Skip to main content

ಎಲ್ಲ ಎಲ್ಲೆಗಳನ್ನು ದಾಟಿ ನೋಡುವ "ದಾಟು"

ಬರೆದಿದ್ದುJanuary 14, 2010
11ಅನಿಸಿಕೆಗಳು

ನಾ ಮೆಚ್ಚಿದ ಕೃತಿ : ಒಳಗೊಂದು ಕಿರುನೋಟ-೪ "ದಾಟು"
ಜಾತೀಯತೆ, ಮತೀಯ ಭಾವನೆ ಇವುಗಳನ್ನೆಲ್ಲಾ ಮೀರಿ ವಿಶ್ವಮಾನವರಾಗಬೇಕೆಂದು ನೀತಿ ಸಾರುವ ಅನೇಕ ಪುಸ್ತಕಗಳು ಬಂದಿವೆ. ಆದರೆ ಭೈರಪ್ಪನವರ "ದಾಟು" ಕೇವಲ ಶಬ್ದರೂಪದಲ್ಲಿ ಮಾತ್ರ ಸುಂದರವೆನಿಸುವ ಇಂತಹ ಸಂದೇಶವನ್ನು ಸಾರಿ ಸುಮ್ಮನಾಗುವುದಿಲ್ಲ. ವಿಶ್ವಮಾನವನಾಗಲು ಹೊರಟ ಮನುಷ್ಯನ ಮನಃಸ್ಥಿತಿ, ಅದಕ್ಕೆ ಬೇಕಾಗುವ ಸಂಯಮ, ಸಹನೆ, ದೃಢತೆ- ಹಾಗೆಯೇ ಇದಕ್ಕಾಗಿ ಆತ ನೀಡಬೇಕಾಗುವ ತ್ಯಾಗ, ಬಲಿದಾನ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ ‘ದಾಟು’. ಈ ಕಾದಂಬರಿಯನ್ನು ಓದುತ್ತಾ ಹೋದಂತೇ, ಕೊನೆಗೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಸಂದರ್ಭವೂ ಬರುತ್ತದೆ.
ಇದು ಸರಿಯೇ? ಇದು ತಪ್ಪೇ? ಯಾವುದು (ಅ)ಧರ್ಮ, ಯಾವುದು ಸುಳ್ಳು? ಎಲ್ಲಿದೆ ಸತ್ಯ? ಜಾತಿಗಳ ನಡುವೆ, ಪಂಗಡಗಳ ನಡುವೆ ನಾವು ಬಯಸುವ ಸಮಾನತೆ, ವಿಶ್ವಮಾನವ ಎನ್ನುವ ಕಲ್ಪನೆ - ಇವೆಲ್ಲಾ ನಾವು ತಿಳಿದುಕೊಂಡಿರುವ ಪರಿಧಿಗಿಂತ ಎಷ್ಟು ಮೇಲ್‌ಸ್ತರದಲ್ಲಿವೆ!! ಎಷ್ಟೊಂದು ವಿಶಾಲವಾಗಿ, ನಮ್ಮ ಅರಿವಿಗೇ ಬಾರದಂತೆ ಸಮಾಜದೊಳಗೆ, ಜನರ ಮನಸಿನಾಳದೊಳಗೆ ಬೇರನ್ನೂರಿವೆ - ಇವೆಲ್ಲವುಗಳ ಅರಿವು ತುಸುವಾದರೂ ‘ದಾಟುವನ್ನು’ ದಾಟುವುದರ ಮೂಲಕ(ಓದುವುದರಿಂದ) ಉಂಟಾಗುವುದು.
 
 ೧೯೭೩ ರಲ್ಲಿ ಮೊದಲಬಾರಿ ಮುದ್ರಣಗೊಂಡ "ದಾಟು" ಪ್ರಮುಖವಾಗಿ ಅಂದಿನ ಕಾಲದ ಸಾಮಾಜಿಕ ಜನಜೀವನ, ಮನಃಸ್ಥಿತಿ, ಸಂಕುಚಿತತೆ, ವಿವಶತೆ, ಜಾತೀಯತೆಯೊಳಗಿನ ಅಸಹಾಯಕತೆ, ರಾಜಕೀಯತೆಯನ್ನು ತೆರೆದಿಡುತ್ತದೆ. ಆದರೆ ೪೧೨ ಪುಟಗಳಲ್ಲಿ ವಿವರವಾಗಿ (ಕೆಲವೊಂದು ವಿಷಯಗಳು ತುಸು ಸೂಕ್ಷ್ಮವಾಗಿ) ಪ್ರಸ್ತಾಪಗೊಂಡಿರುವ, ಬಣ್ಣಿಸಲ್ಪಟ್ಟ ಹಲವಾರು ವಿಷಯಗಳು, ಸಾಮಾಜಿಕ ಪಿಡುಗುಗಳು ಇಂದೂ ನಮ್ಮ ದೇಶದ ಅಸಂಖ್ಯಾತ ಹಳ್ಳಿಗಳಲ್ಲಿ ಇಂದೂ ಪ್ರಸ್ತುವಾಗಿವೆ. ಉತ್ತರದಿಂದ ದಕ್ಷಿಣದವರೆಗೂ ಹಳ್ಳಿಗರ ಜನಮಾನಸದಲ್ಲಿ ಜಾತೀಯತೆ, ಸ್ತ್ರೀ ಶೋಷಣೆ, ಮೇಲ್ಜಾತಿ, ಕೀಳ್ಜಾತಿಗಳೆಂಬ ತಾರತಮ್ಯ, ಜಾತೀಯತೆಯಿಂದ ಹೊರಹೊಮ್ಮುವ ದ್ವೇಷ, ತಾತ್ಸಾರ - ಇವೆಲ್ಲಾ ಒಂದು ಪಿಡುಗಂತೇ ಇಂದಿಗೂ ಪ್ರಚಲಿತಚಾಗಿವೆ. ಮನುಷ್ಯನನ್ನು ಮೊದಲು ಮನುಷ್ಯನನ್ನಾಗಿ ನೋಡಿ ನಂತರ ಜಾತೀಯತೆಯ ಮೂಲಕ ಅಳೆದರಾದರೂ ಮನುಷ್ಯತ್ವ ಉಳಿಯಬಹುದು. ಆದರೆ ಎಷ್ಟೋ ಕಡೆ ಮನುಷ್ಯನನ್ನು ಮನುಷ್ಯನೆಂದು ಗುರುತಿಸುವುದೇ ಜಾತೀಯತೆಯ ಆಧಾರದ ಮೇಲೆ ಎಂದರೆ ವಿಪರ್ಯಾಸವಾಗಲಾರದು. ಆ ಲೆಕ್ಕದಲ್ಲಿ ನೋಡಿದರೆ ಪಟ್ಟಣಿಗರೇ ತುಸು ವಾಸಿ. ತೀರ ಸಂಕುಚಿತತೆಯನ್ನು ಬಿಟ್ಟು ಸಮಾನತೆಯೆಡೆ ಮೊಗಮಾಡುತ್ತಿದ್ದಾರೆ.(!)
"ದಾಟು"ವಿನಲ್ಲಿ ನಾಯಕನಿಲ್ಲ. ಹಲವು ಉಪನಾಯಕರುಗಳಿಂದ ತುಂಬಿದೆ ಎಂದರೆ ತಪ್ಪಾಗದು. ಆದರೆ ನಾಯಕಿ ಓರ್ವಳೇ. ಅವಳೇ ಇಡೀ ಕಾದಂಬರಿಗೆ ಸೂತ್ರಧಾರಳು, ಕಥೆಗೆ ಕಾರಣಕರ್ತಳು. ಹೆಸರು ಸತ್ಯಭಾಮ ಎಂದಾಗಿದ್ದರೂ ಬುಡದಿಂದ ತುದಿಯವರೆಗೂ "ಸತ್ಯ" ಎಂದೇ ಸಂಬೋಧಿಸಲ್ಪಡುತ್ತಾಳೆ. ಹೆಸರಿಗೆ ತಕ್ಕಂತೇ ತನ್ನ ಆದರ್ಶಗಳನ್ನು ಎಂದೂ ಬಲಿಗೊಡದೇ, ತನ್ನ ಆತ್ಮಸಾಕ್ಷಿಗೆ ಓಗುಟ್ಟ ಬದುಕಿದವಳು. ಬ್ರಾಹ್ಮಣಳಾದ ಇವಳನ್ನು ಪ್ರೇಮಿಸುವ ಶ್ರೀನಿವಾಸ ಗೌಡ ಹೆತ್ತವರ ಒತ್ತಡಕ್ಕಿಂತ ಮೇಲ್ಜಾತಿಯವಳನ್ನು ಮದುವೆಯಾಗುವುದು ಪಾಪವೇನೋ ಎಂಬ ಪಾಪಪ್ರಜ್ಞೆಯಿಂದಲೇ ಆಕೆಗೆ ಕೈಕೊಡುತ್ತಾನೆ. ಇಲ್ಲಿಂದಲೇ ಅವಳ ಹೊಸ ಬದುಕಿನ ಅಧ್ಯಾಯ ಪ್ರಾರಂಭ. ವಿನೂತನ ದೃಷ್ಟಿಕೋನದತ್ತ ಆಕೆ ದಿಟ್ಟ ನಿಲುವು ಹಲವಾರು ಅಸಂಬಧಗಳ(ಅವಳ ಸುತ್ತಮುತ್ತಲಿನ ಜನರ ದೃಷ್ಟಿಯಲ್ಲಿ) ಸೃಷ್ಟಿಗೆ ಕಾರಣವಾಗುತ್ತದೆ. ಆದರೆ ಕೊನೆಗೆ ಕರಣಾಂತರಗಳಿಂದ ಶ್ರೀನಿವಾಸ ಗೌಡ ತನಗಿಂತ ಕೆಳಜಾತಿಯವಳಾದ ಮಾದಿಗರ ಮೀರಳನ್ನು ಕಾಮಿಸಿ, ಅದನ್ನೇ ಪ್ರೇಮವೆಂದು ಮೀರಳನ್ನೂ ಸ್ವತಃ ತನ್ನನ್ನೂ ವಂಚಿಸಿಕೊಂಡು, ಅಂತಿಮವಾಗಿ ಅವಳನ್ನೂ ತೊರೆಯುತ್ತಾನೆ. ಅದಕ್ಕೂ ಕಾರಣ ತನಗಿಂತ ಅಲ್ಪ ಜಾತಿಯವಳನ್ನು ವರಿಸಿ ಪಾಪ ಕಟ್ಟಿಕೊಳ್ಳುವ ಭಯದಿಂದಾಗಿ! ಮೇಲೇರಲೂ ಬಿಡದ, ಕೆಳಗಿಳಿಯಲೂ ಆಗದ ಒಂದು ಮಾನಸಿಕ ಅಸ್ಥಿರವನ್ನು ಅಂದಿನ ಜನರು ಮಾತ್ರವಲ್ಲ ಇಂದಿನವರೂ ಅನುಭವಿಸುತ್ತಿದ್ದಾರೆ ಎಂದೆನಿಸುತ್ತದೆ. ಕಾದಂಬರಿಯಲ್ಲಿ ಬರುವ ಇನ್ನಿತರ ಪಾತ್ರಗಳಾದ ವೆಂಕಟೇಶ, ಮೇಲಗಿರಿ ಗೌಡ, ದೊಡ್ಡ ಗೌಡ್ರು, ಹಳ್ಳಿಯ ಜನರು, ಮೋಹನದಾಸ, ಬೆಟ್ಟಯ್ಯ-ಇವರೆಲ್ಲಾ ನಮ್ಮ ಅಕ್ಕ ಪಕ್ಕದ ಮನುಷ್ಯರಲ್ಲೇ ಹಲವರನ್ನು ಹೋಲುವಂತಿದ್ದಾರೆ ಎಂದರೆ ತಪ್ಪಾಗದು.
ಕಾದಂಬರಿಯ ಪೂರ್ವಾರ್ಧವನ್ನು ಓದುತ್ತಿರುವಾಗ ಒಂದು ದೊಡ್ಡ ಸಂದೇಹ ಓದುಗನ್ನು ಕಾಡತೊಡಗುತ್ತದೆ. ಕೇವಲ ಈ ಜಾತೀಯತೆಯನ್ನು ಹೋಗಲಾಡಿಸಲು ಮದುವೆಯೆಂಬ ಸಂಪ್ರದಾಯವನ್ನು ಬಳಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು. ಪ್ರೀತಿ, ಸ್ನೇಹ, ವಿಶ್ವಾಸ ಹಾಗೂ ಸಮಾನತೆಯ ಭಾವಗಳಿಂದ ಬೆಸೆಯಲ್ಪಟ್ಟಿರುವ ಮದುವೆಯೆಂಬ ಬಂಧನಕ್ಕೆ ಯಾವ ಜಾತೀಯತೆಯೂ ತಡೆಯಾಗದು. ಆದರೆ ಕನಿಷ್ಟ ವಿಶ್ವಾಸವೂ ಇಲ್ಲದ ಮದುವೆಯಲ್ಲಿ ಏನು ಸುಖ ತಾನೇ ಸಿಕ್ಕೀತಿ? ಯಾವ ಸಾಧನೆ ಲಭಿಸೀತು? ಕೇವಲ ಯಾವುದೋ ಒಂದು ಆವೇಶದಿಂದ ವಿರುದ್ಧ ಜಾತಿಯವರೋ ಇಲ್ಲಾ ಒಂದು ಜಾತಿಯೊಳಗಿನ ಅಸಮಾನ ಪಂಗಡದವರೋ ಮದುವೆಯಾದ ತಕ್ಷಣ ಈ ಜಾತೀಯತೆಗೆ ಮೋಕ್ಷ ಸಿಗುವುದೇ? ಮದುವೆ ಎನ್ನುವ ಬಂಧನ ಮನಸಿಗೆ ಸಂಬಧಿಸಿದ್ದು. ಯಾವುದೋ ಆವೇಶ, ಆದರ್ಶಗಳ ಮೇಲೆ ಮಾತ್ರ ಇದರ ಬುನಾದಿ ನಿಂತಿಲ್ಲ. ಇದರೊಳಗೆ ಬೆಸೆದಿರುವ ಸುಂದರ, ಸೂಕ್ಷ್ಮ ಸಂವೇದನೆಗಳು, ಮೃದು ಭಾವನೆಗಳು ಮಾತ್ರ ಈ ಬಂಧವನ್ನು ಬಿಗಿಯಾಗಿಸಬಲ್ಲವು. ಜಾತಿ ಯಾವುದೇ ಆಗಿರಲಿ ಮನಃಸ್ಥಿತಿ ಸಮಾನವಾಗಿರಬೇಕು. ಆಚಾರ ವಿಚಾರದಲ್ಲಿ, ಅಭಿರುಚಿಗಳಲ್ಲಿ ತೀರಾ ವೈರುಧ್ಯವಿದ್ದರೆ ಒಂದೇ ಜಾತಿಯಾಗಿದ್ದರೂ ಮದುವೆ ನಿಲ್ಲದು. ಹಾಗಿರುವಾಗ, ಸಂಪ್ರದಾಯ, ವಿಚಾರ, ಆಚಾರ, ಊಟೋಪಚಾರ ಎಲ್ಲವೂ ತದ್ವಿರುದ್ಧವಾಗಿರುವ ಕಡೆ, ಕೇವಲ ಒಂದು ಆದರ್ಶವನ್ನು ಮೆರೆಸಲೋಸುಗ, ಸಮಾಜದ ಒಂದು ಕಟ್ಟಳೆಯನ್ನು ಮುರಿಯಲೋಸುಗ ಮದುವೆಯಂತಹ ಸೂಕ್ಷ್ಮ ಸಂಪ್ರದಾಯವನ್ನು ಬಳಸಿದರೆ ಅದು ಎಷ್ಟಕ್ಕೂ ನಿಲ್ಲದು ಎನ್ನುವ ಸತ್ಯವನ್ನು ಕಾದಂಬರಿಯ ಉತ್ತರಾರ್ಧದಲ್ಲಿ "ಸತ್ಯಳ" ಒಂದೆರಡು ದೊಡ್ಡ ತಪ್ಪು ನಿರ್ಣಯಗಳ ಮೂಲಕ ಸ್ಪಷ್ಟವಾಗಿ ಕಾಣಿಸಿದ್ದಾರೆ ಬೈರಪ್ಪನವರು.
ಆದರೆ "ದಾಟುವಿನಲ್ಲಿ" ಕೆಲವೊಂದು ವಿಷಯಗಳ ಬಗ್ಗೆ ನನಗೆ ಇನ್ನೂ ಸಂದೇಹವಿದೆ. ಕಾದಂಬರಿಯ ಉತ್ತರಾರ್ಧದವಿಡೀ ತುಂಬಿರುವ ಹೋಮ ಹವನಗಳ ಸಂಕೇತವೇನು? ವೆಂಕಟರಮಣಯ್ಯನವರು ಸತ್ಯಳಿಗೇಕೆ ಜನಿವಾರವನ್ನು ಹಾಕಿದರು?  ಜಾತೀಯತೆಯನ್ನು ಮೆಟ್ಟಿಹಾಕುವ ಭರದಲ್ಲಿ ಸ್ಥಿತಃಪ್ರಜ್ಞಳಂತಿದ್ದ ಸತ್ಯಳೇಕೆ ಅಷ್ಟೊಂದು ತಪ್ಪು ನಿರ್ಣಯಗಳನ್ನು ಕೈಗೊಂಡಳು? ಕೊನೆಯದಾಗಿ ಮಾದಿಗಳಾದ ಮೀರಳೇಕೆ ತನಗೆ ಸತ್ಯ ಹಾಕಿದ್ದ ಯಜ್ಞೋಪವೀತವನ್ನು ತೆಗೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು? ಎಲ್ಲಕ್ಕಿಂತ ಕಾಡಿದ ಪ್ರಶ್ನೆ ಎಂದರೆ ಅಪ್ಪ ತನಗೆ ಹಾಕಿದ್ದ ಜನಿವಾರವನ್ನು ಬಹು ಅಕ್ಕರಾಸ್ಥೆಯಿಂದ ಕಾಪಾಡಿಕೊಂಡು ಬಂದ ಸತ್ಯಳೇಕೆ ಕಾದಂಬರಿಯ ಕೊನೆಯಲ್ಲಿ ತೆಗೆದು ಎಸೆದಳು?- ಈ ಪ್ರಶ್ನೆಗಳಿಗೆ, ಈ ಕಾದಂಬರಿಯನ್ನು ಮೊದಲೇ ಓದಿದ ಸಹಮಾನಸಿಗರು ಸೂಕ್ತ ಉತ್ತರಗಳನ್ನು ಕಂಡುಕೊಂಡಿದ್ದರೆ, ನನಗೂ ತಿಳಿಸಬೇಕಾಗಿ ವಿನಂತಿ.
ಕೊನೆಯದಾಗಿ : "ದಾಟುವನ್ನು" ಓದಿ ಮುಗಿಸಿದ ಮೇಲೆ ಇಂದಿಗೂ ನನ್ನ ಮನದಲ್ಲಿ ಮನೆಮಾಡಿರುವ, ನಿತ್ಯ ಸತ್ಯವಾಗಿರುವ ಸಂದೇಶವೆಂದರೆ ಸತ್ಯಳ ತಂದೆ ವೆಂಕಟರಮಣಯ್ಯನವರು ತಮ್ಮ ಅಯೋಮಯ ಮನಃಸ್ಥಿತಿಯಲ್ಲಾಡಿದ ಸ್ಪಷ್ಟ ಮಾತು"ನೀರು ಶಾಂತವಾಗಿದ್ದರೆ ಬಿಂಬಗಳು. ಪ್ರಳಯಜಲದಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ". ಈ ಒಂದು ಸುಂದರ ಹಾಗೂ ಅದ್ಭುತ ಮಾತನ್ನು ನಮ್ಮ ಮನಸಿಗೆ ಹೋಲಿಸಿದರೆ ಅಗಾಧ ಅರ್ಥವನ್ನು ಇದು ನೀಡುತ್ತದೆ. ಇಂತಹ ಜಲಪ್ರಳಯ ನಮ್ಮೆಲ್ಲರ ಮನದೊಳಗೂ ಆಗಬೇಕಿದೆ. ಆಗಲೇ ಹಲವಾರು ಕೊಳಕುಗಳು, ಪೈಶಾಚಿಕ ಆಲೋಚನೆಗಳು ತೊಳೆದುಹೋಗಿ ನಮ್ಮ ಮಾನಸ ಶುಭ್ರವಾಗಬಹುದು. ಸಮಾಜದೊಳಗಿನ ಪರಿಮಿತಿಗಳು, ಅವುಗಳ ಎಲ್ಲೆಯನ್ನು ಸರಿಯಾಗಿ ಅರಿಯದೇ ದಾಟಿದರಾಗುವ ಉತ್ತಮ/ಕೆಟ್ಟ ಪರಿಣಾಮಗಳನ್ನು ಅರಿಯಲು ಒಮ್ಮೆಯಾದರೂ ಭೈರಪ್ಪನವರ "ದಾಟುವನ್ನು" ದಾಟಿ ಬನ್ನಿ.
ಸೂಚನೆ: ಇವರ ಇನ್ನೊಂದು ಮನೋಜ್ಞ ಕಾದಂಬರಿಯಾದ "ಗ್ರಹಣ" ಕೂಡ ಓದಲೇ ಬೇಕಾದ ಪುಸ್ತಕ. ಇದು ನಮ್ಮೊಳಗಿನ ಡಾಂಭಿಕತೆ, ಅರ್ಥವಿಲ್ಲದ ಆಚರಣೆ, ಮೂಢನಂಬಿಕೆಗಳನ್ನು ಎತ್ತಿ ತೋರುವುದಲ್ಲದೇ, ಇವುಗಳನ್ನು ಕುರುಡಾಗಿ ನಂಬುವುದರಿಂದ ಉಂಟಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು, ವಿಪ್ಲವಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ.
ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

- ತೇಜಸ್ವಿನಿ ಹೆಗಡೆ

ಲೇಖಕರು

ತೇಜಸ್ವಿನಿ ಹೆಗಡೆ

ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. "ಕಾಣ್ಕೆ" (ಜಯಶ್ರೀ ಪ್ರಕಾಶನ, ೨೦೦೮)ನನ್ನ ಕಥಾಸಂಕಲನವಾಗಿದೆ. "ಚಿಗುರು" (ಸುಮುಖ ಪ್ರಕಾಶನ, ೧೯೯೫) ಹಾಗೂ "ಪ್ರತಿಬಿಂಬ" (ಜಯಶ್ರೀ ಪ್ರಕಾಶನ, ೨೦೦೮) ನನ್ನ ಕವನಸಂಕಲನಗಳು.

http://manasa-hegde.blogspot.com (ನನ್ನ ಕನ್ನಡ ಬ್ಲಾಗ್)

ಅನಿಸಿಕೆಗಳು

ಕೆಎಲ್ಕೆ ಶುಕ್ರ, 01/15/2010 - 10:51

ತೇಜಸ್ವಿನಿ, ದಾಟುವಿನ ಕೆಲವೊಂದು ವಿಷಯಗಳ ಬಗ್ಗೆ ನಿಮಗಿರುವ ಸಂಶಯಗಳ ಪಟ್ಟಿಗೆ ಇದನ್ನೂ ಸೇರಿಸಿಕೊಳ್ಳಬಹುದು.
<< ಜನರನ್ನು ಸೇರಿಸಿ ದೇವಸ್ಥಾನ ಪ್ರವೇಶ ಮಾಡಿದ ಮನೋಹರ ತಲೆ ಸುತ್ತಿ ಬಿದ್ದುದೇಕೆ?>> ಭೈರಪ್ಪನವರು ಇಲ್ಲಿ ಏನ ಹೇಳ ಹೊರಟಿದ್ದಾರೆ? ಎಲ್ಲವನ್ನೂ  " ದಾಟಿ "  ನಿಂತಮೇಲೆ ಮುಂದೇನು ಎಂಬುದಕ್ಕೆ ಅವರ ಉತ್ತರ ಏನು??
ಅಂದಹಾಗೆ,-"ನೀರು ಶಾಂತವಾಗಿದ್ದರೆ ಬಿಂಬಗಳು. ಪ್ರಳಯಜಲದಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ" ಎಂಬ ಮಾತನ್ನು ಮನದಲ್ಲಿ ಪ್ರಳಯವಾಗದೆ, ಶಾಂತತೆ ಇದ್ದರೆ ಎಲ್ಲ " ಬಿಂಬ" ಗಳೂ ಮನದಲ್ಲೇ ಅಂತಾನೂ ಅರ್ಥೈಸಿ ಕೊಳ್ಳಬಹುದು.  

padma sadanand (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/01/2010 - 16:13

Datu nanna annana hattira ittu.Nanu odalu kelide avanu kodalilla"ninage arthavagalikkilla bhari high standardoo"enda eega pustaka kondkondu odiddene. Bhairappanavara "Bhitti" kooda itteeche odide. Nanage tumba ishta avara kadambarigalu.Vamshavriksha mattu  tabbaliyuneenademagane shala dinagalalle odidde.Pareekshege hoguvaga ella tayari madida hage avaru kadambari bareyuva modalu ella tayari maduttare.                                                                             padma

ತೇಜಸ್ವಿನಿ ಹೆಗಡೆ ಮಂಗಳ, 02/02/2010 - 15:57

ಪದ್ಮ ಅವರೆ ,

ನಿಜ.. ಅವರ ಕದಂಬರಿ ರಚನೆಗಳಲ್ಲಿ ಅಪಾರ ಶ್ರಮವನ್ನು, ಪೂರ್ವತಯಾರಿಗಳನ್ನು ನಾವು ಗುರುತಿಸಬಹುದು. ನಿಮ್ಮ ಓದುವ ಹವ್ಯಾಸ ಹೀಗೇ ಮುಂದುವರಿಯಲೆಂದು ಹಾರೈಸುವೆ.

ಉಮಾಶಂಕರ ಬಿ.ಎಸ್ ಶನಿ, 01/16/2010 - 11:49

<<ಕೊನೆಯದಾಗಿ ಮಾದಿಗಳಾದ ಮೀರಳೇಕೆ ತನಗೆ ಸತ್ಯ ಹಾಕಿದ್ದ ಯಜ್ಞೋಪವೀತವನ್ನು ತೆಗೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು?>> ಅವಳಿಗೂ ಸಹ ಪಾಪಪ್ರಜ್ನೆ ಕಾಡಿರಬೇಕು...

ಇದ್ದರೂ ಇರಬಹುದು. ಆದರೆ ಅಲ್ಲಿ ಆ ಒಂದು ಸ್ಥಿತಿಯಲ್ಲಿ, ನಡೆದ ಘಟನಾವಳಿಗಳನ್ನು ನೋಡಿದರೆ ಮೀರಳಿಗೆ ಪಾಪಪ್ರಜ್ಞೆ ಕಾಡಿರುವ ಸಾಧ್ಯತೆ ತೀರಾ ಕಡಿಮೆ ಎಂದೆನಿಸುತ್ತದೆ ನನಗೆ.

ಬಾಲ ಚಂದ್ರ ಗುರು, 01/21/2010 - 10:20

ಹೌದು ಮೇಡಂ,
ನೀವಂದ ಹಾಗೆ ದಾಟು ಎಲ್ಲಾ ಎಲ್ಲೆಗಳನ್ನು ದಾಟಿ ನೋಡುವ ಕೃತಿ. ಸುಮಾರು ವರ್ಷಗಳ ಹಿಂದೆ ಇದು ಟಿ.ವಿ ಯಲ್ಲಿ ಹಿಂದಿ ಭಾಷೆಯಲ್ಲಿ ಧಾರಾವಾಹಿಯಾಗಿ ಕೂಡ ಬರುತ್ತಿತ್ತು. ಕೃತಿಯ ಬಗ್ಗೆ ನೀವು ಬರೆದ ಲೇಖನ ತುಂಬಾ ಆಪ್ತವಾಗಿದೆ.
ಅಂದ ಹಾಗೆ ಆ ಧಾರಾವಾಹಿಯ ಹೆಸರು ಉಲ್ಲಂಘನ್
 
ಸಸ್ನೇಹ
ಬಾಲ ಚಂದ್ರ

ಕೆಲವೊಮ್ಮೆ ಬರಹರೂಪದಲ್ಲಿರುವ ಭಾವಗಳನ್ನು ತೆರೆಯ ಮೇಲೆ ಯಶಸ್ವಿಯಾಗಿ ತರಲು ಅಸಮರ್ಥರಾಗುತ್ತಾರೆ. ಉದಾಹರಣೆಗೆ "ನಾಯಿ ನೆರಳು" ನನಗೆ ಚಿತ್ರಕ್ಕಿಂತ ಬರಹವೇ ಬಹು ಇಷ್ಟವಾಯಿತು. ಅಂದಹಾಗಿ ಉಲ್ಲಂಘನ್ ನಾನು ನೋಡಿಲ್ಲ. ಹೇಗೆ ಬಂದಿತ್ತು?
ಧನ್ಯವಾದಗಳು. Smile

ಕೆಎಲ್ಕೆ ಗುರು, 01/21/2010 - 13:03

ಪ್ರಿಯ ತೇಜಸ್ವಿನಿ/ಬಾಲ ಚಂದ್ರ,
ಅದು ಹೇಗೆ ದಾಟು ಎಲ್ಲಾ ಎಲ್ಲೆಗಳನ್ನು ದಾಟಿ ನೋಡುವ ಕೃತಿ ಎಂದು ನೀವು ಹೇಳುತ್ತಿರುವಿರಿ  ಅಂತಾ ತಿಳಿಯುತ್ತಿಲ್ಲ. ( I mean, ಯಾವ ಅರ್ಥದಲ್ಲಿ  ಹೇಳುತ್ತಿದ್ದೀರಿ ಅಂತಾ). ಅದು ಮೇಲ್ನೋಟಕ್ಕೆ ಎಲ್ಲ ಎಲ್ಲೆಗಳನ್ನೂ ದಾಟಿ ನಿಂತಂತೆ ತೋರಿದರೂ, ದಾಟುವಿನ ಸಂದೇಶ ಸ್ಪಷ್ಟ. ಯಾರೂ, ಎಂದೂ ಎಲ್ಲೆಗಳನ್ನು ದಾಟಲು ಸಾದ್ಯವಿಲ್ಲ. ತಾವು ದಾಟಬೇಕು ಅಂದುಕೊಂಡವರೂ, ದಾಟಿದ್ದೇವೆ ಅಂದುಕೊಂಡವರದೆಲ್ಲ ಬರೀ ಭ್ರಮೆ! ಎಲ್ಲೆಗಳನ್ನೆಂದೂ ದಾಟಲು ಪ್ರಯತ್ನಿಸ ಬೇಡ ಮೂಢ; ನಾಶವಾಗುತ್ತೀಯೇ.
ಬೇಕಾದರೆ ಇನ್ನೊಮ್ಮೆ ಓದಿ ನೋಡಿ.
ಸೂಚನೆ: ಭೈರಪ್ಪನವರೇ ಹಾಗೆ. ಅವರ ಕಾದಂಬರಿಗಳು ಕನಿಷ್ಟ ಎರಡು ಬಾರಿಯಾದರೂ ಓದಲೇ ಬೇಕು. ಆಗಲೇ ಅವು ತಮ್ಮನ್ನು ಓದುಗರ ಮುಂದೆ ತೆರೆದುಕೊಳ್ಳುತ್ತವೆ!

abhimaani (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/21/2010 - 23:03

ಹೌದು. ಬೈರಪ್ಪನವರ ಕಾದಂಬರಿಗಳನ್ನು ಓದುವುದರಲ್ಲಿ ಒಂದೇ ತೊಂದರೆ ಎಂದರೆ, ಓದಲು ಆರಂಭಿಸಿದರೆ ಪೂರ್ತಿಯಾಗದೇ ನಿಲ್ಲಿಸಲು ಸಾಧ್ಯವಾಗುವುದಿಲ್ಲ - ಅವರ ಬರವಣಿಗೆಯೇ ಹಾಗೆ - ಇನ್ನೊಮ್ಮೆ ಓದಬೇಕು ಅನ್ನುವ ಹಾಗೆ ಮಾಡುತ್ತದೆ. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಆದರೆ, ಕನ್ನಡದ ಮಹಾನ್ 'ಸೆಕ್ಯುಲರ್ ವ್ಯಾಧಿ' ಗಳು ಅವರನ್ನು ಹಾಗು ಅವರ ಬರಹಗಳನ್ನು ಲೇವಡಿ ಮಡುತ್ತಾ ಬಂದಿದ್ದಾರೆ.

ನಿಜ. ಅವರ ಬರಹಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಓದಲು ಕುಳಿತರೆ ಸಂಪೂರ್ಣ ಓದಿಸಿಕೊಂಡೇ ಬಿಡುತ್ತವೆ.
ಧನ್ಯವಾದಗಳು.

ಕೆಎಲ್ಕೆ ಅವರೆ,
ಸಸ್ನೇಹ ವಂದನೆಗಳು.
ಒಂದು ರೀತಿಯಲ್ಲಿ ನೋಡಿದರೆ ನೀವಂದಿದ್ದು ನಿಜ. "ದಾಟು"ವಿನಲ್ಲಿ ಎಲ್ಲೆಗಳನ್ನು ದಾಟಲು ಹೋದವರೆಲ್ಲಾ ನಾಶವಾದವರೇ! ಆದರೆ ನಾನಿಲ್ಲಿ ಹೇಳಿದ್ದು ಪಾತ್ರಗಳ ಬಗ್ಗೆ ಅಲ್ಲ. ಕೃತಿಕಾರನ ಬಗ್ಗೆ, ಒಟ್ಟೂ ಪುಸ್ತದ ಹೂರಣದ ಬಗ್ಗೆ. ದಾಟು ಎಲ್ಲ ಎಲ್ಲೆಗಳನ್ನು ದಾಟಿ ನೋಡುವ ಪ್ರಯತ್ನ ಮಾಡುತ್ತಿದೆ. ಹಾಗೆ ಮಾಡದೇ ನಾಶವಾಗಲು ಅಸಾಧ್ಯ! ಕ್ರಿಯೆ ಇಲ್ಲದೇ ಪ್ರತಿಕ್ರಿಯೆ ಹುಟ್ಟಲು ಸಾಧ್ಯವೇ? ಭೈರಪ್ಪನವರು ಎಲ್ಲ ಪಾತ್ರವರ್ಗಗಳೊಡನೆ ಆಡುತ್ತಾ ಎಲ್ಲ ಎಲ್ಲೆಗಳನ್ನು ದಾಟಿಸಿ ನೋಡಿದ್ದಾರೆ.. ಅಲ್ಲಾ... ನಮಗೆ ತೋರಿದ್ದಾರೆ. ದೂರದೃಷ್ಟಿ, ಪರಿಣಾಮಗಳ ಅರಿವು, ಆತ್ಮವಿಶ್ವಾಸವಿಲ್ಲದೇ ಎಲ್ಲೆಗಳನ್ನು ದಾಟಿದರೆ ಆಗುವ ಅನಾಹುತಗಳನ್ನು ಕಾಣಿಸಿದ್ದಾರೆ. ಸೋಲು/ಗೆಲುವಿಗೆ ಅಂತರ- ಹೀಗೆ ನೋಡಿದರೆ ಕಂದಕದಷ್ಟು ಕಂಡರೆ ಹಾಗೆ ನೋಡಿದರೆ ನೂಲಿನೆಳೆಯಷ್ಟೇ ಕಾಣುವುದು. ಎಲ್ಲೆಗಳು, ಅವುಗಳ ಪರಿಮಿತಿ, ದಾಟಿದ್ದೇವೆ, ದಾಟುತ್ತಿದ್ದೇವೆ ಎಲ್ಲವೂ ಅವರವರ ಅನುಭೂತಿಯ ಮೇಲೆ, ಅನಿಸಿಕೆಗಳ ಮೇಲೆ ನಿರ್ಭರ. ನನ್ನ ಪ್ರಕಾರ ಕಾದಂಬರಿ ಎಲ್ಲೆಗಳನ್ನು ದಾಟಿ ನೋಡಿದೆ. ಹಾಗಾಗಿಯೇ ಅಲ್ಲಿ ಎಲ್ಲವೂ/ಎಲ್ಲರೂ ನಾಶವಾದಂತೆ ನಿಮಗೆ/ನನಗೂ ಅನಿಸಿದೆ.
ಕೊನೆಯಲ್ಲಿ : ಕಾದಂಬರಿಯನ್ನು ಅರ್ಥೈಸಿಕೊಳ್ಳಲು ಎರಡು ಬಾರಿ ಓದಬೇಕೆಂದಿಲ್ಲ. ಮೊದಲ ಬಾರಿಯೇ ನಿಧಾನವಾಗಿ ಮೆಲ್ಲನೆ ಅನುಭಾವಿಸುತ್ತಾ ಓದಿದರೆ ಸಾಕು. ಕೆಲವೊಮ್ಮೆ ಕೆಲವೊಂದು ಪುಸ್ತಕಗಳನ್ನು ಹತ್ತು ಬಾರಿ ಓದಿದರೂ ಅರ್ಥವಾಗದು. ಅಲ್ಲವೇ? Smile
ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.