Skip to main content

ಗಡದಿಂ ಅಥವಾ ಘಟಿಕಾಚಲ ಮತ್ತು ಲೇಪಾಕ್ಷಿ

ಇಂದ shamala
ಬರೆದಿದ್ದುAugust 12, 2009
noಅನಿಸಿಕೆ

ಗಡದಿಂ......

ಬಾಗೆಪಲ್ಲಿ, ಕೋಲಾರ ಜಿಲ್ಲೆಯ ಈ ಗಡದಿಂ ಕ್ಷೇತ್ರದಲ್ಲಿ ಅತ್ಯಂತ ಪ್ರಾಚೀನ ಮಂದಿರವಾದ ಶ್ರೀ ಲಕ್ಷ್ಮೀವೆಂಕಟರಮಣನ ಮಂದಿರವಿದೆ. ಈ ದೇವಾಲಯವನ್ನು ಸಪ್ತ ಋಷಿಗಳು ಸ್ಥಾಪಿಸಿದರೆಂದೂ, ಕೆಲವರು ಶ್ರೀ ವೆಂಕಟರಮಣ ಮೂರ್ತಿಯನ್ನು ಧರ್ಮರಾಜನು ಪ್ರತಿಷ್ಠಾಪಿಸಿದನೆಂದೂ ಪ್ರತೀತಿ. ಮುಂದೆ ಅನೇಕ ರಾಜರುಗಳ ಕಾಲದಲ್ಲಿ ಪುನರ್ ನಿರ್ಮಾಣಗೊಂಡಿತೆಂದು ಸ್ಥಳೀಯರಿಂದ ತಿಳಿದುಬರುವ ವಿಷಯ. ದೇವಾಲಯದ ಅಭಿವೃದ್ಧಿಯಲ್ಲಿ, ಚೋಳ ದೊರೆಗಳು, ಪೆನುಗೊಂಡದ ದೊರೆಗಳು, ವಿಜಯನಗರದ ಅರಸರು ಪಾಲ್ಗೊಂಡಿದ್ದರಂತೆ. ದೇವಾಲಯದ ಕಂಭಗಳಿಂದ ಚೋಳರ ಮತ್ತು ವಿಜಯನಗರದ ವಾಸ್ತು ಶಿಲ್ಪ ಕಲಾ ಶೈಲಿಯು ಕಂಡುಬರುವುದು. ಇದರ ವಾಸ್ತು ವಿನ್ಯಾಸವು ೧೪ನೇ ಶನಮಾನದ ಹೊಯ್ಸಳರ ಕಲಾ ಚಾರುರ್ಯದಿಂದ ಕೂಡಿದೆ. ಶಿಲಾ ಶಾಸನದ ಪ್ರಕಾರ ವಿಜಯನಗರದ ಅರಸ ಹರಿಹರನ ಕಾಲದಲ್ಲಿ ಅಂದರೆ ಕ್ರಿ.ಶ. ೧೩೩೬ರಲ್ಲಿ ಅಭಿವೃದ್ಧಿಕಾರ್ಯ ನಡೆದಿತ್ತೆಂದು ತಿಳಿಯುತ್ತದೆ.

ದೇವಾಲಯವು ಸುಮಾರು ೧೦೮ ಅಡಿ ಎತ್ತರದ ರಾಜಗೋಪುರವನ್ನು ಹೊಂದಿದೆ. ಇದನ್ನು ೨೦೦೪ರಲ್ಲಿ ನಿರ್ಮಿಸಲಾಗಿದ್ದು, ಗೋಪುರದ ಮೇಲೆ ದೇವಾನು ದೇವತೆಗಳ ವಿಗ್ರಹಗಳನ್ನು ಪುರಾಣ ಪುರುಷರ ವಿಗ್ರಹಗಳನ್ನೂ, ತಂಜಾವೂರು, ಪಳನಿ ಮುಂತಾದ ಕಡೆಗಳಿಂದ ಬಂದ ಶಿಲ್ಪಿಗಳು ಕಡೆದರೆಂದು ತಿಳಿಯುತ್ತದೆ. ಪ್ರದಾನ ದ್ವಾರವನ್ನು ದಾಟಿ ಮುಂದೆ ನಡೆದಂತೆ ವಿಶಾಲವಾದ ಆವರಣವು ಎದುರಾಗುವುದು ಮತ್ತು ಇಲ್ಲಿ ದೇವಾಲಯದ ಮೂರೂ ದಿಕ್ಕುಗಳಲ್ಲಿ ಗೋಪುರಗಳನ್ನು ನಿರ್ಮಿಸಿದ್ದು, ಚೋಳರ ವಾಸ್ತು ಶೈಲಿಯನ್ನು ಬಿಂಬಿಸುತ್ತದೆ.

ದೇವಾಲಯದ ಒಳ ಪ್ರವೇಶ ಮಾಡಿದಾಗ ವಿಶಾಲವಾದ ಹಜಾರ ಇದುರಾಗುವುದು ಮತ್ತು ಇದರ ಮುಂದೆ ಮುಖ ಮಂಟಪವಿದೆ. ಈ ಮುಖ ಮಂಟಪ ಕಂಭಗಳಿಂದ ಆಸರೆ ಕೊಡಲ್ಪಟ್ಟಿದೆ. ಮುಂದೆ ಗರ್ಭ ಗುಡಿಯಲ್ಲಿ ಎರಡು ಕೋಣೆಗಳಿದ್ದು, ಒಂದು ಪೂಜೆಯ ಸಿದ್ಧತೆಗಳಿಗಾಗಿ ಉಪಯೋಗಿಸಲ್ಪಡುತ್ತದೆ. ಗರ್ಭಗುಡಿಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣನ ಸುಮಾರು ೫ ಅಡಿ ಎತ್ತರದ ಭವ್ಯ ಮೂರ್ತಿ, ನೋಡುವವರಲ್ಲಿ ಭಕ್ತಿಯನ್ನು ಉಕ್ಕಿಸುವಂತಿದೆ. ಜೊತೆಗೆ ಶ್ರೀದೇವೀ ಮತ್ತು ಭೂದೇವಿಯ, ಸುಮಾರು ೩ ಅಡಿಗಳ ಸುಂದರ ಮೂರ್ತಿಗಳು. ಹೊರಗೆ ಪ್ರಾಕಾರದಲ್ಲಿ ಬೃಹದಾಕಾರದ ಗರುಡಗಂಭ ಮತ್ತು ಬಲಿಪೀಠ ಕಂಭಗಳನ್ನು ಸ್ಥಾಪಿಸಲಾಗಿದೆ. ಗರುಡ ಗಂಭ ಸುಮಾರು ೫೧ ಅಡಿಗಳಷ್ಟು ಎತ್ತರವಿದ್ದು, ಸುಂದರವಾಗಿ ಕೆತ್ತಲ್ಪಟ್ಟಿದೆ. ದೇವಾಲಯದ ಒಂದು ದಿಕ್ಕಿನಲ್ಲಿ ವೈಕುಂಠ ದ್ವಾರವನ್ನೂ ನಿರ್ಮಿಸಿದ್ದಾರೆ.

ದೇವಾಲಯದಿಂದ ಹೊರ ಬಂದಂತೆ ಎದುರು ಭಾಗದಲ್ಲಿ ಬೃಹತ್ತಾದ ಮಾರುತಿಯ ಸುಂದರವಾದ, ೩೦ ಅಡಿಗಳಿಗೂ ಎತ್ತರದ ಮೂರ್ತಿಯಿದೆ. ರಸ್ತೆಯ ಕೊನೆಯಲ್ಲಿ ಚಿಕ್ಕ ವೃತ್ತದಲ್ಲಿ ಗರುಡನ ವಿಗ್ರಹವಿದೆ. ಶ್ರೀ ವೇಂಗಟರಮಣನಿಗೆ ಎದುರಾಗೆ ಭಕ್ತಿಯಿಂದ ಕೈ ಮುಗಿದು ನಿಂತಿರುವ ಮಾರುತಿ ಮತ್ತು ರಸ್ತೆಯ ಕೊನೆಯಲ್ಲಿ, ದೂರದಲ್ಲಿ ಕೈ ಮುಗಿದು ನಿಂತಿರುವ ಗರುಡ - ಇಲ್ಲಿಯ ವಿಶೇಷವೆನಿಸುತ್ತದೆ.

ಇಲ್ಲಿಂದ ಸುಮಾರು ೨ ಕಿ.ಮೀಗಳಷ್ಟು ದೂರದಲ್ಲಿರುವುದೇ ಶ್ರೀ ಶನಿಮಹಾತ್ಮನ ದೇವಾಲಯ. ಇಲ್ಲಿ ರಾಮದೇವರ ಹಾಗೂ ದುರ್ಗೆಯ ದೇವಾಲಯಗಳೂ ಇವೆ. ಈ ಗಡದಿಂ ಕ್ಷೇತ್ರವನ್ನು ಘಟಿಕಾಚಲವೆಂದೂ ಕರೆಯುತ್ತಾರೆ. ದ್ವಾಪರಯುಗದಲ್ಲಿ ಈ ಕ್ಷೇತ್ರ ದಂಡಕಾರಣ್ಯವಾಗಿತ್ತೆಂದೂ, ಘಟೋತ್ಕಚನ ಆಳ್ವಿಕೆಯಲ್ಲಿತ್ತೆಂದೂ ಹೇಳಲ್ಪಡುತ್ತದೆ. ಈಗ ಇಲ್ಲಿ ಹೊಸ ಹೊಸ ಚಿಕ್ಕ ಚಿಕ್ಕ ದೇವಾಲಯಗಳು ಕಟ್ಟಲ್ಪಡುತ್ತಿವೆ ಮತ್ತು ಜೀರ್ಣೋದ್ಧಾರದ ಕೆಲಸ ತ್ವರಿತಗತಿಯಿಂದ ಮುಂದುವರೆಯುತ್ತಿದೆ. ದೇವಸ್ಥಾನದ ಹಿಂದುಗಡೆ ದೊಡ್ಡ ದೊಡ್ಡ ಬಂಡೆಗಳ ನಡುವೆ ನೀರಿನ ಸೆಲೆಯಿದೆ. ಒಮ್ಮೆ ಇಲ್ಲಿಯ ನೀರನ್ನೆಲ್ಲಾ ಖಾಲಿ ಮಾಡಿ, ಇದರ ಮೂಲ ಪತ್ತೆ ಹಚ್ಚಲು ಹೋದಾಗ, ಒಳಗೆ ಹೋದಷ್ಟೂ ಕಿರಿದಾದ ಸುರಂಗ ತೆರೆದುಕೊಳ್ಳುತ್ತಲೇ ಇತ್ತೆಂದೂ, ಮತ್ತೆ ಅದನ್ನು ಪರೀಕ್ಷಿಸುವ ಗೋಜಿಗೆ ಯಾರೂ ಹೋಗಿಲ್ಲವೆಂದೂ, ಶನಿದೇವರ ದೇವಸ್ಥಾನದ ಅರ್ಚಕರು ಹೇಳುತ್ತಾರೆ. ಇಲ್ಲಿ ಸುತ್ತಮುತ್ತಲೂ ಅತ್ಯಂತ ಬೃಹದಾಕಾರದ ಬಂಡೆಗಳಿದ್ದು, ನಾಗರೀಕತೆಯ ಗಾಳಿ ಅಷ್ಟಾಗಿ ಇನ್ನೂ ಬೀಸಿಲ್ಲದಿರುವುದರಿಂದ ಒಂದು ಅನೂಹ್ಯ ಅನುಭವ ಕೊಡತ್ತೆ. ಸುಮಾರು ೩ ಅಡಿ ಎತ್ತರ ಶನಿಮಹಾತ್ಮನ ವಿಗ್ರಹ ಸುಂದರವಾಗಿದೆ.

ದೇವಾಲಯದಿಂದ ಹೊರ ಬಂದು, ಬಾಗೇಪಲ್ಲಿಯಿಂದ ಅನಂತಪುರದ ಹೆದ್ದಾರಿ ಹಿಡಿದರೆ ಸುಮಾರು ೬ - ೮ ಕಿಲೋಮೀಟರ್ ನಲ್ಲಿ ಎಡಕ್ಕೆ ತಿರುಗಿದರೆ, ಸುಮಾರು ೧೪ ಕಿ.ಮೀ ನಷ್ಟು ದೂರದಲ್ಲಿ ಲೇಪಾಕ್ಷಿ. ಇದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಸೇರುತ್ತೆ ಮತ್ತು ಹಿಂದುಪುರಕ್ಕೂ ೧೪ ಕಿ.ಮೀ ದೂರದಲ್ಲಿ ಇದೆ. ಈ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಾಲಯ, ವಿಜಯನಗರ ಕಾಲದ್ದು ತನ್ನ ವಿಶೇಷ ಶಿಲ್ಪಕಲೆಗೆ ಮತ್ತು ಚಿತ್ರಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯದ ಕಲ್ಲುಗಳು ಶಿಲ್ಪಕಲೆಗೆ ತಕ್ಕುದಾದದ್ದಲ್ಲವಾದರೂ ಕೂಡ ಶಿಲ್ಪಿಗಳು ತಮ್ಮ ನೈಪುಣ್ಯವನ್ನು ಅತ್ಯಂತ ಸುಂದರವಾಗಿ ತೋರಿಸಿದ್ದಾರೆ. ಲೇಪಾಕ್ಷಿ ಎಂಬ ಹೆಸರಿಗೆ ಗ್ರಾಮಸ್ಥರು ಅನೇಕ ಕಥೆಗಳನ್ನು ಹೇಳುತ್ತಾರೆ ಅದರಲ್ಲಿ ಪ್ರಚಲಿತದಲ್ಲಿರುವುದು ರಾಮಾಯಣಕ್ಕೆ ಸಂಬಂಧ ಕಲ್ಪಿಸುತ್ತದೆ - ರಾವಣನು ಮಹಾಸಾದ್ವಿ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ ಈ ಕೂರ್ಮಗಿರಿ ಮೇಲೆ ಜಟಾಯು ಅಡ್ಡಿ ಮಾಡುತ್ತದೆ. ರಾವಣನು ಆ ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿದಾಗ ಈ ಸ್ಥಳದಲ್ಲಿ ಆ ಪಕ್ಷಿ ಬಿದ್ದಿರುತ್ತದೆ. ಸೀತಾನ್ವೇಷಣೆಗಾಗಿ ಶ್ರೀ ರಾಮಚಂದ್ರನು ಇಲ್ಲಿಗೆ ಬಂದಾಗ ಜಟಾಯುವನ್ನು ನೋಡಿ ನಡೆದ ವಿಷಯ ತಿಳಿದುಕೊಂಡು, ಜಟಾಯುವಿಗೆ ಮೋಕ್ಷ ಕೊಟ್ಟು ’ಲೇ-ಪಕ್ಷಿ’ ಎನ್ನುತ್ತಾನೆ. ಲೇಪಕ್ಷಿ ಎನ್ನುವ ಪದವೇ ಕಾಲಕ್ರಮೇಣವಾಗಿ "ಲೇಪಾಕ್ಷಿ" ಆಗಿದೆ ಎಂಬ ನಂಬಿಕೆ.

ಈ ವೀರಭದ್ರ ದೇವಾಲಯವು ಅಂದಿನ ಕಾಲದಲ್ಲಿ ೭ ಪ್ರಾಕಾರಗಳನ್ನೊಳಗೊಂಡ ಅತ್ಯಂತ ವಿಶಾಲವಾದ ದೇವಾಲಯವಾಗಿತ್ತು. ಈಗ ಸ್ಥಳೀಯರು ಆಕ್ರಮಿಸಿಕೊಂಡು ಅಷ್ಟು ಉಳಿದಿಲ್ಲವಾದರೂ, ಸುಮಾರು ೩ ಪ್ರಾಕಾರಗಳಷ್ಟು ಈಗಲೂ ಇದೆ. ದೇವಾಲಯದಿಂದ ಸ್ವಲ್ಪ ದೂರದಲ್ಲಿ ಇರುವ ಒಂದೇ ಬಂಡೆಯಲ್ಲಿ ಕೆತ್ತನೆ ಮಾಡಿರುವ ಬೃಹತ್ತ್ ನಂದಿ ಆ ಕಾಲಕ್ಕೆ ದೇವಸ್ಥಾನದ ಒಳಪ್ರಾಕಾರದಲ್ಲೇ ಇತ್ತೆಂಬ ಪ್ರತೀತಿ. ಈ ನಂದಿ ೧೫ ಅಡಿ ಎತ್ತರ, ೨೭ ಅಡಿ ಉದ್ದ, ನಾಗರಾಜನ ನೆರಳಿನಲ್ಲಿರುವ ಲಿಂಗ - ನಾಗಲಿಂಗಕ್ಕೆ ಮುಖಮಾಡಿ ನಿಂತಿರುವ ನಂದಿ, ವೀರಭದ್ರ ದೇವಸ್ಥಾನದ ಹಿಮ್ದುಗಡೆಗೆ ಇದೆ. ಅತ್ಯಂತ ಸುಮ್ದರವಾಗಿ ಕೆತ್ತಲ್ಪಟ್ಟಿದೆ. ಹಿಂದುಗಡೆಯ ಎಡಗಾಲು ಮಡಿಸಿ ಕುಳಿತಿರುವ ಭಂಗಿ ಸುಂದರವಾಗಿದೆ. ಮಡಿಸಿದ ಕಾಲಿನ ಪಾದ ಈ ಕಡೆಗೆ ಕಾಣತ್ತೆ. ತುಂಬಾ ಉದ್ದಕ್ಕೆ ದೊಡ್ಡದಾಗಿರುವ ಬಸವನ ಬಾಲ ಕಾಲುಗಳ ಕೆಳಗಿಂದ ಹೊಕ್ಕು ಸಂದಿಯಲ್ಲಿ ಮೇಲೆ ಬಂದಿರುವಂತೆ ಕೆತ್ತಿದ್ದಾರೆ. ಗೆಜ್ಜೆಗಳು, ಘಂಟೆಗಳು, ಬಸವನ ಬೆನ್ನಿನ ಮೇಲೆ ಬಟ್ಟೆ ಹಾಸಿರುವಂತೆಯೂ, ಆ ಬಟ್ಟೆಯ ಮೇಲೆ ನರಸಿಂಹನ ಮುಖ, ಇನ್ನೊಂದು ಕಡೆ ಲಿಂಗದ ಚಿತ್ರಣ ಅದ್ಭುತವಾಗಿದೆ. ಬಸವನನ್ನು ನೋಡಿ ತೆಲುಗು ಕವಿ ಅಡವಿ ಬಾಷಿ ರಾಜು ಅವರು "ಲೇಪಾಕ್ಷಿ ಬಸವಯ್ಯ ಲೇಚಿ ರಾವಯ್ಯ" ಎಂದು ನುಡಿದರಂತೆ.

ವೀರಭದ್ರ ದೇವಾಲಯವು ಕ್ರಿ.ಶ. ೧೫ - ೧೬ನೇ ಶತಮಾನದ ಮದ್ಯಕಾಲದಲ್ಲಿ ವಿಜಯನಗರದ ದೊರೆಗಳಾದ ಅಚ್ಚ್ಯುತರಾಯರ ಕಾಲದಲ್ಲಿ ಪೆನುಗೊಂಡ ಸಂಸ್ಥಾನದಲ್ಲಿ ಕೋಶಾಧಿಕಾರಿಯಾಗಿರುವ ವಿರೂಪಣ್ಣ ನಿರ್ಮಿಸಿದನೆಂದು ಪ್ರತೀತಿ. ಈ ದೇವಾಲಯದ ನಿರ್ಮಾಣದ ಮೊದಲು ಈ ಬೆಟ್ಟ ಆಮೆ ಆಕಾರದಲ್ಲಿದ್ದರಿಂದ ಕೂರ್ಮಗಿರಿ ಎಂಬ ಹೆಸರಿನಲ್ಲಿತ್ತು. ಎತ್ತರವಾದ ಗೋಡೆಗಳು, ಬಂಡೆಗಳ ಮೇಲೆ ಕನ್ನಡ ಭಾಷೆಯಲ್ಲಿ ಶಾಸನಗಳನ್ನು ಕೆತ್ತಿದ್ದಾರೆ. ಮೊದಲನೆಯ ಪ್ರಾಕಾರದಿಂದ ಎರಡನೆಯ ಪ್ರಾಕಾರದ ಪ್ರವೇಶದ ನಂತರ ನಾವು ಸುಮಾರು ೬ ಅಡಿ ಎತ್ತರದ ಗಣಪತಿಯ ಮೂರ್ತಿ ನೋಡಬಹುದು ಇದರ ಪಕ್ಕದಲ್ಲಿ ಬಂಡೆಯ ಮೇಲೆ ಜೇಡರ ಹುಳ, ಬೇಡರ ಕಣ್ಣಪ್ಪ, ಹಾವು, ಆನೆಗಳು ಶಿವಲಿಂಗಗಳಿಗೆ ಪೂಜೆ ಮಾಡುತ್ತಿರುವಂತೆ ಕೆತ್ತಿದ್ದಾರೆ. ಪ್ರಾಕಾರದಲ್ಲಿ ಬೃಹತ್ತ್ ನಂದಿಗೆ ಮುಖ ಮಾಡಿ ನಿಂತಿರುವ ಏಳು ತಲೆಗಳ ನಾಗಲಿಂಗವು ಯಾತ್ರಿಕರನ್ನು ಆಕರ್ಷಿಸುತ್ತದೆ. ಪ್ರಾಕಾರದಲ್ಲಿ ನಡೆಯುತ್ತಾ ಮುಂದೆ ಹೋದರೆ ನಮಗೆ ಅಪೂರ್ಣವಾದ ಪಾರ್ವತಿ-ಪರಮೇಶ್ವರರ ಕಲ್ಯಾಣ ಮಂಟಪ ಕಾಣುತ್ತದೆ. ವಿವಾಹಕ್ಕೆ ಅತಿಥಿಗಳಾಗಿ ಮೀನಾದೇವಿ, ಹಿಮವಂತ, ದೇವೇಂದ್ರ, ಅಗ್ನಿ, ವಿಶ್ವಾಮಿತ್ರ, ವರುಣ, ಬೃಹಸ್ಪತಿ, ಬ್ರಹ್ಮ, ವಿಷ್ಣು, ವಾಯು, ಕುಬೇರ, ವಶಿಷ್ಠ, ಈಶ್ವರ ತಮ್ಮ ತಮ್ಮ ವಾಹನಗಳ ಮೇಲೆ ಬಂದಂತೆ ಸ್ಥಂಭಗಳ ಮೇಲೆ ಕೆತ್ತಿದ್ದಾರೆ. ಪಾರ್ವತಿ ತಂದೆ ತಾಯಿಗಳು ಶಿವನ ಪಾದಗಳನ್ನು ತೊಳೆದು ಕನ್ಯಾದಾನ ಮಾಡಲು ನೀರು ಹಿಡಿದು ನಿಂತಿರುವಂತೆಯೂ ಇದೆ. ವಧೂವರರಿಗೆ ಪುರೊಹಿತರು ಆಶೀರ್ವದಿಸಿದಂತೆ ತೋರಿಸಿದ ಶಿಲ್ಪವು ಒಂದ ಕಂಭದ ಮೇಲಿದೆ. ಶಿವನು ಐದು ತಲೆಗಳು, ಹತ್ತು ಕೈಗಳಿಂದ ಸ್ವಾರದಲ್ಲಿ ನಿಂತು ಅತಿಥಿಗಳಿಗೆ ಸ್ವಾಗತ ಕೋರುತ್ತಿರುವಂತಿದೆ. ಈ ಮಂಟಪದಲ್ಲಿ ಒಂದು ಕಡೆ ಲತಾಮಂಟಪವನ್ನು ನಿರ್ಮಿಸಿದ್ದಾರೆ ಮತ್ತು ಇವುಗಳಲ್ಲಿ ಅನೇಕ ರೀತಿಯಾಗಿ ಸೀರೆಗಳ ಮಾದರಿಗಳನ್ನು ಕೆತ್ತಿದ್ದಾರೆ.

ನಾಟ್ಯ ಮಂಟಪವು ೭೦ ಸ್ತಂಭಗಳಿಂದ ಕೂಡಿದ್ದು, ಮಧ್ಯ ಭಾಗದಲ್ಲಿ ೧೨ ಕಂಭಗಳ ಮೇಲೆ ರಂಭೆ, ಊರ್ವಶಿ, ಮತ್ತು ವಿವಿಧ ಸಂಗೀತ ವಾದ್ಯಗಳನ್ನು ಹೊತ್ತು ನಿಂತಿರುವ ಅನೇಕ ದೇವತೆಗಳನ್ನು ಕೆತ್ತಿದ್ದಾರೆ. ಮಂಟಪದ ಮಧ್ಯದ ಮೇಲ್ಭಾಗದಲ್ಲಿ ೧೨ ಕಲ್ಲುಗಳಲ್ಲಿ ನೂರು ಪತ್ರದ ಕಮಲವನ್ನು - ’ಶತಪತ್ರ ಕಮಲ’ ಇದೆ. ಈಶಾನ್ಯ ಮೂಲೆಯಲ್ಲಿ ನೆಲವನ್ನು ತಾಕದೇ ಸುಮಾರು ೮ ಅಡಿ ಸ್ತಂಭವು ಮೇಲ್ಭಾಗದಿಂದ ನಿಂತಿರುತ್ತದೆ. ಇದನ್ನು ’ಅಂತರಿಕ್ಷ ಸ್ತಂಭ’ ಎನ್ನುತ್ತಾರೆ. ಬ್ರಿಟಿಷರ ಆಳ್ವಿಕೆಯಲ್ಲಿ ದರ್ಶನ ಮಾಡಲು ಬಂದ ಒಬ್ಬ ಆಂಗ್ರ ಇಂಜಿನಿಯರ್ ಹ್ಯಾಮಿಲ್ಟನ್, ಪರೀಕ್ಷೆ ಮಾಡಲು ಇದನ್ನು ಪಕ್ಕಕ್ಕೆ ತಳ್ಳಿಸಿರುವನೆಂದೂ, ಆದ್ದರಿಂದ ಈಗ ಸ್ತಂಭವು ಭೂಮಿಯಿಂದ ಬರೀ ಅರ್ಧ ಅಂಗುಲ ಮೇಲೆ ಇದೆಯಂತೆ. ಇದಲ್ಲದೆ ಇನ್ನೂ ಈಶ್ವರನ ಭಿಕ್ಷಾಟನ ಮೂರ್ತಿ, ಪದ್ಮಿನಿ ಜಾತಿ ಸ್ತ್ರೀ ಮೂರ್ತಿ, ಬೃಂಗೀಶ್ವರನ ಮೂರ್ತಿ, ನಾಟ್ಯ ಗಣಪತಿಯ ಮೂರ್ತಿಗಳೆಲ್ಲವೂ ಅತಿ ಸುಂದರವಾಗಿವೆ. ಇವೆಲ್ಲವೂ ಅಲ್ಲದೆ ದುರ್ಗಾದೇವಿಯ (ಕನಕ ದುರ್ಗೆ) ವಿಗ್ರಹ ಕೂಡ ಅತಿ ಸುಂದರವಾಗಿದೆ. ಒಂದು ಸ್ತಂಭದಲ್ಲಿ ಕೆತ್ತುತ್ತಿರುವಾಗ, ಭಕ್ತಾದಿಗಳ ಮೇಲೆ ಆವಾಹನೆಯಾಗಿ, ದೇವಿ ತಾನು ಈ ಸ್ತಂಭದಲ್ಲೇ ನೆಲೆಸುವೆನೆಂದೂ, ಪೂಜೆಗಳು ನಡೆಯಬೇಕೆಂದೂ ಆದೇಶಿಸಿದಳಂತೆ. ಈ ಆಲಯವನ್ನು ದುರ್ಗಾದೇವಿ ಆಲಯವೆಂದೂ ಕರೆಯುತ್ತಾರೆ. ದೇವಿಯ ಪೂಜೆ ಎಲ್ಲರಿಗೂ ಕಾಣಬೇಕೆಂಬ ಉದ್ದೇಶದಿಂದ ಈಗ ಎದುರುಗಡೆ ಗೋಡೆಗೆ ದೊಡ್ಡ ಕನ್ನಡಿ ಅಳವಡಿಸಿದ್ದಾರೆ.

ಗರ್ಭಗುಡಿಯ ಒಳಗೆ ಒಂದು ಸ್ತಂಭದಲ್ಲಿ ವಾಸ್ತುಪುರುಷ, ಮತ್ತೊಂದು ಕಡೆ ಪದ್ಮಿನಿ ಜಾತಿ ಸ್ತ್ರೀ, ಆಗ್ನೇಯ ದಿಕ್ಕಿನ ಸ್ತಂಭದಲ್ಲಿ ಗಜಾಸುರ ಸಂಹಾರ ಶಿಲ್ಪ, ನೈರುತ್ಯ ದಿಕ್ಕಿನಲ್ಲಿ ನಾಟ್ಯ ಗಣಪತಿ, ವಾಯುವ್ಯ ಮೂಲೆಯಲ್ಲಿ ದುರ್ಗಾದೇವಿ ಮೂರ್ತಿ ಇವೆ. ಹರಿಹರರಿಗೆ ಭೇದವಿಲ್ಲವೆಂದು ನಿರೂಪಿಸಲು ಶಿವನ ಮತ್ತು ವಿಷ್ಣುವಿನ ವಿಗ್ರಹಗಳನ್ನು ಎದುರೆದುರಾಗಿ ಪ್ರತಿಷ್ಠೆ ಮಾಡಿದ್ದಾರೆ. ಇದು ಒಂದು ವಿಶೇಷವೇ ಆಗಿದೆ. ಮೂಲ ದೇವರಾದ ವೀರಭದ್ರಸ್ವಾಮಿ, ಬೆಳ್ಳಿಯ ಕಣ್ಣುಗಳು, ಮೀಸೆ ಮತ್ತು ವಿಭೂತಿಯ ಪಟ್ಟೆಗಳನ್ನು ಧರಿಸಿ, ವಿಶೇಷವಾಗಿ ಕಾಣುತ್ತಾನೆ. ಇಲ್ಲಿರುವ ಮೂರ್ತಿಗಳ ವರ್ಣ ಚಿತ್ರಗಳನ್ನು ಗರ್ಭಗುಡಿಯ ಪ್ರಾಕಾರಗಳನ್ನು ಛಾವಡಿಯಲ್ಲೂ ಕಾಣಬಹುದು.

ಗರ್ಭಗುಡಿಯ ಮೇಲ್ಭಾಗದಲ್ಲಿ ಸುಮಾರು ೨೪ ಅಡಿ ಉದ್ದ, ೧೪ ಅಡಿ ಅಗಲದ ವೀರಭದ್ರಸ್ವಾಮಿ ವರ್ಣ ಚಿತ್ರವನ್ನು ಚಿತ್ರಿಸಿದ್ದಾರೆ. ಇದು ಭಾರತದಲ್ಲೇ ದೊಡ್ಡ ಚಿತ್ರವೆಂದು ಹೆಸರುವಾಸಿಯಾಗಿದೆ. ಶಿವನ ಆಲಯದ ಮೇಲ್ಭಾಗದಲ್ಲಿ ಸ್ವಯಂ ಅಭಿಷೇಕ ಮಾಡಿಕೊಳ್ಳುತ್ತಿರುವ ಈಶ್ವರನನ್ನೂ, ವಿಷ್ಣುವಿನ ಆಲಯದ ಮೇಲ್ಭಾಗದಲ್ಲಿ ದಶಾವತಾರ ಚಿತ್ರಗಳನ್ನೂ ಕೂಡ ಕಾಣಬಹುದು.

ಒಟ್ಟಿನಲ್ಲಿ ಒಂದು ದಿನದ ಪ್ರವಾಸಕ್ಕೆ ತಕ್ಕ ಜಾಗಗಳು. ಆದರೆ ಲೇಪಾಕ್ಷಿಯಲ್ಲಿ ನಾವು ಗೈಡ್ ಇಲ್ಲದೇ ಹೋದರೆ, ಏನೂ ಅರ್ಥವಾಗದು. ಹಾಗೂ ಇಲ್ಲಿ ಊಟದ ವ್ಯವಸ್ಥೆ ಏನೂ ಇಲ್ಲದಿರುವುದರಿಂದ, ನಾವು ಜೊತೆಗೇ ತೆಗೆದುಕೊಂಡು ಹೋಗಬೇಕು, ಇಲ್ಲದಿದ್ದರೆ ಹಿಂದೂಪುರದಲ್ಲಿ ಎಲ್ಲವು ಸಿಗುತ್ತದೆ. ಲೇಪಾಕ್ಷಿ ನೋಡಲು ನಮಗೆ ಅರ್ಧ ದಿನಕ್ಕಿಂತಲೂ ಹೆಚ್ಚು ಸಮಯ ಖಂಡಿತಾ ಬೇಕಾಗುತ್ತದೆ.

ವಿಷಯ ಸಹಾಯ : ವಿದ್ವಾನ್ ಅವ್ವಾರಿ ನಾರಾಯಣ ಅವರ ಲೇಪಾಕ್ಷಿ ದೇವಾಲಯ ಚರಿತ್ರೆ ಪುಸ್ತಕ
ಚಿತ್ರಗಳು : ಕಾರ್ತೀಕ್ (ನನ್ನ ಮಗ)ನ ಸಂಚಾರಿ ದೂರವಾಣಿಯಿಂದ ತೆಗೆದಿದ್ದು.

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.