Skip to main content

ಕೂರ್ಮನ ಕಥೆ...

ಬರೆದಿದ್ದುJanuary 25, 2010
16ಅನಿಸಿಕೆಗಳು

ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- 2
ನಾವು ನಮ್ಮ ಜೀವನವನ್ನ ಅನುಭವಗಳಿಂದಲೇ ರಚಿಸಿಕೊಳ್ಳುತ್ತೇವೆ....
ಕೂರ್ಮ, ಕಪ್ಪೆ ಮತ್ತು ಒಬ್ಬ ಸುಂದರ ಮಹಿಳೆ... ಈ ಕೆಳಗಿನ ಕಥೆಗಳ ಮೂಲಕ ನಮಗೆ ಜೀವನದ ಪಾಠ ತಿಳಿಸುತ್ತಾರೆ.
ಬನ್ನಿ, ಅವರಲ್ಲಿ ಕೂರ್ಮನ ಕಥೆಯನೊಮ್ಮೆ ಓದೋಣ...

ಕೂರ್ಮನ ಕಥೆ...
ಒಂದು ಕೂರ್ಮ ಪರಿವಾರವು ತಮ್ಮ ಎಲ್ಲಾ ಜನರೊಡಗೂಡಿ ಸಂಚಾರಕ್ಕೆ ಹೊರಟವು. ಬಹಳ ಮಂದ ಸಂಚಾರಿಗಳಾದ ಕೂರ್ಮಗಳು ಹೊರಡುವ ಸಿದ್ದತೆ ಮಾಡಿಕೊಳ್ಳೂವುದಕ್ಕೇ ೭ ವರುಷ ತೆಗೆದುಕೊಂಡವು! ಎಲ್ಲಾ ಸಿದ್ಧತೆಯಾದ ಮೇಲೆ ಕೂರ್ಮ ಪರಿವಾರವು ಸಂಚಾರಕ್ಕೆ ಹೊರಟಿತು. ಅಂತೂ ತಮ್ಮ ಸಂಚಾರದ ಎರಡನೆ ವರ್ಷದಲ್ಲಿ ಕೊನೆಗೂ ಒಂದು ಸೂಕ್ತ ಸ್ಥಳವನ್ನು ಹುಡುಕಿಕೊಂಡವು!!!
ಸುಮಾರು ೬-೭ ತಿಂಗಳು ಸ್ಥಳವನ್ನ ಸ್ವಚ್ಛಗೊಳಿಸಲು, ತಾವು ತಂದಿದ್ದ ಎಲ್ಲಾ ಸಾಮಾನು ಪೆಟ್ಟಿಗೆಯನ್ನು ತೆರೆದಿಡಲು ತಗೆದುಕೊಂಡವು. ಎಲ್ಲ ಜೋಡಿಸಿಡುತ್ತಿದ್ದ ವೇಳೆಯಲ್ಲಿ ತಾವು ಉಪ್ಪಿನ ಪೊಟ್ಟಣವ ತರುವುದನ್ನ ಮರೆತಿದ್ದನ್ನು ಆ ಕೂರ್ಮ ಗುಂಪಿನಲ್ಲಿದ್ದ ಹಿರಿಯ ಕೂರ್ಮನಿಗೆ ಹೊಳೆಯಿತು. ಮತ್ತೇನು..., ತಮ್ಮ ಸಂಚಾರವು ಆ ಉಪ್ಪಿನ ಪೊಟ್ಟಣವಿಲ್ಲದೆ ಏನು ಉಪಯೋಗವಿಲ್ಲ ಎಂದು ಅರಿತ ಆ ಪರಿವಾರವು ಬಹು ದೀರ್ಘ ಸಮಾಲೋಚನೆ ನೆಡೆಸಿ ತಮ್ಮ ಕುಟುಂಬದಲ್ಲಿದ್ದ ಸಣ್ಣ ಕೂರ್ಮ ಸದಸ್ಯನಿಗೆ ಉಪ್ಪಿನ ಪೊಟ್ಟಣವನ್ನು ತರುವ ಜವಬ್ದಾರಿಯನ್ನು ಕೊಡಲಾಯಿತು. ಆ ಸಣ್ಣ ಕೂರ್ಮನು ಆ ಪರಿವಾರದಲ್ಲೇ ಬಹುಬೇಗ ನೆಡೆಯಬಲ್ಲವನಾಗಿದ್ದರೂ ಹ್ಯಾಪು ಮೋರೆ ಹಾಕಿಕೊಂಡು, ಕಣ್ಣು ತುಂಬ ನೀರು ತುಂಬಿಸಿಕೊಂಡು, ತನ್ನ ಚಿಪ್ಪಿನೊಳಗೆ ಮುದುರಿಕೊಂಡನು. ನಂತರ ಎಲ್ಲರು ಪುಸುಲಾಯಿಸಿದ ಮೇಲೆ ಒಂದು ಷರತ್ತಿನ ಮೇಲೆ ಹೋಗಿ ಬರಲು ಆ ಸಣ್ಣ ಕೂರ್ಮನು ಒಪ್ಪಿಕೊಂಡನು. ಅದೇನೆಂದರೆ: ಅವನು ಹಿಂದಿರುಗಿ ಬರುವವರೆಗೂ ಯಾರು ಏನನ್ನು ತಿನ್ನಬಾರದು...! ಕೊನೆಗೂ ಎಲ್ಲರು ಈ ಷರತ್ತಿಗೆ ಒಪ್ಪಿದ ಮೇಲೆ ಆ ಸಣ್ಣ ಕೂರ್ಮನು ಅಲ್ಲಿಂದ ಉಪ್ಪು ತರಲು ಹೊರಟನು.
ಮೂರು ವರುಷ, ೪.., ೫.., ೬.., ಆ ಸಣ್ಣ ಕೂರ್ಮನ ಸುಳಿವೇ ಇಲ್ಲ!!! ೭ನೇ ವರ್ಷ ಅಗುತ್ತಿದ್ದಂತೆ ಕೂರ್ಮ ಪರಿವಾರದ ಹಿರಿಯ ಸದಸ್ಯನು ಹಸಿವು ತಾಳಲಾರದೇ, ಅಲ್ಲಿದ್ದ ಉಳಿದ ಸದಸ್ಯರಿಗೆ ತಾನು ಈಗ ಅಹಾರವನ್ನು ತಿನ್ನುವುದಾಗಿ ಹೇಳಿ, ಅಲ್ಲಿದ್ದ ಆಹಾರದ ಪೊಟ್ಟಣವನ್ನು ತೆರೆಯಲು, ಧಟ್ಟನೆ ಒಂದು ಮರದ ಹಿಂಬದಿಯಲ್ಲಿದ್ದ ಆ ಸಣ್ಣ ಕೂರ್ಮನು ಕಿರುಚುತ್ತ ಹೊರಬಂದು: "ನೋಡಿ, ನಾ ಹೇಳ್ಲಿಲ್ವೇನು! ನೀವ್ಯಾರೂ ನನಗೆ ಕಾಯೋದಿಲ್ಲಾ ಅಂತಾ...!. ಹೋಗಿ ನಾನು ಉಪ್ಪು ತರಲು ಹೋಗುವುದಿಲ್ಲ..." ಅಂತ ಹೇಳಿತು. ಆಗ ತಲೆ ತಿರುಗಿ ಬೀಳಬೇಕಾದ ಸ್ಥಿತಿ ಉಳಿದ ಕೂರ್ಮಗಳದಾಗಿತ್ತು!!
[ನೀತಿ: ನಮ್ಮಲ್ಲಿ ಅನೇಕರು ಇತರರು ಸಹ ನಮ್ಮಂತೆ ಇರಬೇಕು...ನಾವು ಬಯಸಿದಂತೆ ಇರಬೇಕು/ಕೇಳಬೇಕು ಎನ್ನುವ ಭಾರದಲ್ಲಿ ತಮ್ಮ ಸಮಯ/ಸಹನೆಯನ್ನು ವಿನ: ಕಾರಣ ವ್ಯರ್ಥ ಮಾಡಿಕೊಳ್ಳುತ್ತಿರುತ್ತಾರೆ. ಉಪಯೋಗವಿಲ್ಲದ ಕಾರ್ಯವಾದ ಈ ಬೇರೆಯವರ ಬಗೆಗಿನ ಆಲೋಚನೆ ನಮ್ಮ ಬಗ್ಗೆ ಸ್ವತ: ನಾವೇ ಮಾಡಿಕೊಂಡರೆ ಸ್ವಯಂ-ಉದ್ಧಾರವಾದರೂ ಆಗಬಹುದಲ್ಲವೇ...?]
 
 
(ವಿಸ್ಮಯ ನಗರಿ ಸಮೂಹ ಈಗ Orkut ನಲ್ಲಿ..., ಸದಸ್ಯರಾಗಲು ಈ ಲಿಂಕ್ ಅನ್ನು ಕ್ಲಿಕಿಸಿ: http://www.orkut.co.in/Main#Community?cmm=96442553)

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಮಂಗಳ, 01/26/2010 - 22:13

ಎಲ್ಲರಿಗೂ ಎಲ್ಲಾಕಾಲಕ್ಕೂ ಹೊಂದುವ ದೃಷ್ಟಾಂತ... ಚೆನ್ನಾಗಿದೆ ವಿನಯ್ ರವರೆ

ವಿನಯ್_ಜಿ ಧ, 01/27/2010 - 14:27

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಉಮಾಶಂಕರ್ ರವರೆ :)

ವಿನಯ್! ನಿಮ್ಮ ನೀತಿ ಕಥೆಗಳು ತುಂಬಾ ಚೆನ್ನಾಗಿವೆ. ಇವು ಸಾರ್ವಕಾಲಿಕ ಮೌಲ್ಯಗಳನ್ನು ಬಿತ್ತುತ್ತವೆ. ಸರಣಿ ಮುಂದುವರೆಯಲಿ.

ವಿನಯ್_ಜಿ ಗುರು, 01/28/2010 - 11:28

ನಿಮ್ಮ ಪ್ರತಿಕ್ರಿಯೆಗೆ ಬಹಳ ಧನ್ಯವಾದಗಳು ಪ್ರಭಾಕರ್ ಸರ್... :)

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/28/2010 - 10:47

ಶ್ರೀಮಾನ್, ವಿನಯಜಿಃ ಯಾಕೆ ಸ್ವಾಮಿ ಎಲ್ಲಿಂದಲೊ ಕದ್ದು ತಂದ ಸರಕುಗಳನ್ನು ವಿಸ್ಮಯದಲ್ಲಿ ಸುರಿಯುತ್ತಿರುವಿರಿ? ನೀತಿ ಕಥೆಗಳನ್ನು ಓದಲು ವಿಸ್ಮಯವೆ ಬೇಕೆ? ಎಷ್ಟು ಬೈದರೂ , ಅವಮಾನಿಸಿದರೂ ಮತ್ತೆ ಮತ್ತೆ ಒಕ್ಕರಿಸುತ್ತಿರಲ್ಲ? ವಿಸ್ಮಯಕ್ಕೆ ಹಿಡಿದಿರುವ ನಿಮ್ಮ ಗ್ರಹಣ ಬಿಡುವುದೆಂದು?
ಉಮಾ ಶಂಕರ ಹಾಗೂ ಪ್ರಭಾಕರ: ವಿಸ್ಮಯದಲ್ಲಿ  ವಿಚಾರವಂತರು, ಸಹನೀಯರು ಎನ್ನಿಸಿಕೊಂಡಿರುವ ತಾವುಗಳೂ ಕೂಡ ವಿನಯರ ಈ "ಘನ ಕಾರ್ಯ" ಹೊಗಳುತ್ತಿರುವುದು ಅಸಹನೀಯ.

ವಿನಯ್_ಜಿ ಗುರು, 01/28/2010 - 13:26

ಶ್ರೀಮಾನ್ ಗಂಧರವರೆ,
ನಿಮ್ಮ "ಅಭಿಪ್ರಾಯ" ಬರೆಯುವ ಆತುರದಲ್ಲಿ ನಾನು ಬರೆದ ಸಾಲು "ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು" ಓದಲು ಮರಿತಿರೇನೋ! ಮತ್ತೊಮ್ಮೆ ಅದನ್ನ ನೋಡಿ ಬಿಡಿ! ನಾನು ಈ ಎರಡೂ ಕಥಾಮಾಲಿಕೆಯಲ್ಲಿ ಇದನ್ನು ನಾನೇ ಸ್ವಂತಃ ಬರೆದದ್ದು ಎಂದು ಎಲ್ಲೂ ಹೇಳಿಕೊಂಡಿಲ್ಲ... ನಾವು ನಮಗೆ ತಿಳಿದಿದ್ದನ್ನ ಬೇರೆಯವರಿಗೆ ಹೇಳುವುದರಲ್ಲಿ ಅಂಜಿಕೆ ಪಟ್ಟರೆ/ ಇಲ್ಲಾ "ಯಾರೋ" ಎನೋ ಹೇಳುತ್ತಾರೆ ಎಂದು ನೆನೆದರೆ "ಬ್ಲಾಗ್" ನ ಮಹತ್ವವೇ ಬೇಕಾಗುತ್ತಿರಲಿಲ್ಲವೇನೋ! ಯಾರು ಏನು ಬರೆಯುವ ಗೋಜಿಗೆ ಹೋಗುತ್ತಿರಲಿಲ್ಲವೇನೋ!!!. Then Everything appears as Copied...!!!. ಹಾಗೆಯೇ ನಿಮ್ಮ ಅಭಿಪ್ರಾಯ "ಗ್ರಹಣ" ಕ್ಕಿಂತ ಮಿಕ್ಕೆಲ್ಲರ "ಗ್ರಹಣ" ದೊಡ್ಡದಲ್ಲ ಬಿಡಿ!!!

ಎಚ್.ಎಸ್. ಪ್ರಭಾಕರ ಗುರು, 01/28/2010 - 15:03

ಶ್ರೀಯುತ ಗಂಧರವರೇ, ಪ್ರತಿಕ್ರಿಯೆಯಲ್ಲಿ ನೀವು ನನ್ನ ಹೆಸರು ಉಲ್ಲೇಖಿಸಿದ್ದರಿಂದ ಈ ಮರು ಪ್ರತಿಕ್ರಿಯೆ ಅಷ್ಟೆ:
ಒಳ್ಳೆಯದು ಯಾರಿಂದಾಗಲಿ; ಜಗತ್ತಿನ ಯಾವ ಮೂಲೆಯಿಂದಾಗಲಿ ಬಂದರೆ ಅದನ್ನು ಸ್ವೀಕರಿಸಬೇಕು ಎಂಬ ತತ್ವಕ್ಕೆ ಬದ್ಧನಾಗಿರುವವ ನಾನು. ಮಿಕ್ಕಿದ್ದೆಲ್ಲ ನನಗೆ ಗೌಣ.

ಉಮಾಶಂಕರ ಬಿ.ಎಸ್ ಶುಕ್ರ, 01/29/2010 - 09:18

ಶ್ರೀ ಗಂಧ ರವರೆ ನಾನು ಸಹ ಕೆಲ ದೃಷ್ಟಾಂತಗಳನ್ನು ಈ ಮೊದಲೇ ಓದಿದ್ದೇನೆ. ಅವುಗಳು ಯಾವಾಗಲೂ ನಮಗೆ ನಮ್ಮ ನೀತಿ ಮತ್ತು ಕರ್ತವ್ಯ ಪ್ರಜ್ನೆಯನ್ನು ಜಾಗೃತ ಗೊಳಿಸುತ್ತವೆ ಎನ್ನುವುದು ನನ್ನ ಭಾವನೆ, ಅವುಗಳು ಒೞೆಯ ಕಥೆಗಳಾದ್ದರಿಂದ ಅವುಗಳನ್ನು ಒಪ್ಪಿಕೊಂಡಿದ್ದೇನೆ ಅಷ್ಟೇ. ಪ್ರಭಾಕರ್ ರವರು ಹೇಳಿದಂತೆ ಒೞೆಯದು ಎಲ್ಲಿಂದ ಬಂದರೂ ಸ್ವಾಗತಾರ್ಹವೇ ಅಲ್ಲವೇ ಸರ್?

ಹರಿಪ್ರಸಾದ್ ಗುರು, 01/28/2010 - 11:29

ನೀತಿ ಕಥೆ ತುಂಬಾ ಚೆನ್ನಾಗಿದೆ ವಿನಯವರೆ

ವಿನಯ್_ಜಿ ಗುರು, 01/28/2010 - 12:01

ಧನ್ಯವಾದಗಳು ಹರಿಪ್ರಸಾದ್ ರವರೆ... :)

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/29/2010 - 10:53

ಪ್ರಿಯ ಉಮಾಶಂಕರ/ಪ್ರಭಾಕರ: ದೇವರ್ಷಿ ವಿನಯರನ್ನು ನಾನು ವಿಸ್ಮಯದಲ್ಲಿ ಬಹು ಕಾಲದಿಂದ ಗಮನಿಸುತ್ತ ಬಂದಿದ್ದೇನೆ. ಸಾಹಿತ್ಯದ ಸೂಕ್ಷ್ಮಗಳ ಅರಿವಿಲ್ಲದ, ವ್ಯಂಗ್ಯವನ್ನೂ ಅರ್ಥ ಮಾಡಿಕೊಳ್ಳದ ಸಂವೇದನಾ ಹೀನ, ಎರವಲು ಪಡೆದು ಬರೆದರೂ 'ಲೇಖಕ' ಅನ್ನಿಸಿಕೊಳ್ಳುತ್ತಾನೆ ಎಂದು ತಿಳಿದಿರುವ ಅವರು ವಿಸ್ಮಯದ ವೈರಸ್!! ಬರೆಯುವದು ಅವರ ದುಶ್ಚಟ. ಅವರನ್ನು ಸಹಿಸಬೇಕಾಗಿರುವುದು ವಿಸ್ಮಯಿಗರ ಅನಿವಾರ್ಯತೆ. ಎಷ್ಟೇ  ಬೈದರೂ, ಅವಮಾನಿಸಿದರೂ ಅದನ್ನು ಅರ್ಥಮಾಡಿಕೊಳ್ಳದೆ ತಮ್ಮನ್ನೇ ತಾವು ಸಮರ್ಥಿಸುವ ಅವರ ಲೇಖನಗಳ ಬಗ್ಗೆ ಇನ್ನು ಮುಂದೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ!! ಅವರು ನನಗೆ ನಗಣ್ಯ.
ಸಮಸ್ಯೆಯಿರುವುದು ನಿಮ್ಮೊಡನೆ, ತಾವುಗಳೂ ಕೂಡ ಇಂತ ಎರವಲು ಲೇಖನಗಳನ್ನು ಪ್ರೋತ್ಸಾಹಿಸಿದರೆ, ಅರ್ಥಗರ್ಭಿತವಲ್ಲದ ಬರಹಗಳನ್ನು ಹೊಗಳಿದರೆ ವಿಸ್ಮಯ ಅಂತಹುದೇ ಸರಕುಗಳ ಆಗರವಾಗುತ್ತದೆ ಹೊರತು ಅದು ಕನ್ನಡಿಗರ "ವಿಸ್ಮಯ"ವಾಗಿ ಎಂದೂ ಬೆಳೆಯಲಾರದು. ಈ ಹಿಂದೆ ಎಸ್ಟೋ ಬಾರಿ ವಿಸ್ಮಯ ಪ್ರಜೆಗಳು ಒಂದುಗೂಡಿ ಇಂತಹ ಗ್ರಹಣಗಳನ್ನು ವಿಸ್ಮಯದಿಂದ ಓಡಿಸಿದ್ದಾರೆ. ( ಅದು ಸಾಧ್ಯ ಆಗದೆ ಇರುವದು ಈ ಮಾಹಾನ್ ವ್ಯಕಿಯ ವಿಷಯದಲ್ಲಿ ಮಾತ್ರ; ಅದಕ್ಕೆ ಅವರ ನಾಚಿಕೆಗೇಡಿ ವ್ಯಕ್ತಿತ್ವವೇ ಕಾರಣ) ಅದು ಕಾಲ ಕಾಲಕ್ಕೆ ಆಗುತ್ತಿದ್ದರೆ ಮಾತ್ರ ವಿಸ್ಮಯದಂತ ತಾಣವೊಂದು ತನ್ನ ಮೂಲ ಉದ್ದೇಶ ಉಳಿಸಿಕೊಂಡು ಬೆಳೆಯಲು ಸಾಧ್ಯ. ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ ಅನ್ನುವುದೇ ವಿಷಾದ. ನಿಮ್ಮಂಥವರ ಪ್ರೋತ್ಸಾಹವಿಲ್ಲದೆ ಅದು ಕಷ್ಟ ಸಾಧ್ಯ.
 
ಕೊನೆಯಲ್ಲಿ: ಒಳ್ಳೆಯದು ಎಲ್ಲಿಂದ ಬಂದರೂ ಅದು ಸ್ವೀಕೃತ ಅಂತಾ ಹೇಳಿದ್ದೆರಿ. ನಾಳೆ ಮತ್ತೊಬ್ಬ " ಪಂಚತಂತ್ರ ಕಥೆಯಲ್ಲಿಯ ಜೀವನ ಸತ್ಯಗಳು- ಭಾಗ ೧" ಅಂತಾ ಒಂದು ಸೀರೀಸ್ ಪ್ರಾರಂಭಿಸಲಿ. ಮಗದೊಬ್ಬ " ತೆನಾಲಿ ರಾಮನ ಯಾ ಬೀರಬಲ್ಲನ ಕಥೆಗಳು- ಭಾಗ...." ಅಂತಾ ಶುರು ಹಚ್ಚಿಕೊಳ್ಳಲಿ.....ಹಾಗೆ ನಾನೂ " ಮಾಸ್ತಿಯವರ ಸಣ್ಣ ಕಥೆಗಳು" ಅಂತಾ ಬರೆಯಲು ಪ್ರಾರಂಭಿಸುತ್ತೇನೆ. ವಿಸ್ಮಯವನ್ನು ಎಷ್ಟು ಜನ ಓದುತ್ತಾರೆ ಅಂತಾ ನೋಡೋಣ!!!!!

 
ಇನ್ನೊಮ್ಮೆ ಯೋಚಿಸಿ; ನಾನು ಹೇಳುತ್ತಿರುವುದು ತಮಗೆ ಅರ್ಥವಾಗಿದ್ದರೆ ನಾನು ಧನ್ಯ, ವಿಸ್ಮಯದ ಪುಣ್ಯ.
ನಿಮ್ಮಿಂದ ಅನವಶ್ಯಕ ಸಮರ್ಥನೆ ಬೇಡ, ಇದನ್ನು ಇಲ್ಲೇ ನಿಲ್ಲಿಸುತ್ತೇನೆ.

ವಿನಯ್_ಜಿ ಶುಕ್ರ, 01/29/2010 - 12:56

ವೀರ, ಅಸಮಾನ್ಯ....ಅಭಿಪ್ರಾಯ ಬ(ಕೊ)ರೆಯುವ ರಾಜ-ರಾಜ ಗಂಧನೇ,
ನಿಮಗೆ ಏನು ಹೇಳಬೇಕು ಎಂದು ನನಗೆ ತಿಳಿಯುತ್ತಿಲ್ಲ (ಬಹುಶಃ ಆ ದೇವರಿಗೆ ಮಾತ್ರ ಇದು ಗೊತ್ತೇನೋ...!) ಆದರೂ ನಾ ನಿಮಗೆ ಹೇಳಿಬಿಡುವೆ (ಇದು ನಿಮಗೆ ನನ್ನ ಕೊನೆಯ ಪ್ರತಿಕ್ರಿಯೆ ಎಂದು ಭಾವಿಸಿ ಬರೆಯುತ್ತಿರುವೆ, ನಿಮ್ಮಂತೆ ನನಗೂ ನಿಮ್ಮ ಹತ್ತಿರ ಕೆಲಸವಿಲ್ಲದ ವಾದ ಮಾಡಲು ಇಷ್ಟವಿಲ್ಲ....)
೧) ನೀವೇ ಹೇಳಿದಂತೆ "ಸಂವೇದನಾ ಹೀನ, ಎರವಲು .... ಸಮರ್ಥಿಸುವ ಅವರ ಲೇಖನಗಳ" ಯೇ ಆಗಿದ್ದರೆ ಒಂದೇ ನೀವು ಬರೆಯಬೇಕು ಇಲ್ಲಾ ಪುರುಸೊತ್ತು ಇಲ್ಲದಿದ್ದರೆ ಯಾರದರೂ ಬರೆದಿದ್ದನ್ನಾದರೂ ಓದಬೇಕು...!, ಹಿಂದೊಮ್ಮೆ ನಿಮಗೆ ಒಬ್ಬರು ಈ ವಿಷಯವನ್ನು ಸಾರಿ-ಸಾರಿ ಹೇಳಿದ್ದರೂ ನಿಮಗೆ ಇನ್ನೂ ಅದು ತಿಳಿಯದಿರುವುದು ನಿಮ್ಮ ಸ್ವಯಂ ಮರೆವಿನ ಮರ್ಮವೇನೋ!
೨) "ತಮ್ಮನ್ನೇ ತಾವು ಸಮರ್ಥಿಸುವ ಅವರ ಲೇಖನಗಳ ಬಗ್ಗೆ ಇನ್ನು ಮುಂದೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ!!" ಅಂತ ಹೇಳಿದ್ದಿರಲ್ಲಾ, ಇದು ಎಷ್ಟು ಸತಿ ಹೇಳಿದ್ದೀರಿ ಸ್ವಾಮಿ, ಮತ್ತೆ ಮತ್ತೆ ನಿಮ್ಮ ಅಭಿಪ್ರಾಯದ "ವಾಗ್ಜರಿ" ಹರಿಯುತ್ತಲೇ ಇದೆಯಲ್ಲಾ.....? ಇದೇನು "ರಾಜಕಾರಣಿ"ಯ ಅಶ್ವಾಸನೆ ತರವೋ...?
೩) "ನಾಚಿಕೆಗೇಡಿ ವ್ಯಕ್ತಿತ್ವ" ಬಗ್ಗೆ ಹೇಳುವುದಾದರೆ ನಿಮಗೆ ಅದರ ತುಂಬ ಕೊರತೆ ಇದೆ, ಏಕೆಂದರೆ ನೀವು ಸಮೂಹ ಮಾಧ್ಯಮದಲ್ಲಿ ನನ್ನ ಸೇರಿ ಇತರರಿಗೂ ಸಹ ಕೊಡಬೇಕಾದ ಕನಿಷ್ಠ ಸೌಜನ್ಯ ನೀಡದೇ ತಮ್ಮ ಬುದ್ಧಿ/ಊಹೆಗೆ ನಿಲುಕಿದಂತೆ ಬರೆಯುವಿರಿ... ನಂತರ ತಮ್ಮನ್ನು ತಾವೇ ದೊಡ್ಡ ವಿಮರ್ಶೆಗಾರರಾಗಿ ಹೊಗಳಿಕೊೞುವಿರಿ... ನೀವಾದರೂ ಒಮ್ಮೆ ಬರೆದು ತೋರಿಸಿ ಸ್ವಾಮಿ, ನಾವು ನೋಡಿಯೇ ಬಿಡೋಣ ನಿಮ್ಮ ಚತುರತೆಯನ್ನ...!
೪) ಸದಾ ಕಾಲ ಎರವಲು ಲೇಖನ ಎಂದು ಹೇಳುವ ನೀವು ನಿಮ್ಮಂತೆ ಎಲ್ಲರೂ "ಓದಿದವರು/ಎಲ್ಲಾ ಬಲ್ಲವರು" ಎಂದು ಭಾವಿಸಬೇಡಿ... ನಿಮಗೆ ವಿಷಯದ ಮಹತ್ವದ ಬಗ್ಗೆ ಅಸಡ್ಡೆ ಇರಬಹುದು... ಅದರೆ ಹಿಂದು ಧರ್ಮ ಹೇಳುವಂತೆ (ನಿಮಗೂ ತಿಳಿದಿದೆ ಎಂದು ಭಾವಿಸುತ್ತ....) "ಜ್ಹಾನವು ಹಲವು ದಿಕ್ಕಿನಿಂದ ಬರುತ್ತದೆ, ಅದನ್ನು ಸ್ವೀಕರಿಸು..." ಮತ್ತು ಬಸವಣ್ಣನವರು ಹೇಳಿದಂತೆ "ನನಗಿಂತ ಕಿರಿಯವರಿಲ್ಲರಯ್ಯ...." ಎನ್ನುವಂತೆ ಯಾರು ಹೇಳಿದರೂ ಸರಿ ವಿಷಯ ಮುಖ್ಯವೇ ಹೊರತು ಬರಹವಲ್ಲ!!! ಹಾಗಿದಿದ್ದರೆ ಮಹಾಭಾರತ-ರಾಮಾಯಣದ ಕಥೆಗಳನ್ನ ಅವರ ಅಜ್ಜ-ಅಜ್ಜಿ ಹೇಳುತ್ತಿದ್ದರು ಎಂದು ನಮ್ಮ ಅಜ್ಜ-ಅಜ್ಜಿ ನಮಗೆ ಅವುಗಳ ಕಥೆ ಹೇಳದೆ ಸುಮ್ಮನಿದ್ದಿದ್ದರೆ ಇಷ್ಟರಲ್ಲೇ ಅವುಗಳು ಎಂದೋ "ಗತ ಕಾಲ" ದಲ್ಲಿ ಹೂತಿಹೋಗಿಬಿಡುತ್ತಿದ್ದವೇನೋ!
೫) "ಸೂಕ್ಷ್ಮಗಳ ಅರಿವಿಲ್ಲದ, ವ್ಯಂಗ್ಯವನ್ನೂ ಅರ್ಥ ಮಾಡಿಕೊಳ್ಳದ"... ನಿಮ್ಮ ವಾಕ್ಯದಲ್ಲಿ ವ್ಯಂಗ್ಯವನ್ನಂತೂ ನಾ ಕಾಣೆ, ಅದರಲ್ಲಿ ಬರಿ ಕೊಂಕಿದೆ... ವ್ಯಂಗ್ಯ ಮಾಡುವುದಿದ್ದರೆ "ಜೋಕು" ಗಳ ಬಗ್ಗೆ ನೀವೇ ಬರೆದು ಬಿಸಾಕಬಹುದಲ್ಲವೇ (ಗಂಧ-ಬಂಧ ಜೋಕ್ ಸರಣೆ... ;) )!!! ನಾವು ಓದಿ, ನಕ್ಕು ಸಾರ್ಥಕಗೊೞುತ್ತೇವೆ!
ಕೊನೆಗೆ... ಸೀರೀಸ್ ನ ನೀವೇ ಮಾಡಿ ಪುಣ್ಯ ಕಟ್ಟಿಕೊೞಿ, ನನಗೆ ಅದರಲ್ಲಿ ಆಸಕ್ತಿ ಇಲ್ಲ, ನೀವು ನನಗೆ ಬರೆದ ಪ್ರತಿಕ್ರಿಯೆ ನೋಡಿ ಬೇರೆಯವರು ಅದನ್ನು ಮಾಡುವ ಧೈರ್ಯವೂ ಮಾಡುವುದಿಲ್ಲ ....! 
 

ಹರಿಪ್ರಸಾದ್ ಶುಕ್ರ, 01/29/2010 - 13:54

ಸರಣೆಯ ಮುಂದಿನ ನೀತಿ ಕಥೆಗೆ ಕಾಯುತ್ತಿದ್ದೆನೆ ವಿನಯವರೆ

ವಿನಯ್_ಜಿ ಶುಕ್ರ, 01/29/2010 - 13:56

ಧನ್ಯವಾದಗಳು ಹರಿಪ್ರಸಾದ್ ರವರೆ, ಅದು ಅತಿ ಶೀಘ್ರದಲ್ಲಿ ಬರಲಿದೆ... :) 

ರವಿವರ್ಮ್ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 01/31/2010 - 10:09

ಚೆನ್ನಾಗಿದೆ ವಿನಯ್ ರವರೆ ಮುಂದುವರೆಸಿ

ವಿನಯ್_ಜಿ ಸೋಮ, 02/01/2010 - 11:54

ಧನ್ಯವಾದಗಳು ರವಿವರ್ಮ ರವರೆ... :)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.