Skip to main content

ಮಾತು

ಇಂದ Manjuladevi
ಬರೆದಿದ್ದುMarch 4, 2010
4ಅನಿಸಿಕೆಗಳು

ಭೂಮಿಯ ಮೇಲಿರುವ ಕೋಟ್ಯಾಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುವುದರಲ್ಲಿ ಎರಡು ಮಾತಿಲ್ಲ.ಆ ದೇವರ ಅಪರೂಪದ, ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಠಿ. ಮಾನವರಾದ ನಮಗೆ ಆಲೋಚನಾ ಶಕ್ತಿಯಿದೆ. ತರ್ಕಬದ್ಧವಾಗಿ ಯೋಚಿಸುವ ಹಾಗು ತನ್ನ ಭಾವನೆಗಳನ್ನು ಇತರರೊಡನೆ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆದಿದ್ದೇವೆ. ಭಾವನೆಗಳ ಅಭಿವ್ಯಕ್ತಿಗೆ "ಮಾತು" ಆ ದೇವರು ನಮಗಿತ್ತ ಅಪೂರ್ವ ಕೊಡುಗೆ.ಮುಗ್ಧ ಮನಸ್ಸಿನ ಮಗುವಿನ ತೊದಲುನುಡಿ ಕೇಳಲು ಹಿತ. ಹಾಗೇ ಙ್ಞಾನಿಯಾದವನ ಅನುಭವಜನ್ಯ ನುಡಿಗಳು ಅತ್ಯಮೂಲ್ಯವೆನ್ನಿಸುತ್ತವೆ. ಮಾತನಾಡುವುದು ಒಂದು ಕಲೆ. ಎಲ್ಲರಿಗೂ ಈ ಕಲೆ ಒಲಿದಿರುವುದಿಲ್ಲ.ಈ ಅಪೂರ್ವವಾದ ಮಾತಿನ ಬಗ್ಗೆ ನಮ್ಮ ಹಿರಿಯರ ಅನುಭವಭರಿತ ಅಭಿಪ್ರಾಯಗಳು ನಮಗೆ ದಾರಿದೀಪ.ಸಂಸ್ಕಾರವಂತರಾಗಿ ಬದುಕಲು ಇವು ನಮಗೆ ಮಾರ್ಗದರ್ಶಿಯಾಗಿವೆ.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾನು ನೆಡೆಯದಿದ್ದರೆ ಮೆಚ್ಚ ನಮ್ಮ ಕೂಡಲಸಂಗಮದೇವ

ಬಸವಣ್ಣನವರ ಈ ವಚನ ನಮ್ಮ ಮಾತು ಹೇಗಿರಬೇಕೆಂಬುದರ ಬಗ್ಗೆ ಪೂರ್ಣ ಮಾಹಿತಿ ನೀಡುವಂತಿದೆ. ಸುಂದರವಾದ,ನಿಷ್ಕಲ್ಮಶವಾದ,ನೇರವಾದ ಮತ್ತು ಆತ್ಮಸಾಕ್ಷಿಗೆ ಒಪ್ಪುವ ಮಾತು ಆ ದೇವರಿಗೂ ಪ್ರೀತಿ ಎಂದಿದ್ದಾರೆ.
ಈ ಜಗತ್ತಿನ ಎಲ್ಲಾ ಆಗುಹೋಗುಗಳಿಗೂ ಮಾತೇ ಕಾರಣ ಎನ್ನುವುದು ಸರ್ವಜ್ಞನ ಅಭಿಪ್ರಾಯ.
ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆಹೊಲೆಯು
ಮಾತಿನಿಂ ಸರ್ವಸಂಪದವು
ಜಗಕೆ ಮಾತೆ ಮಾಣಿಕವು ಸರ್ವಜ್ಞ

ಇನ್ನು ನಮ್ಮ ಜನಪದರ ಅನುಭವದ ಮಾತು ನೋಡೋಣ.
ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು
ಮಾತೇ ಮುತ್ತು ಮಾತೇ ಮೃತ್ಯು
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ
ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು
ಮಾತೇ ಸಂಪತ್ತು ಮಾತೇ ಆಪತ್ತು
ಮಾತೇ ಮುತ್ತು ಮಾತೇ ಕುತ್ತು
ಮಾತೇ ಮಾಣಿಕ್ಯ
ಕಳೆದು ಹೋದ ಕಾಲ, ಬಾಯಿಯಿಂದ ಜಾರಿದ ಮಾತು ಮರಳಿ ಪಡೆಯಲು ಸಾಧ್ಯವಿಲ್ಲ.ಆದ್ದರಿಂದ ಮಾತನಾಡುವಾಗ ಯೋಚಿಸಿ ಮಾತನಾಡುವುದು ಉತ್ತಮ.ಆಡಿದ ಮಾತಿಗೆ ಬದ್ಧರಾಗಿರುವುದು ನಮ್ಮ ಯೋಗ್ಯತೆಯನ್ನು ಹೆಚ್ಚಿಸುತ್ತದೆ. ಕ್ಷಣ ಚಿತ್ತ ಕ್ಷಣ ಪಿತ್ತವೆಂಬಂತೆ ಊಸರವಳ್ಳಿಯ ರೀತಿ ಮಾತು ಬದಲಿಸುವುದು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ.ನುಡಿಯಲ್ಲಿ ನಯ ಮತ್ತು ನಿಸ್ವಾರ್ಥತೆಯಿರಬೇಕು. ಕಲಾತ್ಮಕವಾಗಿ, ಸಂದರ್ಭೋಚಿತವಾಗಿ ಮಾತನಾಡುವ ಕಲೆಯನ್ನು ನಾವು ನಮ್ಮದಾಗಿಸಿಕೊಳ್ಳಬೇಕೆಂಬುದು ಮೇಲಿನ ಗಾದೆಮಾತುಗಳ ಅರ್ಥವಾಗಿದೆ.
ಕವಿ ಚನ್ನವೀರ ಕಣವಿಯವರ ಕವಿತೆಯ ಸಾಲೊಂದನ್ನು ನಾನಿಲ್ಲಿ ಉಲ್ಲೇಖಿಸಲು ಇಚ್ಚಿಸುತ್ತೇನೆ.ಈ ಕವಿತೆಯ ಶೀರ್ಷಿಕೆ "ಮಾತು"
ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತದ ಹೂವು ಸುರಿಸುವಂತೆ
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಠಿ ಸಂಪೂರ್ಣತೆಯ ಬಿಂಬಿಪಂತೆ.

ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ

ಎಷ್ಟೊಂದು ಅಮೂಲ್ಯವಾದ ಸಾಲುಗಳು.ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬಹು ಯೋಗ್ಯವಾದ ಬರಹಗಳು.ನಾವು ಮಾತನಾಡುವಾಗ ಹಿರಿಯರ ಈ ನುಡಿಗಳನ್ನು ನೆನಪಿಸಿಕೊಳ್ಳುವುದು ಒಳ್ಳೆಯದು.
 

ಲೇಖಕರು

Manjuladevi

'ವಿನ್ಯಾಸ' ದ ಚಿಲಿಪಿಲಿ

ನಾನು ಕನ್ನಡ ಅಭಿಮಾನಿ. ಕನ್ನಡ ಪುಸ್ತಕಗಳನ್ನು ಓದುವುದು ಮತ್ತು ಬಿಡುವಿನಲ್ಲಿ ಕತೆ,ಕವನಗಳನ್ನ ಬರೆಯುವುದು ನನ್ನ ಹವ್ಯಾಸ.

ಅನಿಸಿಕೆಗಳು

Vishy ಶುಕ್ರ, 03/05/2010 - 09:54

ಮಾತಿನ ಬಗ್ಗೆ ಬರೆದಿರುವ ಲೇಖನ ತು೦ಬ ಸೊಗಸಾಗಿ ಬ೦ದಿದೆ.  ಮುಖ್ಯವಾಗಿ ಬಸವಣ್ಣನವರ 'ನುಡಿದರೆ ಲಿ೦ಗ ಮೆಚ್ಚಿ ಅಹುದಹುದೆನಬೇಕು' ಮತ್ತು ಜನಪದದ ಅನುಭವದ ಮಾತುಗಳು ತು೦ಬ ಸತ್ಯವಾಗಿದೆ.

ತೇಜಸ್ವಿನಿ ಹೆಗಡೆ ಶುಕ್ರ, 03/05/2010 - 10:57

ತುಂಬಾ ಸುಂದರವಾಗಿ ಮಾತಿನ ಮಹತ್ವವನ್ನು ತಿಳಿಸಿದ್ದೀರಿ. ಚೆನ್ನಾಗಿದೆ.
ಇಷ್ಟೊಂದು ಶಕ್ತಿಯನ್ನು ಕೊಟ್ಟಿರುವ ಆ ಭಗವಂತ ಮಾತನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸೌಹಾರ್ದಯುತವಾಗಿ ಬಾಳ್ವೆ ಮಾಡುವ ವಿವೇಚನೆಯನ್ನೂ ಕೊಟ್ಟಿದ್ದಾನೆ. ಆದರೆ ಅವಿವೇಕಿಯಂತೇ ವರ್ತಿಸುವ ಮನುಷ್ಯ ಮಾತನ್ನೇ ಇರಿಯುವ ಅಸ್ತ್ರವನ್ನಾಗಿಸಿಕೊಂಡು ಮನಸುಗಳ ಕಗ್ಗೊಲೆ ಮಾಡುತ್ತಿರುತ್ತಾನೆ ಅಲ್ಲವೇ?
ಅದಕ್ಕೇ ಬಹುಶಃ ಹೇಳಿರುವುದು "ಮಾತು ಬೆಳ್ಳಿ, ಮೌನ ಬಂಗಾರ" ಎಂದು. ಕೆಲವೊಮ್ಮೆ ಮಾತಿಗಿಂತ ಮೌನದೊಳಗಿನ ಶಕ್ತಿಯೇ ಹೆಚ್ಚಾಗಿರುತ್ತದೆ ಎಂದೆನಿಸುತ್ತದೆ.

ವಿ.ಎಂ.ಶ್ರೀನಿವಾಸ ಶುಕ್ರ, 03/05/2010 - 15:15

ಒಳ್ಳೆ ಕವಿತೆಗಳ ಸಂಗ್ರಹ ಮಾಡಿದ್ದೀರಿ.

Manjuladevi ಮಂಗಳ, 03/09/2010 - 20:33

 ಸ್ನೇಹಿತರೆ, ಲೇಖನವನ್ನು ಓದಿ ಪ್ರತಿಕ್ರಿಯೆ ನೀಡಿದ ನಿಮಗೆ ನನ್ನ ಧನ್ಯವಾದಗಳು 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.