Skip to main content

ಮುಖಕ್ಕೆ ಮಸಿ ಬಳಿದರೆ, ಕರ್ನಾಟಕ ಬಂದ್ ಮಾಡ್ ಬೇಕಾ..?

ಬರೆದಿದ್ದುFebruary 23, 2010
9ಅನಿಸಿಕೆಗಳು

23ವರ್ಷಕ್ಕೆ ವಿಧಿವಶರಾದ ಭಗತ್ ಸಿಂಗ್ ರಂತಹ ಹೋರಾಟಗಾರ ಇವತ್ತಿಗೂ ನಮಗೆ ಪ್ರಸ್ತುತವಾಗುತ್ತಾರೆ, ಯುವಕರಿಗೆ ಆದರ್ಶವಾಗುತ್ತಾರೆ. ಆದರೆ 80 ವರ್ಷಕ್ಕೂ ಮೇಲ್ಪಟ್ಟು 'ಗೌಡ'ಸ್ತಿಕೆ ಮಾಡುವವರು ಹೋರಾಟಗಾರರು ಎನಿಸುವುದೇ ಇಲ್ಲ. ಅವತ್ತಿನ ಹೋರಾಟಗಾರರ ಬಗ್ಗೆ ಗೌರವಗಳಿದ್ದರೆ, ಇವತ್ತಿನ ಹೋರಾಟಗಾರರ ಬಗ್ಗೆ ಅನುಮಾನಗಳಿವೆ. ಅಸಲಿಗೆ ಈ ಹೋರಾಟ ಅಂದರೇನು..? ಈ ಹೋರಾಟಗಾರರು ಯಾರು..? ಇತ್ತಿಚೆಗೆ ನನ್ನ ಬಹುವಾಗಿ ಕಾಡುತ್ತಿರುವ ಪ್ರಶ್ನೆ ಇದು.
ಇದರ ಬಗ್ಗೆ ಚರ್ಚೆಮಾಡುವ ಮುನ್ನ ಡಾ.ವಿಷ್ಣುವರ್ಧನ್ ರವರು ಹೊಗೇನಕಲ್ ವಿವಾದದ ಸಂದರ್ಭದಲ್ಲಿ ಹೋರಾಟಗಳ ಬಗ್ಗೆ ಹೇಳಿರುವ ಒಂದು ಮಾತು ಹೀಗಿದೆ.  "ಇತ್ತೀಚಿನ ಹೋರಾಟಗಳು ಅರಿವಿನಿಂದ ಹುಟ್ಟುತ್ತಿಲ್ಲ, ಪ್ರಚಾರಕ್ಕಾಗಿ, ಸ್ವಹಿತಾಸಕ್ತಿಗಾಗಿ ಹುಟ್ಟುತ್ತಿವೆ. ಯಾರೋ ಕರೆದರು, ಮತ್ತ್ಯಾರೋ ಹೋದರು, ದಿಕ್ಕಾರ ಕೆಲವರಿಗೆ, ಜೈಕಾರ ಕೆಲವರಿಗೆ, ಹಾಕಿ ಸಂಜೆ ಮನೆಗೆ ಬಂದರು ಅನ್ನುವಂತಾಗಿಬಿಟ್ಟಿದೆ. ಎಲ್ಲಿವರೆಗೂ ಈ ಹೋರಾಟಗಳು ಅರಿವಿನಿಂದ ಹುಟ್ಟುವುದಿಲ್ಲವೋ ಅಲ್ಲಿವರೆಗೆ ಜನಹಿತ ಗೆಲ್ಲದೇ ಪಟ್ಟಭದ್ರಹಿತಾಸಕ್ತಿಗಳು ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತವೆ ಅಷ್ಟೆ" .
 ದಿನಬೆಳಗಾದರೆ ಸಾಕು ದಿನಪತ್ರಿಕೆಗಳಲ್ಲಿ  ಕಾವೇರಿದ ಕಾವೇರಿ ಹೋರಾಟ, ಇಂದು ಹೊಗೇನಕಲ್ ಚಲೋ ಚಳುವಳಿ.ಎಂಇಎಸ್ ಮತ್ತು ಮಹಾರಾಷ್ಠ್ರದ ವಿರುಧ್ದ ತೀವ್ರಗೊಂಡ ಕರವೇ ರಾಜ್ಯವ್ಯಾಪಿ ಹೋರಾಟ,  ರೈತರ ಪರವಾಗಿ, ನೈಸ್ ನ ವಿರುಧ್ದವಾಗಿ ದೇವೇಗೌಡರ ಧರಣಿ ಇಂದಿನಿಂದ, ಮಸಿಬಳಸಿಕೊಂಡ ಪ್ರಮಾ(ಮೋ)ದ ದಿಂದಾಗಿ ಇಂದು ಕರ್ನಾಟಕ ಬಂದ್. ಊಫ್... ಒಂದೇ ಎರಡೇ ನೂರಾರು ಅಲ್ಲಲ್ಲ ಸಾವಿರಾರು ಹೋರಾಟಗಳು. ಆದರೆ....
ಈದಿನ ಪ್ರತಿಭಟನೆಗಳು ಮೂಲಸ್ವರೂಪದಲ್ಲೇ ಉಳಿದಿದ್ದಾವ..?
ಪ್ರತಿಭಟನೆಯಿಂದ ಸಿಗುವ ಪ್ರಯೋಜನ ಜನರಿಗೆ ತಲುಪುತ್ತಿದೆಯಾ..?  
ಪ್ರಜೆಗಳು ಪ್ರತಿಭಟನೆಯನ್ನು ಮನಃಪೂರ್ವಕವಾಗಿ ಮಾಡುತ್ತಿದ್ದಾರ..?   
ಅಸಲಿಗೆ ಪ್ರತಿಭಟನೆಗಳು ಅರಿವಿನಿಂದ ಹುಟ್ಟುತ್ತಿವೆಯಾ...?
ಖಂಡಿತ ಇಲ್ಲ. ಇವತ್ತು ಯಾರಿಗೂ ಪ್ರಸ್ತುತ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಆ ಸಮಸ್ಯೆಗಳ ಸಾಧಕ-ಬಾಧಕಗಳ ಬಗ್ಗೆ ಕಿಂಚಿತ್ತೂ ಮಾಹಿತಿ ಇರುವುದಿಲ್ಲ. ಏನೂ ತಿಳಿಯದೇ ಹಲವಾರು ವಿಷಯಗಳ ಬಗ್ಗೆ ಮಾತಾಡ್ತೀವಿ. ವಿಸ್ಮಯನಗರಿಯ ಒಬ್ಬ ಜನಪ್ರಿಯ ಪಿಸುಮಾತಗಾರರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾರು ಎಂಬುದು ಗೊತ್ತಿಲ್ಲ ಎಂಬುದು ನಿಮಗೆ ಗೊತ್ತಿರಲಿ. ಈಗ ಆ ವಿಷಯ ಬಿಟ್ಟು ಈ ಹೋರಾಟಗಳ ಬಗ್ಗೆ ನಮ್ಮನ್ನು ನಾವೇ ಪ್ರಾಮಾಣಿಕವಾಗಿ ಕೇಳಿಕೊಳ್ಳೋಣ.
ನಮ್ಮಲ್ಲಿ ಎಷ್ಟು ಜನಕ್ಕೆ ಬಿಟಿ ಬದನೆಕಾಯಿಯ ಅನುಕೂಲ-ಪ್ರತಿಕೂಲಗಳ ಬಗ್ಗೆ ಗೊತ್ತು.?  
ಎಷ್ಟು ಜನಕ್ಕೆ ಕಾವೇರಿ ನ್ಯಾಯಾಧೀಕರಣದ ಬಗ್ಗೆ ಗೊತ್ತು..?  
ಹೊಗೇನಕಲ್ ನಲ್ಲಿ ನಿಜವಾಗಿಯೂ ನಡೀತಿರೋದು ಏನು..?     
ನೈಸ್ ನ ಬಗ್ಗೆ ಸಂಪೂರ್ಣ ಮಾಹಿತಿ ಎಷ್ಟು ಜನಕ್ಕೆ ಇದೆ..? 
ಇವುಗಳ ಬಗ್ಗೆ ತಿಳಿದವರು ನಮ್ಮಲ್ಲಿ ಇರಬಹುದು ಆದರೆ ಅವರ ಸಂಖ್ಯೆ ತುಂಬಾ ಕಡಿಮೆ. ಆದರೂ ನಾವು ಅವುಗಳ ಬಗ್ಗೆ ಮಾತಾಡ್ತೀವಿ, ಬರೀತೀವಿ, ಸಭೆಗಳಲ್ಲಿ ಗುಲ್ಲೆಬ್ಬಿಸುತ್ತೇವೆ. ಯಾಕೀಗೇ..? ನಮ್ಮ  ಇಂತಹ ಸಿನಿಕತನದ ಲಾಭ ಪಡಿತಿರೋದು ಯಾರು ಗೊತ್ತಾ.. ನಮ್ಮನ್ನು ಆಳುವವರು. ಅಸಲಿಗೆ ಅವರಾದರು ಎಂತಹವರು ಅಂತ ನಾವು ಯೋಚಿಸುವುದೇ ಇಲ್ಲ.!
ಕರ್ನಾಟಕ ರಕ್ಷಣಾವೇದಿಕೆ ಮಾಡಿದ್ದನ್ನು, ಜಯಕರ್ನಾಟಕ ಸಂಘಟನೆ ಖಂಡಿಸುತ್ತೆ. ಜಯಕರ್ನಾಟಕ ಮಾಡಿದ್ದನ್ನು ವಾಟಾಳ್ ಖಂಡಿಸುತ್ತಾರೆ. ಇವರೆಲ್ಲ ಮಾಡಿದ್ದಕ್ಕೆ ಭಿನ್ನವಾಗಿ ಕರುನಾಡು ಸೇನೆ ಮಾಡುತ್ತೆ. ಅಂದು ದೇವೇಗೌಡ ಮಾಡಿದ್ದನ್ನೇ ಇಂದು ಯಡಿಯೂರಪ್ಪ ಮಾಡಿದರೆ ಅದು ತಪ್ಪಾಗುತ್ತೆ. ಸಿದ್ಧರಾಮಯ್ಯ ವಲಸೆ ಮಾಡಿದರೆ ತಪ್ಪಿಲ್ಲ ಆದರೆ ಬೇರೆಯವರು ಮಾಡಿದರೆ ತಪ್ಪು. ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದರೆ ಸರಿ, ರಾಹುಲ್ ಗಾಂಧಿ ಮಾಡಿದರೆ ತಪ್ಪು. ಹೀಗೆ ಒಬ್ಬರು ಮಾಡಿದ್ದು ಇನ್ನೊಬ್ಬರಿಗೆ ರುಚಿಸಲ್ಲ. ಜನಕ್ಕೆ ಕಿವಡೆ ಕಾಸಿನ ಲಾಭವೂ ಇಲ್ಲದ ವಿಷಯಗಳನ್ನು ಇಟ್ಟುಕೊಂಡು ಇವರು ಹೋರಾಟಗಳನ್ನು ಹಮ್ಮಿಕೊಳ್ಳುತ್ತಾರೆ. ತಮ್ಮ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುತ್ತಾರೆ. ಯಾರಿಗೂ ಜನಹಿತ ಮುಖ್ಯವಲ್ಲ, ತಮ್ಮ ಸ್ವಹಿತಾಸಕ್ತಿವಷ್ಟೇ ಮುಖ್ಯ. ಯಾವು ಹೋರಾಟದಿಂದ ಎಷ್ಟು ಲಾಭ ಎನ್ನುವುದರ ಮೇಲೆ ಹೋರಾಟದ ಸ್ವರೂಪ ನಿರ್ಧರಿಸಲ್ಪಡುವುದು ದುರ್ದೈವವೇ ಸರಿ.
ಭಗತ್ ಸಿಂಗ್ ತಮ್ಮ ಲೇಖನವೊಂದರಲ್ಲಿ ಹೇಳುತ್ತಾರೆ. " ಹೋರಾಟಗಾರನಾದವನು ಒಂಟಿಕಾಲಿನಲ್ಲಿ ನಿಂತು ಬಿರುಗಾಳಿಯನ್ನು ಎದುರಿಸುವಂತಹ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು" ಆದರೆ ಇದು ಸುಲಭವಲ್ಲ. ಇದಕ್ಕೆ ತುಂಬಾ ಪ್ರೇರಣೆ ಬೇಕಾಗುತ್ತೆ. ನಮ್ಮ ಕಾಲಕೆಳಗಿನ ನೆಲ ಕುಸಿಯುವಂತಹ ಅನುಭವವಾದಗ, ನಮ್ಮ ಪ್ರಾಣವನ್ನೇ ಬೇಕಾದರೂ ಬಲಿ ಕೊಟ್ಟೇನು "ಅದಕ್ಕಾಗಿ"  ಎನ್ನುವಂತಹ  ಘಟನೆ ಸಂಭವಿಸಿದಾಗ ಹುಟ್ಟುವ ಹೋರಾಟವೇ ನಿಜವಾದುದು . ಬಹುಶಃ ನಿಮಗೆ ಅರಿವಾಗಿರಬೇಕು ಇಂತಹ ಹೋರಾಟ ಇಂದಿನ ದಿನಗಳಲ್ಲಿ ಹುಟ್ಟಲು ಸಾಧ್ಯವೇ ಇಲ್ಲ ಅಂತ.
ಯಾವೋನೋ ಮುಖಕ್ಕೆ ಮಸಿ ಬಳಿದರು ಅನ್ನುವ ಕಾರಣಕ್ಕೆ ಇಡೀ ಕರ್ನಾಟಕ ಬಂದ್ ಗೆ ಕರೆಗೊಡುವ, ಕೋಟ್ಯಾಂತರ ರುಪಾಯಿ ಸರ್ಕಾರಿ ಆಸ್ತಿ ನಷ್ಟ ಮಾಡುವ ಈ ಮತಿಹೀನರಿಗೆ ಏನೇಳುವುದು..? ಹುಡುಕಿದರೆ ಇವರ ಸಂಘಟನೆಯಲ್ಲಿ ಸಾವಿರ ಜನ ಇಲ್ಲ. ಆರು ಕೋಟಿ ಕನ್ನಡಿಗರ ಕರ್ನಾಟಕವನ್ನು ಬಂದ್ ಮಾಡ್ತಾರಂತೆ. ಏನ್ ಇವರಪ್ಪನದಾ ಕರ್ನಾಟಕ..? ಯಾವನೋ ನಾಯಕ, ಮತ್ತೊಬ್ಬ ನಾಯಕನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ಅಂದರೆ ಸಾಕು ಕಂಡಕಂಡಲೆಲ್ಲ ರಸ್ತೆ ತಡೆ, ಬಸ್ ಗಳ ಪುಡಿಪುಡಿ. ಅಸಲಿಗೆ ಈ ಎಲ್ಲಾ ಘಟನೆಗಳಲ್ಲಿ ಎಲ್ಲಾದರೂ ಪ್ರಜೆಗಳ ಹಿತ ಅಡಗಿದೆಯಾ..? ಪ್ರಜೆಗಳ ತೆರಿಗೆ ಹಣವನ್ನು ಪೋಲು ಮಾಡುವುದು ಬಿಟ್ಟು:.
ಇಂತಹ ಸಂದಿಗ್ದ ಸ್ಥಿತಿಯಲ್ಲಿ ಇಂದಿನ ಯುವಕರಲ್ಲಿ ಜಾಗೃತಿ ಮೂಡಬೇಕಿದೆ. ನಾಯಕನ ಅಂಧಾನುಕರಣೆಗಿಂತ ವಾಸ್ತವಗಳ ಬಗ್ಗೆ ಅರಿವು ಹೆಚ್ಚಬೇಕಿದೆ. ಕೊನೆಯಲ್ಲಿ ಒಂದು ಮಾತು ಭಗತ್ ಸಿಂಗ್ ಹೇಳಿದ್ದು "ನಿಜವಾದ ಹೋರಾಟಗಾರನಿಗಿರಬೇಕಾದ ಕನಿಷ್ಠ ಅರ್ಹತೆ ಎಂದರೆ ಎಲ್ಲವನ್ನು ಪ್ರಶ್ನಿಸುವುದು. ಪ್ರಶ್ನೆಗೆ ಸಿಕ್ಕ ಉತ್ತರವನ್ನು ಮತ್ತೆ ವಿಮರ್ಶೆಗೆ ಒಳಪಡಿಸಿ , ತಮ್ಮದೇ ಆದ ಸ್ವಂತಿಕೆಯನ್ನು ರೂಡಿಸಿಕೊಂಡು ಅದೇ ಹಾದಿಯಲ್ಲಿ ನಡೆಯುವುದು".   ಸಾಧ್ಯಾನ..?
ಸಾಧ್ಯ... ಅಸಾಧ್ಯತೆಗಳ ನಿರೀಕ್ಷೆಯಲ್ಲಿರುವೆ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

uma s b m (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 02/23/2010 - 19:53

ತುಂಬಾ ಚೆನ್ನಾಗಿ ಬರಿದಿದ್ದೀರಾ ಸರ್!

ಕೆಎಲ್ಕೆ ಧ, 02/24/2010 - 10:17

ನೀವು ಬರೆದ ವಿಷಯದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಯಾರೇ ಮಾಡಲಿ, ಏನೇ ಆಗಲಿ ಚಳುವಳಿಗಳು ಆಗುತ್ತಲಿರಬೇಕು ಎಂದು ಸಮರ್ಥಿಸುವವನು ನಾನು. ಚಳುವಳಿ ಭಾರತೀಯ ಸಂಸ್ಕೃತಿ. ಪ್ರಜಾಪ್ರಭುತ್ವದ ಬುನಾದಿ.ಚಳುವಳಿಗಾರರಿಗೆ ಅರ್ಹತೆಯ ಪ್ರಮಾಣ ಪತ್ರ ನಿಗದಿ ಪಡಿಸಿ ಈಗ ನಡೆಯುತ್ತಿರುವ ಅಲ್ಪಮಾತ್ರ ಪ್ರತಿಭಟನೆ/ಚಳುವಳಿಗಳೂ ಇಲ್ಲದ ಸಮಾಜ ಕಲ್ಪಿಸಿಕೊಳ್ಳಿ!
ಅಂದಹಾಗೆ, ಮುಖಕ್ಕೆ ಮಸಿ ಬಳಿದುದ್ದಕ್ಕೆ 'ಬಂದ್' ಮಾಡಿದ್ದನ್ನು ಸಮರ್ಥಿಸುತ್ತಿದ್ದೇನೆ ಎಂದು ತಿಳಿಯದಿರಿ.ಅದು ಚಳುವಳಿಯಲ್ಲ.  

 ನಮಸ್ತೆ ಶ್ರೀನಿವಾಸ್ ರವರೆ,
 ಸಮಾಜದಲ್ಲಿ ಪ್ರತಿಭಟನೆ/ಚಳುವಳಿಗಳೂ ಅಗತ್ಯವೂ ಹೌದು ಅನಿವಾರ್ಯವು ಹೌದು, ಆದರೆ ಅದರ ಕಾರಣ ಸಮಾಜದ ಕಾಳಜಿ ಮತ್ತು ಉನ್ನತಿಯತ್ತಿದ್ದರೆ ಮಾತ್ರ ಅದು ಸಮರ್ಥನೀಯ. ಕೇವಲ ಮುಖಕ್ಕೆ ಮಸಿ ಬಳಿದ ಮಾತ್ರಕ್ಕೆ ಕರ್ನಾಟಕ ಬಂದ್ , ಅನಗತ್ಯ ಮತ್ತು ಅಸಹಜವಾದ್ದದ್ದು.
ಇನ್ನೂ " ಭಗತ್ ಸಿಂಗ್ ತಮ್ಮ ಲೇಖನವೊಂದರಲ್ಲಿ ಹೇಳುತ್ತಾರೆ. " ಹೋರಾಟಗಾರನಾದವನು ಒಂಟಿಕಾಲಿನಲ್ಲಿ ನಿಂತು ಬಿರುಗಾಳಿಯನ್ನು ಎದುರಿಸುವಂತಹ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು"
ಬಹುಶಃ ಇಂತಹವರನ್ನು ನಾವು ಕೇವಲ ಲೇಖನಗಳಲ್ಲಿ ಕಲ್ಪಿಸಲು ಸಾದ್ಯ ಅನಿಸುತ್ತದೆ, ಅಂತಹ ಎದೆಗಾರಿಕೆ ಇಂದಿನ ಚಳುವಳಿಗಾರರಿಗಿಲ್ಲ ಅನಿಸುತ್ತದೆ. ಇದು ನನ್ನ ಅಭಿಪ್ರಾಯ. 

ಉಮಾಶಂಕರ ಬಿ.ಎಸ್ ಗುರು, 02/25/2010 - 19:41

ಅರ್ಹರಿಗೆ ಪ್ರಶಸ್ತಿಕೊಡಲು ಅರ್ಜಿ ಆಹ್ವಾನಿಸುವ ಈ ಯುಗದಲ್ಲಿ ಇಂತಹ 'ಓರಾಟಗಳನ್ನಲ್ಲದೆ' ಮತ್ತೇನನ್ನು ನಿರೀಕ್ಷಿಸಲು ಸಾಧ್ಯವಿದೆ ಸರ್! ನಿಮ್ಮ ಲೇಖನ ಚೆನ್ನಾಗಿದೆ ಮತ್ತು ಪ್ರಸ್ತುತದ ಕನ್ನಡಿ.
ಆದರೂ ನಿಮ್ಮ ಈ ಲೇಖನ ಓದಿದ ಮೇಲೆ ಹೋರಾಟಗಳೇ ಬೇಡವೆನ್ನುವ ವೈರಾಗ್ಯ ನಿಮ್ಮಲ್ಲಿದೆಯೇನೋ ಅನ್ನಿಸುತ್ತದೆ. ಇಂತಹ 'ಓರಾಟ' ಗಳನ್ನು ನೋಡುತ್ತಿದ್ದರೆ ಹಾಗನ್ನಿಸುವುದೂ ಸಹಜವೇ. ಆದರೂ ತಾತ್ವಿಕ ನೆಲಗಟ್ಟಿನ ಹೋರಾಟಗಳು ನಿಜಕ್ಕೂ ನ್ಯಾಯ ಒದಗಿಸುತ್ತವೆ ಎಂದು ನನಗನ್ನಿಸುತ್ತದೆ.

ವಿ.ಎಂ.ಶ್ರೀನಿವಾಸ ಶುಕ್ರ, 02/26/2010 - 13:58

ಪ್ರತಿಕ್ರಿಯಿಸಿದ ಸ್ನೇಹಿತರಿಗೆ ಧನ್ಯವಾದಗಳು.
ಉಮಾಶಂಕರ್ ರವರೇ  ನಿಮ್ಮ ಅಭಿಪ್ರಾಯ ಓದಿದ ಮೇಲೆ ನಾನು ಮತ್ತೊಮ್ಮೆ ನನ್ನ ಲೇಖನವನ್ನು ಓದಿದೆ. ಆತರದೊಂದು ಸಂದೇಶ ಪರೋಕ್ಷವಾಗಿ ನನ್ನ ಲೇಖನ ಪ್ರತಿಬಿಂಬಿಸುತ್ತಿದೆ ಎನಿಸಿತಾದರೂ ಕೊನೆಯಲ್ಲಿ ನಾನು ಈ ರೀತಿ ಹೇಳಿದ್ದೇನೆ "ಇಂದಿನ ಯುವಕರಲ್ಲಿ ಜಾಗೃತಿ ಮೂಡಬೇಕಿದೆ. ನಾಯಕನ ಅಂಧಾನುಕರಣೆಗಿಂತ ವಾಸ್ತವಗಳ ಬಗ್ಗೆ ಅರಿವು ಹೆಚ್ಚಬೇಕಿದೆ" ಅಂದರೆ ಇದರರ್ಥ ತಾತ್ವಿಕ ನೆಲೆಗಟ್ಟಿನ ಮೇಲೆ ಹೋರಾಟಗಳು ರೂಪಗೊಳ್ಳಬೇಕು ಎಂದು ತಾನೆ..?
ಪಾರ್ವತಿಯವರೇ ನಿಮ್ಮಷ್ಟು ನಿರಾಶವಾದಿ ನಾನಲ್ಲ.! ಅಸಾಧ್ಯ ಎನ್ನುವ ಮಾತಿಗೆ ನಾ ಬೆಲೆಕೊಡೊಲ್ಲ. ಸಾತ್ವಿಕ ಮತ್ತು ತಾತ್ವಿಕ ಹೋರಾಟಗಳು ರೂಪಗೊಳ್ಳೋಕೆ ಸಾಧ್ಯವಿದೆ. ಆದರೆ ಅಂತಹ ಹೋರಾಟ ರೂಪಗೊಳ್ಳೋಕೆ ಅಂತಹುದೇ ಸಮಸ್ಯೆಗಳಿರಬೇಕಾಗುತ್ತೆ. ಉದಾಹರಣೆಗೆ ಕಾವೇರಿ ಹೋರಾಟವನ್ನೇ ಗಮನಿಸಿಃ ಕನ್ನಡಿಗರೆಲ್ಲರೂ ಅದರ ವಿರುಧ್ದ ಸೆಟೆದು ನಿಲ್ತೀವಿ. ಬೀದಿಗಿಳಿದು ಜಗಳ ಮಾಡ್ತೀವಿ.ಇದಕ್ಕೆ ಯಾವ ದೊಣ್ಣೆ ನಾಯಕನ ನೇತೃತ್ವವೂ ಬೇಕಾಗಿಲ್ಲ.!. ಅಲ್ಲಿ ಪ್ರತಿಯೊಬ್ಬರೂ ನಾಯಕರೇ ಆಗಿರುತ್ತಾರೆ. ಅದೇ ಮುಖಕ್ಕೆ ಮಸಿ ಬಳಿದರೂ ಅಂತ ಕರ್ನಾಟಕ ಬಂದ್ ಮಾಡಿಬಿಟ್ಟರೆ ಜನ ಇರಲಿ ನಾಯಿ ಕೂಡ ಅವರ ಹಿಂದೆ ಹೋಗೋಲ್ಲ...!!
ಕೆಲ್ಕೆರವರೇ ನಿಮ್ಮ ಮಾತಿಗೆ ನನ್ನ ಸಹಮತವಿದೆ. ಪ್ರತಿಭಟನೆಗಳಿರಲೇ ಬೇಕು, ಹಾಗೆ ಅದಕ್ಕೆ ಸಂಬಂಧಿಸಿದಂತೆ ಜ್ವಲಂತ ಸಮಸ್ಯೆಯೂ ಇರಬೇಕು. ಕೇವಲ ಕೆಲವರ ಹಿತಾಸಕ್ತಿಗಾಗಿ ಪ್ರತಿಭಟನೆಗಳು ಹುಟ್ಟಬಾರದು. ಹೀಗಾಗಿಬಿಟ್ಟರೆ ನಿಜವಾದ ಹೋರಾಟಗಳಿಗೆ, ಹೋರಾಟಗಾರರಿಗೆ ಬೆಲೆ ಇರೋಲ್ಲ.!!

ಪಾರ್ವತಿ.ಜಿ.ಆರ್ ಸೋಮ, 03/01/2010 - 11:06

ಸಾರ್ ನಿರಾಶವಾದಿ ನಾನಲ್ಲ, ನಿರಾಶ ಭಾವ ಇರುವುದು, ನಿಮ್ಮ ಲೇಖನದಲ್ಲಿ.
ಇನ್ನೂ ನಾಡು, ನುಡಿ ವಿಷಯದಲ್ಲಿ ನಾವೂ ಎಲ್ಲರೂ ಒಂದೇ.
ನಿಮ್ಮ  ಪ್ರತಿಕ್ರಿಯೆಗೆ ಧನ್ಯವಾದಗಳು.
 

ಜಯೀಭವ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/02/2010 - 12:22

ಪಾರ್ವತಿಯವರೇ ನೀವು ಹೇಳಿದ ಹಾಗೆ ಅವರ ಲೇಖನದಲ್ಲಿ ನಿರಾಶವಾದ ಜೊತೆಗೆ ಕೆಚ್ಚು ಮತ್ತು ಕಿಚ್ಚಿದೆ.

ಉಮಾಶಂಕರ ಬಿ.ಎಸ್ ಮಂಗಳ, 03/02/2010 - 13:27

ಶ್ರೀನಿವಾಸ್ ರವರೆ ನಿಮ್ಮ ಸೌಜನ್ಯಭರಿತ ಪ್ರತಿಕ್ರಿಯೆಗೆ ಧನ್ಯವಾದಗಳು

ರಾಜೇಶ ಹೆಗಡೆ ಸೋಮ, 03/01/2010 - 21:39

ಹಾಯ್ ಶ್ರೀನಿವಾಸ್ ಅವರೇ,
ತುಂಬಾ ಚೆನ್ನಾಗಿದೆ ನಿಮ್ಮ ವಿಚಾರ ಧಾರೆ.
ನಿಜ ಅಕಸ್ಮಾತ್ ದೇವೆಗೌಡರು ಅಥವಾ ಅವರ ಮಕ್ಕಳೇ ಅಧಿಕಾರದಲ್ಲಿದ್ದರೆ ನೈಸ್ ವಿರುದ್ಧ ಯಾವ ತಕರಾರು ಎತ್ತದೇ ಖೇಣಿ ಕೊಡುವ ಬಾಡೂಟ ತಿಂದು ತೇಗುತ್ತಿದ್ದರೇನೋ!
ಈಗ ತಮ್ಮನ್ನು ಗೆಲ್ಲಿಸಿದ 'ಋಣ' ತೀರಿಸಲು ಅಕ್ರಮ ಗಣಿಗಾರಿಕೆ ವಿರುದ್ಧ ಸೊಲ್ಲೆತ್ತದೇ ಸುಮ್ಮನೆ ಕುಳಿತಿದ್ದಾರೆ ಯುಡಿಯೂರಪ್ಪನವ್ರು. ಮೈಸೂರು, ಶಿವಮೊಗ್ಗ ಹಾಗೂ ಬಳ್ಳಾರಿ ಅಭಯಾರಣ್ಯಗಳಲ್ಲಿ ಸಹ ಪರವಾನಿಗೆ ಕೊಡುತ್ತಿರುವ ಸುದ್ದಿ ಬಂದಿದೆ. ಬಹುಶಃ ಅಧಿಕಾರ ಮುಗಿದ ನಂತರ ವಿರೋಧ ಪಕ್ಷದಲ್ಲಿ ಅವರೂ ಸಹ ಅವೆಲ್ಲವನ್ನೂ ವಿರೋಧ ಮಾಡುತ್ತಾ ಕುಳಿತು ಕೊಳ್ಳಬಹುದು!!
ಇವೆಲ್ಲವನ್ನೂ ಹೋರಾಟ ಎನ್ನುವದಕ್ಕಿಂತ ರಾಜಕೀಯ ಎಂದರೆ ಚೆನ್ನ.
ಟಿವಿ, ಪತ್ರಿಕೆಗಳು ಮುಂತಾದ ಮಾಧ್ಯಮಗಳು ನಾಡಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕನ್ನಡಿ ಇದ್ದಂತೆ. ಅವು ಸರಿಯಾಗಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿರುವವ ವರೆಗೆ ಎಲ್ಲ ವಿಚಾರಗಳು ಜನರನ್ನು ಸರಿಯಾಗಿ ತಲುಪುತ್ತಲೇ ಇರುತ್ತವೆ. ಅಲ್ವಾ?
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.