Skip to main content

ಮತ್ತದೇ ಬೇಸರ...

ಬರೆದಿದ್ದುOctober 27, 2009
13ಅನಿಸಿಕೆಗಳು

"ಐ ಲವ್ ಯೂ"
ಚಕ್ರತೀರ್ಥದ ಉತ್ತುಂಗದಲ್ಲಿ ಈರ್ವರ ಮೈಮನಗಳೂ ಝೇಂಕರಿಸುತ್ತಿರುವಾಗ, ತಾನು ಊಟೆ ಊಟೆಯಾಗಿ ಅವಳಾಳದೊಳಗೆ ಬರಿದಾಗುತ್ತಿರುವಾಗ; ತನ್ನದೇ ತಲೆಗೂದಲಿನಲ್ಲಿ ಉತ್ಪತ್ತಿಯಾಗಿ, ಹಣೆ, ಹುಬ್ಬಿನ ಮೇಲೆಲ್ಲ ಧಾರಾಕಾರವಾಗಿ, ಅವಳ ಮುಖಕ್ಕಿಳಿದು ತೋಯಿಸಿದ ತನ್ನ ಬೆವರು, ಅವಳ ಕೆನ್ನೆಯನ್ನು ಸುಡುತ್ತಿದ್ದ ತನ್ನದೇ ಹಸಿ ಬಿಸಿ ತುಟಿಗಳಿಗೆ ತಾಕಿ ಒದ್ದೆ ಒದ್ದೆಯೆನ್ನಿಸುತ್ತಿರುವಾಗ ಅವನು ನಿಲ್ಲದುಸಿರಿನಲ್ಲಿ ಮೆಲ್ಲನುಸುರಿದ,
"ಐ ಲವ್ ಯೂ"
ಅವನ ಮೈಯ್ಯ ಒಂದೊಂದೂ ಅದುರುವಿಕೆಯನ್ನೂ ಅವಳು ತನ್ನ ಬಿಗಿಯಪ್ಪುಗೆಯಿಂದ ಸಿಡಿಲಕಡ್ಡಿಯಂತೆ ತನ್ನೊಡಲಾಳಕ್ಕೆ ಬಸಿದುಕೊಳ್ಳುತ್ತಿರುವಾಗ, ಸಾವಿರಾರು ಜೀರುಂಡೆಗಳು ಅವಳ ತಲೆಯೊಳಗೆ ಝುಮ್ಮೆನ್ನುವಂತಾಗಿ, ಆಲೋಚನೆ-ಸಮಯ-ಪರಿಧಿಗಳೆಲ್ಲ ಶೂನ್ಯವೆನ್ನಿಸುತ್ತಿರುವಾಗ ಆವನು ಆವಳ ಬಲಕತ್ತಿನ ಇಳೀಜಾರಿಗೆ ಇನ್ನೂ ಸುಡುತ್ತಿದ್ದ ತನ್ನ ತುಟಿಗಳನ್ನೊತ್ತಿ ಮತ್ತೆ ನುಡಿದ, "ಐ ಲವ್ ಯೂ"
ಅವಳು ಎದೆಯಾಳದಲ್ಲಿ ಖಿಸಕ್ಕೆಂದಿದ್ದು ಅವನಿಗೆ ಗೊತ್ತಾಯಿತು, ಕೇಳಿದ, "ಏನಾಯ್ತು?"
ಈ ಸಲ ಅವಳು ಸ್ವಲ್ಪ ಮೆಲುವಾಗೇ ನಕ್ಕಳು, "ನಥಿಂಗ್! ಏನಿಲ್ಲ!"
"ಹೇಳು, ಹೇಳು, ಏನಾಯ್ತು?" ತನ್ನುಸಿರನ್ನು ತಹಂಬದಿಗೆ ತರುಲೆತ್ನಿಸುತ್ತ ಅವಳ ಗಲ್ಲವನ್ನು ಕಚ್ಚಿ ಕೇಳಿದ,
"ಹೇಳು, ಯಾಕೆ ನಕ್ಕೆ?"
"ನೀನು ಐ ಲವ್ ಯೂ ಅಂದೆಯಲ್ಲಾ, ಅದಕ್ಕೇ ನಕ್ಕೆ!"
"ಅದ್ರಲ್ಲಿ ನಗೋದೇನಿದೆ? ನಿಜಾನೇ ಹೇಳ್ತಾ ಇದೀನಿ, ಐ ಲವ್ ಯೂ"
"ಸರಿ," ಅವಳು ತನ್ನೆದೆಯ ಮೇಲಿದ್ದ ಅವನ ತಲೆಯ ಒದ್ದೆಗೂದಲಿನಲ್ಲಿ ಕೈಯಾಡಿಸುತ್ತ ಒಪ್ಪಿಕೊಂಡಳು, "ಸರಿ, ಒಪ್ಕೊಂಡೆ!"
ಇನ್ನೂ ನಾಗಾಲೋಟದ ಕೊನೆಯಲ್ಲೇ ಇದ್ದ ಅವಳ ಉಸಿರೂ, ಹೃದಯದ ಮಿಡಿತವೂ ತನ್ನ ತಲೆಯ ಕೆಳಗೆ ಹೋರೊಡೆಯುತ್ತಿದ್ದ ಅವಳ ಮಿದುವೆದೆಯಿಂದ ಆವನಿಗೆ ಗೊತ್ತಾಗುತ್ತಿತ್ತು. "ಏನು ಬರೀ ಒಪ್ಕೊಳ್ಳೋದು? ನೀನೂ ಹೇಳು, ಡೋಂಟ್ ಯೂ ಲವ್ ಮೀ?"
"ಹೌದು"
"ಹಾಗಾದ್ರೆ, ಹೇಳು? ಐ ಲವ್ ಯೂ"
"ಮಹೀ! ನಿಂಗೊತ್ತು, ನಾನು ಹಾಗೆಲ್ಲ ಹೇಳೋಲ್ಲ. ನನ್ನ ಪ್ರಕಾರ ಪ್ರೀತಿ ಅಂದ್ರೆ ಇನ್ನೂ ಏನೇನೋ ಅರ್ಥ ಇದೆ"
"ಇದಕ್ಕಿಂತ್ಲೂ, ಇವಾಗ ಇಲ್ಲಿ ನಾವು ಮಾಡಿದ್ದಕ್ಕಿಂತ್ಲೂ ಮಿಗಿಲಾದ ಅರ್ಥ ಇದೆಯಾ?" ತನ್ನ ಕೆಟ್ಟ ಹಾಸ್ಯಕ್ಕೆ ತಾನೇ ನಕ್ಕ.
ಅವಳು ಅಪ್ಪುಗೆ ಸಡಿಲಿಸದಂತೆ ಅವನನ್ನು ತನ್ನೆದೆಯ ಮೇಲಿನಿಂದ ಪಕ್ಕಕ್ಕೆ ಹೊರಳಿಸಿದಳು, ಅವಳ ಎಡಕ್ಕೆ ಅಂಗಾತವಾದವನನ್ನು ಆವರಿಸಿಕೊಂಡು ಆವನ ತೊಯ್ದ ಎದೆಯ ಮೇಲೆ ತಲೆಯನ್ನಿಟ್ಟು ನಿಟ್ಟುಸಿರು ಬಿಟ್ಟು ಅವಳು ನುಡಿದಳು,
"ನನ್ನ ಪ್ರಕಾರ, ಪ್ರೀತಿ ಅಂದ್ರೆ ಇನ್ನೂ ಏನೇನೋ ಕಣೋ! ಸದಾ ಜೊತೆಗಿರಬೇಕು, ನಮ್ಮ ನಮ್ಮ ತಪ್ಪು ಒಪ್ಪುಗಳನ್ನೆಲ್ಲ ಅರಿತುಕೊಳ್ಳಬೇಕು, ಒಟ್ಟಿಗೇ ಇನ್ನಷ್ಟು ತಪ್ಪುಗಳನ್ನ ಮಾಡ್ಕೋಬೇಕು,  ಸಣ್ಣಗೆ ಸಿಟ್ಟು ಮಾಡಿಕೊಳ್ಳಬೇಕು, ಸಿಟ್ಟು ಮಾಡಿಕೊಂಡಾಗ ಓಲೈಸಿಕೊಳ್ಳಬೇಕು, ನಮ್ಮಲ್ಲಿ ಯಾವ ಗುಣಾವಗುಣಗಳಿವೆ, ಅವುಗಳಲ್ಲಿ ಯಾವ ಅವಗುಣಗಳನ್ನ ಗೌಣವೆಂದುಕೊಂಡರೆ ನನಗೆ ನೀನು, ನಿನಗೆ ನಾನು ಕೊನೇತನಕ ಇಷ್ಟವಾಗ್ತೀವಿ, ಸಹ್ಯವಾಗ್ತೀವಿ ಅಂತಾ ಅರಿತುಕೊಳ್ಳಬೇಕು, ಮತ್ತು ಅದಕ್ಕೆಲ್ಲ ಸಮಯ ಬೇಕು..."
"ನನಗೆ ಇಂಥಾದ್ದೆಲ್ಲ ಅರ್ಥ ಆಗೋಲ್ಲ. ನಾನು ಯಾವುದೋ ಮ್ಯಾಗ್‌ಜೀನ್‌ನಲ್ಲಿ 'ಪೋಸ್ಟ್ ಕಾರ್ಡಿನಲ್ಲಿ ಕತೆ' ಅಂತಾ ಒಂದು ಓದಿದ್ದೆ, ಅದರಲ್ಲಿ ಹೀಗಿತ್ತು 'ನಗರದಲ್ಲಿ ನಡೆಯುತ್ತಿದ್ದ ಒಂದು ವಿಚಾರ ಕಮ್ಮಟದಲ್ಲಿ ಪ್ರಕಾಂಡ ಪಂಡಿತನೊಬ್ಬ ನೆರೆದಿದ್ದ ಜನರಿಗೆ ಪ್ರೀತಿಯ ಬಗ್ಗೆ ಉಪನ್ಯಾಸ ಕೊಡ್ತಾ ಇದ್ದ. ಪ್ರೀತಿ ಎಷ್ಟು ದೊಡ್ಡದು, ಹೇಗೆ ಎಲ್ಲಕ್ಕಿಂತ ಮಿಗಿಲಾದುದು ಅನ್ನೋದಕ್ಕೆ ದೊಡ್ಡ ದೊಡ್ಡ ಸಾಹಿತಿಗಳ, ಮಹಾಕಾವ್ಯಗಳನ್ನೆಲ್ಲ ಉದ್ದರಿಸುತ್ತಿದ್ದ, ವಿವರಿಸುತ್ತಿದ್ದ. ಜನರ ಗುಂಪಿನ ಹಿಂದೆ ಕುಳಿತಿದ್ದ ಹಳ್ಳಿಗನೊಬ್ಬ ಇದನ್ನೆಲ್ಲ ಕೇಳುತ್ತ ಉದ್ಗರಿಸಿದನಂತೆ, 'ಅಯ್ಯೋ, ನಿಮ್ಮ ಪ್ರೀತಿ ಇಷ್ಟೊಂದು ಕಠಿಣವಾದ್ರೆ ಅದನ್ನು ಮಾಡೋದಾದ್ರೂ ಹೇಗೆ' ಅಂತಾ!' ನಾನೂ ಅವನ ಥರಾನೇ, ಒಂಥರಾ ಕಾಡು ಮನುಷ್ಯ!"
"ನೀನು ಕಾಡು ಮನುಷ್ಯ ಅಂತಲೇ ನನಗೆ ಇಷ್ಟವಾಗಿದ್ದು!"
"ನಾನು ಮೌಗ್ಲಿ! ಊಂಹೂಂ ಅಲ್ಲ, ನಾನು ಟಾರ್ಜನ್"
"ನೀನು ಟಾರ್ಜನ್ ನಾನು ಜೇನ್"
"ನಾನು ಕೃಷ್ಣಪರಮಾತ್ಮ ಮತ್ತು ನೀನು ಯಾವುದೋ ಜುಜುಬಿ ಗೋಪಿಕಾ ಸ್ತ್ರೀ!"
"ಅದೇ ನೋಡು, ಪ್ರಾಬ್ಲಂ"
"ಏನು?"
"ನೀನು ಎಷ್ಟು ಜನಕ್ಕೆ ನೀನು 'ಐ ಲವ್ ಯೂ' ಅಂತಾ ಹೇಳ್ತೀಯಾ?"
"ಯಾರಿಗೆ ಗೊತ್ತು? ಯಾಕೆ? ನಿನ್ನ ಪ್ರಕಾರ ಒಬ್ಬರಿಗಿಂತ ಜಾಸ್ತಿ ಜನರನ್ನ ಪ್ರೀತಿ ಮಾಡೋಕೆ ಸಾಧ್ಯವಿಲ್ವಾ?"
"ಅದ್ಹೇಗೆ ಸಾಧ್ಯ? ಪ್ರೀತಿಯೇನು ತಿಂಡಿ ಥರಾನಾ, ಎಲ್ಲರಿಗೂ ಇಷ್ಟಿಷ್ಟು ಅಂತಾ ಹಂಚಿಕೊಡೋಕೆ?
"ಅದೇ ನೋಡು ತಪ್ಪು! ನಮ್ಮ ಸ್ಕೂಲಿನಲ್ಲಿ ಓದುವಾಗ ನಮಗೊಂದು ಇಂಗ್ಲೀಷ್ ಪಾಠ ಇತ್ತು. 'ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜನರ ನಡುವೆ ಹೀಗೇ ಮಾತು ಶುರುವಾಗುತ್ತೆ, ಅದರಲ್ಲೊಬ್ಬಳು ತಾಯಿ ದುಃಖದಲ್ಲಿರುತ್ತಾಳೆ, ಯಾಕೇಂದ್ರೆ ಅವಳ ಒಬ್ಬನೇ ಮಗ ಯುದ್ದದಲ್ಲಿ ಸತ್ತು ಹೋಗಿರುತ್ತಾನೆ. ಅವಳಿಗೆ ಸಮಾಧಾನ ಮಾಡುತ್ತ ಸಹ ಪ್ರಯಾಣಿಕನೊಬ್ಬ ಜೊತೆಗೇ ಇದ್ದ ತನ್ನ ಹೆಂಡತಿಯನ್ನು ತೋರಿಸುತ್ತ ಹೇಳುತ್ತಾನೆ, 'ನಮ್ಮ ಇಬ್ಬರ ಮಕ್ಕಳ ಪೈಕಿ ಒಬ್ಬ ಅದೇ ಯುದ್ದದಲ್ಲಿ ಸತ್ತಿದ್ದಾನೆ' ಅದಕ್ಕೆ ಈ ತಾಯಿ, 'ನಿಮಗಾದರೆ ಇನ್ನೊಬ್ಬ ಮಗ ಜೀವಂತ ಇದಾನೆ, ಅವನನ್ನು ಪ್ರೀತಿ ಮಾಡುತ್ತ ಸತ್ತವನ ದುಃಖ ಮರೀಬಹುದು' ಅನ್ನುತ್ತಾಳೆ. ಅದಕ್ಕೆ ಕಣ್ಣೀರಾದ ಹೆಂಡತಿಯನ್ನು ಸಮಾಧಾನಪಡಿಸುತ್ತ ಆ ಪ್ರಯಾಣಿಕ ಇವಳಿಗೆ ತಿಳಿಹೇಳುತ್ತಾನೆ, 'ಪ್ರೀತಿ ಅನ್ನೋದು ಬ್ರೆಡ್‌ನ ತುಂಡುಗಳಂತಲ್ಲ. ಹರಿದು ಹಂಚೋಕಾಗೋಲ್ಲ. ಪ್ರೀತಿಯನ್ನ ಇಡೀ ಇಡೀಯಾಗಿ ಕೊಡೋಕೆ ಸಾಧ್ಯ.  ಒಬ್ಬ ಮಗನನ್ನ ಕಳೆದುಕೊಂಡವಳು ಆ ಮಗನ ಪ್ರೀತಿಯನ್ನು ಇನ್ನೊಬ್ಬ ಮಗನ ಮೇಲೆ ತೋರಿಸೋಕಾಗೋಲ್ಲ. ಏನೇ ಆದರೂ ಕೊಡಲಾಗದ-ಕೂಡಲಾಗದ ಕೊರತೆಯಾಗಿ ಅದು ಹಾಗೇ ಉಳಿದು ಬಿಡುತ್ತೆ. ಒಬ್ಬ ಮಗನಿದ್ದರೂ, ಇನ್ನೊಬ್ಬ ಮಗ ತೀರಿಕೊಂಡ ದುಃಖ ಇಡೀಇಡೀಯಾಗೇ ಕಾಡುತ್ತೆ. ಅಂತಾ!' ಹಾಗೇ ಇಡೀ ಇಡೀಯಾಗೇ ಪ್ರೀತಿಸೋಕೆ ಸಾಧ್ಯ! ಪ್ರೀತಿ ಹರಿದು ಹಂಚಿ ಕಳೆದುಹೋಗಲ್ಲ, ಪ್ರತೀ ಪ್ರೀತಿಪಾತ್ರರೆಡೆಗೆ ಹೊಸತಾಗಿ ಹುಟ್ಟಿ, ಪ್ರೀತಿಸಿದಷ್ಟು ಬೆಳೆದು ಹರಡಿ ವಿಸ್ತಾರವಾಗುತ್ತೆ. ಹಾಗೆಲ್ಲ ಹರಿದು ಹಂಚಿ ಕೊಡೋ ಹಾಗಿದ್ರೆ ಜೀವನದ ಯಾವುದೋ ಘಟ್ಟದಲ್ಲಿ ನಮ್ಮ ಪ್ರೀತಿಯೆಲ್ಲ ಖಾಲಿಯಾಗಿ, ನಾವು ಹೊಸದಾಗಿ ಹೊಸಬರನ್ನು ಪ್ರೀತಿಸುವುದನ್ನೇ ನಿಲ್ಲಿಸಿಬಿಡ್ತಿದ್ವೇನೋ!?  ಅದಕ್ಕೇ ಹೇಳಿದ್ದು 'ಐ ಲವ್ ಯೂ' ಅಂದ್ರೆ ಈಗ, ಈ ಸನ್ನಿವೇಶದಲ್ಲಿ ನನಗೆ ನಿನ್ನ ಮೇಲೆ ಪ್ರೀತಿ ಇದೆ ಅಂತಾ. ನಾಳೆ ನಾನು ಇನ್ನೊಬ್ಬಳಿಗೆ 'ಐ ಲವ್ ಯೂ' ಅಂದ್ರೆ ನಿನ್ನ ಪ್ರೀತಿಯನ್ನೇ ಪಾಲು ಮಾಡಿ ಅವಳಿಗೆ ಹಂಚಿದೆ ಅಂತಾ ಅಲ್ಲ...""ಈ ಥರ ಮಾತಾಡಿ ಮನಸಿನೊಳಗೆ ಗೊಂದಲದ ಬಗ್ಗಡವೆಬ್ಬಿಸೋದರಲ್ಲಿ ನೀನು ಎತ್ತಿದ ಕೈ ನೋಡು!  'ನಾನು ತುಂಬಾ ಸಿಂಪಲ್ಲು, ನೀನು ಕೊಡೋ ಪ್ರೀತಿಯ ಆಖ್ಯಾನ-ವ್ಯಾಖ್ಯಾನವೆಲ್ಲ ನನಗೆ ಗೊತ್ತಿಲ್ಲ-ಗೊತ್ತಾಗಲ್ಲ' ಅಂತಿದ್ದೆ, ಈಗ ಈ ರೀತಿಯ ಅವಕಾಶವಾದದ ಉಪನ್ಯಾಸ ಮಾತ್ರ ಪುಂಖಾನುಪುಂಖವಾಗಿ ಹೊಡೀತಾ ಇದೀಯಾ?" ಅವಳು ಕೆಣಕಿದಳು...
"ಏನಿಲ್ಲ! ನನ್ನ ಥಿಯರಿ ಸರೀ ಇದೆ, ತುಂಬಾನೇ ಸರಳವಾಗಿದೆ, ಮತ್ತು ನೋಡು, ಈಗ ವರ್ಕೌಟ್ ಕೂಡಾ ಆಗ್ತಿದೆ!" ಅವಳನ್ನು ಎಲ್ಲೋ ಮುಟ್ಟಿ ಕಚಗುಳಿಯಿಟ್ಟ, ತನ್ನ ಮೈಯ ಮೇಲೆ ಹರಡಿ ಕೊಂಡಿದ್ದ ಅವಳ ಮೈಯ ಹೊಯ್ದಾಡುವಿಕೆಯಿಂದಾಗಿ ಅವನಿಗೂ ಕಚಗುಳಿ ಇಟ್ಟಂತಾಗಿ ನಗು ಬಂತು, ಇಬ್ಬರೂ ನಕ್ಕರು. ತನ್ನೆದೆಯ ಮೇಲೆ ಮಲಗಿದ್ದ ಅವಳ ಬರೀ ಬೆನ್ನು ಫ್ಯಾನಿನ ಗಾಳಿಯಿಂದಾಗಿ ತಣ್ಣಗಾಗಿದ್ದುದನ್ನು ಗಮನಿಸಿ, ಒಂದೇ ಕೈಯಿಂದ ರಜಾಯಿಯನ್ನು ಎಳೆದುಕೊಂಡು, ಇಬ್ಬರಿಗೂ ಹೊದೆಸಿಕೊಂಡು ಅವಳನ್ನು ಅಪ್ಪಿಕೊಂಡ. ಅವಳು ಅವನೆದೆಯ ಮೇಲೆ ಹೂಮುತ್ತನಿತ್ತಳು...* * * * * *
<strong>ತಿಂಗಳಾರು ಕಳೆದ ಮೇಲೆ...</strong>
"ಐ ಲವ್ ಯೂ"
"ನಂಗೊತ್ತು ಕಣೇ. ಐ ಟೂ ಲವ್ ಯೂ!"
"ಕಡೆಗೂ ಹೇಳಿಸಿಬಿಟ್ಟೆ ನೋಡು, ನನ್ನನ್ನೂ ನಿನ್ನ ಥರವೇ ಮಾಡಿಬಿಟ್ಟೆ"
"ನಾನೊಂಥರಾ ಮೈಂಡ್-ಸ್ನ್ಯಾಚರ್, ವಶೀಕರಣ ವಿದ್ಯಾಪಾರಾಂಗತ."
"ನೀನು ನನ್ನ ಫಸ್ಟ್ ಲವ್"
"ಮತ್ತೆ ಈ ಪ್ರಹೀತ್, ಎರಡನೇ ಲವ್ವಾ"
"ನಿಜಾ ಹೇಳ್ಬೇಕೂಂದ್ರೆ... ಗೊತ್ತಿಲ್ಲ! ಆದ್ರೆ ಇವನು ನಿನಗಿಂತಾ ಹೆಚ್ಚು, ನಿನಗಿಂತಾ ಬೇರೆ ಕಾರಣಗಳಿಗೋಸ್ಕರ ಇಷ್ಟವಾಗ್ತಾನೆ!"
"ಓಹೋ! ಆ ಕಾರಣಕ್ಕೂ ನನಗಿಂತಾ ಹೆಚ್ಚು ಇಷ್ಟವಾಗ್ತಾನಾ?" ಆವನಿನ್ನೂ ಕೆಟ್ಟ ಮೂಡಿನಿಂದ ಹೊರ ಬಂದಿರಲಿಲ್ಲ.
"ಆ ಕಾರಣವಿನ್ನೂ ನಮ್ಮ ನಡುವೆ ಬಂದಿಲ್ಲ!"
"ಏನು? ಸುಳ್ಳು ಹೇಳಬೇಡಾ! ಇದೂವರೆಗೂ ಏನೂ ಮಾಡಿಲ್ವಾ ನೀವು?"
"ನಿಂಗೊತ್ತು ನಾನು ಬೇಗ ಕರಗಿ ಬಿಡ್ತೀನಿ! ಆದ್ರೆ ಅವನು ನನಗೆ ಕರಗೋಕೆ ಅವಕಾಶಾನೇ ಕೊಟ್ಟಿಲ್ಲ! ಇದೂವರೆಗೂ ಒಂದು ಮುತ್ತು ಕೂಡಾ ಇಲ್ಲ. ವೀ ಹ್ಯಾವಂಟ್ ಕಿಸ್ಡ್ ಇವನ್ ಒನ್ಸ್!"
ಅವಳನ್ನು ಕೆರಳಿಸುವಂತೆ ಅವನು ಕಟಕಿಯಾಡಿದ, "ಅವನೆಂತಾ ಅರಸಿಕ ಪ್ರಾಣೀನೇ?"
"ನಿಂಗೆ ಇವೆಲ್ಲ ಅರ್ಥ ಆಗೊಲ್ಲ. ವಿ ಆರ್ ಜಸ್ಟ್ ಗೋಯಿಂಗ್ ಔಟ್ ಅಷ್ಟೇ! ಇನ್ನೇನೂ ಇಲ್ಲ."
"ಹೌದು, ಈ ನಿನ್ನ 'ಸೀಯಿಂಗ್ ಈಚ್ ಅದರ್', 'ಜಸ್ಟ್ ಗೋಯಿಂಗ್ ಔಟ್', 'ಡೇಟಿಂಗ್' ಅನ್ನೋ ವ್ಯಾಖಾನಗಳೆಲ್ಲ ನಂಗೆ ಖಂಡಿತಾ ಅರ್ಥ ಆಗಲ್ಲ" ಅವಳು ಸಿಟ್ಟು ಮಾಡಿಕೊಳ್ಳದಂತೆ ತನ್ನ ಕಣ್ಣರೆಪ್ಪೆಗಳನ್ನು ಫಟಫಟಿಸಿ ಸಿಹಿಯಾಗಿ ನಕ್ಕಳು, "ಅವ್ಯಾವುದರ ಗೋಜೂ ಇಲ್ಲದೇ ನಾನು ನಿನಗೆ ಇಡಿ ಇಡೀಯಾಗಿ ಸಿಕ್ಕುಬಿಟ್ಟಿದ್ದೆ ಗೊತ್ತಿದೆ ತಾನೇ?" ಅವಳ ತುಟಿಗಳನ್ನೇ ನೋಡುತ್ತಾ ಅವನೂ ತನಗೇ ಅರ್ಥವಾಗದ ವಿಶಾದದ ನಗು ನಕ್ಕ.
"ಪ್ರಹೀತ್ ಫೋಟೋ ಇದೆ ನನ್ನ ಮೊಬೈಲಿನಲ್ಲಿ. ನೋಡ್ತೀಯಾ?"
"ನಂಗೇನೂ ಬೇರೆ ಕೆಲ್ಸಾ ಇಲ್ವಾ?" ಅವನು ಹಲ್ಲು ಕಿರಿದು ಕಣ್ಣು ಮುಚ್ಚಿಕೊಂಡ. ಕ್ಷಣಬಿಟ್ಟು ಕಣ್ಣು ತೆರೆದರೆ ಅವನ ಮುಖದೆದುರಿಗೆ ಅವಳ ಮೊಬೈಲ್ ಪರದೆ, ಅದರಲ್ಲಿ ಇವನಿಗಿಂತ ಚೆನ್ನಾಗಿಯೇ ಇದ್ದ 'ಪ್ರಹೀತ್' ಇವನು ಎರಡು ಕೈಗಳನ್ನು ಮುಗಿದು ಮೊಬೈಲ್ ಮುಟ್ಟಿ ಕೈಗಳನ್ನು ಭಕ್ತಿಯಿಂದೆಂಬಂತೆ ಕಣ್ಣಿಗೊತ್ತಿಕೊಂಡ, "ಆಯ್ತಲ್ಲ, ದರ್ಶನ ಭಾಗ್ಯ? ಇನ್ನೇನು?" ಇಬ್ಬರೂ ನಕ್ಕರು.
"ಇನ್ನೂ ಏನಾದ್ರೂ ತಿಂತೀಯಾ?" ತಾನು ಇನ್ನೂ ಅವಳ ಮೇಲೆ ಸಿಟ್ಟು ಮಾಡಿಕೊಂಡಿರಬೇಕಾಗಿದದ್ದು ನೆನಪಿಸಿಕೊಂಡು ಅವನು ಗಂಭೀರವಾಗಿ ನುಡಿದ, "ಕಾಫೀ ಡೇ ನಲ್ಲಿ ಈ ಸಮೋಸಾ-ಸ್ಯಾಂಡ್‌ವಿಚ್ ಬಿಟ್ಟರೆ ಇನ್ನೇನು ಸಿಗುತ್ತೆ? ನಾವಿಬ್ಬರೂ ಊಟಕ್ಕೆ ಹೋಗ್ತಾ ಇದೀವಿ ಅಂತಾ ಅಂದ್ಕೊಂಡಿದ್ದೆ ನಾನು" ಮುಖ ಊದಿಸಿಕೊಂಡವನನ್ನು ಸಂತೈಸುವಂತೆ ಅವಳು ನುಡಿದಳು, "ಸಿಗೋಕೆ ಮುಂಚೆ ಫೋನ್‌ನಲ್ಲೇ ಹೇಳಿದ್ದೆ ನಾನು. ನಾನೂ ಅವನೂ ಡಿನ್ನರ್‌ಗೆ ಹೊರಗೆ ಹೋಗ್ತಾ ಇದೀವಿ ಅಂತಾ. ವೀಕೆಂಡ್ ಆದ್ರೂ ನೀನು ಬೆಳಗಿನಿಂದ ಎಲ್ಲೂ ಹೋಗಿಲ್ಲ, ರೂಮಿನಲ್ಲೇ ಕೊಳಿತಾ ಇದೀಯಾ ಅಂತಾ ಗೊತ್ತಾಗಿ, ಸ್ವಲ್ಪ ಖುಷಿ-ಖುಷಿ ಮಾಡೋಣ ಅಂತಾ ಹೊರಗೆ ಕರೆದೆ, ಮತ್ತೆ ನೀನು ಒಬ್ಬನಾದ್ರೂ ಊಟ ಮಾಡು ಅಂದ್ರೆ ನೀನೇ ತಾನೇ ಬೇಡ ಅಂದಿದ್ದು?"
"ನಾವಿಬ್ಬರೂ ಜೊತೆಗಿರುವಾಗ ಯಾವಾಗ್ಲಾದ್ರೂ ಒಬ್ಬೊಬ್ರೇ ಏನಾದ್ರೂ ತಿಂದಿದೀವಾ ನಾವು?" ಅವನ ಮುಖ ನೋಡಿ ಫಕ್ಕನೆ ನಕ್ಕಳು.
"ಏನು? ಜೆಲಸ್ಸಾ? ಪ್ರಹೀತ್ ಬಗ್ಗೆ ಹೊಟ್ಟೆ ಕಿಚ್ಚಾ?"
"ಅದೇನೂ ಇಲ್ಲ... ಆದ್ರೂ..." ಮುಂದೇನು ಹೇಳಬೇಕೆಂದು ತೋಚದೇ ಸುಮ್ಮನಾದ ಅವನ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ವಿಚಾರಿಸಿದಳು, "ಓಹೋ, ಅದೇನೂ ಇಲ್ಲದೇ ಇದ್ದುದಕ್ಕೆ  ನೀನು ನನ್ನ ಕೈನೆಟಿಕ್‌ನಲ್ಲಿ ಆ ಥರಾ ಕೂತಿದ್ಯಾ ನನ್ನ ಹಿಂದೆ? ಮೊದಲೆಲ್ಲಾ ನನಗೇ ಅಂಟಿಕೊಂಡು ಕೂರ್ತಿದ್ದೆ? ಕೈಗಳೆಲ್ಲಾ ಎಲ್ಲೆಲ್ಲೋ! ಇವತ್ತು ಮಾತ್ರ ಯಾವುದೋ ಅಪರಿಚಿತ ಹುಡ್ಗೀ ಹತ್ರ ಡ್ರಾಪ್ ತಗೊಂಡಿರೋ ತರಾ ಸ್ವಲ್ಪವೂ ತಾಕದ ಹಾಗೆ ಹಿಂದೆ ಹಿಂದೆ?"
ಅವನು ಕೆಂಪಗಾದ, ಅವಳು ಅವನ ಮೂಗು ಮುರಿದು ಕಿಚಾಯಿಸುವ ಧ್ವನಿಯಲ್ಲಿ ಮುಂದುವರಿಸಿದಳು, "... ಕಟ್ ಇಟ್ ಮಹೀ... ಇದೆಲ್ಲ ನಿಂಗೆ ಸೂಟ್ ಆಗಲ್ಲ, ಇದು ನೀನಲ್ಲ! ಸುಮ್ನೆ ಸಣ್ಣ ಮಗು ಥರಾ ಮುಖ ಊದಿಸ್ಕೊಂಡು, ಸಿಟ್ಮಾಡ್ಕೊಂಡು ಕೂತ್ಕೋಬೇಡಾ! ಪ್ರಹೀತ್ ಬಗ್ಗೆ ನೀನು ಹೊಟ್ಟೆಕಿಚ್ಚು ಪಡೋ ಯಾವ ಕಾರಣವೂ ಇಲ್ಲ. ನಿನ್ನ ಜಾಗಕ್ಕೆ ಅವನು ಬರೋಕೆ ಸಾಧ್ಯವಿಲ್ಲ. ನೀನು ನನ್ನ ಫಸ್ಟ್ ಲವ್, ತುಂಬಾ ಸ್ಪೆಷಲ್, ಯೂ ಆರ್ ಇರ್ರಿಪ್ಲೇಸೆಬಲ್!" ಅವನು ಹೆಮ್ಮೆಯಿಂದೆಂಬಂತೆ ನಕ್ಕ, ಅವಳೂ ನಕ್ಕಳು, "ಹೋಗ್ಲಿ, ಈ ಫ್ರಾಪೆ ಕುಡಿಯೋಕೆ ಕಂಪನಿ ಕೊಡ್ತೀನಿ, ಸರೀನಾ?""ಸರಿ, ನಿಂಗೊಂದ್ ವಿಷ್ಯ ಗೊತ್ತಾ?" ಅವನು ಮಾತು ಬದಲಾಯಿಸುವಂತೆ ನುಡಿದ.
ಅವಳು ಕೆಫೆ ಫ್ರಾಪೆಯ ಮೇಲಿನ ಕ್ರೀಮನ್ನು ಬಿಳೀ ಪ್ಲಾಸ್ಟಿಕ್ ಚಮಚದಿಂದ ಸ್ವಲ್ಪವೇ ಸ್ವಲ್ಪ ತೆಗೆದು ಚಪ್ಪರಿಸುತ್ತ ಕೇಳಿದಳು, "ಏನು?"
"ಸ್ವರ್ಗ ನರಕ ಅನ್ನೋದನ್ನೆಲ್ಲ ನಾನು ನಂಬಲ್ಲ! ಆದ್ರೆ ಸ್ವರ್ಗ ಅನ್ನೋದೇನಾದ್ರೂ ಇದ್ದು..."
"ಅದ್ರಲ್ಲೇನಾದ್ರೂ ಅಮೃತ ಅನ್ನೋದೇನಾದ್ರೂ ಇದ್ರೆ..." ಅವಳು ಅವನ ಮಾತುಗಳನ್ನು ಮುಂದುವರೆಸಿದಳು, "ಅದರ ರುಚಿ ಈ ಕಾಫಿ ಥರಾ ಇರುತ್ತೆ ಅಲ್ವಾ?"
ಅವನು ಇದೆಲ್ಲ ಅವಳ ಬುದ್ದಿವಂತಿಕೆಗೆ ಅಚ್ಚರಿಗೊಂಡವನಂತೆ ಹುಬ್ಬೇರಿಸಿದ; ಅವಳು ಅವನದೇ ಪ್ರಭಾವವೆನ್ನುವಂತೆ ಕುಳಿತಲ್ಲಿಯೇ ತುಸು ಬಾಗಿ ನಜರು ಮುಜರೆ ಸಲ್ಲಿಸಿದಳು; ಅವನು ಹೆಮ್ಮೆಯಿಂದ ಎದೆಯುಬ್ಬಿಸಿ ಇಲ್ಲದ ಮೀಸೆ ತಿರುವಿದ; ಅವಳು ಅವನದು ಅತಿಯಾಯಿತೆನ್ನುವಂತೆ ಅವನ ಸೋಟೆ ತಿವಿದಳು; ಇಬ್ಬರೂ ನಕ್ಕರು! ಕಂಗಳಲ್ಲಿ ನೀರು ತುಂಬುವಷ್ಟು ನಕ್ಕರು.
ಅವಳಿನ್ನೂ ನಗುತ್ತಿರುವಾಗಲೇ ಅವನು ನಗು ನಿಲ್ಲಿಸಿ ಅವಳನ್ನೇ ನೋಡುತ್ತಾ ನುಡಿದ,
"ನಿಜವಾಗ್ಯೂ ಅಮೃತದ ರುಚಿ ಹೇಗಿರುತ್ತೆ ಗೊತ್ತಾ?"
ಅವಳಿನ್ನೂ ನಗುತ್ತಲೇ ಕೇಳಿದಳು, "ಹೇಗೆ?"
"ಈ ಕ್ರೀಮ್ ಮೆತ್ತಿಕೊಂಡಿರೋ ನಿನ್ನ ತುಟಿಗಳ ರುಚಿ ಇದ್ದಹಾಗೆ!" ಅವಳು ನಾಚಿ ಕೆಂಪಗಾಗುತ್ತ ಥಟ್ಟನೇ ನಗು ನಿಲ್ಲಿಸಿದಳು; ಈಗ ನಗುವ ಸರದಿ ಅವನದಾಯಿತು! ಅವನು ಮೆಲ್ಲನೆ ಅವಳ ತುಟಿಗಳಿಗೆ ಸ್ವಲ್ಪವೇ ಮೆತ್ತಿಕೊಂಡಿದ್ದ ಕ್ರೀಮ್ ಅನ್ನು ತಾಕುವಂತೆ ತನ್ನ ಬೆರಳು ಮುಂದು ಮಾಡಿದ; ಅವಳು ಥಟ್ಟನೆ ತನ್ನ ತುಟಿಗಳನ್ನು ತಾನೇ ಚಪ್ಪರಿಸಿಕೊಂಡಳು, ಪೆಚ್ಚಾಗಿ ಕೈ ವಾಪಸ್ಸು ತೆಗೆದುಕೊಂಡ ಅವನನ್ನೇ ನೋಡುತ್ತ "ಇಲ್ವಲ್ಲಾ, ನಂಗೇನೂ ನನ್ನ ತುಟಿಗಳು ಅಷ್ಟೊಂದು ರುಚಿಯಾಗಿವೆ ಅನ್ನಿಸ್ತಾ ಇಲ್ಲ" ಅಂದಳು; ಇಬ್ಬರೂ ಮತ್ತೆ ನಕ್ಕರು-ಮತ್ತೆ ಕಣ್ದುಂಬಿ ಬರುವಷ್ಟು!
"ಸರಿ, ಹೊರಡೋಣ್ವಾ? ನಾನು ನಿನ್ನ ರೂಮಿನ ಹತ್ರ ಡ್ರಾಪ್ ಮಾಡಿ ಹೋಗ್ತೀನಿ, ಪ್ರಹೀತ್‌ಗೆ ಒಂಬತ್ತುಗಂಟೆಗೆಲ್ಲ ಸಿಗ್ತೀನಿ ಅಂತಾ ಹೇಳಿದ್ದೆ..."
"ಪರ್ವಾಗಿಲ್ಲ ನೀನು ಹೊರಡು. ಇಲ್ಲಿಂದ ಏನ್ಮಹಾ ದೂರ ನನ್ನ ರೂಮು? ನಡ್ಕೊಂಡೇ ಹೋಗ್ತೀನಿ!"
"ಆರ್ ಯೂ ಶ್ಯೂರ್?"
"ವೆರಿ ಮಚ್ ಶ್ಯೂರ್!"
"ಸರೀ ಹಾಗಾದ್ರೆ, ನಾನಿನ್ನು ಹೊರಡ್ತೀನಿ ಆದ್ರೆ ರಾತ್ರಿ ಫೋನ್ ಮಾಡ್ತೀನಿ, ಫೋನ್ ಮಾಡ್ಲಿಲ್ಲ ಅಂದ್ರೆ ಬೇಜಾರು ಮಾಡ್ಕೋಬೇಡ... ನಂಗೊತ್ತು ನೀನು ಬೇಜಾರ್ ಮಾಡ್ಕೊಳಲ್ಲ ಅಂತಾ, ಆದ್ರೂ..." ಎದ್ದು ಕಾಫೀಡೇಯಲ್ಲಿದ್ದ ಎಲ್ಲರೆದುರೇ ಬಿಡುಬೀಸಾಗಿ ಅವನ ತುಟಿಗಳಿಗೆ ಮುತ್ತಿಟ್ಟು ಸರಕ್ಕನೇ ಹೊರಟೇ ಬಿಟ್ಟಳು, ಅವನಿನ್ನೂ ಮುತ್ತಿನ ಮತ್ತಿನ ಗುಂಗಿನಲ್ಲಿರುವಾಗಲೇ ಗಾಜಿನ ಬಾಗಿಲಿನಾಚೆಯಿಂದ ಹಿಂತಿರುಗಿ ನೋಡಿ ಕಣ್ಣು ಮಿಟುಕಿಸಿ ನಕ್ಕಳು, ದನಿ ಹೊರಡಿಸದಂತೆ ಬಾಯಿಸನ್ನೆಯಲ್ಲೇ ಇವನಿಗೆ ಗೊತ್ತಾಗುವಂತೆ 'ಐ ಲವ್ ಯೂ' ಅಂದಳು,  ಮತ್ತು ಈಗಿದ್ದಳು-ಈಗಿಲ್ಲ ಎಂಬಂತೆ ಮಾಯವಾದಳು. 'ನನಗೆ ಈಗ ಬೇಜಾರಾಗಬಾರದೇ? ಹಾಗಾದ್ರೆ ಈಗ ಆಗ್ತಾ ಇರೋದೇನು?' ಅಂತೆಲ್ಲ ಯೋಚಿಸುತ್ತ ಅವನು ಅಲ್ಲೇ ಕುಳಿತಿದ್ದ. ನಂತರ ಬಂದ ಬಿಲ್ಲಿಗೆ ದುಡ್ಡಿಡುವಷ್ಟರಲ್ಲಿ ಹೊಸ ಹುಡುಗಿ ಅವಂತಿಕಾಳ ಫೋನ್ ಬಂತು.
"ಏನ್ಮಾಡ್ತಾ ಇದೀಯಾ?"
"ಏನಿಲ್ಲ."
"ಹಾಗಾದ್ರೆ ಊಟಕ್ಕೆ ಸಿಗೋಣ್ವಾ? ಊಟವಾದ ಮೇಲೆ ಅದೇ ನೀನು ಹೇಳಿದ್ದೆಯಲ್ಲ, ನೈಸ್ ರೋಡಿನಲ್ಲಿ ಒಂದು ಲಾಂಗ್ ರೈಡ್?" ಇವನಿಗ್ಯಾಕೋ ಸಿಟ್ಟು ಉಕ್ಕಿಬಂದಂತಾಗಿ ಕಿರಿಕಿರಿಯೆನಿಸಿತು; ಆದರೆ 'ನೈಸ್ ರೋಡಿನ' ಪ್ಲಾನ್ ತಾನು ಹೇಳಿದ್ದೇ ಅಂದುಕೊಂಡು ಸಮಾಧಾನ ಮಾಡಿಕೊಳ್ಳುತ್ತ ನುಡಿದ, "ಇಲ್ಲ, ಇವತ್ತು ಬೇಡ ನಾಳೆ ಯಾವಾಗಲಾದ್ರೂ ಸಿಗೋಣ. ಈಗ ನನ್ನ ಊಟವಾಯ್ತು."
ಅವಂತಿಕಾಳಿಗೆ ಅಷ್ಟೇನೂ ಬೇಜಾರಾದಂತೆ ಕಾಣಿಸಲಿಲ್ಲ. "ಸರಿ, ಹಾಗಾದ್ರೆ ನಾಳೆ ಬಿಡುವಾದಾಗ ಫೋನ್ ಮಾಡು" ಅಂತಾ ಎಲ್ಲ ಭಾರವನ್ನು ಅವನ ಮೇಲೇ ಹಾಕಿ 'ಗುಡ್ ನೈಟ್' ಅಂತ್ಹೇಳಿ ಫೋನ್ ಇಟ್ಟಳು. ಅವನು "ಗುಡ್ ನೈಟ್..." ಅಂತ್ಹೇಳಿ, ಮತ್ತೆ ಯಾವುದೋ ಮಾಯೆಯಲ್ಲಿದ್ದವನಂತೆ ಮೆಲ್ಲನುಸುರಿದ, "...ಸ್ಲೀಪ್ ಟೈಟ್, ಡೊಂಟ್ ಲೆಟ್ ಬೆಡ್ ಬಗ್ಸ್ ಬೈಟ್, ಔಚ್!" ತಕ್ಷಣ ಫೋನಿನ ಆಕಡೆಯಿರುವುದು ಶಾಲಿನಿ ಅಲ್ಲ ಅನ್ನುವುದು ಥಟ್ಟನೆ ಅರಿವಾಗಿ ಗಾಬರಿಯಾದ, ಆದರೆ ತನ್ನ 'ಗುಡ್ ನೈಟ್'ಗೆ ಮೊದಲೇ ಅವಂತಿಕಾ ಫೋನ್ ಕಟ್ ಮಾಡಿದ್ದು ಗೊತ್ತಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟ...
ಆದರೂ...| ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆಯಿಲ್ಲದೇ ಮಾತಿಲ್ಲದೇ ಮನ ವಿಭ್ರಾಂತ |

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

Murali.b ಧ, 10/28/2009 - 17:26

ತುಂಬಾ ಚೆನ್ನಾಗಿ ಬರೆದಿದ್ದೀರ.

ಕೆಎಲ್ಕೆ ಗುರು, 10/29/2009 - 10:03

ಈ ರೀತಿ ಬರೆಯುವ ಕಲೆ ತಮಗೆ ಒಲಿದುಬಿಟ್ಟಿರುವುದರಿಂದ, ಅದರ ಮುಂದೆ ಹೊಗಳಿಕೆ ಸಪ್ಪೆ ಎನಿಸೀತು ಎಂಬ ಭಯಕ್ಕೆ ನಾನೇನೂ ಪ್ರತಿಕ್ರಿಯಿಸುತ್ತಿಲ್ಲ!

ಶಿವಕುಮಾರ ಕೆ. ಎಸ್. ಮಂಗಳ, 11/03/2009 - 21:58

@Murali. b - ಧನ್ಯವಾದಗಳು ರೀ!

@ಕೆಎಲ್ಕೆ - ಪ್ರತಿಕ್ರಿಯಿಸುತ್ತಿಲ್ಲ ಅಂತಾನೇ ಪ್ರತಿಕ್ರಿಯೆ ತೋರಿಯೇಬಿಟ್ಟಿರಲ್ಲ! ಹೊಗಳಿಕೆ ಸಪ್ಪೆ / ಈ ರೀತಿ ಬರೆಯುವ ಕಲೆ... ಇದು ಮೆಚ್ಚುಗೆಯೋ ಅಥವಾ 'ಯಾಕೋ ನಿನ್ನ ಬರವಣಿಗೆ ಏಕರೂಪವಾಗುತ್ತಿದೆ' ಅನ್ನೋ ದೂರೋ?

:) ಶಿವಕುಮಾರ

ತುಂಬಾ ಚನ್ನಾಗಿದೆ..

Varun ಗುರು, 12/03/2009 - 14:32

ಎಲ್ಲಿದೀರಾ ಗುರುಗಳೆ? ಇನ್ನೂ ಬೇಸರ ಕಳೀಲಿಲ್ವಾ?... ನೀವು ಬರ್ದಿದ್ದು ಓದದೇನೆ ಹಾಳಾಗೋಗ್ತಾ ಇದೀವಿ.... ಬೇಗ ಎನಾದ್ರೂ ಬರೀರಿ... ;)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/22/2009 - 00:02

ಚೆನ್ನಾಗಿದೆ :)

nimmashivu ಮಂಗಳ, 12/22/2009 - 00:04

ಚೆನ್ನಾಗಿದೆ :)

ಹುಂ..ಚೆನ್ನಾಗೇ ಬರ್ದಿದ್ದೀರಾ.... ತುಂಬಾ ಚೆನ್ನಾಗಿದೆ

ನಿಮ್ಮವ,
ಕೇಶವ ಪ್ರಸಾದ ಮಾರ್ಗ

ವಿ.ಎಂ.ಶ್ರೀನಿವಾಸ ಮಂಗಳ, 01/05/2010 - 19:32

ತುಂಬಾ ದಿನಗಳ ನಂತರ ನಿಮ್ಮ ಲೇಖನ ಓದಿದೆ. ಪದಗಳನ್ನು ದುಡಿಸಿಕೊಳ್ಳೋದರಲ್ಲಿ ನಿಮಗೇ ನೀವೇ ಸಾಟಿ.
ನಿಜ ಹೇಳಲಾ ನಿಮ್ಮ ಲೇಖನವನ್ನು ನಾನು ಸದಾ ಬೆರಗಿನಿಂದಲೇ ಓದ್ತೇನೆ.

ವಿ.ಎಂ.ಶ್ರೀನಿವಾಸ ಮಂಗಳ, 01/05/2010 - 19:32

ತುಂಬಾ ದಿನಗಳ ನಂತರ ನಿಮ್ಮ ಲೇಖನ ಓದಿದೆ. ಪದಗಳನ್ನು ದುಡಿಸಿಕೊಳ್ಳೋದರಲ್ಲಿ ನಿಮಗೇ ನೀವೇ ಸಾಟಿ.
ನಿಜ ಹೇಳಲಾ ನಿಮ್ಮ ಲೇಖನವನ್ನು ನಾನು ಸದಾ ಬೆರಗಿನಿಂದಲೇ ಓದ್ತೇನೆ.

sampreet_a ಧ, 01/06/2010 - 12:13
ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/06/2010 - 17:06

sampreet_a - ಬುಧವಾರ, 01/06/2010 - 12:13
(No subject)

ಸುಧೀಂದ್ರ.a (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/06/2010 - 17:07

sampreet_a - ಬುಧವಾರ, 01/06/2010 - 12:13
(No subject)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.