Skip to main content

ಚಾರ್ ಧಾಮ್ ಪ್ರವಾಸ- ಬದರೀನಾಥ

ಇಂದ shamala
ಬರೆದಿದ್ದುJuly 1, 2009
noಅನಿಸಿಕೆ

http://www.vismayanagari.com/node/4642
ನಾವು ಬದರೀನಾಥನ ದೇವಸ್ಥಾನದ ಹೊರಗೆ ನಿಂತು ಕಾಯುತ್ತಿದ್ದೆವು. ನಮ್ಮ ಇನೋವಾದ ಸಾರಥಿ ಪೂರನ್ ಸಿಂಗ್, ತನ್ನ ಸ್ನೇಹಿತರಿಗೆ ದೂರವಾಣಿಯ ಮುಖಾಂತರ ಸಂಪರ್ಕಿಸಿದ್ದರು. ಅವರು ಬಂದು ನಮ್ಮನ್ನು ಒಳಗೆ ಕರೆದೊಯ್ದು ವಿಶೇಷ ದರ್ಶನ ಮಾಡಿಸುವ ಮಾತಾಗಿತ್ತು. ಆದರೆ ಅರ್ಧ ಘಂಟೆ ಕಾದರೂ ಅವರು ಬರದಿದ್ದಾಗ, ನನ್ನವರು, ಅಲ್ಲೇ ವಿಚಾರಿಸಿದಾಗ ನಮಗೆ ತಿಳಿದುಬಂದ ವಿಷಯವೆಂದರೆ, ೧೦೦೦ ರೂಗಳ ಚೀಟಿ ಖರೀದಿಸಿದರೆ, ಸರತಿ ಸಾಲಿಲ್ಲದೆ, ಇಬ್ಬರಿಗೆ ನೇರ ದರ್ಶನವಾಗುತ್ತದೆಂದು. ನಾವು ಐದು ಜನರಿದ್ದೆವು ಮತ್ತು ನನ್ನ ಅತ್ತೆಯವರು, ನಡೆಯುವ ಅಥವಾ ನಿಲ್ಲುವ ಸ್ಥಿತಿಯಲ್ಲಿ ಇರಲಿಲ್ಲ, ಆದ್ದರಿಂದ ನಾವು ೩ ವಿಶೇಷ ಚೀಟಿಗಳನ್ನು ಖರೀದಿಸಿದೆವು. ದೇವಸ್ಥಾನದ ಅಧಿಕಾರಿಗಳು ನಮ್ಮನ್ನು, ೩ನೇ ಸಂಖ್ಯೆಯ ಬಾಗಿಲಿನಿಂದ ಒಳಗೆ ಹೋಗುವಂತೆ ಸೂಚಿಸಿದರು, ಆದರೆ ಅದೆಲ್ಲಿದೆಯೆಂದು, ಯಾರೂ ಸರಿಯಾಗಿ ಏನೂ ಹೇಳಲಿಲ್ಲ. ಅಷ್ಟರಲ್ಲಿ ನಮ್ಮ ಪೂರನ್ ನ ಸ್ನೇಹಿತರು ಬಂದರು ಮತ್ತು ನಮ್ಮನ್ನು ಅವರು ಅದೇ ೩ನೇ ಸಂಖ್ಯೆಯ ದ್ವಾರದಿಂದ ಒಳಗೆ ಕರೆದೊಯ್ದರು.

ಒಳಗೆ ಹೋಗುವ ಮುಂಚೆ ನಮ್ಮ ತಪಾಸಣೆಯನ್ನೂ ಮಾಡುತ್ತಾರೆ. ನಾವು ಅಲ್ಲೇ ಒಂದು ಅಂಗಡಿಯಲ್ಲಿ, ಪೂಜೆಯ ಸಾಮಾನುಗಳನ್ನೂ, ನೈವೇದ್ಯಕ್ಕಾಗಿ, ಸಿಹಿಯನ್ನೂ ಕೊಂಡು ಒಳಗೆ ಹೋದೆವು. ಚೀಟಿ ಇದ್ದಿದ್ದರಿಂದ ನೇರವಾಗೇ ನಮ್ಮನ್ನು ದೇವಸ್ಥಾನದ ಒಳಗೆ ಬಿಟ್ಟರು ಮತ್ತು ಗರ್ಭಗುಡಿಯ ಹೊಸ್ತಿಲ ಹತ್ತಿರ ಕೂಡಿಸಿದರು. ಅಲ್ಲಿಯೇ ಕುಳಿತಿದ್ದ ಪ್ರಧಾನ ಅರ್ಚಕರು ನಮ್ಮ ಚೀಟಿಗಳನ್ನು ತೆಗೆದುಕೊಂಡು ಧ್ವನಿವರ್ಧಕದಲ್ಲಿ ನಮ್ಮ ಹೆಸರು, ಗೋತ್ರ, ಎಲ್ಲಿಂದ ಬಂದಿದ್ದೇವೆಂಬ ಪ್ರವರವನ್ನೆಲ್ಲಾ ಹೇಳಿ, ನಮಗೆಲ್ಲಾ "ಶಾಂತಾಕಾರಂ ಭುಜಗ ಶಯನಂ ಪದ್ಮನಾಭಂ ಸುರೇಶಂ..." ಎಂದು ಹೇಳಿಕೊಟ್ಟರು. ನಮ್ಮ ನಿವೇದನೆಯನ್ನು ಭಗವಂತನಾದ ಬದರೀನಾರಾಯಣನಲ್ಲಿ ಮಂಡಿಸುವ ರೀತಿಯನ್ನೂ ಹೇಳಿದರು. ನಾವೆಲ್ಲಾ ಕಣ್ಣುಮುಚ್ಚಿ, ಕೈ ಮುಗಿದು, ನಮಗೆ ಬೇಕಾದದ್ದೆಲ್ಲವನ್ನೂ ಮನಸ್ಸಿನಲ್ಲೇ ಪ್ರಾರ್ಥಿಸಿಕೊಂಡೆವು. ಭಗವಂತ ಬದರೀನಾರಾಯಣನಿಗೆ ತಲೆಯ ಮೇಲಿರುವ ಛತ್ರಿಯ ತರಹದ್ದು ಬಂಗಾರದ ಹೊದಿಕೆಯಿಂದ ಕೂಡಿದೆ ಮತ್ತು ಇದನ್ನು ರಾಣಿ ಅಹಿಲ್ಯಾದೇವಿ ಮಾಡಿಸಿಕೊಟ್ಟರೆಂದು ಹೇಳುತ್ತಾರೆ. ಈ ದೇವಸ್ಥಾನದ ಅಕ್ಕ ಪಕ್ಕದಲ್ಲಿ ನರ ಮತ್ತು ನಾರಾಯಣ ಪರ್ವತಗಳೂ ಮತ್ತು ಹಿಂದುಗಡೆಗೆ ನೀಲಕಂಠ ಪರ್ವತವೂ ಇವೆ. ಮಂಗಳಾರತಿ ಮಾಡುತ್ತಾ ಒಳಗೆ ಗರ್ಭಗುಡಿಯಲ್ಲಿದ್ದ ಅರ್ಚಕರು, ಬದರೀನಾಥನ ಬಲಕ್ಕೆ ಇರುವ ನರ ನಾರಾಯಣರ ವಿಗ್ರಹಗಳು, ಎಡಕ್ಕೆ ಇರುವ ಕುಬೇರ ಮತ್ತು ನಾರದರ ವಿಗ್ರಹಗಳನ್ನೂ, ಜೊತೆಗೆ ಇರುವ ಉದ್ಧವ, ಗರುಡ ಎಲ್ಲರನ್ನೂ ಪರಿಚಯಿಸಿದರು.

ಇಲ್ಲಿ ವಿಶೇಷ ಪೂಜೆಗಳು ಅಂದರೆ ಅಭಿಷೇಕ, ಮಹಾಭಿಷೇಕ, ಶ್ರೀಮದ್ ಭಾಗವತ ಮತ್ತು ಗೀತೆಯ ಪಠನ. ಈ ದೇವಸ್ಥಾನದಲ್ಲಿ, ಮುಖ್ಯ ಪೂಜಾರಿಗಳು ಕೇರಳದ ನಂಬೂದರಿಯರು. ಪೂಜಾ ವಿಧಾನಗಳು, ನಿತ್ಯ ಪೂಜೆಗಳ ವಿಧಿ ಎಲ್ಲವೂ ಶ್ರೀ ಆದಿ ಶಂಕರಾಚಾರ್ಯರು ಹಾಕಿಕೊಟ್ಟ ಪದ್ಧತಿಯಂತೆ. ಇಲ್ಲಿ ದೇವರ ಅಭಿಷೇಕ, ಅಲಂಕಾರ ಎಲ್ಲವೂ ಭಕ್ತರ ಎದುರಿನಲ್ಲೇ ಮಾಡುತ್ತಾರೆ, ಪರದೆ ಹಾಕುವ ಪರಿಪಾಟ ಇಲ್ಲ. ಬೆಳಿಗ್ಗೆ ಬೇಗ ೪.೩೦ ಗೆಲ್ಲಾ ಪೂಜಾ ವಿಧಿಗಳು ಆರಂಭವಾಗುತ್ತದೆ. ಹಿಂದಿನ ದಿನದ ಚಂದನವನ್ನು ಒರೆಸಿ, ಭಕ್ತರಿಗೆ, ನಿರ್ವಾಣ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ, ಕಳಸ ಪೂಜೆಯ ನಂತರ ಅಭಿಷೇಕ, ಭಕ್ತಾದಿಗಳ ಎದುರಿಗೇ ಮಾಡುತ್ತಾರೆ, ಆರತಿಯ ನಂತರ ೧೨ ಘಂಟೆಗೆ ದೇವಸ್ಥಾನದ ಬಾಗಿಲು ಮುಚ್ಚುತ್ತಾರೆ. ಮಧ್ಯಾಹ್ನ ೪ ಘಂಟೆಗೆ ಮತ್ತೆ ಬಾಗಿಲು ತೆಗೆಯುತ್ತಾರೆ. ಸಾಯಂಕಾಲದ ಪೂಜೆಯಲ್ಲಿ ಅಷ್ಟೋತ್ತರ ಮತ್ತು ಸಹಸ್ರನಾಮ ಸೇವೆ ಆಗುತ್ತದೆ. ೭.೩೦ ಘಂಟೆಗೆ ಮತ್ತೆ ಮಂಗಳಆರತಿ ಅಥವಾ ಶಯನ ಆರತಿ - ಗೀತ ಗೋವಿಂದ ನಡೆಯುತ್ತದೆ. ಇದಾದ ನಂತರ ಮುಖ್ಯ ಅರ್ಚಕರು, ಭಗವಂತನ ಮೈ ಮೇಲಿರುವ ಹೂವು, ಒಡವೆಗಳನ್ನು, ಭಕ್ತಾದಿಗಳ ಎದುರಿಗೇ ತೆಗೆಯುತ್ತಾರೆ. ರಾತ್ರಿಯಲ್ಲಿ ಬದರೀನಾರಾಯಣ ಬರಿಯ ಚಂದನ ಲೇಪಿತನಾಗಿರುತ್ತಾರೆ.

ಇಲ್ಲಿ ಬದರೀನಾಥನೆಂದರೆ, ಭಗವಂತನ ಮೂರ್ತಿ ಎಂಬ ಆಕಾರ ಏನೂ ಇಲ್ಲ. ಸ್ಥಾಪಿಸಲ್ಪಟ್ಟಿರುವ ಸಾಲಿಗ್ರಾಮ ಶಿಲೆಯನ್ನು, ಶ್ರೀ ಶಂಕರಾಚಾರ್ಯರು, ತಮ್ಮ ಯೋಗಶಕ್ತಿಯಿಂದ ತೆಗೆದರಂತೆ. ಆದ್ದರಿಂದ ಇಲ್ಲಿ ಮೂರ್ತಿ ಪೂಜೆಯಿಲ್ಲ. ಆ ಶಿಲೆಗೇ ಪೂಜೆ, ಪೂರ್ತಿ ಚಂದನ ಸವರಿರುತ್ತಾರೆ. ಭಗವಂತನಿಗೆ ವಸ್ತ್ರ ಉಡಿಸುವುದಿಲ್ಲ. ಭಕ್ತರು ಕೊಡುವ ವಸ್ತ್ರಗಳನ್ನು, ಸುಮ್ಮನೆ ದೇವರಿಗೆ ಅರ್ಪಿಸಿ, ಅಲ್ಲೇ ಹೊರಗಡೆ ದೇವಸ್ಥಾನದ ಪ್ರಾಕಾರದಲ್ಲಿ, ಅದನ್ನು ಮಾರಾಟ ಮಾಡುತ್ತಾರೆ ಮತ್ತು ಬರುವ ಹಣ ದೇವಸ್ಥಾನಕ್ಕಾಗಿ ಉಪಯೋಗಿಸಲ್ಪಡುತ್ತದೆ. ಬದರೀನಾರಾಯಣನ ಶಿಲೆಯ ಪಕ್ಕದಲ್ಲಿ, ಕುಬೇರನ ಮೂರ್ತಿ ದೊಡ್ಡದಾಗಿ ಸುಂದರವಾಗಿದೆ. ಇಲ್ಲಿಯ ವಿಶೇಷವೆಂದರೆ, ತುಳಸಿ ಮತ್ತು ಹೂವು. ಬಣ್ಣ ಬಣ್ಣದ ಹೂವುಗಳ ಜೊತೆಗೆ, ದಟ್ಟ ಹಸಿರು ಇರುವ ತುಳಸಿಯ ಮಾಲೆಗಳನ್ನು ಕಲಾತ್ಮಕವಾಗಿ ಹಾಕಿ ಅಲಂಕರಿಸಿರುತ್ತಾರೆ. ನೋಡಲು ತುಂಬಾ ಚೆನ್ನಾಗಿರುತ್ತದೆ. ಯಾತ್ರಾರ್ಥಿಗಳು ತುಂಬಾ ಜನರಿದ್ದರೂ ಕೂಡ, ನಾವು ವಿಶೇಷ ಚೀಟಿ ಪಡೆದುಕೊಂಡಿದ್ದರಿಂದ, ನಮಗೆ ಭಗವಂತನ ಮುಂದೆ ನಿಧಾನವಾಗಿ ಕುಳಿತು, ಕಣ್ತುಂಬ ನೋಡುವ ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಎದ್ದು ಹಿಂದೆ ಬಂದ ಮೇಲೆ ಕೂಡ, ನಾನು ನಿಂತು, ಕೈ ಮುಗಿದು ಪ್ರಾರ್ಥಿಸುತ್ತಿದ್ದರೆ, ಅಲ್ಲಿಯ ರಕ್ಷಣಾಪಡೆಯವರು, ನನ್ನನ್ನೇನೂ ಹೋಗಿ ಹೋಗಿ ಎಂದು ತಳ್ಳಲಿಲ್ಲ. ಬದಲಿಗೆ ದೂರದೂರದಿಂದ ದರ್ಶನಕ್ಕಾಗಿ ಬಂದಿರುತ್ತೀರಿ, ಪರವಾಗಿಲ್ಲ, ನಿಂತು ನೋಡಿ, ಆದರೆ ಸ್ವಲ್ಪ ಪಕ್ಕಕ್ಕೆ ಬನ್ನಿ, ಬೇರೆಯವರಿಗೆ ತೊಂದರೆ ಆಗದಿದ್ದರೆ ಸರಿ ಎಂದರು. ನನಗೆ ಬಹಳ ಸಂತೋಷ ಹಾಗೂ ಆಶ್ಚರ್ಯವೂ ಆಯಿತು. ನಾನವರಿಗೆ ಧನ್ಯವಾದಗಳನ್ನು ಅರ್ಪಿಸಿ ಹೊರಗೆ ಬರುವಷ್ಟರಲ್ಲಾಗಲೇ, ಬಾಕಿಯವರೆಲ್ಲಾ ಎದುರಿಗೇ ಇರುವ ಮಹಾಲಕ್ಷ್ಮಿಯ ಮಂದಿರದಲ್ಲಿದ್ದರು. ಇಲ್ಲಿಯೂ, ದೇವಿಯ ಮೂರ್ತಿ ಇಲ್ಲ, ಬರಿಯ ಶಿಲೆಯಷ್ಟೇ. ಚಂದನದಿಂದ ಆವೃತವಾಗಿರುವ ದೇವಿಯನ್ನು, ವಸ್ತ್ರಾಭರಣಗಳಿಂದ ಅಲಂಕರಿಸಿರುತ್ತಾರೆ. ದೇವಿಗಾಗಿ ಅರ್ಪಿಸಿದ, ಬಳೆ, ಅರಿಸಿನ ಕುಂಕುಮ ಸಾಮಗ್ರಿಗಳನ್ನು, ೧೦ರೂ ಕೊಟ್ಟು ಕೇಳಿದರೆ ಕೊಡುತ್ತಾರೆ.

ದೇವಸ್ಥಾನದ ಪ್ರಾಕಾರದಲ್ಲಿ, ಬಲಗಡೆಗೆ ದೇವಿ ಮಹಾಲಕ್ಷ್ಮಿಯ ಗುಡಿ, ಘಂಟಾಕರ, ಆಂಜನೇಯ ಮತ್ತು ವಿಘ್ನೇಶ್ವರನ ವಿಗ್ರಹಗಳಿವೆ. ಪ್ರದಕ್ಷಿಣೆ ಬರುವಾಗ ನಮಗೆ ದೊಡ್ಡದಾದ, ಪದ್ಮಾಸನದಲ್ಲಿ, ಯೋಗಮುದ್ರೆ ಹಾಕಿ ಕುಳಿತಿರುವ, ಬದರೀನಾರಾಯಣನ ವಿಗ್ರಹ ಕಾಣುತ್ತದೆ. ಪ್ರಾಕಾರದಲ್ಲಿದ್ದರೂ ಕೂಡ, ಈ ವಿಗ್ರಹಕ್ಕೆ, ವಿಶೇಷವಾಗಿ ಯಾವ ಪೂಜೆಯನ್ನೂ ಮಾಡಿರುವುದಿಲ್ಲ. ಛಳಿಗಾಲದಲ್ಲಿ, ನವೆಂಬರ್ ತಿಂಗಳಿನಲ್ಲಿ, ದೇವಸ್ಥಾನದ ಬಾಗಿಲು ಮುಚ್ಚಿದ್ದಾಗ, ಈ ವಿಗ್ರಹವನ್ನು, ಬಾಜಾ ಭಜಂತ್ರಿಗಳ ಸಮೇತ ಜೋಶಿ ಮಠಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಾರೆ ಮತ್ತು ಮುಂದಿನ ವರ್ಷ ದೇವಸ್ಥಾನ ತೆರೆದಾಗ ಮತ್ತೆ ಅದೇ ರೀತಿ ಮೆರವಣಿಗೆಯಲ್ಲಿ, ವಾಪಸ್ಸು ತೆಗೆದುಕೊಂಡು ಬಂದು ಇಲ್ಲಿಟ್ಟಿರುತ್ತಾರೆ. ಮುಂದಿನ ವರ್ಷ ಜ್ಯೋತಿಷಿಗಳೂ, ಪಂಡಿತರೂ ಕಲೆತು, ಬಸಂತ ಪಂಚಮಿಯ ದಿನ ಒಂದು ಒಳ್ಳೆಯ ಮುಹೂರ್ತ, ದಿನ ನೋಡಿ, ಏಪ್ರಿಲ್ ತಿಂಗಳ ಕೊನೆಯ ವಾರ ಅಥವಾ ಮೇ ತಿಂಗಳ ಮೊದಲ ವಾರದಲ್ಲಿ, ಬದರೀನಾರಾಯಣನ ದೇವಸ್ಥಾನದ ಬಾಗಿಲು ತೆರೆಯುತ್ತಾರೆ. ಈ ಬಸಂತ ಪಂಚಮಿಯ ದಿನ ನರೇಂದ್ರ ನಗರದಲ್ಲಿ ತಯಾರಿಸಿದ ಎಳ್ಳೆಣ್ಣೆಯನ್ನು ಇಡೀ ವರ್ಷ ಭಗವಾನ್ ವಿಷ್ಣುವಿನ ಮೂರ್ತಿಗೆ ಲೇಪಿಸಲು, ದೇವಸ್ಥಾನದ ಆಡಳಿತವರ್ಗದವರಿಗೆ, ಸಾಂಪ್ರದಾಯಿಕವಾಗಿ, ಕೊಡಲ್ಪಡುತ್ತದೆ. ಛಳಿಗಾಲದಲ್ಲಿ, ಈ ಯೋಗಮುದ್ರೆಯ ಬದರೀನಾಥನಿಗೆ, ಜೋಶಿ ಮಠದಲ್ಲಿ ಪೂಜೆ ನಡೆಯುತ್ತದೆ. ದೇವಸ್ಥಾನದ ಬಾಗಿಲು ಪುನ್ಹ ತೆಗೆದಾಗ ಮೊದಲನೆಯದಾಗಿ ನಡೆಯುವುದೇ "ಅಖಂಡ ಜ್ಯೋತಿ"ಯ ದರ್ಶನ. ಈ ದೀಪವು ಪುರಾತನವಾದ, ದೀಪದ ಕಂಭವು. ಛಳಿಗಾಲದಲ್ಲಿ, ಬಾಗಿಲು ಹಾಕುವ ಮೊದಲು ಹಚ್ಚಿ ಇಟ್ಟ ಈ ಅಖಂಡ ಜ್ಯೋತಿ, ಮತ್ತೆ ಬಾಗಿಲು ತೆಗೆದಾಗಲೂ ಹಾಗೆಯೇ ಉರಿಯುತ್ತಿರುತ್ತದೆಂಬ ಪ್ರತೀತಿ. ಈ ಜ್ಯೋತಿಯನ್ನು, ಇಡೀ ವರ್ಷ ಬೆಳಗಿಸುತ್ತಾರೆ. ದೇವಸ್ಥಾನದ ಬಾಗುಲು ಮುಚ್ಚುವ ದಿನವನ್ನು, ವಿಜಯ ದಶಮಿಯ ದಿನ, ದೇವಸ್ಥಾನದ ಆಡಳಿತ ವರ್ಗದವರು ಮತ್ತು ಧರ್ಮಾಧಿಕಾರಿಗಳು, ನಿರ್ಣಯಿಸುತ್ತಾರೆ.
ಛಳಿಗಾಲದಲ್ಲಿ, ಬಾಗಿಲು ಮುಚ್ಚುವ ಮೊದಲು, ’ಮೋಲ್ಪ’ ಎಂಬ ವಂಶಕ್ಕೆ ಸೇರಿದ, ’ಮಾನಾ’ ಹಳ್ಳಿಯ ಅವಿವಾಹಿತ ಯುವತಿಯರು ಹೆಣೆದ ಉಣ್ಣೆಯ ಬಟ್ಟೆಯನ್ನು, ಭಗವಂತನಿಗೆ, ಮಂತ್ರೋಚ್ಛಾರಣೆಗಳ ನಡುವೆ ಹೊದ್ದಿಸಿ, ಮಲಗಿಸಿಬಿಡುತ್ತಾರೆ. ಇದರಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೂ, ಅನ್ನ ದಾನ ಮಾಡುತ್ತಾರೆ. ಮತ್ತೆ ದೇವಸ್ಥಾನದ ಬಾಗಿಲು ತೆಗೆದಾಗ, ಆ ಉಣ್ಣೆಯ ಹೊದ್ದಿಕೆಯನ್ನು ದಾರ ದಾರಗಳಾಗಿ ಬಿಡಿಸಿ, ಅದನ್ನು ಭಗವಾನ್ ವಿಷ್ಣುವಿನ ’ಮಹಾಪ್ರಸಾದ’ವೆಂದು, ಭಕ್ತರಿಗೆ ಹಂಚಿ ಬಿಡುತ್ತಾರೆ.

ಜೋಶಿಮಠಕ್ಕೆ ಅರವತ್ತು ಗಾವುದ ದೂರದಲ್ಲಿ ಧವಳಾನದಿ ತೀರದಲ್ಲಿ ಭವಿಷ್ಯ ಬದರೀಕ್ಷೇತ್ರವಿರುವುದಂತೆ. ಪೂರ್ವದಲ್ಲಿ ಇಲ್ಲಿ ಅಗಸ್ತ್ಯ ಮುನಿಗಳು ತಪಸ್ಸನ್ನು ಮಾಡಿದ್ದರು. ಆಗ ಬದರೀನಾರಾಯಣನು ತಪಸ್ಸಿಗೆ ಮೆಚ್ಚಿ, "ಘೋರ ಕಲಿಗಾಲದಲ್ಲಿ ಈಗಿನ ಬದರೀಕ್ಷೇತ್ರವು ಪಾಪಿಗಳದ ಪ್ರಜೆಗಳಿಗೆ ಕಾಣಿಸದಿದ್ದಾಗ ಇದೇ ಕ್ಷೇತ್ರ ಬದರಿಯಾಗಿ ಚಲಾವಣೆಯಾಗಲಿ" ಎಂದು ವರವನ್ನು ನೀಡಿದ್ದರಂತೆ.

ದೇವಸ್ಥಾನದ ಪರಿಮಿತಿಗೊಳಪಟ್ಟಿರುವ ಚಿಕ್ಕ ಚಿಕ್ಕ ಜಾಗಗಳು ತಂಗಲು ದೊರೆಯುತ್ತವೆ, ಅಲ್ಲದೆ ಬೇಕಾದಷ್ಟು ಹೋಟೆಲ್ ಗಳೂ ಇವೆ. ಕಾಲೆ ಕಂಬಳಿವಾಲೆ ಆಶ್ರಮ ಕೂಡ ದೇವಸ್ಥಾನದ ಹಿಂದುಗಡೆಗೆ ಇದೆ. ಇಲ್ಲಿ ಬರಿಯ ಸಸ್ಯಾಹಾರ ಆಹಾರ ಸಿಗುತ್ತದೆ ಮತ್ತು ಶಾಖಾಹಾರ - ಮದ್ಯ ನಿಷೇಧಿಸಲಾಗಿದೆ. ಅಂಚೆ ಕಛೇರಿ, ಬ್ಯಾಂಕ್ ಸೌಲಭ್ಯಗಳು ಇವೆ. ರಾಜ್ಯ ಮಟ್ಟದ, ಔಷಧಾಲಯ ಕೂಡ ಇದೆಯಂತೆ.

ಬದರೀ ಕ್ಷೇತ್ರಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ರಿಷಿಕೇಶ, ೨೯೨ ಕಿ. ಮೀ ದೂರ ಮತ್ತು ಹವಾಯಿ ಅಡ್ಡೆ ಎಂದರೆ ಜಾಲಿ ಗ್ರಾಂಟ್ ಏರ್ ಟ್ರಿಪ್ ಡೆಹರಾಡೂನ್ ಹತ್ತಿರ, ೩೧೫ ಕಿ.ಮೀ ದೂರದಲ್ಲಿ.

ಮುಂದುವರೆಯುವುದು........
http://www.vismayanagari.com/node/4713

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.