಾರ್ಜೂ ಬಿರಾದರ್ ಮಾಸ್ತರರದೇ.

ಮೈಕ್ ಹಿಡಿದ ಪ್ರಿನ್ಸಿಪಾಲರು ಅವತ್ತು ನೆರೆದಿದ್ದರ ಉದ್ದೇಶವನ್ನೂ, ಪಂದ್ಯದ ನಿಯಮವನ್ನೂ ಹೇಳತೊಡಗಿದರು. ಗಣಪತಿ ನಾಯ್ಕನಿಗೆ ಕೊನೆಯ ಕ್ಷಣದಲ್ಲಿ ಸಣ್ಣಗೆ ನಡುಕ ಶುರುವಾಗತೊಡಗಿತು. ಆತ ಬೆವುರುತ್ತಿರುವುದನ್ನು ಗಮನಿಸಿದ ಬಿರಾದರ ಮಾಸ್ತರರು ಆತಂಕಗೊಂಡರು. ಪ್ರಿನ್ಸಿಪಾಲರ ಆತ್ಮವಿಶ್ವಾಸ ಯಾಕೋ ಅಸಹಜವೆನಿಸಿ ಬಿರದಾರ ಮಾಸ್ತರರಿಗೆ ತಾವಿದಕ್ಕೆ ಒಪ್ಪಬಾರದಿತ್ತೇನೋ ಅನಿಸತೊಡಗಿತು. ಗಣಪತಿ ನಾಯ್ಕ ಸೋತಿದ್ದಕ್ಕೆ ಹುಡುಗರು ವಿನಾಕಾರಣ ಧೃತಿಗೆಟ್ಟರೆ? ಬಿರಾದರ ಮಾಸ್ತರರು ಪ್ರಿನ್ಸಿಪಾಲರ ಬಳಿಗೆ ಧಾವಿಸಿ, 'ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳದೇ ಚೆಂಡನ್ನು ಎಸೆಯಬಹುದೇ?' ಎಂದು ವಿನಂತಿಸತೊಡಗಿದರು. ಅದೂ ಕೂಡ ಮೈಕಿನಲ್ಲಿ ಸಣ್ಣಗೆ ಕೇಳಿ ಬಂತು. ಸುತ್ತಲೂ ಕೂತ ಕಾಲೇಜು ಹುಡುಗರಲ್ಲಿ ಸಣ್ಣಗೆ ಗುಜು ಗುಜು ನಗು. ಅದನ್ನು ಕೇಳಿದ ಗಣಪತಿ ನಾಯ್ಕ ಇನ್ನೂ ಅಧೀರನಾದ. ಪ್ರಿನ್ಸಿಪಾಲರು ಬಿರಾದರ ಮಾಸ್ತರ ಮಾತಿಗೆ ಒಪ್ಪಲಿಲ್ಲ. ಬದಲಿಗೆ, 'ಆಯಿತು, ನಿಮ್ಮ ಹುಡುಗ ಕಣ್ಣಿಗೆ ಬಟ್ಟೆಕಟ್ಟಿಕೊಂಡೇ ಗೋಲು ಗಳಿಸಿದ್ದೇ ಆದಲ್ಲಿ ಅವನಿಗೊಬ್ಬನಿಗಲ್ಲ, ಇಡೀ ನಿಮ್ಮ ತಂಡದ ವಿದ್ಯಾಭ್ಯಾಸದ ಖರ್ಚನ್ನು ನಮ್ಮ ಸಂಸ್ಥೆ ಭರಿಸುತ್ತದೆ' ಎಂದು ಘೋಷಿಸಿದರು. ಹುಡುಗರಿಂದ ಚಪ್ಪಾಳೆ. ಗಣಪತಿ ನಾಯ್ಕ ಇನ್ನೂ ಗಾಬರಿಯಾದ. ಬಿರಾದರ ಮಾಸ್ತರರು ಕೈಚೆಲ್ಲಿ ತಮ್ಮ ಮೂಲೆಯ ಜಾಗಕ್ಕೆ ಹಿಂದಿರುಗಿ ಕೂತರು.

ಪ್ರಿನ್ಸಿಪಾಲರ ಮಾತು ಮುಗಿದು, ಪಂದ್ಯದ ಸೀಟಿ ಊದುತ್ತಿದ್ದಂತೆ ಇಡೀ ಕ್ರೀಡಾಂಗಣ ಸ್ತಭ್ದವಾಯಿತು. ಅದನ್ನು ಕೂಡ ಮೊದಲೇ ಪ್ಲಾನ್ ಮಾಡಲಾಗಿದೆ! ಗಣಪತಿ ನಾಯ್ಕ ಚೆಂಡು ಎಸೆಯುವುದಷ್ಟೇ ಮುಖ್ಯ! ನಂತರದ್ದೆಲ್ಲ ಟೀವಿಯವರಿಗೆ ಬೇಕಾದಂತೆ ನಡೆಯುತ್ತದೆ! ಸೀಟಿ ಊದಿದ ಮನುಷ್ಯನೇ ಗಣಪತಿ ನಾಯ್ಕನ ಬಳಿಗೆ ಬಂದು ಇನ್ನೊಂದು ಚೆಂಡನ್ನು ಬೋರ್ಡಿಗೆ ಎಸೆದು, 'ಬೋರ್ಡ್ ಅಲ್ಲಿದೆ' ಎಂದ. ಚೆಂಡು ಬೋರ್ಡಿಗೆ ಬಡಿದು 'ಭುಂ' ಎಂಬ ಶಬ್ದ ಹುಟ್ಟಿಸಿತು!

ಆತ ಅಲ್ಲಿಂದ ಹಿಂದಕ್ಕೆ ಸರಿಯುತ್ತ 'ರೆಡಿ?' ಎಂದು ಕೂಗಿ ಮತ್ತೊಂದು ಸೀಟಿ ಊದಿದ. ಹುಡುಗರಿಂದ 'ಥ್ರೀ....ಟೂ....ಒನ್, ಶೂಟ್' ಎಂಬ ಚೀತ್ಕಾರ.

ಅದು ಮುಗಿದ ಎರಡೇ ಕ್ಷಣಕ್ಕೆ ಗಣಪತಿ ನಾಯ್ಕ ಚೆಂಡನ್ನು ಎರಡು ಸಲ ನೆಲಕ್ಕೆ ಕುಟ್ಟಿ ಬೋರ್ಡಿನತ್ತ ಎಸೆದ. ಚೆಂಡು ಗಾಳಿಯಲ್ಲಿ ಬಿಲ್ಲಿನ ಆಕಾರದ ಪಥದಲ್ಲಿ ಬೋರ್ಡಿನತ್ತ ಸಾಗಿ ಗೋಲಿನೊಳಗೆ ತೂರಿತು! ಎಲ್ಲರಿಗಿಂತ ಮೊದಲು ಎದ್ದು ನಿಂತಿದ್ದು ಬಿರಾದರ ಮಾಸ್ತರು!

ಅನಿಸಿಕೆಗಳು

ಸುಪ್ತವರ್ಣ ಭಾನು, 05/02/2010 - 03:22

(ಪ್ರಿಯ ಓದುಗರೇ, ಈ ಕಥೆಯನ್ನು ಈ ಲಿಂಕಿನಿಂದ inspiration ಹೆಸರಲ್ಲಿ ಕದಿಯಲಾಗಿದೆ!
http://sports.yahoo.com/blogs/post/Video-Prank-goes-awry-when-coach-hits-blindfold?urn=top,215799
ಪುರುಸೊತ್ತಿದ್ದರೆ, ಇದನ್ನೂ ನೋಡಿ, http://www.youtube.com/watch?v=3heqhwoqVTE)

ಉಮಾಶಂಕರ ಬಿ.ಎಸ್ ಸೋಮ, 05/03/2010 - 21:49

ಅತ್ಯುತ್ತಮ ಭಾವಾನುವಾದ ಬಹಳ ಚೆನ್ನಾಗಿದೆ ಸುಪ್ತವರ್ಣ ರವರೆ

ಬಾಲ ಚಂದ್ರ ಮಂಗಳ, 05/04/2010 - 09:52

ಉತ್ತಮ ಬರಹ ಸಪ್ತವರ್ಣ, ಮನಸ್ಸಿಗೆ ಮುದ ನೀಡಿತು.
ಅಂತ್ಯ ಇನ್ನೂ ಸ್ವಲ್ಪ ಪರಿಣಾಮಕಾರಿಯಾಗಿರಬೇಕಿತ್ತು.
ಸಸ್ನೇಹ
ಬಾಲ ಚಂದ್ರ

ಸುಪ್ತವರ್ಣ ಧ, 05/05/2010 - 21:46

ಧನ್ಯವಾದಗಳು ಬಾಲು! ಇಂಥ ಕಮೆಂಟುಗಳೇ ನನ್ನನ್ನು ವಿಸ್ಮಯನಗರಿಯಲ್ಲಿ ಹಿಡಿದಿಟ್ಟಿರುವುದು. ಇತರ ಬ್ಲಾಗುಗಳಲ್ಲಾದರೆ 'ನೀ ನನಗಿದ್ದರೆ ನಾ ನಿನಗೆ' ಎಂಬಂತೆ ಒಬ್ಬರಿಗೊಬ್ಬರು ಹೊಗಳಿಕೊಂಡು, ಕತೆಗಾರನಿಗೆ ತಾನು ಬರೆದ ಕತೆಯ ನಿಜವಾದ ಮೌಲ್ಯ ಅರ್ಥವಾಗದೇ, ಹೇಗಿದ್ದನೋ ಹಾಗೇ ಉಳಿದುಬಿಡುತ್ತಾನೆ. ಇಲ್ಲಿ ಇದ್ದಿದ್ದು ಇದ್ದ ಹಾಗೆ ಮುಖದ ಮೇಲೆ ಹೊಡೆದಂತೆ ಕಮೆಂಟು ಬರೆಯುವವರು ಇದ್ದಾರೆ. ಕತೆಯ ಹಣೆಬರಹ ಇದರಿಂದ ತಿಳಿದು ಹೋಗುತ್ತದೆ!Laughingಕತೆಯ ಅಂತ್ಯವನ್ನು ಬರೆಯುವ ಹೊತ್ತಿಗೆ ನನ್ನನ್ನು ಸೋಮಾರಿತನ ಆವರಿಸಿತು ಎಂದು publish ಮಾಡಿದ ಮೇಲೆ ನನಗೂ ಅನಿಸಿತು! ಖಂಡಿತ ಮುಂದಿನ ಸಲ ಕತೆಯ ಬಗ್ಗೆ ಹೆಚ್ಚು work ಮಾಡುತ್ತೇನೆ, ಮತ್ತೊಮ್ಮೆ ಧನ್ಯವಾದಗಳು!

ಪುಂಡರಗಂಡ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/06/2010 - 08:05

ಚೆನ್ನಾಗೆ ಬರೆಯೋ ನಿಮಗೆ ಯಾಕ್ ಬಂತೂ ಸರ್ ಇನ್ಸ್ಪಿರೇಶನ್ ಹುಚ್ಚು, ಗೊತ್ತಾಗ್ಲಿಲ್ಲ

ಸುಪ್ತವರ್ಣ ಗುರು, 05/06/2010 - 12:23

ಡಿಯರ್ ಪುಂಡರಗಂಡ,ಅಂದ್ರೆ ನಾನು ಕೊಟ್ಟ ಲಿಂಕನ್ನ ನೀವು ನೋಡಲೇ ಇಲ್ಲ ಅಂತಾಯ್ತು. ಕ್ಲೈಮಾಕ್ಸ್ ಬಿಟ್ಟರೆ ಅಲ್ಲಿ ನಡೆದ ಘಟನೆಗೂ ನನ್ನ ಕತೆಗೂ ಏನೂ ಸಾಮ್ಯತೆಯಿಲ್ಲ. Courtesy ಗೋಸ್ಕರ ಲಿಂಕನ್ನು ಕೊಟ್ಟಿದ್ದೇನೆಯೇ ಹೊರತು ಅದು ಅಲ್ಲಿಂದ ಯಥಾವತ್ ಎತ್ತಿದ್ದಲ್ಲ.ಅಷ್ಟಕ್ಕೂ insipiration ಇಲ್ಲದೇ ಕತೆ ಹುಟ್ಟುತ್ತದೆಂದುಕೊಂಡಿರಾ? ಎಲ್ಲೋ, ಏನೋ ಒಂದು inspiration ನಿಂದಾಗಿಯೇ ಒಂದು idea ಹುಟ್ಟುತ್ತದೆ. ಅದನ್ನು ಎಷ್ಟು, ಯಾವ ಕಡೆ ಜಗ್ಗಾಡಿ ಒಂದು original ಕತೆ ಬರೆಯುತ್ತೇವೆಂಬುದು ಮುಖ್ಯ, ಏನನ್ನುತ್ತೀರಿ? 

ಪುಂಡರಗಂಡ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/06/2010 - 23:13

ಮಾನ್ಯ ಸುಪ್ತವರ್ಣ ರವರೆ ನನ್ನ ಅಭಿಪ್ರಾಯದಲ್ಲೆಲ್ಲೂ ನೀವು ಕದ್ದೀದ್ದೀರಿ ಅಂತಾ ಹೇಲೇ ಇಲ್ವಲ್ಲ ಅಷ್ಟಾದ ಮೇಲೂ "ಯಥಾವತ್ ಎತ್ತಿದ್ದಲ್ಲ." ಅನ್ನುವ ನಿಮ್ಮ ಸ್ಪಷ್ಟನೆ ಏಕೆಂದು ಅರ್ಥವಾಗಲಿಲ್ಲ. ನಾನು ವಿಸ್ಮಯನಗರಿಗೆ ಬಂದಾಗ ಮೊದಲು ಓದಿದ್ದು ನಿಮ್ಮ "ಶಾಂತಾರಾಂ ಅಲಾರಾಂ" ಲೇಖನವನ್ನ, ಅದರಲ್ಲಿ ನೀವು ಸಣ್ಣ ಎಳೆಯನ್ನು ನವಿರಾದ ಹಾಸ್ಯದಲ್ಲಿ ನಿರೂಪಿಸಿದ ರೀತಿ ತುಂಬಾ ಇಷ್ಟವಾಯ್ತು. ಆಗಲೇ ನಾನು ನಿಮ್ಮ ಅಭಿಮಾನಿಯಾದೆ. ಹಾಗಾಗಿ ನಿಮ್ಮ ಬರವಣಿಗೆಯ ಶಕ್ತಿಗೆ inspiration ನ ಹೊದಿಕೆ ಬೇಕಿಲ್ಲವೆಂದೆ. ಅದಕ್ಕಾಗಿ ನೀವಿಷ್ಟು ಖಾರವಾಗುವ ಪ್ರಮೇಯವೂ ಇಲ್ಲ. ಅಲ್ಲವೇ?

ಸುಪ್ತವರ್ಣ ಶುಕ್ರ, 05/07/2010 - 11:06

ನನ್ನ ಉತ್ತರ ಖಾರವಾಯಿತು ಅನಿಸಿದ್ದರೆ ಕ್ಷಮೆಯಿರಲಿ. ಖಾರವಾಗಿ ಉತ್ತರಿಸಬೇಕು ಎಂಬುದು ನನ್ನ ಉದ್ದೇಶವಾಗಿರಲಿಲ್ಲ, ಕ್ಷಮಿಸಿ. inspiration ಬಗ್ಗೆ (ನೀವು ಕೇಳದಿದ್ದರೂ) ನನ್ನ ಅಭಿಪ್ರಾಯ ತಿಳಿಸುವ ಭರದಲ್ಲಿ ಉತ್ತರ ಅಗತ್ಯಕ್ಕಿಂತ ಹೆಚ್ಚು ಗಂಭೀರವಾಯಿತೆಂದುಕೊೞುತ್ತೇನೆ. ನೀವು ಕೇಳಿದ್ದರ ಬಗ್ಗೆ ನನಗೆ ಸಿಟ್ಟೇನೂ ಬಂದಿರಲಿಲ್ಲ, ಇನ್ನು ಖಾರವಾಗಿ ಉತ್ತರಿಸುವ ಪ್ರಶ್ನೆಯೆಲ್ಲಿಂದ ಬಂತು? Casual ಆಗಿ ಉತ್ತರಿಸಲು ಹೋಗಿ ಬಹುಶಃ ಅಧಿಕಪ್ರಸಂಗವಾಯಿತು!ಮುಂದಿನ ವಿವರಣೆಗಳಿಗೆ ನೀವು ತಪ್ಪು ತಿಳಿದುಕೊೞುವುದಿಲ್ಲವಾದರೆ...... 'ಶಾಂತಾರಾಂ ಮತ್ತು ಅಲಾರಾಂ' ಕೂಡ inspiration ನಿಂದಲೇ ಹುಟ್ಟಿದ್ದು. Laughing ಒಂದೇ ವ್ಯತ್ಯಾಸವೆಂದರೆ ಅದು ನನಗೇ ಸಂಬಂಧಿಸಿದ್ದು. ಹೆಂಡತಿ ಊರಿಂದ ಬರುವವಳಿದ್ದಳು. pickup ಮಾಡಬೇಕಲ್ಲ? ಅಲಾರಾಮನ್ನು ಎಲ್ಲಿಯೋ ಇಟ್ಟು ಬೆಳಗಿನ ಜಾವ ನಿದ್ದೆಗಣ್ಣಲ್ಲಿ ಅಲಾರಾಮನ್ನು ಹುಡುಕಲು ಪರದಾಡುವಾಗ ಈ ಐಡಿಯಾ ಹುಟ್ಟಿದ್ದು! ಅದಕ್ಕೇ ಸ್ವಲ್ಪ ಉಪ್ಪು ಖಾರ ಸೇರಿಸಿ ಒಂದು ಕಥೆ ಬರೆದೆ ಅಷ್ಟೆ! ಹೆಚ್ಚು ಕಡಿಮೆ ನನ್ನ ಎಲ್ಲ ಕಥೆಗಳು ಇಂಥ ಒಂದು ಎಳೆಯನ್ನು ಜಗ್ಗಾಡಿಯೇ ಬರೆದಿದ್ದು. ಹಾಗೆಯೇ ಏಪ್ರಿಲ್ ಫೂಲ್ ನಲ್ಲಿ ಕೂಡ ಸಣ್ಣ ಎಳೆಯನ್ನು ತೆಗೆದುಕೊಂಡೆ. ಅದನ್ನು ಎಲ್ಲಿಂದ ತೆಗೆದುಕೊಂಡೆ ಎಂದು ಹೇಳಿದೆ ಅಷ್ಟೆ....... ಬಹುಶಃ ನನಗಿನ್ನೂ ನಿಮ್ಮ ಮೂಲ comment ನ ಉದ್ದೇಶ ಸರಿಯಾಗಿ ಅರ್ಥವಾಗಿರಲಿಕ್ಕಿಲ್ಲ! Undecidedಒಂದೇ ಮಾತಿನಲ್ಲಿ ಮೇಲಿನ ನನ್ನ ಕೊರೆತದ ಸಾರಾಂಶ ಹೇಳಬೇಕೆಂದರೆ, inspiration ನಿಂದ ಪಾವಿತ್ರ್ಯವೇನೂ ಭಂಗವಾಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಮೂಲ ಕಥೆಯನ್ನೋ, ಘಟನೆಯನ್ನೋ ಯಥಾವತಾಗಿ ಎತ್ತಿ ನಂತರ ಅದಕ್ಕೆ inspiration ಎಂಬ ಪರದೆ ಹಾಕದಿದ್ದರಾಯಿತು ಅಷ್ಟೆ.

ಪುಂಡರಗಂಡ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/07/2010 - 12:25

ಸುಪ್ತವರ್ಣ ರವರೆ
ನಿಮ್ಮ ಅಭಿಪ್ರಾಯಕ್ಕೆ ಪ್ರತಿವಂದನೆಗಳು, ಯಾವುದೇ ಕಥೆಯಾದರೂ, ಹಾಸ್ಯಬರಹವಾದರೂ, ಕಾವ್ಯವಾದರೂ ಯಾವುದೇ ಸ್ಪೂರ್ತಿ ಇಲ್ಲದೆ ಹುಟ್ಟಲು ಸಾಧ್ಯವಿಲ್ಲ, ಹಾಗೆಂದು ಹೇಳಿ ಪ್ರತಿಯೊಂದು ಬರಹಕ್ಕೂ inspiration ನ ಮೂಲ ಹೇಳುತ್ತಾ ಹೋದರೆ ಯಾವುದೇ ಕಥೆಯ ಮೇಲೂ ಆಸಕ್ತಿ ಉಳಿಯುವುದು ಇಲ್ಲ, " ಓ ಅದಾ!! ನಮ್ಮ ಜೀವನದಲ್ಲೂ ಬರುತ್ತವೆ", "ಅದೇನ್ ಮಹಾ!!" ಅಂತಲು ಅನ್ನಿಸಿ ಓದುಗನಿಗೆ ಆ ಲೇಖನದಮೇಲೆ ಉಡಾಫೆಯುಂಟಾಗಬಹುದು, ಎಂಬುದು ನನ್ನ ಅನಿಸಿಕೆ. ಜೊತೆಗೆ ನಿಮ್ಮ ಲೇಖನದ ಮೇಲೆ ಮೂಲ ಲೇಖನದ ಚಾಯೆ ಎಲ್ಲೂ ಕಂಡು ಬಂದಿಲ್ಲ, ಆದ ಕಾರಣಕ್ಕೆ ಆ ರೀತಿ ಅಭಿಪ್ರಾಯಿಕರಿಸಿದ್ದೆ.
ಆದರೂ ನಿಮ್ಮ  ಸೌಜನ್ಯ ಬಹಳ ಇಷ್ಟವಾಯ್ತು

ಸುಪ್ತವರ್ಣ ಶುಕ್ರ, 05/07/2010 - 13:17

ನಿಮ್ಮ ಕಮೆಂಟಿನ ಉದ್ದೇಶ ಈಗ ನನಗೆ ಅರ್ಥವಾಯಿತೆಂದುಕೊೞುತ್ತೇನೆ. Laughing ಮುಂದಿನ ಸಲದಿಂದ ಈ extra information ಗಳ ಬಗ್ಗೆ ಖಂಡಿತ ಜಾಗರೂಕತೆವಹಿಸುತ್ತೇನೆ!Sealedಧನ್ಯವಾದಗಳು !Laughing

ಶಿವಕುಮಾರ ಕೆ. ಎಸ್. ಮಂಗಳ, 05/18/2010 - 15:48

ಎಲ್ಲವೂ ಹದವಾಗಿದೆ, ನಿಮ್ಮ ಬರವಣಿಗೆ ಯಾವಾಗಲೂ ಕುತೂಹಲ ಕಾಯ್ದಿರಿಸಿಕೊಂಡು, ಕೊನೆ ತನಕ ಓದುವಂತೆ ಮಾಡುತ್ತದೆ, ಕೊನೆ ಪರಿಣಾಮಕಾರಿಯಾಗೇ ಇದೆ, ಸ್ವಲ್ಪ ಡಿಫೆರೆಂಟ್ ಆಗಿದೆ ಅಷ್ಟೇ! ಎಲ್ಲವನ್ನೂ ವಾಚ್ಯವನ್ನಾಗಿಸದೇ ಓದುಗರಿಗೂ 'ಮಸ್ತ್ ಐತಪಾ, ಆ ಪ್ರಿನ್ಸಿಪಾಲು, ಕಾಲೇಜಿನವರಿಗೆಲ್ಲ ಹೆಂಗನ್ಸಿರಬಹುದು' ಅಂತಾ ಊಹಿಸಿಕೊೞೋಕೆ ಆಸ್ಪದ ಕೊಡೋದೂ ಒೞೇದೇ!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.