ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 31 January 2010

ಮೊನ್ನೆ ತಾನೆ ಟಿವಿ ಚಾನೆಲ್ ಬದಲಾಯಿಸುತ್ತಿದ್ದೆ. ಆಗ ತಮಿಳಿನ ಸನ್ ಟಿವಿಯಲ್ಲಿ ಡೀಲ್ ಔರ್ ನೋ ಡೀಲ್ ಪ್ರೊಗ್ರಾಂ ಬರ್ತಾ ಇತ್ತು. ಆ ಕಾರ್ಯಕ್ರಮದ ಹೆಸರನ್ನು ಸಂಪೂರ್ಣವಾಗಿ ತಮಿಳು ಲಿಪಿಯಲ್ಲೇ ಬರೆದಿದ್ದರು. ಅದೇ ಕಾರ್ಯಕ್ರಮದ ಹೆಸರನ್ನು ಇಂಗ್ಲೀಷ್ ಲಿಪಿಯಲ್ಲಿ ನಮ್ಮ ಉದಯ ಟಿವಿಯಲ್ಲಿ ಬರೆಯುತ್ತಿದ್ದಾರೆ. ಇದು ಕೇವಲ ಈ ಕಾರ್ಯಕ್ರಮಕ್ಕೆ ಸೀಮಿತವಲ್ಲ.ಕೆಲವು ಕನ್ನಡ ಟಿವಿ ಶೋ ಗಳ ಹೆಸರು ಹೀಗಿದೆ ನೋಡಿ."SUPERSTAR ಕರ್ನಾಟಕ", "D FOR DANGER", "SAREGAMAPA CHALLENGE", "STAR SINGER", ಇತ್ಯಾದಿ ಇತ್ಯಾದಿ. ಇಂಗ್ಲೀಷ್ ಹೆಸರಿದ್ದರೆ ಇರಲಿ. ಆದರೆ ಕನ್ನಡ ಲಿಪಿಯಲ್ಲಾದರೂ ಅದನ್ನು ಬರೆಯಬೇಕಿತ್ತಲ್ಲವೇ?


 ಇನ್ನು ನಿರೂಪಕರ ಹಾಗೂ ಅತಿಥಿಗಳ ಬಾಯಲ್ಲಿ ಬರೀ ಇಂಗ್ಲೀಷ್ ಮಂತ್ರ. ನೋಡಿದರೆ ಇವರು ಕಾರ್ಯಕ್ರಮ ನಡೆಸುವದು ಇಂಗ್ಲೆಂಡಿನ ಜನರಿಗೆ ಎಂಬಂತೆ ಆಡುತ್ತಾರೆ.


ಕನ್ನಡಿಗರೇ ಕನ್ನಡ ಲಿಪಿ ಕಡೆಗಣಿಸುವದು ಎಷ್ಟರಮಟ್ಟಿಗೆ ಸರಿ? ಕನ್ನಡ  ಓದಲು ಬಾರದವರಿಗೆ ನೀವು ಬಾಯಲ್ಲಿ ಘೋಷಿಸುವ ಹೆಸರೇ ಸಾಕಲ್ಲವೇ? ಹಾಗೂ ಈ ಮೇಲಿನ ಹೆಸರುಗಳನ್ನು ಕನ್ನಡದಲ್ಲಿ ಬರೆಯಲು ಯಾವುದೇ ತಂತ್ರಜ್ಞಾನ ಕೊರತೆ ಇಲ್ಲ. ಆದರೂ ಯಾಕೆ ಹೀಗೆ?


ನಮಗೆ ಕನ್ನಡ ಬಳಸಿ ಎಂದು ಅಮೇರಿಕದಿಂದ ಬರಾಕ್ ಓಬಾಮಾ ಬಂದು ಹೇಳಬೇಕೆ? ಹಾಗೆಯೇ ಇನ್ನೊಂದು ಮಾತು. ಅಕಸ್ಮಾತ್ ಕನ್ನಡ ಹೆಸರಿನ ಕಾರ್ಯಕ್ರಮ ಜನಪ್ರಿಯವಾಗಿರದಿದ್ದರೆ ಅದಕ್ಕೆ ಕಳಪೆ ಕಾರ್ಯಕ್ರಮ, ಕನ್ನಡತನವಿಲ್ಲದ ಬೇರೆ ಭಾಷೆಯ ಕಾರ್ಯಕ್ರಮದ ಅಂಧಾನುಕರಣೆ, ಅಸಂಬಂದ್ಧ ಬಳಕೆ ಇತ್ಯಾದಿ ಕಾರಣವೇ ಹೊರತು ಕನ್ನಡ ಭಾಷೆಯ ತಪ್ಪಲ್ಲ.


ಇದಕ್ಕೆ ಒಂದು ಉದಾಹರಣೆ ನೀಡ ಬಯಸುತ್ತೇನೆ. ಈ ಕೆಳಗಿನ ಸಾಲು ಓದಿ.


ನಿಮ್ಮ ವೇತನವನ್ನು ನೀಡಲಾಗುತ್ತದೆ. ಪಡೆದುಕೊಳ್ಳಿ.


ಇದೇ ಅರ್ಥ ಕೊಡುವ ಈ ಮುಂದಿನ ಸಾಲು ಓದಿ.


ನಿಮ್ಮ ಸಂಬಳವನ್ನು ಕೊಡಲಾಗುತ್ತದೆ. ತೆಗೆದುಕೊಳ್ಳಿ.


ಏಟಿಎಂ ಇರಲಿ ಅಥವಾ ಕನ್ನಡ ಜಾಹೀರಾತಿರಲಿ ಎಲ್ಲ ಕಡೆ ಕನ್ನಡ ಭಾಷೆಯ ಬಳಕೆ ಕೆಟ್ಟದಾಗಿರುತ್ತದೆ. ಯಾಕೆ ಆ ರೀತಿಯ ಶಬ್ದ ಬಳಸುತ್ತಾರೆ? ಈ ಪ್ರಶ್ನೆಗೆ ಉತ್ತರವಿದೆಯೇ?

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.3 (3 ಓಟುಗಳು)
ವಿ.ಎಂ.ಶ್ರೀನಿವಾಸ's picture
ಶುಕ್ರ, 05/02/2010 - 18:29 ರಂದು ವಿ.ಎಂ.ಶ್ರೀನಿವಾಸ ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ನಿಮ್ಮ ಕನ್ನಡಪರ ಕಾಳಜಿಗೆ ಧನ್ಯವಾದಗಳು.ಆದರೆ ಈ ಪ್ರಮಾದ ನಮ್ಮ ನಮ್ಮ ಮದ್ಯೆ ಹೀಗೆ ಸುಮ್ಮನೆ ಹರಿದಾಡುವುದರ ಬದಲು ಕಾರ್ಯರೂಪಕ್ಕೆ ಬಂದರೆ ಚೆನ್ನಾಗಿರುತ್ತದೆ. ನನಗೆ ಮಾತಿಗಿಂತ ಕೃತಿಯ ಮೇಲೆ ಜಾಸ್ತಿ ನಂಬಿಕೆ. ವಿಸ್ಮಯನಗರಿಯ ಎಲ್ಲಾ ಓದುಗರು ಈ ವಿಷಯವಾಗಿ ಎಲ್ಲಾ ವಾಹಿನಿಗಳಿಗೆ ಪತ್ರಬರೆಯುವುದು, ಮುಂದುವರೆದು, ದಿನಪತ್ರಿಕೆಗಳ ವಾಚಕರ ವಿಭಾಗಕ್ಕೂ ಪತ್ರ ಬರೆದು ನಾಡಿನ ಪ್ರಮುಖ ಚಿಂತಕರ ಗಮನ ಸೆಳೆಯುವುದು. ಸಾಧ್ಯವಾದರೆ ಎಲ್ಲರೂ ಒಟ್ಟಾಗಿ ವಾಹಿನಿಗಳ ಮುಂದೆ ಪ್ರತಿಭಟಿಸುವುದು. ವಿಸ್ಮಯನಗರಿ ಕೇವಲ ಬರವಣಿಗೆಗಳಿಗೆ ಸೀಮಿತವಾಗಬಾರದು.ಎಷ್ಟೊಂದು ಕನ್ನಡಿಗರು ಇಲ್ಲಿ ಒಟ್ಟಿಗಿದ್ದಾರೆ. ಬಹುಶಃ ಯಾವುದಾದರೂ ರಾಜಕಾರಣಿ ಹಿಂದೆ ಇಷ್ಟೊಂದು ಜನ ಇದ್ದಿದ್ದರೆ ಅವನು ಇಷ್ಟೊತ್ತಿಗೆ ಕೌನ್ಸಿಲರ್ ಚುನಾವಣೆಗೆ ಟಿಕೆಟ್ ಗಿಟ್ಟಿಸಿಬಿಡುತ್ತಿದ್ದ. ಆದರೆ ವಿಸ್ಮಯದಲ್ಲಿ ಇಷ್ಟೊಂದು ಓದುಗರ ಶಕ್ತಿ ಇದ್ದು ಸುಮ್ಮನಿರುವುದು ಎಂದರೆ ನಿಜಕ್ಕೂ ನೋವಿನ ಸಂಗತಿ.


 


 

ರಾಜೇಶ ಹೆಗಡೆ's picture
ಶನಿ, 06/02/2010 - 08:03 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ಹಾಯ್ ಶ್ರೀನಿವಾಸ್ ಅವರೇ,


ನಿಮ್ಮ ಸಲಹೆಗಳು ಧನ್ಯವಾದಗಳು.


ಖಂಡಿತ ಜೀ ಕನ್ನಡ ವಾಹಿನಿ ಅವರಿಗೆ ಈಮೇಲ್ ಕಳುಹಿಸಿದ್ದೇನೆ. ಅವರ ಈಮೇಲ್ ವಿಳಾಸ ಹೀಗಿದೆ. feedbackzeekannada@zeenetwork.com ವಿಸ್ಮಯ ಓದುಗರೂ ಸಹ ಈಮೇಲ್ ಕಳುಹಿಸಿ.


ಸುವರ್ಣ ಚಾನೆಲ್ ಹಾಗೂ ಉದಯ ಟಿವಿ ಇವರ ಸಂಪರ್ಕ ವಿವರ ಸಿಗಲಿಲ್ಲ. ಸಿಕ್ಕರೆ ತಿಳಿಸಿ.


ಸುಧಾದ ಜಾಣರ ಪೆಟ್ಟಿಗೆಗೆ ಸಹ ಶೀಘ್ರದಲ್ಲೇ ಕಳುಹಿಸುತ್ತೇನೆ. ನೋಡೋಣ ಆಗಲಾದರೂ ಬಗ್ಗುತ್ತಾರಾ ಅಂತಾ. 

ಸಿರಿರಮಣ's picture
ಬುಧ, 03/02/2010 - 13:55 ರಂದು ಸಿರಿರಮಣ ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ಅಯ್ಯೋ ರಾಜೇಶ, ಮಾಧ್ಯಮಗಳಿಗೆ ಇದೊಂದು ದೊಡ್ಡರೋಗ, ಅವರಿಗೆ ಕೇವಲ "ಫಿಗರ‍್" ಗಳು ಬೇಕು, ಭಾಷೆ, ಸಾಹಿತ್ಯ, ಭಾವ ಶೂನ್ಯ.ಅಂಥದನ್ನು ನೋಡುವವರೇ ಇಲ್ಲದಾದಾಗ ಮಾತ್ರ ಅವರ ನಿಲುವು ಬದಲಾಗಲು ಸಾಧ್ಯ. ನಮ್ಮ ಕನ್ನಡಿಗರು, ಅಡುಗೆ ಮಾಡುವುದು ಬಿಟ್ಟು, ಹೊರಗೆಲಸಗಳ ಬಿಟ್ಟು, ಓದು ಬಿಟ್ಟು, (ಮಾನವನ್ನೂ) ನೋಡುತ್ತಾರಲ್ಲ. ಇದಕ್ಕೇನೆನ್ನೋಣ ? ಪ್ರಭಾಕರರು ಹೇಳಿದಂತೆ ಶಿಕ್ಷಕರು ಕಾಗುಣಿತ ಹೇಳಿಕೊಟ್ಟುದರ ದೋಷವಲ್ಲ. ಆಂಗ್ಲಶಾಲೆಯಲ್ಲಿ ಕಲಿತ ಅರಗಿಣಿಯರ ಬಿನ್ನಾಣ.

ಮುಸ್ತಾಫ's picture
ಬುಧ, 03/02/2010 - 13:53 ರಂದು ಮುಸ್ತಾಫ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

sariyaagi heliddeeri..

ಉಮಾಶಂಕರ ಬಿ.ಎಸ್'s picture
ಮಂಗಳ, 02/02/2010 - 07:06 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ರಾಜೇಶ್ ಸರ್,


ನಿಮ್ಮ ಲೇಖನ ಸಕಾಲಿಕವಾಗಿದೆ, ಅದೇರೀತಿ ಕನ್ನಡಿಗರ ಮನಸ್ಸಿನ ಕನ್ನಡಿಯಂತಿದೆ. ಎಲ್ಲ ತಂದೆ ತಾಯಿಗಳು ತಮಗೆ ಅರ್ಥ ಗೊತ್ತಿರದಿದ್ದರೂ "ಟ್ವಿಂಕಲ್ ಟ್ವಿಂಕಲ್" ಅನ್ನು ತಮ್ಮ ಮಕ್ಕಳು ಕಲಿಯಲಿ ಎಂದು ಮುಗ್ದ ಮನಗಳ ಮೇಲೆ ಒತ್ತಡ ತರುತ್ತಾರೆ, ಆದರೆ ತಾವೇ ಕಲಿತು ಆನಂದ ಅನುಭವಿಸಿದ "ನಾಯಿಮರಿ" ಯನ್ನಾಗಲಿ "ಬಣ್ಣದ ತಗಡಿನ ತುತ್ತೂರಿ" ಯನ್ನಾಗಲಿ "ಸಣ್ಣಿ ಮದ್ವೆ ಸೋಮ್ವಾರ" ವನ್ನಾಗಲಿ ಕಲಿಸಲು ಪ್ರಯತ್ನಿಸುವುದಿಲ್ಲ. ಕಂಪ್ಯೂಟರಿನಲ್ಲಿ 'ಗೇಂ' ಹೇಲಿಕೊಡುವ ನಾವು, ಮಕ್ಕಳಿಗೆ 'ಕುಂಟೋ ಬಿಲ್ಲೆ', 'ಲಗೋರಿ', 'ಅರಳು ಮನೆ', 'ಚೌಕಾಬಾರ' ಮತ್ತಿತರ ಯಾವುದೇ ಆಟಗಳನ್ನು ಅವುಗಳ ಮಹತ್ವಗಳನ್ನು, ಅವುಗಳಿಂದ ಸಿಗುತ್ತಿದ್ದ ಆರೋಗ್ಯವನ್ನು ನಮ್ಮ ಮಕ್ಕಳಿಂದ ನಾವೇ ದೂರ ಮಾಡುತ್ತಿದ್ದೇವೇನೋ ಎನ್ನುವ ಭಾವನೆ ಕಾಡುವುದುಂಟು. ಬಹುಶಃ ಈ ರೀತಿಯ ಆಟಗಳನ್ನು "ನಮ್ಮದೆಂದು" ಯಾವುದಾದರೂ ಬೇರೆ ದೇಶದವರು 'ಪೇಟೆಂಟ್' ತೆಗೆದುಕೊಂಡು ಸುದ್ದಿಯಾದಾಗ ಮಾತ್ರ ನಮಗೆ ಮತ್ತು ನಮ್ಮ 'ಓರಾಟಗಾರರಿಗೆ' 'ಕನ್ನಡದ ಕಾವಲುಗಾರರಿಗೆ' 'ಇವೆಲ್ಲಾ ನಮ್ಮವೇ ಅಲ್ವೇ?' ಅಂತಾ ಜ್ನಾಪಕ ಬರುವುದು.

ಎಚ್.ಎಸ್. ಪ್ರಭಾಕರ's picture
ಸೋಮ, 01/02/2010 - 15:33 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ರಾಜೇಶ್ ಸರ್. ಇದಕ್ಕೆಲ್ಲ ನಮ್ಮ ಕನ್ನಡದಲ್ಲಿ ``ಉಟ್ಟು'' ``ಓರಾಟಗಾರ''ರ ಸಂಖ್ಯೆ ಜಾಸ್ತಿಯಾಗಿರುವುದೇ ಕಾರಣ.  ಕೀಳರಿಮೆ ಜತೆಗೆ ಉದಾರವಾದಿತನ ಬೇರೆ! ನೀವು ಬಗ್ಗುತ್ತೀರಿ ಎಂದು ಗೊತ್ತಾದರೆ ಜುಟ್ಟು ಹಿಡಿದು ನೆಲದವರೆಗೂ ಬಗ್ಗಿಸುತ್ತಾರೆ. ಅದೇ ನೀವು ಎದ್ದು ನಿಲ್ಲುವವರೆಂದು ತಿಳಿದರೆ ಕಾಲು ಹಿಡಿಯುತ್ತಾರೆ. ಟಿ.ವಿ. ವಾಹಿನಿಗಳ ಜುಟ್ಟು ಹಿಡಿಯುವವರು ಯಾರೂ ಇಲ್ಲ ನೋಡಿ ಅದಕ್ಕೇ ಹೀಗೆ!


ಇನ್ನು, ಪ್ರಾಥಮಿಕ ಶಿಕ್ಷಣದಲ್ಲಿನ ಕನ್ನಡ ಪಾಠ ಮಾಡುವ ವ್ಯವಸ್ಥೆಯಲ್ಲಿನ ದೋಷದ ಪಾಲೂ ಇಲ್ಲಿ ಸೇರಿದೆ. ಒಂದು ದಶಕದಿಂದೀಚೆಗೆ ಕನ್ನಡ ಕಲಿಸುವ ವಿಧಾನವೇ ಒಂದು ರೀತಿ `ಕ ಕಾ ಕಿ ಕೀ' ಕುರುಡು ಪಾಠವಾಗಿದೆ. `ಎಲ್ಲಿ ಗುಡಿಸಿ ಕೊಡು'; `ಏತ್ವ ಕೊಡು' ಎಂದರೆ ಮಕ್ಕಳು ಕಕ್ಕಾಬಿಕ್ಕಿಯಾಗುತ್ತವೆ; ಏಕೆಂದರೆ ಅವಕ್ಕೆ ಶಿಕ್ಷಕರು ಕಾಗುಣಿತದ ಹೆಸರುಗಳನ್ನೇ ಕಲಿಸುತ್ತಿಲ್ಲ. ಹೀಗೆಯೇ ಪ್ರತಿ ಹಂತದಲ್ಲೂ ಕನ್ನಡ ಕ್ಷೀಣಿಸುತ್ತಿದೆ. ಇಂತಹ ಗಿಳಿಪಾಠ ಹೇಳುವ ನಿರೂಪಕರೇ ಟಿ.ವಿ.ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು; ಹೇಳುವವರೂ ಇಲ್ಲ; ಕೇಳುವವರೂ ಇಲ್ಲ.


ಈ ನಿರೂಪಕರ ಅನಗತ್ಯ ಬಿನ್ನಾಣ, ವೈಯ್ಯಾರ, ಅಂಗ ಚೇಷ್ಟೆ ನೋಡಿದರಂತೂ ನನಗೆ ಕೆಳಗಿನಿಂದ ಉರಿ ಕಿತ್ತುಕೊಳ್ಳುತ್ತದೆ. ತಪ್ಪು ತಿಳಿಯಬೇಡಿ; ನಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಾದಿಯಾಗಿ, ಟಿವಿ ನಿರೂಪಕರನ್ನು ಉಲ್ಲೇಖಿಸುವುದೇ `ನಾಯಿಗಳು' ಎಂದು!!

ವಿನಯ್_ಜಿ's picture
ಸೋಮ, 01/02/2010 - 12:06 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ರಾಜೇಶ್ ರವರೆ,


ಕನ್ನಡ ನಮ್ಮ ಅಧಿಕಾರಿಗಳ ಬೇಜವಬ್ದಾರಿತನದಿಂದ ಅರ್ಧ ಸತ್ತುಹೋದರೆ, ನಮ್ಮಂತೆ ಅನೇಕರು ತಾವು ಕನ್ನಡದಲ್ಲಿ ಮಾತನಾಡಿದರೆ/ವ್ಯವಹರಿಸಿದರೆ ಎಲ್ಲಿ ತಮ್ಮ ಘನತೆಗೆ ಕುಂದು ಬರುವುದೋ ಎಂದು ತಿಳಿಯುವುದರಿಂದ ಇನ್ನರ್ಧ ಸಾಯುತ್ತಿದೆ. ಇದರಲ್ಲಿ ಕನ್ನಡಿಗರು ಸಹ ಪರೋಕ್ಷ ಭಾಗಿದಾರರು!!! ನಮ್ಮ ಭಾಷೆಗೆ ನಮ್ಮ ನೆಲದಲ್ಲೇ ಇಷ್ಟೊಂದು ಅನಾದರ!!! ಬಹುಶಃ ಕನ್ನಡೋದ್ದಾರಕ್ಕೆ ನಮಗೂ ಒಂದು "ಬಾಳಾ" ಮತ್ತು "ರಾಜ್' ಗಳ ಅವಶ್ಯಕತೆ ಇದೆಯೇನೋ!!

ರಾಜೇಶ ಹೆಗಡೆ's picture
ಗುರು, 04/02/2010 - 08:44 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ಇಲ್ಲ ವಿನಯ್, ಪ್ರತಿಯೊಂದಕ್ಕೂ ಸರಕಾರವನ್ನು ದೂರುವದು ತರವಲ್ಲ. ಉದಾಹರಣೆಗೆ ಉದಯ ಟಿವಿಯಲ್ಲಿ ಡೀಲ್ ಆರ್ ನೋ ಡೀಲ್ ಹೆಸರನ್ನು ಇಂಗ್ಲೀಷಲ್ಲಿ ಬರೆದಿರುವದಕ್ಕೆ ಅದರ ಗ್ರಾಫಿಕ್ ಡಿಸೈನರ್ ಕಾರಣ. ಅದನ್ನು ಸುಮ್ಮನೆ ಒಪ್ಪಿಕೊಂಡ ನಿರ್ಮಾಪಕ ಹಾಗೂ ನಿರ್ದೇಶಕ ಕಾರಣ. ಹೀಗೆ ಪ್ರತಿ ಕಾರ್ಯಕ್ರಮಕ್ಕೂ ಒಬ್ಬರಲ್ಲ ಒಬ್ಬರು ದುರ್ಬಲ ಕನ್ನಡಿಗರು ಕಾರಣರಾಗಿದ್ದಾರೆ. ಎಲ್ಲರನ್ನೂ ಬಾಳ್ ಠಾಕ್ರೆ ಅಥವಾ ನಾರಾಯಣ ಗೌಡರು ಬಂದು ಹೋರಾಡಬೇಕೆಂದರೆ ಕಷ್ಟ ಅಲ್ಲವೇ? ಕನ್ನಡ ನಮ್ಮ ಉಸಿರಾಗಬೇಕು. ಆಗ ಇದೆಲ್ಲ ಅವಶ್ಯಕತೆ ಇರುವದಿಲ್ಲ.

ಮನಸು's picture
ಸೋಮ, 01/02/2010 - 10:06 ರಂದು ಮನಸು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ಖಂಡಿತ ನಿಮ್ಮ ಮಾತು ಒಪ್ಪಲೇ ಬೇಕು. ಆಂಗ್ಲಮಾರಿ ಇಲ್ಲದಿದ್ದರೆ ಜೀವನವೇ ಇಲ್ಲವೆಂದು ಭಾವಿಸಿಬಿಟ್ಟಿದ್ದಾರೆ. ಇನ್ನು ಈ ಕನ್ನಡ ವಾಹಿನಿಗಳೇನು ಹೊರತಲ್ಲ ಬಿಡಿ. ತಿಳಿದವರು ಆದಷ್ಟು ಕನ್ನಡವನ್ನು ಉಳಿಸಿ ಬೆಳೆಸಿದರೆ ಕನ್ನಡಕ್ಕೂ ಸ್ಥಾನ ಸಿಗುತ್ತದೆ ಇಲ್ಲವಾದರೆ ಆದಷ್ಟು ಬೇಗ ನಶಿಸುತ್ತದೆ.

ರಾಜೇಶ ಹೆಗಡೆ's picture
ಗುರು, 04/02/2010 - 08:38 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
Re: ಕನ್ನಡ ಟಿವಿ ಶೋಗೆ ಇಂಗ್ಲೀಷ್ ಊರುಗೋಲು ಬೇಕೆ?

ನಿಜ ಕೆಲವು ಕನ್ನಡಿಗರ ಕನ್ನಡದ ಬಗ್ಗೆ ನಿರ್ಲಕ್ಷ, ಅಸಡ್ಡೆತನವೆ ಇದಕ್ಕೆ ಕಾರಣ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
17 + 2 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content