ಬದರಿ ಕ್ಷೇತ್ರದಲ್ಲಿ...
ಪರ್ವತೇಶನ ನಾಡಿನಲ್ಲಿ,
ಹಿಮಾಲಯದ ತಂಪಿನಲ್ಲಿ,
ಭಕ್ತಿಭಾವದಿ ಮಿಂದು ಎದ್ದು,
ಬದರಿನಾಥನ ಕಂಡೆನು.
ನೀಲಕಂಠನು ನೋಡುತಿರಲು,
ಅಲಕನಂದೆಯು ಪಾದ ತೊಳೆಯಲು,
ಪುಣ್ಯಪಾದದ ಅಡಿಗೆ ನಿಂತು,
ಬದರಿನಾಥನ ಕಂಡೆನು.
ಗರುಡವಾಹನ ಬಾಗಿಲಲ್ಲಿ,
ಕುಬೇರ ಲಕ್ಷ್ಮಿಯು ಸನಿಹದಲ್ಲಿ,
ಕುಚೇಲನಂತೆ ನಮಿಸಿ ನಾನು,
ಬದರಿನಾಥನ ಕಂಡೆನು.
ಬಿಸಿಯ ನೀರಿನ ಚಿಲುಮೆಯಲ್ಲಿ,
ಮಿಂದ ಭಕ್ತರು ಭಜಿಸುತಿರಲು,
ಮನದೆ ದೇವನ ಸ್ತುತಿಸಿಕೊಂಡು,
ಬದರಿನಾಥನ ಕಂಡೆನು.
ಉದಯರವಿಯು ಮೂಡಿಬಂದು,
ಸ್ವರ್ಣ ಮುಕುಟವ ನೀಡುತಿರಲು,
ಬಣ್ಣಿಸಲಾಗದ ಭಾವದಲ್ಲಿ,
ಬದರಿನಾಥನ ಕಂಡೆನು.
ದಾರಿ ತೋರಿದೆ ಪಾಂಡವರಿಗೆ,
ಮುಕ್ತಿ ನೀಡಿದೆ ಭಕ್ತ ಜನರಿಗೆ,
ನಮಿಸಿದೆನೆಗೆ ಕರುಣೆ ತೋರಿದೆ,
ಧನ್ಯನಾ ಬದರಿ ನಾಥನೇ!
ಸಾಲುಗಳು
- 439 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ